ಪ್ರಕಾಶ ರೈ ಅಭಿನಯದ ರಂಗ ಮಾರ್ತಾಂಡ ಸಿನಿಮಾದ ಕುರಿತು ರಂಗಕರ್ಮಿ ಕಿರಣ್ ಭಟ್ ಹೊನ್ನಾವರ ಅವರು ಬರೆದಿರುವ ಒಂದು ಪುಟ್ಟ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ಸಿನಿಮಾ : ರಂಗ ಮಾರ್ತಾಂಡ
ನಿರ್ದೇಶಕ: ಕೃಷ್ಣ ವಂಶಿ
ತಾರಾಗಣದಲ್ಲಿ : ಪ್ರಕಾಶ್ ರಾಜ್, ರಮ್ಯಾ ಕೃಷ್ಣ, ಬ್ರಹ್ಮಾನಂದಂ, ಇತರ ಕಲಾವಿದರಿದ್ದಾರೆ,
ಕುಸುಮಾಗ್ರಜರ ಈ ಮರಾಠಿ ನಾಟಕ ದ ಬಗ್ಗೆ ಅದೆಷ್ಟು ಕೇಳಿದ್ದೆನೆಂದರೆ, ನೋಡಲೇಬೆಂದುಕೊಂಡ ಈ ನಾಟಕ ನೋಡುವ ಅವಕಾಶ ಎಲ್ಲೂ ಸಿಗದೇ, ಅದು ‘ ತೀರಲಾರದ ಬಯಕೆ’ ಗಳ ಲಿಸ್ಟ್ ಗೆ ಸೇರಿಹೋಗಿತ್ತು.
ಹೀಗಿರಲಾಗಿ ಕಾರವಾರದ ಒಂದು ಹಳೇ ಥೇಟರ್ ಗೆ ಮಹೇಶ್ ಮಾಂಜ್ರೇಕರ್ ನಿರ್ದೇಶಿಸಿದ ‘ ನಟಸಾಮ್ರಾಟ್’ ಸಿನಿಮಾ ಬಂದುಬಿಡ್ತು. ಅಂಥದೊಂದು ಸಿನಿಮಾ ಆಗಿದ್ದೂ ನನಗೆ ಗೊತ್ತಿರಲಿಲ್ಲ. ಮೊದಲ ದಿನ ರಾತ್ರೀನೇ ಥಿಯೇಟರ್ ನಲ್ಲಿದ್ದೆ. ಸೊಳ್ಳೆ, ಸೆಖೆಗಳನ್ನೂ ಲೆಕ್ಕಿಸದೇ ಸಿನಿಮಾ ನೋಡಿದ್ದೆ.
ಫೋಟೋ ಕೃಪೆ : google
ಉಫ್! ಅದೆಷ್ಟು ಕಾಡುವ ಸಿನಿಮಾವದು! ಅಭಿನಯದಲ್ಲಂತೂ ನಾನಾ ಪಾಟೇಕರ್, ವಿಕ್ರಮ್ ಗೋಖಲೆ ಪಾತ್ರಗಳೇ ಮೈಮೇಲೆ ಆವಾಹನೆಯಾದಂತೆ ಕಾಂಪಿಟೇಶನ್ ಮೇಲೆ ನಟಿಸಿದ್ದರು. ಸಿಕ್ಕಾಪಟ್ಟೆ ಎಮೋಷನಲ್ ಸಿನಿಮಾದ ಗುಂಗು ವಾರವಾದರೂ ಹೋಗಿರಲಿಲ್ಲ.
ಇವತ್ತು ‘ ಅಮೆಜಾನ್ ಪ್ರೈಮ್’ ನಲ್ಲಿ ‘ ರಂಗ ಮಾರ್ತಾಂಡ’ ನೋಡಿದೆ. ನಟಸಾಮ್ರಾಟ್ ನ್ನ ತೆಲುಗಿನ ರಂಗ ವಾತಾವರಣದ ಹಿನ್ನೆಲೆಯಲ್ಲಿ ಚಿತ್ರಿಸಿದ್ದಾರೆ. ಸಿನಿಮಾ ನಟಸಾಮ್ರಾಟ್ ನಷ್ಟು ಇಂಟೆನ್ಸಿವ್ ಎನಿಸದಿದ್ದರೂ ಪ್ರಕಾಶ ರೈ ಅಭಿನಯ ಅದ್ಭುತ. ಬ್ರಹ್ಮಾನಂದಮ್ ಕೂಡ ಅಷ್ಟೇ ಗಾಢವಾಗಿ ಅಭಿನಯಿಸಿದ್ದಾರೆ. ಸೈಲಂಟ್ ಆಗಿಯೇ ಭಾವಪೂರ್ಣವಾಗಿ ಅಭಿನಯಿಸುವ ರಮ್ಯಕೃಷ್ಣ ತುಂಬ ಇಷ್ಟವಾಗ್ತಾರೆ. ಇಳಯರಾಜ ಸಂಗೀತ ಚೆನ್ನಾಗಿದೆ.
- ಕಿರಣ್ ಭಟ್ ಹೊನ್ನಾವರ – ಹಿರಿಯ ರಂಗಕರ್ಮಿ, ನಿರ್ದೇಶಕರು