ಕೆಲವು ಸ್ನೇಹಿತರು ಸಂಪರ್ಕಕ್ಕೆ ಬಂದು ಸುಮಾರು 20 ವರ್ಷಗಳಿಗೂ ಮಿಗಿಲಾಗಿತ್ತು, ಅವರನ್ನು ಸ್ನೇಹಿತನ ಮಗಳ ಮದುವೆಯಲ್ಲಿ ನೋಡಿ ಸಂತೋಷಕ್ಕೆ ಪಾರವೇ ಇರಲಿಲ್ಲ. ದೇವರಾಜಚಾರ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಇತ್ತೀಚಿಗೆ ಮೈಸೂರಿನಲ್ಲಿ ಸ್ನೇಹಿತರ ಮಗಳ ಮದುವೆ ಇತ್ತು. ದಂಪತಿಗಳು ಮನೆಗೆ ಬಂದು ಆಹ್ವಾನ ಪತ್ರಿಕೆ ಕೊಟ್ಟು ಮದುವೆಗೆ ಎರಡು ದಿನವೂ ಬರಬೇಕೆಂದು ಹೇಳಿದ್ದರು. ಆಹ್ವಾನದ ಜೊತೆಗೆ ಇದ್ದ ಗಿಫ್ಟ್ ಕವರ್ ನೋಡಿ, ಎಲ್ಲಾ ಸರಿ ಇದನ್ನೇಕೆ ಕೊಟ್ಟಿದ್ದೀರಿ ಅಂತ ಕೇಳಿದಾಗ, ಅಯ್ಯೋ ಸಂಬಂಧದ ಮುಂದೆ ಯಾವುದು ಹೆಚ್ಚಿಲ್ಲ ಬಿಡಿ ಅಂದರು. ಅವರ ಶ್ರೀಮತಿ ಸ್ನೇಹವನ್ನು ಸಂಬಂಧಕ್ಕೆ ತಂದುಬಿಟ್ಟರು. ಮುಂದೆ ಮಾತನಾಡಲು ಏನು ತೋಚಲಿಲ್ಲ. ಒಂದು ಸಾರಿ ಇವರ ಮನೆಗೆ ಹೋಗಿದ್ದಾಗ ಮಾತನಾಡುತ್ತಾ ಅವರ ಶ್ರೀಮತಿ ಹೇಳಿದರು, ನಮಗೆ ಇನ್ನೇನು ಬೇಕು ದಿನಕ್ಕೊಂದು ರಾಜಾ ಊಟ ಇದ್ದರೆ ಸಾಕಲ್ವಾ, ಅಂದರೆ ಅವರ ಮಾತಿನ ಅರ್ಥ ಜೀವನದಲ್ಲಿ ತೃಪ್ತಿಪಟ್ಟುಕೊಳ್ಳಬೇಕು ಅಂತ.
ಮನೆಯಲ್ಲಿ ಮಗಳು ಸಹ ಇದ್ದಳು. ಅವಳಿಗೂ ಬೇರೆ ಪತ್ರಿಕೆ ಕೊಟ್ಟು ಆಹ್ವಾನಿಸಿದರು. ಜೊತೆಗೆ ಬೆಂಗಳೂರಿನಲ್ಲಿರುವ ಇನ್ನೊಬ್ಬ ಮಗಳಿಗೂ ಆಹ್ವಾನ ಪತ್ರಿಕೆ ಕಳುಹಿಸಿದ್ದರು. ಈ ರೀತಿಯಾಗಿ ಸ್ನೇಹಿತರು ಹತ್ತಿರವಾಗುತಿದ್ದರೆ ಬಾಂಧವ್ಯ ಬೆಳೆಯುತ್ತೆ. ಈ ದಂಪತಿಗಳ ಸ್ನೇಹಿತರು ಸುಮಾರು ಜನ ನಮ್ಮ ಸ್ನೇಹಿತರು ಸಹ ಆಗಿರುವುದೇ ಒಂದು ಸಂತೋಷದ ವಿಚಾರ. ನಾವೆಲ್ಲ ಸ್ನೇಹಿತರು ನಿವೃತ್ತರಾಗಿ ಇಳಿ ವಯಸಿನಲ್ಲಿ ಇದ್ದೇವೆ. ಎಲ್ಲರೂ ಸೇವೆಯಿಂದ ನಿವೃತ್ತರಾಗಿ ಸುಮಾರು 10 ವರ್ಷಕ್ಕೂ ಮಿಗಿಲಾಗಿದೆ.
ಸೇವೆಯಲ್ಲಿದ್ದಾಗ ಹೆಚ್ಚಿನ ಸ್ನೇಹಿತರು ಒಂದೇ ಕಡೆ ವಾಸವಾಗಿದ್ದದ್ದು ಒಂದು ವಿಶೇಷ. ಮನೆಗಳಿಗೆ ಭೇಟಿ ಕೊಡುವುದುಸಾಮಾನ್ಯವಾಗಿತ್ತು. ಸಂಬಂಧಿಕರು ಬಂದಾಗ ಮನೆಗಳಿಗೆ ನಾವು ಕರೆದುಕೊಂಡು ಹೋಗುವುದು, ಅವರು ಸಹ ಸಂಬಂಧಿಕರನ್ನು ಕರೆದುಕೊಂಡು ಬರುವುದು ವಾಡಿಕೆಯಾಗಿತ್ತು. ನಮ್ಮ ನಮ್ಮ ಮಕ್ಕಳು ಸಹ ಜೊತೆಯಾಗಿ ಇದ್ದು ಶಾಲೆ ಕಲಿತದ್ದು ವಿಶೇಷ.
ಆಹ್ವಾನ ಪತ್ರಿಕೆ ಬಂದ ನಂತರದಲ್ಲಿ ನಮ್ಮ ಸ್ನೇಹಿತರ ಜೊತೆ ಮಾತನಾಡಿ ಮದುವೆಗೆ ಯಾವಾಗ ಬರ್ತೀರಾ ಅಲ್ಲಿ ಸಿಗೋಣ ಎಂದು ಸುದ್ದಿ ವಿನಿಮಯ ಮಾಡಿಕೊಂಡಿದ್ದೆವು. ಎಷ್ಟೋ ಸ್ನೇಹಿತರು ಹುಬ್ಬಳ್ಳಿ, ಧಾರವಾಡ, ಬೆಳಗಾವಿ,ಬೆಂಗಳೂರಿನಿಂದ ಮದುವೆಗೆ ಬಂದವರಾಗಿದ್ದರು.
ಕಾರಣಾಂತರದಿಂದ ಮದುವೆ ಹಿಂದಿನ ದಿನ ರಾತ್ರಿ ಹೋಗಲಿಕ್ಕೆ ಆಗಲಿಲ್ಲ. ಮದುವೆ ದಿನ ಮಕ್ಕಳು ಮೊಮ್ಮಕ್ಕಳಾದಿಯಾಗಿ ಸಿದ್ಧವಾಗಿ ಮದುವೆ ಮಂಟಪಕ್ಕೆ ಕಾಲಿಡುತ್ತಿದ್ದಂತೆ, ಸ್ನೇಹಿತರು ಎದುರುಗೊಂಡು ಹುಸಿ ಮನಸ್ಸಿನಿಂದ ನಾನು ಏನು ಹೇಳಿದ್ದೆ ನಿಮಗೆ ಎರಡು ದಿನವೂ ಬರಬೇಕು ಅಂತ ಹೇಳಿರಲಿಲ್ಲವಾ ಹೇಳಿ. ಈಗ ಬರ್ತಾ ಇದ್ದೀರಾ ಅಂತ ಹೇಳಿ ನಮ್ಮನ್ನು ಆಮಂತ್ರಿಸಿಕೊಂಡರು. ಹೋಗಿ ದಂಪತಿಗಳಿಗೆ ಆಶೀರ್ವಾದಿಸಿ ಬಂದು ತಿಂಡಿ ತಿನ್ನಲು ಹೋಗಬೇಕೆಂದು ಹೇಳಿದರು.
ಆಗ ತಾನೇ ಮಾಂಗಲ್ಯ ಧಾರಣೆಯಾಗಿ ದಂಪತಿಗಳು ಎದುರು ಬದರು ಕೂತು,ತಮ್ಮ ಕೈಗಳಲ್ಲಿ ನಾರಿ ಫಲವನ್ನು ಹಿಡಿದುಕೊಂಡಿದ್ದರು. ನಾರಿ ಫಲಕ್ಕೆ ಹುಲ್ಲಿನ ಗರಿಕೆಯಿಂದ ಹಾಲು ತೆಗೆದುಕೊಂಡು ಪ್ರೋಕ್ಷಣೆ ಮಾಡುವ ಮೂಲಕ ಅವರ ವೈವಾಹಿಕ ಸಂಬಂಧ ಹೆಚ್ಚು ಬಿಗಿಯಾಗಲಿ ಎಂದು ಹಾರೈಸಿ, ಮಂಟಪದಿಂದ ಹೊರಗೆ ಕಾಲಿಟ್ಟರೆ, ಸಭಾಭವನದ ಒಂದು ಕಡೆ ಸ್ನೇಹಿತರೆ ಲ್ಲ ಜಮಾಯಿಸಿದ್ದರು.ಎಲ್ಲರ ಯೋಗ ಕ್ಷೇಮ ವಿಚಾರಿಸಿ ತಿಂಡಿಗೆ ತೆರಳಿದೆವು.
ಪುಷ್ಕಳವಾದ ತಿಂಡಿ ತಿಂದು ಮತ್ತೆ ಸಭಾಂಗಣಕ್ಕೆ ಬಂದರೆ ಮತ್ತಷ್ಟು ಸ್ನೇಹಿತರು ಆಸೀನರಾಗಿದ್ದರು. ಅವರವರ ಹೆಂಡತಿ,ಮಕ್ಕಳು, ಮೊಮ್ಮಕ್ಕಳು ಇನ್ನೊಂದು ಬದಿಯಲ್ಲಿ ಚರ್ಚೆಯಲ್ಲಿ ನಿರತರಾಗಿದ್ದರು. ಮದುವೆಗೆ ಬಂದಿದ್ದೆವು ಅಥವಾ ಸ್ನೇಹಕೂಟಕ್ಕೆ ಬಂದಿದ್ದೆವು ಅಂತ ಒಂದು ಕ್ಷಣ ಬೆರಗಾದದ್ದು ಸತ್ಯ. ಸಂಬಂಧಿಕರಷ್ಟೇ ಸ್ನೇಹಿತರು ಬಂದಿದ್ದರು.
ಬಂದಿದ್ದ ಎಲ್ಲಾ ಸ್ನೇಹಿತರು ಕುಟುಂಬ ಸ್ನೇಹಿತರೆ ಆಗಿದ್ದರಿಂದ, ಸ್ನೇಹಿತರು, ಅವರವರ ಧರ್ಮಪತ್ನಿಯರನ್ನು, ಮಕ್ಕಳನ್ನು ಮಾತನಾಡಿಸಿ ಖುಷಿ ಹಂಚಿಕೊಳ್ಳುವುದೇ ಒಂದು ಸಂಭ್ರಮ ಆಗಿತ್ತು. ಕೆಲವರು ಸಂಪರ್ಕಕ್ಕೆ ಬಂದು ಸುಮಾರು 20 ವರ್ಷಗಳಿಗೂ ಮಿಗಿಲಾಗಿತ್ತು.
ಒಂದು ಕಡೆ ಸ್ನೇಹಿತರ ವಿಚಾರ ವಿನಿಮಯ,ಇನ್ನೊಂದು ಕಡೆ ಹೆಂಗಳೆಯರ ಗಹನವಾದ ಚರ್ಚೆ, ಮತ್ತೊಂದು ಕಡೆ ಮೊಮ್ಮಕ್ಕಳ ಆಟ ಹೀಗೆ ನಡೆದಿತ್ತು ಸಭಾಂಗಣದಲ್ಲೆಲ್ಲಾ. ಬೆಳಿಗ್ಗೆ 10 ರಿಂದ ಒಂದು ಗಂಟೆವರೆಗೆ ಸ್ನೇಹಿತರ ಸಮಾಲೋಚನೆ ನಡೆಯುತ್ತಿದ್ದರೆ, ಮಂಟಪದಲ್ಲಿ ಮದುವೆ ಪೂರ್ವದ ಶಾಸ್ತ್ರಗಳು ನಡೆಯುತ್ತಿತ್ತು.
ಒಂದು ಗಂಟೆ ಸುಮಾರಿಗೆ ನವದಂಪತಿಗಳನ್ನು ಆರತಿ ಅಕ್ಷತೆಗೆ ನಿಲ್ಲಿಸಿದರು. ಕೆಲವು ಸ್ನೇಹಿತರು ಅವರಿಗೆ ಉಡುಗೊರೆ ಕೊಟ್ಟು ಹಾರೈಸುವುದಕ್ಕೆ ಮಂಟಪದ ಕಡೆಗೆ ಹೋದರು. ಕೆಲವರು ಊಟ ಮಾಡಿ ಬಂದು ಹಾರೈಸೋಣ ಎಂದು ಊಟಕ್ಕೆ ಹೋದರು. ರಾಜ ಊಟ ಮಾಡಿಕೊಂಡು ಬಂದು ನಾವು ಸಹ ದಂಪತಿಗಳನ್ನು ಹಾರೈಸಿದೆವು.
ಬಂದಿದ್ದವರೆಲ್ಲರೂ ತಮ್ಮ ತಮ್ಮ ಶಕ್ತಿಗನುಗುಣವಾಗಿ ಫೋಟೋಶೂಟ್ ಮಾಡಿಕೊಂಡರು. ಕಾಲ ಕಳೆದದ್ದು ತಿಳಿಯಲಿಲ್ಲ.ಎಲ್ಲಾ ಸ್ನೇಹಿತರು ಅವರವರ ಊರಿಗೆ ತೆರಳಲು ಸಿದ್ದರಾದರು. ಒಬ್ಬರಿಗೊಬ್ಬರು ಶುಭ ಹಾರೈಕೆ ಮಾಡಿಕೊಂಡು ನಮ್ಮ ನಮ್ಮ ಮನೆಗೆ ತೆರಳಿದೆವು. ಇವರೆಲ್ಲ ಒಟ್ಟಿಗೆ ದುಡಿದದ್ದು, ಕೆಲಸ ಮಾಡಿದ್ದು ಯಾವ ಸಂಸ್ಥೆ ಅಂತ ಯೋಚಿಸುತ್ತಿದ್ದೀರಾ?ಅದೇ ನಮ್ಮ ಹೆಮ್ಮೆಯ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ.
ಮಗಳ ಮದುವೆ ಮಾಡಿದ ದಂಪತಿಗಳು ಯಾರು ಅಂತ ಈಗಾಗಲೇ ಗೊತ್ತಾಗಿರಬೇಕಲ್ಲ. ಅವರೇ ಶ್ರೀ ಸಂಪತ್ ರಾಜ್ ಮತ್ತು ಶ್ರೀಮತಿ ಮಾಲತಿ. ಲೇಖನ ಮುಗಿಸುವುದಕ್ಕೂ ಮೊದಲು ಒಂದು ಮನಸ್ಸಿನ ಮಾತಿದೆ. ಇದೇ ಸುಸಮಯವೆಂದು ಆ ಮನಸ್ಸಿನ ಮಾತನ್ನು ಇಲ್ಲಿ ಹೇಳಲು ಹೊರಟಿದ್ದೇನೆ.

“ಮನಸ್ಸಿನ ಮಾತುಗಳು”
ಕುಟುಂಬ ಮತ್ತು ಎಲ್ಲಾ ಮೊದಲಿಗೆ ಸ್ನೇಹಿತರಾದ ಸಂಪತ್ ರಾಜ್ ಇವರ ಆತಿಥ್ಯದ ಬಗ್ಗೆ ಹೇಳುವುದಾದರೆ ತಮ್ಮ ಮದುವೆಗೂ ಮೊದಲು ತಾವೇ ಸ್ವತಃ ಅಡಿಗೆ ಮಾಡಿಕೊಂಡು, ಬೇರೆಯವರಿಗೂ ಆತಿಥ್ಯ ನೀಡುತ್ತಿದ್ದರು. ಅವರ ಕೈ ರುಚಿಯನ್ನು ನಿಗಮಕ್ಕೆ ಸೇರಿದಾಗಲೇ ಆಸ್ವಾದಿಸಿದ್ದೇನೆ. 1977ರಲ್ಲಿ ಅವರ ಆತಿಥ್ಯ ಪ್ರಾರಂಭವಾಯಿತು. ನಂತರದಲ್ಲಿ ಅವರು ತಂಗಿಯರನ್ನು ಜೊತೆಯಲ್ಲಿ ಇರಿಸಿಕೊಂಡಿದ್ದರು. ನಂತರದಲ್ಲೂ ಸಹ ಈ ಆತಿಥ್ಯ ಮುಂದುವರೆಯಿತು.
ನಾವು ಒಂದು ವಾರದ ಮಟ್ಟಿಗೆ ಊರಿಗೆ ಹೋಗಿ ಬಂದರೆ ಆ ದಿನ ಬೆಳಗ್ಗೆ ಅವರ ಮನೆಯಲ್ಲಿ ತಿಂಡಿ ಖಾಯಂ. ಅವರ ಮೊದಲ ಆದ್ಯತೆ ಸ್ನೇಹಿತರನ್ನು ವಿಚಾರಿಸಿಕೊಳ್ಳುವುದು. ಹೀಗಾಗಿ ಅವರ ಅಕ್ಕತಂಗಿಯರೆ ಲ್ಲರೂ ನಮಗೆ ಚಿರಪರಿಚಿತರೆ ಆಗಿದ್ದರು.
ಇವರು ಮದುವೆಯಾದ ನಂತರ ಇದೇ ರೀತಿಯ ಆತಿತ್ಯ ಮುಂದುವರಿಯಿತು. ನಾನೇನು ಕಡಿಮೆ ಇಲ್ಲ ಅಂತ ಅವರ ಶ್ರೀಮತಿ ಸಂಪತ್ ರಾಜ್ ಸಹ ಆತಿತ್ಯ ನೀಡುವುದರಲ್ಲಿ ಎತ್ತಿದ ಕೈ.ಅವರ ಅಕ್ಕತಂಗಿಯರು ಸಹ ನಮಗೆ ಚಿರಪರಿಚಿತರು. ಒಂದು ರೀತಿಯ ಸಂಬಂಧಿಕರೇ ಆಗಿದ್ದೆವು. ಅದೇ ರೀತಿ ಈವಾಗಲೂ ಸಹ, ಅದೇ ಮುಂದುವರಿದಿದೆ. ಶ್ರೀಮತಿ ಮಾಲತಿ ಸಂಪತ್ ರಾಜ್ ಇವರು ಮೈಸೂರಿನಿಂದ ತಮ್ಮ ಊರಾದ ಸಾಲಿಗ್ರಾಮಕ್ಕೆ ಕರೆದುಕೊಂಡು ಹೋದದ್ದು ನೆನಪಿನ ಬುತ್ತಿಯಲ್ಲಿದೆ.
ನಮ್ಮ ಜೊತೆ ಇನ್ನೂ ಒಂದು ಕುಟುಂಬವು ಸಹ ಇತ್ತು. ಅವರ ಮನೆ ವಿಶೇಷತೆಯಿಂದ ಕೂಡಿತ್ತು. ಬಹಳ ಚೆನ್ನಾಗಿತ್ತು. ಅವರ ತಂದೆ ತಾಯಿಯರು ಮತ್ತು ಅಕ್ಕತಂಗಿಯರು ನಮ್ಮನ್ನು ಬಹಳ ಪ್ರೀತಿಯಿಂದ ನೋಡಿಕೊಂಡರು.ಎಲ್ಲರೂ ಕೂಡಿ ಚುಂಚನಕಟ್ಟೆ ಜಲಪಾತಕ್ಕೆ ಹೋಗಿದ್ದು ಒಂದು ಸುಂದರವಾದ ನೆನಪು.
ಅವರು ಗೇರುಸೊಪ್ಪಿಯಲ್ಲಿದ್ದಾಗ ನಡೆದ ಒಂದು ಘಟನೆ ಯನ್ನು ಮೆಲುಕು ಹಾಕುತ್ತಿದ್ದೇನೆ. ಸೇವೆಯಲ್ಲಿದ್ದಾಗ ಒಂದು ಸಾರಿ ಜೋಗ್ನಿಂದ ಕದರಾಕ್ಕೆ ಹೋಗುವಾಗ ಜೀಪ್ ಕೆಟ್ಟು ಹೋಯಿತು. ಗೇರುಸೊಪ್ಪದ ಅಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿದಾಗ,ಅವರು ಬಂದು ನಮ್ಮನ್ನು ಬೇರೆ ವಾಹನದಲ್ಲಿಗೇರುಸೊಪ್ಪಕ್ಕೆ ಕರೆದುಕೊಂಡು ಹೋದರು. Jeep ಅನ್ನು ದುರಸ್ತಿಗಾಗಿ ಗ್ಯಾರೇಜಿಗೆ ಕಳುಹಿಸಿದರು. ವೇಳೆ ಇದ್ದಿದ್ದರಿಂದ ಸಂಪತ್ ರಾಜ್ ಅವರನ್ನು ಮೀಟ್ ಮಾಡಲು ಆಫೀಸಿಗೆ ಹೋದೆವು. ಊಟದ ಸಮಯವಾಗಿತ್ತು. ಅವರು ನಮ್ಮೆಲ್ಲರನ್ನು ಊಟಕ್ಕೆ ತಮ್ಮ ಮನೆಗೆ ಕರೆದುಕೊಂಡು ಹೋದರು. ಸ್ವಲ್ಪ ಸಮಯದಲ್ಲಿ ನಮ್ಮ ಹೊಟ್ಟೆಯನ್ನು ತುಂಬಿಸಿದರು.ಅದನ್ನು ಮರೆಯಲಾಗದು.
ಇವರು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ತಕ್ಕಂತೆ ಇವರ ಸ್ನೇಹಿತರೆಲ್ಲ ಇವರ ಆಮಂತ್ರಣಕ್ಕೆ ಮನಸೋತಿದ್ದಾರೆ. ಜೀವನದ ಮುಖ್ಯ ಘಟ್ಟವಾದ ಮಗಳ ಮದುವೆಯಲ್ಲಿ ಸ್ನೇಹಿತರೆಲ್ಲ ಸೇರಿ ಮದು ಮಕ್ಕಳಿಗೆ ಶುಭ ಹಾರೈಸಿದ್ದು ಒಂದು ವಿಶೇಷವೇ ಸರಿ. ಹೆಚ್ಚಿನ ಮೆರಗನ್ನು ತಂದು ಕೊಟ್ಟಿದ್ದು ಸಂತೋಷದ ವಿಚಾರ.
ಇವರ ಕುಟುಂಬ ವರ್ಗದವರ ಮತ್ತು ನೂತನ ದಂಪತಿಗಳ ಆರೋಗ್ಯ ಚೆನ್ನಾಗಿರಲಿ ಎಂದು, ನಮ್ಮ ಸ್ನೇಹಿತರ ಪರವಾಗಿ ಹಾರೈಸುತ್ತಾ ಈ ಲೇಖನವನ್ನು ಮುಗಿಸುತ್ತಿದ್ದೇನೆ.
- ದೇವರಾಜಚಾರ್ – ಮೈಸೂರು
