‘ಒಂದು ಎಂಟಾಣೆಯ ಕಥೆ’ ಕೃತಿ ಪರಿಚಯ

ಕತೆಗಾರರಾದ ಪಾಲ್ ಸುದರ್ಶನ್ ಅವರ ಒಂದು ಎಂಟಾಣೆಯ ಕಥೆ ಕೃತಿಯ ಕುರಿತು ವಿಮರ್ಶಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ  : ಒಂದು ಎಂಟಾಣೆಯ ಕಥೆ.
ಲೇಖಕರು: ಪಾಲ್ ಸುದರ್ಶನ್.
ಸಮರ್ಥ ಪ್ರಕಾಶನ ಬೆಂಗಳೂರು.
ವರ್ಷ:೨೦೦೯.
ಪುಟಗಳು:೩೨೬.
ಬೆಲೆ:೧೮೦.

ನಾಡಿನ ವಿವಿಧ ಪತ್ರಿಕೆಗಳಲ್ಲಿ ಬರೆಯುವ ಲೇಖಕರಾದ ಪಾಲ್ ಸುದರ್ಶನ್ ಅವರ ಹೆಸರು ಓದುಗರಿಗೆ ಚಿರಪರಿಚಿತ. ಇದು ಅವರ ೪೫ ಕಥೆಗಳ ಸಮಗ್ರ ಕಥಾಸಂಕಲನ. ಬೆಂಗಳೂರು ನಗರದ ಅಂದು ಹಾಗೂ ಇಂದಿನ ಜನಜೀವನ ಕುರಿತಂತೆ ಅನೇಕ ಕಥೆಗಳನ್ನು ನಾವಿಲ್ಲಿ ಕಾಣಬಹುದು.ಮಾದರಿ ಇಂತಿದೆ.

ಉಡುಗೊರೆ
ಪೆಂಚಾಲಯ್ಯ ಎಂಬಾತ ಕಲಾಭವನದಲ್ಲಿ ವೇದಿಕೆಯ ಕೆಲಸ ಮಾಡುವಾತ.ಅಂದು ಪ್ರಶಸ್ತಿ ವಿಜೇತ ಸಾಹಿತಿ ಬರಮಪ್ಪನಿಗೆ ಸರ್ಕಾರದವತಿಯಿಂದ ಸನ್ಮಾನವಿತ್ತು.ಆ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಿನೆಮಾ ನಟ ಮಹೇಶ್ ಬರುತ್ತಾರೆಂದು ಕಲಾಭವನವನ್ನು ತಳಿರು ತೋರಣಗಳಿಂದ ಶೃಂಗರಿಸಿದ್ದರು.

ಮುಖ್ಯಮಂತ್ರಿಗಳು ಬಂದ ನಂತರ ತಡವಾಗಿ ಕಾರ್ಯಕ್ರಮ ಪ್ರಾರಂಭವಾಯಿತು.ನಟ ಸುಂದರಾಂಗ ಮಹೇಶ್ ನನ್ನು ನೋಡಲು ಜನರ ನೂಕುನುಗ್ಗಲು. ಗದ್ದಲದ ಮಧ್ಯೆ ಕುರುಚಲು ಗಡ್ಡದ ಸಣಕಲು ವ್ಯಕ್ತಿ ನಿಂತಿದ್ದು, ಅವರೇ ಸಾಹಿತಿ ಬರಮಪ್ಪ ಎಂದು ತಿಳಿಯಿತು. ಅವರಿಗೆ ಶಾಲು ಹೊದೆಸಿ, ಹಣ್ಣು ಹಂಪಲು ನೀಡಿ,ಎಲ್ಲರೂ ಭಾಷಣದಲ್ಲಿ ಹೊಗಳಿದ್ದೇ ಹೊಗಳಿದ್ದು!.

ನಟ ಮಹೇಶ್ ಸಾಹಿತಿಯಿಂದ ಪುಸ್ತಕ ಪಡೆದು ಅವರ ಕಾಲಿಗೆರಗಿದ್ದ. ಚಿತ್ರನಟನ ಸರಳತೆಗೆ ಜನರು ಕರತಾಡನ ಮಾಡಿದ್ದರು.ಕಾರ್ಯಕ್ರಮ ಮುಗಿದ ರಾತ್ರಿ ಬಿಕೋ ಎನ್ನುತ್ತಿದ್ದ ವೇದಿಕೆಯನ್ನು ಸ್ವಚ್ಚ ಮಾಡುವಾಗ ಪೆಂಚಾಲಯ್ಯನಿಗೆ ಕಾಲಡಿಗೆ ಏನೋ ಒತ್ತಿದ ಅನುಭವವಾಗಿ ಬಗ್ಗಿ ನೋಡಿದರೆ… ಅದು ಆ ಸಾಹಿತಿ ನಟನಿಗೆ ಉಡುಗೊರೆಯಾಗಿ ಕೊಟ್ಟ ಪುಸ್ತಕವಾಗಿತ್ತು.

ಒಂದು ಎಂಟಾಣೆಯ ಕಥೆ

ಪೆಟ್ಟಾದ ಕಾಲು ಕೀವು ತುಂಬಿ ಅಸಾಧ್ಯ ನೋವಿನಿಂದ ಕುಂಟುತ್ತಿದ್ದ ಆತನಲ್ಲಿ ಡಾಕ್ಟರಲ್ಲಿ ಹೋಗಲು ಹಣವಿರಲಿಲ್ಲ.ಪ್ಯಾಂಟಿನ ಕಿಸೆಯಲ್ಲಿ ಒಂದು ಎಂಟಾಣೆ ಭದ್ರವಾಗಿ ಕುಳಿತಿತ್ತು.ದಾರಿಯಲ್ಲಿ ಕಾಣುವ ಹೋಟೆಲ್ ನಲ್ಲಿ ಕಾಫಿ ಕುಡಿಯಬೇಕೆನಿಸಿತು.ಪರಿಚಿತ ಮಾಲೀಕ ಸಾಲ ಕೇಳಿದರೆ ಒಲ್ಲೆ ಎನ್ನಲಾರ.ಅಥವಾ ಮೊದಲು ಕಾಫಿ ಕುಡಿದು, ನಂತರ ಜೇಬು ತಡಕಿಕೊಂಡು ರೂಮಿನಲ್ಲಿ ಪರ್ಸ್ ಬಿಟ್ಟು ಬಂದೆನೆಂದು ನಾಟಕವಾಡಬಹುದೆನ್ನಿಸಿ ಅಲ್ಲಿಗೆ ನಡೆದ.

ಅಲ್ಲಿ ಮುದುಕ ಕ್ಯಾಶ್ ಕೌಂಟರ್ ನಲ್ಲಿ ಕುಳಿತು ಒಂದಿಷ್ಟು ಚಿಲ್ಲರೆ ಎಣಿಸುತ್ತಿದ್ದ.ಪುಟ್ಟ ಮಾಣಿಯೊಬ್ಬ ಮುದುಕನಿಂದ ಬೈಸಿಕೊಳ್ಳುತ್ತಾ ಟೇಬಲ್ ಒರೆಸುತ್ತಿದ್ದ.ಇದ್ದಕ್ಕಿದ್ದಂತೆ ಮಾಲೀಕನ ಕೈಯಿಂದ ಜಾರಿ ಚಿಲ್ಲರೆಯಲ್ಲಿ ಕೆಲವು ನಾಣ್ಯಗಳು ಉರುಳಿ ನೆಲದ ಮೇಲೆ ಬಿದ್ದವು. ಇವನ ಕಾಲಕೆಳಗೂ ಒಂದು ಬಿಲ್ಲೆ ಉರುಳಿ ಬಂದಾಗ ತಪ್ಪೆಂದು ಗೊತ್ತಿದ್ದರೂ, ಕಾಲಿನಿಂದ ಅದನ್ನು ಮುಚ್ಚಿ ಸುಮ್ಮನೆ ಕುಳಿತಿದ್ದ.

ಲೇ ಮಾಣಿ, ಕಾಸು ಹೆಕ್ಕಿಕೊಡು ಎಂದು ಡೊಳ್ಳು ಹೊಟ್ಟೆಯ ಮಾಲೀಕ ದರ್ಪದಿಂದ ಕೂಗಿದಾಗ ಆತ ತನ್ನ ಗುಡಿಸುವ ಕೆಲಸ ಬಿಟ್ಟು ಹೆದರಿ ಅಲ್ಲಿ ಇಲ್ಲಿ ಕಪ್ಪೆಯಂತೆ ಕುಪ್ಪಳಿಸಿ, ಕೆಲವು ನಾಣ್ಯಗಳನ್ನು ಹುಡುಕಿ ಟೇಬಲ್ ಮೇಲೆ ಇಟ್ಟ. ‘ಲೇ ಹಲ್ಕಟ್ ನನ್ಮಗನೆ …ಇನ್ನೂ ಒಂದು ನಾಲ್ಕು ಎಂಟಾಣೆ ಇರ್ಬೇಕು ನೋಡೋ…ಎಂದು ಗುಡುಗಿದ. ಮತ್ತೆ
ಹುಡುಕಿದ ಬಾಲಕನಿಗೆ ಹಣ ಸಿಗುವುದಾದರೂ ಹೇಗೆ?. ಸೂ.ಮಗನೇ..ನಾಟ್ಕ ಆಡ್ತೀಯಾ? ನಿನ್ನ ಚರ್ಮ ಸುಲಿದ್ರೆ ಬಚ್ಚಿಟ್ಟ ಹಣ ತಾನೇ ಹೊರಬರುತ್ತೆ. ..ಎಂದು ರಭಸದಿಂದ ಮಾಲೀಕ ಮೇಲೆದ್ದಾಗ.

ಬಾಲಕನಿಗೆ ಬೀಳಬಹುದಾದ ಏಟು, ಹಾಗೂ ಇಷ್ಟೇ ಹಣ ಬಿದ್ದಿದ್ದು ಎಂದು ಕರಾರುವಾಕ್ಕಾಗಿ ಹೇಳುವ ಮಾಲೀಕನ ಸ್ಮರಣಶಕ್ತಿ ಇವನನನ್ನು ದಿಗ್ಭ ಮೆಗೊಳಿಸಿದಾಗ, ತಾನು ಆತುರದಲ್ಲಿ ಒಂದು ಚಿಕ್ಕ ಜೀವಕ್ಕೆ ಅದೆಷ್ಟು ಹಾನಿ ಮಾಡಿಬಿಡುತ್ತಿದ್ದೇನಲ್ಲಾ…ಎನ್ನಿಸಿದಾಗ ತನ್ನ ಬಗ್ಗೇ ಅಸಹ್ಯ ಉಂಟಾಗಿ. ಕಾಲು ಜರುಗಿಸಿ ಇವನು ” ಲೇ.. ಹುಡುಗಾ…ಇಲ್ಲಿದೆ ನೋಡು ನಿನ್ನ ಎಂಟಾಣೆ.. ಎಂದು ಕೂಗಿದ್ದ.ಇಲ್ಲಿ ಆ ವ್ಯಕ್ತಿಯ ಆಸೆ, ನಿರಾಸೆ, ಮರುಕ,ಪಾಪಪ್ರಜ್ಞೆ ಎಲ್ಲವೂ ವ್ಯಕ್ತವಾದ ರೀತಿ ಅದ್ಭುತವಾಗಿ ಮೂಡಿದೆ.

ಅಂದಿನ ದಿನಗಳಲ್ಲಿ ಎಂಟಾಣೆಗೂ ಬೆಲೆ ಇತ್ತು.ಇಂದು ಮೊತ್ತದಲ್ಲಿ ವ್ಯತ್ಯಾಸವಾಗಿದೆ ಎನ್ನುವುದನ್ನು ಬಿಟ್ಟರೆ ಒಂದು ಎಂಟಾಣೆಯ ಕಥೆ ಇವತ್ತಿಗೂ ಜೀವಂತವೇ ಎನ್ನ ಬಹುದು.

ಅಘೋಷಿತ

ಆನಂದ ಕಚೇರಿಯಲ್ಲಿ ರಾಶಿ ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದರೂ, ತಲೆತುಂಬಾ ಅಂದು ತಂಗಿ ವನಜಳನ್ನು ನೋಡಲು ಬರುವ ಗಂಡಿನ ಬಗ್ಗೆ ಯೋಚಿಸುತ್ತಿದ್ದ.ಉತ್ತಮ ಸಂಬಂಧ. ಯೋಗ್ಯ ವರ. ಎರಡು ವರ್ಷಗಳ ಮಟ್ಟಿಗೆ ಪರದೇಶದಲ್ಲಿರುವುದರಿಂದ ಅಮ್ಮನಿಗೆ ತುಸು ಚಿಂತೆ. ಇಂದು ಈ ಊರಲ್ಲಿ ಎರಡು ಹೆಣ್ಣು ನೋಡಿ,ಒಂದು ಇತ್ಯರ್ಥ ಮಾಡಿ, ನಾಡಿದ್ದೇ ನಿಶ್ಚಿತಾರ್ಥ. ಅದರ ಮುಂದಿನ ವಾರವೇ ಮದುವೆ ಎಂದವರು ಹೇಳಿದ್ದರು.

ಇವನು ಅರ್ಧದಿನ ರಜಾ ಹಾಕಿ ತರಾತುರಿಯಲ್ಲಿ ಮನೆಗೆ ಬರುವಷ್ಟರಲ್ಲಿ ಗಂಡಿನ ಕಡೆಯವರ ಕಾರು ಮನೆಯ ಮುಂದೆ ನಿಂತಿತ್ತು. ಬಹಳ ಸರಳ ಜನರು. ವಿದ್ಯಾವಂತನಾದರೂ ನಿಗರ್ವಿಯಾದ ಅನುರೂಪನಾದ ವರ.ವನಜಾ ಅವನಿಗೆ ಹಿಡಿಸಿದಂತೆ ಕಾಣುತ್ತಿತ್ತು. ಆದರೂ ಅವರು ಇನ್ನೊಂದು ಹುಡುಗಿಯನ್ನು ನೋಡಿ ನಾಳೆ ಬೆಳಿಗ್ಗೆ ಹೇಳುತ್ತೇವೆ ಎಂದು ಹೊರಟರು.

ಅಮ್ಮ ಮತ್ತು ವನಜಾ ನಿರಾಶೆಯಿಂದ ಮತ್ತೊಂದು ಹುಡುಗಿ ಬ್ಯಾಂಕಲ್ಲಿ ಕೆಲಸ ಮಾಡ್ತಾಳಂತೆ.ನೋಡಲು ತೆಳ್ಳಗೆ ಬೆಳ್ಳಗಿದ್ದಾಳಂತೆ. ಇನ್ನೆಲ್ಲಿ ನಾವು?… ಎಂದಾಗ ಆನಂದ ಜೋರಾಗಿ ನಕ್ಕ. “ಅದ್ಸರಿ ಆದ್ರೆ ಈ ಗಂಡು ವನಜಾಗೆ ಗಟ್ಟಿ ನೋಡ್ತಿರು…ಎಂದು ಆನಂದ ನಿಶ್ಚಿತವಾಗಿ ಹೇಳಲು ಕಾರಣವೇನು?…

ಈ ಪುಸ್ತಕದಲ್ಲಿರುವ ಇಂತಹ ಇನ್ನಷ್ಟು ಚೆಂದದ ಅರ್ಥಪೂರ್ಣ ಕಥೆಗಳನ್ನು ನೀವೇ ಓದಿ ನೋಡಿ….

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW