ಮಾನಸ….ಇದು ಮನಸಿನ ಮಾತು (ಭಾಗ-೪೮)

ಬರೀ ದೇಹಾಕರ್ಷಣೆ, ಬಾಹ್ಯ ಸೌಂದರ್ಯಕ್ಕೆ ಮರುಳಾಗಿ ಅಂತರ್ಜಾತೀಯ ವಿವಾಹವಾದರೆ ತಪ್ಪೇನು ಇಲ್ಲ. ಆದರೆ ಆಚಾರ ವಿಚಾರಗಳಲ್ಲಿನ ಸಾಕಷ್ಟು ಬದಲಾಗುತ್ತದೆ. ಇದರಿಂದ ವೈವಾಹಿಕ ಜೀವನದ ಮೇಲಾಗುವ ಪರಿಣಾಮದ ಕುರಿತು ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಊರು ಅಂದಮೇಲೆ ಕೇರಿ, ಬೀದಿ, ಹಟ್ಟಿ, ಪೇಟೆ ಬೀದಿ ಹೀಗೆ ಊರಿನ ಜಾಗಗಳು. ಯಾರು ಎಲ್ಲಿ ಇರಬೇಕು ಎಂದು ಊರು ನಿರ್ಮಾಣವಾಗುವಾಗಲೇ ನಿರ್ಧಾರವಾಗಿರುತಿತ್ತು. ಯಾವುದೇ ಜಾತಿಯವರಿಗೂ ಅವರವರ ಕೇರಿ ಇರುತಿತ್ತು. ಕ್ರಿಶ್ಚಿಯನ್ ರು ಇದ್ದರೆ ಅವರದೊಂದು ನಾಲ್ಕಾರು ಮನೆ ಅಲ್ಲೇ ಚರ್ಚ್ ಒಂದು ಇರುತಿತ್ತು. ಮುಸಲ್ಮಾನರ ಕೇರಿ ಅವರದೇ ಗುಂಪಿನ ಅಂಗಡಿ ಮುಗ್ಗಟ್ಟು, ವ್ಯಾಪಾರ ವಹಿವಾಟು, ಮಸೀದಿ ಅವರಿದ್ದಲ್ಲಿಯೇ ಇರುತಿತ್ತು. ವೈಶ್ಯರ ಬೀದಿ ಅವರ ವ್ಯಾಪಾರ ವಹಿವಾಟು, ಅವರದೇ ದೇವಸ್ಥಾನ ಹೀಗೆ ಇರಿತಿತ್ತು, ಬ್ರಾಹ್ಮಣರ ಬೀದಿ ಅಥವಾ ಅಗ್ರಹಾರ, ದೇವಸ್ಥಾನಗಳು, ಅಲ್ಲಿ ಪೂಜೆ ಮಾಡುವ ಪುರೋಹಿತರು ಹೀಗೆ ಇರುತಿತ್ತು. ಲಿಂಗಾಯಿತರ ಬೀದಿಯಲ್ಲಿ ಅವರದೇ ಗುಂಪಿನ ಜನರು ವಾಸಿಸುತ್ತಿರುವ ಊರುಗಳನ್ನು ನಾವು ಹಿಂದೆ ನೋಡಿದ್ದೇವೆ.

ಅಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಗೌರವ ಕೊಡುತ್ತಾ, ಸ್ನೇಹ ಪ್ರೀತಿಯಿಂದ ಜೀವನ ನಡೆಸುತಿದ್ದರು. ಅವರ ವ್ಯಾಪಾರವೇನೇ ಇರಲಿ ಅವರ ಪಾಡಿಗೆ ಅವರು ಮಾಡುತ್ತಾ ಸಾಗುತಿದ್ದರು. ಒಂದು ಪಂಗಡದವರು ಮತ್ತೊಂದು ಪಂಗಡದವರ ಮನೆಗೆ ಏನಾದರೂ ಕಾರ್ಯ ನಿಮಿತ್ತ ಮಾತ್ರ ಬರುತಿದ್ದರು. ಇಲ್ಲವೆ ಹೊರಗೆಲ್ಲೋ ಭೇಟಿಯಾಗಿ ಊರಿನ ಸುದ್ದಿ ಸಮಾಚಾರ ಹರಟಿ ಅಂದಿನ ವಿದ್ಯಾಮಾನ, ರಾಜಕೀಯದ ಬಗ್ಗೆ ಮಾತನಾಡಿ ಅವರವರ ಮನೆಗೆ ಹಿಂತಿರುಗುತ್ತಿದ್ದರು.

ಫೋಟೋ ಕೃಪೆ :google

ಎಲ್ಲಾ ಸುಗಮವಾಗಿಯೇ ಸಮಯ ಕಳೆಯುತಿತ್ತು, ಮದುವೆ ಮುಂಜಿ ಏನಾದರೂ ಸರಿ ಒಬ್ಬರ ಮನೆಗೆ ಬಂದು ಹರಸಿ ಹೋಗುತಿದ್ದರು. ಊರಿನಲ್ಲಿ ಏನೇ ಬದಲಾವಣೆಗಳಾದರೂ ಎಲ್ಲರ ಗಮನಕ್ಕೆ ಬರುತಿತ್ತು. ಊರಿಗೆ ಯಾರೇ ಹೊಸಬರು ಬಂದರೂ ಎಲ್ಲರಿಗೂ ತಿಳಿಯುತಿತ್ತು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳೆ ಎಲ್ಲಾ ಕಡೆಯೂ ಇರುತಿತ್ತು. ಎಲ್ಲಾ ಮತದವರೂ ಅದೇ ಶಾಲೆಗೆ ಸೇರಬೇಕಿತ್ತು. ಎಲ್ಲೋ ಕೆಲವು ತಾಲೂಕುಗಳಲ್ಲಿ ಉರ್ದು ಸರ್ಕಾರಿ ಶಾಲೆ ಇದ್ದು ಭಾಗಶಃ ಮುಸಲ್ಮಾನರ ಹೆಣ್ಣು ಮಕ್ಕಳು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಯಾವುದೇ ಕೇರಿಯ ವಯಸಿಗೆ ಬಂದ ಗಂಡು ಮಕ್ಕಳಾಗಲಿ, ಹೆಣ್ಣು ಮಕ್ಕಳಾಗಲಿ ಅವರವರ ಕೇರಿ ಬಿಟ್ಟು ಬೇರೆ ಕೇರಿಗೆ ಹೋಗುತ್ತಿರಲಿಲ್ಲ. ಅಕಸ್ಮಾತ್ ಹೋದರೆ ಹಿರಿಯರಿಗೆ ವಿಷಯ ತಿಳಿದು ಬೈದು ಹೋಗಬಾರದೆಂದು ಗದರಿಸುತಿದ್ದರು. ಹಿರಿಯರಿಗೆ ತಮ್ಮ ಮನೆ ಮಕ್ಕಳ ಮೇಲೆ ಬಹಳ ಕಾಳಜಿ ಹಾಗು ಎಲ್ಲಿ ಅನಾಹುತ ಸಂಭವಿಸುತ್ತದೋ ಎಂಬ ಭಯವಿರುತ್ತಿತ್ತು.

ಎಲ್ಲರಿಗೂ ಅವರ ಧರ್ಮದ, ಮನೆತನದ ಮರ್ಯಾದೆ ಪ್ರಶ್ನೆ ಹಾಗಾಗಿ ಅವರ ಮಕ್ಕಳು ಅನ್ಯ ಜಾತಿಯವರನ್ನು (ಗಂಡ/ಹೆಣ್ಣು) ಸ್ನೇಹ, ಪ್ರೀತಿ ಮಾಡುವುದಲಿರಲಿ ಮಾತನಾಡಿಸುವುದು ಸಹ ನಿಷೇಧವಿರುತಿತ್ತು. ಅವರ ಜಾತಿ ಧರ್ಮದವರನ್ನೇ ಮದುವೆ ಮಾಡಿಕೊಳ್ಳುವುದು ಮಕ್ಕಳ ಬಗ್ಗೆ ಕಾಳಜಿ ಹಾಗು ಗೌರವ ಮರ್ಯಾದೆಯ ಪ್ರಶ್ನೆಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ, ಎಲ್ಲಾ ಊರು ಕೇರಿ ಬೀದಿಗಳಲ್ಲಿ ಎಲ್ಲಾ ಧರ್ಮದವರು ಇದ್ದಾರೆ. ಯಾರು ಯಾವ ಬೀದಿಯಲ್ಲಿ ಓಡಾಡಿದರೂ ಯಾವ ತಪ್ಪು, ತೊಂದರೆಗಳು ಇಲ್ಲ. ಆದರೆ ಅಂತರ್ಜಾತಿ ವಿವಾಹ ಸರ್ವೇ ಸಾಮಾನ್ಯವಾಗಿದೆ. ಎಷ್ಟೇ ಜನ ಮುಂದುವರೆದಿದ್ದರೂ, ವಿದ್ಯಾವಂತರಾಗಿದ್ದರೂ ಅನ್ಯ ಜಾತಿಯವರೊಂದಿಗೆ ಮದುವೆ ಎಂದರೆ ತಂದೆ ತಾಯಿ, ಮನೆಯವರ ನಿರಾಕರಣೆ ಇದ್ದೇ ಇರುತ್ತದೆ ಹಾಗು ಒಪ್ಪಿಕೊಳ್ಳುವುದಕ್ಕೆ ಬಹಳ ಕಷ್ಟವಾಗುತ್ತದೆ. ಆದರೆ ಅವರ ಮಕ್ಕಳ ಒಳಿತಿಗಾಗಿ ಹಾಗು ಸಂತೋಷಕ್ಕಾಗಿ ಸಮ್ಮತಿಸಬೇಕಾಗುತ್ತದೆ.

ಅಂತರ್ಜಾತಿ ವಿವಾಹಗಳ ನಿರಾಕರಣೆಗೆ ‌ಅನೇಕ ಕಾರಣಗಳು ಇರುತ್ತದೆ ಉದಾಹರಣೆಗೆ ಹೇಳುವುದಾದರೆ, ಸಸ್ಯಹಾರಿಗಳು ಮಾಂಸಹಾರ ಮನೆಯವರಿಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದು, ಹೊಲ ಗದ್ದೆ ಕೆಲಸ ಮಾಡುವವರ ಮನೆಗೆ ಸಿಟಿ ಪಟ್ಟಣಗಳಲ್ಲಿರುವವರು ಹೊಂದಿಕೊಳ್ಳಲು ಕಷ್ಟವಾಗಬಹುದು. ಕಮ್ಮಾರರ ಮನೆ ಮಕ್ಕಳಿಗೆ ಆ ಕೆಲಸಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಕುಂಬಾರನ ಮನೆ ಹುಡುಗಿ ಕಮ್ಮಾರ, ಚಮ್ಮಾರ ಅಥವಾ ಇನ್ನಿತರ ಕುಟುಂಬದ ಹುಡುಗ /ಹುಡುಗಿ ಜೊತೆ ಮದುವೆಯಾದಾಗ ಹೊಂದಿಕೊಳ್ಳಲು ಬಹಳ ಕಷ್ಟ ಆಗುತ್ತದೆ. ಹೀಗೆ ಅವರವರ ಶಾಸ್ತ್ರ ಸಂಪ್ರದಾಯಗಳಿಗೆ ಹೊಂದಿಕೊಳ್ಳಲು ಸಮಯ ಹಿಡಿಯಬಹುದು ಅಥವಾ ಹೊಂದಾವಣಿಕೆ ಆಗದೇ ಇರಬಹುದು.

ಫೋಟೋ ಕೃಪೆ :google

ಈಗಿನ ಕಾಲಮಾನದಲ್ಲಿ ಎಲ್ಲರೂ ಅವರ ಕುಲಕಸುಬು ಬಿಟ್ಟು ಪಟ್ಟಣ ಸೇರಿ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಹೆಚ್ಚಾಗಿ ವ್ಯತ್ಯಾಸ ಕಾಣದಿದ್ದರೂ ಒಬ್ಬರಿಗೊಬ್ಬರಿಗೆ ಅಂತರವಿರುತ್ತದೆ. ಬರೀ ದೇಹಾಕರ್ಷಣೆ, ಬಾಹ್ಯ ಸೌಂದರ್ಯಕ್ಕೆ ಮರುಳಾಗಿ ಜೀವನ ಹಾಳುಮಾಡಿಕೊಳ್ಳುವ ಸಂದರ್ಭದಲ್ಲಿ ಒಮ್ಮೆ ಆ ಮಕ್ಕಳಿಗೆ ಯೋಚನೆ ಬರದೆ ಇರಲಾರದು, ತಮ್ಮ ತಂದೆ ತಾಯಿಯ ಒಪ್ಪಗೆಯಂತೆ ಅವರೇ ನೋಡಿ ಮಾಡುವ ಮದುವೆ ಮಾಡಿಕೊಳ್ಳಬೇಕಿತ್ತೆಂದು. ಜೀವನ ಅತ್ಯಮೂಲ್ಯ ಅದನ್ನು ಪಶ್ಚಾತ್ತಾಪವಿರದಂತೆ ಎದುರಿಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇರಬೇಕು.

ಇತ್ತೀಚಿನ ಸರ್ವೇ ಪ್ರಕಾರ ವಿಚ್ಛೇದನಗಳು ಹೆಚ್ಚಾಗುತ್ತಿದೆ ಬರೀ ಅಂತರ್ಜಾತೀಯ ವಿವಾಹವಲ್ಲದೆ ಹಲವಾರು ಕಾರಣಗಳು ಗಂಡ ಹೆಂಡತಿ ಬೇರೆ ಆಗುವ ಸಂಭವಗಳು ಹೆಚ್ಚು. ಇದಕ್ಕೆಲ್ಲ ಕಾರಣ ಸ್ವೇಚ್ಛಾಚಾರದ ಬದುಕು, ಸ್ವತಂತ್ರದ ಜೀವನ, ಒಬ್ಬರಿಗೊಬ್ಬರು ಹೋಲಿಕೆ ಮಾಡಿಕೊಂಡು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತಿದ್ದಾರೆ.

ಮದುವೆ ಯಾವುದೇ ಆಗಲಿ, ಏನೇ ಆಗಲಿ ಪರಸ್ಪರ ಹೊಂದಿಕೊಂಡು ಹೋಗುವುದು ಕಲಿಯಬೇಕು. ಮುಂದಿನ ಪೀಳಿಗೆಗೆ ಮಾದರಿಯಾಗಿ ಬಾಳಬೇಕು. ಮಕ್ಕಳು ಮುಂದಿನ ಭವಿಷ್ಯದ ಪ್ರಜೆಗಳು ಅವರಿಗೆ ಗೊಂದಲವಿರದ ಜೀವನ ಕೊಡಬೇಕಾಗುತ್ತದೆ. ಮದುವೆ ಮಾಡಿಕೊಂಡ ಮೇಲೆ ಎರಡು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಮೂಡುತ್ತದೆ.

“ಆಚಾರ_ ವಿಚಾರ”
“ಆಹಾರ_ ವಿಹಾರ”

ಇಷ್ಟರಲ್ಲೇ ಸಾಕು ಇಬ್ಬರಲ್ಲೂ ಬಿರಕು ಮೂಡಲು. ಹಾಗಾಗಿ ಏನೇ ಬಂದರೂ ಇಬ್ಬರೂ ಎದುರಿಸಲೇ ಬೇಕು. ಇಲ್ಲದಿದ್ದರೆ ಇಬ್ಬರಲ್ಲೂ ಭಿನ್ನಾಭಿಪ್ರಾಯಗಳು ಮೂಡುತ್ತದೆ. ಗಂಡು ಮಕ್ಕಳು ಬೆಳೆದ ರೀತಿ ಒಂದು ರೀತಿಯದ್ದು ಆದರೆ ಹೆಣ್ಣುಮಕ್ಕಳ ರೀತಿಯೂ ವಿಭಿನ್ನ. ಇದು ಶುರುವಿನಲ್ಲಿ ಇಬ್ಬರಲ್ಲೂ ಮನಸ್ತಾಪಗಳು ಮೂಡಿಸುತ್ತದೆ. ಬದುಕು ನಮ್ಮದು ಅದನ್ನು ಸಾರ್ಥಕಪಡಿಸಿಕೊಳ್ಳುವುದು ನಮ್ಮ ಬುದ್ಧಿವಂತಿಕೆಯಲ್ಲಿದೆ. ಮದುವೆ ಅನ್ನುವುದು ಇಬ್ಬರ ನಡುವಿನ ಸಂಬಂಧ ಹಾಗಾಗಿ ಏನೇ ಬಂದರೂ ಇಬ್ಬರೂ ಜೊತೆಗೂಡಿ ಇರಬೇಕು, ಜೊತೆಯಾಗಿ ಎದುರಿಸಬೇಕು.

ಸ್ವತಂತ್ರವಾಗಿ ಬದುಕಬೇಕೆಂದು ಜೀವನ ಅತಂತ್ರ ಮಾಡಿಕೊಂಡರೆ ಪರಿಣಾಮ ಎದುರಿಸುವವರು ಕುಟುಂಬದವರು ಮಾತ್ರ. ಜವಾಬ್ದಾರಿಯುತವಾದ ಜೀವನವಾಗಬೇಕು. ಬದುಕು ಬಂಗಾರವಾಗಬೇಕು, ಬರುಡಾಗಬಾರದು.


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW