ಧೀಮಂತ ರಂಗಕರ್ಮಿ, ರಂಗಭೂಮಿಯ ಬೆಳಕಿನ ಚಂದ್ರ

– ಚಂದ್ರಕುಮಾರ ಸಿಂಗ ಅವರೊಂದಿಗೆ ಸಂದರ್ಶನ

* ಹೂಲಿಶೇಖರ್‌

ಕೆಲವರು ಮಾತಾಡಿ, ಮಾತಾಡಿ ಮಲ್ಲರಾಗುತ್ತಾರೆ. ಇನ್ನು ಕೆಲವರು ಮಾತು ನುಂಗಿ ಕಾಯಕ ದಿಂದಲೇ ಮಹಾ ಮಲ್ಲರಾಗುತ್ತಾರೆ. ಮಾತಿನ ಮಲ್ಲರು ಕೆಲ ದಿನಗಳ ನಂತರ ಪರದೆಯ ಹಿಂದೆ ಸರಿದು ಹೋಗುತ್ತಾರೆ. ಆದರೆ ಕಾಯಕಶೀಲ ಮಲ್ಲರು ತಾವು ಮಾಡಿದ ಕೆಲಸಗಳಿಂದ ನೆನಪಿನಲ್ಲುಳಿಯುತ್ತಾರೆ. ರಂಗಭೂಮಿಯಲ್ಲಿ ಮಾತು ಮತ್ತು ಕೆಲಸ ಕೂಡಿ ನಡೆದರೇ ಅದಕ್ಕೊಂದು ಅರ್ಥ. ಆಯಾಮ. ಅದರಲ್ಲಿ ಯಾವುದು ಕಡಿಮೆ ಆದರೂ ನಾಟಕದ ಬಂಡಿ ಒಗ್ಗಾಲಾಗಿ [ಒಂದು ಗಾಲಿಯಲ್ಲಿ] ನಿಲ್ಲುತ್ತದೆ. ನಮ್ಮ ರಂಗ ಸಂದರ್ಭದಲ್ಲಿ ಅನೇಕರು, ಅನೇಕ ರೀತಿಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ನಟರಾಗಿ ಕೆಲವರು, ನಿರ್ದೇಶಕರಾಗಿ ಕೆಲವರು, ನಾಟಕಕಾರರಾಗಿ ಕೆಲವರು. ಆದರೆ ರಂಗದ ಹಿಂದಿರುವ, ರಂಗ ಯಶಸ್ಸಿಗೆ ಕಾರಣಕರ್ತರಾಗುವ ರಂಗ ಜೀವಿಗಳನ್ನು ಗುರುತಿಸುವ ಕಾರ್ಯ ಪ್ರಾಮಾಣಿಕ ವಾಗಿ ಆಗಿಲ್ಲ. ಆಗಿದ್ದರೂ ತುಂಬ ಕಡಿಮೆ.

ಅದರಲ್ಲಿ ಸಂಗೀತ, ಸಂಘಟನೆ, ಬಣ್ಣ, ಬೆಳಕು, ಪರದೆ, ಹೀಗೆ ಹಿನ್ನೆಲೆಯಲ್ಲಿರುವ ಅನೇಕ ಶ್ರಮಜೀವಿಗಳನ್ನು ಸರಿಯಾಗಿ ಗುರುತಿಸಿಲ್ಲ. ಕೇವಲ ನಟರು ಮತ್ತು ನಿರ್ದೇಶಕರೇ ರಂಗಭೂಮಿ ಅನ್ನುವವರೇ ಹೆಚ್ಚು. ಸಿ.ಜಿ.ಕೆ ಯವರು ಒಂದು ಕಡೆ ಹೇಳಿದಂತೆ ಇವತ್ತಿನ ಹೆಚ್ಚಿನ ರಂಗ ನಿರ್ದೇಶಕರು ಈವೆಂಟ್‌ ಮ್ಯಾನೇಜರರಾಗುತ್ತಿದ್ದಾರೆ ಎಂಬ ಮಾತು ಬಹುಪಾಲು ಸತ್ಯವಾಗಿರಲೂ ಬಹುದು. ಆದರೆ ಚಂದ್ರಕುಮಾರ ಸಿಂಗ್‌ರ ಹಾಗೆ ರಂಗಭೂಮಿಯ ಎಲ್ಲಾ ದಿಕ್ಕುಗಳಲ್ಲಿ ಕೆಲಸ ಮಾಡಿದವರು ತುಂಬ ಕಡಿಮೆ.

ಆದರೆ ಕಾರಂತರೊಂದಿಗೆ ಇದ್ದೂ ಅವರ ಬಹುತೇಕ ನಾಟಕಗಳಿಗೆ, ಪ್ರಯೋಗ ಸಂಘಟನೆಗಳಿಗೆ ತಮ್ಮನ್ನು ಅರ್ಪಿಸಿಕೊಂಡ ಬೆನಕ ತಂಡದ ಬೆಳಕಿನ ತಜ್ಞ ಚಂದ್ರಕುಮಾರ ಸಿಂಗ್‌ ಅವರಿಗೆ ಸಿಗಬೇಕಾದಷ್ಟು ಗೌರವ ಸಿಗದೇ ಹೋದದ್ದು ರಂಗಪ್ರಿಯರು ಪಡುವ ವ್ಯಥೆಯಾಗಿದೆ. ಇಂಥ ವ್ಯಥೆಗಳು ಇನ್ನೂ ಅನೇಕರ ವಿಷಯದಲ್ಲಿ ಇವೆ. ಸರಿಯಾಗಿ ಐವತ್ತು ವರ್ಷಗಳ ಕಾಲ ರಂಗ ಸಂಘಟನೆ, ಬೆಳಕು, ಬಣ್ಣ, ನಟನೆ, ನಿರ್ದೇಶನ ಹೀಗೆ ಹತ್ತಾರು ಕ್ಷೇತ್ರದಲ್ಲಿ ದುಡಿದ ಸಿಂಗ್‌ ಇಂದು ಹಣ್ಣಾಗಿದ್ದಾರೆ. ರಾಜ್ಯದ ಒಳಗೂ ಹೊರಗೂ ರಂಗ ಪ್ರಯೋಗಗಳ ಅಚ್ಚುಕಟ್ಟಾದ ಸಂಘಟನೆ ಮಾಡಿದ ಸಿಂಗ್‌ ಅಂಥ ಪ್ರಯೋಗಗಳ ಯಶಸ್ಸಿನ ನೇತಾರರಾಗಿದ್ದಾರೆ.

ರವೀಂದ್ರ ಕಲಾಕ್ಷೇತ್ರದ ಬಂದ್‌ ಆದಾಗಲೆಲ್ಲ, ತಂಡಗಳಿಗೆ ಸಿಗದೇ ಹೋದಾಗಲೆಲ್ಲ ಸಿಂಗ್‌ ಮಾಡಿದಷ್ಟು ಹೋರಾಟಗಳನ್ನು ಬೇರೆಯವರು ಮಾಡಲಿಲ್ಲ ಎಂದು ಹೇಳಲು ಸಂಕೋಚ ಪಡಬೇಕಾಗಿಲ್ಲ. ಅದಕ್ಕೆ ಇತಿಹಾಸವೇ ಸಾಕ್ಷಿ. ಇಂಥ ಹೋರಾಟಗಳ ಮೂಲಕ ಬಂದ ಕಾರಣಕ್ಕೆ ಸಿಂಗ್‌ ಬೀದಿ ನಾಟಕಗಳಲ್ಲಿಯೂ ತಮ್ಮನ್ನು ತೇಯ್ದುಕೊಂಡಿದ್ದಾರೆ. ಹತ್ತು ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಹೊಸ ನಾಟಕಕಾರರನ್ನು ಪ್ರೋತ್ಸಾಹಿಸಿ ಅವರಿಂದ ನಾಟಕ ಬರೆಸಿದ್ದಾರೆ. ಬೆನಕ ಅಂದರೆ ಸಿಂಗ್‌ ಎಂದೂ ಬೆನಕದ ಸಿಂಗಣ್ಣ ಎಂದೂ ಕೆಲವು ಕುಹಕಿಗಳು ಕರೆಯುತ್ತಿದ್ದರಂತೆ. ನಟ ರಂಗಕ್ಕೆ ಕಪ್ಪಣ್ಣ, ಕಲಾ ಗಂಗೋತ್ರಿಗೆ ಬಿವಿ ರಾಜಾರಾಮ್‌, ಸೂತ್ರಧಾರ ತಂಡಕ್ಕೆ ನಾಗೇಶ್, ರಂಗಸಂಪದಕ್ಕೆ ಜೆ. ಲೋಕೇಶ್‌, ಸ್ಪಂದನಕ್ಕೆ ಬಿ.ಜಯಶ್ರೀ, ಬೆನಕ ತಂಡಕ್ಕೆಚಂದ್ರಕುಮಾರ ಸಿಂಗ್‌, ನಾಟ್ಯ ದರ್ಪಣಕ್ಕೆ ರಿಚರ್ಡ ಲೂಯಿಸ್‌ ಹೀಗೆ ಆ ಕಾಲದ ಆಯಾ ತಂಡಗಳಿಗೆ ಪರ್ಯಾಯ ಹೆಸರುಗಳು. ಇವರಲ್ಲಿ ಮೇಲಾಟ ಇಲ್ಲದಿರಲಿಲ್ಲ. ಆದರೆ ಇದ್ದದ್ದು ಆರೋಗ್ಯಕಾರಕ ಸ್ಪರ್ಧೆ. ಹಾಗಾಗಿ ಎಲ್ಲ ತಂಡಗಳೂ ಬೆಳೆದವು. ಒಂದೊಂದು ತಂಡವೂ ಗಮನಾರ್ಹ ಪ್ರಯೋಗ ನೀಡಿದವು.

ಎಪ್ಪತ್ತರ ದಶಕವೆಂದರೆ ನಮ್ಮ ಮಹಾಮನೆ ಹೇಳುವ ಹಾಗೆ ‘ರಂಗ ಸಂಘಟಕರ ದಶಕ’. ಆ ಸಂದರ್ಭದಲ್ಲಿ ಸಿಂಗ್‌ ಅವರು ‘ಬೆಂಚಿನಾಕ’ ಎಂಬ ತಂಡವನ್ನೂ ಕಟ್ಟುತ್ತಾರೆ. ಹಲವರಿಂದ ಮಾನಸಿಕ ನೋವನ್ನೂ ಅನುಭವಿಸುತ್ತಾರೆ. ಕೆಲವು ರಂಗ ಕುಹಕಿಗಳು ಅದಕ್ಕೆ ‘ಬೆಂಕಿ ಹಾಕ ಬೆಂಕಿ ಹಾಕ’ ಎಂದೂ ಆಡಿಕೊಂಡರಂತೆ. ನಂತರ ೧೯೭೬ ರಲ್ಲಿ ಬೆನಕ [ಬೆಂಗಳೂರು ನಗರ ಕಲಾವಿದರು] ತಂಡ ಕಟ್ಟಿದ ಗೆಳೆಯರು ಹೊಸತೊಂದು ಹೆಜ್ಜೆ ಮೂಡಿಸುತ್ತಾರೆ. ಚಂದ್ರಕುಮಾರ ಸಿಂಗ್‌ ಈ ತಂಡದ ಸ್ಥಾಪಕ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಮಹತ್ತರ ರಂಗಕಾಯಕ ಮಾಡುತ್ತಾರೆ. ಚಂದ್ರಕುಮಾರಸಿಂಗ್‌ ಅವರ ಪ್ರತಿಭೆಯನ್ನು ಬರೀ ಬೆಳಕಿಗೆ ಸೀಮಿತಗೊಳಿಲುವುದಲ್ಲ. ರಂಗ ಹೋರಾಟ, ನಟನೆ, ಸಂಗೀತ, ಮೇಕಪ್‌, ನಿರ್ದೇಶನ, ಸಂಘಟನೆ ಇವೆಲ್ಲವುದರ ಪರಿಪೂರ್ಣತೆಯೇ ಚಂದ್ರಕುಮಾರ ಸಿಂಗ್‌. ಇಂಥ ರಂಗ ಪ್ರೇಮಿಯೊಂದಿಗೆ ನಡೆಸಿದ ಆಪ್ತ ಸಂದರ್ಶನವಿದು. ಐದು ದಶಕಗಳ ಕಾಲ ರಂಗಭೂಮಿಯನ್ನೇ ಉಸುರಾಡಿದ ಒಬ್ಬ ನಿಷ್ಠಾವಂತ ರಂಗ ಜೀವಿ ಇವತ್ತು ಅಸಹಾಯಕನಂತೆ ಮನೆ ಹಿಡಿದು ಕೂರುವಂತಾಗಿದೆ. ಕಳೆದಬಾರಿ ಸರಕಾರ ಇವರ ರಂಗ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ವಯಸ್ಸಿನ ತೊಡಕಿನಿಂದ ಮೊದಲಿನ ಹಾಗೆ ಮುನಿರಂಗಪ್ಪನಾಗಲು ಸಾಧ್ಯವಿಲ್ಲ. ಇತ್ತೀಚೆಗೆ ಅವರು ಮನೆಯಿಂದ ಆಚೆ ಹೋಗುವುದೇ ಅಪರೂಪ. ಅದಕ್ಕೇ ನಾವೇ ಬನಶಂಕರಿ ಎರಡನೇ ಹಂತದಲ್ಲಿರುವ ಅವರ ಮನೆಗೆ ಹೋದೆವು.

ಮನೆಗೆ ಹೋದಾಗ ನಾವು ಕಂಡದ್ದು ಸಿಂಗ್‌ ಅವರು ಎರಡು ಊರು ಗೋಲುಗಳ ಆಶ್ರಯದಲ್ಲಿ ದ್ದದ್ದನ್ನು. ಸೋಫಾ ಮೇಲೆ ಕೂತಿದ್ದ ಸಿಂಗ್‌ ಅವರ ಪಕ್ಕದಲ್ಲಿ ಒಂದು ಊರುಗೋಲು. ಇನ್ನೊಂದು ಪಕ್ಕದಲ್ಲೇ ನಿಂತಿದ್ದ ಅವರ ಜೀವಮಾನದ ಊರುಗೋಲು ಶ್ರೀಮತಿ ಮಾಯಾ ಅವರು. ಅವರ ಶ್ರೀಮತಿಯವರು ಸಿಂಗ್‌ ಅವರ ರಂಗ ಬದುಕಿನಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದವರು. ಅವರ ಕಷ್ಟ-ಸುಖದಲ್ಲಿ ಭಾಗಿಯಾದವರು. ಜೀವನೋತ್ಸಾಹವನ್ನು ಎಂದಿಗೂ ಕಳೆದುಕೊಳ್ಳದ ಜೋಡಿಯಿದು. ಪತ್ರಿಕೆಗೆ ಸಿಂಗ್‌ ಅವರನ್ನು ಮಾತಾಡಿಸಿದಾಗ ಅವರ ಉತ್ಸಾಹ ಇಮ್ಮಡಿಸಿತು.

ನಾನು – ಸಿಂಗ್‌ ಅವರ ರಂಗ ಜೀವನ ಆಂರಂಭವಾದದ್ದು ಹೇಗೆ?

ಸಿಂಗ್‌ – ನನ್ನ ಕಾಲೇಜು ಜೀವನದಲ್ಲಿ ಕಂಡ ಜಗತ್ತು ನನ್ನ ಪಾಲಿಗೆ ಅದೇ ರಂಗಭೂಮಿಯೇನೋ ಅನ್ನಿಸಿತು. ಕಾಲೇಜಿನಲ್ಲಿದ್ದಾಗ ನಾಟಕ ಬಿಟ್ಟರೆ ನಾನು ಬೇರೆಯದನ್ನು ಗಮನಿಸುತ್ತಿರಲಿಲ್ಲ. ನನಗೆ ನಟನೆಯಂದರೆ. ತುಂಬ ಆಸಕ್ತಿ. ಅದರೊಟ್ಟಿಗೆ ಹೋರಾಟ. ಆಗ ಎಕ್ಸಪೋ ಚಳುವಳಿಯಲ್ಲಿ ಅನೇಕ ಸಹಪಾಠಿ ಗಳು ತೊಡಗಿಕೊಂಡಿದ್ದರು. ನನಗೂ ರಂಗಭೂಮಿಯ ಮೂಲಕ ಹೋರಾಟ ಮಾಡುವುದು ಇಷ್ಟವಾಯಿತು.ಕಾರಣ ಬಿಸಿ ರಕ್ತಕ್ಕೆ ರಂಗ ನಂಟು ಅಂಟಿಕೊಂಡದ್ದು ಆಗಲೇ. ಐವತ್ತು ವರ್ಷಗಳ ಮೇಲಾಯಿತು. ಕಾಲೇಜು ರಂಗಭೂಮಿ ನನ್ನನ್ನು ರಂಗ ಹೋರಾಟಗಾರನನ್ನಾಗಿ ರೂಪಿಸಿತು. ಆಗ ನಡೆಯುತ್ತಿದ್ದ ಕಾಲೇಜು ನಾಟಕಗಳು ನನ್ನನ್ನು ಆಕರ್ಷಿಸಿದವು. ಉಳ್ಳಾಲ ನಾಟಕ ಸ್ಪರ್ಧೆಯಂತೂ ಆಗ ತುಂಬ ಜನರನ್ನು ರಂಗದತ್ತ ಸೆಳೆಯಿತು. ನಾಡಹಬ್ಬಕ್ಕಾಗಿ ನಾಟಕ, ಕಾಲೇಜು ಉದ್ಘಾಟನೆಗಾಗಿ ನಾಟಕ, ಕಾಲೇಜು ನಾಟಕ ಸ್ಪರ್ಧೆಗಾಗಿ ನಾಟಕ ಹೀಗೆ ಎಷ್ಟೊಂದು ಅವಕಾಶಗಳಿದ್ದವು. ಎಲ್ಲ ಅವಕಾಶಗಳನ್ನು ಆಗ ಬಳಸಿಕೊಂಡೆ. ಅಲ್ಲಿ ಕೆಲಸ ಮಾಡುತ್ತ ಹೋದಂತೆ ರಂಗ ಸಜ್ಜಿಕೆ ಮತ್ತು ಬೆಳಕಿನ ವಿನ್ಯಾಸಗಳಲ್ಲಿ ಹೆಚ್ಚು ಅವಕಾಶ ಇದೆ ಅನಿಸಿತು. ಆ ಕ್ಷೇತ್ರದಲ್ಲಿಯೇ ಹೆಚ್ಚಾಗಿ ತೊಡಗಿಕೊಂಡೆ.

ರಂಗಭೂಮಿಯ ಮೂಲಕ ಒಂದಷ್ಟು ಸಂಘಟನೆ, ಹೋರಾಟ ಮತ್ತು ರಂಗ ಶಕ್ತಿಯನ್ನು ಗಳಿಸಿದ್ದೆ. ಅದು ಯಾವತ್ತೂ ನನ್ನನ್ನು ಸುಮ್ಮನೆ ಕೂಡಲು ಬಿಡಲಿಲ್ಲ. ಸರಕಾರಿ ಉದ್ಯೋಗ ಜೀವನಕ್ಕಾಗಿ ಮತ್ತು ರಂಗಕ್ಕಾಗಿ ಖರ್ಚು ಮಾಡಲು ಒಂದಷ್ಟು ಹಣ ನೀಡುತ್ತ ಬಂತು. ಅದು ನನ್ನ ಕಾಯಕ. ಕಾಯಕವನ್ನೂ ಮೀರಿ ಹವ್ಯಾಸ ಬೆಳೆಯಿತು. ಹಾಗೆಂದು ವೃತ್ತಿಗೆ ಎಂದೂ ಮೋಸ ಮಾಡಲಿಲ್ಲ.

ನಾನು – ಆರಂಭದ ಕಾಲದಲ್ಲಿ ನೀವು ಯಾವ ತಂಡದಲ್ಲಿ ಕೆಲಸ ಮಾಡಿದಿರಿ? ನಿಮ್ಮ ಜೊತೆ ಇದ್ದ ಕಲಾವಿದರು ಯಾರು?

ಸಿಂಗ್‌ – ದೊಡ್ಡ ಪಟ್ಟಿಯೇ ಇದೆ. ಕಾರಂತರು ಶಕಶೈಲೂಷರು ತಂಡ ಆರಂಭಿಸಿದಾಗ ಅದರಲ್ಲಿ ನಟನೆ ಯೊಂದಿಗೆ, ಸಂಘಟನೆ, ರಂಗಸಜ್ಜಿಕೆ, ಬೆಳಕಿನ ವ್ಯವಸ್ಥೆಯ ಜವಾಬ್ದಾರಿ ಹೊತ್ತೆ. ಅದ್ಯಾಕೋ ಕಾರಂತರಿಗೆ ನನ್ನ ಮೇಲೆ ಹೆಚ್ಚು ವಿಶ್ವಾಸವಿತ್ತು. ಮುಂದೆ ಇದೇ ಬೆನಕ ಎಂದು ಹೆಸರಾಯಿತು. ಸಂಘಟನೆಯ ಜೊತೆಗೆ ಚಂದ್ರಹಾಸ, ಸಮಯಕ್ಕೊಂದು ಸುಳ್ಳು, ಸಂಕ್ರಾಂತಿ, ಜೋಕುಮಾರಸ್ವಾಮಿ, ಜಸ್ಮಾ ಒಡನ್‌,ಬಕ, ದಿ ಜಂಟಲ್‌ ಮನ್‌, ಹ್ಯಾಮ್ಲೆಟ್‌ ಮುಂತಾದ ನಾಟಕಗಳಲ್ಲಿ ಅಭಿನಯಿಸಿದೆ. ಎಲ್ಲರ ಮೆಚ್ಚುಗೆ ಇದ್ದೇ ಇತ್ತು. ಇದರೆ ಜತೆಗೆ ಕಾರಂತರು ನನ್ನ ಆಸಕ್ತಿಯ ಬೆಳಕಿನ ವಿನ್ಯಾವನ್ನೂ ಮಾಡಲು ಅವಕಾಶ ನೀಡಿದರು. ಹಯವದನ, ಸತ್ತವರ ನೆರಳು, ಸಂಕ್ರಾಂತಿ, ಅಲೀಬಾಬಾ, ತಬರನ ಕತೆ, ಅಂಜುಮಲ್ಲಿಗೆ, ತಂಗಿಗೊಂದು ಗಂಡು ಕೊಡಿ ಹೀಗೆ ಸಾಲು ಸಾಲು ನಾಟಕಗಳಿಗೆ ರಂಗಸಜ್ಜಿಕೆ, ಮತ್ತು ಬೆಳಕಿನ ವಿನ್ಯಾಸ ಮಾಡಿದೆ. ರಂಗದ ಹಿನ್ನೆಲೆ ಮತ್ತು ಮುನ್ನೆಲೆಯಲ್ಲಿ ಕೆಲಸ ಮಾಡುವ ಅದೃಷ್ಟ ನನಗಿತ್ತು. ಮಾಡಿದೆ. ರಂಗಾಸಕ್ತರು ಅದನ್ನು ಒಪ್ಪಿ-ಮೆಚ್ಚಿಕೊಂಡರು.

ಕಾಲೇಜಿನಲ್ಲಿದ್ದ ಅನೇಕ ಸಹಪಾಠಿಗಳು ಆಗ ನನ್ನ ಜತೆ ನಾಟಕಗಳಲ್ಲಿ ಕೆಲಸ ಮಾಡಿದ್ದಾರೆ ಬಿ.ವಿ.ಕಾರಂತರು, ಬಿ.ಜಯಶ್ರೀ, ಬಿ.ಚಂದ್ರಶೇಖರ್‌, ಎಂ.ಎಸ್‌.ನಾಗರಾಜ್‌, ಬಿ.ಚಂದ್ರಶೇಖರ್‌, ಮುಂತಾದವರ ನಾಟಕಗಳಿಗೆ ಬ್ಯಾಕ್‌ಸ್ಟೇಜ್‌ ಕೆಲಸ ಮಾಡಿದ್ದೇನೆ. ಬೆಳಕು ವಿನ್ಯಾಸ ಮಾಡಿದ್ದೇನೆ. ಅವೆಲ್ಲ ಹೆಸರೂ ತಂದು ಕೊಟ್ಟವು. ಕಾಲೇಜಿನ ಎಂ.ಎ.ಆನಂದ್‌, ನಾಗಾಭರಣ, ಟಿ.ಎಸ್‌. ರಂಗಾ, ಜೆ.ಲೋಕೇಶ್ ಅಲ್ಲದೆ ಬೆನಕದ ಅನೇಕ ಗೆಳೆಯರೊಂದಿಗೆ ಕೆಲಸ ಮಾಡಿದ್ದೇನೆ. ಮತ್ತು ಬೆನಕದ ಕಾರ್ಯದರ್ಶಿಯಾಗಿ, ಅಧ್ಯಕ್ಷನಾಗಿ ತಂಡದ ಅನೇಕ ಯಶಸ್ವಿ ಪ್ರಯೋಗಗಳ ಹಿಂದೆ ನಾನಿದ್ದೆ ಎಂಬುದೇ ನನ್ನ ಸಾರ್ಥಕ ಭಾವನೆ.

ನಾನು – ಬೆನಕ ತಂಡ ದೊಡ್ಡ ಸಾಧನೆ ಮಾಡಿತು. ಈ ಸಾಧನೆಯ ಹಿಂದೆ ನೀವಲ್ಲದೆ ಮತ್ತೆ ಯಾರಿದ್ದರು?

ಸಿಂಗ್‌ – ಪ್ರಯೋಗದ ಯಶಸ್ಸಿನ ಹಿಂದೆ ಸಾಕಷ್ಟು ಜನ ಇದಾರೆ. ಕಾರಂತರು, ರಂಗಾ, ನಾಗಾಭರಣ, ಸುರೇಂದ್ರನಾಥ ಸುಂದರ್‌ರಾಜ್‌, ಚಂದ್ರು, ಗೋಪಿ ಹೀಗೆ. ಆದರೆ ಒಂದು ತಂಡದ ಯಶಸ್ಸಿನ ಹಿಂದೆ ಒಬ್ಬ ಜಾಣ ಸಂಘಟಕ ಇರುತ್ತಾನೆ ಎಂಬುದನ್ನು ಮರೆಯಬಾರದು. ಎಲ್ಲರೂ ಹೇಳುವ ಹಾಗೆ ಬೆನಕದ ಯಶಸ್ಸಿನ ಹಿಂದೆ ಕಾರಂತರು ಹೇಗೆ ಇದ್ದರೋ ಹಾಗೆ ಸಿಂಗ್‌ ಕೂಡ ಇದ್ದರು ಅನ್ನುವುದು ರಂಗಾಸಕ್ತರು ನನ್ನ ಮೇಲೆ ಇಟ್ಟ ವಿಶ್ವಾಸಕ್ಕೆ ಹೇಳುವ ಮಾತು. ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಆ ಬಗ್ಗೆ ನನಗೆ ತೃಪ್ತಿಯಿದೆ. ಅಲ್ಲಿ ದುಡಿದವರ ಬಗ್ಗೆಯೂ ನನಗೆ ಗೌರವವಿದೆ. ಆ ಬಗ್ಗೆ ಬೇರೆ ಮಾತೇ ಇಲ್ಲ. ಬೆನಕ ತಂಡದ ಐವತ್ತಕ್ಕೂ ಹೆಚ್ಚು ನಾಟಕಗಳ ಯಶಸ್ಸಿನ ಹಿಂದೆ ನಾನಿದ್ದೆ ಎಂಬುದು ಸಾರ್ವತ್ರಿಕ ಅಭಿಪ್ರಾಯ.ಗಿರೀಶ್‌ ಕಾರ್ನಾಡ್‌, ಕಂಬಾರ್‌, ಪಿ.ಲಂಕೇಶ್‌, ಜಿ.ಬಿ.ಜೋಶಿ ಮುಂತಾದವರ ನಾಟಕಗಳನ್ನು ಯತ್ಥೇಚ್ಛವಾಗಿ ಅಭಿನಯಿಸಿದ್ದು ಬೆನಕ. ಹಾಗೆಯೇ ಜಿ.ವಿ.ಅಯ್ಯರ್‌, ಮಾನು, ಸುರೇಶ್‌ ಹೆಬ್ಲಿಕರ್‌, ರಮೇಶ್‌ ಭಟ್‌, ಶ್ರೀನಿವಾಸ ಪ್ರಭು, ಕೋಕಿಲಾ ಮೋಹನ್‌, ರಿಚರ್ಡ್‌ ಲೂಯಿಸ್‌ ಮುಂತಾದ ನಟರಿಗೆ ಸ್ಪ್ರಿಂಗ್‌ ಬೋರ್ಡ ಆದದ್ದೂ ಬೆನಕ. ಇವೆಲ್ಲ ನಾಟಕಗಳ ಸಂಘಟನೆ, ರಂಗಸಜ್ಜಿಕೆ, ಬೆಳಕಿನ ಹಿಂದೆ ನಾನಿದ್ದೆ ಎಂಬುದಕ್ಕೆ ಈಗಲೂ ಹೆಮ್ಮೆ, ತೃಪ್ತಿ ಇದೆ. ಹಾಗೆ ನೋಡಿದರೆ ಬೆನಕ ನನ್ನ ಪಾಲಿಗೆ ಇನ್ನೊಂದು ಮನೆಯೇ ಆಗಿತ್ತು.

ನಾನು – ಬೀದಿ ನಾಟಕಗಳತ್ತ ನೀವು ಹೊರಳಿದ್ದು ಹೇಗೆ?

ಸಿಂಗ್‌ – [ಮುಖದಲ್ಲಿ ವಿಷಾದ] ಕಾಲ ಎಲ್ಲರಿಗೂ ಹೀಗೇ ಇರೋದಿಲ್ಲ ನೋಡಿ. ಬೆನಕ ನನ್ನ ಮನೆಯೇ ಆಗಿತ್ತು ಎಂದು ಹೇಳಿದೆನಲ್ಲ. ಯಾವುದೋ ಒಂದು ಸಣ್ಣ ಕಾರಣಕ್ಕೆ ನಾನು ನನ್ನ ಮನೆ ಬೆನಕದಿಂದ ಹೊರ ಬೀಳಬೇಕಾಯಿತು. ನಲವತ್ತು ವರ್ಷದಿಂದ ಜತೆಗಿದ್ದ ರಂಗ ಗೆಳೆಯರನ್ನು ಅಗಲುವ ನೋವಿದೆ ನೋಡಿ. ಅದು ಅಸಾಧ್ಯ. ನಾನು ಅಲ್ಲಿ ಸ್ಥಾಪಕ ಸದಸ್ಯನಾಗಿದ್ದೆ. ಕಾರ್ಯದರ್ಶಿಯಾಗಿದ್ದೆ. ಅಧ್ಯಕ್ಷನೂ ಆಗಿದ್ದೆ. ಘಟಾನುಘಟಿಗಳಿಗೆ ರಂಗವೇದಿಕೆ ಸಜ್ಜುಗೊಳಿಸಿ ಕೊಟ್ಟಿದ್ದೆ. ಏನೆಲ್ಲ ಮಾಡಿದ್ದೆ. ಅಂಥ ಮನೆಯಿಂದ ಹೊರಬಿದ್ದೆ. ಕಾರಣ ಕೇಳಬೇಡಿ. ಹೊರಬಂದಾಗ ಎದೆ ಹಿಂಡಿಹೋಗಿತ್ತು. ಮನಸ್ಸಿಗೆ ಆಘಾತವಾಗಿತ್ತು. ಆಗ ನನ್ನ ನೆರವಿಗೆ ಬಂದವರು ಎ.ಎಸ್‌.ಮೂರ್ತಿಗಳು, ವಿಜಯಮ್ಮ ಅವರು. ಮತ್ತು ನನ್ನ ಶ್ರೀಮತಿ ಮಾಯಾ [ಮನೋರಮಾ ಸಿಂಗ್‌] ಅವರು. ಅಲ್ಲಿ ‘ ಬಿಂಬ’ ಎಂಬ ಹೊಸ ತಂಡ ಸುರು ಮಾಡಿ ಬೀದಿನಾಟಕಗಳ ಉತ್ಸವ ಮಾಡಿದೆ. ನನಗೆ ಹೋರಾಟದ ದಾರಿ ಗೊತ್ತಿತ್ತು. ನಾಟಕಕ್ಕೆ ಪ್ರೋಸಿನಿಯಂ ಥೇಟರೇ ಬೇಕಿಲ್ಲ ಎಂದು ತೋರಿಸಿದೆವು. ‘ಬಿಂಬ’ ಬೀದೀ ನಾಟಕವೆಂದರೆ ಜನ ಕಣ್ಣು ಬಿಟ್ಟು ನೋಡಿದರು. ಬೆಂಗಳೂರಿನ ಎಲ್ಲೆಂದರಲ್ಲಿ ನಾಟಕ ಆಡಿದೆವು. ರಾಜಾಜಿ ನಗರದ ಆಟದ ಮೈದಾನ, ಬಸವನ ಗುಡಿ ಬ್ಯೂಗಲ್‌ ರಾಕ್‌, ಗವಿಪುರಮ್‌ನ ಕೊಹಿನೂರ್‌ ಆಟದ ಮೈದಾನ, ಮಾವಳ್ಳಿ ಇವು ನಮ್ಮ ಬೀದೀ ನಾಟಕಗಳ ಪ್ರಮುಖ ತಾಣಗಳು.

ನಾನು – ಬಿಂಬ ಬೀದೀ ನಾಟಕ ಅಂದರೆ ನೆನಪಾಯಿತು ನೋಡಿ. ನೀವು ಬರೀ ಪ್ರಯೋಗಗಳನ್ನು ಮಾಡಲಿಲ್ಲ. ಬೀದೀ ನಾಟಕ ರಚನಾ ಸ್ಪರ್ಧೆಗಳನ್ನೂ ಏರ್ಪಡಿಸಿದ್ದಿರಿ.

ಸಿಂಗ್‌ – ಬೀದೀ ನಾಟಕ ಹೆಚ್ಚು ಪರಿಣಾಮಕಾರಿ ಅನಿಸಿದಾಗ ಇನ್ನಷ್ಟು ನಾಟಕಗಳನ್ನು ಆಡಲು ಯೋಚಿಸಿದೆವು. ಆದರೆ ಹೊಸ ನಾಟಕಗಳು ಸಿಗದೆ ಪರದಾಡುವಂತಾಯಿತು. ಆಗ ಬಿಂಬ ಮೂಲಕ ಬೀದೀ ನಾಟಕ ಸ್ಪರ್ಧೆ ಏರ್ಪಿಡಿಸಿದೆವು. ಅನೇಕ ಹೊಸಬರು ಉತ್ತಮ ನಾಟಕಗಳನ್ನು ಬರೆದು ಕಳಿಸಿದರು.

ನಾನು – ಅರೇ, ವಾಹ್! ನಾನೂ ಈ ನಿಮ್ಮ ಬೀದೀ ನಾಟಕ ಸ್ಪರ್ಧೆಗೆ ನಾಟಕವೊಂದನ್ನು ಕಳಿಸಿದ್ದೆ. ಅದಕ್ಕೆ ಬಹುಮಾನವೂ ಬಂತು. ನಾಟಕದ ಹೆಸರು. ‘ ನಾಯಿ’ ಅಂತ.

ಸಿಂಗ್‌ – ಇದೂ… ಇದೂ… ನೋಡಿ ಸಾರ್ಥಕತೆ ಅನ್ನೋದು. ಒಬ್ಬ ಸಂಘಟಕನಿಗೆ ಇದಕ್ಕಿಂತ ಹೆಚ್ಚಿನದೇನು ಬೇಕು. ಒಂದು ಮಾತು ನಾನು ಇಲ್ಲಿ ಹೇಳಲೇಬೇಕು. ಬೀದೀ ನಾಟಕ ಮಾಡುವಾಗ ನನ್ನ ಹತ್ತರ ಹಣವಿರಲಿಲ್ಲ. ತಂಡ ಕಟ್ಟುವುದು ನನಗೆ ಅನಿವಾರ್ಯವಾಗಿತ್ತು. ಅದಕ್ಕಾಗಿ ನನ್ನ ಹೆಂಡತಿ ಮಾಯಾ ತನ್ನ ಆಭರಣಗಳನ್ನು ಒತ್ತೆ ಇಟ್ಟು ಹಣ ತಂದದ್ದು ನನಗೆ ಈಗಲೂ ನೋವು ತರಿಸುವ ಸಂಗತಿ.

ನಾನು – ಶಂಕರ್‌ ನಾಗ್‌, ಅನಂತ್‌ನಾಗ್‌ ಬೆಂಗಳೂರಿಗೆ ಬಂದಾಗ ಮೊದಲು ಸಹಾಯ ಮಾಡಿದವರು ನೀವು. ಅದು ಹೇಗೆ?

ಸಿಂಗ್‌ – ೧೯೭೯ ರ ಸುಮಾರು ಶಂಕರ್‌ ಮತ್ತು ಅನಂತ್‌ ಬೆಂಗಳೂರಿಗೆ ಬಂದು ನಾಟಕ ಮಾಡಲು ಅನುವಾದಾಗ ನಾನು ನನ್ನ ಸಂಘಟನೆಯ ಶಕ್ತಿಯನ್ನು ಅಲ್ಲಿ ಬಳಸಿಕೊಂಡೆ. ಅವರು ಕಾರ್ನಾಡರ ‘ಅಂಜು ಮಲ್ಲಿಗೆ’ ನಾಟಕ ಎತ್ತಿಕೊಂಡರು. ಮುಂದೆ ಅವರ ಬಹುತೇಕ ನಾಟಕಗಳಿಗೆ ನಾನು ಬೆಳಕಿನ ವಿನ್ಯಾಸ ಮಾಡಿದೆ. ಶಂಕರ್‌ ಬುದ್ಧಿವಂತ. ಬೇಗ ಸೆಟ್ಲ ಆಗಿಬಿಟ್ಟ.

ನಾನು – ರಂಗ ಹೋರಾಟದಲ್ಲಿ ಯಾವಾಗಲೂ ನೀವು ಮುಂಚೂಣಿಯಲ್ಲಿದ್ದವರು. ಕಲಾಕ್ಷೇತ್ರ ಇದ್ದಕ್ಕಿದ್ದಂತೆ ಮುಚ್ಚಿದಾಗ ಅದನ್ನು ತೆರೆಸಲು ಹೋರಾಟ. ಕಲಾಕ್ಷೇತ್ರದ ಆವರಣವನ್ನುವಾಣಿಜ್ಯ ಮಳಿಗೆ ಮಾಡಲು ಹೊರಟಾಗ ಸರಕಾರದ ವಿರುದ್ಧ ಹೋರಾಡಿದ್ದೀರಿ.

ಸಿಂಗ್‌– ಹೋರಾಟದ ವಿಷಯದಲ್ಲಿ ನಾನು ಯಾವತ್ತೂ ಹಿಂದೆ ಬಿದ್ದಿಲ್ಲ. ಅದೂ ಕಲಾಕ್ಷೇತ್ರದ ವಿಷಯದಲ್ಲಿ ಇನ್ನೂ ಹೆಚ್ಚು. ಹೋರಾಟ ಇಲ್ಲದಿದ್ದರೆ ಇವತ್ತು ಕಲಾಕ್ಷೇತ್ರ ಸರಕಾರೀ ಸಿನಿಮಾ ಮಂದಿರವಾಗುವ ಅಪಾಯವೂ ಇತ್ತು. ಶ್ರೀರಂಗರು, ಬಿವಿಕಾರಂತರು, ಮತ್ತು ನನ್ನ ತಲೆಮಾರಿನ ಅನೇಕರು ಅದರಲ್ಲಿ ತೊಗಿಕೊಂಡಿದ್ದೆವು. ತಂಡ ಭೇದ ಮರೆತು ಕಟ್ಟಿದ ‘ರಂಗ ಭೂಮಿ ಕ್ರಿಯಾ ಸಮಿತಿ’ ಉತ್ತಮ ಕೆಲಸ ಮಾಡಿತು. ಅದು ಮುಂದೆಯೂ ಸಕ್ರಿಯವಾಗಿರಲೆಂದು ಹಾರೈಸುತ್ತೇನೆ.

* ಚಂದ್ರಕುಮಾರ ಸಿಂಗರ ಬಗ್ಗೆ ಹೇಳುವುದು ಇನ್ನೂ ಸಾಕಷ್ಟಿದೆ. ಆದರೆ ಪುಟಗಳ ಮಿತಿ ಇರುವುದರಿಂದ ಮಾತುಗಳನ್ನು, ಇನ್ನೂ ಕೆಲವು ಪ್ರಶ್ನೆಗಳನ್ನು ನುಂಗಿಕೊಳ್ಳವುದು ಅನಿವಾರ್ಯವಾಗಿದೆ. ಏನೇ ಇರಲಿ. ಸಿಂಗ್‌ ಕನ್ನಡ ರಂಗಭೂಮಿಯ ಧೀಮಂತನೇ ಸರಿ. ಅವರ ರಂಗ ಹೋರಾಟಕ್ಕೆ ಕೊನೆಯೆಂಬುದೇ ಇಲ್ಲ. ಸಂಘಟನೆ, ರಂಗ ಸಜ್ಜಿಕೆ, ಬೆಳಕಿನ ಬಗ್ಗೆ ಮಾತಾಡುವಾಗಲೆಲ್ಲ ಸಿಂಗ್‌ ಬಗ್ಗೆ ಮಾತಾಡದೇ ಇರಲಾಗುವುದಿಲ್ಲ. ಅವರೀಗ ದೇಹಾಲಸ್ಯದಿಂದ ಸೊರಗಿದ್ದರೂ ಮಾನಸಿಕವಾಗಿ ಸದೃಢವಾಗೇ ಇದ್ದಾರೆ. ಅವರಿಗೆ ಹೆಚ್ಚಿನ ಆರೋಗ್ಯ ಭಾಗ್ಯವನ್ನು ಹಾರೈಸುತ್ತದೆ ಪತ್ರಿಕೆ.

#ಕಲವದರ

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW