ಬದುಕಲು ಧೈರ್ಯ ತೋರಿಸಿ

ಸವಾಲನ್ನು ಎದುರಿಸಲಾಗದಷ್ಟು ಸೂಕ್ಷ್ಮ ಮನಸ್ಥಿತಿ ಇಂದಿನ ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಇದು ಶಿಕ್ಷಣ ಸಂಸ್ಥೆಗಳಿಗೆ, ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ. ಶಿಕ್ಷಕರ ವರ್ತನೆಯಿಂದ ಬೇಸತ್ತು ಇಂದಿನ ಮಕ್ಕಳು ತಮ್ಮ ಬದುಕನ್ನೇ ಕೊನೆಗೊಳಿಸಲು ಮುಂದಾಗುತ್ತಿದ್ದಾರೆ ಯಾಕೆ ? ತಪ್ಪು ಯಾರದು??. ಅಶ್ವಿನಿ ಕುಲಕರ್ಣಿ ಅವರ ಒಂದು ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

ಒಂದು ದೊಡ್ಡ ಕೊನೆಯ ಪತ್ರ .

ಆ ಪತ್ರದಲ್ಲಿ ತಂದೆ ತಾಯಿಗಳಿಗೆ, ಅಣ್ಣನಿಗೆ ಕುಟುಂಬಕ್ಕೆ ಕ್ಷಮೆ ಯಾಚಿಸಿದ ಹುಡುಗ. ತಾನು ಹೀಗೆ ನಿಷ್ಪ್ರಯೋಜಕನಾಗಿ ಕುಟುಂಬಕ್ಕೆ, ತಂದೆ ತಾಯಿಗೆ ಒಳ್ಳೆಯ ಹೆಸರು ತಾರದ ಮಗನಾಗಿದ್ದಕ್ಕೆ ಬೇಸರ ಜೊತೆಗೆ ಓದುತ್ತಿದ್ದ ಶಾಲೆಯ ಶಿಕ್ಷಕರ ಕುರಿತು ಆ 16ರ ಹುಡುಗನ ಬೇಸರ, ಹತಾಶೆ , ಸಿಟ್ಟು, ಆಕ್ರೋಶ .
ದಿನವು ಶಾಲೆಯಲ್ಲಿ ಟೀಚರ್ಸ್ ತನ್ನನೇ ಟಾರ್ಗೆಟ್ ಮಾಡ್ತಾರೆ . ಶಾಲೆಗೆ ಹೋಗುವುದೇ ಹಿಂಸೆ ಆಗುತ್ತೆ ನನಗೆ ಬೇರೆ ಇನ್ನೊಂದು ದಾರಿಯೇ ಉಳಿದಿಲ್ಲ ಹೀಗಾಗಿ ನನಗೆ ಆತ್ಮಹತ್ಯೆ ಒಂದೇ ದಾರಿ. ನನ್ನ ಸಾವಿನ ನಂತರ ನನ್ನ ಯಾವ ಅಂಗಾಂಗಗಳು ಪ್ರಯೋಜಕ ಸ್ಥಿತಿಯಲ್ಲಿ ಇರುತ್ತಾವೋ ಅವುಗಳನ್ನು ದಯವಿಟ್ಟು ದಾನ ಮಾಡಿ.

ಹೀಗೊಂದು ಪತ್ರ ಬರೆದು ದೆಹಲಿ ಮೆಟ್ರೋ ಸ್ಟೇಷನ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಹದಿನಾರರ ಹುಡುಗ ಶೌರ್ಯನ ಈ ಘಟನೆ ನಿಜಕ್ಕೂ ಬಹಳಷ್ಟು ಬೇಸರ ಆತಂಕ ಉಂಟುಮಾಡಿದೆ. ಹೀಗಾದ್ರೆ ಹೇಗಪ್ಪಾ ಎಂಬ ಚಿಂತೆಗೆ ನೂಕಿದೆ.

ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.

ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.

ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ

ಆಗಲಿ ಮಹಾಪ್ರಸಾದವೆಂದೆನಯ್ಯಾ.

ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ

ಆಗಲಿ ಮಹಾಪ್ರಸಾದವೆಂದೆನಯ್ಯಾ

ಗುಹೇಶ್ವರಾ, ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು.

ಗುರು ಶಿಷ್ಯನನ್ನು ದಂಡಿಸುವುದು ಬುದ್ಧಿ ಹೇಳುವುದು ಪರಂಪರಾಗತವಾಗಿ ನಡೆದುಕೊಂಡ ಬಂದ ಪದ್ಧತಿಯೇ ಸರಿ. ಆದರೆ ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಗುರು-ಶಿಷ್ಯರ ಸಂಬಂಧಗಳು ಬದಲಾಗುತ್ತಿವೆ. ಶಿಕ್ಷಣದ ರೀತಿ ನೀತಿಗಳು ಸಹ ಬದಲಾಗುತ್ತಿವೆ ಮತ್ತು ಕಾಲಾಯ ತಸ್ಮೈ ನಮಃ ಎಂಬಂತೆ. ಕಾಲಕ್ಕೆ ಅನುಗುಣವಾಗಿ ಬದಲಾವಣೆಯನ್ನು ರೂಡಿಸಿಕೊಳ್ಳಲೇಬೇಕು. ಇದು ಕಲಿಯುಗ ಅದರಲ್ಲೂ ಈಗ ಬದಲಾಗುತ್ತಿರುವ ಮಕ್ಕಳ ಮನಸ್ಥಿತಿ , ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತಿರುವ ಯಾವುದನ್ನು, ಎದುರಿಸಲು ತಡೆದುಕೊಳ್ಳಲು ಸಾಧ್ಯವಾಗದ ಈಗಿನ ಮಕ್ಕಳಿಗೆ ಶಿಕ್ಷಣ ಕೊಡುವುದು ಈಗಿನ ಶಾಲೆಗಳು ಹಾಗೂ ಶಿಕ್ಷಕರಿಗೆ ದೊಡ್ಡ ಸವಾಲು.

ಶಾಲೆ ಬೇಸರವಾಗುವಷ್ಟು, ಶಿಕ್ಷಕರ ವರ್ತನೆಯಿಂದಲೇ ಬದುಕೇ ಕೊನೆ ಮಾಡಿಕೊಳ್ಳುವಷ್ಟು ದೊಡ್ಡ ನಿರ್ಧಾರ ಈ ಹುಡುಗ. ತೆಗೆದುಕೊಂಡಿದ್ದಾದರೂ ಯಾಕೆ? ತಾನು ಅತ್ತರು ಅದು ನಾಟಕ, ಬೇಸರವಾದರೂ ಅದು ಸೀನ್ ಕ್ರಿಯೇಟ್ ಮಾಡೋದು ಎಂಬ ತಾತ್ಸಾರ, ಸಹಪಾಠಿಗಳ ಮುಂದೆ ಹೀಯಾಳಿಸುವುದು, ಹುಡುಗನ ಅಂತಃಶಕ್ತಿಯನ್ನೇ ಕುಗ್ಗಿಸುವಂತಹ ವರ್ತನೆ ಮಾತುಗಳು ಯಾವ ಶಿಕ್ಷಕರಿಗೆ ತಾನೇ ಭೂಷಣ? . ಪ್ರತಿ ವಿದ್ಯಾರ್ಥಿಯು ವಿಭಿನ್ನ.. ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯವು ವಿಭಿನ್ನ ಎಂಬ ತೀರಾ ಸಾಮಾನ್ಯ ತಿಳುವಳಿಕೆ ಈಗಿನ ಶಿಕ್ಷಕರಿಗೆ ಯಾಕೆ ಇಲ್ಲ? (ಪೋಷಕರಿಗೂ ಸಹ) ಈಗಿನ ಮಕ್ಕಳ ಮನಸ್ಥಿತಿ ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಮಕ್ಕಳೊಡನೆ ವರ್ತಿಸುವುದನ್ನು ಶಿಕ್ಷಕರು ಮರೆಯಬಹುದೆ? ತೀರಾ ಸಣ್ಣ ವಿಷಯಗಳಿಗೂ ದೊಡ್ಡ ನಿರ್ಧಾರ ಕೈಗೊಳ್ಳುತ್ತಿರುವ ಇಂದಿನ ಮಕ್ಕಳನ್ನು ಮಾನಸಿಕವಾಗಿ ಸದೃಢರಾಗಿ ಸಶಕ್ತರನ್ನಾಗಿ ಮಾಡುವುದೇ ಇಂದಿನ ದೊಡ್ಡ ಅಗತ್ಯ ಎಂದು ನಿಮಗನಿಸುತ್ತಿಲ್ಲವೇ? ಇಲ್ಲಿ ಯಾರ ತಪ್ಪು? ತಿದ್ದಿಕೊಳ್ಳಬೇಕಾದವರು ಯಾರು? ಸುಧಾರಿಸ ಬೇಕಾಗಿರುವುದು ಏನನ್ನು? ಇನ್ನು ಜೀವನ ದೊಡ್ಡದಿದೆ ಎಂಬುದನ್ನು ಮರೆತು ಇಂತಹ ಬೇಡದ ನಿರ್ಧಾರ ತೆಗೆದುಕೊಂಡಹುಡುಗನದ್ದಾ? ಮಕ್ಕಳು ಶಾಲೆಯ ಬಗ್ಗೆ ಶಿಕ್ಷಕರ ಬಗ್ಗೆ ತಮ್ಮ ಸಮಸ್ಯೆಗಳ ಬಗ್ಗೆ ಬಂದು ತಂದೆ ತಾಯಿಗಳು ಬಳಿ ಹೇಳಿದಾಗ ಮಕ್ಕಳ ದೃಷ್ಟಿ ಕೋನದಿಂದಲೂ ಯೋಚಿಸದೆ ಮಕ್ಕಳದೇ ತಪ್ಪು ಎಂದು ನಿರ್ಧರಿಸಿ ಬಿಡುವ ಪೋಷಕರದಾ ?
ಇಲ್ಲ ಕೇವಲ ಮತ್ತು ಕೇವಲ ಒಳ್ಳೆಯ ಅಂಕ ತರುವ ಮಕ್ಕಳಷ್ಟೇ ತಮ್ಮ ಫೇವರೆಟ್, ತಮ್ಮ ಶಾಲೆಯ ಭವಿಷ್ಯ, ಉಳಿದವರು ಯಾತಕ್ಕೂ ಪ್ರಯೋಜನವಿಲ್ಲದವರು ಎಂದು ನಿರ್ಧರಿಸುವ ಮತ್ತು ಹುಡುಗನ ವರ್ತನೆ ಅವನ ಮಾನಸಿಕ ಸಮಸ್ಯೆ, ಇವೆಲ್ಲ ತಮ್ಮ ಕೆಲಸವೇ ಅಲ್ಲ ಎಂದುಕೊಳ್ಳುವ ಶಿಕ್ಷಕರದ್ದಾ ?? ತಪ್ಪು ಯಾರದು???


  • ಅಶ್ವಿನಿ ಕುಲಕರ್ಣಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW