‘ನನ್ನ ಬಾಳಿನಲಿ’ ಕವನ – ಶಿವದೇವಿ ಅವನೀಶಚಂದ್ರ

ಮರಳಿ ಬಾರದ ಸಿರಿಯು, ಕಳೆದ ಬಾಲ್ಯದ ನೆಲವು, ಭವ್ಯ ಜೀವಿತಕೆ ತಳಹದಿಯು… ಇರಲಿ ಎಂದೆಂದಿಗೂ ಈ ನೆನಪಿನ ಸವಿಯು…ಕೊಡಗಿನ ಕವಿಯತ್ರಿಯರಾದ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ… 

ಮಲ್ಲಿಗೆಯ ಹಂದರದಿ
ಚೆಲ್ಮುಗುಳು ಹರಿದಾಡಿ
ಕೈಬೀಸಿ ಕರೆದಿತ್ತೋ
ಹೂಮನಗಳ ಶಾಲೆಯಂಗಳದಿ

ಅಲ್ಲಿ ಕೆರೆ ದಡದಲ್ಲಿ
ಹಿಂದೆ ಮೈದಾನದಲಿ
ಮಕ್ಕಳ ಕೇಕೆಯಲಿ
ಆಗಿತ್ತು ಶಾಲೆ ಸಂಪನ್ನ ನೆಲೆ

ಎದುರಿನಾಲದ ಮರವು
ಸಂತೆ ಬಯಲು
ಹಸಿರು ಚಾದರ ಹೊದ್ದ
ಗದ್ದೆ ನಳನಳಿಸಲು

ಶಾಲೆಯೆದೆ ತೆರೆದರೆ
ಊರ ಹೃದಯ
ಬಸವೇಶ್ವರ ದೇಗುಲ
ದೂರದಲಿ ಸೂಳೆ ಕಡವು

ಎಡದಿ ನಮ್ಮಯ ವಸತಿ ಕೊಪ್ಪಲಿನಲಿ
ಊರ ಮುಂದಿನ ಹನುಮ
ದಾಟಿ ಹೋದರೆ ಅಲ್ಲೆ ಬಲದಿ
ನನ್ನ ಮನೋವಿಹಾರಿಣಿ ಕಾವೇರಿ ಅಮ್ಮ

ದವಸ ಧಾನ್ಯದ ಕಣಜ
ನಮ್ಮ ಜಿಹ್ವೆಗೆ ಹಸಿ ಭೋಜ್ಯ
ಊರ ರೈತರ ಪ್ರೀತಿಮಾತಿನ
ರಸಖಾದ್ಯ

ನಮ್ಮಪ್ಪ ಸಾಕಿದ ಹಸು ಎಮ್ಮೆಗಳ
ಮೇವಿನ ಬಯಲು ಕಲ್ಮಂಟಿ
ನನ್ನ ವಿಹಾರದ ತಾಣ ಅಲ್ಲಲ್ಲಿ
ಬೆಟ್ಟ ಕಾಡು ಭಾವಕಂಟಿ

ತೊರೆಯ ದಡದಲ್ಲಿ
ಕಾಡುಗುಲಾಬಿಯ‌ ಸಾಮ್ರಾಜ್ಯ
ಏನೇನೋ ಕತೆಯಲ್ಲಿ
ಸೇರಿಹೋದ ರಾಜಕುಮಾರಿಯ ಭಾಗ್ಯ

ಊರ ಬೀದಿಯ ತುಂಬ ಎದೆ ಕನ್ನಡಿಸಿದ
ಹಸಿರು ಪ್ರೀತಿಯ ಬಿಂಬ
ನೀರ ತರುವ ನೀರೆಯರ ಬಳುಕಿನ ಜಾನಪದ ಪಡಿಬಿಂಬ
ಹಿರಿಬಾಲೆಯ ಹೊರಗೆ ಬೆಂಗಾವಲಾಗಿ ಕಾಯುವ ದೇವತೆ ಬನಶಂಕರಿ
ಊರಹಬ್ಬದ ಸಂಭ್ರಮಕೆಲ್ಲ ಕಾರಣ ಅವಳ ಮೇಲಿನ ಭಕ್ತಿಯ ಐಸಿರಿ

ಹಣ್ಣಿನ ಹಿತ್ತಲು ನಮ್ಮ ಸ್ವಾಗತಕೆ ಎತ್ತಲು
ಸಂಪಿಗೆ ಮರದ ಕೊಂಬೆಯ ಪೀಠ ನನ್ನ ಅಧ್ಯಯನದ ಪರ್ಣಕುಟಿಯಾಗಿರಲು
ನದೀತಟದ ಪಾಳು ಗುಡಿಯೂ ನನ್ನ ಕೌತುಕದ ದಿಟ್ಟಿಗೆ ಮೀಸಲು
ಬೇಲ ಬಿಲ್ವ ಹುಣಸೆ ಮಾವು ಸೀಬೆಗಳೆಲ್ಲ
ಹಣಬೇಡದೆ ಜಿಹ್ವೆಯ ತಣಿಸಲು

ಊರ ಹೊರಗೆ ಆಸ್ಪತ್ರೆಯ ದಿಬ್ಬದ ಮೈದಾನದಲ್ಲಿ
ಆಗಾಗ ನಮ್ಮ ಕಾಯುವ ವೀರಯೋಧರ ಕವಾಯತು ಶಿಬಿರ
ಭಾಷೆಯರಿಯದ ಮುಗುದರಿಗೆ ಅವರು ಭಯ ಮಿಶ್ರಿತ ಪ್ರವರ
ಹಿಂದಿ ಕಲಿತ ನಮಗೆ ಅವರು ನೆತ್ತರಬಂಧ ಮೀರಿದ ಅನುಬಂಧದ ಆಗರ

ಊರಿಗೆ ಬಂದ ಹೊರ ಊ ರಿನ ಅಕ್ಷರಸ್ಥರೆಲ್ಲ
ನಮ್ಮ ಜನ್ಮಜಾತ ಬಂಧುಗಳೆ ಎಲ್ಲಾ
ಅಕ್ಕರವರಿಯದ ಜನರಿಗೆ ನಾವು ಓಲೆಪತ್ರಗಳನೋದಿ ತಿಳಿಸುವ ದೀಪವಾದೆವಲ್ಲ
ಹುಟ್ಟಿದೆವು ನಾವು ಸೇವೆಗಾಗಿ ಎಂಬ ಭಾವಗಳ ಅಂಕುರ
ಮುನ್ನಡೆದಿದೆ ಈಗಲೂ ನೆರಳಾಗಿ ಆ ಹೊಂಗೆಯ ಮರ

ನಾನು ಓದಿದ ಶಾಲೆಗಳು
ನನ್ನ ಗುರುಗಳು ನನ್ನ ಶಿಕ್ಷಕ ತಂದೆ
ಅವರು ಪ್ರೀತಿಸಿದ ಅವರ ಶಿಷ್ಯ ಬಳಗ
ಪ್ರತಿ ಮನೆಯೂ ನಮ್ಮದೇ ಎನಿಸಿ
ಬೆಸೆದ ಪ್ರೀತಿಯ ಬಂಧ
ಅನ್ಯರೆನಿಸಲಿಲ್ಲ ನಮಗೆ ಏರಲು ಭಾವೈಕ್ಯದೇರಿಗೆ ಯಾರೂ

ನಾನು ಎಂಬ ಅಹಮಿಕೆಯಿನಿತಿಲ್ಲ
ನಾವೆಂಬ ಲೋಕದಲಿ
ಎಲ್ಲಾ ಮಾಮಂದಿರು ಅಮ್ಮಂದಿರಾಗಿರಲು
ಅಕ್ಕತಂಗಿಯರಂತೆ ಒಡನಾಟವಿರಲು ನನ್ನ ಬಾಲ್ಯದ ಜಗವೆ ಎಲ್ಲಕ್ಕು ಮಿಗಿಲು

ನನ್ನದೀ ಜಗವಿಲ್ಲಿ ನನ್ನೊಡಹುಟ್ಟುಗಳ ಸಹಬಾಳ್ವೆಯಲ್ಲಿ
ಹಸುಗೂಸಿನಂತೆ ಮುಗ್ಧ ಮನಸಿನ
ಅಮ್ಮನ ಒಲವಿನಲಿ
ಹಬ್ಬಿದೆವು ತಬ್ಬಿದೆವು ಸಂಸ್ಕೃತಿಯ ಆಲವ
ಹೀರಿದೆವು ಹಳ್ಳಿಪರಿಸರದ ದಿವ್ಯ ಜೀವನಾನುಭವಗಳ ಸಾರವ

ಮರಳಿ ಬಂದಿಹೆನಿಲ್ಲಿ
ಬಹು ದೀರ್ಘಕಾಲದಲಿ
ನೆನಪಿನ ದೀಪಾಂಜಲಿ ಬದ್ಧವಾಗಿ
ಮನದ ಪರದೆಯ ಮೇಲೆ ಮೂಡಿದೆ ಸಾಲು ಚಿತ್ರಗಳ ಮಾಲೆ
ಬರೆಯುತಿದೆ ಮನ ಗತದ ಮಹಾಕಾವ್ಯದೋಲೆ

ಮರಳಿ ಬಾರದ ಸಿರಿಯು
ಕಳೆದ ಬಾಲ್ಯದ ನೆಲವು
ಭವ್ಯ ಜೀವಿತಕೆ ತಳಹದಿಯು
ಇರಲಿ ಎಂದೆಂದಿಗೂ ಈ ನೆನಪಿನ ಸವಿಯು…

ಬಾಳಿ ಬಾಳಿಸಿದವರಿಲ್ಲಿ ಆಳುತಿಹರು ಪ್ರೀತಿಯಲಿ ಎದೆಯ ಸಿಂಹಾಸನವನು
ಯಾವ ಪ್ರತಿಷ್ಠೆಯ ಹಂಗಿಲ್ಲದೆ
ತ್ರಿವಿಕ್ರಮರಂತೆ….
ನಿತ್ಯ ಮೌಲ್ಯಗಳ ದೀಪ ಸಾಲುಗಳ ಜ್ವಲಿಸಿ


  • ಶಿವದೇವಿ ಅವನೀಶಚಂದ್ರ – ಶಿಕ್ಷಕರು, ಕವಿಯತ್ರಿ, ಕೊಡಗು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW