‘ಶಾಂತಾಬಾಯಿ ನೀಲಗಾರ’ ಆಧುನಿಕ ಕನ್ನಡದ ಮೊದಲ ಕಾದಂಬರಿಕಾರ್ತಿ

ಶಾಂತಾಬಾಯಿ ನೀಲಗಾರ ಅವರು 1908 ರಲ್ಲೇ ‘ಸದ್ಗುಣಿ ಕೃಷ್ಣಾಬಾಯಿ’ ಎನ್ನುವ ಏಕೈಕ ಕಾದಂಬರಿಯನ್ನು ರಚಿಸಿದ್ದು, “ಸುಶೀಲೆ” 1913 ರಲ್ಲಿ ಪ್ರಕಟವಾಯಿತು. ಶಾಂತಾಬಾಯಿ ನೀಲಗಾರ ಅವರನ್ನು ಆಧುನಿಕ ಕನ್ನಡ ಸಾಹಿತ್ಯದ ಮೊದಲ ಕಾದಂಬರಿಕಾರ್ತಿ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಲೇಖಕಿ ಗಿರಿಜಾಶಾಸ್ತ್ರಿ ಅವರ ಲೇಖನಿಯಲ್ಲಿ ಶಾಂತಾಬಾಯಿ ನೀಲಗಾರ ಅವರ ಸಾಧನೆ ಕುರಿತು ಬರೆದ ಲೇಖನವನ್ನು ತಪ್ಪದೆ ಓದಿ…

ನಂಜನಗೂಡು ತಿರುಮಲಾಂಬ (1887-1982)ಅವರೇ ಆಧುುನಿಕ ಕನ್ನಡ ಮಹಿಳಾ ಬರಹಗಳ ಆದ್ಯಪ್ರವರ್ತಕಿ ಎನ್ನುವುದು ನಿಜ. ಆದರೆ ವಿಜಯಾ ದಬ್ಬೆಯವರು ತಿರುಮಲಾಂಬ ಅವರನ್ನು ಹುಡುಕಿ ತೆಗೆದಂತೆ ಶಾಂತಾಬಾಯಿಯವರನ್ನೂ ಹುಡುಕಿತೆಗೆಯದಿದ್ದರೆ, ಕನ್ನಡದ ಮೊದಲ ಮಹಿಳಾ ಕಾದಂಬರಿ ಬೆಳಕು ಕಾಣದೇ ಹೋಗಿಬಿಡುತ್ತಿತ್ತು. ಶಾಂತಾಬಾಯಿ ನೀಲಗಾರ ಅವರು 1908 ರಲ್ಲೇ ‘ಸದ್ಗುಣಿ ಕೃಷ್ಣಾಬಾಯಿ’ ಎನ್ನುವ ಏಕೈಕ ಕಾದಂಬರಿಯನ್ನು (ದೊರೆತಿರುವುದು) ರಚಿಸಿರುವುದರಿಂದ, ತಿರುಮಲಾಂಬ ಅವರ “ಸುಶೀಲೆ” 1913 ರಲ್ಲಿ ಪ್ರಕಟವಾಯಿತು ಎಂದು ತಿಳಿದು ಬರುವುದರಿಂದ ಶಾಂತಾಬಾಯಿ ನೀಲಗಾರ ಅವರನ್ನು ಆಧುನಿಕ ಕನ್ನಡ ಸಾಹಿತ್ಯದ ಮೊದಲ ಕಾದಂಬರಿಕಾರ್ತಿ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.
ಮಾಸ್ತಿಯವರಿಗಿಂತ ಮುನ್ನವೇ ಪಂಜೆ ಮಂಗೇಶರಾಯರು, ಎಂ. ಎನ್. ಕಾಮತ್. ಹಾಗೂ ಕೆರೂರು ವಾಸುದೇವಾಚಾರ್ಯರು ಕಥೆಗಳನ್ನು ಬರೆದಿದ್ದರೂ, ಸಣ್ಣಕತೆಗಳ ಸ್ವರೂಪ, ಅದರ ಬಾಹುಳ್ಯ, ವೈವಿಧ್ಯ, ಅದು ವಿಸ್ತರಿಸಿದ ಓದುಗ ವಲಯ ಮುಂತಾದವುಗಳ ದೃಷ್ಟಿಯಿಂದ ಮಾಸ್ತಿಯವರನ್ನೇ ಸಣ್ಣಕಥೆಗಳ ಜನಕ, ಹರಿಕಾರ ಎಂದು ನಾವು ಗುರುತಿಸುತ್ತೇವೆ. ಹಾಗೆಯೇ ತಿರುಮಲಾಂಬ ಅವರ ವೈವಿಧ್ಯಮಯ ಬರಹಗಳನ್ನು ನೋಡಿದಾಗ ಒಂದೇ ಕಾದಂಬರಿಯನ್ನು ಬರೆದ ಶಾಂತಾಬಾಯಿಯವರಿಗಿಂತಲೂ ತಿರುಮಲಾಂಬ ಅವರೇ ಹೊಸಗನ್ನಡ ಮಹಿಳಾ ಸಾಹಿತ್ಯದ ಆದ್ಯ ಪ್ರವರ್ತಕಿ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು.

ಶಾಂತಬಾಯಿ ನೀಲಗಾರ: ಇವರು ಮೂಲತಃ ಉತ್ತರ ಕರ್ನಾಟಕದವರು. ಕೆಲಸದ ನಿಮಿತ್ತವಾಗಿ ಮಹಾರಾಷ್ಟ್ರದಲ್ಲಿದ್ದವರು ಆಶ್ಚರ್ಯವೆಂದರೆ ಅವರು ಉನ್ನತ ವಿದ್ಯಾಭ್ಯಾಸವನ್ನು ಪಡೆದವರಾಗಿದ್ದರು. ಬಾಲಕಿಯರ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯಿನಿಯಾಗಿದ್ದರು. ಮಹಾರಾಷ್ಟ್ರದ ಪ್ರಗತಿಪರ ವಿಚಾರಗಳ ಪ್ರಭಾವವು ಅವರ ಮೇಲೆ ಸಹಜವಾಗಿಯೇ ಆಗಿದ್ದಿರಬೇಕು. ಆದುದರಿಂದಲೇ ತಮ್ಮ ಕಾದಂಬರಿಯಲ್ಲಿ ಮಹಿಳೆಯರ ಉನ್ನತ ಅಭ್ಯಾಸದ ಪರವಾಗಿ ಮಾತನಾಡುತ್ತಾರೆ. ಇವರು ಮಹಾರಾಷ್ಟ್ರದಲ್ಲಿ ಬೆಳೆದುದ್ದರಿಂದಲೋ ಏನೋ ಇವರ ಬಗೆಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲವಾಗಿದೆ.

1908 ರಲ್ಲಿ ಹೊರಬಂದ “ಸದ್ಗುಣಿ ಕೃಷ್ಣಾಬಾಯಿ, ಕಾದಂಬರಿಗೆ ಒಂದು ಐತಿಹಾಸಿಕ ಮಹತ್ವವಿದೆ. ‘ಸಂತುಷ್ಟೋ ಭಾರ್ಯಾಯಭರ್ತಾ’ ಎನ್ನುವ ಮನುವಿನ ಉಕ್ತಿಯ ಶಿರೋಲೇಖದ ಮೇಲೆ ನಿಬಂಧವನ್ನು ಬರೆಯಿಸುವುದಕ್ಕೆ 25 ರೂ ಪಾರಿತೋಷಕವನ್ನು ಕೊಡುತ್ತೇವೆಂದು ಕರ್ನಾಟಕದ ವಿದ್ಯಾವರ್ಧಕ ಸಂಘದವರು ತಿಳಿಸಿದ್ದರು. ಈ ನಿಬಂಧವನ್ನು ನಮ್ಮ ದೇಶದ ಭಗಿನಿಗಳೊಬ್ಬರು ಬರೆದರೆ ಬಹಳ ವಿಹಿತವಾಗುವುದೆಂದೂ, ತಮ್ಮ ಅಭಿಪ್ರಾಯವನ್ನು ವ್ಯಕ್ತಮಾಡಿದ್ದರು. ಅದರಂತೆ ಸಂಘದವರು ಅಂತಃಕರಣ ಪೂರ್ವಕವಾಗಿ ಆ ಕಾರ್ಯವನ್ನು ನನಗೆ ಒಪ್ಪಿಸಿದರು” ಎಂದು ಲೇಖಕಿಯೇ ತಮ್ಮ ಪುಸ್ತಕದ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಮನುವಿನ ಉಕ್ತಿಯ ಮೇಲೆ ಬರೆದ ಈ ಕಾದಂಬರಿ ಅಂದಿನ ಸ್ತ್ರೀಪರ ಚಳವಳಿಗಳ ಉಪ ಉತ್ಪನ್ನದಂತಿದೆ. ಇಲ್ಲಿ ವಿಸ್ಮøತಿಗೆ ಒಳಗಾದ ಸ್ತ್ರೀಯರು ಪುನರುತ್ಥಾನಗೊಳ್ಳುತ್ತಿರುವ, ಮಾದರಿಗಳ ಚಿತ್ರಣವಿದೆ. ಇಂತಹ ಮಾದರಿಗಳನ್ನು ಗಟ್ಟಿಗೊಳಿಸಲು ಅಂದು ದೇಶಾದ್ಯಂತ ಹಬ್ಬಿ ಹರಡಿದ್ದ ಆದುನಿಕ ಆಲೋಚನಾ ವಿಧಾನಗಳನ್ನು ಇಲ್ಲಿನ ನಾಯಕಿಯಾದ ಕೃಷ್ಣಾಬಾಯಿಯು ಪ್ರತಿನಿಧಿಸುತ್ತಾಳೆ. ಕನ್ನಡ ಮಹಿಳಾ ಕಾದಂಬರಿಯಲ್ಲಿ ಅಂದಿನ ಮಹಾರಾಷ್ಟ್ರದ ಸಾಮಾಜಿಕ ಚಟುವಟಿಕೆಗಳ ಸಂದರ್ಭವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವುದು ಕನ್ನಡ ಸಾಹಿತ್ಯಕ್ಕೊಂದು ಅನನ್ಯ ಕೊಡುಗೆಯಾಗಿದೆ. ಇಲ್ಲಿ ಸಾಂಪ್ರದಾಯಕತೆ ಎನ್ನುವುದೂ ಪ್ರಗತಿಪರ ವಿಚಾರಗಳ ಮೂಸೆಯಲ್ಲಿ ಭಟ್ಟಿ ಇಳಿಸಿದ ಅಂದಿನ ಕಾಲಕ್ಕೆ ಅತ್ಯಂತ ಆಧುುನಿಕವಾದವುಗಳಾಗಿವೆ. ಅಂದಿನ ಎಲ್ಲ ಬರಹಗಳ ಹಾಗೆಯೇ ಇಲ್ಲಿಯೂ ಕೆಟ್ಟ ಹಾಗೂ ಒಳ್ಳೆಯ ಪಾತ್ರಗಳ ಕಪ್ಪು ಬಿಳುಪಿನ ಚಿತ್ರಣವಿದೆ. ಉತ್ತಮ ಸ್ತ್ರೀ ಹಾಗೂ ಪತ್ನಿಯ ಆದರ್ಶ ಮಾದರಿಗಳಿವೆ. ಗಂಡು ಹೆಣ್ಣಿನ ಸಮಾನತೆಯ ಅಂದಿನ ಕಲ್ಪನೆಗಳಿವೆ.

ಸ್ತ್ರೀ ಶಿಕ್ಷಣವನ್ನು ಎತ್ತಿಹಿಡಿಯುವ ಕನಸುಗಳಿವೆ. ಇಲ್ಲಿನ ನಾಯಕಿ ಕೃಷ್ಣಾಬಾಯಿಯು “ಧರ್ಮಶೀಲಳೂ, ನೀತಿವಂತಳೂ, ಈಶ್ವರ ನಿಷ್ಠಳೂ” ಆದ ಉತ್ತಮ ಸ್ತ್ರೀಯಾಗಿದ್ದಾಳೆ. ಅಲ್ಲದೇ”ಸ್ವಚ್ಛತೆ, ವಿನಯ, ಮಾನಮರ್ಯಾದೆಗಳನ್ನೇ ಹುಟ್ಟುಗುಣಗಳನ್ನಾಗಿ ಉಳ್ಳವಳು. ವಿವಿಧ ಪಕ್ವಾನ್ನಗಳನ್ನು ಚೆನ್ನಾಗಿ ಮಾಡಲಿಕ್ಕೂ ಕಲಿತವಳು. ಅಭ್ಯಾಸ ಮುಗಿದ ಕೂಡಲೇ ತರತರದ ರಂಗವಲ್ಲಿ, ಹಾಡು ಹೆಣಿಗೆ, ಕಸೂತಿ ಮುಂತಾದವುಗಳಲ್ಲಿ ಆಸಕ್ತಿ ತೋರುವವಳು. ಯಾತಕ್ಕೂ ಹೇಸಿಕೊಳ್ಳದೇ ‘ಊಚ, ನೀಚ ನೋಡದೇ, ರೋಗಿಯಾದ ಅತ್ತೆಯ ಔಷಧೋಪಚಾರ ಮಾಡುವವಳು. ಈ ಎಲ್ಲದಕ್ಕೆ ಕಾರಣ ಅವಳು ‘ಮುಂಬಯಿಯ ಜನಾನಾದ ಮಿಶನದ ಬಾಲಿಕಾ ಶಾಲೆಯಲ್ಲಿ’ ಕಲಿತಿರುವುದೇ ಆಗಿದೆ. (ಹೀಗೆ ಸಾಂಪ್ರದಾಯಕತೆಯ ಜೊತೆಗೆ ಆಧುನಿಕತೆಯ ಕಸಿ ಹಚ್ಚುವಿಕೆಯನ್ನು ಅಂದಿನ ಎಲ್ಲ ಬರಹಗಳಲ್ಲಿ ಕಾಣಬಹುದಾಗಿದೆ. ಅಂದಿನ ಆಧುನಿಕತೆಯ ಪರಿಕಲ್ಪನೆ ಇದೇ ಆಗಿದ್ದಿತು) ಕೃಷ್ಣಬಾಯಿಗೆ ವಿರುದ್ಧವಾದ ಅವಳ ಅಕ್ಕ ಯಶೋದಾಬಾಯಿಯ ಪಾತ್ರವೊಂದಿದೆ. ಶಾಲೆಯನ್ನು ಕಲಿಯದ ಅವಳು, ಮನೆಯ ಅಚ್ಚುಕಟ್ಟು, ನಯ ನಾಜೂಕಿಲ್ಲದ ಹೆಂಗಸು. ಸದಾ ಅನಾವಶ್ಯಕ ಹರಟೆ, ಹರಿಕಥೆ ನಾಟಕ ಎಂದು ತಿರುಗುತ್ತಾ ಕಾಲಹರಣ ಮಾಡುವ ಸೋಮಾರಿ. ಕೃಷ್ಣಾಬಾಯಿ ತನ್ನ ವರ್ಚಸ್ಸಿನಿಂದ ಸಹೋದರಿಯನ್ನೂ ಅವಳ ಮಕ್ಕಳನ್ನೂ ಬದಲಾಯಿಸುತ್ತಾಳೆ. ವಿದ್ಯೆಯ ಜೊತೆಗೆ ಕೃಷ್ಣಾಬಾಯಿಗೆ ಆತ್ಮವಿಶ್ವಾಸ ಹಾಗೂ ಎಂತಹ ಸಂದರ್ಭವನ್ನೂ ನಿಭಾಯಿಸಬಲ್ಲ ಜಾಣ್ಮೆಯಿದೆ. ಹೀಗಾಗಿ ಗಂಡ ಮಾಧವರಾಯನ ಜೊತೆ ಲಂಡನ್ನಿಗೆಂದು ಹಡಗನ್ನೂ ಏರಿದ್ದಾಳೆ ಅವಳು. ಸಮುದ್ರಯಾನದಲ್ಲಿ ಹಡಗು ಬಿರುಗಾಳಿಗೆ ಸಿಕ್ಕಿ ಅನಿರೀಕ್ಷಿತವಾಗಿ ಗಂಡ ಹೆಂಡಿರಿಬ್ಬರೂ ಬೇರ್ಪಡುತ್ತಾರೆ. ಕನ್ನಡ ಕಾದಂಬರಿ ಸಂzರ್ಭದಲ್ಲಿ ವಿದೇಶಯಾತ್ರೆಗೆಂದು ಕಡಲು ದಾಟಿದ ಮೊದಲ ಹೆಣ್ಣು ಬಹುಶಃ ಕೃಷ್ಣಬಾಯಿಯೇ ಇರಬೇಕು ಎಂದು ವಿಜಯಾ ದಬ್ಬೆ ಈ ಕೃತಿಯ ಮುನ್ನಡಿಯಲ್ಲಿ ಹೇಳುತ್ತಾರೆ.

ಶಾಂತಾಬಾಯಿಯವರು ಶಾಲೆಯ ಮುಖ್ಯೋಪಾಧ್ಯಾಯಿನಿ ಆದದ್ದರಿಂದ ಮಕ್ಕಳ ಶಿಕ್ಷಣದ ಕುರಿತಾಗಿ ಅಪೂರ್ವ ಒಳನೋಟಗಳು ಈ ಕಾದಂಬರಿಯ ಅನೇಕ ಸನ್ನಿವೇಶಗಳಲ್ಲಿ ಬರುತ್ತವೆ. “ಹುಡುಗರಿಗೆ ಶಿಕ್ಷೆ ಮಾಡುವುದಕ್ಕಿಂತ ಮೊದಲು ಅವರ ಸ್ವಂತದ ದೋಷವೆಷ್ಟಿದೆ ಎಂಬುದನ್ನು ವಿಚಾರ ಮಾಡುವುದು ಅವಶ್ಯವಾದುದು. ಅವರ ಸ್ವಂತ ದೋಷವಿದ್ದಲ್ಲಿ ಅವರನ್ನು ತಕ್ಕಂತೆ ಶಿಕ್ಷಿಸಬಹುದು, ಆದರೆ ಸಾಮಾಜಿಕ ಸ್ಥಿತಿಯಲ್ಲಿನ ದೋಷದಿಂದಾದ ಅಪರಾಧಕ್ಕಾಗಿ ಹುಡುಗರನ್ನು ಶಿಕ್ಷಿಸುವುದು ಹಿತವಲ್ಲ” …ಸ್ತ್ರೀ ಶಿಕ್ಷಣವೆಂದರೆ ಮಕ್ಕಳನ್ನು ‘ನೀತಿವಂತರು’ ಮತ್ತು ‘ವ್ಯವಹಾರಜ್ಞರನ್ನಾಗಿ’ ಮಾಡುವುದೇ ಆಗಿದ್ದಿತು ಎಂಬುದು ಇದರಿಂದ ವ್ಯಕ್ತವಾಗುತ್ತದೆ.

ಸ್ತ್ರೀಪುರುಷ ಸಮಾನತೆ ಬಗೆಗೂ ನೀಲಗಾರ ಅವರಿಗೆ ತಮ್ಮದೇ ಆದ ಅಬಿಪ್ರಾಯಗಳಿವೆ. “ಗಂಡಸರಂತೆ ಹೆಂಗಸರಾದರೂ ಮನುಷ್ಯರೇ ಇರುವರು. ಅವರಲ್ಲಿಯೂ ಸಹ ಬುದ್ದಿಯೂ, ಕಲಿಯುವ ಶಕ್ತಿಯೂ ಗಂಡಸರಲ್ಲಿದ್ದಂತೆ ಇರುತ್ತವೆ. ವಿದ್ಯೆಯಿಂದಾಗುವ ಲಾಭಗಳನ್ನು, ಅನಂದಗಳನ್ನೂ ಪಡೆಯಬೇಕೆಂಬ ಲವಲವಿಕೆಯು ಅವರಲ್ಲಿಯೂ ಉಂಟು. ಜನಸಂಖ್ಯೆಯ ಅರ್ಧಭಾಗವನ್ನು ಜ್ಞಾನಾಂಧಕಾರದಲ್ಲಿಡುವುದು ಯಾರಿಗೂ ಯೋಗ್ಯವೆನಿಸದು.”…”ಎಷ್ಟೋ ಜನ ಸ್ತ್ರೀಯರು ಸಕಲ ವಿದ್ಯಾಪಾರಂಗತರಾಗಿಯೂ, ಸುಶೀಲೆಯರಾಗಿಯೂ, ಪತಿಗಳೊಡನೆ ಸ್ವಾತಂತ್ರ್ಯದಿಂದ ಮಾತನಾಡುತ್ತಲೂ, ದೇಶ ಸಂಚಾರ ಮಾಡುತ್ತಲೂ, ಸಭೆಗಳಲ್ಲಿ ಸಹ ವಾದವಿವಾದ ಮಾಡುತ್ತಾ ಕೀರ್ತಿಪಡೆಯುತ್ತಿದ್ದರೆಂದು ವೇದಗಳಲ್ಲಿಯೂ. ಪುರಾಣಗಳಲ್ಲಿಯೂ ಹೇಳಲ್ಪಟ್ಟಿರುತ್ತದೆ. ವಿದ್ಯೆ ಕಲಿತ ಗಂಡಸರ ಮನಸ್ಸಿಗೆ ತಮ್ಮ ಭಾಷಣ ಮುಂತಾದುದರಿಂದ ಕಲಿತ ಹೆಂಗಸರು ಆನಂದ ಪಡಿಸುವುದಲ್ಲದೆ ಮೂಢ ಹೆಂಗಸರು ಪಡಿಸಲಾರರು” ಈ ಆಧುನಿಕತೆಯೆಂಬುದು ಕೂಡ ಅಂದಿನ ವಸಾಹತುಶಾಹಿ ಸಂದರ್ಭವೊಂದು ನಿರ್ಮಾಣ ಮಾಡಿದ ಕಲ್ಪನೆಯಾಗಿತ್ತೆಂಬುದುನ್ನು ಕಾದಂಬರಿಯ ಈ ವಿವರಗಳು ಸ್ಪಷ್ಟವಾಗಿ ಹೇಳುತ್ತವೆ. “ ಈ ಕಾದಂಬರಿಯಲ್ಲಿ ಬರುವ ಬ್ರಿಟಿಷ್ ಜನರು, ಸಹಾಯ ಮಾಡುವ ಉದಾರಿಗಳು, ಸ್ನೇಹಶೀಲರು, ….ಕೃಷ್ಣಾಬಾಯಿ ತನ್ನ ಪತಿ ಲಂಡನ್ನಿನಲ್ಲಿರುವ ಸುದ್ದಿ ತಿಳಿದು ತಾನೆ ಅಲ್ಲಿಗೆ ಹೋಗಿ ಗಂಡನನ್ನು ಹುಡುಕಲು ಸಿದ್ಧಳಿರುತ್ತಾಳೆ..ಪ್ರಾಯಃ ನೀಲಗಾರ ಅವರು ತಮ್ಮ ನಗರ ವಾಸ, ಉನ್ನತ ವಿದ್ಯಾಭ್ಯಾಸ, ಓದಿನ ಮೂಲಕ ಆದುನಿಕ ಅನುಭವಗಳಿಗೆ ತರೆದುಕೊಂಡಿದ್ದರ ಫಲವಾಗಿ ಇಂತಹ ಬರಹ ಮೊದಲ ಆಧುನಿಕ ಕನ್ನಡ ಲೇಖಕಿಯ ಕಾದಂಬರಿಯಲ್ಲಿ ಸೇರುವಂತಾಗಿದೆ” ಎಂದು ವಿಜಯ ದಬ್ಬೆಯವರು ಹೇಳುತ್ತಾರೆ.


  • ಗಿರಿಜಾಶಾಸ್ತ್ರಿ

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW