ಬದುಕೆಂಬುದು ಸುದೀರ್ಘ ಪಯಣವೇನಲ್ಲ, ಒಮ್ಮೆ ಎಡುವಿದರೆ ಎದ್ದು ನಿಲ್ಲುವುದು ಕಷ್ಟ. ಹಳತು-ಹೊಸತರ ನಡುವೆ ಸಾಗುವ ನಾವು ಬದುಕನ್ನು ಹಸನಾಗಿಸಕೊಳ್ಳೋಣ, ಬರಲಿರುವ ಹೊಸವರುಷವನ್ನು ಸಂಭ್ರಮದಿ ಸ್ವಾಗತಿಸೋಣ. – ಡಾ. ಯಲ್ಲಮ್ಮ ಕೆ, ತಪ್ಪದೆ ಮುಂದೆ ಓದಿ…
“ಹೊತ್ತು ಹೋಗ್ದಾಗ ಹೆತ್ತಮ್ಮನ ಕೂಡ ಆಡು” ಎಂಬ ಗಾದೆಮಾತಿದೆಯಾದರೂ ಬದುಕಿನ ಓಟದಲ್ಲಿ ಯಾರಲ್ಲಿ ಸಮಯವಿದೆ ಹೇಳಿ, ಎಲ್ಲರ ಕೈಗೊಂದು ಮೊಬೈಲ್ ಬಂದಾದಮೇಲೆ, ತಂದೆ-ತಾಯಿ, ಬಂಧು-ಬಳಗ, ಊಟ-ಆಟ-ಪಾಠ, ಹೊರಗಿನ ಪ್ರಪಂಚದ ಪರಿವೆ ಇದ್ದರೆ ತಾನೇ? ವೃತ್ತಿ ಬದುಕಿನಲ್ಲೂ ಸಹ ಮೊಬೈಲ್ ದಾಳಿಯಿಟ್ಟು ಮುಖತಃ ಮಾತು-ಕತೆ ಬಿದ್ದೋಗಿದೆ! ಎಲ್ಲ ಮೊಬೈಲ್ ನಲ್ಲಿಯೇ.., ಇದಕ್ಕೆ ನಾನೂ ಹೊರತಲ್ಲ ಬಿಡಿ ; ಹೀಗೆ ಆಳು-ಮೂಳು ಅಂತ ರೀಲ್ಸ್ ನೋಡ್ತಾ ಇರಬೇಕಾದರೆ ಶ್ರೀಮತಿ ಅರುಂಧತಿ ಶಂಕರನಾಗ್ ರವರ ಒಂದು ಸಂದರ್ಶನದ ತುಣುಕು ರೀಲ್ಸ್ ರೂಪದಲ್ಲಿ ನೋಡಿದೆ – ಕ್ಯಾಮರಾ ಎದಿರು ಬಣ್ಣ ಹಚ್ಚಿಕೊಂಡು ಪಾತ್ರಾಭಿನಯ ಮಾಡುವ ನಾವು ಅಷ್ಟೇ ಕಲಾವಿದರಲ್ಲ, ಬದಲಾಗಿ ಇಲ್ಲಿ ಎಲ್ಲರೂ ಮೂಜಗದೆದಿರು ಬಣ್ಣ ಹಚ್ಚಿಕೊಳ್ಳದ ಕಲಾವಿದರು, ಸೂರ್ಯೋದಯಕ್ಕೂ ಮುನ್ನ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಮನೆಯಿಂದ ಹೊರಬಿದ್ದರೆ ಸಾಕು, ಎಲ್ಲರೂ ಒಂದಲ್ಲ ಒಂದು ರೀತಿಯ ಶಿಕ್ಷಕ, ಡಾಕ್ಟರ್, ಲಾಯರ್, ಕಳ್ಳ-ಪೊಲೀಸ್ ಇತ್ಯಾದಿ… ಮುಖವಾಡಗಳನ್ನು ಹಾಕಿಕೊಂಡು ತಮ್ಮ ತಮ್ಮ ಪಾಲಿನ ವೃತ್ತಿಬದುಕಿನ ಪಾತ್ರವನ್ನು ಮುಗಿಸಿ, ತುಂಬು ಆಯಾಸದಿ ಮನೆ ಸೇರಿ, ಬಟ್ಟೆ ಬದಲಿಸಿದ ಬಳಿಕ ತಮ್ಮ ನೈಜಬದುಕಿಗೆ ಹೊರಳುತ್ತಾರೆ. ಎಂಬ ನುಡಿಗಳು ಮನಸ್ಸಿನಾಳಕ್ಕೆ ಇಳಿದವು.
ʼಈ ಜಗವೇ ಒಂದು ನಾಟಕ ರಂಗ, ಮೇಲಿಹ ಸೂತ್ರಧಾರ ಆಡಿಸಿದಂತೆ ಆಡಬೇಕಾದ ನಾವೆಲ್ಲ ಪಾತ್ರಧಾರಿಗಳುʼ ಎಂಬ ಜನಜನಿತ ಮಾತನ್ನು ಒಪ್ಪುವುದಾದರೆ ; ನಾವು ಪಾತ್ರಧಾರಿಗಳು, ದೇವರ ಸೂತ್ರಧಾರ ಎನ್ನುವುದಾದರೆ ನಾಟಕವನ್ನು ನೋಡುವ ಕಲಾರಸಿಕರು-ಪ್ರೇಕ್ಷಕರಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ? ಕಲಾರಸಿಕರಿಗೆ ಮುದ ನೀಡುವಂತೆ ನಾಟಕ ರಚಿಸುವುದಾದರೆ, ಅಡಿಸುವುದಾದರೆ ಈ ಸಾವು-ನೋವು, ಕೊಲೆ-ಸುಲಿಗೆ-ರಕ್ತಪಾತವೆಲ್ಲ ಯಾಕೆ? ಬಾಳ ನಾಟಕ ಸುಖಾಂತ್ಯವೇ ಆಗಿರಬೇಕಿತ್ತು ಅಲ್ಲವೇ? ಹೀಗೆ ಯೋಚನೆಗಳ ಸುಳಿದಾಳಿಗೆ ಸಿಲುಕಿದ ಮನದ ತಲ್ಲಣಗಳಿಗೆ ನನ್ನದೇ ಸಾಂತ್ವಾನದ ನುಡಿಗಳಿವು.

ಫೋಟೋ ಕೃಪೆ : google
ಇಲ್ಲಿ ಪಾತ್ರಧಾರಿಗಳೂ ನಾವೇ, ಪ್ರೇಕ್ಷಕರೂ ನಾವೇ ಎಂಬ ತೀರ್ಮಾನಕ್ಕೆ ಬಂದೆ ಅದೆಂತೆಂದರೆ? ಬಾಳ ನಾಟಕದಿ ತೆರೆಯ ಮುಂದಿನ ನಮ್ಮ ಪಾಲಿನ ಪ್ರವೇಶಕ್ಕಾಗಿ ಕಾದು ಕುಳಿತವರು, ಸರದಿ ಬಂದಾಗ ಪಾತ್ರಾಭಿನಯ ಮುಗಿಸಿ ಬಣ್ಣ ತೊಳೆದುಕೊಂಡು, ಮತ್ತೊಮ್ಮೆ ಪ್ರವೇಶ ಬರುವವರೆಗೂ ಕಾಯುವವರು ನಮ್ಮೆದುರಿನ ಪ್ರೇಕ್ಷಕರು, ನಮ್ಮ ಪಾತ್ರಾಭಿನಯದ ಬಗ್ಗೆ ಟೀಕೆ-ಟಿಪ್ಪಣಿಗಳನ್ನು ನೀಡುತ್ತ.., ವಿಮರ್ಶಿಸುವ ವಿಮರ್ಶಕರೂ ಇವರೇ ಆಗಿರುತ್ತಾರೆ. ಅಪ್ಪ-ಅಮ್ಮ, ಅಣ್ಣ-ತಮ್ಮ ಯಾರಿಗಂಜದಿದ್ದರೂ ನಾಲ್ಕು ಮಂದಿ ಮೆಚ್ಚುಗೆಗಾಗಿ ಜನಕ್ಕಂಜಿ ಜೀವನ ಮಾಡ್ಬೇಕು, ಇಲ್ಲವೇ ಮನಕ್ಕಂಜಿಯಾದರೂ ಜೀವನ ಮಾಡ್ಬೇಕು.
ಹೀಗೆ ಮುಖವಾಡದ ಬದುಕಿನಲ್ಲಿ ನಾವು ಒಳಗೊಂದು, ಹೊರಗೊಂದು ಅಲ್ಲಲ್ಲ ಹೊರಗ್ಹನ್ನೊಂದಾಗಿ ಬದುಕುವುದನ್ನು ನಾವು ನೋಡುತ್ತೇವೆ. ಇಂದು ನಾವು ಏನಾಗಿದ್ದೇವೋ ಅದು ನಾವಲ್ಲ, ನಾವು ಮತ್ತೊಂದು ಮಗದೊಂದು ಆಗಿದ್ದೇವೆ ಅದು ನಮಗೆ ಮಾತ್ರ ಕಾಣುವ ಮುಖವಾಗಿರುತ್ತದೆ. ಸಾಮಾನ್ಯವಾಗಿ ವ್ಯಕ್ತಿಗೆ ಒಳಗೊಂದು ಹೊರಗೊಂದು ಮುಖವಿರುತ್ತದೆಯಂತೆ, ನನ್ನ ಒಂದು ಮುಖಮಾತ್ರ ಕಂಡಿದ್ದೀರಿ ನನ್ನ ಇನ್ನೊಂದು ಮುಖ ಕಂಡಿಲ್ಲ ನೀವು ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ! ಹಾಗಾದರೆ ವ್ಯಕ್ತಿಗೆ ಎರಡೇ ಮುಖಗಳೇ? ಈ ಚತುರ್ಮುಖ ಬ್ರಹ್ಮನ, ದಶಮುಖ-ದಶಕಂಠ ರಾವಣನ ಕಲ್ಪನೆಯನ್ನು ಹುಟ್ಟುಹಾಕಿಕೊಂಡದ್ದು ಯಾಕೆ ಮತ್ತು ಅದ್ಹೇಗೆ? ಎಂಬ ಪ್ರಶ್ನೆಯನ್ನು ಹಾಕಿಕೊಳ್ಳುತ್ತಾ ನಾವೇ ಉತ್ತರವನ್ನು ಕಂಡುಕೊಂಡ ಬಗೆಯಿದು :
ನನ್ನದೇ ಒಂದು ನಿದರ್ಶನದೊಂದಿಗೆ ವಿಶ್ಲೇಷಿಸುತ್ತಾ ಸಾಗುವುದು ಒಳಿತು ಎನಿಸತ್ತದೆ, ಈಗ ನನ್ನನ್ನು ನೀವು ನೋಡುತ್ತೀರಿ ಎಂದರೆ ನಾನು ನಿಮಗೆ ಕಾಣುತ್ತೇನೆ ಅದು ಭೌತಿಕ ರೂಪದಮುಖ, ನನ್ನನ್ನು ನೆನಪಿಸಿಕೊಂಡರೆ ನನ್ನ ರೂಪು ನಿಮ್ಮ ಕಣ್ಮುಂದೆ ಬಂದು ನಿಲ್ಲುತ್ತದೆ ಅದು ನನ್ನ ಭೌತಿಕರೂಪದ ಕಲ್ಪಿತ ರೂಪ ಇವರೆಡನ್ನು ಬೇರೆಬೇರೆ ಎಂದು ಹೇಳಲಿಕ್ಕೆ ಬರುವುದಿಲ್ಲ ಹಾಗಾಗಿ ಒಂದೇ ಎನ್ನಿ ; ನನ್ನನ್ನು ತುಂಬಾ ಹತ್ತಿರದಿಂದ ಕಂಡ ಹಲವರಲ್ಲಿ ಕೆಲವರು ನನ್ನನ್ನು ಒಳ್ಳೆಯವಳು ಎಂದು, ಇನ್ನು ಕೆಲವರು ಕೆಟ್ಟವಳು ಎಂದು ಹೇಳಿರುವುದನ್ನು ನಾನು ನನ್ನ ಕಿವಿಯಾರೆ ಕೇಳಿದ್ದೇನೆ – ಇವು ಇನ್ನೆರೆಡು ಮುಖಗಳು! ಕೆಲವರು ಹೇಳಿರುವಂತೆ ನಾನು ಒಳ್ಳೆಯವಳೂ ಆಗಿರದೆ ಇನ್ಕೆಲವರು ಹೇಳಿದಂತೆ ಕೆಟ್ಟವಳೂ ಆಗಿರದೆ ನಾನು ಮತ್ತೊಂದು ಆಗಿರುತ್ತೇನೆ – ನಾನು ನಾನಾಗಿರುತ್ತೇನೆ ಅದು ಮತ್ತೊಂದು ಮುಖ! ; ಭೌತಿಕ ಮುಖ, ಒಳ್ಳೆಯವ, ಕೆಟ್ಟವ ಹಾಗೂ ಇದೆಲ್ಲವೂ ಆಗಿರದೆ ನಾನು ಮತ್ತೊಂದು ಆಗಿರುವ ಮುಖ! ಅದುವೇ ನನ್ನಯ ಕರಾಳ ಅಥವಾ ಅಸಲೀ ಮುಖ! ಇದನ್ನೇ ನಾನು ಚತುರ್ಮುಖ ಬ್ರಹ್ಮನ ಕಲ್ಪನೆ ಎಂದು ಹೇಳಿದ್ದು.
ಇನ್ನೂ ಬಿಸಿಲು ಬಂದೆಡೆ ಕೊಡೆ ಹಿಡಿಯುವ ಹಾಗೆ, ಸಮಯ ಸಾಧಕತನದಿ, ಊಸರವಳ್ಳಿಯನ್ನೂ ನಾಚಿಸುವ ಬಗೆಯಲ್ಲಿ ಸಮಯಕ್ಕೆ ತಕ್ಕ ಬಣ್ಣ, ಭಾಷೆ ಭಾವಾವೇಷ ಬದಲಿಸುತ್ತ ಒಳಗೊಂದು ಹೊರಗ್ಹನ್ನೊಂದು ಎನ್ನುವ ಹಾಗೆ ಮುಖವಾಡಗಳನ್ನು ಹೊತ್ತು ತಿರುಗುತ್ತೇವೆ! ನಾವು ಯಾವುದನ್ನು ವ್ಯಕ್ತಿತ್ವ ಎಂದು ಕರೆಯುತ್ತೇವೆಯೋ ಅದನ್ನು ನಾವು ಮೈಗೂಡಿಸಿಕೊಂಡಿದ್ದು, ರೂಢಿಸಿಕೊಂಡಿದ್ದೇ ಹೊರತು ರಕ್ತಗತವಾದ ಗುಣ ಬೇರೆಯೇ ಆಗಿರುತ್ತದೆ! ʼಹುಲಿ ಹೊಟ್ಟೆಲಿ ಹುಲಿನೇ ಹುಟ್ತದೆʼ, ʼಹಸಿದ ಹುಲಿ ಹುಲ್ಲು ಮೇಯ್ಯುವುದಿಲ್ಲʼ, ʼಕಲ್ತ ಚಾಳಿ ಕಲ್ಹಾಕಿದರೂ ಹೋಗುವುದಿಲ್ಲʼ, ʼಹುಟ್ಟುಗುಣ ಸುಟ್ಟರು ಹೋಗೋದಿಲ್ಲʼ, ʼಕುಲಬುದ್ಧಿ ಅದೇಲ್ಲಿಗೆ ಹೋದೀತು?ʼ ʼಅವರ ವಂಶ, ತಳಿನೇ ಅಂಥದ್ದಿದೆʼ, ಎಂಬಿತ್ಯಾದಿ ಮಾತುಗಳು “ತಮ್ಮ ತಮ್ಮ ಸಾಚಾತನದ ಬಗ್ಗೆ ಡಂಗೂರ ಸಾರುವ ಮನುಷ್ಯ, ತನ್ನ ನೀಚನತದ ವಿಷಯದಲ್ಲಿ ದಿವ್ಯ ಮೌನವನ್ನು ತಾಳುತ್ತಾನೆ” ಎಂಬ ಸುಹಾನಿ ಎಸ್ ರವರ ಮಾತಿನಂತೆ ವ್ಯಕ್ತಿಯ ಮೂಲ ಅಥವಾ ವ್ಯಕ್ತಿಯ ವಾಸ್ತವ ಮುಖದ ಕುರಿತಾಗಿ ಆಡಿದ ಮಾತುಗಳೇ ಆಗಿವೆ.
ವಾಸ್ತವದ ಕುರಿತಾಗಿ ಆಲೋಚಿಸುವ ಅರಿವಿನ ಪರಿಧಿಯ ಮಿತಿಯಿಂದಾಗಿಯೇ ವ್ಯಕ್ತಿಯ ವ್ಯಕ್ತಿತ್ವವನ್ನು ಆತನ ಗೋಸುಂಬೆತನವನ್ನು ಅರಿತುಕೊಳ್ಳುವಲ್ಲಿ ಮನುಷ್ಯ ಎಡವುತ್ತಾನೆ, ಸುಲಭದಿ ಎಲ್ಲರನ್ನೂ ನನ್ನವರು ತನ್ನವರೆಂದು ನಂಬುತ್ತಾನೆ, ಜೀವಕ್ಕೆ ಜೀವವಾದವರು, ಎರಡು ದೇಹ ಒಂದೇ ಪ್ರಾಣವೆಂದು ಬಗೆದವರು, ಅಂತವರಿಗಾಗಿ ಇಡೀ ಬದುಕನ್ನೇ ಮುಡಿಪಾಗಿಟ್ಟು ಕೈಸುಟ್ಟುಕೊಂಡಾಗ, ನಂಬಿದವರಿಂದಲೇ ತಾ ಮೋಸಹೋದದ್ದು ಎಂದು ತಿಳಿದಾಗ, ಬದುಕೆಂಬುದು ʼಹದಗೆಟ್ಟ ಹೈದ್ರಾಬಾದ್ ಆದಾಗʼ, ಮಮ್ಮಲ ಮರುಗುತ್ತಾನೆ, ಕಂಬನಿ ಮಳೆಗರೆಯುತ್ತಾನೆ! ಎಲ್ಲರ ಬದುಕಿನಲ್ಲೂ ತಿರುವುಗಳು ಬರುತ್ತೆಯಾದರೂ ತಿರುವು-ಮುರುವುಗಳಿಲ್ಲದ ದಟ್ಟ ಕಾನನದಲ್ಲಿ ದಾರಿತಪ್ಪಿದ ಹುಲ್ಲೆಯಂತೆ ಜೀವಭಯದಿ ಅಲೆಯುತ್ತಾನೆ ; ಗೊತ್ತು-ಗುರಿಯಿಲ್ಲದ ಜೀವನ ಯಾವುದು ಒಂದು ಬಗೆಯಲ್ಲಿ ಹತ್ತರಲ್ಲಿ ಹನ್ನೊಂದೋ, ಇನ್ನೊಂದೋ ಆಗಿ ಬಾಳ ಪಯಣ ಮುಗಿಸಿರುತ್ತಾನೆ.
ಬದುಕೆಂಬುದು ಸುದೀರ್ಘ ಪಯಣವೇನಲ್ಲ, ಮೂರು ದಿನದ ಬಾಳೇ ಐದಾರು ಜೀಗಳಲ್ಲಿ ಓಡುತ್ತಿದೆ ಕಾಲ ಮತ್ತು ಮಾನ! ಒಮ್ಮೆ ಎಡುವಿದರೆ ಎದ್ದು ನಿಲ್ಲುವುದು ಕಷ್ಟ ; ʼಕತ್ತೆಯೂ ಕೂಡ ಒಮ್ಮೆ ಎಡುವಿದ ಜಾಗದಲ್ಲಿ ಮತ್ತೊಮ್ಮೆ ಎಡುವುದಿಲ್ಲʼ ಬದಲಾಗಿ ನಾವು ಮತ್ತೆ ಮತ್ತೆ ಎಡುವಿದರೆ ಹೇಗೆ? ಕತ್ತೆಗಿಂತಲೂ ಕರಕಷ್ಟವಾದೀತು ಬದುಕು. ಹಳತು-ಹೊಸತರ ನಡುವೆ ಸಾಗುವ ನಾವು ಬದುಕನ್ನು ಹಸನಾಗಿಸಕೊಳ್ಳೋಣ, ಬರಲಿರುವ ಹೊಸವರುಷವನ್ನು ಸಂಭ್ರಮದಿ ಸ್ವಾಗತಿಸೋಣ. -ಹೊಸವರುಷದ ಶುಭ ಆಶಯಗಳೊಂದಿಗೆ..,
- ಡಾ. ಯಲ್ಲಮ್ಮ ಕೆ – ಸಹಾಯಕ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ಜಿ.ವಿ.ಪಿ.ಪಿ. ಸ.ಪ್ರ.ದ.ಕಾಲೇಜು, ರಾಮನಗರ, ಹಗರಿಬೊಮ್ಮನಹಳ್ಳಿ, ವಿಜಯನಗರ ಜಿಲ್ಲೆ.
