ಲೇಖಕರಾದ ಪ್ರಮೋದ ಕರಣಂ ಅವರ ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ ಕೃತಿಯ ಕುರಿತು ಮೇಘ ಶೆಟ್ಟಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ
ಲೇಖಕರು : ಪ್ರಮೋದ ಕರಣಂ (chiದು)
ಬೆಲೆ : ೧೦೦.೦೦
ಈ ಪುಸ್ತಕ ಓದುವಾಗ ಮುಖದಲ್ಲಿ ಮಂದಹಾಸ ಇರುವುದಂತೂ ಖಂಡಿತ. ಜೊತೆಗೆ ನಮ್ಮ ಕಾಲೇಜಿನ ದಿನಗಳು ಸಹ ನೆನಪಿಗೆ ಬರುತ್ತವೆ. ಒಂದು ವಿಷಯ ಚೆನ್ನಾಗಿ ಅರ್ಥವಾಗುತ್ತದೆ — ಎಲ್ಲರ ಮೇಲೂ ಪ್ರೀತಿ ಇರಬಹುದು, ಆದರೆ ಭಾವನೆಗಳು ಬೇರೆ ಬೇರೆ ಆಗಿರುತ್ತವೆ. ಎಲ್ಲರಿಗೂ ಸಂಗಾತಿಯ ಸ್ಥಾನ ಕೊಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಮುಖ್ಯವಾಗಿ ಕಥೆಯಲ್ಲಿ ಮೂರು ಪಾತ್ರಗಳು ಇದ್ದರೂ, ಕೊನೆಯ ಹಂತದಲ್ಲಿ ನಾಲ್ಕನೇ ಪಾತ್ರವೂ ಬರುತ್ತದೆ. ಅವರನ್ನೂ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ, ಯಾಕಂದ್ರೆ ಅವರು ಕೂಡ ಪ್ರೀತಿಸಿದ ವ್ಯಕ್ತಿಯೇ ಎಂಬುದು ಕಥೆಯ ಕೊನೆಯಲ್ಲಿ ಗೊತ್ತಾಗುತ್ತದೆ.

ಕಥೆಯ ಬಗ್ಗೆ:
“ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ” ಕಥೆಯಲ್ಲಿ ಪರಿಣಯ್ (ಪರಿಣಿ) ನಾಯಕ. ಪ್ರೇಮ ಮತ್ತು ಪ್ರೀತಿ ನಾಯಕಿಯರು. ಪ್ರೇಮ ಪರಿಣಯನ ಬಾಲ್ಯದ ಸ್ನೇಹಿತೆ. ಪ್ರೀತಿ ಪರಿಣಯನನ್ನು ಪ್ರೀತಿಸುವ ಹುಡುಗಿ.
ಈ ಕಥೆ ಶುರುವಾಗುವುದೇ ಅಂತಿಮ ಘಟ್ಟದಿಂದ. ಪರಿಣಯ ಮತ್ತು ಪ್ರೇಮ ಒಟ್ಟಿಗೆ ಬೆಳೆದವರಾದರೂ, ನಂತರ ದೂರವಾಗಿರುತ್ತಾರೆ. ಹಲವು ವರ್ಷಗಳ ನಂತರ ಮತ್ತೆ ಭೇಟಿಯಾದಾಗ, ಪ್ರೇಮ ತನ್ನ ಪ್ರೀತಿಯನ್ನು ಪರಿಣಯನಿಗೆ ಹೇಳಿಕೊಳ್ಳುತ್ತಾಳೆ.
ಇನ್ನೊಂದು ಕಡೆ, ಪ್ರೀತಿ ಮತ್ತು ಪರಿಣಯ ಬೇರೆ ಊರಿನವರು. ಇಬ್ಬರೂ ಸರ್ಕಾರಿ ನೌಕರರು. ಅವರ ಕೆಲಸದ ಸ್ಥಳಗಳು ವಿಭಿನ್ನ — ಕಲಬುರಗಿ ಮತ್ತು ಬೆಂಗಳೂರು. ಉತ್ತರ ಕರ್ನಾಟಕದ ಬಿಸಿಲು, ಬೆಂಗಳೂರಿನ ಟ್ರಾಫಿಕ್ ಹಾಗೂ ಬ್ಯುಸಿ ಜೀವನವನ್ನು ಕಾದಂಬರಿಕಾರರು ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ.
ಇವರಿಬ್ಬರ ಪರಿಚಯ ರೈಲಿನಲ್ಲಿ ಆಗುತ್ತದೆ. ಕನ್ನಡದ ಮೇಲಿನ ಪ್ರೀತಿ ಇವರಿಬ್ಬರನ್ನೂ ಇನ್ನಷ್ಟು ಹತ್ತಿರ ಮಾಡುತ್ತದೆ. ಪ್ರೀತಿಗೆ ಕನ್ನಡದ ಮೇಲೆ ಅಪಾರ ಅಭಿಮಾನ. ಪರಿಣಯನಿಗೂ ಅದೇ ಅಭಿಮಾನ ಇದ್ದರೂ, ಅವಳ ಮುಂದೆ ಸ್ವಲ್ಪ build-up ಕೊಡುತ್ತಾನೆ, ಆಂಗ್ಲ ಭಾಷೆಯ ಬಗ್ಗೆ. ಇಬ್ಬರಲ್ಲೂ ಪ್ರೀತಿ ಹುಟ್ಟುತ್ತದೆ, ಆದರೆ ಹೇಳಿಕೊಳ್ಳುವುದಿಲ್ಲ. ನಂತರ ದೇವಸ್ಥಾನದಲ್ಲಿ ಮತ್ತೆ ಭೇಟಿ ಆಗುತ್ತದೆ. ರೇಡಿಯೋ ಕಾರ್ಯಕ್ರಮದಲ್ಲಿ ಪರಿಣಯನ ಮಾತುಗಳನ್ನು ಕೇಳಿ, ಅವನಿಗೂ ಕನ್ನಡದ ಮೇಲೆ ಪ್ರೀತಿ ಇದೆ ಎಂಬುದು ಪ್ರೀತಿಗೆ ತಿಳಿಯುತ್ತದೆ.
ಹೀಗೆ, ವಿಧಿಯ ಆಟದಂತೆ, ಇವರಿಬ್ಬರಿಗೂ ಮೊದಲೇ ಪರಿಚಯ ಇದ್ದದ್ದು ಗೊತ್ತಾಗುತ್ತದೆ. ಮನೆವರೂ ಸಹ ಇವರಿಬ್ಬರ ಮದುವೆಯನ್ನು ನಿಶ್ಚಯ ಮಾಡುತ್ತಾರೆ. ಇಬ್ಬರಿಗೂ ಅಪಾರ ಸಂತೋಷ. ಇಲ್ಲಿ ಹುಲಿಗೆಮ್ಮ ದೇವಿ ಹಾಗೂ ಹಂಪಿ ಬಗ್ಗೆ ಲೇಖಕರು ಸುಂದರವಾಗಿ ವಿವರಿಸಿದ್ದಾರೆ.

ಮಧ್ಯದ ತಿರುವುಗಳು:
ಮಧ್ಯದಲ್ಲಿ ಇಬ್ಬರ ಮನೆವರ ನಡುವೆ ಮನಸ್ತಾಪ ಉಂಟಾಗುತ್ತದೆ. ಮದುವೆ ನಿಲ್ಲುವ ಹಂತಕ್ಕೆ ಬರುತ್ತದೆ. ಇಲ್ಲಿ ತಾಯಿಯ ಮೇಲಿರುವ ಮಕ್ಕಳ ನಂಬಿಕೆಯನ್ನು ಚೆನ್ನಾಗಿ ತೋರಿಸಿದ್ದಾರೆ.
ಪರಿಣಯ ತನ್ನ ತಾಯಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆಯಿಂದ ಕೆಲಸದ ಕಡೆ ಗಮನ ಹರಿಸಿ, ತರಬೇತಿಗಾಗಿ ಮಡಿಕೇರಿಗೆ ಹೋಗುತ್ತಾನೆ. ಅಲ್ಲಿ ಅವನಿಗೆ ಪ್ರೇಮ ಮತ್ತೆ ಸಿಗುತ್ತಾಳೆ. ಬಾಲ್ಯದ ನೆನಪುಗಳು ಮತ್ತೆ ಜೀವಂತವಾಗುತ್ತವೆ.
ಮಡಿಕೇರಿಯ ಸೊಬಗು, ಟೀ ತೋಟಗಳ ಸೌಂದರ್ಯವನ್ನು ಲೇಖಕರು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ. ಈ ಸಮಯದಲ್ಲಿ ಪ್ರೇಮ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ. ಪರಿಣಯ ತನ್ನ ಪ್ರೀತಿ ಬಗ್ಗೆ ವಿವರಿಸುತ್ತಾನೆ. ಇದರಿಂದ ಮತ್ತೊಂದು ತಿರುವು ಬರುತ್ತದೆ. ಯಾರೋ ಪ್ರೀತಿಗೆ, ಪರಿಣಯ ಬೇರೆ ಹುಡುಗಿಯ ಜೊತೆ ಇದ್ದಾನೆ ಎಂದು ಹೇಳುತ್ತಾರೆ. ಅದನ್ನು ನಂಬಿದ ಪ್ರೀತಿ, ಬೇರೆ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಇಲ್ಲಿ ನಾಲ್ಕನೇ ಪಾತ್ರ ರವಿ. ರವಿ ಪ್ರೇಮನನ್ನು ಪ್ರೀತಿಸುತ್ತಿದ್ದಾನೆ. ಕಥೆ ಇನ್ನಷ್ಟು ಕುತೂಹಲಕರವಾಗುತ್ತದೆ.
ಕ್ಲೈಮ್ಯಾಕ್ಸ್:
ಕೊನೆಯಲ್ಲಿ ಘಟನೆಗಳು ವೇಗವಾಗಿ ನಡೆಯುತ್ತವೆ. ಪ್ರೀತಿಯ ಮದುವೆ, ಪ್ರೇಮದ ಬ್ರೇಕಪ್, ಪರಿಣಯನ ತಳಮಳ, ರವಿಯ ಭಾವನೆಗಳು. ಆದರೆ ಕೊನೆಯ ಕ್ಷಣದಲ್ಲಿ ಒಂದು ದೊಡ್ಡ ತಿರುವು. ಪ್ರೀತಿ ಮತ್ತು ಪರಿಣಯ ಮದುವೆಯಾಗುತ್ತಾರೆ. ಪ್ರೇಮ ಮತ್ತು ರವಿ ಕೂಡ ಒಟ್ಟಾಗುತ್ತಾರೆ.
ಒಟ್ಟಾರೆ ಅನಿಸಿಕೆ:
ಈ ಕಥೆ ಓದಿದಾಗ ಒಂದು ಶಾರ್ಟ್ ಮೂವಿ ನೋಡಿದ ಹಾಗೆ ಅನುಭವ ಬರುತ್ತದೆ. ಅಷ್ಟು ಚೆನ್ನಾಗಿ ಸಂದರ್ಭಗಳನ್ನು ರೂಪಿಸಲಾಗಿದೆ. ಹಿಂದಿ ಶಾಯರಿ, ಕನ್ನಡದ ಹನಿಗವನಗಳು ಕಥೆಗೆ ಇನ್ನಷ್ಟು ರಸ ತುಂಬುತ್ತವೆ. ನಿಜವಾಗಿಯೂ ಪ್ರೀತಿ ಮಾಡಿದವರಿಗೆ ಪ್ರೀತಿ ಸಿಗುತ್ತದೆ, ದೇವರ ಆಶೀರ್ವಾದ ಇರುತ್ತದೆ ಎಂಬ ಭಾವನೆ ಮೂಡುತ್ತದೆ. ಕರ್ನಾಟಕದ ವೈಶಿಷ್ಟ್ಯಗಳು, ಮದುವೆ ಸಂದರ್ಭದ ಮಾತುಗಳು, ಸೌಜನ್ಯದ ಮಹತ್ವ — ಇವೆಲ್ಲವನ್ನು ಈ ಕಾದಂಬರಿ ಚೆನ್ನಾಗಿ ತೋರಿಸುತ್ತದೆ.
ಒಟ್ಟು ಸುಮಾರು 20 ದೃಶ್ಯಗಳಲ್ಲಿ ಈ ಕಥೆ ತುಂಬಾ ಸುಂದರವಾಗಿ ಮೂಡಿಬಂದಿದೆ.
ಕೊನೆಯ ಮಾತು:
ಎಲ್ಲರೂ ಈ ಪುಸ್ತಕವನ್ನು ಓದಿ ಆನಂದಿಸಿ. ಈ ಕಥೆಯನ್ನು ಶಾರ್ಟ್ ಚಲನಚಿತ್ರವಾಗಿಯೂ ಮಾಡಬಹುದು ಅಷ್ಟು ಅದ್ಭುತವಾಗಿದೆ. ಹೀಗೆ ಇನ್ನಷ್ಟು ಉತ್ತಮ ಕೃತಿಗಳನ್ನು ನಮಗೆ ನೀಡಲಿ, ಇನ್ನಷ್ಟು ಪ್ರಶಸ್ತಿಗಳು ನಿಮ್ಮದಾಗಲಿ ಚಿದು ಸರ್.
- ಮೇಘನಾ ಶೆಟ್ಟಿ – ಹೊಸಕೋಟೆ.
