‘ನ್ಯಾಯದ ಕಣ್ಣು’ ಅಂಕಣ – (ಭಾಗ -೭)

ಗಂಡ ಇಲ್ಲದ ಮನೆಯ ಆಸ್ತಿಯ ಹಂಗು ನನಗೇಕೆ? ಎಂದು ಮೈದುನನಿಗೆ ಅತ್ತಿಗೆ ತನ್ನ ಹಕ್ಕನ್ನು ಕಂದಾಯ ಇತರೆ ದಾಖಲೆಯನ್ನು ಬಿಟ್ಟು ಕೊಟ್ಟಳು. ಮುಂದೆ ಮತ್ತೊಬ್ಬ ಮೈದುನ ದಾವೆ ಹೂಡಿದ, ಮುಂದೇನಾಯಿತು ಪ್ರಕಾಶ ವಸ್ತ್ರದ ಅವರ ‘ನ್ಯಾಯದ ಕಣ್ಣು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ”ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ”
ಬೆಲೆ : 200/
ಖರೀದಿಗಾಗಿ : 9448015613

ವಾದಿಯ ಪರ ವಕೀಲರು ತಮ್ಮ ವಾದವನ್ನು, ಗಟ್ಟಿ ಧ್ವನಿಯಲ್ಲಿ ಸ್ಪಷ್ಟವಾಗಿ ಮಂಡಿಸುತ್ತಿದ್ದರು. ಪ್ರಕರಣದ ಸಂಗತಿಗಳನ್ನು ಹೇಳುತ್ತಾ,”ಯುವರ್ ಆನರ್, ವಾದಿಯು ಈ ದಾವೆಯನ್ನು ಪಾಲು ವಿಭಜನೆ ಮತ್ತು ಪ್ರತ್ಯೇಕ ಸ್ವಾಧೀನಕ್ಕೆ ತೀರ್ಪು ಕೋರಿ ದಾಖಲಿಸಿದ್ದಾನೆ. ವಾದಿ ನೀಲಕಂಠನ ಮೃತ ಸಹೋದರ ಶಿವಪ್ರಸಾದನ ಹೆಂಡತಿ ವಿಧವೆ ನಿರ್ಮಲಾ ಮರು ಮದುವೆ ಮಾಡಿಕೊಂಡು, ಹಿಂದೂ ವಿಧವೆ ಮರುಮದುವೆ ಕಾನೂನು 1856 ಸೆಕ್ಷನ್ 2 ಪ್ರಕಾರ ಗಂಡನ ಮನೆಯ ಸ್ವತ್ತಿನಲ್ಲಿ ಹಕ್ಕು ಕಳೆದು ಕೊಂಡು, ಪತಿಯ ಕುಟುಂಬಕ್ಕೆ ಸತ್ತು ಹೋದ ಹಾಗೆ ಎಂದು ಪರಿಗಣಿಸ ತಕ್ಕದ್ದು”. ಈ ವಾದವನ್ನು ಎದ್ದು ನಿಂತು, ಪ್ರತಿವಾದಿ ಶಂಕರನ ಪರ ವಕೀಲನಾಗಿ, ರದ್ದುಗೊಂಡ ಕಾನೂನಿನ ಅಂಶಗಳ ಪ್ರಸ್ತಾಪಿಸಿ ಮಾಡುತ್ತಿರುವ ವಾದವನ್ನು ಪ್ರತಿಭಟಿಸಿ ನ್ಯಾಯಾಲಯದ ಗಮನಕ್ಕೆ ತಂದೆನು. ನ್ಯಾಯಾಧೀಶರು ನನ್ನನ್ನು ಉದ್ದೇಶಿಸಿ,” ವಕೀಲರೇ, ಈಗ ಅವರು ಏನು ವಾದಿಸುತ್ತಾರೆ ವಾದಿಸಲಿ, ಮುಂದೆ ಉತ್ತರಿಸಲು ಅವಕಾಶ ಇದೆ ಆಗ ಸವಿಸ್ತಾರವಾಗಿ ಹೇಳಿ “ಎಂದು ಸಮಾಧಾನ ಪಡಿಸಿದರು.

ವಾದಿಯ ಪರ ವಕೀಲರು ತಮ್ಮ ವಾದವನ್ನು ಮುಂದುವರಿಸುತ್ತಾ “ಮೃತನ ಆಸ್ತಿಗಳು ಮೃತನ ಸಹೋದರ ವಾದಿ ಹಾಗು ಇನ್ನೊರ್ವ ಸಹೋದರ ಪ್ರತಿವಾದಿ ಶಂಕರ ಇವರಿಗೆ ಸಮನಾಗಿ ಸಲ್ಲಬೇಕು. ಶಂಕರ ತನ್ನ ಹೆಸರಿಗೆ ನಿರ್ಮಲಾಳಿಂದ ಹಕ್ಕು ಪತ್ರ ಪಡೆದುಕೊಂಡಿದ್ದಾನೆ. ಅದು ನೋಂದಾಯಿತ ಪತ್ರವಲ್ಲ. ಶಿವಪ್ರಸಾದನ ಆಸ್ತಿಯಲ್ಲಿ ವಾದಿಗೆ ಸಮನಾಗಿ ಹಿಸ್ಸೆ ವಿಭಜಿಸಿ ಸ್ವಾಧೀನ ಕೊಡಲು ಪ್ರಾರ್ಥನೆ” ಎಂದು ವಾದಕ್ಕೆ ವಿರಾಮ ನೀಡಿದರು.

ಪ್ರತಿವಾದಿ ಶಂಕರನ ಪರವಾಗಿ ವಾದವನ್ನು, ಪ್ರಕರಣದ ಸಂಗತಿಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತ ಪ್ರಾರಂಭಿಸಿದೆ. ” ಯುವರ್ ಆನರ್, ವಾದಿಯ ತಂದೆಗೆ ಮೂರು ಜನ ಗಂಡು ಮಕ್ಕಳು. ವಾದಿ ನೀಲಕಂಠ, ಪ್ರತಿವಾದಿ ಶಂಕರ ಮತ್ತು ಶಿವಪ್ರಸಾದ. ತಂದೆ ತೀರಿಕೊಂಡ ನಂತರ ಗಂಡು ಮಕ್ಕಳು, ಮೃತನ ಜಮೀನು ಮತ್ತು ಮನೆ ಆಸ್ತಿಗಳಿಗೆ ವಾರಸುದಾರರು ಆಗಿರುತ್ತಾರೆ. ಮೂರು ಜನ ಗಂಡು ಮಕ್ಕಳು ತಮ್ಮ ಮನೆತನದ ಆಸ್ತಿಗಳನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿಕೊಂಡು ತಮ್ಮ ಹೆಸರುಗಳನ್ನು ಸಂಬಂಧ ಪಟ್ಟ ಸರಕಾರಿ ಪತ್ರಗಳಲ್ಲಿ ದಾಖಲಿಸಿಕೊಂಡಿರುತ್ತಾರೆ. ಗಂಡು ಮಕ್ಕಳು ತಮ್ಮ ತಮ್ಮ ಆಸ್ತಿಗಳನ್ನು ವಿಂಗಡಿಸಿಕೊಂಡು ಬೇರೆ ಬೇರೆಯಾಗಿ ಬದುಕುತ್ತಿದ್ದರೂ ಎಲ್ಲರೂ ಸೌಹಾರ್ದತವಾಗಿ ತಮ್ಮ ಜೀವನವನ್ನು
ನಡೆಸಿಕೊಂಡು ಬಂದಿರುತ್ತಾರೆ. ಎಲ್ಲವೂ ಸರಿ ಇರುವಾಗ ಶಿವಪ್ರಸಾದ ಮೃತನಾದನು. ಹೆಂಡತಿ ನಿರ್ಮಲ ಮತ್ತು ಮೈನರ್ ಮಗ ವಿರೂಪಾಕ್ಷ ಮೃತನ ಆಸ್ತಿಗಳಿಗೆ ವಾರಸುದಾರರಾಗಿ ತಮ್ಮ ಹೆಸರುಗಳನ್ನು ದಾಖಲಿಸಿಕೊಂಡರು. ಎಲ್ಲವೂ ಸುಖ ರೂಪವಾಗಿ ನಡೆದಿರುವಾಗ ಮಗು ವಿರೂಪಾಕ್ಷ ಈ ಲೋಕವನ್ನು ತ್ಯಜಿಸಿದನು. ಅವನ ಹೆಸರು ಆಸ್ತಿಗಳ ಸರ್ಕಾರಿ ದಾಖಲಾತಿಯಲ್ಲಿ ಕಡಿಮೆಯಾಯಿತು. ಇನ್ನೂ ಹದಿ ಹರೆಯದವಳು, ಮಗನನ್ನು ಕಳೆದುಕೊಂಡು ಅನಾಥ ಪ್ರಜ್ಞೆಯ ಅನುಭವಿಸುತ್ತಿದ್ದ, ನಿರ್ಮಲಾ ತನ್ನ ಮುಂದಿನ ಭವಿಷ್ಯದ ಸಲುವಾಗಿ ತವರು ಮನೆ, ಗಂಡನ ಮನೆಯವರ ಸಹಕಾರದಿಂದ ಎರಡನೆ ಲಗ್ನ ಮಾಡಿಕೊಳ್ಳಲು ನಿರ್ಣಯಿಸಿದಳು. ಅವಳ ಭಾವನೆಗಳಿಗೆ ಅನುರೂಪನಾದ ವರನು ಅವಳ ಕೈ ಹಿಡಿದನು. ನಿರ್ಮಲಾ ಗಂಡನ ಮನೆ ಸೇರಿದಳು. ಹಿಂದು ಸಮಾಜದಲ್ಲಿ ಹಲವಾರು ಕಟ್ಟು ಪಾಡುಗಳಿಂದ ವಿಧವೆಯರ ಬದುಕು ಬರಡಾಗುತ್ತಿತ್ತು. ಇತ್ತೀಚಿಗೆ ಬದಲಾವಣೆಯ ಬೆಳಕು ಮೂಡುತ್ತಿದೆ. ಹದಿ ಹರೆಯದ ವಿಧವೆಯರ ಬದುಕು ಸಹನೀಯವಾಗಿದೆ. ಶಂಕರ ಮೊದಲಿನಿಂದ ನಿರ್ಮಲಾಳನ್ನು ಸಹೋದರಿಯ ಹಾಗೆ ನೋಡುತ್ತಿದ್ದನು. ಗಂಡ ಇಲ್ಲದ ಮನೆಯ ಆಸ್ತಿಯ ಹಂಗು ನನಗೇಕೆ? ನಿನಗೆ ಬಿಟ್ಟು ಕೊಡುತ್ತೇನೆ ಎಂದು ತನ್ನ ಹಕ್ಕನ್ನು ಕಂದಾಯ ಇತರೆ ದಾಖಲೆಯಲ್ಲಿ ಬಿಟ್ಟು ಕೊಟ್ಟಳು. ಶಂಕರ ಅವಳಿಗೆ ಸ್ವತ್ತಿನ ಮೌಲ್ಯವನ್ನು ಕೊಟ್ಟು ಋಣ ಸಂದಾಯ ಮಾಡಿದನು.
ಇದೆಲ್ಲ ಬೆಳವಣಿಗೆ ವಾದಿ ನೀಲಕಂಠನ ಕಣ್ಣು ಕೆಂಪಗೆ ಮಾಡಿತು. ದುರುದ್ದೇಶದಿಂದ ದಾವೆ ಮಾಡಿರುತ್ತಾನೆ. ದಾವೆಯಲ್ಲಿ ನಿರ್ಮಲಾ ಪಾರ್ಟಿ ಇದ್ದರೂ ನ್ಯಾಯಾಲಯಕ್ಕೆ ಹಾಜರು ಆಗಿಲ್ಲ” ಎಂದು ಅಲ್ಪ ವಿರಾಮ ನೀಡಿದೆ.

ಮತ್ತೆ ವಾದ ಮುಂದುವರೆಸಿ, ” ವಾದಿಯ ಪರ ವಕೀಲರು ರದ್ದುಗೊಂಡಿರುವ ಹಿಂದು ವಿಧವೆಯರ ಮರು ಮದುವೆ ಕಾನೂನು 1855 ರ ಸೆಕ್ಷನ್ 2 ನ್ನು ಪ್ರಸ್ತಾಪಿಸಿ ಮರು ಮದುವೆಯಾದ ವಿಧವೆಗೆ ಗಂಡನ ಮನೆಯ ಸ್ವತ್ತಿನಲ್ಲಿ ಹಕ್ಕು ಕಳೆದುಕೊಂಡು ಸತ್ತು ಹೋದ ಹಾಗೆ ಎಂದು ಭಾವಿಸತಕ್ಕದ್ದು ಎಂದು ವಾದಿಸಿದ್ದಾರೆ. ಹಿಂದು ಉತ್ತರಾಧಿ ಕಾನೂನು 1956 ಜಾರಿ ಆದ ನಂತರ ವಿಧವೆಗೆ ಉಳಿದ ಹೆಣ್ಣು ಮಕ್ಕಳ ಹಾಗೆ ಸ್ಥಾನಮಾನ ನೀಡಿದ್ದು, ಅದಕ್ಕೆ ವ್ಯತೀರಿಕ್ತವಾದ ಮೊದಲಿನ ಕಾನೂನುಗಳು ರದ್ದುಗೊಂಡಿವೆ. ಮರು ಮದುವೆಯಿಂದ ವಿಧವೆ ಗಂಡನ ಮನೆಯ ಸ್ವತ್ತಿನಲ್ಲಿ ಹಕ್ಕು ನಷ್ಟ ಆಗುವದಿಲ್ಲ. ವಾದಿಗೆ ನಿರ್ಮಲಾ ಶಂಕರನಿಗೆ ಬಿಟ್ಟುಕೊಟ್ಟ ಹಕ್ಕು ಕಾನೂನು ಅಡಿಯಲ್ಲಿ ಇಲ್ಲವೆಂದು ವಾದಿಸಲಾಗದು. ನಿರ್ಮಲಾ ತಾನು ಬಿಟ್ಟು ಕೊಟ್ಟ ಆಸ್ತಿಯ ಮೇಲೆ ಹಕ್ಕು ಪ್ರಶ್ನಿಸಿಲ್ಲ. ಆದ್ದರಿಂದ ದಾವೆಯನ್ನು ವಜಾಗೊಳಿಸಬೇಕೆಂದು ಇಷ್ಟು ನನ್ನ ವಾದ, ಯುವರ್ ಆನರ್”. ವಾದಕ್ಕೆ ಕೊನೆ ಹೇಳಿದೆ. ನ್ಯಾಯಾಧೀಶರು ವಾದವನ್ನು ಆಲಿಸಿ, ತೀರ್ಪಿಗಾಗಿ ಪ್ರಕ ರಣವನ್ನು ಮುಂದೂಡಿದರು.

ಅಂದು ಸಂಜೆ ನ್ಯಾಯಾಧೀಶರು, ತೀರ್ಪುನ್ನು ಉಚ್ಚರಿಸಿ, ವಾದಿಯ ದಾವೆ ವಜಾಗೊಳಿಸಿ ಹಿಂದು ಉತ್ತರಾಧಿಕಾರ ಕಾನೂನು 1956 ರಲ್ಲಿ ಎಲ್ಲ ಹೆಣ್ಣುಮಕ್ಕಳಂತೆ ವಿಧವೆಗೆ ಸ್ಥಾನಮಾನ ನೀಡಲಾಗಿದೆ ಎಂದು ಉದ್ಘರಿಸಿದರು. ಕಾಲ ಕಾಲಕ್ಕೆ ಬದಲಾಗುವ ಮೌಲ್ಯದಂತೆ, ಕಾನೂನು ನಿಯಮ ಬದಲಾಗುವುದರಿಂದ, ವಿಧವೆಯ ಹಕ್ಕು ರಕ್ಷಿಸಲ್ಪಿಟ್ಟಿದೆ. ವಿಧವಾ ವಿವಾಹ ನಿಷೇದ ಅನಿಷ್ಟ ಪದ್ಧತಿ ಕೊನೆಗೊಂಡು, ವಿಧವೆಯರು ನೆಮ್ಮದಿ ಬದುಕು ಸಾಗಿಸುತ್ತಿದ್ದಾರೆ.

‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :


  • ಪ್ರಕಾಶ ವಸ್ತ್ರದ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading