ತಮಗೆ ಸಿಕ್ಕ ರಜೆಯನ್ನು ವ್ಯರ್ಥ ಮಾಡದೇ ವೆಂಕಟೇಶ್ವರನ ದರ್ಶನಕ್ಕಾಗಿ ಚಿಕ್ಕತಿರುಪತಿಗೆ ಹೋದ ಅನುಭವವನು ಲೇಖಕಿ ಬಿ.ವಿ.ಅನುರಾಧ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಎರಡು ಪೂಜೆಗಳು ಸಂಪನ್ನಗೊಳಿಸಿದ ಸಂತೃಪ್ತಿ. ಕಾರ್ತೀಕ ಪೌರ್ಣಮಿ ದಿನ ಶಿವಾಲಯದಲ್ಲಿ ಹಣತೆ ಹಚ್ಚುವ ಕಾರ್ಯಕ್ರಮ. ಆ ಸಾಲು ಸಾಲು ದೀಪಗಳನ್ನು ಹಾಗೆ ನೋಡ್ತಾ ಇರೋದೆ ಮನಸ್ಸಿಗೆ ಬಲುಹಿತಕರ. ದೀಪ ಹಚ್ಚುವುದೆಂದರೆ ಬರಿ ದೀಪ ಬೆಳಗುವುದಷ್ಟೇ ಅಲ್ಲ. ಮನೆಯೆಲ್ಲಾ ಶುದ್ದೀಕರಣಗೊಳಿಸುವುದೇ ಒಂದು ಸಂಭ್ರಮ. ಮೇಲಿನ ಜೇಡರಬಲೆ, ಕಿಟಕಿ ಬಾಗಿಲು ಸ್ವಚ್ಛ, ಮಂಚ ದಿವಾನುಗಳ ಹೊದಿಕೆ ಬದಲಿಕೆ, ಸೋಫಾ ಚೇರುಗಳ ದೂಳು ಹೊಡೆದು ಪಳಪಳಿಸುವ ಕವಚಗಳು ತೊಡಿಸಿ, ಅರಶಿನದಲ್ಲಿ ಹೊಸ್ತಿಲು ತೊಳೆದು, ಕುಂಕುಮ ಹಚ್ಚಿ, ಹೂ ಜೋಡಿಸಿ, ಕರ್ಪೂರ ಹಚ್ಚಿ, ದೀಪ ಬೆಳಗಿಸಿ ಹಾಗೆಯೇ ನಿಂತೊಮ್ಮೆ, ಕುಳಿತೊಮ್ಮೆ, ಒಳಗಿಂದೊಮ್ಮೆ, ಹೊರಬಂದೊಮ್ಮೆ, ಆ ಓರೆಯಲ್ಲೊಮ್ಮೆ ಈ ಕೋರೆಯಲ್ಲೊಮ್ಮೆ ಮತ್ತಮತ್ತೆ ನೋಡುವುದರಲ್ಲೇನೋ ಮನಕ್ಕೊಂದು ಮುದವಾದ ಅನುಭವ ಆನಂದಮಯ.

ಆ ಬಳಿಕ ಮತ್ತೊಂದು ಮಹತ್ತರ ಕೆಲಸ ದೇವರ ಸಾಮಾನೆಲ್ಲ ತೊಳೆದು, ಒರೆಸಿ, ದೇವರ ಮನೆಯೂ ಶುಭ್ರಗೊಳಿಸಿ, ಮತ್ತೊಮ್ಮೆ ಎಲ್ಲವನ್ನು ಜೋಡಿಸಿಟ್ಟು ನಾಮ ಹಚ್ಚಿ, ಹೂ ಪೋಣಿಸಿ ದೀಪ ಬೆಳೆಗಿದರೆ ನೋಡಕ್ಕೆರಡು ಕಣ್ಣು ಸಾಲದು. ಅದೊಂದು ರೀತಿ ಮನಸ್ಸಿಗೆ ಅಹ್ಲಾದಕರ. ಇಷ್ಟರ ನಡುವೆ ಮೊಮ್ಮಗಳಿದ್ದರೆ, ನಾನೊಂದು ಕಡೆ ಜೋಡಿಸಿದರೆ, ಅವಳೊಂದು ಕಡೆ ಅವಳದೇ ದಾಟಿಯಲ್ಲಿ, ಭಾಷೆಯಲ್ಲಿ ನನ್ನೊಂದಿಗೆ ಪೋಟಿಗಿಳಿದು, ಮಾತಿಗೂ ಇಳಿದು ಕೆದಕುತ್ತಾ, ಚಿವುಟುತ್ತಾ ಬರುವಳನ್ನು ಪ್ರೀತಿಯಿಂದ ಕಿರುಚುತ್ತಾ, ಅರಚುತ್ತಾ, ಓಡಿಸುತ್ತಾ ಮಾಡುವ ಕೆಲಸಗಳಲ್ಲಿ ಅದೇನು ಸಂಭ್ರಮವೋ ಆ ದೇವರೇ ಬಲ್ಲ. ಆದರೂ ಅದೆಲ್ಲಾ ಹೆಂಗಳೆಯರಿಗೆ ಬೇಕೆ ಬೇಕು ಅನಿಸುತ್ತೆ ಈ ಮನಸ್ಸು.
ಕೈನೋವು, ಮಂಡಿನೋವು, ಕಾಲು ನೋವಾದರೂ ನಮ್ಮದೇ ಆದ ಇಷ್ಟದ ಕೆಲಸಗಳನ್ನು ನಾವು ಬಿಟ್ಟೇವಾ ಬಿಡೆವು. ಮಾಡಲು ಹಿಂದೆಯೂ ಬೀಳೆವು. ಅವೆಲ್ಲವೂ ನಮ್ಮ ಜನ್ಮಸಿದ್ಧ ಹಕ್ಕುಗಳೆಂಬಂತೆ ಮಾಡುವುದರಲ್ಲಿಯೇ ನಮಗೊಂದು ಸಂತೃಪ್ತಿ ಮನಸಿಗೆ ಸಮಾಧಾನ.
ಈ ಕಾರ್ತೀಕವನ್ನೂ ಹೇಗೋ ಹಾಗೂ ಹೀಗೂ ಅಮ್ಮ ಹೊಸೆದು ನೆನೆಸಿಕೊಟ್ಟ ಬತ್ತಿಗಳನ್ನು ಆ ಶಿವಾಲಯದ ಭಕ್ತಸಾಗರದ ಸಾಲುಸಾಲು ದೀಪಗಳಲ್ಲಿ ನನ್ನದೂ ಒಂದು ಹಣತೆ ಹಚ್ಚಿಟ್ಟು, ಶಿವನೆದುರಿಗೆ ಸಾಷ್ಟಾಂಗ ನಮಸ್ಕರಿಸಿ, ಎಲ್ಲರಿಗೂ ಒಳ್ಳೆಯದನ್ನೇ ಮಾಡು, ಒಳ್ಳೆಯ ಬುದ್ದಿಯನ್ನೇ ಕೊಡು, ಎಲ್ಲರ ಹೊಟ್ಟೆ ಹಸಿವು ನೀಗಿಸು ಎಂದು ಶಿವಪ್ಪನ ಕಿವಿಯಲ್ಲಿ ಪಿಸುಗುಟ್ಟಿ, ಕೈಕಾಲು ಬಿಗಿಹಿಡಿದು ಪ್ರಸಾದವನ್ನೂ ಪಡೆದುಬಂದೆ. ಅಂತೂ ಸಂಜೆ ಆರಕ್ಕೆ ಕಾರ್ತೀಕ ದೀಪೋತ್ಸವ ಸಂಪನ್ನಗೊಳಿಸಿದೆ.

ಅಲ್ಲಿಂದ ಬಂದು ಮಗಳ ಮನೆಯತ್ತ ಓಡುವ ಆತುರಕಾತುರ. ಮೊಮ್ಮಗಳೊಂದಿಗೆ ರಾತ್ರಿ 12ರವರೆಗೂ ಅಮ್ಮಾಮ್ಮಾ ಬಾ, ಅಮ್ಮ ತಾ, ಅಮ್ಮ ಕೋ, ಅಮ್ಮ ಬೇ, ಅಮ್ಮ ಪಾಪ, ಅಮ್ಮ ಮಾಮ ಚಿಟಿ, ಹೊಡಿ, ಕಾವ, ಪಾಪಚ್ಚಿ ಹೀಗೆ ಅವಳ ತೊದಲು ಭಾಷೆ, ಪುಟ್ಟಪುಟ್ಟ ಹೆಜ್ಜೆಗಳಲ್ಲಿ ಮೈಮರೆಯುವಷ್ಟು ಆಟವಾಡಿ ಅವಳ ಬಿಗಿಯಪ್ಪುಗೆಯಲೊಂದು ಸೊಂಪಾದ ಸವಿನಿದ್ದೆ.
ಮಾರನೇ ದಿನಕ್ಕೆ ಮನೆದೇವರು ಚಿಕ್ಕ ತಿರುಪತಿಗೆ ಹೋಗುವ ಕಾರ್ಯಕ್ರಮ. ಮಗಳದ್ದು ಗಂಡನ ಬಳಿ ಥೈಲ್ಯಾಂಡ್‌ಗೆ ಹೋಗುವ ಸಿದ್ದತೆ. ಅವಳು ಬರಲಾಗಲಿಲ್ಲ. ನಾನು, ತಂಗಿ, ಅಮ್ಮ, ತಂಗಿಯ ಮಗಳೊಂದಿಗೆ ವೆಂಕಟೇಶ್ವರನ ದರ್ಶನಕ್ಕೆ ಅಣಿಯಾಗಬೇಕಲ್ಲಾಂತ ಮಗಳ ಮನೆಯಿಂದ, ತಂಗಿ ಮಗಳ ಮನೆಗೆ 10 ನಿಮಿಷದ ಪ್ರಯಾಣ ಕ್ಯಾಬ್ ಹತ್ತಿಯೇ ಬಿಟ್ಟೆ. ಅಮ್ಮ ತಂಗಿಯೊಂದಿಗೆ ಮಧ್ಯಾನ್ಹದವರೆಗೂ ಹರಟೆ ಹರಟೆ. ಊಟ, ತಿಂಡಿ, ಕಾಫಿ. ಅಮ್ಮನಿಗೊಂದು ಖುಷಿ ಹೆಣ್ಮಕ್ಕಳಿಬ್ಬರೂ ಇಂದು ನನ್ನೊಟ್ಟಿಗೆಂದು. ಆಗಾಗ ಮಗನ ನೆನೆದು ಸಪ್ಪೆ ಮೋರೆ ಹಾಕಿ ತುಟಿಪಿಟಿಕ್ಕೆನ್ನದೆ ಮಲಗುವ ಅಮ್ಮನಿಗೆ ನಾನು ತಂಗಿ ಇಬ್ಬರು ಹೀಗೊಂದು ಖುಷಿಯ ಮುಲಾಮು ಹಚ್ಚಿಕೊಡುವೆವು. ಅಮ್ಮನಿಗೆ ಮಕ್ಕಳು, ಮರಿ ಮಕ್ಕಳಿದ್ದರೆ ಅದೇ ಸ್ವರ್ಗ. ಆ ಮಕ್ಕಳೊಂದಿಗೆ ಮಗುವಾಗಿ ಮಕ್ಕಳ ಆಲನೆ, ಲಾಲನೆ, ಪಾಲನೆಯಲ್ಲಿ ತನ್ನನ್ನು ತಾ ಮರೆತು, ನಮ್ಮ ಬಾಲ್ಯವನ್ನೂ ಅವರ ಲೀಲೆಗಳಲ್ಲಿ ನೆನೆದು ಈ ಬದುಕಿಗಿಷ್ಟು ಸಾಕೆಂಬಷ್ಟು ನೆಮ್ಮದಿ.

ಅಂತೂ ಚಿಕ್ಕ ತಿರುಪತಿಗೆಂದು ಮಧ್ಯಾಹ್ನಕ್ಕೆಲ್ಲಾ ಹೊರಟೆವಾ, ಮಧ್ಯದಾರಿಯಲ್ಲಿ ಯಾವುದೋ ಒಂದು ಹಳ್ಳೀಲಿ ಕನ್ನಡ ರಾಜ್ಯೋತ್ಸವದ ಸಡಗರ. ಬಸ್ಸು, ಕಾರು, ಲಾರಿ ಎಲ್ಲಾ ವಾಹನಗಳು ಸಾಲುಗಟ್ಟಿ ಗಂಟೆಗಟ್ಟಲೇ ಅತ್ತಲೂ ಹೋಗದು, ಇತ್ತಲೂ ಬರುವದು. ಇಳಿದು ನೋಡೋಣವೆಂದರೂ ಆ ಸಣ್ಣ ರಸ್ತೆಯಲ್ಲಿ ಇಳಿದರೆ ಬೀಳುವುದು ಚರಂಡಿಗೆ. ಹೇಗೋ ಮುಂದಿನ ಬಸ್ಸಿನವರು ಸಾಹಸ ಮಾಡಿ ಪಕ್ಕದ ಖಾಲಿ ಹೊಲದೊಳಗೆ ಬಸ್ಸು ನುಗ್ಗಿಸಿದರೋ ಇಲ್ಲವೋ ಟೆಂಪೋಗಳು, ಕಾರುಗಳು ನಾ ಮುಂದು ತಾ ಮುಂದು ಅಂತ ನುಗ್ಗಿದ್ದೇ ನುಗ್ಗಿದ್ದು ಮುಂದುಮುಂದಕ್ಕೆ. ಅತ್ಲಾಗೆ ನಮ್ಮದೂ ಒಂದಿರಲಿ ಅಂತ ನಾವು ನಮ್ಮ ಕಾರು ನುಗ್ಗಿಸಿದೆವು. ಹೇಗೋ ಸಂಜೆಯಾಗುವುದರೊಳಗೆ ದೇವಸ್ಥಾನದ ಅಂಗಳ ಸೇರಿಕೊಂಡೆವು. ವಾನರಸೇನೆಯ ಆತ್ಮೀಯ ಸುಸ್ವಾಗತ. ಹೆದರುತ್ತಲೇ ಪೂಜೆ, ಅರ್ಚನೆ, ದರ್ಶನ ಎಲ್ಲಾ ಮುಗಿಸಿ ಹೊರ ಬಂದರೆ, ಅದೆಲ್ಲಿವೆಯೋ ಆ ಮಂಗಗಳು ಮೈಮೇಲೆಯೇ ಬಂದುಬಿಡುವುದಾ. ತಪ್ಪಿಸಿಕೊಂಡು ಹೊರ ಬಂದು ಒಂದೆರಡು ಫೋಟೋ ಕ್ಲಿಕ್ಕಿಸದಿದ್ದರೆ ಹೇಗೆಂದು ಅಮ್ಮನೊಟ್ಟಿಗೆ ಎರಡು ಫೋಟೋ ಕ್ಲಿಕ್ಕಿಸಿಕೊಂಡು ಅಂತೂ ಸಂಜೆ 7 ಗಂಟೆಯೊಳಗೆ ತಂಗಿ ಮಗಳ ಮನೆ ತಲುಪಿ ಒಂದು ಶುಗರ್‌ಲೆಸ್ ಕುಡಿದು, ನನ್ನ ಮಗಳ ಮನೆಯತ್ತ ಹೊರಟಿವಿ ತಂಗಿ, ನಾನು ಅಮ್ಮ. ಅವಳ ಪ್ಯಾಕಿಂಗ್‌ಗೆ ಸ್ವಲ್ಪ ಹೆಲ್ಪ್ ಮಾಡಿ ಎರಡು ದಿನಗಳನ್ನು ಸಾರ್ಥಕ್ಯ ಮಾಡಿದೆ. ಹೇಗಿದೆ ಒಂದರೆಕ್ಷಣವೂ ವ್ಯರ್ಥ ಮಾಡದ ನನ್ನ ಬ್ಯುಸಿ ಷೆಡ್ಯೂಲ್. ಅಂತೂ ಬೆಳಗ್ಗೆ ನಮ್ಮನೆಯವರು ನನ್ನತ್ತೆಗೆ ತಿಂಡಿ ಕೊಟ್ಟು ಹೋದರೆ, ಮಧ್ಯಾನ್ಹ ಊಟ ಕೊಡಲಿಕ್ಕೆ ಮತ್ತೆ ನಾನು ನನ್ನ ಪೆವಿಲಿಯನ್‌ಗೆ ವಾಪಸ್ ಸೇರಿಕೊಂಡೆ.
- ಬಿ.ವಿ.ಅನುರಾಧ
