ದಿನದ ಚಟುವಟಿಕೆಗಳಲ್ಲಿ ನೀರು ಪ್ರಮುಖ ಪಾತ್ರವಹಿಸುತ್ತದೆ. ದಿನಬಳಕೆಗೆ ಜೀವನದಲ್ಲಿ ನೀರಿಲ್ಲದೆ ಏನೂ ಆಗುವುದಿಲ್ಲ. ಅದೇ ತರ ಪೂಜೆ ಪುನಸ್ಕಾರದಲ್ಲಿ ನೀರಿಗೆ ವಿಶೇಷವಾದ ಮಹತ್ವವಿದೆ. ಸುಜಾತಾ ರವೀಶ್ ಅವರ ನೀರಿನ ಕುರಿತಾದ ವಿಶೇಷ ಲೇಖನವನ್ನು ತಪ್ಪದೆ ಮುಂದೆ ಓದಿ…
(ಜಲಪೂರಣ ಹಬ್ಬದ ಸಂದರ್ಭದಲ್ಲಿ)
ಆಪ, ನೀರು, ಜಲ, ತೋಯ,ಉದಕ ಎಂದೆಲ್ಲ ನಾಮಧೇಯಗಳನ್ನು ಹೊಂದಿರುವ ನೀರು ಇದರ ಮಹಿಮೆ ಮಹತ್ವ ಎರಡೂ ಹಿರಿದೇ. “ನೀರಿಗೆ ಹತ್ತಿರವಿರು ನೆಂಟರಿಗೆ ದೂರವಿರು” ಎಂಬ ಗಾದೆ ತಿಳಿಸುವುದು ನೀರಿನ ಮಹತ್ತನ್ನೇ. ನೀರು ಭೂಮಿಯ ಸರಿಸುಮಾರು ೭೦.೯% ದಷ್ಟು ಭಾಗವನ್ನು ಆಕ್ರಮಿಸಿಕೊಂಡಿದೆ. ಮಾನವ ದೇಹದ ೬೦% ರಷ್ಟು ಭಾಗ ದ್ರವ ರೂಪವೇ. ಜೀವದ ಪ್ರಥಮ ಸೃಷ್ಟಿಗೆ ಕಾರಣ ಆಸರೆ ನೆಲೆ ಜಲವೇ ಎಂಬುದು ತಿಳಿದ ವಿಷಯವೇ. ಹಾಗೆಯೇ ಸೃಷ್ಟಿಯ ಹುಟ್ಟು ಬೆಳವಣಿಗೆಗಳ ಆಧಾರವೂ ಜಲವೇ.
ವೈಜ್ಞಾನಿಕವಾಗಿ ವಿವರಿಸಬೇಕೆಂದರೆ ನೀರು ರಾಸಾಯನಿಕ ಸೂತ್ರ H2O. ಅಜೈವಿಕ ಪಾರದರ್ಶಕ ರುಚಿ ವಾಸನೆ ಇಲ್ಲದ ಬಣ್ಣರಹಿತ ರಾಸಾಯನಿಕ ವಸ್ತು. ದ್ರವ ರೂಪದಲ್ಲಿ ಜಲವೆಂದು ಘನೀಕೃತ ಸ್ಥಿತಿಯಲ್ಲಿ ಮಂಜುಗಡ್ಡೆಯೆಂದೂ ಹಾಗೂ ಆವಿಯ ರೂಪದಲ್ಲಿ ವಾತಾವರಣದಲ್ಲಿ ತೇವಾಂಶವೂ ಆಗಿರುವ ನೀರನ್ನು ಸರ್ವವ್ಯಾಪಿ ಎಂದು ಕರೆದರೆ ತಪ್ಪಿಲ್ಲ .
ಹಿಂದೂ ಸಂಸ್ಕೃತಿಯಲ್ಲಿ ಸ ಸೃಷ್ಟಿಯು ಪಂಚಭೂತಗಳಿಂದ ನಿರ್ಮಿತವಾಗಿದ್ದು ಎಂಬ ನಂಬಿಕೆ. ಭೂಮಿ ಜಲ ಅಗ್ನಿ ವಾಯು ಮತ್ತು ಆಕಾಶ ಈ ಪಂಚಭೂತ ಗಳಲ್ಲಿ ಎರಡನೆಯದಾದ ಜಲ ಸರ್ವವ್ಯಾಪಿ. ಭೂಮಿಯ ಶೇಕಡಾ ಎಪ್ಪತ್ತು ಭಾಗ ನೀರು, ಜಲದಲ್ಲಿಯೇ ಅಗ್ನಿಯು ಜನಿತ ಎಂದು ಪ್ರತೀತಿ. ಇನ್ನೂ ವಾಯು ಹಾಗೂ ಆಕಾಶದಲ್ಲಿ ಮೋಡಗಳ ರೂಪದಲ್ಲಿ ಇದರ ಇರುವಿಕೆ ಹೀಗಾಗಿ ನೀರಿಗೆ ನಮ್ಮ ಸಂಸ್ಕೃತಿಯಲ್ಲಿ ತುಂಬಾ ಮೌಲ್ಯಯುತ ಸ್ಥಾನ .

ನೀರಿನ ಉಪಯೋಗಗಳು :
ನೀರಿಲ್ಲದ ಪ್ರಪಂಚವನ್ನು ಊಹಿಸಲೇ ಸಾಧ್ಯವಿಲ್ಲ. ಮೊದಲಿಗೆ ಮಾನವನ ದೇಹದಲ್ಲಿ ನೀರಿನಿಂದಾಗುವ ಅನುಕೂಲತೆಗಳನ್ನು ನೋಡೋಣ. “ನೀರು ಜೀವನದ ಬೇರು”.. ಆರೋಗ್ಯದಲ್ಲಿ ದಿನದ ಚಟುವಟಿಕೆಗಳಲ್ಲಿ ನೀರು ಪ್ರಮುಖ ಪಾತ್ರವಹಿಸುತ್ತದೆ . ರಕ್ತದಲ್ಲಿ ಹೆಚ್ಚಿನ ಪ್ರಮಾಣದ ನೀರಿದ್ದರೆ ಮೂಳೆ ಶ್ವಾಸಕೋಶ ಮತ್ತು ಮಿದುಳುಗಳಲ್ಲಿ ಸಹ ನೀರು ಕಂಡು ಬರುತ್ತದೆ. ದೇಹದ ಉಷ್ಣತೆ ಕಾಪಾಡಿಕೊಳ್ಳಲು, ಪೋಷಕಾಂಶಗಳು ದೇಹದ ಎಲ್ಲ ಜೀವಕಣಗಳಿಗೆ ದೊರೆಯಲು, ಆಮ್ಲಜನಕ ಎಲ್ಲ ಕೋಶಗಳಿಗೆ ಮುಟ್ಟಿಸಿ ದೇಹದಿಂದ ವ್ಯರ್ಥ ಅನಿರೀಕ್ಷಿತ ವಸ್ತುಗಳನ್ನು ಹೊರ ಹಾಕುವ ತನಕ ನೀರಿನದೇ ಪ್ರಮುಖ ಪಾತ್ರ . ನಿಗದಿತ ಅಂಶಕ್ಕಿಂತ ಸ್ವಲ್ಪ ಪ್ರಮಾಣ ಕಡಿಮೆಯಾದರೂ ದೇಹ ನಿರ್ಜಲೀಕರಣಕ್ಕೆ ಒಳಗಾಗಿ ಅಪಾಯವಾಗುತ್ತದೆ .
ಜಲ ಚಿಕಿತ್ಸೆ ಜಲಚಿಕಿತ್ಸೆ ಹೆಸರೇ ಹೇಳುವಂತೆ ಬಾಹ್ಯ ಹಾಗೂ ಆಂತರಿಕವಾಗಿ ಮತ್ತು ಬೇರೆ ಬೇರೆ ಉಷ್ಣತೆಗಳಲ್ಲಿ ನೀರಿನ ಬಳಕೆ ಸೌನಾಗಳು ಉಗಿಸ್ನಾನ ಕಾಲು ಸ್ನಾನ ಕಾಂಟ್ರಾಸ್ಟ್ ಥೆರಪಿ ಬಿಸಿ ಮತ್ತು ಶೀತ ಸ್ನಾನ ಇವೆಲ್ಲ ಜಲಚಿಕಿತ್ಸೆಯ ವಿಧಾನಗಳು. ಸಂಧಿವಾತ ಮುಂತಾದ ಕಾಯಿಲೆಗಳಿಗೆ ಈ ಚಿಕಿತ್ಸೆಯು ಬಳಕೆಯಾಗುತ್ತದೆ.
ಇನ್ನು ದಿನಬಳಕೆಗೆ ಜೀವನದಲ್ಲಿ ನೀರಿಲ್ಲದೆ ಏನೂ ಆಗುವುದಿಲ್ಲ. ವ್ಯವಸಾಯ ಹಾಗೂ ಕೈಗಾರಿಕೆಗಳಿಗೆ ನೀರು ಬೇಕು . ಎಲ್ಲದಕ್ಕೂ ಮೂಲ ಅವಶ್ಯಕತೆ ನೀರೇ ಆಗಿದೆ. ಹಿಂದೂ ಸಂಸ್ಕೃತಿಯ ಮೂಲವಾಗಿರುವ ಋಗ್ವೇದದಲ್ಲಿ ಜಲದ ಬಗ್ಗೆ ಹೇಳಿರುವ ಆಪಾ ಸೂಕ್ತಂ ನಲ್ಲಿ ಹೀಗೆ ವಿವರವಾಗಿ ಸ್ತುತಿಸಲ್ಪಟ್ಟಿದೆ.
ಇರುವಿಕೆ ಮಾತ್ರದಿಂದಲೆ ವಾತಾವರಣವನ್ನು ಮುದಗೊಳಿಸಿ ಹೊಸ ಚೈತನ್ಯ ಹುಮ್ಮಸ್ಸು ತಂದಿ ತಾಯಿಯಂತೆ ಪೊರೆಯುವೆ. ಜೀವಗಳಿಗೆಲ್ಲ ಮೂಲಾಧಾರ . ನಿನ್ನ ಪವಿತ್ರತೆ ಪಾವನತೆ ನಮಗೂ ನಿಮ್ಮ ಸೇವನೆಯಿಂದ ಬರಲಿ . ಸೃಷ್ಟಿಯಲ್ಲಿ ಪುಷ್ಟಿ ಹಾಗೂ ಔಷಧಿಗಳನ್ನು ತುಂಬುವುದು ನೀನೇ .ನಿನ್ನಿಂದಲೇ ಅಗ್ನಿ ಹುಟ್ಟುತ್ತದೆ. ನಿನ್ನಲ್ಲಿರುವ ಔಷದದ ಗುಣ ತುಂಬಿ ದೀರ್ಘಾಯುವನ್ನಾಗಿ ಮಾಡು ಹಾಗೂ ನನ್ನೊಳಗಿನ ಅಂತರಂಗದ ಮತ್ತು ದೇಹದ ಕಲ್ಮಶ ಮಲಿನತೆಗಳನ್ನು ದೂರಮಾಡು.”
ಅಂದರೆ ಸೃಷ್ಟಿಗೆ ಮೂಲ ಹೇತು ಎಂದೇ ಜಲವನ್ನು ಪರಿಭಾವಿಸಿ ಅತ್ಯಂತ ಪೂಜನೀಯ ಸ್ಥಾನ ನೀಡುತ್ತಾರೆ . ಹಿಂದೂ ಧರ್ಮದ ರೀತ್ಯ ಜಲಕ್ಕೆ ಇಬ್ಬರು ಅಧಿ ದೇವತೆಗಳು. ಇಂದ್ರ ಮತ್ತು ವರುಣ . ಇಂದ್ರ ನೀರಿನ ಮೂಲಗಳ ಒಡೆಯನಾದರೆ ಜಲ ಸಂಪನ್ಮೂಲಗಳ ನಿರ್ವಹಣೆಯ ಕೆಲಸ ವರುಣನದು. ಸೃಷ್ಟಿಯ ಎಲ್ಲ ವನ್ಯ ಸಸ್ಯ ರಾಶಿಗಳಿಗೂ ವೈದ್ಯಕೀಯ ಗಿಡಮೂಲಿಕೆಗಳಿಗೂ ಅಧಿಪತಿ ಮತ್ತು ಸಹಾಯಕನಾಗಿ ಪರ್ಜನ್ಯ. ಹಿಂದಿನವರು ಪ್ರಕೃತಿಯ ಮಹತ್ವ ಅರಿತಿದ್ದರಿಂದಲೇ ಯಾವುದರ ದುರುಪಯೋಗವಾಗದೆ ಸಮತೋಲನ ಏರ್ಪಟ್ಟಿತ್ತು.

ಫೋಟೋ ಕೃಪೆ : google
ಧಾರ್ಮಿಕ ಆಚರಣೆಗಳಲ್ಲಿ ನೀರು
ನೀರು ಮಾಲಿನ್ಯ ನಿವಾರಕವೆಂದೇ ಗುರುತಿಸಿಕೊಂಡಿರುವುದು. ಪೂಜಾ ವಿಧಿವಿಧಾನಗಳಲ್ಲಿ ಮೊದಲು ಪೂಜೆಯ ಜಾಗದ ಶುದ್ಧೀಕರಣ, ಪೂಜಾ ಪರಿಕರಗಳ ಶುದ್ಧೀಕರಣ ನೀರಿನಿಂದಲೇ. ಪೂಜೆ ಮಾಡುವ ವ್ಯಕ್ತಿಯೂ ಕೂಡ ಜಲಸ್ನಾತನಾಗಿಯೆ ಬರುವುದು .ಪೂಜೆಗೆ ಮುಂಚೆ ತನ್ನನ್ನು, ಪೂಜಾ ಪರಿಕರಗಳೆಲ್ಲವನ್ನೂ ಪುಣ್ಯ ಜಲದಿಂದ ಪ್ರೋಕ್ಷಿಸಿ ಪೂಜೆ ಆರಂಭ. ಹೀಗೆ ನೀರು ಅತ್ಯಾವಶ್ಯಕ .
ಪೂಜಾ ವಿಧಿವಿಧಾನಗಳಲ್ಲಿ ಮೊದಲು ಮಾರ್ಜಕವಾಗಿ ಬಳಸುತ್ತೇವೆ ನಂತರದ ಕ್ರಿಯೆ ಅಭಿಷೇಕ . ಈ ಧಾರ್ಮಿಕ ವಿಧಿಯಲ್ಲಿ ಪೂಜಾ ಮೂರ್ತಿಗೆ ಏನೆಲ್ಲಾ ಬೇರೆ ವಸ್ತುಗಳನ್ನು ಅಂದರೆ ಹಾಲು ಜೇನು ತುಪ್ಪ ಬಾಳೆಹಣ್ಣು ಎಳನೀರು ಗಳನ್ನು ಬಳಸಿದರೂ ಮುಕ್ತಾಯಕ್ಕೆ ಮಾತ್ರ ನೀರಿನ ಅಭಿಷೇಕವೇ ಆಗಬೇಕು. ಅಂದರೆ ನೀರಿನ ಶ್ರೇಷ್ಠತೆಗೆ ಇದೊಂದು ಸೂಚಕವಷ್ಟೇ.
ಈ ಅಭಿಷೇಕ, ಪಟ್ಟಾಭಿಷೇಕ ಮುಂತಾದ ಆಚರಣೆಗಳಲ್ಲಿಯೂ ಸ್ಥಾನ ಪಡೆದುಕೊಂಡಿದ್ದು ಪುಣ್ಯನದಿಗಳ ಜಲವನ್ನು ಇದಕ್ಕಾಗಿಯೇ ತರಿಸುತ್ತಿದ್ದರಂತೆ .
ಹಿಂದೂ ಧರ್ಮದ ದ್ವಿಜರು ಮಾಡಬೇಕಾದ ಸಂಧ್ಯಾವಂದನ ವಿಧಿಯಲ್ಲಿ ಅರ್ಘ್ಯ ಆಚಮನ ಮಾರ್ಜನ ಪ್ರೋಕ್ಷಣ ವಿಷಯಗಳಲ್ಲಿ ನೀರಿಗೆ ಪ್ರಾಶಸ್ತ್ಯ ಹಾಗೂ ಮಂತ್ರಗಳಲ್ಲಿಯೂ ಸಹ ನೀರಿನ ಬಗ್ಗೆ ಪ್ರಸ್ತಾಪ ಮಾಡಲಾಗಿದೆ
ಪೂಜೆಯಲ್ಲಿಟ್ಟ ಕಳಸದ ನೀರು ದೇವರ ಅಭಿಷೇಕ ಜಲ ತೀರ್ಥವಾಗಿ ಜನಸಾಮಾನ್ಯರಿಗೆ ಪೂಜ್ಯವಾಗುತ್ತದೆ .ಕೆಲವೊಂದು ಮೂರ್ತಿಗಳಿಗೆ ದೈವಿಕತೆ ಬರಲು ಜಲ ನಿರ್ಬಂಧೀಕರಣ ಎಂದು ನಿರ್ದಿಷ್ಟ ಕಾಲಗಳ ನಿರ್ದಿಷ್ಟ ಸಮಯದ ವರೆಗೆ ನೀರಿನಲ್ಲಿ ಮುಳುಗಿಸಿರುತ್ತಾರೆ.
ಮಗು ಜನಿಸಿದ ಹನ್ನೊಂದನೇ ದಿನದ ಪುರುಡು ಕಳೆದ ಮಂಗಳ ಸ್ನಾನದಿಂದ ಹಿಡಿದು ಎಲ್ಲಾ ಪುಣ್ಯ ವಿಧಿಗಳಲ್ಲೂ ನೀರಿನ ಬಳಕೆ ಇದೆ. ಕ್ರಿಶ್ಚಿಯನ್ ಧರ್ಮದ ಬ್ಯಾಪ್ಟಿಸಮ್ ಸಹ ಇದರ 1ಉದಾಹರಣೆ. ಮರಣಾನಂತರದ ಕಡೆಯ ಸ್ನಾನ ಸೂತಕ ಕಳೆದ ಸ್ನಾನದ ನೀರಿನಿಂದಲೇ. ಹೆಣ್ಣು ಮಕ್ಕಳ ಮಾಸಿಕಸ್ರಾವದಲ್ಲೂ ತಲೆಗೆ ಐದನೆಯ ನೀರು ಬಿದ್ದ ಮೇಲೆಯೇ ಮುಂದೆ ದೇವರ ಪೂಜೆ ಮಾಡುವ ಅರ್ಹತೆ. ಹೀಗೆ ಹುಟ್ಟಿನಿಂದ ಸಾವಿನವರೆಗೂ ನೀರಿನ ಗಂಟು ಬಿಡಿಸಲಾಗದ ನಂಟು .
ನಾಗರಿಕತೆಯ ಉಗಮ ವಿಕಸನಗಳೆಲ್ಲ ಸಮೃದ್ಧ ಜಲಾವಾಸದ ನದಿತೀರಗಳಲ್ಲೇ ಎಂಬುದು ಹರಪ್ಪ ಮಹೆಂಜದಾರೊ, ಈಜಿಪ್ಟ್, ಮೆಸಪಟೋಮಿಯಾ ಮುಂತಾದ ನಾಗರಿಕತೆಗಳ ಬಗ್ಗೆ ತಿಳಿಯುವಾಗ ಅರಿವಾಗುತ್ತದೆ .ಹಾಗೆಯೇ ನದಿಗಳ ದಿಕ್ಕು ಗಮನ ಬದಲಾದಂತೆ ನಾಗರಿಕತೆಗಳೂ ಸ್ಥಳ ಬದಲಾಯಿಸಿವೆ. ಪುಣ್ಯಕ್ಷೇತ್ರಗಳೆಲ್ಲ ನದೀದಂಡೆಗಳಲ್ಲಿ ಇರುವುದು, ದೇವಾಲಯಗಳ ಮುಂದಿನ ಕಲ್ಯಾಣಿ ಕೆರೆಗಳು ದೇಗುಲಗಳ ದೈವಿಕತೆಗೆ ಜಲದ ಪಾವಿತ್ರ್ಯತೆಯ ಅವಿನಾಭಾವ ಸಂಬಂಧವನ್ನು ನಿರೂಪಿಸುತ್ತದೆ.
ಜಲದ ಮೂಲ ನದಿಯೇ ಆದ್ದರಿಂದ ನದಿಗಳ ಪ್ರಸಕ್ತಿ ಇರದೆ ಬರಹ ಪೂರ್ಣವಾಗದು. ಹಿಂದೂಗಳಿಗೆ ಈ ಸಪ್ತ ನದಿಗಳು ಪೂಜ್ಯ . ಪಾಪಕಳೆವ ಗಂಗೆ ಎಂದೇ ಪ್ರಖ್ಯಾತಿ. ಹಾಗಾಗಿಯೇ ಎಲ್ಲ ನೀರುಗಳಿಗೆ ಸಪ್ತಪುಣ್ಯ ನದಿಗಳ ಪಾವಿತ್ರತೆಯನ್ನು ಆರೋಪಿಸುವ ಈ ಪದ್ಯ ಗಮನಾರ್ಹ .
ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು
ಆಹ್ನಿಕ ಸೂತ್ರವಾಯಿ ಪದ್ಯ ೧೦೬
ಹೀಗೆ ಜನಜೀವನದ ಹಾಸುಹೊಕ್ಕಾಗಿರುವ ಈ ಸಂಪತ್ತನ್ನು ಮನಸೋ ಇಚ್ಛೆ ದುರ್ಬಳಕೆ ಮಾಡುತ್ತಿದ್ದಾನೆ ಆಧುನಿಕ ಮಾನವ.. ಎಷ್ಟೋ ನದಿಗಳು ಮಾಯವಾಗಿವೆ .ಮಳೆಗಳು ಸರಿಯಾಗಿ ಆಗದೆ ಹವಾಮಾನ ವೈಪರೀತ್ಯ ಜಲ ವಾಯು ಭೂ ಮಾಲಿನ್ಯಗಳು ನಿಸರ್ಗವನ್ನು ಕಲುಷಿತಗೊಳಿಸಿವೆ . ಅಂತರ್ಜಲ ಮಾಯವಾಗುತ್ತಾ ಜಲಕ್ಷಾಮ ತಲೆದೋರಿದೆ. ತಜ್ಞರ ಪ್ರಕಾರ ಮೂರನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿಯೇ ಅಂತೆ.. ಗಂಗೆ ಎಂದು ಪೂಜಿಸುವ ನಾವು ಜಲ ಸಂರಕ್ಷಣೆಯ ಕಡೆಗೂ ಗಮನ ಕೊಡಬೇಕಲ್ಲವೇ? “ಕೆರೆಯ ನೀರನು ಕೆರೆಗೆ ಚೆಲ್ಲಿ” ಎಂಬಂತೆ ನಡೆಯಬೇಕಲ್ಲವೇ? ನಾವು ಮಾತ್ರ ಪಡೆದು ಮುಂದಿನ ತಲೆಮಾರಿಗೆ ಇರದಂತೆ ಬರಿದಾಗಿಸುವುದು ತರವೇ? ಈ ನಿಟ್ಟಿನಲ್ಲಿ ಕಾರ್ಯ ತತ್ಪರರಾಗಬೇಕು . ಜಾಗತಿಕ ವಿಶ್ವಸಂಸ್ಥೆ ನೀರಿನ ಮಹತ್ವ ಸಂರಕ್ಷಣೆ ಅರಿವು ನೋಡಲು ಪ್ರತಿವರ್ಷ ಮಾರ್ಚ್ ೨೨ರಂದು ವಿಶ್ವ ಜಲ ದಿನ ಎಂಬುದಾಗಿ ಆಚರಿಸುತ್ತಿರುವುದು ಶ್ಲಾಘನೀಯ.
ದೀಪ ಎಂದರೆ ಹಿಂದೂ ಧರ್ಮದಲ್ಲಿ ಜ್ಞಾನ ಜ್ಯೋತಿಯ ಪ್ರತೀಕ. ದುಷ್ಟಶಕ್ತಿಗಳ ಪ್ರಾಬಲ್ಯ ಕಡಿಮೆ ಮಾಡಲು ದೀಪ ಸಹಾಯಕ. ಹಾಗೆಂದೇ ಅಜ್ಞಾನ ಮತ್ತು ಅಂಧಕಾರ ಕಳೆದು ಸುಜ್ಞಾನ ಸಜ್ಜನತೆ ಹರಡುವ ದೀಪಾವಳಿ ಎಲ್ಲರಿಗೂ ಪ್ರಿಯ ಹಬ್ಬ.

ಫೋಟೋ ಕೃಪೆ : google
ನೀರಿನ ಪವಿತ್ರತೆ ಪ್ರಾಮುಖ್ಯತೆ ಪ್ರತಿ ಧಾರ್ಮಿಕ ಆಚರಣೆ ಹಬ್ಬಗಳಲ್ಲಿ ಇರುವುದಾದರೂ ಆಶ್ವಯುಜ ತ್ರಯೋದಶಿ ಅಂದರೆ ದೀಪಾವಳಿಯ ನರಕ ಚತುರ್ದಶಿಯ ಹಿಂದಿನ ರಾತ್ರೆಯನ್ನು ಜಲಪೂರಣ ಅಂದರೆ ನೀರು ತುಂಬುವ ಹಬ್ಬವಾಗಿ ಆಚರಿಸಿ ಜಲಕ್ಕೆ ಯುಕ್ತ ಗೌರವ ಸೂಚಿಸಿರುವುದು ಸೂಕ್ತವೇ ಆಗಿದೆ. “ಮಿಂದು ದೀಪಾವಳಿ ಉಂಡು ಯುಗಾದಿ” ಎಂಬ ಗಾದೆಯಂತೆ ದೀಪಾವಳಿಯಲ್ಲಿ ತೈಲಾಭ್ಯಂಗನಕ್ಕೆ ಪೂರ್ಣ ಪ್ರಾಶಸ್ತ್ಯ. ಅದಕನುವಾಗುವಂತೆ ಹಂಡೆ, ದೊಡ್ಡ ಕೊಳಗಗಳಲ್ಲಿ ನೀರು ತುಂಬಿ ಬಚ್ಚಲು ಮನೆ ಶುದ್ಧೀಕರಿಸಿ ರಂಗವಲ್ಲಿ ಹೂವುಗಳಿಂದ ಅಲಂಕರಿಸಿ ಪೂಜಿಸಿ ಸಿಹಿ ತಿಂದು ಮರುದಿನ ತೈಲ ಸ್ನಾನಕ್ಕೆ ಅಣಿಯಾಗುವ ಸಂಭ್ರಮದ ಆಚರಣೆ . ಹೊಸ ಅಳಿಯ ಬಂದಿದ್ದರಂತೂ ಆ ಸಂಭ್ರಮ ಹೇಳತೀರದು .
ಉತ್ತರ ಭಾರತದಲ್ಲಿ ಈ ತ್ರಯೋದಶಿಯನ್ನು ಧನತೇರಸ್ ಎಂದು ಕರೆಯುತ್ತಾರೆ. ನಮ್ಮಲ್ಲಿ ಅಕ್ಷಯ ತದಿಗೆಯಂದು ಚಿನ್ನಬೆಳ್ಳಿ ಕೊಂಡರೆ ಒಳ್ಳೆಯದು ಎಂಬ ಸಂಪ್ರದಾಯ ಇರುವಂತೆ ಅವರಲ್ಲಿ ಧನತೇರಸ್ ದಿನ ಕೊಂಡರೆ ಒಳ್ಳೆಯದು ಎಂಬ ಭಾವನೆ . ಆಕಾಶಬುಟ್ಟಿ ಮನೆಯ ಮುಂದೆ ಇರಿಸುವ ಸಂಪ್ರದಾಯ ಇರುವವರು ತ್ರಯೋದಶಿಯ ದಿನದಿಂದ ಆರಂಭಿಸುತ್ತಾರೆ. ಈ ನೀರು ತುಂಬುವ ಹಬ್ಬದ ಆಚರಣೆಯ ಐತಿಹ್ಯ ಇದು. ಹಿಂದೆ ಜಲಂಧರನ ಭಯದಿಂದ ಪರಶಿವ ಮಾಲಿಂಗನ ಬಳ್ಳಿಯಲ್ಲಿ ಅವಿತುಕೊಂಡನಂತೆ. ಪಾರ್ವತಿ ಅದನ್ನು ನೀರಿನ ಹಂಡೆಯ ಸುತ್ತಲೂ ಸುತ್ತಿಟ್ಟು ಜಲಂಧರನ ಕೈಗೆ ಪರಶಿವ ಸಿಗದಂತೆ ಮಾಡಿದಳಂತೆ. ಉತ್ತರ ಕರ್ನಾಟಕದಲ್ಲಿ ನೀರುತುಂಬುವ ಹಬ್ಬದ ದಿನ ಮಾಲಿಂಗನ ಬಳ್ಳಿ ತಂದು ಸುತ್ತಿಡುವ ಸಂಪ್ರದಾಯವಿದೆ.
ಜಲದ ಉಳಿವು ನಮ್ಮ ಕೈಲಿ ಈ ಅರಿವಿನ ತಿಳಿವಿನೊಂದಿಗೆ ಸಂಪ್ರದಾಯಬದ್ಧ ಸಂಭ್ರಮದ ದೀಪಾವಳಿ ಆಚರಿಸೋಣ. ಎಲ್ಲರಿಗೂ ದೀಪಲಕ್ಷ್ಮೀ ಶುಭತರಲಿ.
ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದಂ
ಶತ್ರು ಬುದ್ದಿ ವಿನಾಶಾಯ ದೀಪಜ್ಯೋತಿ ನಮೋಸ್ತುತೆ
ದೀಪಜ್ಯೋತಿ ಪರಬ್ರಹ್ಮ ದೀಪಜ್ಯೋತಿ ಜನಾರ್ದನ
ದೀಪೋ ಹರತಿ ಪಾಪಾನೀ ಸಂಧ್ಯಾದೀಪ ನಮೋಸ್ತುತೇ
- ಸುಜಾತಾ ರವೀಶ್
