‘ಪದ್ದಣ ಮನೋರಮೆ’ ಕೃತಿ ಪರಿಚಯ

ಸರಸ ಚಿತ್ರಣವ ಮೂಲಕ ಸಮಾಜದ ಅಂಕುಡೊಂಕುಗಳನ್ನು ಹಿಡಿಯುವ ಸಮರ್ಥ ಪ್ರಯತ್ನ ಶಾಲಿನಿ ಹೂಲಿ ಪ್ರದೀಪ್‌ ಅವರ ‘ಪದ್ದಣ ಮನೋರಮೆ’ ಯಾಗಿದೆ, ಖ್ಯಾತ ಪತ್ರಕರ್ತರಾದ ಶ್ರೀಧರ ಮೂರ್ತಿ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ :  ಪದ್ದಣ ಮನೋರಮೆ
ಲೇಖಕರು: ಶಾಲಿನಿ ಹೂಲಿ ಪ್ರದೀಪ್‌
ಪ್ರಕಾಶಕರು: ಆಕೃತಿ ಪ್ರಕಾಶನ
ಬೆಲೆ : ೧೫೦.೦೦
ಖರೀದಿಗಾಗಿ : ಸಾಹಿತ್ಯಲೋಕ – 99459 39436

ಶಾಲಿನಿ ಹೂಲಿ ಪ್ರದೀಪ್‌ ನನ್ನ ಹಿರಿಯ ಮಿತ್ರರಾದ ಹೂಲಿ ಶೇಖರ್‌ ಅವರ ಮಗಳು. ಹೂಲಿ ಶೇಖರ್‌ ಪ್ರಮುಖವಾಗಿ ನಾಟಕಕಾರರು, ಚಂದದ ಕಥೆಗಳನ್ನು ಕಟ್ಟ ಬಲ್ಲವರು. ಕಿರುತೆರೆಯನ್ನೂ ಶ್ರೀಮಂತಗೊಳಿಸಿದವರು. ಅಪ್ಪನಿಂದ ಸೃಜನಶೀಲತೆಯನ್ನು ಬಳುವಳಿಯಾಗಿ ಪಡೆದಿರುವ ಶಾಲಿನಿ ತಮ್ಮ ಸೋಪಜ್ಞತೆಯಿಂದ ಬರಹಕ್ಷೇತ್ರದಲ್ಲಿ ತಮ್ಮದೇ ಅನನ್ಯತೆಯನ್ನು ಸಂಪಾದಿಸಿ ಕೊಂಡಿದ್ದಾರೆ. ನಾನು ಅವರಿಗೆ ತರಗತಿಯಲ್ಲಿ ಏನು ಕಲಿಸಿದೆನೋ ಗೊತ್ತಿಲ್ಲ. .. ನಿರಂತರವಾಗಿ ನನ್ನನ್ನು ಗುರುವಿನ ಸ್ಥಾನದಲ್ಲಿಟ್ಟು ಗೌರವಿಸುತ್ತಾ ಬಂದಿದ್ದಾರೆ.

ಹೊಸಗನ್ನಡ ಸಾಹಿತ್ಯದ ಅರುಣೋದಯದ ಮುಂಗೋಳಿ ಎಂದೇ ಕರೆಸಿ ಕೊಂಡ ಮುದ್ದಣ ತನ್ನ ಶ್ರೀರಾಮಶ್ವಮೇಧ ಕೃತಿಗೆ ರಚಿಸಿದ ಸುವರ್ಣ ಚೌಕಟ್ಟು ‘ಮುದ್ದಣ ಮನೋರಮೆ ಸಲ್ಲಾಪʼ ಕಾಡು ನಾಡೆಲ್ಲ ಮುದಗೊಳ್ಳುವಂತೆ ಒದಗಿಬಂದ ಮಳೆಗಾಲದಲ್ಲಿ ಒಂದು ದಿನ ಸಂಜೆಹೊತ್ತು ಎಂದಿನಂತೆ ರಾಜಸಭೆ ಮುಗಿದು ಕವಿಗಳ ಗುರು ಮುದ್ದಣನು ಅರಮನೆಯಿಂದ ಹೊರಟು ನೇರವಾಗಿ ಬೀದಿಗುಂಟ ಬಂದು ತನ್ನ ಮನೆಯನ್ನು ತಲುಪಲು, ಆತನ ಹೆಂಡತಿ ಮನೋರಮೆ ದೂರದಿಂದಲೇ ಅವನನ್ನು ನೋಡಿ ಇದಿರುಗೊಂಡು ಕಾಲುತೊಳೆಯಲು ನೀರು ಕೊಟ್ಟು ಮತ್ತೆ ಕೈಹಿಡಿದು ಒಳಚೌಕಿಯೊಳಕ್ಕೊಯ್ದು ಮಣೆ ಕೊಟ್ಟು ಕುಳ್ಳಿರಿಸಿ ಆಮೇಲೆ ಪಕ್ವವಾದ ಹಣ್ಣುಗಳನ್ನು ತಿನ್ನಲಿಕ್ಕೆ ಕೊಟ್ಟು, ಕಾಯಿಸಿ ಕೆನೆಗೂಡಿದ ಹಾಲನ್ನು ಕುಡಿಯಲಿಕ್ಕೆ ಕೊಟ್ಟು ಉಪಚರಿಸತೊಡಗಿದಳು. ಈ ಉಪಚಾರದಿಂದ ಆತನ ಹಸಿವು ಬಾಯಾರಿಕೆ ತೀರಿ, ಆಮೇಲೆ ಹೆಂಡತಿ ಕೊಟ್ಟ ಎಲೆ‌ಅಡಿಕೆಯನ್ನೂ ಸವಿದು ಈರೀತಿ ಸುಖಸಲ್ಲಾಪದಲ್ಲಿದ್ದುದನ್ನು ಏನೆಂದು ಬಣ್ಣಿಸಲಿʼ ಹೀಗೆ ಮುದ್ದಣ ಈ ಪ್ರಸಂಗಕ್ಕೆ ಪ್ರವೇಶ ಕೊಡುತ್ತಾನೆ. ಇದೊಂದು ನಾಟಕೀಯ ತಂತ್ರಗಾರಿಕೆ. ಹೊಸಗನ್ನಡದ ಅನೇಕ ಕೃತಿಗಳು ಇದನ್ನು ಬಳಸಿ ಕೊಂಡವು.

ಶಾಲಿನಿ ಇದನ್ನು ಆಧುನಿಕ ಕಾಲಕ್ಕೆ ತಂದು ʼಪದ್ದಣ ಮನೋರಮೆʼ ಕೃತಿಯನ್ನು ರಚಿಸಿದ್ದಾರೆ. ಇಲ್ಲಿನ ಕಥಾ ಚೌಕಟ್ಟು ಆಧುನಿಕ ಕಾಲದ್ದು, ಫೇಸ್‌ ಬುಕ್‌, ರೀಲ್ಸ್‌, ಶಾಪಿಂಗ್‌ ಮಾಲ್‌ಗಳ ಜಗತ್ತಿನ ಹಿನ್ನೆಲೆಯದು ಈ ಮೂಲಕ ಕಥಾನಕ ಬೆಳೆಯುತ್ತದೆ. ಪದ್ದಣ ಇಲ್ಲಿ ಕೇವಲ ಸಾಕ್ಷಿ ಪ್ರಜ್ಞೆ ಮಾತ್ರವಲ್ಲ ಕ್ರಿಯಾಶೀಲ ಪಾತ್ರವನ್ನೂ ಉಳ್ಳವನು. ಇಲ್ಲಿನ ʼಮನೋರಮೆʼ ಮದ್ದಣನಿಗಿಂತ ಭಿನ್ನ. ಅಲ್ಲಿ ಮುದ್ದಣ ನಿರೂಪಕನಾದರೆ ಇಲ್ಲಿ ಮನೋರಮೆಯೇ ನಿರೂಪಕಿ. ಅವಳು ಸಮಾಜವನ್ನು ಗ್ರಹಿಸುವ ಚಿಕಿತ್ಸಕ ದೃಷ್ಟಿ ಇಡೀ ಕೃತಿಯ ಕೇಂದ್ರಪ್ರಜ್ಞೆಯಾಗಿದೆ. ಶಾಲಿನಿ ಆಕೃತಿ ಎನ್ನುವ ವೆಬ್‌ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸುತ್ತಿರುವವರು. ಅವರೊಳಗಿನ ಪತ್ರಿಕೊದ್ಯಮದ ಪ್ರಜ್ಞೆ ಮತ್ತು ಪರಂಪರೆ ಇಡೀ ಕೃತಿಯಲ್ಲಿ ತಂತುವಾಗಿ ಹರಿಯುತ್ತದೆ. ಬೀದಿ ಕಾಮಣ್ಣರ ಕುರಿತು ಬರೆಯುವಾಗ ಅವರು ಸಮಾಜದ ನಿರ್ಲಪ್ತತೆಯನ್ನು ಕಟುವಾಗಿ ಟೀಕಿಸುತ್ತಾರೆ.

ಅಂತರ್ಜಾಲ ಜಗತ್ತು ಮುಖವಿಲ್ಲದ ಮಾಧ್ಯಮ ಇಲ್ಲಿ ಅತೃಪ್ತ ಮನಗಳು ವಿಕೃತಿಯ ಕಡೆಗೆ ಚಲಿಸುವ ಸಾಕಷ್ಟು ಸಾಧ್ಯತೆಗಳಿವೆ. ಅದಕ್ಕೊಂದು ಆಧುನಿಕ ಆಯಾಮವೂ ಇದೆ. ಈ ಮೂಲಕ ಸಂವಹನ ಸುಲಲಿತವೂ, ಸೀಮಾತೀತವೂ ಆಗಿದೆ. ಈ ಸಾಧ್ಯತೆಯನ್ನು ಇಲ್ಲಿನ ಬರಹಗಳು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತವೆ. ʼಲವ್‌ ಬಟನ್‌ʼ ಒತ್ತುವ ಪ್ರಸಂಗ ಲಘು ದಾಟಿಯಲ್ಲಿ ಬೆಳೆದರೆ ʼಫೇಸ್ಬುಕ್‌ ಪ್ರಪಂಚʼ ಬಿಗುವಾಗಿ ಬೆಳೆಯುತ್ತದೆ. ಇಲ್ಲಿ ಕಡಿವಾಣದ ಸಾಧ್ಯತೆಯೂ ಪರಿಶೀಲಿತವಾಗಿದೆ. ಮೆಸೆಂಜರ್‌ನ ಜಗತ್ತಿನಲ್ಲಿ ಸೇಫ್ಟಿ, ಪ್ರೀತಿ, ಪ್ರೇಮದ ಅಯಾಮಗಳೂ ಮಿಂಚಿ ಮಾಯವಾಗುತ್ತವೆ. ಮೊಬೈಲ್‌, ರೀಲ್ಸ್‌ಗಳ ಬಗ್ಗೆ ಕೂಡ ಇಲ್ಲಿ ಚಿಕಿತ್ಸಕ ಬರಹಗಳಿವೆ. ಇದು ಹಾಸ್ಯ ಮತ್ತು ಪ್ರಬಂಧ ಎರಡರ ನಡುವೆ ಸಾಗುವ ಲಘುದಾಟಿಯಲ್ಲಿದ್ದರೂ ಬಿಗುವಿನ ಅಂತರಾಳವನ್ನು ಹೊಂದಿದ ಬರಹಗಳು. ಬಹುತೇಕ ಈ ಬರಹಗಳಲ್ಲಿ ಮನೋರಮೆಯೇ ಪ್ರಧಾನ ನೆಲೆಯಲ್ಲಿ ನಿಂತು ಪದ್ದಣ ನಿರ್ಧಾರಕ ಕ್ಷಣಗಳಿಗೆ ಸಾಕ್ಷಿಯಾಗುತ್ತಾನೆ. ಈ ತಂತ್ರಗಾರಿಕೆ ಲವಲವಿಕೆ ಮತ್ತು ಸೂಕ್ಷ್ಮತೆಯನ್ನು ಬರಹಕ್ಕೆ ತಂದು ಕೊಟ್ಟಿದೆ. ಈ ಕಾರಣದಿಂದಲೇ ಇಲ್ಲಿನ ಬರಹಗಳು ಓದಿ ನಕ್ಕು ಹಗುರಾಗುವ ಬರಹಗಳಲ್ಲ, ನಕ್ಕ ನಂತರ ಒಂದು ಕ್ಷಣ ಚಿಂತಿಸುವಂತೆ ಮಾಡುವ ಬರಹಗಳು. ಅಲ್ಲಿ ನಗುವಿನ ನಡುವೆ ಬಹು ಎಚ್ಚರಿಕೆಯಿಂದ ಕಂಬನಿಯ ಬಿಂದುವನ್ನೂ ಹೆಕ್ಕಿ ಕೊಡುವ ಬರಹಗಳು.

ಕನ್ನಡದಲ್ಲಿ ಅರವತ್ತರ ದಶಕದಲ್ಲಿ ಹಾಸ್ಯ ಸಾಹಿತ್ಯ ಹೊಸ ರೂಪದಲ್ಲಿ ಬರಲು ಆರಂಭಿಸಿದಾಗ ಲಟ್ಟಣಿಗೆ ಹಿಡಿದ ಘಟವಾಣಿ ಹೆಂಡತಿಯರು ಹಾಸ್ಯದ ವಸ್ತುವಾದರು. ಬರೆದವರು ಬಹುತೇಕ ಪುರುಷರೇ ಆಗಿದ್ದರಿಂದ ಸ್ವಾನುಕಂಪ ಇಲ್ಲಿ ಧಾರಾಳವಾಗಿ ಕೆಲಸ ಮಾಡಿತ್ತು. ಕೆಲವರಲ್ಲಿ ಅದು ಆತ್ಮರತಿಯ ಮಟ್ಟಕ್ಕೂ ಹೋಗಿತ್ತು. ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಗಂಭೀರ ಚಿಂತನೆ ನಡೆಯ ಬೇಕಾಗಿದ್ದ ಕಾಲದಲ್ಲಿ ಬಂದ ಇಂತಹ ಬರಹಗಳು ಗಾಂಭೀರ್ಯತೆಯನ್ನು ಚದುರಿಸಿದ್ದವು. ಇದು ಸ್ವಲ್ಪ ಮಟ್ಟಿಗೆ ಸಮತೋಲನ ಪಡೆಯಲು ಎಂಬತ್ತರ ದಶಕವೇ ಬರಬೇಕಾಯಿತು. ಈ ಕೃತಿಯಲ್ಲಿ ಮನೋರಮೆ ತನ್ನ ಬಣ್ಣವನ್ನೂ,ದಪ್ಪವನ್ನೂ ವಿಡಂಬಿಸಿ ಕೊಳ್ಳುತ್ತಲೇ ಸಾಮಾಜಿಕ ನೆಲೆಯನ್ನು ಬಿಂಬಿಸುತ್ತಾಳೆ. ಪದ್ದಣ ಹೆಂಡತಿಯ ಕುರಿತು ಕಾಳಜಿಯನ್ನು ಉಳ್ಳವನು, ಆದರೆ ಅಂತರದಲ್ಲಿ ಅದನ್ನು ಬಿಂಬಿಸುವವನು. ಈ ಆಧುನಿಕ ಮನೋಭಾವ ಬರಹಕ್ಕೆ ಹೊಸ ನೆಲೆಯನ್ನು ನೀಡಿದೆ. ಸಾವಿನ ಕುರಿತ ಬರಹಗಳು, ಆಗಾಗ ಪ್ರಸ್ತಾಪಿತವಾಗುವ ಹಾರ್ಟ್‌ ಆಟ್ಯಾಕ್‌ನ ಪ್ರಸಂಗಗಳು ಆಧುನಿಕ ವಿದ್ಯಮಾನದ ಸಮರ್ಥ ಗ್ರಹಿಕೆಗಳಾಗಿವೆ. ಎಲ್ಲಾ ಬರಹಗಳಲ್ಲಿಯೂ ಈ ಚಿಂತನೆಯ ಆಚೆಗೆ ಮೂಡುವ ಸಮಾನತೆಯ ಕಲ್ಪನೆ ಇಡೀ ಸಂಕಲನದ ಯಶಸ್ಸನ್ನು ಹೇಳುತ್ತದೆ. ಈ ನಡುವೆ ಲಿಲ್ಲಿ (ಲಲಿತಾ) ತನ್ನ ಕುಡಕ ಗಂಡನ ಕುರಿತು ಆಡುವ ಮಾತುಗಳು ಸಾಮಾಜಿಕ ಸ್ತರಗಳ ವ್ಯತ್ಯಾಸವನ್ನು ಹಿಡಿಯುತ್ತದೆ. ಇಡೀ ಕೃತಿಯನ್ನು ಪದ್ದಣ ಮನೋರಮೆಯರೇ ಆವರಿಸಿ ಕೊಂಡಿದ್ದಾರೆ, ಹಿರಿಯರೂ ಇಲ್ಲ, ಕಿರಿಯರೂ ಇಲ್ಲ. ಇದರ ನಡುವೆ ʼಅಬ್ಬಾ..! ಆ ದಿನ” ಕಥೆಯ ಸ್ವರೂಪದಲ್ಲಿದ್ದು ತಲೆಮಾರುಗಳ ಚಿಂತನೆಯನ್ನು ಹಿಡಿದಿಟ್ಟಿದೆ. ಶಾಲಿನ ಉತ್ತಮ ಕಥೆಗಾರ್ತಿ ಕೂಡ ಆಗುವ ಸಾಧ್ಯತೆಯನ್ನು ಇದು ತೋರಿಸಿ ಕೊಟ್ಟಿದೆ.

ಇವತ್ತಿನ ಸಾಮಾಜಿಕ ಮಾಧ್ಯಮಗಳಲ್ಲಿನ ಬರಹಕ್ಕೆ ಎರಡು ಮಿತಿಗಳಿವೆ. ಒಂದು ಇದನ್ನು ಓದುವವರ ʼಓದುವಿಕೆಯ ಸಮಯʼ ಕಡಿಮೆ ಇರುವುದರಿಂದ ಪದಮಿತಯಲ್ಲಿಯೇ ಚಿಂತನೆಗಳನ್ನು ಮೂಡಿಸುವುದು. ಇನ್ನೊಂದು ಥಟ್ಟನೆ ಒಂದು ಅಚ್ಚರಿಯನ್ನೂ, ತಿರುವನ್ನೋ, ಆತಂಕವನ್ನೂ, ಚಿಂತನೆಯನ್ನೂ ಮೂಡಿಸುವ ಮೂಲಕ ಬರಹವನ್ನು ಮುಗಿಸುವುದು. ಈ ಎರಡೂ ಲಕ್ಷಣಗಳು ಈ ಕೃತಿಗಿವೆ. ಇದು ಬರಹದ ಹೊಸ ಸಾಧ್ಯತೆಯ ಮೊದಲ ಮಟ್ಟಿಲು, ಅಲ್ಲಿಂದ ಮುಂದೆ ನಿಜವಾದ ಪಯಣ ಆರಂಭವಾಗುತ್ತದೆ. ಸೃಜನಶೀಲತೆ ಎನ್ನುವುದು ಸಿಕ್ಕರೂ ಸಿಗದ ಮಾಯೆಯ ಹಾಗೆ, ಅದರ ಸಾಕ್ಷಾತ್ಕಾರಕ್ಕೆ ಪ್ರತಿಭೆಯನ್ನೇ ಪಣವಾಗಿ ಇಡ ಬೇಕು. ಅದು ತಲುಪ ಬೇಕಾದ ನಿಲ್ದಾಣ. ಈ ಪಯಣದ ಸಿದ್ದತೆಯಲ್ಲಿ ಶಾಲಿನಿ ಇದ್ದಾರೆ ಎನ್ನುವುದಕ್ಕೆ ಕೃತಿಯಲ್ಲಿಯೇ ಸಾಕಷ್ಟು ಆಧಾರಗಳಿವೆ ಎನ್ನುವುದೂ ನನಗೆ ಅವರ ಕುರಿತು ಇರುವ ಭರವಸೆಗೆ ಕಾರಣವಾಗಿದೆ.

‘ಪದ್ದಣ ಮನೋರಮೆ’ ಕೃತಿಯ ಕುರಿತು ಇನ್ನಷ್ಟು ಪರಿಚಯ :


  • ಶ್ರೀಧರ ಮೂರ್ತಿ – ಖ್ಯಾತ ಪತ್ರಕರ್ತರು, ಲೇಖಕರು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW