‘ಅಶ್ವತ್ಥಾಮೋ ಹತಃ’ ಪರಿಚಯ

ಲೇಖಕಿ ಸಿ.ಬಿ.ಶೈಲಾ ಜಯಕುಮಾರ್ ಅವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಅವರ ‘ಅಶ್ವತ್ಥಾಮೋ ಹತಃ’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ : ಅಶ್ವತ್ಥಾಮೋ ಹತಃ
ಲೇಖಕರು: ಸಿ.ಬಿ.ಶೈಲಾ ಜಯಕುಮಾರ್
ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗ.
ಮುದ್ರಣದ ವರ್ಷ: ೨೦೨೨.
ಪುಟಗಳು:೧೪೮ .
ಬೆಲೆ: ರೂ. ೧೩೦.

ಪುಸ್ತಕ ಅವಲೋಕನ ಬಳಗದ ಸಕ್ರೀಯ ಸದಸ್ಯರಾದ ಲೇಖಕಿ ಶ್ರೀಮತಿ ಸಿ.ಬಿ.ಶೈಲಾ ಜಯಕುಮಾರ್ ಅವರು ತಮ್ಮ ಕಾವ್ಯಮಯ ಬರಹದಿಂದ ಎಲ್ಲರಿಗೂ ಪರಿಚಿತರಾಗಿ ದ್ದಾರೆ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಇವರ ಜ್ಞಾನ ಇಲ್ಲಿನ ಪುರಾಣ ಪಾತ್ರದ ಬರಹದಲ್ಲಿ ವ್ಯಕ್ತವಾಗುತ್ತದೆ.

೧೨ ಕಥೆಗಳಿರುವ ಈ ಕಥಾಸಂಕಲನಕ್ಕೆ ಪುಸ್ತಕ ಮಾತೆ ವೀಣಾ ನಾಯಕ್ ಮೇಡಂ ಅವರ ಮುನ್ನುಡಿಯಿದೆ. ಹಾಗೂ ಮತ್ತೊಬ್ಬ ಲೇಖಕಿ ಶ್ರೀಲಕ್ಷ್ಮಿ ಭಟ್ ಅವರ ಸದಾಶಯವೂ ಇದೆ. ಇಲ್ಲಿ ಪೌರಾಣಿಕ , ಐತಿಹಾಸಿಕ ಹಾಗೂ ಸಾಮಾಜಿಕ ಕಥೆಗಳು ಅಡಕವಾಗಿವೆ.ಪ್ರತಿಯೊಂದು ಕಥೆಯಲ್ಲೂ ಕಾಣುವ ಸುಂದರ ಶಬ್ಧ -ಸಾಲುಗಳ ಬಳಕೆ ಲೇಖಕಿಯ ಕನ್ನಡ ಭಾಷೆಯ ಪ್ರಾವೀಣ್ಯ ಗಮನ ಸೆಳೆಯುತ್ತದೆ. ಕೆಲವು ಕಥೆಗಳ ಸಂಕ್ಷಿಪ್ತ ಸಾರಾಂಶ ಹೀಗಿದೆ…

ಪುಸ್ತಕದ ಶೀರ್ಷಿಕೆಯೂ ಆಗಿರುವಂತಹ

*ಅಶ್ವತ್ಥಾಮೋ ಹತಃ
ಎನ್ನುವ ಕಥೆಯಲ್ಲಿ ಮಹಾಭಾರತದ ಯುದ್ಧದಲ್ಲಿ ಅಶ್ವತ್ಥಾಮನು ಪಾಂಡವರೆಂದು ಭಾವಿಸಿ ಎಳೆಯ ಪಾಂಡು ಪುತ್ರರನ್ನು ಕೊಲ್ಲುತ್ತಾನೆ. ಹಾಲ್ಬಿಳುಪು ಬಣ್ಣದ ತಾನು ಕೆಟ್ಟ ವಿಚಾರಗಳಿಂದ ಅಂತರಂಗದಲ್ಲಿ ಶ್ಯಾಮ ಬಣ್ಣಕ್ಕೆ ತಿರುಗಿದ್ದಾಗಿ ಅರಿಯುತ್ತಾನೆ. ಇದೀಗ ತನ್ನನ್ನೇ ವಿಶ್ಲೇಷಣೆ ಮಾಡಿಕೊಳ್ಳುತ್ತಾ….ಆತನಿಗೆ ತಾನು ಬದುಕಿದ್ದೂ ಹತನಾಗಿದ್ದೇನೆ ಎಂದೆನಿಸುತ್ತದೆ. ಹಸ್ತಿನಾಪುರದ ದ್ವೇಷದ ರಾಜಕೀಯದಲ್ಲಿ ಪಾಂಡವರ ವಿರುದ್ಧವೇ ಇರುವುದು. ಅವರ ವಂಶವನ್ನು ಅಳಿಸಿ ಹಾಕಲು ಮಾಡಿದ ಎಷ್ಟೆಲ್ಲಾ ಪಾಪ ಕಾರ್ಯಗಳನ್ನು ನೆನೆಸಿ ಪಶ್ಚಾತ್ತಾಪದ ಬೆಂಕಿಯಲ್ಲಿ ನರಳುವುದನ್ನು ಸ್ವಗತವೆಂಬಂತೆ ಇಲ್ಲಿ ಕಟ್ಟಿ ಕೊಟ್ಟ ಲೇಖಕಿಯ ಕಲ್ಪನೆ ತಲೆದೂಗುವಂತಿದೆ.

* ಹಿಡಿಂಬೆ ತನ್ನಣ್ಣನನ್ನು ಕೊಂದ ಭೀಮನನ್ನು ಪ್ರೇಮಿಸಿ ಅವನನ್ನೇ ಮದುವೆಯಾಗಿ ಹುಚ್ಚು ಮೋಹದಲ್ಲಿ ಭೀಮನನ್ನು ಹಿಂಬಾಲಿಸುತ್ತಾಳೆ. ಅವಳಿಗೆ ‘ಘಟೋತ್ಕಚ’ ಎಂಬ ಪುತ್ರನೂ ಜನಿಸುತ್ತಾನೆ. ಆದರೆ ಅಲ್ಪಕಾಲದ ದಾಂಪತ್ಯ ಅವಳದಾದರೂ, ತಪಸ್ವಿನಿಯಂತೆ ಭೀಮನ ನೆನಪಲ್ಲೇ ಬಾಳುತ್ತಾಳೆ. ಮುಂದೆ ಯುದ್ಧದಲ್ಲಿ ಮಗನನ್ನೂ ಕಳೆದುಕೊಂಡು ದುಃಖದಿಂದ ಹಿಮಾಲಯದಲ್ಲಿ ತಪಸ್ಸು ಮಾಡುವ ನಿರ್ಧಾರ ತಳೆಯುತ್ತಾಳೆ.ಅವಳ ಸ್ವಾಮಿ ಭಕ್ತಿಯನ್ನು ಸಾರುವ ಅಭೂತಪೂರ್ವ ಕಥಾನಕವಿದು.

* ಮಹಾಭಾರತದಲ್ಲಿ ಅಂಧ ದೊರೆ ಧೃತರಾಷ್ಟ್ರನಿಗೆ ಅಂತಃಚಕ್ಷುವಾಗಿ, ಯುದ್ಧದ ಆಗು ಹೋಗುಗಳನ್ನು ತಿಳಿಸಿದವನು ಮಂತ್ರಿ ಸಂಜಯ. ಆತನ ನಿಷ್ಠೆ- ಸ್ವಾಮಿಭಕ್ತಿ ಸಾಟಿ ಇಲ್ಲದ್ದು.ಹದಿನೆಂಟು ದಿನದ ರಣರಂಗದ ವಿದ್ಯಮಾನ ಬಿತ್ತರಿಸುವ ಸುಧೀರ್ಘ ಕತೆಯನ್ನು ಇಲ್ಲಿ ಲೇಖಕಿ ಸೊಗಸಾಗಿ ಮೂಡಿಸಿದ್ದಾರೆ.

*ಗುರಿ ಸಾಧನೆಗೆ ಗುರುವಿನ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಕವಿ ಹರಿಹರ ಮತ್ತವರ ಶಿಷ್ಯ ರಾಘವಾಂಕರ ಕಾವ್ಯ ಸೃಷ್ಟಿಯ ಸಂಭಾಷಣೆಯ ಮೂಲಕ ವಿಭಿನ್ನವಾಗಿ ಬರೆದಿದ್ದಾರೆ.

*ವಿಜಯನಗರದ ವೀರಪುತ್ರ ಕಥೆಯಲ್ಲಿ ಬಕ್ಕರಾಯನ ಮಗ ಕಂಪಣ ಮಧುರೆಯ ಹಿತಶತ್ರುಗಳಿಂದ ಬಿಡುಗಡೆ ಯಾದ, ಹಾಗೂ ಕಾವ್ಯ ರಚನೆ ಮಾಡಿದ ವಿವರವಿದೆ.

* ಸಂತಸ ಅರಳುವ ಸಮಯ ಎನ್ನುವ ಕಥೆಯಲ್ಲಿ ಬರುವ ಮಂಗಳಾ ಇಂಜನಿಯರಿಂಗ್ ಪದವೀಧರೆಯಾದರೂ, ಮನೆಯವರ ಮಾತಿಗೆ ಒಪ್ಪಿ ಹಳ್ಳಿಯ ಕೃಷಿಕನನ್ನು ವಿವಾಹ ವಾಗಿದ್ದಳು. ಮೊದಲು ಈ ಬಗ್ಗೆ ಕೊರಗಿದ್ದರೂ, ಮುಂದೆ ಆ ಬದುಕಿಗೆ ಒಗ್ಗಿಕೊಂಡು ಅದೇ ಇಷ್ಟವಾಗಿ ಕೃಷಿಯಲ್ಲಿಯೇ ಸಾಧನೆ ಮಾಡಿ ಕೀರ್ತಿ ಪಡೆಯುತ್ತಾಳೆ. ಹೆಣ್ಣೊಬ್ಬಳ ಅಂತರಂಗದ ಪಿಸುಮಾತನ್ನು ಲೇಖಕಿ ಮನೋಜ್ಞವಾಗಿ ಬರೆದಿದ್ದಾರೆ.

ಹೀಗೆ ಇಲ್ಲಿನ ಎಲ್ಲಾ ಕಥೆಗಳೂ ಎಲ್ಲೂ ಬೇಸರ ತಾರದಂತೆ ಓದಿಸಿಕೊಂಡು ಹೋಗುವ ಗುಣ ಹೊಂದಿದೆ. ಅವರಿಂದ ಇನ್ನಷ್ಟು ಕೃತಿಗಳು ಮೂಡಿ ಬರಲಿ ಎನ್ನುವ ಆಶಯ ನನ್ನದು. ಇಲ್ಲಿರುವ ಇನ್ನಷ್ಟು ಚೆಂದದ ಕಥೆಗಳನ್ನು ನೀವೂ ಓದಿ….

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW