ಇದು ವಿಶೇಷಚೇತನ ಕಲಾವಿದರು ವೀಲ್’ಚೇರ್ ಮೇಲೆ ಪ್ರಸ್ತುತ ಪಡಿಸುವ ನೃತ್ಯನಾಟಕ! ಇಂಥಾದ್ದೊಂದು ಅಭೂತಪೂರ್ವ ಸಾಹಸಕ್ಕೆ ಹೊರಟಿರುವ ಕೃಷ್ಣಪಾಷಾ ಅವರಿಗೆ ನಿಮ್ಮದೊಂದು ಶುಭ ಹಾರೈಕೆಯಿರಲಿ. ಕೃಷ್ಣಪಾಷಾ ಅವರ ಸಾಧನೆಯ ಕುರಿತು ಖ್ಯಾತ ಸಿನಿ ಬರಹಗಾರ ಗಣೇಶ್ ಕಾಸರಗೋಡು ಅವರು ಬರೆದಿರುವ ಲೇಖನವಿದು, ಮುಂದೆ ಓದಿ…
ಇವರ ಹೆಸರು : ಗುರು ಸಯ್ಯದ್ ಸಲ್ಲಾವುದ್ದೀನ್ ಪಾಷಾ. ಚಿಕ್ಕದಾಗಿ, ಚೊಕ್ಕದಾಗಿ : ಪಾಷಾ ಅಯ್ಯಂಗಾರ್! ಇದೀಗ ಸೇರಿಕೊಂಡಿರುವ ಮತ್ತೊಂದು ಹೆಸರು : ಕೃಷ್ಣ ಪಾಷಾ! ಇವರ ನೃತ್ಯ ಪ್ರತಿಭೆಗೆ ಮಾರು ಹೋಗಿ ಉಡುಪಿಯ ಹಿರಿಯ ಶ್ರೀಗಳು ಆಶೀರ್ವದಿಸಿ ಇಟ್ಟ ಹೊಸ ಹೆಸರು ‘ಕೃಷ್ಣ ಪಾಷಾ’! ಅರಳು ಹುರಿದಂತೆ ಸಂಸ್ಕೃತ ಶ್ಲೋಕವನ್ನು ಹೇಳುವ ಈ ಮುಸಲ್ಮಾನ ಬಾಂಧವನ ಭಾಷಾ ಶೈಲಿಯನ್ನು ಕಂಡು ಸಾಕ್ಷಾತ್ ವಿಷ್ಣುವರ್ಧನ್ ಅವರೇ ಮೂಕವಿಸ್ಮಿತರಾಗಿದ್ದರಂತೆ! ಇವರಿಗೆ ‘ಮಹಾಭಾರತ’ವೆಂದರೆ ಪ್ರಾಣ, ‘ರಾಮಾಯಣ’ವೆಂದರೆ ಜೀವ!

‘ಇದೆಲ್ಲಾ ಸರಿ, ನೀವೇಕೆ ನಿಮ್ಮನ್ನೇ ಪಾಷಾ ಅಯ್ಯಂಗಾರ್ ಅಂತ ಕರೀತೀರಿ?’ – ಎಂದು ಪ್ರಶ್ನಿಸಿದರೆ ಶ್ರೀ ಶ್ರೀ ಶ್ರೀ ಗುರು ಸಲ್ಲಾವುದ್ದೀನ್ ಪಾಷಾ ಅಯ್ಯಂಗಾರ್ ಉತ್ತರಿಸುತ್ತಾರೆ : ‘ನಾನು ಆನೇಕಲ್ ಮೂಲದವನು. ಅಲ್ಲಿನ ಸರ್ಕಾರೀ ಕಾಲೇಜಿನಲ್ಲಿ ಓದಿದವನು. ಈಗಾಗಲೇ 100 ದೇಶ ಸುತ್ತಿ ಬಂದಿದ್ದೇನೆ. ಇದಕ್ಕೆ ಮೂಲ ಕಾರಣಕರ್ತರಾದವರು ಅಷ್ಟಾಕ್ಷರ ನಾರಾಯಣ ಅಯ್ಯಂಗಾರ್ ಅನ್ನುವವರು! ನಾನು ಈ ಅಯ್ಯಂಗಾರ್ ಕುಟುಂಬದೊಂದಿಗೇ ಬೆಳೆದವನು. ಇವರು ನನಗೆ ವೇದ ಕಲಿಸಿದರು, ಉಪನಿಷತ್ ಕಲಿಸಿದರು. ಯಾವ ಹೆತ್ತವರು ನನ್ನೊಳಗಿನ ಭರತನಾಟ್ಯ ಕಲಾವಿದನನ್ನು ಕೇವಲವಾಗಿ ನೋಡಿ ಅವಗಣಿಸಿದರೋ, ನಾರಾಯಣ ಅಯ್ಯಂಗಾರ್ ಅದಕ್ಕೆ ನೀರೆರೆದು ಪೋಷಿಸಿದರು. ಭರತನಾಟ್ಯದಲ್ಲಿ ಪದವಿ ಪಡೆದೆ. ಕಥಕ್’ನಲ್ಲೂ ಪದವಿ ಪಡೆದೆ. ಕಥಕ್ ನೃತ್ಯಕಲಾವಿದೆ ‘ರಾಣಿಬಾನಂ’ ರನ್ನೇ ಬಾಳಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡೆ.
ಬಾಲ್ಯದಲ್ಲಿ ನಾನು ನಾರಾಯಣ ಅಯ್ಯಂಗಾರ್ ಅವರ ಮನೆಯ ಅಂಗಳದಲ್ಲೇ ಬೆಳೆದವನು. ಹೀಗಾಗಿ ಇಡೀ ಆನೆಕಲ್ ಮಂದಿ ನನ್ನನ್ನು ಪ್ರೀತಿಯಿಂದ ‘ಪಾಷಾ ಅಯ್ಯಂಗಾರ್’ ಎಂದೇ ಕರೆದರು. ಈಗ ಇದುವೇ ನನ್ನ ಐಡೆಂಟಿಟಿಯಾಗಿ ಬಿಟ್ಟಿದೆ…’ – ಹೀಗೆಂದು ಹೇಳಿ ಭಾವುಕರಾಗುವ ಸಲ್ಲಾವುದ್ದೀನ್ ಪಾಷಾ ಅವರ ಬದುಕಿನ ಬೇರೆ ಬೇರೆ ಬಣ್ಣಗಳನ್ನು ಹೀಗೆ ಗುರುತಿಸ ಬಹುದು : ಇವರು ಚಿತ್ರನಟರೂ ಹೌದು. ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿಯವರ ಅಚ್ಚುಮೆಚ್ಚಿನ ಶಿಷ್ಯರಾಗಿರುವ ಇವರು ‘ಪರ್ವ’ ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ನಾಯಕ ವಿಷ್ಣುವರ್ಧನ್ ಅವರಂತೂ ಪಾಷಾ ಅವರ ಬಹುಮುಖ ಪ್ರತಿಭೆಯನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ : ವಿಕಲಾಂಗರ ಕೈಲಿ ಭರತನಾಟ್ಯವಾಡಿಸುವ ಈ ಜಾದೂಗಾರ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಸಲ್ಲಾವುದ್ದೀನ್ ಪಾಷಾ ಮಾಡುವ ಮೊದಲ ಕೆಲಸವೆಂದರೆ, ವಿಕಲಾಂಗರ ಸಂಸ್ಥೆಗಳಿಗೆ ಭೇಟಿ ನೀಡಿ ಕಲೆಯ ಅಭಿರುಚಿ ಇರುವ ಮಕ್ಕಳನ್ನು ದತ್ತು ಪಡೆದುಕೊಳ್ಳುವುದು. ಬೀದಿ ಮಕ್ಕಳಾದರೂ ಪರ್ವಾಗಿಲ್ಲ. ಅವರನ್ನು ಮನೆಗೆ ಕರೆದುಕೊಂಡು ಬಂದು ಸ್ನಾನ ಮಾಡಿಸುತ್ತಾರೆ. ಒಳ್ಳೊಳ್ಳೆಯ ಬಟ್ಟೆ ಕೊಡಿಸುತ್ತಾರೆ. ಪ್ರೀತಿ ಕೊಡುತ್ತಾರೆ. ಜತೆಗೆ ಅಭಿನಯ ಕಲಿಸಿಕೊಡುತ್ತಾರೆ. ಕಾಲಿಲ್ಲದವರಿಗೆ ಗಾಲಿಕುರ್ಚಿ ಕೊಡಿಸುತ್ತಾರೆ. ಇಂಥಾ ಗಾಲಿ ಕುರ್ಚಿಗಳೇ ರಥಗಳಾಗುತ್ತವೆ! ಇದಕ್ಕಾಗಿ ಪಾಷಾ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸುತ್ತಾರೆ. ಇವರ ಸಂಸ್ಥೆಯ ಹೆಸರು : ‘ಎಬಿಲಿಟಿ ಅನ್ಲಿಮಿಟೆಡ್’. ಇದು ಇಡಿಯ ಭಾರತದಲ್ಲೇ ಅದ್ವಿತೀಯ. ಈ ಸಂಸ್ಥೆಯ ಮೂಲಕ ಇವರು ಪ್ರದರ್ಶಿಸುವ ದೃಶ್ಯಕಾವ್ಯಗಳೆಂದರೆ : ಗಾಲಿ ಮೇಲೆ ರಾಮಾಯಣ, ಶ್ರೀದುರ್ಗಾ, ವಿಶ್ವರೂಪ, ಕುರುಕ್ಷೇತ್ರ, ನೀಲದೇವರು ಶ್ರೀಕೃಷ್ಣ, ಗೋವಿನ ಹಾಡು, ಭಗವಾನ್ ಮಹಾವೀರ…ಒಂದಾ, ಎರಡಾ? ಪಾಷಾ ಮಾಡದ ಪ್ರಯೋಗವಿಲ್ಲ, ಸಾಹಸವಿಲ್ಲ. ಕುಂಟರು ಮಾತ್ರವಲ್ಲ ಕುರುಡರೂ ಇವರ ಪಾತ್ರಧಾರಿಗಳೇ! ಕೈಯಿಲ್ಲದವರು, ಮಂದ ಬುದ್ಧಿಯವರು ಕೂಡಾ ಪಾಷಾ ಕೈಯಲ್ಲಿ ಅರಳುವ ಹೂಗಳೇ…! ಇವರಾಡುವ ಸಂಸ್ಕೃತ ಶ್ಲೋಕವನ್ನು ನೀವು ಕಿವಿಯಾರೆ ಕೇಳಿಯೇ ರೋಮಾಂಚನಗೊಳ್ಳಬೇಕು! ಕೊನೆಕೊನೆಯಲ್ಲಿ ವಿಷ್ಣುವರ್ಧನ್ ಅವರು ಆಧ್ಯಾತ್ಮದತ್ತ ವಾಲಲು ಈ ಪಾಷಾ ಅಯ್ಯಂಗಾರ್ ಅವರೇ ಕಾರಣರಂತೆ!

(ಗುರು ಸಯ್ಯದ್ ಸಲ್ಲಾವುದ್ದೀನ್ ಪಾಷಾ ಅವರೊಂದಿಗೆ ಲೇಖಕರಾದ ಗಣೇಶ್ ಕಾಸರಗೋಡು)
ಇಂಥಾ ಸಯ್ಯದ್ ಸಲ್ಲಾವುದ್ದೀನ್ ಪಾಷಾ ಇದೀಗ ಹಲವು ಕನಸುಗಳನ್ನು ಹೊತ್ತು ದೆಹಲಿಯಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಶಿಫ್ಟ್ ಆದ ದಿನದಿಂದ ಹೊಸ ಹೊಸ ಪ್ರಯೋಗಗಳಲ್ಲಿ ನಿರತರಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಬಳಿಯಲ್ಲೊಂದು ಕಲಾಲೋಕವನ್ನೇ ಸೃಷ್ಟಿಸಿದ್ದಾರೆ. ವಿಕಲಚೇತನ ಮಕ್ಕಳ ಆಡುಂಬೊಲವಿದು! ಇವರನ್ನೇ ಇಟ್ಟುಕೊಂಡು ರಾಮಾಯಣ, ಮಹಾಭಾರತಗಳ ಸ್ವಪ್ನಲೋಕವನ್ನು ಧರೆಗಿಳಿಸುತ್ತಾರೆ! ವಿಕಲಚೇತನ ಮಕ್ಕಳಿಗೆ ಅದುವೇ ಮನೆ-ಮಠ-ಶಾಲೆ…ಎಲ್ಲವೂ ಆಗಿದೆ. ತಮ್ಮ ಸ್ವಂತ ಮಕ್ಕಳಂತೆ ಇವರನ್ನೆಲ್ಲಾ ಕಳೆದ ಹಲವಾರು ವರ್ಷಗಳಿಂದ ಸಾಕುತ್ತಾ ಬಂದಿದ್ದಾರೆ ಕಲೆಯನ್ನು ಬೆಳೆಸುತ್ತಾ ಬಂದಿದ್ದಾರೆ ಪಾಷಾ…

ಇದೀಗ ಮತ್ತೊಂದು ಮಹಾನ್ ಸಾಹಸದ ದೀಕ್ಷೆ ತೆಗೆದುಕೊಂಡಿದ್ದಾರೆ : ಇದು ಸಪ್ತಭಾಷೆಗಳಲ್ಲಿ ‘#ಭಗವದ್ಗೀತೆ‘ ಎಂಬ ಕಾನ್ಸೆಪ್ಟ್. ಈ ವರೆಗೆ ಸಂಸ್ಕೃತ ಮಿಶ್ರಿತ ಕನ್ನಡ ಭಾಷೆಯಲ್ಲಿ ಮಾತ್ರ ಪ್ರದರ್ಶನಗೊಳ್ಳುತ್ತಿದ್ದ ಈ ನೃತ್ಯನಾಟಕ ಇನ್ನು ಮುಂದೆ ತೆಲುಗು, ತಮಿಳು, ಹಿಂದಿ, ಇಂಗ್ಲಿಷ್, ಮಲಯಾಳಂ, ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಪ್ರದರ್ಶನಗೊಳ್ಳಲು ಸಜ್ಜಾಗುತ್ತಿದೆ! ನಿರ್ದೇಶನ ಮತ್ತು ನೃತ್ಯಸಂಯೋಜನೆ ಕೃಷ್ಣಪಾಷಾ ಅವರದ್ದು.
● ವೀಲ್’ಚೇರ್ ಮೇಲೆ ಪ್ರಸ್ತುತ ಪಡಿಸುವ ಈ ನೃತ್ಯನಾಟಕ ಕಾರ್ಯಕ್ರಮಕ್ಕಾಗಿ ಸಂಪರ್ಕಿಸಿ : 9811340308, 9597167987
- ಗಣೇಶ್ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)
