ತೋರಿಕೆ ಬೇಡ… ಇರಲಿ ಮಗುವಿನಂತಹ ಮನಸ್ಥಿತಿ

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದು ಮಗುತನ ಇದ್ದೇ ಇರುತ್ತದೆ. ನಮ್ಮಲ್ಲಿರುವ ಮಗುವನ್ನು ನೋಯಲು ಬಿಡುವುದು ಬೇಡ. ಪ್ರಬುದ್ಧತೆಯ, ಗಾಂಭೀರ್ಯದ ಮುಖವಾಡದಡಿ ನಾವು ಬದುಕುವುದು ಬೇಡ. ಬದುಕಿನ ಅಮೂಲ್ಯ ಕ್ಷಣಗಳನ್ನು ಜೀವಿಸಿ ಬಿಡೋಣ.ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಈ ಲೇಖನವನ್ನು ಪೂರ್ತಿಯಾಗಿ ಓದಿ…

ನಾವು ತೋರಿಕೆಯ ಜೀವನವನ್ನು ಮಾಡುತ್ತಿದ್ದೇವೆ ಎಂದು ಹೇಳಿದರೆ ಬಹಳಷ್ಟು ಜನರು ಹಾಗೇನೂ ಇಲ್ಲ ಎಂದು ಹೇಳಬಹುದು. ಆದರೆ ನಿಜವಾಗಿಯೂ ಹೇಳಬೇಕೆಂದರೆ ಮನುಷ್ಯನಲ್ಲಿ ಬಾಲ್ಯಾವಸ್ಥೆ ಮುಗಿದು ತಿಳುವಳಿಕೆ ಬರುವ ಹೊತ್ತಿಗೆ ಆತ ಕೆಲ ಸಾಮಾಜಿಕ ಶಿಸ್ತುಗಳಿಗೆ ಒಳಪಟ್ಟು ತೋರಿಕೆಯ ಬದುಕನ್ನು ನಡೆಸುತ್ತಾನೆ. ಆದರೆ ಮಕ್ಕಳಲ್ಲಿ ಈ ರೀತಿಯ ತೋರಿಕೆ ಇರುವುದಿಲ್ಲ. ತಮ್ಮ ಬೇಕು ಬೇಡಗಳ ಕುರಿತು ಮಕ್ಕಳಲ್ಲಿ ನಿಶ್ಚಿತವಾದ ಅಭಿಪ್ರಾಯಗಳು ಇದ್ದು ಅವುಗಳನ್ನು ನಾವು ಗುರುತಿಸದೆ ಹೋಗುತ್ತೇವೆ. ಅವರಿಗೆ ಯಾರನ್ನೂ ಪ್ರಭಾವಿಸುವ ಇಲ್ಲವೇ ಶಿಷ್ಟಾಚಾರದ ಅವಶ್ಯಕತೆ ಇಲ್ಲದೆ ಹೋಗುವುದರಿಂದ ನಮ್ಮ ಪಾಲಿಗೆ ಮಕ್ಕಳ ನಿಶ್ಚಿತ ಅಭಿಪ್ರಾಯಗಳು ಆಗೋಚರವಾಗಿಯೇ ತೋರುತ್ತವೆ.

ಮಕ್ಕಳು ಕೇವಲ ತಾವು ಬೆಳೆಯುವುದಿಲ್ಲ ಬದಲಾಗಿ ನಮ್ಮನ್ನು ಕೂಡ ಬೆಳೆಸುತ್ತಾರೆ. ಅವರು ಹೀಗೆಯೇ ನಡೆಯಬೇಕು ಎಂದು ಕೈಯಲ್ಲಿ ಕೋಲು ಹಿಡಿದು ನಮಗೆ ಶಿಸ್ತಿನ ಪಾಠವನ್ನು ಹೇಳಿಕೊಡುವುದಿಲ್ಲ. ಬದಲಾಗಿ ತಮ್ಮ ನಡವಳಿಕೆಯ ಮೂಲಕ ನಾವು ಹೇಗೆ ಇರಬೇಕು ಎಂಬುದನ್ನು ತೋರುತ್ತಾರೆ. ಅರಿಯುವ ಜಾಣ್ಮೆ ನಮಗಿರಬೇಕು ಅಷ್ಟೇ!

ತಾಯಿ ಅದೆಷ್ಟೇ ಜೋಗುಳ ಹಾಡಿದಾಗಲೂ ಮಲಗದ ಮಗು ಆಟವಾಡಿ ದಣಿದಾಗ ತನ್ನಂತಾನೆ ನಿದ್ದೆ ಬಂದು ಮಲಗುತ್ತದೆ. ಸರಿಯಾಗಿ ರಾತ್ರಿ ಹತ್ತು ಗಂಟೆಗೆ ಮಲಗಬೇಕು ಮುಂಜಾನೆ ಆರಕ್ಕೆ ಹೇಳಬೇಕು ಎಂಬ ಯಾವುದೇ ರೀತಿಯ ಕಟ್ಟುನಿಟ್ಟಿನ ಶಿಸ್ತುಗಳು ಮಕ್ಕಳಿಗೆ ಇರುವುದಿಲ್ಲ. ಮಕ್ಕಳು ಬೆಳೆಯುವುದೇ ಹಾಗೆ… ಬೆಳೆಯಬೇಕು ಕೂಡ.. ಈ ಕುರಿತು ಅವರಿಗೆ ಯಾವುದೇ ಮುಜುಗರ ಇರುವುದಿಲ್ಲ. ನಿಜ ಹೇಳಬೇಕೆಂದರೆ ಮುಜುಗರ ಎಂಬ ಪದದ ಅರ್ಥವು ಅವರಿಗೆ ಗೊತ್ತಿಲ್ಲ.

ಅತ್ತುಬಿಡಿ ಮಗುವಿನಂತೆ ಮನದ ನೋವು ನಿರಾಸೆಗಳೆಲ್ಲ ಹೆಪ್ಪಾಗಿಸದೇ. ತಮಗೆ ನೋವಾದಾಗ, ಬೇಸರವಾದಾಗಮಕ್ಕಳು ಅತ್ತು ತಮ್ಮ ನೋವನ್ನು ತೋರಿಕೊಳ್ಳುತ್ತಾರೆ. ಬೇಕಾದುದನ್ನು ಪಡೆಯಲು ರಚ್ಛೆ ಹಿಡಿದು ದಕ್ಕಿಸಿಕೊಳ್ಳುತ್ತಾರೆ. ದೊರೆತುದನ್ನು ಸಂತಸದಿಂದ ಪ್ರದರ್ಶಿಸುತ್ತಾರೆ. ಮತ್ತೆ ಕೆಲವೇ ಗಂಟೆಗಳಲ್ಲಿ ಅದನ್ನು ಮರೆತು ಬೇರೊಂದು ವಸ್ತುವನ್ನು ಹಿಡಿದು ಆಡತೊಡಗುತ್ತಾರೆ. ಸಂತೋಷವಾದಾಗ ನಗುವನ್ನು ಚೆಲ್ಲುತ್ತಾರೆ. ಅದುವರೆಗೂ ಯಾರೊಂದಿಗೆ ಆಟವಾಡುವ ಸಮಯದಲ್ಲಿ ಜಗಳವಾಡುತ್ತಿದರೂ ಮತ್ತೆ ಅವರ ಕೈ ಹಿಡಿದು ಆಟವಾಡುತ್ತಾರೆ. ಪ್ರೀತಿಯಿಂದ ಮುತ್ತಿಡುತ್ತಾರೆ. ಮನಸ್ಸಿನಲ್ಲಿ ಕಹಿ, ದ್ವೇಷ ಅಸೂಯೆಗಳನ್ನು ಅವರು ಹೊಂದಿರುವುದಿಲ್ಲ. ಯಾವುದೇ ರೀತಿಯ ಭಯ, ಹಿಂಜರಿಕೆಗಳಿಲ್ಲದೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮಕ್ಕಳನ್ನು ನೋಡಿ ನಾವು ಕಲಿಯಬೇಕು.

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದು ಮಗುತನ ಇದ್ದೇ ಇರುತ್ತದೆ. ಹಾಗೆ ನಮ್ಮಲ್ಲಿರುವ ಮಗುವನ್ನು ನೋಯಲು ಬಿಡುವುದು ಬೇಡ. ಪ್ರಬುದ್ಧತೆಯ, ಗಾಂಭೀರ್ಯದ ಮುಖವಾಡದಡಿ ನಾವು ಬದುಕುವುದು ಬೇಡ. ಶಿಷ್ಟಾಚಾರದ ಹೆಸರಿನಲ್ಲಿ ನಮ್ಮ ಭಾವನೆಗಳನ್ನು ಹೊರ ಹಾಕದೆ ಮುಚ್ಚಿಟ್ಟು ಅವುಗಳ ಮೇಲೆ ಗಾಂಭೀರ್ಯದ ಸಮಾಧಿಯನ್ನು ಕಟ್ಟುವುದು ಕೂಡ ಬೇಡ.

ದಣಿವಾದಾಗ ನಿದ್ರಿಸಬೇಕು ನಮ್ಮ ದೇಹ ಅತ್ಯಂತ ಪವಿತ್ರವಾದದ್ದು.ತನಗೇನು ಬೇಕು ಎಂಬುದರ ಸ್ಪಷ್ಟ ಅರಿವಿರುವ ನಮ್ಮ ದೇಹದ ತಾಳಕ್ಕೆ ನಾವು ಹೆಜ್ಜೆ ಹಾಕಲೇಬೇಕು. ನಮ್ಮ ದೇಹವು ತನ್ನೆಲ್ಲ ಬೇಕು ಬೇಡಗಳ ಅರಿವನ್ನು ಹೊಂದಿದ್ದು ಅದರ ಅವಶ್ಯಕತೆಗಳನ್ನು ಕಡೆಗಾಣಿಸುವುದು ಬೇಡ.

ನಿದ್ರಿಸಲು ಗಡಿಯಾರವನ್ನು ಕ್ಯಾಲೆಂಡರನ್ನು ನೋಡುವುದು ಬೇಡ… ಗಡಿಯಾರವಿರುವುದು ಸಮಯ ನೋಡಲು ಮತ್ತು ಕ್ಯಾಲೆಂಡರ್ ಇರುವುದು ದಿನಗಳನ್ನು ಪರಿಗಣಿಸಲು. ದೇಹಕ್ಕೆ ಬೇಕೆಂದಾಗ ನಿದ್ರಿಸಲು ಯಾವುದೇ ರೀತಿಯ ಮುಜುಗರ, ಹಿಂಜರಿಕೆ ಮತ್ತು ಅಪರಾಧೀ ಮನೋಭಾವವನ್ನು ಇಟ್ಟುಕೊಳ್ಳುವುದು ಬೇಡ. ದಣಿವಾದಾಗ ಖಂಡಿತವಾಗಿಯೂ ವಿಶ್ರಾಂತಿ ಪಡೆಯಿರಿ. ನಿದ್ರೆ ಮಾಡುವುದು ಸೋಮಾರಿತನವಲ್ಲ…. ನಿಮ್ಮ ದೇಹ ಮನಸುಗಳನ್ನು ಸಮತೋಲನದಲ್ಲಿ ಇಡುವ ಒಂದು ಕ್ರಿಯೆ.

ಮನದ ದುಃಖ ದುಮ್ಮಾನಗಳನ್ನು ಅದುಮಿಟ್ಟುಕೊಳ್ಳದೆ ಉಸಿರು ಬಿಗಿ ಹಿಡಿದು, ಹಲ್ಲು ಕಚ್ಚಿ ನೋವನ್ನು ಸಹಿಸಿಕೊಳ್ಳುವ ಅವಶ್ಯಕತೆಯಿಲ್ಲ. ಅತ್ತುಬಿಡಿ! ಎಲ್ಲಾ ನೋವು, ನಿಟ್ಟುಸಿರುಗಳು ನಿಮ್ಮ ಅಳುವಿನ ಜೊತೆ ಹರಿದು ಹೋಗಲಿ… ನಿಮ್ಮ ಕಣ್ಣೀರಿನೊಂದಿಗೆ ಕರಗಲಿ. ಕಣ್ಣೀರು ನಿಮ್ಮ ಸೋಲಿನ ಸಂಕೇತವಲ್ಲ. ನಿಮ್ಮ ಕಣ್ಣೀರು ನಿಮ್ಮೆಲ್ಲ ನೋವು, ಸಂಕಟ ಮತ್ತು ದುಗುಡಗಳನ್ನು ಹೊರ ಹಾಕುವ ಮೂಲಕ ನಿಮ್ಮ ದೇಹಕ್ಕೆ ನೀವು ಕೊಡುವ ಒಂದು ನೆಮ್ಮದಿ, ಅಸ್ತವ್ಯಸ್ತವಾಗಿರುವ ಮನೆಯನ್ನು ಸ್ವಚ್ಛ ಮಾಡಿದಾಗ ದೊರೆಯುವಂತಹ ನೆಮ್ಮದಿಯೇ ಅತ್ತು ಕಣ್ಣೀರ್ಗರೆದಾಗ ಮನದ ಕೋಣೆ ಸ್ವಚ್ಛವಾಗಿ ನಿರಾಳವೆಸುತ್ತವೆ. ಆಗ ಮುಂದಿನ ದಾರಿಯ ಕುರಿತು ನಿಚ್ಚಳವಾಗಿ ಯೋಚಿಸಲು ಸಾಧ್ಯವಾಗುತ್ತದೆ.

ನಮ್ಮ ಕಣ್ಣೀರು ನಮ್ಮ ಶಕ್ತಿಯ ಸಂಕೇತವೇ ಹೊರತು ಹೇಡಿತನವಲ್ಲ ಅದು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ನಕ್ಕು ಬಿಡು ಒಮ್ಮೆ ಮಕ್ಕಳ ಹಾಗೆ… ಪ್ರತಿ ಸಣ್ಣ ಪುಟ್ಟ ಕಾರಣಗಳಿಗೆ ಮುಖದಲ್ಲಿ ಹೂ ನಗೆ ಅರಳಲಿ. ಒಂದು ಸುಂದರ ಮುಂಜಾವು, ಒಂದು ಪುಟ್ಟ ನೆನಪು , ಮಗುವಿನ ಮುಗ್ಧ ಮುಖ ನಮ್ಮ ಮುಗುಳುನಗೆಗೆ ಕಾರಣವಾಗಲಿ. ಕೇವಲ ಜೋಕುಗಳಿಗೆ ನಗುವುದು ನಗುವಲ್ಲ… ಮನದ ಕಾವಳವನ್ನು ಕಳೆಯುವ ಬೆಳದಿಂಗಳಂತಹ ನಗೆ ನಿಮ್ಮ ಮುಖದಲ್ಲಿ ಚೆಲ್ಲಲಿ. ನಗಲು ನಮಗೆ ಯಾವುದೇ ಕಾರಣಗಳು ಬೇಕಿಲ್ಲ.

ಮಕ್ಕಳು ತಮ್ಮ ಮನಸ್ಸಿಗೆ ಸಂತೋಷವಾದಾಗ ಸಮಯ ಸಂದರ್ಭಗಳ ಅರಿವಿಲ್ಲದೆ ನಕ್ಕು ಬಿಡುತ್ತಾರೆ. ಶಿಷ್ಟಾಚಾರದ ನೆಪದಲ್ಲಿ ನಾವು ದೊಡ್ಡವರು ನಗಬೇಕಾದ ಸಂದರ್ಭಗಳಲ್ಲಿಯೂ ಕೂಡ ದಿವ್ಯ ಮೌನವನ್ನು ವಹಿಸಿ ಗಾಂಭೀರ್ಯದ ಮುಖಮುದ್ರೆಯನ್ನು ಹೊಂದಿರುತ್ತೇವೆ. ನಾಗರಿಕ ಸಮಾಜದ ದೃಷ್ಟಿಕೋನದಲ್ಲಿ ಕೊಂಚ ಅಸಹಜ ಎಂದೆನಿಸಿದರೂ ನಿಮ್ಮ ನಗು ಮುಖವನ್ನು ಎಂದಿಗೂ ಗಾಂಭೀರ್ಯದ ಮುಖವಾಡದ ಹಿಂದೆ ಬಚ್ಚಿಡಬೇಡಿ. ನಮ್ಮ ಬದುಕಿನಲ್ಲಿ ನಗು ತನ್ನದೇ ಲಯವನ್ನು ಹೊಂದಿರಲಿ.

ಮಕ್ಕಳು ಯಾವುದೇ ರೀತಿಯ ಪೂರ್ವಾಗ್ರಹಗಳಿಗೆ ಒಳಗಾಗುವುದಿಲ್ಲ ತಮಗೆ ಸರಿ ಕಂಡದ್ದನ್ನು ಒಪ್ಪುವ ಬೇಡವಾದದ್ದನ್ನು ತಿರಸ್ಕರಿಸುವ ಮೂಲಕ ತಮ್ಮ ಆತ್ಮಸಾಕ್ಷಿಗೆ ( ಆತ್ಮಸಾಕ್ಷಿ ಎಂಬ ಪದದ ಅರ್ಥ ಅವರಿಗೆ ಗೊತ್ತಿಲ್ಲದಿದ್ದರೂ ) ಒಗ್ಗುವಂತೆ ಇರುತ್ತಾರೆ. ಆದ್ದರಿಂದ ಕೆಲ ವೈಯುಕ್ತಿಕ ವಿಷಯಗಳಲ್ಲಾದರೂ ಮಗುವಿನಂತೆ ನಮ್ಮ ಬದುಕನ್ನು ನಡೆಸೋಣ…. ತೋರಿಕೆಯ ಬದುಕು ನಮ್ಮದಾಗದಿರಲಿ ಎಂಬ ಆಶಯದೊಂದಿಗೆ


  • ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW