ಭಕ್ತಿಯೆಂಬ ಪೃಥ್ವಿಯ ಮೇಲೆ

ದೊಡ್ಡ ದೇವಾಲಯಗಳು ಕಾರ್ಪೊರೇಟ್ ಸ್ವರೂಪವನ್ನು ಹೊಂದಿವೆ. ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿರುವ ದೇವಾಲಯ ಪ್ರವಾಸದಲ್ಲಿ ಇತ್ತೀಚೆಗೆ ಭಕ್ತಿಯ ಅಬ್ಬರ ಹೆಚ್ಚುತ್ತಿದೆ. ಆಂಧ್ರದಲ್ಲಿರುವ ಚಿಕ್ಕ ದೊಡ್ಡ 27000 ದೇವಾಲಯಗಳಿಗೆ ಪ್ರತಿವರ್ಷ ಬರುವ ಭಕ್ತರ ಸಂಖ್ಯೆ 21 ಕೋಟಿ ಭಕ್ತರು ಬರುತ್ತಾರೆ. ಸಹಾಯಕ ನಿರ್ದೇಶಕರಾದ ನೂತನ ದೋಶೆಟ್ಟಿ ದೇವಾಲಯದ ಸುತ್ತ ಒಂದು ಚಿಂತನ ಲೇಖನವನ್ನು ಪೂರ್ತಿ ಓದಿ…

ದೆಹಲಿಯಿಂದ ಕಾಶಿ ತಲುಪಿದ್ದಾಗ ಬೆಳಗಿನ 6 ಗಂಟೆ. ರೈಲು ನಿಲ್ದಾಣದಿಂದ ಹೊರ ಬರುತ್ತಿರುವಾಗಲೇ ಎದುರಾದ ಉದ್ದನೆಯ, ತೆಳು ದೇಹದ ಯುವ ಆಟೋಚಾಲಕ ಸಂಜೆ ನಾಲ್ಕು ಗಂಟೆಯವರೆಗೆ 100 ರೂಪಾಯಿ ಬಾಡಿಗೆಗೆ ವ್ಯಾಪಾರ ಕುದುರಿಸಿ ನಾವು ನಾಲ್ವರನ್ನೂ ಹತ್ತಿಸಿಕೊಂಡ. ಅಪ್ಪಾಜಿ, ಅಮ್ಮ ಹೇಗೂ ಗಂಗೆಯಲ್ಲಿ ಸ್ನಾನ ಮಾಡುವ ನಿರ್ಧಾರ ಮಾಡಿದ್ದರಿಂದ ಸೀದಾ ನದಿ ತೀರಕ್ಕೆ ಹೋದೆವು.

ಆಗ ಗಂಗೆಯ ಮಲಿನತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು – ಸುದ್ಡಿ ಮಾಡುತ್ತಿತ್ತು. ಆಗಿನ ‘ಗಂಗಾ ಆಕ್ಷನ್ ಪ್ಲಾನ್ ‘ ಗಂಗೆಯನ್ನು ಶುದ್ಧಗೊಳಿಸುವ ಪಣ ತೊಟ್ಟಿತ್ತು. ಕೈಗಾರಿಕಾ ತ್ಯಾಜ್ಯ ಅದರಲ್ಲೂ ಕಾನ್ಪುರದ ಚಾರ್ಮೋದ್ಯಮದಿಂದ ಸೇರುತ್ತಿದ್ದ ಮಲಿನ ನೀರು, ಅರ್ಧ ಬೆಂದ ಶವಗಳು, ಶವ ದಹನದ ನಂತರದ ಬೂದಿ ಹೀಗೆ ಸುಮಾರು ಒಂದು ಬಿಲಿಯನ್ ಗ್ಯಾಲನ್ ನಷ್ಟು ತ್ಯಾಜ್ಯ ಗಂಗೆಯ ಒಡಲಿಗೆ ಪ್ರತಿದಿನ ಆಗ ಸೇರುತ್ತಿತ್ತು ! ಇದರಿಂದಾಗಿ ಗಂಗೆ ಪ್ರಪಂಚದ 10 ಅತ್ಯಂತ ಮಲಿನ ನದಿಗಳಲ್ಲಿ ಒಂದಾಗಿತ್ತು. ಅಂದರೆ ದೇವನದಿ ಆಗ ತನ್ನಲ್ಲಿ ಮುಳುಗೇಳುವ ಭಕ್ತರ ಮಲಿನ ದೇಹಗಳನ್ನು ತೊಳೆದು, ಬೇರೆ ಬೇರೆ ಘಾಟ್ ಗಳಲ್ಲಿ ಸಂಸ್ಕಾರದ ನಂತರ ನೀರಿಗೆ ಬಿಟ್ಟ ಅರೆಬೆಂದ ಶವಗಳನ್ನು, ಶವಸುಟ್ಟು ಉಳಿದ ಬೂದಿಯನ್ನು ಒಳಗಿಳಿಸಿಕೊಳ್ಳುವ ಮೂಲಕ ಸ್ವರ್ಗಕ್ಕೆ ಸೇರಿಸುವ ಹೊಣೆಯನ್ನು, ಅಭಿವೃದ್ಧಿಯ ಉಪ ಉತ್ಪನ್ನವಾದ ಮಲಿನ ನೀರನ್ನು ಕೂಡಿಕೊಂಡು ಹರಿಯುವುದರ ಮೂಲಕ ಮುಂದುವರೆದ ಜನರ ಜೀವನವನ್ನು ಹಸನು ಮಾಡುವ ಗುರುತರ ಹೊಣೆಯನ್ನು ಹೊತ್ತಿದ್ದಳು. ಸಮುದ್ರದಂತೆ ವಿಶಾಲವಾಗಿ ಮೈದುಂಬಿ ಹರಿಯುವ ಅಂಥ ಗಂಗೆಯ ಪಕ್ಕದಲ್ಲಿ ನಿಂತಾಗ ಬಗ್ಗಡವಾಗಿದ್ದ, ಅಶುಭ್ರತೆಯಿಂದ ಬಣ್ಣಗೆಟ್ಟಿದ್ದ ನೀರನ್ನು ಕಂಡು ದುಃಖವಾಗಿತ್ತು.

ನಮ್ಮ ಊರಿನ ಚಿಕ್ಕ ಕೇರಿಗಳಂಥ ಇಕ್ಕಟ್ಟು ಓಣಿಗಳನ್ನು ದಾಟಿ ವಿಶ್ವನಾಥನ ಸನ್ನಿಧಿಗೆ ಬಂದಾಗ ಬೆಳಗಿನ ಎಂಟು ಗಂಟೆಯಾಗಿದ್ದರೂ ಈಗಿನಂತೆ ಜನಜಂಗುಳಿಯೇನೂ ಇರಲಿಲ್ಲ. ಅರ್ಚಕರು ನಮ್ಮೆಲ್ಲರ ಕೈಯಲ್ಲೂ ಅಭಿಷೇಕ ಮಾಡಿಸಿ, ಸ್ಪರ್ಶ ಮಾಡಿಸಿ, ನಮ್ಮೆಲ್ಲರ ಕತ್ತಿಗೂ ಆಶೀರ್ವಾದ ರೂಪದಲ್ಲಿ ದೇವರ ಮೇಲಿನ ಹಾರಗಳನ್ನು ಹಾಕಿ ನಮ್ಮಿಂದ ಯಾವುದೇ ಅಪೇಕ್ಷೆ ಇರದೇ ಹರಸಿ ಕಳುಹಿಸಿದ್ದರು. ಕಾಶಿ ವಿಶ್ವನಾಥನ ದರ್ಶನ ಇಷ್ಟು ನಿರಾಯಾಸವಾಗಿ ಆದದ್ದರಿಂದ ಅಮ್ಮ, ಅಪ್ಪಾಜಿಯ ಮುಖದ ಮೇಲೆ ಮೂಡಿದ್ದ ಸಂತೃಪ್ತ ಭಾವ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆ ಧನ್ಯತೆಯಲ್ಲೇ ನಂತರ ಗಂಗೆಯ ಮೇಲೆ ದೋಣಿ ಸವಾರಿ ಮಾಡಿದ್ದೆವು.

ಫೋಟೋ ಕೃಪೆ : ಅಂತರ್ಜಾಲ

ಇದಾಗಿ ಮೂರು ದಶಕಗಳ ನಂತರ ಮಧ್ಯಪ್ರದೇಶದ ಉಜ್ಜಯನಿಯ ಮಹಾಕಾಲೇಶ್ವರ ತಲುಪಿದ ಹಿಂದಿನ ವಾರ ದೇವಾಲಯದ ಪ್ರಧಾನ ಅರ್ಚಕರೂ ಸೇರಿದಂತೆ ಹನ್ನೊಂದು ಮಂದಿಯನ್ನು ಬ್ರಷ್ಟಾಚಾರಕ್ಕಾಗಿ ಬಂಧಿಸಲಾಗಿತ್ತು! ಯಾವುಯಾವುದನ್ನೋ ಬ್ರೇಕಿಂಗ್ ನ್ಯೂಸ್ ಮಾಡುವ ಮಾಧ್ಯಮಗಳಲ್ಲಿ ಇದು ಸುದ್ದಿಯಾಗಿರಲೇ ಇಲ್ಲ !! ಅಲ್ಲಿಗೆ ಹೊರಡುವ ದಿನದವರೆಗೂ ದರ್ಶನದ ವ್ಯವಸ್ಥೆ ಸಾಧ್ಯವಾಗದ ಕಾರಣ ಅಲ್ಲಿನ ನನ್ನ ಸಹೋದ್ಯೋಗಿಯೊಬ್ಬರು ಆ ಬಗ್ಗೆ ಗಾಬರಿಯಿಂದ ತಿಳಿಸಿದ್ದರು. ಕೆಲ ತಿಂಗಳ ಅಂತರದಲ್ಲಿ ಜಾರ್ಖಂಡ್ ರಾಜ್ಯದ ವೈದ್ಯನಾಥಕ್ಕೆ ಹೋದಾಗ ಪೂಜೆಗಾಗಿ ಅಲ್ಲಿಯ ನೂಕು ನುಗ್ಗಲು, ತಳ್ಳಾಟ, ಶಿವಲಿಂಗದ ಪೀಠದ ಅಕ್ಕಪಕ್ಕದಲ್ಲಿ ಕುಳಿತು. ‘ಇಂದು ಮೊದಲ 500 ನೋಟನ್ನು ಇಲ್ಲಿ ಯಾರಿಡುತ್ತಾರೆ? ‘ ಎಂದು ದಕ್ಷಿಣೆಗಾಗಿ ಆಗ್ರಹಿಸುವ, ಇಡದಿದ್ದರೆ ಅವರ ಮೇಲೆ ಹರಿಹಾಯುವ ಅರ್ಚಕರನ್ನು ಕಂಡು ದಿಗಿಲಾಗಿತ್ತು. ಅಲ್ಲಿ ಭಕ್ತಿ ಒಳಬರುವ ಭಕ್ತನಿಗೆ ಮಾತ್ರ. ಒಳಗಿರುವ ಅರ್ಚಕನಿಗೆ ಅಲ್ಲ! ಇದು ಮೂರು ದಶಕಗಳಲ್ಲಿ ಬದಲಾದ ಸಾಮಾಜಿಕ, ಆರ್ಥಿಕ, ಧಾರ್ಮಿಕ ವ್ಯವಸ್ಥೆಯ ರೂಪಕವಾಗಿಯೇ ನನಗೆ ಕಾಣಿಸಿತು.

ಭಾರತದಲ್ಲಿ ಧಾರ್ಮಿಕ ಪ್ರವಾಸಕ್ಕೆ ನಾನು ಕಾಶಿಗೆ ಹೋದ ಸಂದರ್ಭದಲ್ಲಿ “ಯಾತ್ರೆ “ಎಂಬ ಹೆಸರಿತ್ತು. ಅದು ಭಕ್ತಿಯ ಪರಾಕಾಷ್ಠೆಯನ್ನು ಸೂಚಿಸುವ ಪದ. ಯಾತ್ರೆಗಳು ಆಗ ಬಹಳ ತ್ರಾಸದಾಯಕವಾಗಿರುತ್ತಿದ್ದವು. ಬಹುತೇಕರು ರೈಲಿನಲ್ಲಿ 2- 3 ದಿನಗಳ ದೀರ್ಘ ಪ್ರಯಾಣವನ್ನು ಮಾಡಿಎಹೋಗಬೇಕಿತ್ತು. ವಿಮಾನ ಹಾರಾಟ ಉಳ್ಳವರಿಗೆ ಅಂದರೆ ಆರ್ಥಿಕ ಬಲಾಢ್ಯರಿಗೆ ಮಾತ್ರ ಎಂಬಂತಿದ್ದ ಕಾಲವದು. ನಂತರದ ಒಂದು- ಒಂದೂವರೆ ದಶಕ ಈ ದೇಶದಲ್ಲಿ ಸಾರಿಗೆ, ಸಾಗಾಟ ವ್ಯವಸ್ಥೆಯಲ್ಲಿ ಅತ್ಯಂತ ವೇಗಗತಿಯ ಬದಲಾವಣೆಗಳನ್ನು ಕಂಡಿತು. ಆರ್ಥಿಕ ಉದಾರೀಕರಣದಿಂದಾಗಿ ಪರರಾಷ್ಟ್ರಗಳು ನೆರೆಮನೆಗಳಾದವು. ಶೈಕ್ಷಣಿಕ ಅಭಿವೃದ್ಧಿ ಹಾಗೂ ಉನ್ನತ ಶಿಕ್ಷಣಕ್ಕೆ ಅಪಾರ ಮನ್ನಣೆ ಸಿಕ್ಕ ಕಾರಣ ಸಾಗಾಟ ಸ್ಪರ್ಧಾತ್ಮಕವಾಯಿತು. ಮಲೇಶಿಯಾದಂಥ ಪುಟ್ಟ ರಾಷ್ಟ್ರ ಪ್ರವಾಸೋದ್ಯಮದಿಂದ ದೇಶದ ಆರ್ಥಿಕತೆಯನ್ನು ಹೇಗೆ ಬಲಪಡಿಸಿಕೊಳ್ಳಬಹುದು ಎಂಬುದನ್ನು ಜಗತ್ತಿಗೇ ತೋರಿಸಿಕೊಟ್ಟಿತು. ಅಲ್ಲಿಂದ ಮುಂದಿನ ಹತ್ತು ವರ್ಷಗಳಲ್ಲಿ ಭಾರತವೂ ಸೇರಿದಂತೆ ಪ್ರಪಂಚದ ಪ್ರವಾಸೋದ್ಯಮ ಅಚ್ಚರಿ ಹುಟ್ಟಿಸುವಂತೆ ಬೆಳೆದಿದ್ದು ಇಂದು ಬಹುತೇಕ ರಾಷ್ಟ್ರಗಳ ಬೊಕ್ಕಸಕ್ಕೆ ಹೆಚ್ಚು ವರಮಾನ ತರುವ ದೊಡ್ಡ ಆರ್ಥಿಕತೆಯಾಗಿ ಬೆಳೆದು ನಿಂತಿದೆ.

ಇದೇ ಹೊತ್ತಿಗೆ ಕಂಪ್ಯೂಟರ್ ಕ್ಷೇತ್ರವೂ ಭಾರತದಲ್ಲಿ ವ್ಯಾಪ್ತವಾಗಿ ಬೆಳೆದು ವಾರಾಂತ್ಯವೆಂಬ ಹೊಸ ಪದ ಆ ಕ್ಷೇತ್ರದ ನೌಕರಿದಾರರ ಶಬ್ದಕೋಶವನ್ನು ಹುರುಪಿನಿಂದ ಸೇರಿತು. ಜೊತೆಗೆ ಅವರ ವಾರಾಂತ್ಯ ಪ್ರವಾಸ, ಪರರಾಷ್ಟ್ರಗಳ ಹಾರಾಟಗಳು ಸರ್ವೇ ಸಾಮಾನ್ಯವಾದವು. ಇದಕ್ಕೆ ಪೂರಕವಾಗಿ ಹಿಂದೆ ಯಾತ್ರೆಯಾಗಿದ್ದ ಪ್ರವಾಸೋದ್ಯಮವೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ದೇವಾಲಯ ಪ್ರವಾಸ, ಐತಿಹಾಸಿಕ ಪ್ರವಾಸ, ಕೃಷಿ ಪ್ರವಾಸ, ಸಾಹಸ ಪ್ರವಾಸ, ಸಂಸ್ಕೃತಿ ಪ್ರವಾಸ, ವನ್ಯಜೀವಿ ಪ್ರವಾಸ, ವೈದ್ಯಕೀಯ ಪ್ರವಾಸ, ಪ್ರಕೃತಿ ಪ್ರವಾಸ, ಧಾರ್ಮಿಕ ಪ್ರವಾಸ, ಬೀಚ್ ಪ್ರವಾಸ, ಕೈಗಾರಿಕಾ ಪ್ರವಾಸ , ಆರೋಗ್ಯ ಪ್ರವಾಸ ಮೊದಲಾಗಿ ಹತ್ತಾರು ಶಾಖೆಗಳಾಗಿ ಬೆಳೆಯಿತು.

ಫೋಟೋ ಕೃಪೆ : ಅಂತರ್ಜಾಲ

ಇದಕ್ಕೆ ಕೇವಲ ಎರಡು ದಶಕಗಳ ಹಿಂದೆ ತಿರುಪತಿ, ವೈಷ್ಣೋದೇವಿ, ಶಿರಡಿ ಪ್ರದೇಶಗಳು ಹುಂಡಿಯ ಮೂಲಕ ಬರುವ ಆರ್ಥಿಕ ಗಳಿಕೆಯಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಹೊಂದಿದ್ದವು. ದಕ್ಷಿಣದಲ್ಲಿ ಮಧುರೆ ಮೀನಾಕ್ಷಿ, ರಾಮೇಶ್ವರ, ಗುರುವಾಯೂರು, ಪಳಿನಿ, ಮೈಸೂರಿನ ಚಾಮುಂಡಿ ಬೆಟ್ಟ, ಹಳೇಬೀಡು, ಬೇಲೂರು, ಶ್ರವಣಬೆಳಗೊಳ ಮೊದಲಾದ ಬೆರಳೆಣಿಕೆಯ ದೇವಾಲಯಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದ್ದರೆ ಉತ್ತರದಲ್ಲಿ ಕಾಶಿ, ಹರಿದ್ವಾರ, ಹೃಷಿಕೇಶ, ಸೋಮನಾಥ, ದ್ವಾರಕಾ ಮುಂತಾದ ಕ್ಷೇತ್ರಗಳು ಪ್ರಮುಖ ಆಕರ್ಷಣೆಯಾಗಿದ್ದವು. ಉತ್ತರ ಭಾರತದ ಪ್ರತಿಕೂಲ ಹವಾಗುಣದಿಂದ, ಸಾಗಾಟದ ತೊಂದರೆಯಿಂದ ಅಲ್ಲಿನ ಉಳಿದ ಕ್ಷೇತ್ರಗಳಿಗೆ ಜನರ ಓಡಾಟ ಕಡಿಮೆಯೇ ಇತ್ತು.

1990 ರ ನಂತರದ ಭಾರತದಲ್ಲಿ ಆರ್ಥಿಕ ವಿಮುಕ್ತತೆ, ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ “ಇನ್ಕ್ರೆಡಿಬಲ್ ಇಂಡಿಯಾ” ದಂತಹ ಅಭಿಯಾನಗಳು, ತನ್ಮೂಲಕ ಮೂಲ ಸೌಕರ್ಯಗಳಾದ ರಸ್ತೆ, ಸಾಗಾಟ, ಸಂಚಾರಿ ಸೌಲಭ್ಯಗಳ ಅಭಿವೃದ್ಧಿ, ಇವುಗಳಲ್ಲಿ ಖಾಸಗಿ ಸಹಭಾಗಿತ್ವದ ಹೆಚ್ಚಳ, ಪ್ರವಾಸೋದ್ಯಮವನ್ನು ಭಕ್ತಿಯೊಂದಿಗೆ ವ್ಯಾವಹಾರಿಕ ಹಾಗೂ ಕೈಗಾರಿಕಾ ಬೆಳವಣಿಗೆಯಾಗಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಯ ನೆಲೆಯಾಗಿಯೂ ಬೆಳೆಸಿದ್ದರಿಂದ ಇಸವಿ 2002 ರ ಹೊತ್ತಿಗೆ ಸರ್ಕಾರ ರಾಷ್ಟ್ರೀಯ ಹೊಸ ಪ್ರವಾಸ ನೀತಿಯನ್ನು ಜಾರಿಗೆ ತಂದು ಆಧುನಿಕ ಭಾರತಕ್ಕೆ ವೇದಿಕೆಯನ್ನ ನಿರ್ಮಿಸಿತು. ಇದಕ್ಕೆ ಹಿನ್ನೆಲೆಯಾಗಿ ಪ್ರವಾಸೋದ್ಯಮವು ಉದ್ಯೋಗ ನಿರ್ಮಿತಿಯ ಜೊತೆಗೆ ವಿದೇಶಿ ವಿನಿಮಯವನ್ನು ತರಬಲ್ಲದು ಎಂಬ ಅರಿವಿನೊಂದಿಗೆ 1982 ರಲ್ಲಿ ತಂದ ರಾಷ್ಟ್ರೀಯ ಪ್ರವಾಸ ನೀತಿ ಹಾಗೂ 1992 ರ ರಾಷ್ಟ್ರೀಯ ಯೋಜನಾ ನೀತಿಗಳು ಪ್ರವಾಸೋದ್ಯಮವನ್ನು ಆರ್ಥಿಕ ಅಭಿವೃದ್ಧಿಯ ಜೊತೆಗೆ ದೇಶದ ವ್ಯಕ್ತಿತ್ವ ನಿರ್ಮಾತೃವಾಗಿಯೂ ಬೆಳೆಸಲು ಬಳಕೆಯಾದವು.

ಈ ಹಿನ್ನೆಲೆಯಲ್ಲಿ ಗುಜರಾತ ರಾಜ್ಯ ಪ್ರವಾಸೋದ್ಯಮಕ್ಕೆ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ‘ ವೈಬ್ರಂಟ್ ಗುಜರಾತ್ ‘ ಎಂದು ಅಭಿಯಾನ ಮಾಡಿದರೆ ನಂತರದಲ್ಲಿ ಜನಪ್ರಿಯವಾದ ‘ ಖುಷ್ಬೂ ಗುಜರಾತ್ ಕೀ ‘ ಅಭಿಯಾನಕ್ಕೆ ಅಮಿತಾಬ್ ಬಚ್ಚನ್ ರಾಯಭಾರಿಯಾಗಿ ‘ ಏಕ್ ಬಾರ್ ಆಯಿಎನ ‘ ಎಂದು ಅಕ್ಕರೆಯಿಂದ ಕರೆದರು. ಅದೇ ಹೊತ್ತಿಗೆ ಕೇರಳ ರಾಜ್ಯ ‘ ಗಾಡ್ಸ್ ಓನ್ ಕಂಟ್ರಿ ‘ ಎಂದು ಆರಂಭಿಸಿದ ಅಭಿಯಾನ ಅಲ್ಲಿನ ದೈವೀಕ ಪ್ರಕೃತಿಯ ಮೂಲಕ ಪ್ರವಾಸಿಗರನ್ನು ಇನ್ನಿಲ್ಲದಂತೆ ಆಕರ್ಷಿಸಿ ಪ್ರವಾಸೋದ್ಯಮ ಆ ರಾಜ್ಯದ ಬೊಕ್ಕಸಕ್ಕೆ ಚಿನ್ನದ ಮಳೆ ಸುರಿಸಿತು. ಕರ್ನಾಟಕವು ‘ ಒಂದು ರಾಜ್ಯ, ಹಲವು ಜಗತ್ತುಗಳು ‘ ಎಂದು ನಾಡಿನ ವೈವಿಧ್ಯತೆಯನ್ನು ಮರೆಸಿತು.ಮೇಘಾಲಯವು ‘ ಹಾಫ್ ವೆ ಟು ಹೆವೆನ್ ” ಎಂದು ಸ್ವರ್ಗ ತೋರಿಸಿದರೆ, ಲ್ಯಾಂಡ್ ಆಫ್ ಫೆಸ್ಟಿವಲ್ಸ್’ ಎಂದು ನಾಗಾಲ್ಯಾಂಡ್ ಕೈ ಬೀಸಿ ಕರೆಯಿತು. ಎಲ್ಲ ರಾಜ್ಯಗಳೂ ತಮ್ಮ ತಮ್ಮ ಹಿರಿಮೆಯನ್ನು ಹೇಳುತ್ತ ಪ್ರವಾಸಿಗರನ್ನು ಆಕರ್ಷಿಸಿದವು. ಈ ಹೊತ್ತಿಗೆ ಭಾರತದ ಪ್ರವಾಸೋದ್ಯಮ ಯಾತ್ರೆಯಿಂದ ಬಹುದೂರ ಸಾಗಿ ಆರಂಭವಾದದ್ದೇ ‘ ಅತಿಥಿ ದೇವೋ ಭವ ‘ ಅಭಿಯಾನ. ಇದರಿಂದ ದೇವರು, ದೇವಾಲಯಗಳ ಪ್ರವಾಸಕ್ಕೆ ಹೈ ಟೆಕ್ ಸ್ಪರ್ಶ ಬಂದು ಪ್ರವಾಸಿಗರೇ ದೇವರಾದರು.ಇದುವರೆಗೂ ಕೇವಲ ಭಯ ಭಕ್ತಿಯಿಂದ ಯಾತ್ರೆ ಹೋಗುತ್ತಿದ್ದ ಭಕ್ತ ಈಗ ಸಾಹಸಕ್ಕಾಗಿ, ಮೋಜಿಗಾಗಿ, ಸಮಯ ಕಳೆಯುವುದಕ್ಕಾಗಿ, ಉದ್ಯಮ ಕುದುರಿಸಲು, ಆರೋಗ್ಯಕ್ಕಾಗಿ, ಸ್ನೇಹಿತರಿಗಾಗಿ ಮುಂತಾದ ಹತ್ತಾರು ನೆಪಗಳಲ್ಲಿ ಪ್ರವಾಸ ಹೊರಡುವಂತಾಯಿತು. ಭಕ್ತಿಯ ಸ್ಥಾನವನ್ನು ಪ್ರದರ್ಶನವೂ ದೈವತ್ವದ ಅನುಭವವನ್ನು ವ್ಯಾಪಾರವೂ ಆಕ್ರಮಿಸಿಕೊಂಡಿದ್ದು ಅರಿವಿಗೂ ಬರದಂತೆ ನಡೆದು ಹೋಯಿತು.

21 ನೆ ಶತಮಾನದ ಆರಂಭ ಭಾರತದ ಆಂತರಿಕ ಪ್ರವಾಸೋದ್ಯಮವನ್ನು ಗಣನೀಯವಾಗಿ ಹೆಚ್ಚಿಸಿತು. ಇದರಿಂದ ಮೂಲ ಸೌಕರ್ಯಗಳ ಅಭಿವೃದ್ಧಿಯ ಜೊತೆಗೆ ಹೋಟೆಲ್ ಉದ್ಯಮ, ಬ್ಯಾಂಕ್ ಸಾಲಗಳ ಮೂಲಕ ವಾಹನಗಳ ಖರೀದಿ, ಸಾಗಾಟದ ಉನ್ನತೀಕರಣ, ಹೆದ್ದಾರಿಗಳ, ಚತುಷ್ಪಥಗಳ ಅಭಿವೃದ್ಧಿ, ಸರಳೀಕರಣಗೊಂಡ ಹಾಗೂ ಸ್ಪರ್ಧಾತ್ಮಕವಾದ ವಿಮಾನ ಹಾರಾಟ ಮೊದಲಾದ ಅತ್ಯಂತ ತ್ವರಿತಗತಿಯ ಸರ್ವಾಂಗೀಣ ಅಭಿವೃದ್ಧಿ ಕೋವಿಡ್ ಈ ದೇಶವನ್ನು ಬಾಧಿಸುವವರೆಗೂ ನಿರಂತರ ಏರುಗತಿಯಲ್ಲಿ ಸಾಗಿತು. ಈ ನಿರಂತರತೆಯಿಂದ ಪ್ರವಾಸದ ವ್ಯಾಖ್ಯಾನವೇ ಬದಲಾಯಿತು. ಚಿಕ್ಕ ಪಟ್ಟಣಗಳು, ಹಳ್ಳಿಗಳೂ ಪ್ರವಾಸಿಗರ ಸ್ವಾಗತಕ್ಕೆ ಸಿದ್ಧವಾದವು. ಹೋಮ್ ಸ್ಟೇ ಎಂಬ ವಿನೂತನ ಪ್ರಯೋಗ ಇಲ್ಲಿಗೆ ಪ್ರವಾಸಿಗರ ಜೊತೆ ಹಣದ ಹರಿವನ್ನೂ ತಂದಿತು. ಪ್ರವಾಸಿ ಭಾರತ ಯೋಜನೆಯಿಂದ ಭಾರತ ವಿದೇಶಿ ಪ್ರವಾಸಿಗರ ನೆಚ್ಚಿನ ನೆಲೆಯಾಯಿತು ಎಂದು ಬೇರೆ ಹೇಳಬೇಕಿಲ್ಲ. ಈ ಹೊತ್ತಿಗೆ ಭಾರತದ ಬಹುತೇಕ ರಾಜ್ಯಗಳ ಪ್ರವಾಸಿ ತಾಣಗಳು ದೇಶೀ ಹಾಗೂ ವಿದೇಶಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಖಾಸಗಿ ಪ್ರವಾಸ ಆಯೋಜನಾ ಕಂಪನಿಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡವು. ತೀರ ಇತ್ತೀಚಿನ ಬೆಳವಣಿಗೆಗಳಾದ ಕಾಶಿ, ಅಯೋಧ್ಯಾ, ಉಜ್ಜಯಿನಿಗಳಲ್ಲಿ ನಿರ್ಮಿತವಾದ ಧಾರ್ಮಿಕ ಕಾರಿಡಾರ್ ಗಳು ಉದ್ಯಮವನ್ನು ಇನ್ನೊಂದು ಎತ್ತರಕ್ಕೆ ಒಯ್ದು ಅದಕ್ಕೆ ತಾರಾಪಟ್ಟವನ್ನು ತಂದಿವೆ. ಇಲ್ಲಿ ನಡೆಯುವ ಸಂಧ್ಯಾ ಆರತಿಗೂ ಆ ಪಟ್ಟ ಪ್ರಾಪ್ತವಾಗಿದೆ. ಅದನ್ನು ಅಚ್ಚುಕಟ್ಟಾಗಿ ಕಾರ್ಪೊರೇಟ್ ಸೇವೆಯಂತೆ ನಿರ್ವಹಿಸುವ ವಿದ್ಯಾರ್ಥಿ ತಂಡಗಳು ಬಾಯಿಗೆ ಮೈಕ್ ಸಿಕ್ಕಿಸಿಕೊಂಡು ಪ್ರತಿಯೊಂದು ವಿಧಿವಿಧಾನವನ್ನೂ ತರಗತಿಯ ಪಠ್ಯದಂತೆ ಜನರೆದುರು ಒಪ್ಪಿಸುತ್ತಾರೆ. ದೀಪ ಹತ್ತಿಸುವುದು, ಬೆಳಗುವುದು ಎಲ್ಲವೂ ಕಲಾತ್ಮಕವಾಗಿಯೂ, ಪ್ರಾಯೋಗಿಕ ಪ್ರದರ್ಶನದಂತೆಯೂ ವಿಶಿಷ್ಟವಾಗಿರುತ್ತವೆ. ಕಡೆಯಲ್ಲಿ ದಕ್ಷಿಣೆ ನೀಡದೇ ಪ್ರಸಾದ ಕೊಡುವುದಿಲ್ಲ ಎಂಬ ಘೋಷಣೆಯೂ ಆಗಾಗ ನಡೆಯುತ್ತದೆ. ಇದನ್ನು ಭಕ್ತಿಯಿಂದ ಕಣ್ತುಂಬಿಕೊಳ್ಳುವವರು ನೂರಾರು ಮಂದಿ. ಅವರಿಗೆ ಇದು ತರಗತಿಯ ಲ್ಯಾಬೋರೇಟರಿಯಂತೆ ಕಾಣುವುದಿಲ್ಲ!

ಫೋಟೋ ಕೃಪೆ : ಅಂತರ್ಜಾಲ

ಇಂದು ಬಹುತೇಕ ದೊಡ್ಡ ದೇವಾಲಯಗಳು ಕಾರ್ಪೊರೇಟ್ ಸ್ವರೂಪವನ್ನು ಹೊಂದಿವೆ. ಕುಳಿತಲ್ಲಿಂದ ಪೂಜೆ, ಸೇವೆಗಳನ್ನು ಬೆರಳ ತುದಿಯಲ್ಲಿ ಆಯ್ಕೆ ಮಾಡಿಕೊಂಡು ಹಣ ಪಾವತಿಸಿ ವಿಮಾನಗಳು, ರೈಲು, ಟ್ರಾವೆಲ್ಸ್ ಬಸ್ ಗಳು ಅಥವಾ ಸ್ವಂತ ವಾಹನಗಳನ್ನು ಏರಿ ಆ ಸ್ಥಳಗಳನ್ನು ತಲುಪಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಉಳಿದು ಭಕ್ತರ ಸೇವೆಗೆ ಸಜ್ಜಾಗಿರುವ ದೇವಾಲಯದ ಆವರಣದೊಳಗೆ ಸರದಿ ಸಾಲಿನ ಗೋಜಿಲ್ಲದ ವಿಶೇಷ ಸಾಲಿನಲ್ಲಿ ಪ್ರವೇಶಿಸಿ ವಶೀಲಿ, ಹಣದ ಮೂಲಕ ಶೀಘ್ರ ದರ್ಶನ ಭಾಗ್ಯ ಪಡೆದು ಕೊಂಚ ಗತ್ತಿನಿಂದ ಹೊರಬಂದು ಸರತಿಯಲ್ಲಿ ಬವಣಿ ಪಡುತ್ತಿರುವರತ್ತ ನೋಟ ಹರಿಸಿ ತೆರಳುವವರು ಒಂದು ಗುಂಪಿನವರಾದರೆ ಇನ್ನೊಂದು ದೊಡ್ಡ ಗುಂಪು ಇಂಥವರನ್ನು ಬೆರಗಿನಲ್ಲಿ ನೋಡುತ್ತ, ತಮ್ಮ ಪಾಳಿಗಾಗಿ ತಾಸುಗಟ್ಟಲೆ ಬಿಸಿಲು, ಮಳೆ, ಚಳಿ ಎನ್ನದೇ ಮಕ್ಕಳು ಮರಿಗಳು, ವಯೋವೃದ್ಧ. ಹಿರಿಯರ ಜೊತೆಗೂಡಿ ಭಗವಂತನ ಒಂದು ಕ್ಷಣದ ದರ್ಶನಕ್ಕಾಗಿ ಕಾಯುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿರುವ ದೇವಾಲಯ ಪ್ರವಾಸದಲ್ಲಿ ಇತ್ತೀಚೆಗೆ ಭಕ್ತ — ಭಕ್ತಿಯ ಅಬ್ಬರ ಹೆಚ್ಚುತ್ತಿದೆ. ಶಾಂತಿ, ಸಹನೆಯನ್ನು ಕಲಿಸುತ್ತಿದ್ದ ಭಕ್ತಿ ಗದ್ದಲ, ನೂಕಾಟ , ತಳ್ಳಾಟ, ಜನಜಂಗುಳಿಯ ತಾಣವಾಗುತ್ತಿದೆ. ಸರದಿಯಲ್ಲಿ ಕಾಯುವ ಹೊತ್ತು ಅತ್ತೆ – ನಾದಿನಿಯರ, ಭಾವ – ಮೈದುನರ, ಅಕ್ಕ ಪಕ್ಕದವರ ಕುರಿತು ಹೆಣ್ಣುಮಕ್ಕಳೂ, ಹಿಂದಿನ ದಿನದ ಪಾರ್ಟಿ, ನಿದ್ದೆ, ಸ್ನೇಹಿತರ ಬಗ್ಗೆ ಗಂಡಸರೂ ಚರ್ಚಿಸುತ್ತಾ ಕಾಲ ಕಳೆದು ಇನ್ನೇನು ಗೇಟು ತೆರೆಯುತ್ತದೆ ಎಂದಾಗ ಮೈಕೊಡವಿ ನಿಂತು ಜೈಕಾರ ಕೂಗುತ್ತ ಭಕ್ತಿ ಪ್ರದರ್ಶನ ಮಾಡುವವರು ಎಲ್ಲೆಡೆ ಕಾಣಸಿಗುತ್ತಾರೆ. ಸ್ವರ್ಗವೆಂದರೆ ಇದೇ ಇರಬೇಕು ಎನ್ನಿಸುವ ಪ್ರಶಾಂತ ಕೇದಾರನಾಥದಲ್ಲಿ ಬಾಜಾ ಭಜಂತ್ರಿಯೊಂದಿಗೆ ಕುಣಿಯುವ ಭಕ್ತ ಸಮೂಹ, ಎಲ್ಲ ಧಾರ್ಮಿಕ ಕ್ಷೇತ್ರಗಳಲ್ಲಿ ಸಾಲು ಸಾಲು ವಾಹನಗಳು, ಯು ಟ್ಯೂಬರ್ ಗಳ ದಂಡು, ಭಕ್ತ ಸಮೂಹದ ಕೂಗು ಜೈಕಾರಗಳಿಂದ ಆ ಸ್ಥಳದ ಏಕಾಂತತೆಗೆ ಭಂಗ ಉಂಟಾಗುತ್ತದೆಯೇ ಎನಿಸುತ್ತದೆ. ನೀರು ಕಂಡಲ್ಲೆಲ್ಲ ಮುಳುಗೇಳುತ್ತ ದೇಹ ಕಲ್ಮಶವನ್ನು ಸೇರಿಸುವದರೊಂದಿಗೆ ತೊಟ್ಟ ಬಟ್ಟೆಯನ್ನು ಕಳಚಿ ಎಲ್ಲೆಂದರಲ್ಲಿ ಬಿಸುಟಿ ಪರಿಸರವನ್ನು ಹಾಳುಗೆಡವುದರ ಪರಿಕಲ್ಪನೆಯೂ ಇರದಂತ ನಿರ್ಮಮ ಮನಸ್ಥಿತಿಯನ್ನು ಯಾವ ಹೆಸರಿಂದ ಕರೆಯಲಾದೀತು? ಬೆಟ್ಟ, ಗುಡ್ಡ ,ನೀರು, ನದಿ ,ಗಿಡ, ಮರ ,ಸಸ್ಯ ಸಂಪತ್ತು ,ಇರುವಿ ಎಂಭತ್ತು ಕೋಟಿ ಪ್ರಾಣಿ ಪಕ್ಷಿ ಸಂಕುಲಗಳಲ್ಲಿ ದೈವ ಸ್ವರೂಪವನ್ನೇ ಕಂಡು ಪೂಜಿಸಿದ ವೇದ ಪುರಾಣಗಳಾಗಲೀ, ಮಹಾಕಾವ್ಯಗಳ ನಿರೂಪಣೆಗಳಾಗಲೀ, ಜನಪದ ಸಾಹಿತ್ಯವಾಗಲೀ ಜನರನ್ನು ತಟ್ಟದೇ, ಅವರ ಅಂತರಾತ್ಮಗಳಲ್ಲಿ ನೆಲೆಗೊಳ್ಳದೇ ಈ ಪರಿಯ ಸಂವೇದನಾರಹಿತರನ್ನಾಗಿಸಿದ ಸ್ಥಿತಿಯನ್ನು ಭಕ್ತಿ ಎಂತಾದರೂ ಕರೆಯಬಹುದೇ?

ನಮ್ಮ ಹಿರಿಯರು ನೀರಲ್ಲಿ ಎಂದಾದರೊಮ್ಮೆ ಮುಳುಗು ಹಾಕುತ್ತಿದ್ದರಷ್ಟೇ. ಬಟ್ಟೆಯನ್ನೆಂದೂ ಅಲ್ಲಿ ಬಿಡುತ್ತಿರಲಿಲ್ಲ. ಬಿಸುಟುವಷ್ಟು ಬಟ್ಟೆಗಳೂ ಆಗ ಇರುತ್ತಿರಲಿಲ್ಲವೆನ್ನಿ. ತಮ್ಮ ನೀರು ನಿಡಿಯನ್ನು ಅಲ್ಪ ಪ್ರಮಾಣದಲ್ಲಿ ತಾವೇ ಕೊಂಡು ಹೋಗಿ ಅಲ್ಲೇ ಅಟ್ಟು ಉಂಡು ಯಾವ ಕಸವನ್ನೂ ಪ್ರಕೃತಿಗೆ ಸೇರಿಸದೇ ಬರುತ್ತಿದ್ದರು. ನೆರಳು, ಶುಧ್ಧ ಗಾಳಿ ಕೊಡುವ ಅಪರೂಪದ ಮರಗಳನ್ನು ದೇವರೆಂದು ಪೂಜಿಸುತ್ತಿದ್ದರು. ದೇವರು, ದೈವಗಳ ನಂಬುಗೆಗಳ ಮೂಲಕ ಕಾಡನ್ನು . ನಾಗಬನಗಳನ್ನು ರಕ್ಷಿಸುತ್ತಿದ್ದರು. ಯಾವ ದೇವರ ಮೂರ್ತಿಯೂ ಇಲ್ಲದ, ದೇವಾಲಯವೂ ಇಲ್ಲದ ಕೈಲಾಸ ಪರ್ವತ ಇಂದಿಗೂ ಅತ್ಯಂತ ನೆಚ್ಚಿನ , ಆಕರ್ಷಣೆಯ ಧಾರ್ಮಿಕ ಕ್ಷೇತ್ರ. ಭೂಮ್ಯಾಕಾಶಗಳು ಒಂದಾಗಿ ನಿಂತಿರುವ ಈ ಅಗಾಧತೆಯೇ ದೈವ ಸಾಕ್ಷಾತ್ಕಾರ. ಅದರೆದುರು ಮಾನವ ಎಷ್ಟು ಅಲ್ಪ ಎನ್ನುವುದನ್ನು ಈ ಪ್ರಕೃತಿ ಸಾರಿ ಸಾರಿ ಹೇಳುತ್ತದೆ. ಅದಕ್ಕೆ ಕಿವಿಗೊಡದೇ ಅಬ್ಬರದಲ್ಲಿ, ಗೌಜಿ ಗದ್ದಲದಲ್ಲಿ, ಮುಳುಗೇಳುವುದರಲ್ಲಿ, ಹಾರಾಟ ತಾರಾಟಗಳಲ್ಲಿ , ಉದ್ದನೆಯ ಸರತಿ ಸಾಲಿನಲ್ಲಿ, ಹುಂಡಿಗೆ ಕಾಣಿಕೆ ಹಾಕುವುದರಲ್ಲಿ, ಬಂಗಾರದ ,ಬೆಳ್ಳಿಯ ಹೊದಿಕೆಗಳನ್ನು ದೇವಾಲಯಗಳಿಗೆ ಹಾಕುವುದರಲ್ಲಿ ಭಕ್ತಿ ಸೂರೆಯಾಗುತ್ತಿದೆ.

ಬೆಟ್ಟದ ಮೇಲೊಂದು ಮನೆಯ ಮಾಡಿ …ಎಂದು ಅಕ್ಕಮಹಾದೇವಿ ಹೇಳಿದ್ದರೂ ಆಕೆ ಆಶ್ರಯಿಸಿದ್ದು ಜನರಿಂದ ದೂರವಾಗಿದ್ದ ಶ್ರೀಶೈಲದ ಬೆಟ್ಟದ ಮಧ್ಯದ ಗುಹೆಗಳನ್ನು. ಕೊನೆಗೆ ನಡೆದದ್ದು ಹುಲಿಗಳ ಆವಾಸಸ್ಥಾನವಾದ ಕದಳಿಗೆ. ಜೈನ ಮುನಿಗಳು ಬಹುತೇಕವಾಗಿ ಇದ್ದದ್ದು ಎತ್ತರದ ಬೆಟ್ಟಗಳಲ್ಲಿ. ಅಜಂತಾ ಎಲ್ಲೊರದ ಗುಹೆಗಳು, ಬಾದಾಮಿಯ ಗುಹೆಗಳು ಇರುವುದು ಬೆಟ್ಟಗಳಲ್ಲಿ, ಶಿವನ ಬಹುತೇಕ ಸ್ಥಳಗಳು ಹಿಮಾಲಯದ ಪರ್ವತ ಶ್ರೇಣಿಗಳ ದುರ್ಗಮ ಸ್ಥಳಗಳಲ್ಲಿ, ಪಾಂಡವರ ವನವಾಸದ ಐತಿಹ್ಯವನ್ನ ಹೇಳುವ ಭಾರತದಾದ್ಯಂತ ಇರುವ ಹತ್ತಾರು ಸ್ಥಳಗಳಿರುವುದು ಬೆಟ್ಟಗಳ ಮೇಲೆ, ಕಾಡಿನ ನಡುವೆ ಅಥವಾ ಜನರಿಂದ ಮರೆಯಾಗಿರುವ ಅನಾಮಧೇಯ ಜಾಗಗಳಲ್ಲಿ. ಶಂಕರಾಚಾರ್ಯರು ಮೊದಲು ಮಠ ಸ್ಥಾಪಿಸಿದ್ದು ಹಿಮಾಲಯದ ತಪ್ಪಲಿನಲ್ಲಿ. ತಮ್ಮ ಕೊನೆಯ ಕಾಲವನ್ನು ಕಳೆದದ್ದು ಕೇದಾರನಾಥದಲ್ಲಿ. ಇಂದಿಗೂ ಅನೇಕ ಸಾಧು, ಸಂತರು ಸಾಧನೆಗಾಗಿ ಆಶ್ರಯಿಸುವುದು ದುರ್ಗಮ ಹಿಮಾಲಯವನ್ನೇ. ತನ್ನವರಿಂದಲೇ ಮೋಸಗೊಂಡು, ತಾನೇ ಕಟ್ಟಿ ಬೆಳೆಸಿದ ಕಂಪನಿಯಿಂದ ಹೊರ ನೂಕಿಸಿಕೊಂಡು ದಿಕ್ಕೆಟ್ಟು ಹಿಮಾಲಯವನ್ನು ಆಶ್ರಯಿಸಿ ಅಲ್ಲಿಂದ ಹಿಂತಿರುಗಿ ಬಂದು ಆಪಲ್ ಕಂಪನಿ ಕಟ್ಟಿದ ಸ್ಟೀವ್ ಜಾಬ್ಸ್ ಗೆ ಜನರ ಸಂಪರ್ಕವೇ ಬೇಡಾಗಿತ್ತು. ಇವು ಬರೀ ಬೆಟ್ಟ ಗುಡ್ಡಗಳೋ, ನದಿಗಳೋ ಅಲ್ಲ. ಅವುಗಳಲ್ಲಿ ಅಂತರ್ಗತವಾಗಿರುವ ಮೌನ, ಸಹನೆ, ಚಲನಶೀಲತೆ, ದೈವೀಕತೆ, ಪಾವಿತ್ರ್ಯ, ಅಗಾಧತೆ, ಅನನ್ಯತೆ, ಸವಾಲಾಗಿ ನಿಲ್ಲಬಲ್ಲ ದಿಟ್ಟತೆಗಳನ್ನು ಮನುಷ್ಯ ಅರ್ಥ ಮಾಡಿಕೊಳ್ಳದಿದ್ದರೆ ಅವನ ದೈವತ್ವದ ಹುಡುಕಾಟ ವ್ಯರ್ಥ. ಅಹಂ ಬ್ರಹ್ಮಾಸ್ಮಿ ಎಂದ ಶಂಕರರು, ದಾಸೋಹಂ ಎಂದ ಶರಣರು, ಬಯಲೊಳು ಆಲಯವನ್ನು, ಭಕ್ತರ ಆಣೆಯನ್ನೇ ಪ್ರಾಮಾಣವಾಗಿಸಿದ ದಾಸವರೇಣ್ಯರು, ಪರಿಪೂರ್ಣ ಶರಣಾಗತಿಯೇ ಭಕ್ತಿ ಎಂದ ಆಧುನಿಕ ಸಂತ ವಿವೇಕಾನಂದರು ಭಕ್ತಿಯ ಹಾದಿಯನ್ನು ನಿಚ್ಚಳವಾಗಿಸಿದ್ದಾರೆ. ಆದರೂ ನಾಗಾಲೋಟದ ಈ ದಶಕದಲ್ಲಿ ಭಕ್ತಿಯ ವ್ಯಾಖ್ಯೆ ಬೇರೆಯೇ ಆಗುತ್ತಿದೆ.

ವಾಹನ ಎಕ್ಸೋ, ಐಟಿ ಎಕ್ಸ್ಪೋ, ರಿಯಲ್ ಎಸ್ಟೇಟ್ ಎಕ್ಸ್ಪೋ ನಡೆಯುವಂತೆ ಈಗ ದೇವಾಲಯ ಎಕ್ಸ್ಪೋ ಗಳು ನಡೆಯುತ್ತಿವೆ. ನೆರೆಯ ಆಂಧ್ರದಲ್ಲಿರುವ. ಚಿಕ್ಕ ದೊಡ್ಡ 27000 ದೇವಾಲಯಗಳಿಗೆ ಪ್ರತಿವರ್ಷ ಬರುವ ಭಕ್ತರ ಸಂಖ್ಯೆ 21 ಕೋಟಿ ಎಂದು ಅಲ್ಲಿನ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹಣದ ಹರಿವಿರುವ ಎಲ್ಲಾ ಕ್ಷೇತ್ರಗಳೂ ಮೂಲ ಉದ್ದೇಶವನ್ನು ಕಳೆದುಕೊಳ್ಳುವುದಕ್ಕೆ ನಮ್ಮೆದುರು ಇರುವ ಒಳ್ಳೆಯ ನಿದರ್ಶನ ಶಿಕ್ಷಣ ವ್ಯವಸ್ಥೆ. ಇಂದು ಇದು ಪಕ್ಕಾ ವ್ಯಾಪಾರಿ ಸಂಸ್ಥೆ. ಅದರಂತೆ ಹಣದ ಹರಿವಿನ ಮೂಲಕ ಬೃಹತ್ ಉದ್ಯಮಗಳಾಗಿರುವ ದೇವಾಲಯಗಳು ಆ ಕಾರಣದಿಂದಲೇ ಪಾರದರ್ಶಕತೆಯನ್ನು ಕಳೆದುಕೊಳ್ಳಬಹುದಾದ ಅಪಾಯವಿದೆ.

ಒಮ್ಮೆ ಒಬ್ಬ ವೀಕ್ಷಕ ವಿವರಣೆಗಾರರು ಉದ್ಧರಿಸಿದ್ದ ಮಾತು ಇಲ್ಲಿ ನೆನಪಾಗುತ್ತಿದೆ. ” ಎನ್ನ ಕಾಲೇ ಕಂಬ. ದೇಹವೇ ದೇಗುಲ ಅಂತಾರೆ. ಆದ್ರೆ ದೇವಾಲಯವೂ ಬೇಕಲ್ಲ!!…” ತಮ್ಮ ದೈವಭಕ್ತಿಯನ್ನು ಪ್ರದರ್ಶಿಸುವ ಹೊತ್ತಲ್ಲಿ ಅವರಿಗೆ ಇನ್ನೊಬ್ಬ ಭಕ್ತನಿಗೆ ನೋವುಂಟು ಮಾಡುತ್ತಿದ್ದೇನೆ ಎಂಬ ಕಡೆ ಗಮನವಾಗಲೀ ಅಥವಾ ಈ ಜಗತ್ತು ಕಂಡ ಅದ್ವಿತೀಯ ಸಮಾಜ ಉದ್ಧಾರಕ, ಸಾಂಸ್ಕೃತಿಕ ನಾಯಕನನ್ನು ಹೀಗಳೆಯುತ್ತಿದ್ದೇನೆ ಎಂಬ ಕನಿಷ್ಠ ಅರಿವಾಗಲಿ ಇದ್ದಂತಿರಲಿಲ್ಲ ಅಥವಾ ಒಂದೊಮ್ಮೆ ಇದ್ದರೂ ಒಬ್ಬ ದೇವನನ್ನು ಮೆರೆಸುವ ಭರದಲ್ಲಿ ಇನ್ನೊಬ್ಬ ದೇವನನ್ನು ಕೆಳಗಿಳಿಸುವ ಉದ್ದೇಶಪೂರಿತ ಹೀನ ಮನಸ್ಥಿತಿಯೂ ಆಗಿರಬಹುದು. ಇಲ್ಲಿ ಭಕ್ತಿಯ ಯಾವ ಪರಿಭಾಷೆ ಸರಿಹೊಂದುತ್ತದೆ ಎಂಬುದನ್ನು ಬಲ್ಲವರು ಹೇಳಬೇಕು.

ಇಂದು ದೇಶೀಯ ಅಥವಾ ವಿದೇಶೀಯ ಯಾವುದೇ ಪ್ರವಾಸ ಅಸಾಧ್ಯವಲ್ಲ. 2024 ರಲ್ಲಿ ಭಾರತಕ್ಕೆ ಬಂದ ಅಂತಾರಾಷ್ಟ್ರೀಯ ಪ್ರವಾಸಿಗರು ಈ ಬೃಹತ್ ಉದ್ಯಮಕ್ಕೆ ಸುಮಾರು 3.1 ಟ್ರಿಲಿಯನ್ ವಹಿವಾಟು ನೀಡಿದ್ದರು ಎಂದು ಹೇಳುವ ಅಂಕಿ ಅಂಶಗಳನ್ನು ಕಂಡಾಗ ಇದರ ಅಗಾಧತೆಯ ಅರಿವಾಗುತ್ತದೆ. 2024 ರಲ್ಲಿ ರಾಷ್ಟ್ರೀಯ
ಜಿಡಿಪಿಗೆ ಪ್ರವಾಸೋದ್ಯಮದ ಕೊಡುಗೆ 231.6 ಬಿಲಿಯನ್ ಡಾಲರ್ ಆಗಿತ್ತು. 2022 ರಲ್ಲಿ ಇದು 190 ಬಿಲಿಯನ್ ಡಾಲರ್ ಆಗಿದ್ದು ಕೇವಲ ಎರಡು ವರ್ಷಗಳಲ್ಲಿ ಆದ ಹೆಚ್ಚಳ ಗಮನಾರ್ಹ. 2032 ರ ಹೊತ್ತಿಗೆ ಇದು 33 ಲಕ್ಷ ಕೋಟಿಗೂ ಮೀರಬಹುದಾಗಿದ್ದು ಜಿಡಿಪಿಯ 7.2% ಆಗಬಹುದು ಎಂದು ಅಂದಾಜಿಸಲಾಗಿದೆ. 2024 ರಲ್ಲಿ 46.5 ದಶಲಕ್ಷ ಉದ್ಯೋಗಗಳನ್ನು ಪ್ರವಾಸೋದ್ಯಮ ಸೃಷ್ಟಿಸಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ.

ಭಾರತ ಈಗ ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ಬಲಾಢ್ಯ ರಾಷ್ಟ್ರ. ಇಂಥ ತ್ವರಿತಗತಿಯ ಅಭಿವೃದ್ಧಿಯೊಂದಿಗೆ ಸೇರಿ ಹೋಗಿರುವ ಪ್ರಾಕೃತಿಕ ಒತ್ತಡ, ಜನ ಸಂಖ್ಯೆ, ಎಗ್ಗಿಲ್ಲದ ಪ್ರಕೃತಿಯ ಮೇಲಿನ ಪ್ರಹಾರ, ಅವೈಜ್ಞಾನಿಕ ರಸ್ತೆ, ರೈಲು ಮಾರ್ಗಗಳು, ಬಹುಸೂಕ್ಷ್ಮ ಹಿಮಾಲಯ ಶ್ರೇಣಿಗಳಲ್ಲಿ ರೈಲು, ರಸ್ತೆ, ರೋಪ್ ವೆ, ಹೆಲಿಕಾಪ್ಟರ್ ಹಾರಾಟ , ಕಟ್ಟಡಗಳ ನಿರ್ಮಾಣ ಮೊದಲಾದ ಶರವೇಗದ ಬೆಳವಣಿಗೆಗಳು ಕಳೆದ ಮಳೆಗಾಲದಲ್ಲಿ ತಮ್ಮ ನೋವನ್ನು ತೋಡಿಕೊಂಡಿವೆ. ಬೆಟ್ಟ ಗುಡ್ಡಗಳನ್ನು ನುಂಗಿದ ನದಿಗಳು, ಪ್ರಾಣಗಳನ್ನು ಆಹುತಿ ಪಡೆದ ಬೆಟ್ಟಗಳು, ಬದುಕನ್ನು ಅಸ್ತವ್ಯಸ್ತವಾಗಿಸಿದ ಪ್ರಕೃತಿ ವಿಕೋಪ ಕಂಡು ದೊಂಬಿಯಾಗಿರುವ ಪ್ರವಾಸೋದ್ಯಮ ಎಚ್ಚೆತ್ತುಕೊಳ್ಳಲಿ. ಇಲ್ಲವಾದರೆ ಹಪಾಹಪಿಯ ಪ್ರವಾಸೋದ್ಯಮ ದೇಶದ ಜಿಡಿಪಿಗೆ ತನ್ನ ಕೊಡುಗೆಯನ್ನು ಹೆಚ್ಚಿಸುವುದರೊಂದಿಗೆ ಈ ನೆಲದ ಅಸ್ಮಿತೆಗೆ ಸಂಚಕಾರವಾಗಬಲ್ಲ ಎಲ್ಲ ಸಾಧ್ಯತೆಗಳನ್ನೂ ಪ್ರದರ್ಶಿಸುತ್ತಿದೆ.


  • ನೂತನ ದೋಶೆಟ್ಟಿ – ಸಹಾಯಕ ನಿರ್ದೇಶಕರು, ಆಕಾಶವಾಣಿ,  ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW