ತನ್ನ ವಯೋಸಹಜವಾದ ಪಾತ್ರಗಳನ್ನು ಮಾತ್ರ ಆಯ್ದುಕೊಳ್ಳುವ ಸೂಕ್ಷ್ಮತೆ ಬೆಳಿಸಿಕೊಂಡಿರುವ ಬಚ್ಚನ್ ಉಳಿದೆಲ್ಲಾ ಕಲಾವಿದರಿಗೂ ಮಾದರಿ. ಇಳಿವಯಸ್ಸಿನ ವಿಷ್ಣುರನ್ನು ‘ಬಳ್ಳಾರಿ ನಾಗ’ ನಾಗಿ ನೋಡಲು ಹೋಗಿ ಕೈ ಸುಟ್ಟುಕೊಂಡ ನಮ್ಮ ಚಿತ್ರರಂಗದವರು ‘ಪಿಕು’ ತರದ ಚಿತ್ರಗಳನ್ನು ಒಮ್ಮೆ ನೋಡಬೇಕು. – ರಾಘವನ್ ಚಕ್ರವರ್ತಿ ಅವರ ಪಿಕು ಸಿನಿಮಾದ ಕುರಿತು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ….
ಸರಿಯಾಗಿ ೪೨ ವರ್ಷದ ಹಿಂದೆ ‘ಜಂಝ್ಹೀರ್’ ನಂತಹ ’ಹೊಡಿ-ಬಡಿ-ಕಟ್ಟು-ಕೊಲ್ಲು’ ಚಿತ್ರದಲ್ಲಿ ನಟಿಸಿ ಭಾರತದ ಮನೆಮನೆ ವ್ಯಕ್ತಿಯಾದ ಅಮಿತಾಭ್ ಬಚ್ಚನ್ ಎಂಬ ಮಾಜಿ angry youngman ಈ ಪಾಟಿ ಮಾಗಿದ್ದಾರೆ ಎಂಬುದನ್ನು ನೆನೆಯಲೇ ಅಚ್ಚರಿಯಾಗುತ್ತದೆ.
ಬಚ್ಚನ್ ರಂತಹ ಬಚ್ಚನ್ ರನ್ನು, ‘ಹ್ಯಾಪಿ ನ್ಯೂ ಇಯರ್’, ‘ಚೆನ್ನೈ ಎಕ್ಸ್ ಪ್ರೆಸ್’ ನಂತಹ ಲಂಗು-ಲಗಾಮಿಲ್ಲದ ಚಿತ್ರಗಳಲ್ಲಿನ ದೀಪಿಕಾರನ್ನು ’ಪಿಕು’ ತರಹದ ಕಥಾವಸ್ತುವಿಗೆ ಒಗ್ಗಿಸಿದ ಸುಜಿತ್ (ಬಂಗಾಳಿ ಉಚ್ಚಾರಣೆಯಲ್ಲಿ ’ಶೂಜಿತ್’ ಆಗಿರುವಂತಿದೆ) ಸರ್ಕಾರ್ ಅಭಿನಂದನಾರ್ಹರು.
ಮಲಬದ್ಧತೆಯಿಂದ ಬಳಲುತ್ತಿರುವ ಕಿವುಡನೂ ಆದ ಭಾಷ್ಕೋರ್ (ಭಾಸ್ಕರ್)ಬ್ಯಾನರ್ಜೀ (ಬಚ್ಚನ್), ಬಂಗಾಳಿಗಳ ಒಣ ಪ್ರತಿಷ್ಟೆ, ಠೇಂಕಾರ, ದೊಡ್ಡ ಗಂಟಲುಗಳೆಲ್ಲದರ ಸಂಕೇತ. ತನ್ನ ಮಲಬದ್ಧತೆಯ ಬಗ್ಗೆ ಎಗ್ಗು-ಸಿಗ್ಗಿಲ್ಲದೆ ಯಾರಮುಂದೆ ಬೇಕಾದರೂ ನಿರರ್ಗಳವಾಗಿ ಮಾತನಾಡಿಬಿಡಬಲ್ಲ ಭಾಷ್ಕೋರ್ ಈ ಕಾರಣಕ್ಕಾಗಿಯೇ ತನ್ನನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುವ ಮಗಳು ಪಿಕು(ದೀಪಿಕಾ)ಗೆ ದೊಡ್ಡ ಸಮಸ್ಯೆಯಾಗಿದ್ದಾನೆ. ಮನೆಕೆಲಸದಾಕೆ ಕೂಡಾ ಜಿಗುಪ್ಸಿತಳಾಗಿ ಬೇರೆ ಮನೆ ನೋಡಿಕೊಂಡಿದ್ದಾಳೆ. ದಿನಕ್ಕೆ ಹಲವು ಬಾರಿ ಬಿ.ಪಿ. ನೋಡಿಕೊಳ್ಳುವ ಹಲವಾರು ಔಷಧಿಗಳನ್ನು ಬಳಿಯಲ್ಲೇ ಸದಾ ಇಟ್ಟುಕೊಂಡಿರುವ ಭಾಷ್ಕೋರ್ ಮಗಳಿಗಿನ್ನೂ ಮದುವೆಯಾಗದ ಬಗ್ಗೆ ಚಿಂತೆಯೇನೂ ಇಲ್ಲ.

ಆರ್ಕಿಟೆಕ್ಟ್ ಆಗಿ ಕೆಲಸಮಾಡುವ ಪಿಕು ಬಹಳ ದರ್ಪದ ಹುಡುಗಿ. ಕ್ಯಾಬ್ ಚಾಲಕರೊಂದಿಗೆ ನಿತ್ಯ ಜಗಳ. ಹೀಗಾಗಿ ಯಾವ ಕ್ಯಾಬ್ ನವರೂ ಈಕೆಯ ಮನೆಗೆ ಬರಲೊಪ್ಪುವುದಿಲ್ಲ. ರಾಣಾ ಚೌಧರಿ (ಇರ್ಫ಼ಾನ್) ಕ್ಯಾಬ್ ಕಂಪನಿಯ ಮಾಲೀಕ. ಪಿಕು ಕಲ್ಕತ್ತದ ಹಳೆಯ ಬಂಗಲೆಯನ್ನು ಮಾರಿಬಿಡಬೇಕೆಂದು ನಿರ್ಧರಿಸುತ್ತಾಳೆ. ’ಚಂಪಾವಿಲ್ಲಾ’ ಎಂಬ ಹಳೆಯ ಆ ಭವ್ಯ ಬಂಗಲೆ ಮಾರಲು ಭಾಷ್ಕೋರ್ ಗೆ ಇಷ್ಟವಿಲ್ಲ. ಕಾರಣ ’ಚಂಪ’ ಅವನ ತಾಯಿಯ ಹೆಸರು. ಹೀಗಾಗಿ ಮನೆ ಖರೀದಿ-ವ್ಯವಹಾರ ನಿಲ್ಲಿಸಲು ತಾನೇ ಕಲ್ಕತ್ತೆಗೆ ಹೊರಟುನಿಂತು ಬಿಡುತ್ತಾನೆ. ಮಲಬದ್ಧತೆಯ ಕಾರಣಒಡ್ಡಿ ರೈಲು-ವಿಮಾನಗಳಲ್ಲಿ ಪ್ರಯಾಣ ಅಸಾಧ್ಯವೆಂದು, ರಸ್ತೆಯ ಮೂಲಕವೇ ಕಲ್ಕತ್ತೆಗೆ ಹೋಗುವಂತೆ ಹಠಹಿಡಿಯುತ್ತಾನೆ. ರಾಣಾನ ಚಾಲಕರಾರೂ ಹೋಗಲೊಪ್ಪುವುದಿಲ್ಲ. ಕೊನೆಗೆ ಮಾಲೀಕ ರಾಣಾನೇ ಡ್ರೈವರ್ ಆಗುತ್ತಾನೆ.
ಅಪಾರ ತಾಳ್ಮೆ, ಹಾಸ್ಯಪ್ರಜ್ಞೆಯ ರಾಣಾ, ಸಿಡುಕಾಡುವ ಪಿಕು, ಪ್ರತಿಮಾತಿಗೂ ತಲೆಹಾಕುವ ಭಾಷ್ಕೋರ್ ದೆಹಲಿಯಿಂದ ಕಲ್ಕತ್ತೆಗೆ ರಸ್ತೆಯ ಮುಖಾಂತರ ಪಯಣಿಸುವ ದೃಶ್ಯ ಚಿತ್ರದ highlight. ಇದೊಂದು ರೂಪಕವಾಗಿಯೂ ಇದೆ. ಭಾಷ್ಕೋರ್ ನ ವಿಪರೀತ-ವಿಲಕ್ಷಣ ವರ್ತನೆ (eccentricity)ಯಿಂದ ಪ್ರಯಾಣ ತಡವಾಗುತ್ತದೆ. ಕೊನೆಗೆ ಕಲ್ಕತ್ತ ತಲುಪುತ್ತಾರೆ. ಭಾಷ್ಕೋರ್ ರಾಣಾನನ್ನು ತಮ್ಮೊಂದಿಗೆ ಉಳಿಯುವಂತೆ ಕೇಳಿಕೊಳ್ಳುತ್ತಾನೆ. ಆದರೆ ಮಾರನೇ ದಿನವೇ ರಾಣಾ ವಾಪಸಾಗುತ್ತಾನೆ. ಹೋಗುವಾಗ ಮನೆ ಮಾರದಿರುವಂತೆ ಸಲಹೆ ಮಾಡುತ್ತಾನೆ. ಪಿಕು ಮನೆಮಾರುವ ಯೋಚನೆ ಅಲ್ಲಿಗೆ ಬಿಡುತ್ತಾಳೆ. ಭಾಷ್ಕೋರ್ ನ ಮಲಬದ್ಧತೆ ಪುರಾಣ ಮುಂದುವರೆಯುತ್ತದೆ…
ಚಿತ್ರದ ಕೊನೆಯ ದೃಶ್ಯಗಳು ಮನೋಜ್ಞವಾಗಿ ಮೂಡಿಬಂದಿವೆ. ಮಲಬದ್ಧತೆಯಂತಹ ಕಥಾವಸ್ತುವೊಂದನ್ನು ಕಲಾತ್ಮಕವಾಗಿ ತೆರೆಯ ಮೇಲೆ ಅಳವಡಿಸಿರುವ ಸುಜಿತ್ ಬಗ್ಗೆ ಹೇಳಲೇಬೇಕಾಗುತ್ತದೆ. ಬಾಲ್ಯವನ್ನು ದೆಹಲಿಯಲ್ಲೇ ಕಳೆದ ಸುಜಿತ್ ಸುಮಾರು ೨ ದಶಕಗಳಷ್ಟು ಕಾಲ ದೆಹಲಿಯಲ್ಲೇ ಇದ್ದವರು. ತಾವು ಬೆಳೆದ ಚಿತ್ತರಂಜನ್ ಪಾರ್ಕ್ ಪ್ರದೇಶವನ್ನೇ ಚಿತ್ರಣಕ್ಕಾಗಿ ಆಯ್ದುಕೊಂಡಿರುವ ಸುಜಿತ್, ದೆಹಲಿಯನ್ನೇ ಒಂದು ಪಾತ್ರ ಮಾಡಿಬಿಡಬಲ್ಲರು. ಚಿತ್ರೀಕರಣಕ್ಕಾಗಿ ದೆಹಲಿ ಮತ್ತು ಕಲ್ಕತ್ತದ ಹಳೆಯ ಬಂಗಲೆಗಳ ಆಯ್ಕೆಯಲ್ಲಿ ಸುಜಿತ್ ರ ಸೂಕ್ಷ್ಮತೆ ಎದ್ದು ಕಾಣುತ್ತದೆ. ಹಿನ್ನಲೆ ಸಂಗೀತಕ್ಕೆ ಸಿತಾರ್ ಹೆಚ್ಚಾಗಿ ಬಳಕೆಯಾಗಿರುವುದು ಬಂಗಾಳಿಗಳ mood ಗೆ ಪೂರಕವಾಗಿದೆ. ಸಂದರ್ಶನವೊಂದರಲ್ಲಿ ತಾವು ಹೃಷಿ ದಾ (ಹೃಷಿಕೇಶ್ ಮುಖರ್ಜಿ) ಚಿತ್ರಗಳನ್ನು ನೋಡಿ ಬೆಳೆದ್ದಿದ್ದಾಗಿ ಸುಜಿತ್ ಹೇಳಿದ್ದರು. ಪಿಕು ನೋಡಿದಾಗ ಇದು ಖಾತ್ರಿಯಾಗುತ್ತದೆ. ಪ್ರಾಸಂಗಿಕವಾಗಿ, ಹೃಷಿದಾ ರ ಅವಿಸ್ಮರಣೀಯ ’ಆನಂದ್’ ನಲ್ಲಿಯೂ ಬಚ್ಚನ್ ಪಾತ್ರದ ಹೆಸರು ಭಾಷ್ಕೋರ್ (ಭಾಸ್ಕರ್) ಬ್ಯಾನರ್ಜಿ. ಹೃಷಿದಾ ಅಥವಾ ಬಸು ಚಟರ್ಜಿ ಚಿತ್ರಗಳಲ್ಲಿನ ಅನುಭವಕ್ಕೆ ಮಾತ್ರ ವೇದ್ಯವಾಗುವ ಆಹ್ಲಾದತೆ, ಸುಜಿತ್ ರ ಈ ಚಿತ್ರದಲ್ಲೂ ದೊರಕುತ್ತದೆ.

ಹಾಸ್ಯದ ಪರಿಧಿಯಿಂದ ಜಾರದಂತೆ ಸುಜಿತ್ ನಿರೂಪಣೆ ಸಾಗುತ್ತದೆ. ಭಾರತೀಯ ಮತ್ತು ಅಮೆರಿಕನ್ ’ಕಮೋಡ್’ ಗಳ ಬಗ್ಗೆ ಇರ್ಫ಼ಾನ್ ’ವಿವರಿಸುವ’ ದೃಶ್ಯ ಒಂದು ಉದಾಹರಣೆ:-) ಯಾರದೋ ಸೈಕಲ್ ಹತ್ತಿ ಕಲ್ಕತ್ತೆಯನ್ನೆಲ್ಲಾ ಸುತ್ತುವ, ಅಪಾರ ಜೀವನ ಪ್ರೀತಿಯ ಘಾಟಿ ಮುದುಕನಾಗಿ ಬಚ್ಚನ್ ಅಭಿನಯದ ಬಗ್ಗೆ ಚಕಾರವೆತ್ತುವಂತಿಲ್ಲ. ಇರ್ಫ಼ಾನ್ ರನ್ನು ಕಲ್ಕತ್ತೆಯ ತಮ್ಮ ಬಂಧುಗಳಿಗೆ ಪರಿಚಯಿಸುತ್ತಾ ಬಚ್ಚನ್ ’ಹಿ ಈಸ್ ರಾಣಾ, ರಾಣಾ ಚೌಧರಿ..ಬಟ್ ನಾಟ್ ಅ ಬಂಗಾಲೀ’ ಎನ್ನುತ್ತಾ ಬಂಗಾಳಿ ಬುದ್ಧಿ ತೋರುವ ಹಲವು ದೃಶ್ಯಗಳಿವೆ. ಇರ್ಫ಼ಾನ್ ಅಭಿಜಾತ ಕಲಾವಿದರೆಂಬುದು ಹಲವು ಬಾರಿ ನಿರೊಪಿತವಾಗಿದೆ. ಅಚ್ಚರಿಗೊಳಿಸುವುದು ದೀಪಿಕಾ ಅಭಿನಯ. ಬಹಳ ಸಹಜ-ಲವಲವಿಕೆಯ ಅಭಿನಯಕ್ಕೆ ದೀಪಿಕಾ ಅಭಿನಂದನಾರ್ಹರು. ’ಮೇಘ್ ಮಲ್ಹಾರ್ ರಾಗ ಹಾಡಿದರೆ ಚೆನ್ನಾಗಿ ಮಳೆಯಾಗುತ್ತದಂತೆ. ನಿಮಗೆ ಮಲವಿಸರ್ಜನೆ ಸರಿಯಾಗಿ ಮಾಡಿಸುವ ರಾಗವೊಂದಿದ್ದಿದ್ದರೆ ಚೆನ್ನಾಗಿರೋದು’ ಎಂದು ಬಚ್ಚನ್ ರನ್ನು ’ತಿವಿ’ಯುವ ಇರ್ಫ಼ಾನ್, ಟ್ಯಾಕ್ಸಿಯಲ್ಲಿ ಅಕಸ್ಮಾತ್ ಚಾಕು ಇಟ್ಟಿರುವುದನ್ನು ಕಂಡು ’ಆ ಚಾಕು ಎಸೆಯುವವರೆಗೆ ನಾನು ಬರಲ್ಲ’ ಎಂದು ನಡುರಸ್ತೆಯಲ್ಲೇ ಮೊಂಡು ಹಿಡಿದು ಕುಳಿಯುಬಿಡುವ ಬಚ್ಚನ್, ಕೊನೆಯ ದೃಶ್ಯಗಳಲ್ಲಿ ಬಚ್ಚನ್ ಸಮಕ್ಕೂ ಅಭಿನಯಿಸಿರುವ ದೀಪಿಕಾ…ಈ ಮೂರೇ ಪ್ರಮುಖ ಪಾತ್ರಗಳಿರುವ ಹೃದಯಸ್ಪರ್ಶಿ ಕಥೆ ಹೆಣೆದ ಜೂಹಿ ಚತುರ್ವೇದಿ, ಇಡೀ ಚಿತ್ರ ಪಾದರಸದಂತೆ ಚಲಿಸುವಂತೆ ಮಾಡಿರುವ ಸಂಕಲನಕಾರ ಚಂದ್ರಶೇಖರ್ ಪ್ರಜಾಪತಿ ಎಲ್ಲರೂ ಚಿತ್ರದ ಯಶಸ್ಸಿನ ರೂವಾರಿಗಳು.
ತನ್ನ ವಯೋಸಹಜವಾದ ಪಾತ್ರಗಳನ್ನು ಮಾತ್ರ ಆಯ್ದುಕೊಳ್ಳುವ ಸೂಕ್ಷ್ಮತೆ ಬೆಳಿಸಿಕೊಂಡಿರುವ ಬಚ್ಚನ್ ಉಳಿದೆಲ್ಲಾ ಕಲಾವಿದರಿಗೂ ಮಾದರಿ. ಇಳಿವಯಸ್ಸಿನ ವಿಷ್ಣುರನ್ನು ’ಬಳ್ಳಾರಿ ನಾಗ’ ನಾಗಿ ನೋಡಲು ಹೋಗಿ ಕೈ ಸುಟ್ಟುಕೊಂಡ ನಮ್ಮ ಚಿತ್ರರಂಗದವರು ’ಪಿಕು’ ತರದ ಚಿತ್ರಗಳನ್ನು ಒಮ್ಮೆ ನೋಡಬೇಕು.
ನಮ್ಮ ಭಟ್ಟರು ಇಂತಹ ಪ್ರಯೋಗಗಳನ್ನು ಮಾಡಲೆಂದು ಹಾರೈಕೆ.
- ರಾಘವನ್ ಚಕ್ರವರ್ತಿ
