‘ಸರ್, ಇಷ್ಟೊಂದು ಆಪ್ತ ಗೆಳೆತನವಿದ್ದೂ ಅವರು ನಿಮಗಾಗಿ ಏನನ್ನೂ ಕೊಡಲಿಲ್ಲವೇ? ಈಗಲೂ ಈ ಬಾಡಿಗೆ ಮನೆಯಲ್ಲಿದ್ದೀರಿ. ಊಟಕ್ಕೆ ಏನು ಮಾಡಿಕೊಂಡಿದ್ದೀರೋ ಗೊತ್ತಿಲ್ಲ. ದಯವಿಟ್ಟು ಉತ್ತರಿಸಿ…’ – ಖ್ಯಾತ ಸಿನಿ ಪತ್ರಕರ್ತ ಗಣೇಶ ಕಾಸರಗೋಡು ಅವರು ವರನಟ ಡಾ. ರಾಜಕುಮಾರ್ ಅವರ ಪರಮಾಪ್ತಮಿತ್ರರಾದ ತಿಪಟೂರಿನ ರಾಮಸ್ವಾಮಿಯವರಿಗೆ ಕೇಳಿದ ಪ್ರಶ್ನೆಯಿದು, ಅದಕ್ಕೆ ಅವರು ಕೊಟ್ಟ ಉತ್ತರವೇನು ತಪ್ಪದೆ ಮುಂದೆ ಓದಿ…
ವರನಟ ಡಾ. ರಾಜಕುಮಾರ್ ಅವರ ಪರಮಾಪ್ತಮಿತ್ರರಾದ ತಿಪಟೂರಿನ ರಾಮಸ್ವಾಮಿಯವರ ಬಗ್ಗೆ ಬರೆಯಲು ಕೂತಿದ್ದೇನೆ. ಪೆನ್ನು ಮುಂದೆ ಹೋಗದು. ರಚ್ಚೆ ಹಿಡಿದಿದೆ. ಯಾವುದನ್ನು ಬರೆಯಲಿ? ಎಷ್ಟು ಬರೆಯಲಿ? ಏನೆಂದು ಬರೆಯಲಿ? ಕಷ್ಟ ಕಷ್ಟ! ಆ ಮಹಾನ್ ಚೇತನದ ಜತೆಗಿನ ಒಂದೊಂದು ಮಾತೂ ಬೆಲೆ ಬಾಳುವಂಥಾದ್ದು. ಬೇರೆ ಯಾರಲ್ಲಿ ಹೇಳಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ, ಆದರೆ ನನ್ನಲ್ಲಿ ಹೇಳಿಕೊಂಡು ಭಾವೋದ್ವೇಗಕ್ಕೊಳಗಾಗಿದ್ದಾರೆ, ಕಣ್ಣೀರಾಗಿದ್ದಾರೆ.

ಬಿಳಿಯ ಹಾಫ್ ಕೈ ಜುಬ್ಬಾ, ಬಿಳಿಯ ಪಂಚೆ, ಬಿಳಿಯ ಶಲ್ಯ. ಹಣೆಗೊಂದು ದೊಡ್ಡದಾದ ಕುಂಕುಮದ ಬೊಟ್ಟು! ಸರಳ ಮಾತು, ವ್ಯಾಕರಣ ಬದ್ಧ ವಾಕ್ಯ, ಸ್ಖಾಲಿತ್ಯವಿಲ್ಲದ ಅಪ್ಪಟ ಕನ್ನಡ ಭಾಷೆ, ಎಲ್ಲೂ ತಡವರಿಸದ ಮಾತಿನ ಓಘ! ರಾಜ್ ಬಗ್ಗೆ, ಅವರ ಸ್ನೇಹದ ಬಗ್ಗೆ ಹೇಳುತ್ತಾ ಹೇಳುತ್ತಾ ಕಂಬನಿ ತುಂಬಿಕೊಂಡರು. 1945ರಿಂದ ಆರಂಭವಾದ ರಾಜ್ ಜತೆಗಿನ ಸ್ನೇಹ ಸಂಬಂಧದ ಕಥೆಯನ್ನು ಕೇವಲ ಮೂರು ಗಂಟೆಯಲ್ಲಿ ಹೇಳುವುದು ಸಾಧ್ಯವೇ? ಆದರೂ ಪ್ರಯತ್ನ ಪಟ್ಟರು. ನಾನು ಮತ್ತು ಗಾಯತ್ರಿ ಈ ಕಥೆಯನ್ನು ಕೇಳುತ್ತಾ ಕೇಳುತ್ತಾ ತನ್ಮಯರಾದೆವು, ದಿಗ್ಭ್ರಮೆಗೊಳಗಾದೆವು. ಇಲ್ಲಿ ಅವಷ್ಟನ್ನೂ ಬರೆಯುವುದು ಸಾಧ್ಯವಿಲ್ಲ, ಸಾಧುವೂ ಅಲ್ಲ. ಆದರೆ ನನಗೊಂದು ಕುತೂಹಲವಿತ್ತು. ಅದನ್ನು ಪ್ರಶ್ನೆ ರೂಪದಲ್ಲಿ ರಾಮಸ್ವಾಮಿಯವರಲ್ಲಿ ಕೇಳಿದೆ : ‘ಸರ್, ಇಷ್ಟೊಂದು ಆಪ್ತ ಗೆಳೆತನವಿದ್ದೂ ಅವರು ನಿಮಗಾಗಿ ಏನನ್ನೂ ಕೊಡಲಿಲ್ಲವೇ? ಈಗಲೂ ಈ ಬಾಡಿಗೆ ಮನೆಯಲ್ಲಿದ್ದೀರಿ. ಊಟಕ್ಕೆ ಏನು ಮಾಡಿಕೊಂಡಿದ್ದೀರೋ ಗೊತ್ತಿಲ್ಲ. ದಯವಿಟ್ಟು ಉತ್ತರಿಸಿ…’

ಅವರಂದರು : ‘ಒಮ್ಮೆ ಮುತ್ತುರಾಜ್ ನನ್ನ ಬಳಿ ಕೇಳಿಕೊಂಡರು : ‘ನಿಮಗೇನು ಬೇಕು ಕೇಳಿ, ಕೊಡುತ್ತೇನೆ’ ನಾನಂದೆ : ‘ನಿಮ್ಮ ಸ್ನೇಹ ಬೇಕು ನಿಮ್ಮ ಗೆಳೆತನ ಬೇಕು, ನಿಮ್ಮ ವಿಶ್ವಾಸ ಬೇಕು, ನಿಮ್ಮ ಗೌರವ ಬೇಕು, ಅಷ್ಟೇ ಯಾಕೆ ಇಡಿಯಾಗಿ ನೀವೇ ಬೇಕು! ಇದರ ಹೊರತಾಗಿ ಬೇರೇನೂ ಬೇಡ…’ – ನನ್ನ ಈ ಮಾತು ಕೇಳಿ ಅವ್ರು ನಕ್ಕು ಬಿಟ್ರು. ಒಮ್ಮೆ ಗಾಢವಾಗಿ ಆಲಂಗಿಸಿ ‘ನಾನು ಎಂದೆಂದೂ ನಿಮ್ಮವನೇ’ ಅಂದ್ರು. ಅಷ್ಟು ಸಾಕು…’ – ಎಂದು ಹೇಳುತ್ತಾ ತಾವೇ ಕೈಯ್ಯಾರೆ ರಚಿಸಿದ ರಾಜ್ ಭಾವಚಿತ್ರಕ್ಕೆ ದೊಡ್ಡದೊಂದು ನಮಸ್ಕಾರ ಹಾಕಿದರು!
ಅಲ್ಲೇ ಟೀಪಾಯಿ ಮೇಲೆ ಊಟ ತಂದಿಟ್ಟರು ರಾಮಸ್ವಾಮಿಯವರ ಅರ್ಧಾ0ಗಿ ವನಜಾಕ್ಷಮ್ಮ. ಹೊಟ್ಟೆ ತುಂಬಾ ಉಂಡೆವು. ನಾವು ಉಣ್ಣುವುದನ್ನು ನೋಡುತ್ತಾ ಖುಷಿಪಟ್ಟರು ದಂಪತಿ.

ಬೆಂಗಳೂರಿಗೆ ಬಂದ ಮೇಲೆ ಅವರ ಸಾಕು ಮಗನಂತಿರುವ ತಿಪಟೂರು ದಯಾನಂದ್ ಫೋನ್ ಮಾಡಿ ಹೇಳಿದ್ದಿಷ್ಟು : ‘ಸಾರ್, ಮಧ್ಯಾಹ್ನದ ಅಡುಗೆಯನ್ನು ಅವರಿಗಾಗಿ ಮಾಡಿದ್ದರು. ನೀವು ಬಂದಿದ್ದೀರೆಂದು ಅದೇ ಊಟವನ್ನು ನಿಮಗೆ ಬಡಿಸಿದ್ದರು. ಆ ಮಧ್ಯಾಹ್ನ ಅವರು ಊಟ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ…’ – ದಯಾನಂದ್ ಅವರ ಮಾತು ಕೇಳಿ ಗಂಟಲು ಕಟ್ಟಿಕೊಂಡಿತು. ಹೀಗೂ ಉಂಟೇ? ನಾವು ಉಂಡ ಅನ್ನ, ಸಾಂಬಾರು, ಹಪ್ಪಳ, ಉಪ್ಪಿನಕಾಯಿ…ಓಹ್, ದೇವಾ…ತಪ್ಪು ಮಾಡಿ ಬಿಟ್ಟೆವಾ? ಉಣ್ಣುವಾಗ ನಾನು ಕೇಳಿದ್ದೆ : ‘ನೀವೂ ನಮ್ಮ ಜತೆ ಊಟ ಮಾಡಿ…’ ಅವರಂದಿದ್ದರು : ‘ಅತಿಥಿ ದೇವೋಭವ. ನೀವು ಊಟ ಮಾಡಿ, ನಾವು ಆಮೇಲೆ ಮಾಡುತ್ತೇವೆ…ಇದು ನಮ್ಮ ಪದ್ದತಿ…’
ಪಕ್ಕನೇ ಅಣ್ಣಾವ್ರು ನಟಿಸಿದ ‘ಕಸ್ತೂರಿ ನಿವಾಸ’ ಚಿತ್ರದ ಕೊನೆಯ ಫ್ರೇಮು ನೆನಪಾಯಿತು…Oh my god…
- ಗಣೇಶ ಕಾಸರಗೋಡು – ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು
