“ರಾಮಾಪುರದ ವ್ಯಾಘ್ರ” ಸಣ್ಣಕತೆ

ಹೊಲದ ಬೆಳೆಗೆ ಸಿಂಪಡಿಸುವ ಕೀಟನಾಶಕವನ್ನು ಸತ್ತ ಹಸುವಿನ ದೇಹದ ಮೇಲೆಲ್ಲಾ ಹಾಕಿ ಆ ಸ್ಥಳದಿಂದ ಹೊರಟ. ರಕ್ತ ಕುಡಿದ ಮೇಲೆ ಮಾಂಸವನ್ನು ತಿನ್ನದೆ, ಆನಂತರ ಕೆಲವು ಸಮಯ ಕಳೆದ ಮೇಲೆ ಆ ಹುಲಿ ಬಂದು ಮಾಂಸವನ್ನು ತಿನ್ನುತ್ತದೆ ಎಂಬುದು ಮಾರನಿಗೆ ಗೊತ್ತಿತ್ತು. ಮುಂದೆ ಮಾರ ಏನು ಮಾಡಿದ ಶಿವು ಅವರು ಬರೆದ ಈ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ರಾಮಾಪುರ ಎಂಬ ಊರು ಯಾವುದೇ ನೀರಿನ ಮೂಲಗಳಾದ ನದಿ ಕಾಲಿವೆಗಳ ಸಂಪರ್ಕವಿಲ್ಲದೆ ಮಳೆಯನ್ನೇ ಆಶ್ರಯಿಸಿಕೊಂಡಿದ್ದ ಬೈಲು ಸೀಮೆ. ಮಳೆ ಬಂದಾಗ ಮಾತ್ರ ತುಂಬಿ ಜಾನುವಾರುಗಳಿಗೆ ನೀರು ಒದಗಿಸುತ್ತಿದ್ದ ಚಿಕ್ಕದೊಂದು ಕೆರೆ ಇತ್ತು. ಬೇಸಿಗೆ ಬಂತೆಂದರೆ ಅದು ಬತ್ತಿ ಹೋಗುತ್ತಿತ್ತು. ದಿನಕ್ಕೆ ಎರಡು ಅಥವಾ ಮೂರು ಬಾರಿ ಮಾತ್ರ ಬಸ್ಸು ಬಂದು ಹೋಗುತ್ತಿದ್ದ ಕಿರಿದಾದ ಅಲ್ಲಲ್ಲಿ ಹಳ್ಳಕೊಳ್ಳಗಳಿಂದ ಕೂಡಿದ ಡಾಂಬರ್ ರಸ್ತೆ. ಪಕ್ಕದಲ್ಲೇ ಇದ್ದ ಬೆಟ್ಟವೊಂದು ಆ ಊರಿಗೆ ಮತ್ತಷ್ಟು ಮೆರಗು ತಂದಿತ್ತು. ಅದು ಕಾಡಂಚಿನ ಪುಟ್ಟ ಗ್ರಾಮ.
ಜನರ ಜೀವನ ವ್ಯವಸಾಯವನ್ನೇ ಆಧಾರವಾಗಿಸಿಕೊಂಡಿತ್ತು. ಆದರೆ ನೀರಾವರಿಯ ಅನುಕೂಲವಿಲ್ಲದ್ದರಿಂದ ವ್ಯವಸಾಯಕ್ಕೆ ಸಂಪೂರ್ಣವಾಗಿ ಮಳೆಯನ್ನೇ ಆಶ್ರಯಿಸಿಕೊಂಡಿದ್ದರು.
ಊರಿನ ಜನ ಬಹಳ ಶ್ರಮಿಕರು. ತಮ್ಮ ದಿನದ ಹೆಚ್ಚು ಸಮಯವನ್ನು ಹೊಲದಲ್ಲಿಯೇ ಕಳೆಯುತ್ತಿದ್ದರು. ಹತ್ತಿ, ರಾಗಿ, ಜೋಳ, ಎಳ್ಳು, ಉರುಳಿ, ಇವರು ಬೆಳೆಯುತ್ತಿದ್ದ ಪ್ರಮುಖ ಬೆಳೆಗಳು. ಅನುಕೂಲ ಇರುವವರು ಬೋರ್ ನೀರಿನ ಮೂಲಕ ಕಬ್ಬು ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದರು. ಆದರೆ ರಾಮಾಪುರಕ್ಕೆ ಕಾಡು ಸಮೀಪದಲ್ಲಿರುವುದರಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿತ್ತು. ಬೆಳೆ ಬೆಳೆಯಲು ಹರಸಾಹಸ ಪಡಬೇಕಾಗಿತ್ತು. ರಾತ್ರಿ ಸಮಯದಲ್ಲಿ ಹೊಲದ ಮರದ ಮೇಲೆ ಅಟ್ಟಗಳನ್ನ ನಿರ್ಮಿಸಿ ರಾತ್ರಿಪೂರ ನಿದ್ದೆಗೆಟ್ಟು ಕಾವಲು ಕಾಯುತ್ತಿದ್ದರು.
ಬೀಜ ನೆಟ್ಟು ಅವು ಮೊಳಕೆಯೊಡೆಯುತ್ತಿದ್ಡಂತೆ ಹಂದಿಗಳು ಅವುಗಳನ್ನು ಬಗೆದು ತಿಂದು ಹಾಳುಮಾಡುತ್ತಿದ್ದವು. ಇನ್ನು ಆನೆಗಳ ಕಾಟದಿಂದ ರೈತರ ಕಷ್ಟಗಳನ್ನು ಕೇಳುವವರಿಲ್ಲ. ರಾತ್ರಿಪೂರ್ತಿ ಕಾವಲು ಕಾಯುತ್ತಾ ಅವುಗಳನ್ನು ಓಡಿಸುವುದೇ ರೈತರಿಗೆ ತಲೆನೋವಿನ ಕೆಲಸವಾಗಿತ್ತು.

ಚಿರತೆಗಳಂತೂ ಹಾಡಹಗಲೇ ಊರಿನ ಸಮೀಪಕ್ಕೆ ಬಂದು ನಾಯಿ, ಕುರಿ ಜಾನುವಾರುಗಳನ್ನು ಹೊತ್ತು ಹೋಗುತ್ತಿದ್ದವು.

‘ಮೊದಲ ನರಬಲಿ’

ಒಂದು ದಿನ ಭೀರಪ್ಪ ಎಂಬುವವನು ಹೊಲದಲ್ಲಿ ಉಳುತ್ತಿದ್ದನು. ಆತನ ಹೆಂಡತಿ ಹಸುಗಳಿಗೆ ಹುಲ್ಲು ಕುಯ್ಯಲೆಂದು ಭೀರಪ್ಪ ಉಳುತ್ತಿದ್ದ ಹೊಲದಿಂದ ಸ್ವಲ್ಪ ದೂರದಲ್ಲಿ ಹೋಗಿ ಹುಲ್ಲು ಕುಯ್ಯುತ್ತಾ ಕುಳಿತ್ತಿದ್ದಳು. ಹಿಂದಿನಿಂದ ಆಕೆಯ ಮೇಲೆ ಬಂದೆರಗಿದ ಹುಲಿಯು ಅದು ಆಕೆಯ ಅರಿವಿಗೆ ಬರುವಷ್ಟರಲ್ಲೇ ಆಕೆಯ ಕುತ್ತಿಗೆಯಲ್ಲಿ ಅದರ ಚೂಪಾದ ಹಲ್ಲುಗಳನ್ನು ಆಳವಾಗಿ ಇಳಿಸಿತ್ತು.

ಕೂಗಿಕೊಳ್ಳಲೂ ಸಹ ಆಕೆಗೆ ಸ್ವಲ್ಪವೂ ಅವಕಾಶ ಸಿಗಲಿಲ್ಲ. ಎಷ್ಟು ಒದ್ಡಾಡಿದರೂ ಬಿಡದೆ ಆಕೆ ಕುತ್ತಿಗೆಯಿಂದ ರಕ್ತವನ್ನೆಲ್ಲಾ ಕುಡಿದು ಅಲ್ಲಿಂದ ಪೇರಿ ಕಿತ್ತಿತ್ತು. ರಕ್ತ ಕುಡಿದ ಮೇಲೆ ಅದು ಮಾಂಸದ ರುಚಿ ನೋಡುವುದಿಲ್ಲ. ನೀರಿರುವ ಸ್ಥಳಕ್ಕೆ ಹೋಗಿ ತನ್ನ ನಾಲಿಗೆಯನ್ನು ನೀರಿಗೆ ಸೋಕಿಸಿ ಅಥವಾ ಕುಡಿದು ಆನಂತರವಷ್ಟೇ ಬಂದು ಮಾಂಸವನ್ನು ತಿನ್ನುತ್ತದೆಯೆಂದು ನನ್ನ ಸ್ನೇಹಿತನೊಬ್ಬ ಹೇಳಿದ್ದು ನೆನಪು.

ಸ್ವಲ್ಪ ದೂರದಲ್ಲೇ ಉಳುತ್ತಿದ್ದ ಭೀರಪ್ಪ ಎಷ್ಟು ಹೊತ್ತಾದರೂ ಆಕೆ ಬಾರದಿರುವುದನ್ನು ನೋಡಿ ಉಳುವುದನ್ನು ನಿಲ್ಲಿಸಿ ಆಕೆ ಹುಲ್ಲು ಕುಯ್ಯಲು ಹೋದ ಕಡೆಗೆ ಹೊರಟ. ಸ್ವಲ್ಪ ದೂರ ಹೋಗುತ್ತಿದ್ದಂತೆ ತನ್ನ ಹೆಂಡತಿಯ ದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಜೋರಾಗಿ ಚೀರುತ್ತಾ ಆಕೆಯ ದೇಹದತ್ತ ಓಡಿದ.

ಆ ವ್ಯಾಘ್ರನ ಹಲ್ಲುಗಳು ಆಕೆಯ ಕುತ್ತಿಗೆಯನ್ನು ಸೀಳಿದ್ದವು. ಬಲಗಡೆಯ ಕಿವಿ ಓಲೆಯ ಸಹಿತ ಹರಿದಿತ್ತು, ಆಕೆಯ ಕೈಕಾಲುಗಳ ಒದ್ದಾಟದ ಗುರುತುಗಳು ಆಕೆಯ ದೇಹ ಬಿದ್ದಿದ್ದ ಸ್ಥಳದಲ್ಲಿ ಮೂಡಿದ್ದವು. ರಕ್ತಸಿಕ್ತವಾದ ಆ ದೇಹದ ಸುತ್ತಲೂ ರಕ್ತ ಹರಿದು ಗುಂಡಿಗಳು ನಿರ್ಮಾಣವಾಗಿದ್ದವು.

ಸ್ವಲ್ಪ ದೂರದಲ್ಲೇ ಉಳುತ್ತಿದ್ದ ಆತನಿಗೆ ಆ ಹುಲಿಯ ಆರ್ಭಟದ ಶಬ್ದವಾಗಲೀ, ತನ್ನ ಹೆಂಡತಿಯ ಚೀರಾಟವಾಗಲೀ ಕೇಳಿಸಿರಲಿಲ್ಲ. ಹುಲಿಯು ಆಕೆಯ ಹಿಂದಿನಿಂದ ಹಠಾತ್ತನೇ ಬಂದೆರಗಿದ್ದರಿಂದ ಚೀರುವುದಕ್ಕಾಗಲೀ ಪ್ರತಿರೋಧಿಸುವುದಕ್ಕಾಗಿಲೀ ಆಕೆಗೆ ಸ್ವಲ್ಪವೂ ಅವಕಾಶವೇ ಸಿಗಲಿಲ್ಲ.

ಕೆಲವೇ ಕ್ಷಣಗಳಲ್ಲಿ ಮೇಲೆ ಎಗರಿ ಆಕ್ರಮಣ ಮಾಡಿ ಆಕೆಯ ಕುತ್ತಿಗೆಯನ್ನು ಬಲವಾಗಿ ಕಚ್ಚಿ ಹಿಡಿದಿತ್ತು. ಬೀರಪ್ಪ ಜೋರಾಗಿ ಚೀರುತ್ತಾ ಗೋಳಾಡುತ್ತಾ ಕೈಗಳಿಂದ ತನ್ನ ಎದೆಗೆ ಬಡಿದುಕೊಳ್ಳುತ್ತಾ ಊರಿನತ್ತ ಓಡಿದ.

ಊರಿಗೆ ಸಮೀಸುತ್ತಲೇ ಆತನ ಚೀರಾಟ ಇನ್ನೂ ಜೋರಾಯಿತು, ಗೋಳಾಡುತ್ತಲೇ ನಡೆದ ಸಂಗತಿಗಳನ್ನೆಲ್ಲಾ ಆತನ ಅಣ್ಣನಿಗೂ ಊರಿನ ಜನರಿಗೂ ತಿಳಿಸಿದ. ತಕ್ಷಣ ಎಲ್ಲರೂ ಆ ಸ್ಥಳದತ್ತ ದೌಡಾಯಿಸಿದರು. ಪೋಲೀಸ್ ನವರಿಗೂ, ಫಾರೆಸ್ಟ್ ಡಿಪಾರ್ಟ್ಮೆಂಟಿನವರಿಗೂ ಸುದ್ದಿ ಮುಟ್ಟಿಸಿದರು. ಸಂಜೆ ಹೊತ್ತಿಗಾಗಲೇ ಪೋಲೀಸ್, ಫಾರೆಸ್ಟ್ ನವರ ಸಹಿತ ಇಡೀ ಊರೇ ಅಲ್ಲಿ ಸೇರಿತ್ತು. ಸಂಜೆಯಾದ್ದರಿಂದ ಪೋಸ್ಟ್ ಮಾರ್ಟಮ್ ಅಲ್ಲೇ ನಡೆಸಲು ತೀರ್ಮಾನಿಸಿದರು. ಇತ್ತ ಊರಿನವರ ಆಕ್ರೋಶ ಹೆಚ್ಚಾಗಿದ್ದರಿಂದ ಫಾರೆಸ್ಟ್ ಡಿಪಾರ್ಟ್ಮೆಂಟಿನವರು ಮತ್ತೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆಂದು ಪ್ರಮಾಣ ಮಾಡಿ, ಸತ್ತ ಆಕೆಗೆ ಎರಡು ಗಂಡು ಮಕ್ಕಳು ಇದ್ದದ್ದರಿಂದ ಇಬ್ಬರು ಮಕ್ಕಳಿಗೂ ತಲಾ ಇಪ್ಪತ್ತೈದು ಸಾವಿರದಂತೆ ಪರಿಹಾರ ಘೋಷಿಸಿದರು.

ಅದಾದ ಕೆಲವು ವರ್ಷಗಳ ನಂತರ ಬೀರಪ್ಪ ಎರಡನೇ ಮದುವೆಯಾದ.

“ಮಾರ”

ರಾಮಾಪುರದಲ್ಲಿ ಮಾರ ಎಂಬ ವ್ಯಕ್ತಿ ಇದ್ದ. ಆತ ಊರಿನ ಎಲ್ಲರ ಹಸುಗಳನ್ನು ಮೇಯಿಸುತ್ತಿದ್ದ. ಅದಕ್ಕೆ ಪ್ರತಿಯಾಗಿ ಜನರು ಆತನಿಗೆ ವರ್ಷಕ್ಕೊಮ್ಮೆ ದವಸ ಧಾನ್ಯಗಳನ್ನು ಕೊಡುತ್ತಿದ್ದರು. ಆಗಿನ ಕಾಲದಲ್ಲಿ ಇದ್ದ ಜೀತಪದ್ಧತಿಗೆ ಆತ ಬೇಸತ್ತು, ಹಸು ಮೇಯಿಸುವುದೇ ಲೇಸೆಂದು ಅದನ್ನೇ ಕಾಯಕವಾಗಿಸಿಕೊಂಡಿದ್ದ.

ಪ್ರತಿದಿನ ಮುಂಜಾನೆ ಎದ್ದು, ದಿನ ನಿತ್ಯದ ಕೆಲಸಗಳನ್ನು ಮುಗಿಸಿ, ಎಲ್ಲರ ಮನೆಯ ಹಸುಗಳನ್ನು ಒಟ್ಟಿಗೆ ಸೇರಿಸಿ ಕಾಡಿನತ್ತ ಅವುಗಳನ್ನು ಮೇಯಿಸಲು ಹೊಡಕೊಂಡು ಹೋಗುತ್ತಿದ್ದ. ಬಲಗೈಯಲ್ಲಿ ಒಂದು ಕೋಲು, ತಾನೇ ಕೈಯಿಂದ ಎಣೆದು ಒಂದು ನೀರಿನ ಬಾಟ್ಲಿಗೆ ಕಟ್ಟಿದ್ದ ದಾರವನ್ನ ಎಡಗೈ ನ ಕಂಕುಳಿಗೆ ಸಿಕ್ಕಿಸಿಕೊಂಡು, ಟವೆಲ್ ಗೆ ತಂಗಳು ಹಿಟ್ಟು, ಮೊಸರಿನ ಬುತ್ತಿ ಕಟ್ಟಿಕೊಂಡು ಅದನ್ನು ಹೆಗಲ ಮೇಲೆ ಹಾಕಿಕೊಂಡು ಯುದ್ಧಕ್ಕೆ ಹೊರಟ ಶಿಸ್ತಿನ ಸಿಪಾಯಿಯಂತೆ ಹಸುಗಳನ್ನು ಮೇಯಿಸಲು ಹೋಗುತ್ತಿದ್ದ.

ಕಾಡಿನ ಒಳಗೆ ಅಲ್ಲಲ್ಲಿ ಹಸುಗಳನ್ನು ಮೇಯಿಸುತ್ತ, ಮಧ್ಯಾಹ್ನದ ಹೊತ್ತಿಗೆ ಅಲ್ಲೇ ಕೆರೆಯಲ್ಲಿ ಅವುಗಳಿಗೆ ನೀರು ಕುಡಿಸಿ ಸಂಜೆಯಾಗುವುದಕ್ಕಿಂತ ಮುನ್ನವೇ ಕಾಡಿನಿಂದ ಹಸುಗಳನ್ನು ಊರಿನತ್ತ ಹೊಡಕೊಂಡು ಬರುತ್ತಿದ್ದ.

ಪ್ರತಿದಿನ ಹೀಗೇಯೇ ನಡೆಯುತ್ತಿತ್ತು. ಒಂದು ದಿನ ಆತ ಕಾಡಿನಲ್ಲಿ ಹಸುಗಳನ್ನು ಮೇಯಲು ಬಿಟ್ಟು, ಬೆಳಗ್ಗೆ ತಿಂದಿದ್ದ ತಂಗಳಿಟ್ಟಿನ ಪ್ರಭಾವದಿಂದ ಸ್ವಲ್ಪ ಹೊತ್ತು ಮಲಗೋಣ ಎಂದುಕೊಂಡು ಹಾಗೇ ಕಲ್ಲಿನ ಮೇಲೆ ಒರಗಿಕೊಂಡು ತೂಕಡಿಸುತ್ತಿದ್ದ. ಸ್ವಲ್ಪ ಹೊತ್ತಿನ ನಂತರ ಇದ್ದಕ್ಕಿದ್ದಂತೆ ಏಕಾಏಕಿ ಹಸುಗಳೆಲ್ಲಾ ಬೆಚ್ಚಿ ಓಡಲು ಶುರುಮಾಡಿದವು. ಮಾರ ಎಚ್ಚರಗೊಂಡು ಏನಾಯಿತು ಎಂದು ಅಲ್ಲಿಂದ ಮೇಲೆದ್ದು ನೋಡುವಷ್ಟರಲ್ಲಿ ದೊಡ್ಡ ಗಾತ್ರದ ಹುಲಿಯೊಂದು ಘರ್ಜಿಸುತ್ತಾ ಒಂದು ಹಸುವಿನ ಮೇಲೆ ಆಕ್ರಮಣ ಮಾಡಿ ಅದರ ಮೇಲೆ ಕುಳಿತು ಅದರ ಕುತ್ತಿಗೆಯನ್ನು ಕಚ್ಚಿ ಹಿಡಿದಿತ್ತು. ಈತ ಭಯದಿಂದ ಜೋರಾಗಿ ಕೂಗಾಡಲು ಶುರುಮಾಡಿದ. ಅದು ಒಮ್ಮೆ ಮಾರನತ್ತ ತಿರುಗಿ ಬಹಳ ಕೋಪದಿಂದ ದೃಷ್ಟಿಸಿ ನೋಡಿ ಘರ್ಜಿಸಿ ಮತ್ತೆ ಆ ಹಸುವಿನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ರಕ್ತ ಕುಡಿಯಲು ಶುರುಮಾಡಿತು. ಆತ ಎಷ್ಟು ಕೂಗಿದರೂ ಶಬ್ದ ಮಾಡಿದರೂ ಅದು ಹಸುವನ್ನು ಬಿಟ್ಟು ಹೆದರಿ ಓಡಲಿಲ್ಲ.
ತನ್ನ ಜೀವನದಲ್ಲಿ ಮೊದಲ ಬಾರಿಗೆ ಆ ಧೈತ್ಯಾಕಾರದ ಹುಲಿಯನ್ನೂ, ಅದರ ಆರ್ಭಟವನ್ನೂ ತನ್ನ ಕಣ್ಣ ಮುಂದೆಯೇ ನೋಡಿದ ಮಾರನಿಗೆ ಕೈಕಾಲುಗಳಲ್ಲಿ ನಡುಕ ಹುಟ್ಟಿತು. ಇಷ್ಟು ದಿನ ಊರಿನವರು ಬರೀ ಆನೆಗಳ ಬಗ್ಗೆ, ಚಿರತೆಗಳ ಬಗ್ಗೆ ಅಲ್ಲಿ ನೋಡಿದ್ದೇವೆ, ಇಲ್ಲಿ ನೋಡಿದ್ದೇವೆ ಎಂದು ಹೇಳುವುದನ್ನು ಕೇಳಿದ್ದ ಆತ, ಒಂದೆರಡು ಬಾರಿ ಚಿರತೆಯನ್ನು ದೂರದಿಂದ ನೋಡಿದ್ದ. ಆದರೆ ಆತ ಅದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಚಿರತೆಗಿಂತ ಹುಲಿಯ ಗಾತ್ರ ಸುಮಾರು ನಾಲ್ಕುಪಟ್ಟು ದೊಡ್ಡದಾಗಿರುತ್ತದೆ. ಹಾಗಾಗಿಯೇ ಆತ ಆ ಧೈತ್ಯಾಕಾರದ ಹುಲಿಯನ್ನು ನೋಡಿ ಬೆಚ್ಚಿ ಬೆರಗಾಗಿದ್ದ.

ಹಸುವಿನ ರಕ್ತ ಕುಡಿದು ಅಲ್ಲಿಂದ ಹೋಗುತ್ತಿದ್ದಂತೆ ಭಯದಿಂದ ಮಾರ ಎಲ್ಲಾ ಹಸುಗಳನ್ನೂ ಅಲ್ಲಿಂದ ಓಡಿಸಿಕೊಂಡು ಊರಿನತ್ತ ಓಡಿದ. ಕೆಲವು ಹಸುಗಳು ಮೊದಲೇ ಆ ಹುಲಿ ಆಕ್ರಮಣ ಮಾಡಿದಾಗಲೇ ಕಾಡಿನಿಂದ ಊರಿನತ್ತ ಓಡಿದ್ದವು.

ಇದಾದ ನಂತರ ಕೆಲವು ದಿನಗಳ ತನಕ ಮಾರ ಮತ್ತೆ ಆ ಕಾಡಿನತ್ತ ಹೋಗಲಿಲ್ಲ. ಕೆಲವು ದಿನಗಳ ನಂತರ ಕಾಡಿನ ಅಂಚಿನ ಹೊಲದಲ್ಲಿ ಮೇಯುತ್ತಿದ್ದ ಅದೇ ಊರಿನ ಸೋಮೇಗೌಡರ ಹಸುವನ್ನು ಹುಲಿ ಎತ್ತೊಯ್ದದ್ದನ್ನು ಕಂಡು ಅಲ್ಲೇ ಪಕ್ಕದ ಜಮೀನಿನಲ್ಲಿ ಕಳೆ ಕೀಳಲು ಪಕ್ಕದ ಊರಿನಿಂದ ಬಂದಿದ್ದ ಆಳುಗಳು ಮಧ್ಯಾಹ್ನ ಮೂರು ಗಂಟೆಗೇ ಕೆಲಸವನ್ನ ಅಷ್ಟಕ್ಕೆ ಬಿಟ್ಟು ಜೀವ ಉಳಿಸಿಕೊಂಡರೆ ಸಾಕು ಎಂದುಕೊಂಡು ಅಲ್ಲಿಂದ ಓಡಿದರು.

ಈ ವಿಷಯ ಊರಿನಲ್ಲಿ ಗೊತ್ತಾಗುತ್ತಿದ್ದಂತೆ ಊರಿನಲ್ಲಿ ಗಲಭೆ ಎದ್ದಿತ್ತು. ಫಾರೆಸ್ಟ್ ಡಿಪಾರ್ಟ್ಮೆಂಟಿನವರ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣ, ಪ್ರಾಣಿಗಳ ರಕ್ತದ ರುಚಿ ಕಂಡ ಆ ಹುಲಿ ನಾಳೆದಿನ ಮನಷ್ಯರನ್ನ ಹಿಡಿದು ತಿನ್ನೋಕೆ ಶುರು ಮಾಡಿದ್ರೆ ಏನ್ ಮಾಡೋದು. ಅವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದುಕೊಂಡು ಡಿಪಾರ್ಟ್ಮೆಂಟಿನ ಆಫೀಸಿಗೆ ನುಗ್ಗಲು ಎಲ್ಲರೂ ತೀರ್ಮಾನಿಸಿಕೊಂಡರು.

ಎಲ್ಲರೂ ಅಲ್ಲಿ ಹೋಗಿ ಕೂಗಾಡಿ ಚೀರಾಡಿ ಗಲಭೆ ಎಬ್ಬಿಸಿದರು. ಫಾರೆಸ್ಟ್ ಅಧಿಕಾರಿ ಆ ಹುಲಿಯನ್ನ ಹಿಡಿಯುವುದಾಗಿ ಮಾತುಕೊಟ್ಟು, ಡಿಪಾರ್ಟ್ಮೆಂಟಿನ ಕಡೆಯಿಂದ ಹಸು ಕಳೆದು ಕೊಂಡವರಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿ ಮತ್ತೆ ಈ ರೀತಿ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವುದಾಗಿ ಎಲ್ಲರನ್ನೂ ಸಮಾಧಾನ ಮಾಡಿ ಕಳಿಸಿದ.

ಕೆಲವು ದಿನಗಳಾದ ಮೇಲೆ ಆ ಹುಲಿಯನ್ನು ಬೋನ್ ನಲ್ಲಿ ಹಿಡಿದಿರುವುದಾಗಿಯೂ, ಅದನ್ನು ಬಂಡೀಪುರ ಕಾಡಿನಲ್ಲಿ ಬಿಡುವುದಕ್ಕೆ ಕಳುಹಿಸಿದ್ದೇವೆ ಎಂಬುದಾಗಿಯೂ ಊರಿನ ಕೆಲವರಿಗೆ ಆ ಫಾರೆಸ್ಟ್ ಅಧಿಕಾರಿ ಹೇಳಿಕಳುಹಿಸಿದ. ಅದು ನಿಜವೋ ಅಥವಾ ಜನರನ್ನು ಸಮಾಧಾನಪಡಿಸಲು ಆತನು ಹೇಳಿದ ಸುಳ್ಳೋ, ಅದೊಂದು ಚಿದಂಬರ ರಹಸ್ಯ ಹುಲಿಯ ಆರ್ಭಟ ಅಷ್ಟಕ್ಕೆ ನಿಲ್ಲದೆ ಮಾರ ಮೇಯಿಸುತ್ತಿದ್ದ ಮತ್ತೊಂದು ಹಸುವನ್ನೂ ಬಲಿಪಡೆಯಿತು. ಇದು ಬೇರೊಂದು ಹುಲಿಯೋ, ಅಥವಾ ಆ ಫಾರೆಸ್ಟ್ ಅಧಿಕಾರಿ ಹಿಡಿದು ಬಂಡೀಪುರಕ್ಕೆ ಬಿಟ್ಟೆವೆಂದು ಹೇಳಿದ ಅದೇ ಹುಲಿಯೋ ದೇವರೇ ಬಲ್ಲ.

ಮಾರನಿಗಂತೂ ಈ ಸಲ ಆ ಫಾರೆಸ್ಟ್ ಅಧಿಕಾರಿಯ ಮೇಲೆಯೂ, ತಾನು ಜವಾಬ್ದಾರಿ ತೆಗೆದುಕೊಂಡು ಮೇಯಿಸುತ್ತಿದ್ದ ಹಸುವನ್ನು ಕೊಂದ ಹುಲಿಯ ಮೇಲೆಯೂ ತುಂಬಾ ಕೋಪ ಉಂಟಾಗಿತ್ತು. ಎಷ್ಟೇ ಬಾಯಿ ಬಡಕೊಂಡರೂ ಈ ಫಾರೆಸ್ಟ್ ನವರ ಬುದ್ದಿ ಇಷ್ಟೇ. ಇನ್ನು ಆ ಹುಲಿಯ ವಿಚಾರದಲ್ಲಿ ನಾವೇ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂದು ಯೋಚಿಸುತ್ತಾ ರಾತ್ರಿ ಪೂರ್ತಿ ಆತನಿಗೆ ನಿದ್ರೆ ಬರಲಿಲ್ಲ.

ಮರುದಿನ ಎದ್ದು ಎಂದಿನಂತೆ ಹಸುಗಳನ್ನು ಕಾಡಿನತ್ತ ಹೊಡಕೊಂಡು ಹೋದ. ಹಿಂದಿನ ದಿನ ಹುಲಿ ಆಕ್ರಮಣ ಮಾಡಿ ರಕ್ತ ಕುಡಿದು ಬಿಟ್ಟು ಹೋಗಿದ್ದ ತನ್ನ ಹಸುವಿನ ದೇಹ ಬಿದ್ದಿರುವ ಕಡೆಯೇ ಹೋಗಿ ಹಸುಗಳನ್ನು ಮೇಯಲು ಬಿಟ್ಟು, ಮನೆಯಿಂದ ಒಂದು ಕವರ್ ನಲ್ಲಿ ಸುತ್ತಿ ಬ್ಯಾಗಿನಲ್ಲಿ ತಂದಿದ್ದ ಹೊಲದ ಬೆಳೆಗೆ ಸಿಂಪಡಿಸುವ ಕೀಟನಾಶಕವನ್ನು ಆ ಸತ್ತ ಹಸುವಿನ ದೇಹದ ಮೇಲೆಲ್ಲಾ ಹಾಕಿ ಆ ಸ್ಥಳದಿಂದ ಹೊರಟ. ರಕ್ತ ಕುಡಿದ ಮೇಲೆ ಮಾಂಸವನ್ನು ತಿನ್ನದೆ, ಆನಂತರ ಕೆಲವು ಸಮಯ ಕಳೆದ ಮೇಲೆ ಆ ಹುಲಿ ಬಂದು ಮಾಂಸವನ್ನು ತಿನ್ನುತ್ತದೆ ಎಂಬುದು ಮಾರನಿಗೆ ಗೊತ್ತಿತ್ತು.

ಅಂದು ರಾತ್ರಿ ಮಾರ ಆ ವಿಚಾರವನ್ನೇ ಚಿಂತಿಸುತ್ತಾ ಮಲಗಿದ. ಬೆಳಗ್ಗೆ ಬೇಗ ಬೇಗ ರೆಡಿಯಾಗಿ ಮತ್ತೆ ಆ ಸ್ಥಳಕ್ಕೆ ಹಸುಗಳನ್ನು ಹೊಡಕೊಂಡು ಹೋದ. ಆ ಸತ್ತ ಹಸುವಿನ ದೇಹದ ಪಕ್ಕದಲ್ಲಿ ಏನೋ ದೈತ್ಯಾಕಾರದ ಆಕೃತಿ ಬಿದ್ದಿರುವುದು ದೂರದಿಂದ ಆತನಿಗೆ ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಆ ಸ್ಥಳಕ್ಕೆ ಸಮೀಪವಾಗುತ್ತಿದ್ದಂತೆ ಅದು ಹುಲಿ ಎಂಬುದು ಸ್ಪಷ್ಟವಾಗಿ ಆತನಿಗೆ ಗೊತ್ತಾಯಿತು. ಆದರೆ ಮುಂದೆ ಹೆಜ್ಜೆ ಇಡಲು ಆತನಿಗೆ ಧೈರ್ಯ ಬರಲಿಲ್ಲ. ಒಂದು ವೇಳೆ ಆ ಕೀಟನಾಶಕ ಈ ದೈತ್ಯಾಕಾರದ ದೇಹದ ಮೇಲೆ ಯಾವುದೇ ಪರಿಣಾಮ ಬೀರದೆ ಕೇವಲ ತಲೆಸುತ್ತಿ ಬಿದ್ದಂತೆ ಈ ಹುಲಿ ಏನಾದರೂ ಬಿದ್ದಿದ್ದು, ನಾನು ಅದನ್ನು ಸಮೀಪಿಸಿದ ತಕ್ಷಣ ಅದು ಮೈ ಕೊಡವಿಕೊಂಡು ಮೇಲೆ ಎದ್ದರೆ ಆಗ ನನ್ನ ಗತಿ ಏನಾಗಬಹುದು ಎಂದು ದೂರದಲ್ಲೇ ಭಯದಿಂದ ಯೋಚಿಸತೊಡಗಿದ. ಸ್ವಲ್ಪ ಸಮಯ ದೂರದಲ್ಲೇ ನಿಂತು ಅದರ ಚಲನವಲನಗಳೇನಾದರೂ ಆಗಬಹುದೆಂದು ಅದನ್ನೇ ದೃಷ್ಟಿಸುತ್ತಾ ನಿಂತ.

ಆದರೆ ಆತ ಊಹಿಸಿದ ಹಾಗೆ ಅಲ್ಲಿ ಇರಲಿಲ್ಲ. ಹಸುವಿನ ದೇಹವನ್ನು ಮುತ್ತುತ್ತಿದ್ದ ನೋಣಗಳು ಹಾರುತ್ತಾ ಹುಲಿಯ ಬಾಯಿಯತ್ತ ಹಾರಾಡುತ್ತಿದ್ದವು. ಜೋರಾಗಿ ಗಾಳಿ ಬೀಸಿದೊಡನೆ ಗುಯ್ ಎಂದು ಒಮ್ಮೆಲೇ ಮೇಲೆ ಹಾರಿ ಮತ್ತೆ ಅದರ ಬಾಯಿಯ ಮೇಲೆ ಹೋಗಿ ಕುಳಿತುಕೊಳ್ಳುತ್ತಿದ್ದವು. ಇದರಿಂದ ಅದು ಸತ್ತಿರಬಹುದು, ಇಲ್ಲದಿದ್ದರೆ ತಕ್ಷಣವೇ ಆ ನೊಣಗಳ ಝೇಂಕಾರಕ್ಕೆ ಆ ದೈತ್ಯಾಕಾರದ ಹುಲಿ ಪ್ರತಿಕ್ರಿಯಿಸುತ್ತಿತ್ತು ಎಂಬುದಾಗಿ ತನ್ನ ಊಹೆಯನ್ನು ನಿಶ್ಚಯಿಸಿಕೊಂಡು ಅದರ ಹತ್ತಿರ ಹೋಗಿ ನೋಡಿದ. ಒಳಗೊಳಗೆ ಕೈಕಾಲುಗಳಲ್ಲಿ ನಡುಕ ಶುರುವಾಗಿತ್ತು.

ಅದು ಹಿಂದಿನ ರಾತ್ರಿಯಲ್ಲೇ ಹಸುವಿನ ಮಾಂಸವನ್ನು ಸ್ವಲ್ಪ ತಿಂದು ಮುಗಿಸಿತ್ತು. ಆನಂತರ ಕೀಟನಾಶಕದ ಕೆಲಸ ಅದರ ಹೊಟ್ಟೆಯಲ್ಲಿ ಶುರುವಾಗಿ, ಗಂಟಲಿನವರೆಗೂ ಅದರ ಪ್ರಭಾವ ಬೀರಿತ್ತು. ಹೊಟ್ಟೆಯಿಂದ ಗಂಟಲಿನವರೆಗೂ ಸಂಕಟ ಶುರುವಾಗಿ, ಕೆಳಗೆ ಬಿದ್ದು ಒದ್ದಾಡಿದ್ದ ಗುರುತು ನೆಲದಲ್ಲಿ ಮೂಡಿದ್ದವು. ಸಾಯುವಾಗ ಬಹಳ ವೇದನೆಪಟ್ಟು ಸತ್ತಂತೆ ಅದು ಬಿದ್ದಿರುವ ಪರಿಯನ್ನು ನೋಡಿದರೆ ಸ್ಪಷ್ಟವಾಗಿ ಅರ್ಥವಾಗುತ್ತಿತ್ತು. ಈ ಹುಲಿ ಬದುಕಿದ್ದಾಗ ಅನೇಕ ಪ್ರಾಣಿಗಳ ಮೇಲೆ, ಪಶುಗಳ ಮೇಲೆ ಬಿದ್ದು ಅವುಗಳ ಕುತ್ತಿಗೆಯನ್ನ ಆ ಕ್ರೂರವಾದ ಹಲ್ಲುಗಳಲ್ಲಿ ಕಚ್ಚಿ ಎಳೆದುಕೊಂಡು ಹೋಗುವಾಗ, ಜೀವಂತವಾಗಿ ಅವುಗಳ ರಕ್ತ ಹೀರುವಾಗ ಅವುಗಳ ನೋವು ಈ ದೈತ್ಯ ಪ್ರಾಣಿಗೆ ಅರಿವಿಗೆ ಬಂದಿರಲಿಕ್ಕಿಲ್ಲ. ಹಾಗಂತ ನಾವು ಇದರ ಮೇಲೆ ತಪ್ಪು ಹೊರಿಸಿ ಶಿಕ್ಷಿಸುವಂತ ಅಧಿಕಾರ ನಮಗೆ ಇಲ್ಲ. ಎಲ್ಲಾ ಈ ಪ್ರಕೃತಿಯ ಆಹಾರ ಸರಪಳಿಯ ಕ್ರಮ.

ಹುಲಿ ಸತ್ತ ವಿಚಾರ ಊರ ಒಳಗೆಲ್ಲಾ ಹಬ್ಬತೊಡಗಿತು. ಫಾರೆಸ್ಟ್ ಡಿಪಾರ್ಟ್ಮೆಂಟ್ ನವರು ಪೋಲೀಸರೊಡನೆ ಸ್ಥಳಕ್ಕೆ ಬಂದು ಹುಲಿಯ ದೇಹವನ್ನು ಪೋಸ್ಟ್ ಮಾರ್ಟಮ್ ಮಾಡಿ ಅದು ವಿಷವನ್ನ ಸೇವಿಸಿ ಸಾವಿಗೀಡಾಗಿರುವುದನ್ನು ದೃಢಪಡಿಸಿಕೊಂಡರು. ಆದರೆ ಯಾರು ಆ ಸತ್ತ ಹಸುವಿನ ದೇಹದ ಮೇಲೆ ವಿಷವನ್ನು ಸಿಂಪಡಿಸಿ ಈ ಕೃತ್ಯ ಮಾಡಿದ್ದಾರೆ ಎಂಬುದು ಗೊತ್ತಾಗಲಿಲ್ಲ. ರಾಮಾಪುರದಲ್ಲಿ ಯಾರನ್ನು ಕೇಳಿದರೂ ತನಗೆ ಗೊತ್ತಿಲ್ಲ ಎಂಬುದಾಗಿ ಉತ್ತರಿಸುತ್ತಿದ್ದರು. ಎಷ್ಟೇ ಪ್ರಯತ್ನಪಟ್ಟರೂ ಯಾರು ಮಾಡಿದರೆಂಬ ಸತ್ಯವನ್ನು ರಾಮಾಪುರದ ಜನ ಯಾರೂ ಬಿಟ್ಟುಕೊಡಲಿಲ್ಲ.

ಇದಕ್ಕೆ ಕಾರಣ, ಊರಿನವರು ತಮ್ಮ ಸಮಸ್ಯೆಗಳ ಬಗ್ಗೆ ಎಷ್ಟು ಹೇಳಿಕೊಂಡರೂ ಫಾರೆಸ್ಟ್ ಡಿಪಾರ್ಟ್ಮೆಂಟಿನವರು ತೋರಿದ ನಿರ್ಲಕ್ಷ್ಯ ಮತ್ತು ಆ ಹುಲಿಯಿಂದಾಗಿ ಪ್ರಾಣ ಕಳೆದುಕೊಂಡ ವ್ಯಕ್ತಿಗಳ ಮನೆಯವರ ಗೋಳಾಟ, ಮೂಕ ಪ್ರಾಣಿಗಳ ಬಲಿ. ಇವುಗಳೇ ಇಂದು ಮಾರನನ್ನು ಅಪರಾಧಿ ಎಂದು ತೋರಿಸದೆ, ಪೋಲೀಸರು ಎಷ್ಟು ಕೇಳಿದರೂ ಸತ್ಯವನ್ನು ಬಿಟ್ಟುಕೊಡದೆ ಇಡೀ ಊರಿಗೆ ಊರೇ ಮಾರನ ಪರವಾಗಿ ನಿಂತಿತು. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೋಲೀಸ್ ನವರು ಹಿಂತಿರುಗಿ ಹೋದರು. ಊರಿನಲ್ಲಿ ನಿರ್ಭಯದ, ಸಂತೋಷದ ವಾತಾವರಣ ಸೃಷ್ಟಿಯಾಗಿತ್ತು.

ಮಾರ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು, ಎಂದಿನಂತೆ ತನ್ನ ಹಸು ಮೇಯಿಸುವ ಕೆಲಸದಲ್ಲಿ ಶಿಸ್ತಿನ ಸಿಪಾಯಿಯಂತೆ ನಿರತನಾದ.


  • ಶಿವು – ಮೈಸೂರು
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW