" ಸ್ಟಾಕ್‌ ಹೋಮ್‌ ಸಿಂಡ್ರೋಮ್‌ "

ನಾಗರೇಖಾ ಗಾಂವಕರ ಅವರ ಕತೆ

ಸ್ಟಾಕ್‌ ಹೋಮ್‌ ಸಿಂಡ್ರೋಮ್‌ ಅಂದರೇನು? ಹೆಣ್ಣು ತನ್ನ ಗಂಡನಿಂದ ಮಾನಸಿಕವಾಗಿ, ದೈಹಿಕವಾಗಿ ಎಷ್ಟೇ ಶೋಷಣೆಗೊಳಗಾದರೂ ಮತ್ತದೇ ಮಮತೆ, ಪ್ರೀತಿಯನ್ನು ಅವನಿಗೆ ಧಾರೆ ಎರೆಯುತ್ತಾಳೆ. ಆಕೆ ಹಳ್ಳಿಯ ಹೆಣ್ಣೇ ಇರಲಿ. ವಿದ್ಯಾವಂತ ಪಟ್ಟಣದ ಹೆಣ್ಣೇ ಇರಲಿ. ಮಾನಸಿಕವಾಗಿ ಅವರು ಗಂಡಂದಿರನ್ನು ಬಿಟ್ಟು ಕೊಡುವುದಿಲ್ಲ. ಇಂಥದೊಂದು ಸಿಂಡ್ರೋಮ್‌ ಕುರಿತು ನಾಗರೇಖಾ ಮನೋಜ್ಞ ಕತೆ ಬರೆದಿದ್ದಾರೆ. ದಾಂಡೇಲಿಯಲ್ಲಿ ಉಪನ್ಯಾಸಕರಾಗಿರುವ ಇವರು ಹೆಣ್ಣಿನ ಒತ್ತಡದ ಮನಸ್ಸಿನಲ್ಲೂ ಇರುವ ಪ್ರೀತಿಯನ್ನು ಗುರುತಿಸಿದ್ದಾರೆ. ಈ ಕತೆ ನಿಮಗೂ ಇಷ್ಟವಾಗುತ್ತದೆ. ಓದಿ – ಸಂಪಾದಕ

ಒಲೆಯಲ್ಲಿ ಬೆಂಕಿ ಭಗ ಭಗ ಉರೀತಾನೆ. ಇದೆ. ಅರ್ಧ ಹೊರಗೆ, ಇನ್ನರ್ಧ ಒಲಗೆ ಉರೀತಿದ್ದ ತೆಂಗಿನ ಸೋಗೆಗಳನ್ನು ಕಂಡ ಸಂಪ್ರೀತ ಗಾಬರಿಯಾದಂತಾಗಿ ಎಲ್ಲ ಒಳಗೆ ತುರುಕಿದ. ಅದೇ ತಾನೆ ಕಾಲೇಜು.ಮುಗಿಸಿ ಒಳಗೆ ಬರ್ತಾ ಇದ್ದ. ದೂರ ಕೊಂಚ ಹೆಚ್ಚು ಎಂದು ಒಳ ದಾರಿಯಲ್ಲಿ ಮನೆಗೆ ಬರುವ, ಹಿತ್ತಲ ದಾರಿಯಲ್ಲಿ ಬರುವುದೇ ಹೆಚ್ಚು. ಮನೆಗೂ ಬಸ್‌ ನಿಲ್ದಾಣಕ್ಕೂ ಇರುವ ಅಂತರ ಅಂದರೆ ಹಿತ್ತಲ ದಣಪೆ ದಾಟಿದರೆ ಸಾಕು. ಇಂದು ಅದೇ ದಾರಿಯಲ್ಲಿ ಮನೆಗೆ ಬಂದರೂ ಸದಾ ವಟಗುಡುತ್ತಿದ್ದ ತಾಯಿಯ ಧ್ವನಿ ಕೇಳಲಿಲ್ಲ. ಅದು ಕೊಪ್ಪವೇ ಆದರೂ ಅಕ್ಕ ಪಕ್ಕದ ಮನೆಗಳು ಕೊಂಚ ದೂರವೆ. ಪ್ರತಿಯೊಂದು ಮನೆಗೂ ಹತ್ತು ಹದಿನೈದು ಗುಂಟೆ ಜಾಗೆ. ಅದರಲ್ಲಿ ತೆಂಗು ಅಡಿಕೆ ಗಿಡಗಳೇ ಜಾಸ್ತಿ. ಇಲ್ಲ, ಅಲ್ಲೊಂದು ಇಲ್ಲೊಂದು ಮಾವಿನ ಗಿಡ. ಬಿಟ್ಟರೆ ಬೇರೆ ಗಿಡಗಳನ್ನು ಹಾಕುವುದು ಕರಾವಳಿಯ ಆ ಪರಿಸರದಲ್ಲಿ ಅಪರೂಪ. ನಾಣಿಗೆ ಒಲೆ ಅಟ್ಟಲು ಆ ತೆಂಗಿನ ಅಡಿಕೆಯ ಸೋಗೆಗಳೇ ಸಾಕಷ್ಟಾಗುತ್ತಿತ್ತು.

‘ ಯಾಕೆ ಅಮ್ಮಾ? ಏನಾಯ್ತೆ? ಸುಮ್ನೆ ಕುತಿಯಲ್ಲ. ಕಣ್ಣೆಲ್ಲ ಊದ್ಕಂಡಿದೆಯಲ್ಲೆ? ಏನೇ? ಆರಾಂ ಇಲ್ಲಾ?’ ಅನ್ನುತ್ತ ಒಳ ಬಂದ ಸಂಪ್ರೀತ.

ಜಗುಲಿಯಲ್ಲಿ ತೆಣಿಯ ಮೇಲೆ ಕೂತ ಅಮ್ಮ ಎಂದಿನಂತೆ ಹಸನ್ಮುಖಿಯಾಗಿಲ್ಲ ಎಂಬುದು ಸಂಪ್ರೀತನಿಗೆ ಹೊಳೆದಂತಾಯಿತು. ಆಕೆಯ ಕಡೆ ಕಣ್ಣು ಹೊರಳಿತು. ನಿಸ್ತೇಜ ಮುಖದಲ್ಲಿ ಉಮ್ಮಳಿಸುವ ದುಃಖವನ್ನು ಆಕೆ ಪ್ರಯತ್ನ ಪೂರ್ವಕ ನುಂಗುತ್ತಿದ್ದಂತೆ ಭಾಸವಾಯಿತು. ಒಂದಡಿ ಮುಂದಿಟ್ಟು ಅಮ್ಮನ ಪಕ್ಕ ಕೂತು ಮಾತಿಗೆ ತೊಡಗಬೇಕು ಎನ್ನುವಷ್ಟರಲ್ಲೇ ಆಕೆಯ ಬಲಗೆನ್ನೆಯ ಮೇಲೆ ರಕ್ತದ ಕಲೆ ಕಂಡು ಬೆದರಿದ. ಅವನಿಗರಿವಿಲ್ಲದೇ-

‘ ಅಯ್ಯೋ… ಅಮ್ಮಾ ಇದೇನೆ ರಕ್ತ?’ ನೋವಿನ ದನಿ ಹೊರಡಿಸುತ್ತ- ‘ ಏಳ್… ಏಳ್. ಆಸ್ಪತ್ರೆಗೆ ಹೋಗ್ವ’ ಎನ್ನುತ್ತ ಆಕೆಗೆ ತರಾತುರಿ ಮಾಡತೊಡಗಿದ. ಅದು ಯಾಕಾಯ್ತು, ಹೇಗಾಯ್ತು. ಅವನಿಗೆ ಅರೆ ಕ್ಷಣದಲ್ಲಿ ಹೊಳೆದೋಯ್ತು. ಅದೇನು ಹೊಸದಲ್ಲ. ಅಪ್ಪ, ಅಮ್ಮನ ಕಚ್ಚಾಟ ಮಾಮೂಲಿ ಎಂಬಷ್ಟರ ಮಟ್ಟಿಗೆ. ಈ ಹೊಡೆತ ತಿಂದೂ, ತಿಂದೂ ಆಕೆಯ ಮೈ ಚರ್ಮ ಕೂಡ ಜಿಡ್ಡುಗಟ್ಟಿದೆ ಎಂಬಂತೆ ಆಕೆ ನಿರ್ಲಿಪ್ತೆ.

ಆತನಿಗೆ ಗೊತ್ತು. ಆಕೆ ಮಹತ್ವಾಕಾಂಕ್ಷೆಯ ತಾಯಿ. ತನ್ನ ಓದಿಗೆ, ಖರ್ಚಿಗೆ ಒಂದ್‌ಚೂರು ಹಿಂದೆ ಮುಂದೆ ನೋಡದೆ ಹಣ ನೀಡುವ ಆಕೆ ಅಪ್ಪನ ದುಂದು ವೆಚ್ಚಕ್ಕೆ ಮಾತ್ರ ಕಡಿವಾಣ ಹಾಕಲು ನೋಡುತ್ತಿದ್ದುದು, ತನ್ನ ಗಳಿಕೆ ಎಂಬ ಮಾತ್ರಕ್ಕೆ ತನಗನಿಸಿದ್ದೆಲ್ಲಾ ಮಾಡಬೇಕೆಂಬ ಗಂಡು ಜಂಭದ ಅಪ್ಪನ ಜೊತೆ ಮಾತಿಗೆ ಮಾತು ಬೆಳೆದು, ಅಪ್ಪನ ಕೋಪದ ಬ್ಯಾಟಿಗೆ ಅಮ್ಮನ ತಲೆ ಚೆಂಡಿನಂತೆ ಪುಟಿದಿದೆ ಎನಿಸಿತು. ಹೆತ್ತ ತಂದೆಯ ಬಗ್ಗೆ ಒಮ್ಮೆ ಜಿಗುಪ್ಸೆ, ಇನ್ನೊಮ್ಮೆ ಅಮ್ಮನ ಅನಗತ್ಯ ಒತ್ತಡ ನೀಡುವ ಪರಿ ಎಲ್ಲವೂ ಆತನಿಗೆ ಕಿರಿಕಿರಿ ಅನ್ನಿಸಿತು. ಅಪ್ಪನೇನೂ ಕೆಟ್ಟವನಲ್ಲ. ಮನೆಗೆ, ಹೆಂಡತಿ ಮಕ್ಕಳಿಗೆ ಬೇಕಾದ ಎಲ್ಲವನ್ನೂ ಹೊಂದಿಸುವ ತಾಕತ್ತಿದ್ದವ. ಆದರೆ ಒಂದೇ ನೂನ್ಯತೆ ಅಂದರೆ ತಾನು ಹೇಳಿದ್ದೇ ನಡೆಯಬೇಕು ಎನ್ನುವ ದ್ರಾಷ್ಟ್ಯ.ಅಮ್ಮನಿಗೂ ಬಹುಶಃ ಅಪ್ಪನಿಂದ ಒದೆ ತಿನ್ನಿಸಿಕೊಳ್ಳದಿದ್ದರೆ ಸಮಾಧಾನವಿಲ್ಲವೇನೋ ಎಂಬಂತೆ ಆಗಾಗ ಕಿರಿಕಿರಿ ಎಬ್ಬಿಸುತ್ತಿದ್ದಳು.

ಸಂಪ್ರೀತ ಒಳ ಬಂದ. ಕುರ್ಚಿಯ ಮೇಲೆ ಆರಾಮಾಗಿ ಕೂತು ಏನೂ ಆಗೇ ಇಲ್ಲಅನ್ನುವಂತೆ ಪೇಪರ ಓದುತ್ತಿದ್ದಅಪ್ಪನ ನೋಡಿ ಅವನ ಸಹನೆ ಮೀರಿತು. ಬದುಕಿನುದ್ದಕ್ಕೂ ಆತನ ಬೇಕು ಬೇಡಗಳ ಪೂರೈಸುತ್ತ ಮಕ್ಕಳು ಮರಿಗಳೆಂದು ಸದಾ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವ, ಅವರ ಭವಿಷ್ಯಕ್ಕಾಗಿ ಗಂಡನಿಗೆ ಒಂದೆರಡು ಬುದ್ಧಿ ಮಾತು ಹೇಳುವ ಆಕೆಗೆ ಈ ಪಾಟಿ ಬಡಿದುಘಾಸಿಗೊಳಿಸುವಅಗತ್ಯವಿತ್ತೇ? ಮೇಲಾಗಿ ತಲೆಯಿಂದ ರಕ್ತ ಸುರಿಯುತ್ತಿದ್ದರೂನಿರ್ಲಿಪ್ತನಾಗಿಕೂತ ಅಪ್ಪ ರಾಕ್ಷಸನಂತೆ ಕಂಡ. ಮಕಕ್ಳ ಅನಾರೋಗ್ಯ ಕಂಡು ಮಿಡುಕುವ ಇದೇ ಅಪ್ಪ ಹೆಂಡತಿಗೆ ಆದಈ ಪರಿಯ ಗಾಯದಲ್ಲೂ ಏನನ್ನೋ ಗೆದ್ದವನಂತೆಕೂತಿದ್ದಾನೆಎನ್ನಿಸಿ- ಛೇ ! ನಾನೆಂದು ಇಂಥ ಒಣ ಪ್ರತಿಷ್ಠೆಯ ಪುರುಷರ ಸಾಲಿನಲ್ಲಿ ನಿಲ್ಲ ಬಾರದು. ತಂದೆಯ ಪಾತ್ರವೇ ತನಗೊಂದು ಪಾಠ ಎಂದುಕೊಂಡ.

ಮಾತು ತಂದೆಯೆಂಬ ಗೌರವವನ್ನು ಮೀರಿ ಹೊರಟಿತು. – ಅಪ್ಪಾ… ನೀನೇನು ಮನುಷ್ಯನಾ? ಮೃಗನಾ? ತಲೆ ಉಡದ ಚೂರಾಗುವಂಗೆ ಹೊಡೆದ್ಯಲ್ಲಾ. ನಿಂಗೀಯ ಪ್ರಾಯದಲ್ಲೂ ಅದೇನ್‌ ಪೌರುಷ? ಛೇ !. ಮಕ್ಕಳ ಬಳ್ಗೆ ನಿಂತರ ಅಂದೆ ಗುತ್ತಾಗುಲಾ ನಿಂಗೆ? ಮನೀಗೆ ದೊಡ್ಡಾಂವ ನೀನ. ಹಾಂಗೇ ಇರ್‌. ಎಂದು ಪಟ ಉಟನೆ ತಂದೆಗೆ ಗದರಿಸುವಂತೆ ನುಡಿದ. ವಯಸ್ಸಿಗೂ ಮೀರಿದ ಮಾತು ನನ್ನಿಂದ ಹೆಂಗೆ ಬಂತೆಂದು ಆತನಿಗೆ ಅರಿವಾಗಲಿಲ್ಲ. ಅಪ್ಪನೆಂದರೆ ತನಗೆ ಎಷ್ಟು ಭಯ. ಆದರೆ ಆ ಭಯ ಈಗೆಲ್ಲಿ ಹೋಗಿದೆ?

ಒಳಗಿಂದ ಜೋರು ನುಡಿ ಕೇಳಿಸಿಕೊಂಡಸಾತಮ್ಮತಟ್ಟನೆ ಒಳ ಬಂದಳು ನೆತ್ತರು ಒರೆಸಿಕೊಳ್ಳುತ್ತ. ಏ… ಸುಮ್ನಿರಾ… ಅವರನ್ಯಾಕ್‌ ಅಂತೀ? ಅವರೇನೂ ಮಾಡಲಾ.ನಾನೇ ನಾಗುಂದಿ ಮೇಲಿಂದ ಪಾತ್ರೆ ಇಳ್ಸಿಕೊಳ್ತಿದ್ದೆ. ಸರಿಯಾಗಿ ನೆತ್ತೀ ಮೇಲೆ ಚಕ್ಕುಲಿ ಮಾಡೂದ್‌ ಹಿತ್ತಾಳೀ ಬಟ್ಲ ಬಿತ್ತ. ಅದ್ಕೇ ರಕ್ತ ಬಂತ ನೋಡು. ಎಂದಳು.

ಇದು ಸುಳ್ಳೆಂದು ಆಕೆಯ ಅತ್ತು ಅತ್ತು ಊದಿಕೊಂಡ ಕಣ್ಣುಗಳೇ ಹೇಳುತ್ತಿದ್ದವು. ಅಮ್ಮ ಯಾಕೆ ಹಾಗೆ ಸುಳ್ಳು ಹೇಳುತ್ತಾಳೆಂದು ಅವನಿಗೆ ಗೊತ್ತು. ಇದು ಮೊದಲ ಬಾರಿಯಲ್ಲ. ಅವರಿಬ್ಬರ ನಡುವಿನ ಕಾದಾಟ ಮಾತಿಂದ ಸುರುವಾಗಿ ತಂದೆಯ ಪೆಟ್ಟಿನೊಂದಿಗೆ ಕೊನೆಯಾಗುವುದು ಸಾಮಾನ್ಯ. ಆದರೆ ಈ ಪರಿಯ ಹೊಡೆತ ಹಾಕಿರಲಿಲ್ಲ ಆತ. ಬಹುಶಃ ಅಕ್ಕನ ಮದುವೆಯ ವಿಚಾರವಾಗೇ ಇರಬಹುದು. ಮಾತುಕತೆ ಎಲ್ಲೋ ಹೋಗಿ, ಎಲ್ಲಿಗೋ ಬಂದು ಈ ಪ್ರಮಾದ ಎಂದುಕೊಂಡ. ಅಕ್ಕ ಪಾಪ ಬಿ.ಎಡ್‌. ಮುಗಿವರೆಗೂ ಮದ್ವೆ ಆಗಲ್ಲ ಅಂದ್ರೆ ಅಪ್ಪ ಕೇಳ್ತಿಲ್ಲ.

ಇದೆಲ್ಲಾ ಯಾಕಪ್ಪ ಹೀಗೆ? ಎಂದು ಬೇಸರಿಸಿಕೊಂಡ ಸಂಪ್ರೀತ.

ಅಮ್ಮ ಎಷ್ಟು ಹೇಳಿದರೂ ಆತ ಕೇಳಲಿಲ್ಲ. ಗೆಳೆಯನಿಗೆ ಫೋನಾಯಿಸಿ, ರಿಕ್ಷಾ ತರಿಸಿ ತಾಯಿಯನ್ನು ಬಲವಂತವಾಗಿ ಕೂರಿಸಿಕೊಂಡು ೧೦ ಕಿ.ಮೀ. ದೂರದ ಆಸ್ಪತ್ರೆಗೆ ಕರೆತಂದ ಸಂಪ್ರೀತ. ಆ ಹೊತ್ತಿಗಾಗಲೇ ಮಧ್ಯಾನ್ಹ ಎರಡು ಗಂಟೆ. ಹೆಚ್ಚಿನ ಪೇಶಂಟುಗಳು ಇರಲಿಲ್ಲ. ವೈದ್ಯರು ಊಟದ ಸಮಯವೆಂದು ಎದ್ದು ಹೋಗಿದ್ದರು.ಅಲ್ಲೇ ಇದ್ದ ನರ್ಸ ಒಬ್ಬಳಲ್ಲಿ ವಿನಂತಿಸಿಕೊಂಡ. ಆಕೆ ಕುಳಿತುಕೊಳ್ಳಲು ಹೇಳಿ ಕನ್ಸಲ್ಟಿಂಗ ರೂಮು ಹೊಕ್ಕಳು.ಹೊರಗೆ ಕೂತ ಸಂಪ್ರೀತ ತಳಮಳಿಸುತ್ತಿದ್ದ. ಸಾತಮ್ಮ ಈ ಸ್ಥಿತಿಯಲ್ಲೂ ತನ್ನ ಮರೆತು ಬೇರೇನೋ ಯೋಚಿಸುತ್ತಿದ್ದಳು.

*************************************

ಗದ್ದೆ ಬಯಲಿಗೆ ಹಾಯಿಸಿದ ನೀರು ಬೆಳಗಿನ ಗುಂಟ ಹಾದು ಬರುತ್ತ, ಇರುವದ ನೋಡುತ್ತ ತನ್ಮಯತೆಯಿಂದ ತಾನು ನೀರಿ ಹರಿವಿನೊಂದಿಗೆ ಒಂದಾದ ಕ್ಷಣ ಅಷ್ಟೇ. ಆಗಲೇ ಅಲ್ವೇ? ಕಪಿಲೆ ಕೂಗಿದ್ದು. ಆ ಕೂಗಲ್ಲಿನ ನೋವಿನ ಎಳೆಗೆ ತನ್ನೊಳಗಿನ ಕರುಳು ಚಳ್‌ ಅನಿಸಿದ್ದು.

ಕಪಿಲೆ… ಈಗಲೂ ಅದೇ ನೋವಿನ ದನಿ ಕೇಳಿದಂತಾಗುತ್ತದೆ. ಈ ನೋವಿನ ಮೂಲದಲ್ಲೂ ಆಕೆಯ ನೆನಪು. ಹೌದು. ಆಕೆಯೂ ನನ್ನಂತೆ ಹೆಣ್ಣು. ಹೆಣ್ಣಿನ ನೋವು ಆ ಸೂಕ್ಷ್ಮಅವಳಿಗೆ ತಾನೆ ಅರ್ಥವಾಗೋದು. ಏನು ಮಾಡಲಿ. ಏನು ಆಡಲಿ. ಚಿಟಿಚಿಟಿ ಅನ್ನುತ್ತಿರುವ ತಲೆ. ಸುತ್ತಿದ ಬಟ್ಟೆ. ಆ ಡಾಕ್ಟರಮ್ಮ ಬರವವರೆಗೂ ನಿಲ್ಲಬೇಕು. ಕಪಿಲೆ ಏನು ಮಾಡುತ್ತಿದ್ದಾಳೋ? ಬಾಣಂತಿ ಬೇರೆ. ಮೊನ್ನೆ ಮೊನ್ನೆಯಷ್ಟೇ ಆಕೆಯೂ ಸುಧಾರಿಸಿಕೊಳ್ತಿದ್ದಾಳೆ. ಮನೆಗೆ ಹೋಗಿ ಅಕ್ಕಚ್ಚು ಕೊಡಬೇಕು. ಅಕ್ಕಿ, ಬೆಲ್ಲ, ಕಾಯಿ ಬೇಯಿಸಿ ಹಾಕಬೇಕು. ಈಗ ಐದಾರು ದಿನವಾಯ್ತು. ನೋವೇ ನೋವು. ಕಪಗಲೆ ಕೈಗೆ ಸಿಗುವುದೇ ಇಲ್ಲ ಅಂದುಕೊಂಡಿದ್ದಳು ಸಾತು. ಬಾಣಂತಿಯಾದ ಎರಡನೇ ದಿನಕ್ಕೆ ಸಂಜೆ ಹೊತ್ತು ಏಕಾಏಕಿ ಕಪಿಲೆ ಕೂಗಿಕೊಂಡಿದ್ದುಇನ್ನು ತಾನು ಆ ಗುಂಗಿನಲ್ಲೇ ಇರುವೆನೇನೋ ಅನ್ನಿಸಿತು. ಯಾಕಿವತ್ತು ನನಗೆ ಇಂಥಹ ಪರಿಸ್ಥಿತಿಯಲ್ಲೂ ಕಪಿಲೆಯೇ ಕಣ್ಮುಂದೆ ಎಂದು ಯೋಚಿಸುತ್ತಿದ್ದವಳು ಮತ್ತದೇ ನೆನಪಿಗೆ ಜಾರಿದಳು.

ಆ ದಿನ ಸಂಜೆ ಹೊತ್ತು ಗದ್ದೆಗೆ ನೀರು ಹಾಯಿಸುತ್ತಾತಾನು ಒಂದೊಂದೇ ಗದ್ದೆ ಹಾಳೆಗಳ ಹಸಿಗೊಳಿಸುತ್ತಮತ್ತೆ ಮುಂದಿನ ಗದ್ದೆಗೆನೀರು ಬಿಡುತ್ತಾ ಇದ್ದೆ. ಇದು ಎರಡನೇ ಬೆಳೆ. ಹಾಗಾಗಿ ಗದ್ದೆಯ ಬಯಲಿನ ಬಾವಿಯಿಂದಲೇನೀರು ಸರಬರಾಜಾಗಬೇಕು. ಒಂದು ಗದ್ದೆಯಿಂದ ಇನ್ನೇನು ಇನ್ನೊಂದು ಗದ್ದೆಗೆಬೆಲಗಿನ ತೋಡು ಬಗೆದು ಕೊಡುತ್ತಿದ್ದೆ.ಕಪಿಲೆಯ ಆರ್ತನಾದಕ್ಕೆ ಒಮ್ಮೆಗೇ ಓಡಿಕೊಟ್ಟಿಗೆಗೆ ಬಂದು ನೋಡಿದರೆ ಏದುಸಿರು ಬಿಡುತ್ತಾ ಬದುಕಿನ ಕೊನೆ ಕ್ಷಣ ಎಣಿಸುತ್ತಿರುವಂತೆ ಮೈ ಸೆಟೆಸಿ ಮಲಗಿತ್ತಲ್ಲ. ಸಾವಿನ ಕದ ನೂಕ್ತಾ ಇತ್ತು ಅನ್ಸಿತ್ತು. ತಡೆಯಲಾರದೆ –

ಕಪಿಲೆ. ಏನಾಯ್ತೇ ನಿಂಗೆ ಹಿಂಗ್ಯಾಕೆ ತಲೀ ಊರ್ಯೇ? ಅಯ್ಯೋ ದ್ಯಾವ್ರೇ. ಈಗೇನು ಮಾಡ್ಲೇ?

ಎಂದು ಹಲುಬ್ತಾ ಇದ್ದ ತಾನು ್ದ್ಯಾವ ಧೈರ್ಯ ಮೈಮೇಲೆ ಬಂತೋ… ಮಗ, ಗಂಡ ಇಬ್ರೂ ಮನೇಲಿಲ್ಲ. ಆದ್ರೂ ಯಾವತ್ತೂ ಪೋನಿನ ಗೋಜಿಗೆ ಹೋಗದ ತಾನು ಆದಿನ ಡೈರಿಯಲ್ಲಿ ಬರೆದಿಟ್ಟ ನಂಬರ್‌ ಹುಡುಕಿ, ದನದ ಡಾಕ್ಟಿಗೆ ಪೋನು ಮಾಡೇ ಬಿಟ್ನೆಲ್ಲ. ಸೋಜಿಗವೇ ಎಂದುಕೊಂಡಳು.

ಕಪಿಲೆಯ ಮೈದಡವುತ್ತಾ, ತಲೆ ಸವರುತ್ತಾ ಅದರ ಹತ್ತಿರವೇ ಕುಳಿತು ಅದರೊಂದಿಗೆ ತಾನೂ ಕಣ್ಣೀರಿಡುತ್ತ ನಡುವೆ ಆ ದಿನವೆಲ್ಲಾ ಬದುಕಿನ ಇನ್ನೊಂದು ರೂಪ ಕಂಡಿದ್ದಳು

ಬೆಳಿಗ್ಗೆ ಚನ್ನಾಗಿಯೇ ಇತ್ತಲ್ಲ. ಕಪಿಲೆ ಹಾಲು ಕರೆದು ತಾಯಿಯ ಕಡೆ ಕರು ಬಿಟ್ಟು ಬಂದಿದ್ದೆ. ಒಂದೇ ಸಲಕ್ಕೆ ಏನಾಯಿತೋ? ನನಗೇನು ತಿಳಿಯುತ್ತೆ. ಆದರೆ ಅಷ್ಟೇ ಹೊತ್ತಿಗೆ ಪಾಪ ಡಾಕ್ಟರು ಸಂಜೆಯಾದರೂ ಬಂದೇ ಬಿಟ್ರು. ಅಂತಹ ಮಾನವೀಯತೆಯ ವೈದ್ಯರಿರುವುದರಿಂದಲೇ ಮಳೆ ಬೆಳೆ ಆಗ್ತಾ ಇದೆ ಅಂದುಕೊಂಡಳು.

ಗಾಬರಿಯಾಗಿದ್ದ ನಾನು ದೇವರ ನಾಮ ಜಪಿಸುತ್ತಿದ್ದೆ. ಡಾಕ್ಟರ ರಾಮಪ್ಪ ಪಾಪ ಅದು- ಇದು ಅಂತ ಏನೆಲ್ಲ ಮಾಡಿದರು. ಬಾಣಂತಿ ದನಕ್ಕೆ ಏಕಾಏಕಿ ಹೆಣ್ಣುಮಕ್ಕಳಂತೆ ಜೀವದಲ್ಲಿ ಕ್ಯಾಲ್ಸಿಯಂ ಕಡಿಮೆ ಅಂತ ಹೇಳಿಒಂದು ಬಾಟಲ್‌ ಸುಣ್ಣದ ನೀರನ್ನ ಡ್ರಿಪ್‌ಗೆ ಹಾಕಿ ಏರಿಸಿದ್ದರೂ ಅದರ ಉಸಿರಾಟದಲ್ಲಿ ಸರಾಗತೆ ಬಂತೇ ವಿನಹ ದನ ಎದ್ದು ನಿಲ್ಲಲಿಲ್ಲ. ಮತ್ತೊಂದು ಬಾಟಲಿ ಖಾಲಿಯಾದ್ರೂ ತಲೆ ಕೂಡಾ ಎತ್ತಲಿಲ್ಲ. ಆಗ ತಾನು ಪೂರ್ತಿ ಭೂಮಿಗಿಳಿದೇ ಹೋಗಿದ್ದೆ. ಆಗಲೇ ಅವರೇಳಿದ್ದು. ಕೊನೆಯಪ್ರಯತ್ನ ಎಂದುಅದೇ ಕರುವ ತಂದು ತಾಯಿಯ ಮುಂದೆ ನಿಲ್ಸು ಅಂತ. ಡಾಕ್ಟರು ಹೇಳಿದ್ದೇ ತಡ. ಕೊಟ್ಟಿಗೆ ಮೂಲೇಲಿ ಬಿದ್ಕೊಂಡಿದ್ದ ಕರುವನ್ನು ಎತ್ತಿ ತಂದಿದ್ದೆ. ಅದ್ಯಾವ ಚಮತ್ಕಾರವೋ. ಕರು ಕಪಿಲೆಯ ಹತ್ತಿರ ಬಂದುಎರಡು ಸಾರಿ ಅಂಬಾ… ಅಂಬಾ ಅನ್ನುತ್ಲೇ ತಾಯಿಯ ಮೂತಿಗೆ ಬಾಯಿಂದ ಮೂಸುತ್ಲೇ ಆ ಹೊತ್ತಿನವರೆಗೂ ಭರವಸೆಯೇ ಇಲ್ಲದಿದ್ದ ಕಪಿಲೆ ಫಕ್ಕನೆ ತಲೆಯೆತ್ತಿ ನೋಡಿದ್ಲು. ಆಶ್ಟರ್ದಲ್ಲಿ ಆಶ್ಚರ್ಯ… ಅನ್ನೋ ಹಂಗೆ ತಾನೂ ದೊಡ್ಡದಾಗಿ ಅಂಬಾ… ಎಂದು ಕೂಗುತ್ತಾ ಎದ್ದು ನಿಂತೇ ಬಿಟ್ಲು ಕಪಿಲೆ. ಅದೆಂಥಾ ವಾತ್ಸಲ್ಯ. ಮಾತೃಪ್ರೇಮ ಅಂದ್ರೆ ಇದೇ ಅಲ್ಲಾ. ಉಕ್ಕಿ ಹರೀತಾ ಇದ್ದ ಆ ಭಾವಕ್ಕೆ ಬೆಲೆ ಕಟ್ಟೋದ್‌ ಸಾಧ್ಯವೆ? ಅಯ್ಯೋ ದೇವ್ರೆ. ಹೆಣ್ಣು ಕರುಳೆಷ್ಟು ಮೃದು.ತನ್ನ ಸಾವಿನಲ್ಲೂ ಕರುವಿನ ದನಿ ಸತ್ತ ಜೀವ ಉಳಿಸುವಷ್ಟು. ಎಂಥಹ ಪ್ರೇಮ ಭಾವ ಸ್ಫುರಣೆ ಎಂದು ಸಾತು ಯೋಚಿಸುತ್ತಾ ತಾನಿ ಈ ಸ್ಥಿತಿಯಲ್ಲೂ ಗಂಡನ ಮೇಲಿನ ಪ್ರೀತಿಗೆ ಸುಳ್ಳು ಹೇಳೋ ಧೈರ್ಯ ಮಾಡಿದ್ದು ನೋಡಿ ನಗೆ ಬಂತು. ಸಾವಿನ ದಾರಿಯಲ್ಲಿ ಕೂಡ ನಮ್ಮಂಥಹ ಹೆಣ್ಣುಗಳು ಕುಟುಂಬ, ಗಂಡ, ಮಕ್ಕಳು, ಬದುಕು ಅಂತೆಲ್ಲಾ ಜವಾಬ್ದಾರಿಗಳ ಮಧ್ಯೆ ನಮಗೆ ನಾವೇ ಕಳೆದು ಹೋಗಿರ್ತೀವಿ ಅನ್ನಿಸಿತು. ಆದರೂ ಗಂಡನ ವಿರುದ್ಧ ತಾನು ನುಡಿಯಲಾರೆ ಎನ್ನಿಸಿತು. ಸಾತು ಮುಂದೆ ಯೋಚಿಸಲಿಲ್ಲ.

***************************************

ಆಗಷ್ಟೆ ಊಟ ಮುಗಿಸಿ ತುಸು ಲಘು ವಿಶ್ರಾಂತಿಗೆಂದು ಡಾಕ್ಟರ್‌ ಸುಧತಿ ಕುರ್ಚಿಗೊರಗಿದ್ದಳು. ಮಧ್ಯಾನದ ಸಮಯವಾದ್ದರಿಂದ ಹೊರಗೆ ಪೇಶಂಟಗಳು ಇರುವುದಿಲ್ಲ. ದಣಿದ ದೇಹಕ್ಕೆ ಆರಾಮ ತಗೆದುಕೊಳ್ಳಲು ಇದೇ ತಕ್ಕ ಸಮಯ. ಆಕೆಯ ಮನಸ್ಸೂ ಸಂದಿಗ್ಧ ಸ್ಥಿತಿಯಲ್ಲಿತ್ತು. ಆ ದಿನ ಮನೆಯಲ್ಲಿಯ ರಾದ್ಧಾಂತ ಬೇಡವೆಂದರೂ ಪುನಃ ಪುನಃ ಮನಪಲದಲ್ಲಿ ಹಾದು ಹೋಗುತ್ತಿತ್ತು. ಅದೇ ಗಂಡನಿಗೆ – ಮಾಡಿಟ್ಟ ತಿಂಡಿ ಹಾಕಿಕೊಂಡು ಬನ್ನಿ ಎಂದು ಹೇಳಿದ್ದೇ ಅಪರಾಧವೆಂದೆನಿಸಿ ತಿಂಡಿ ತಿನ್ನದೇ ಆಕೆಯನ್ನು ನಿಂದಿಸಿ ಖಾಲಿ ಹೊಟ್ಟೆಯಲ್ಲಿಯೇ ಹೊರಟು ಹೋಗಿದ್ದ ಪತಿರಾಯ. ಇಷ್ಟೆಲ್ಲಾ ಓದಿ, ಡಾಕ್ಟರ್‌ಗಿರಿ ದಕ್ಕಿಸಿಕೊಂಡದ್ದು ದೊಡ್ಡ ಆಸ್ಪತ್ರೆಯಲ್ಲಿ ಸೀನಿಯರ್‌ ಡಾಕ್ಟರಾಗಿ ಕೆಲಸ ಮಾಡ್ತಿದ್ದೂ ಸಂಜೆ ತಾನು ಮನೆಗೆ ಹೋಗುವವರೆಗೂ ಚಹದ ಬಟ್ಟಲಿಗಾಗಿ ಕಾದು ಕುಳಿತಿರುವ ಪ್ರಾಧ್ಯಾಪಕ ಪತಿರಾಯ ಕಣ್ಮುಂದೆ ಬಂದ. ದಿನವೊಂದಕ್ಕೆ ಓಂದೇ ತರಗತಿ ಬೋಧಿಸಿ, ಆಯಾಸ ಎಂದು ಬರುವ ಆತ ತಾನು ಮಾಡುವ ನಿತ್ಯದ ಅರ್ಧದಷ್ಟು ಕೆಲಸವನ್ನೂ ಮಾಡುವುದಿಲ್ಲ.

ಸುಸ್ತಾಗಿ ಬರುವ ನಾನೇ ಹೋಗಿ ಚಹ ಮಾಡಿ ಕೈಗಿಕ್ಕಬೇಕು. ಮನೆಗೆಲಸದಲ್ಲೂ ಅಷ್ಟೆ ಕೆಲಸದವರ ಅಡುಗೆ ತನಗೆ ಹಿಡಿಸುವುದಿಲ್ಲ ಎಂದು ಹೇಳಿ ನನ್ನಿಂದಲೇ ಅಡುಗೆ ಮಾಡಿಸುವ ಹಠ ಬೇರೆ. ಇತ್ತ ಮನೆಗೆಲಸ. ಅತ್ತ ಆಸ್ಪತ್ರೆ ಕೆಲಸ. ಅದೆಲ್ಲವನ್ನೂ ನಿಭಾಯಸುವ ತನ್ನ ಕೆಲಸದ ಮೇಲೆ ಒಂದಿನವೂ ಪ್ರಶಂಸೆ ಎಂಬ ಮಾತಿಲ್ಲ. ಕೇಳಿದರೆ ಈಗಿನ ಕಾಲದ ಎಲ್ಲ ಹೆಂಗಸರೂ ಹಾಗೇ ಮಾಡುವುದು. ನೀನು ಮಾತ್ರ ಹೀಗೆ ಎಂಬ ಕೊಂಕು ಬೇರೆ.

ಭಾಷಣದಲ್ಲಿ ದೊಡ್ಡದಾಗಿ ಸ್ತ್ರೀ ಸಮಾನತೆ ಬಗ್ಗೆ ಕೊರೆಯುವ ಗಂಡ ಮನೆಯಲ್ಲಿ ಮಾತ್ರ ಹೀಗೆ. ಡಾ. ಸುಧತಿ ಇನ್ನೂ ಅಚ್ಚರಿಯಿಂದ ಯೋಚಿಸುತ್ತಾಳೆ. ಹೆಂಗಸರಿಗೇಕೆ ಇಷ್ಟು ಕರುಣೆ- ವಾತ್ಸಲ್ಯ ಉಕ್ಕುತ್ತದೆ? ಪ್ರೀತಿ, ಮಮತೆ, ಮಮಕಾರ ಇವಳಿಗಷ್ಟೆ ಯಾಕೆ? ಗಂಡಿಗಿಂತ ಇವಳಿಗೇ ಯಾಕಿಷ್ಟು ಅಂತಃಕರುಣ? ಇವುಗಳ ಹಂಗಿಗೆ ಬಿದ್ದೇ ನಾವೆಲ್ಲ ಗಂಡಂದಿರ ಈ ಎಲ್ಲ ದಬ್ಬಾಳಿಕೆಯನ್ನು ಪ್ರೀತಿಯ ಇನ್ನೊಂದು ಮುಖವೆಂದು ಸ್ವೀಕರಿಸುತ್ತಾಬಂದಿರೋದು. ಅನ್ನಿಸಿತು. ಎದೆಯೊಳಗೆ ಗಂಡಿನ ದರ್ಪದ ಅರಿವಿದ್ದರೂ ಆತ ದಬ್ಬಾಳಿಕೆ ಮಾಡುತ್ತಿದ್ದರೂ ಆತನ ಮುಖವನ್ನು ಜಗತ್ತಿಗೆ ಪರಿಚಯಿಸಲೊಲ್ಲದ ವಿಚಿತ್ರ ಮಾನಸಿಕ ಸ್ಥಿತಿ ಹೆಣ್ಣಿನದು. ಸ್ವಯಂ ಸಂಪಾದಿಸಿ ಉಣ್ಣುತ್ತಿರುವ ತನ್ನಂಥಹ ಎಷ್ಟೋ ಹೆಣ್ಣುಮಕ್ಕಳ ಮನಸ್ಥಿತಿ ಅಂದುಕೊಂಡಳು ಡಾ. ಸುಧತಿ.

ತಟ್ಟನೆ ಡಾ. ಸುಧತಿಗೆ ಮನೋ ವೈಜ್ಞಾನಿಕ ಭಾಷೆಯಲ್ಲಿ – ಸ್ಟಾಕ್‌ ಹೋಮ್‌ ಸಿಂಡ್ರೋಮ್‌- ಎಂದು ಕರೆಸಿಕೊಳ್ಳುವ ಮಾನಸಿಕ ಅಸಂತುಲನತೆ ಬಗ್ಗೆ ನೆನಪಾಯಿತು. ಅಪಹರಣಕಾರರಿಂದ ಅಪಹರಿಸಲ್ಪಟ್ಟ ಒತ್ತೆಯಾಳುಗಳು ಅದ್ಯಾವ ಕಾರಣಕ್ಕೋ ತಮ್ಮ ಅಪಹರಣಗೈದವರ ಬಗೆಗೆ ಬೆಳೆಸಿಕೊಳ್ಳುವ ವಿಚಿತ್ರವಾದ ಬಾಂಧವ್ಯ. ತನಗೆ ಕಿರುಕುಳ, ತೊಂದರೆ ಕೊಡುತ್ತಿದ್ದವರ ಕುರಿತು ಪೋಲೀಸರಿಗೆ ವಿವರಗಳ ನೀಡದೆ ಅಪಹರಣಕಾರನ ಬಗ್ಗೆಯೇ ಅತಿಯಾದ ಕಾಳಜಿ ತೋರುವ ಮನೋ ವ್ಯಾಕುಲತೆ. ಮಾನಸಿಕ ಅವಲಂಬನೆ. ಅದೇ ಸ್ಟಾಕ್‌ ಹೋಮ್‌ ಸಿಂಡ್ರೋಮ್‌.

ಮೊತ್ತ ಮೊದಲು ಸ್ವೀಡನ್ನಿನ ಸ್ಟಾಕ್‌ ಹೋಮ್‌ ಬ್ಯಾಂಕ ದರೋಡೆಕೋರ ಅಪಹರಣಕಾರರಿಂದ ಅಪಹರಿಸಲ್ಪಟ್ಟ ಒತ್ತೆಯಾಳುಗಳು ಈ ಮನಸ್ಥಿತಿಯನ್ನು ತೋರಿಸಿದ್ದ ಕಾರಣಕ್ಕೆ ಈ ಹೆಸರು ಬಂತು ಎಂದು ಓದಿದ ನೆನಪು. ಡಾ. ಸುಧತಿ ಅಂದುಕೊಂಡಳು. ಹೆಣ್ಣು ಕೂಡಾ ತನ್ನ ಪತಿಯ ಬಗ್ಗೆ ಆತನ ದೌರ್ಜನ್ಯಗಳ ಹೊರತಾಗಿಯೂ ಹೊಂದುವ ಮಾನಸಿಕ ಅವಲಂಬನೆ ಈ ರೀತಿ ಅವನನ್ನು ಬೆಂಬಲಿಸುವ ಕಾರಣವಿರಬಹುದು ಅನ್ನಿಸಿತು. ಇದು ಇನ್ನೊಂದು ರೀತಿಯಲಿ ಮನೋ ವೈಜ್ಞಾನಿಕ ಮೈತ್ರಿ ಇರಬಹುದು ಅನ್ನಿಸಿತು. ಅಷ್ಟರಲ್ಲಿ ಹೊರಗಿಂದ ನರ್ಸ ಒಳಬಂದಳು.

ಮೇಡಮ್‌, ಹೊರಗೆ ಒಂದೇ ಒಂದು ಕೇಸಿದೆ. ಹೊರಗೆ ಓ.ಪಿ.ಡಿಯಲ್ಲಿ ಕೂತಿದಾರೆ. ತಾಯಿ ಮಗ ಇಬ್ಬರೇ ಇದ್ದಾರೆ. ಹೆಂಗಸು ತಲೆಗೆ ಪೆಟ್ಟು ಆದಂಗಿದೆ. ಮಗ ಅಂಗಲಾಚ್ತಿದಾನೆ. ಬೇಗ ನೋಡ್ಬೇಕಂತೆ.

ಅದನ್ನು ಕೇಳಿದ್ದೇ ತಡ. ತನಗೆ ಇನ್ನೂ ಆಯಾಸವಿದ್ದರೂ ಕೈ ಸ್ಕೆತೆಸ್ಕೋಪು ಹಿಡಿಯಿತು. ನರ್ಸ ಹಿಂದೆಯೇ ಎದ್ದಳು ಡಾ. ಸುಧತಿ.

ಊಟದ ಸಮಯವಾದ್ದರಿಂದ ಬೇರೆ ಪೇಶೆಂಟುಗಳು ಇರಲಿಲ್ಲ. ಅಲ್ಲದ್ದವರು ಸಾತೂ ಮತ್ತು ಆಕೆಯ ಮಗ ಸಂಪ್ರೀತ. ಇಬ್ಬರೂ ಡಾಕ್ಟರನ್ನು ನೋಡಿ ಎಚ್ಚತ್ತರು.

ಏನಾಯ್ತು? ಕೈಗೆ ಗ್ಲೌಸ್‌ ಹಾಕಿಕೊಂಡು ಸಾತುವಿನ ತಲೆಯ ಗಾಯ ನೋಡುತ್ತ ಡಾ.ಸುಧಿತಿ ಕೇಳದಳು. ಹಾಗೇ ಗಾಯವನ್ನೂ ನೋಡಿದಳು. ಅದು ಆಳಕ್ಕಿಳಿದಿತ್ತು.

ಎಂತ ಮಾಡ್ಕೊಂಡಿದ್ದು? ಮತ್ತೆ ಕೇಳಿದಳು. ಸಾತು ಅನುಮಾನಿಸುತ್ತ ಮಗ ಏನಾದ್ರೂ ಹೇಳಿಯಾನು ಎಂದು ಅವಸರದಿಂದ ತಾನೇ ಹೇಳಿದಳು.

ಅದೇನಿಲ್ಲ ಡಾಕ್ಟ್ರೇ, ಅದು… ನಾನು ನಾಗೊಂದಿ ಮೇಲಿಂದ ಚಕ್ಕುಲಿ ಡಬ್ಬಿ ತಗೀತಿದ್ದೆ. ಕೈ ಜಾರಿದ ರಭಸಕ್ಕೆ ತಲೆ ಮೇಲೆ ಬಿತ್ತು. ಎಂದುಸುರಿ ಮಗನ ಕಡೆ ನೋಡಿದಳು. ಅವಳ ಕಳವಳದ ಮಾತು, ನಡೆ ನೋಡಿ ಡಾ. ಸುದತಿಗೆ ಮೊದಲೇ ಬಂದ ಗುಮಾನಿ ದೃಢವಾಯಿತು. ಇದು ಬರೀ ಪಾತ್ರೆ ತಲೇ ಮೇಲೆ ಬಿದ್ದ ಗಾಯ ಅಲ್ಲ. ಬದಲಿಗೆರಭಸದಿಂದ ಬಡಿದ ಗಾಯ. ಅದು ಹರಿತ ಆಯುಧದಿಂದ ಅನ್ನಿಸಿತು. ಆದರೆ ಮೊದಲೇ ನವೆದ ಮನಸ್ಸುದೇಹದ ಆಕೆಗೆ ಮತ್ತೆ ಪ್ರಶ್ನಿಸಬೇಕೆನಿಸಲಿಲ್ಲ. ತಾನು ಹೆಣ್ಣು ಏನೋ ಇರಬಹುದು ಎಂದು ಊಹಿಸಿದಳು. ನರ್ಸ ಕಿಟ್‌ ತಂದು ಕೊಡುತ್ತಲೂ ಡಾ.ಸುದತಿ – ಸಿಸ್ಟರ, ಗಾಯದ ಸುತ್ತಲತಲೆಕೂದಲ ಕತ್ತರಿಸಿ ಹಾಕಿ, ಬ್ಯಾಂಡೇಜ್‌ ಮಾಡ್ವಾಗ ತೊಂದೆಯಾಗದ ಹಾಗೆ ಮತ್ತೆ ಕ್ಲೀನ್‌ ಅಪ್‌ ಮಾಡಿ – ಎಂದು ಹೇಳಿ ಪ್ರಿಸ್ಕ್ರಿಪ್ಶನ್‌ ಬರೆಯಲಾರಂಭಿಸಿದಳು. ಅಲ್ಲೇ ಮತ್ತೆ ಆಲೋಚನೆಗಳು ಆಕೆಯನ್ನು ಮುತ್ತಿಕೊಂಡವು.

ಮೇಡಮ್‌ ಕ್ಲೀನ್‌ ಮಾಡಿಯಾಯ್ತು. ಎಂದು ನರ್ಸ ಹೇಳುತ್ತಲೇ ಸುದತಿ ಬ್ಯಾಂಡೇಜ ಮಾಡಲುಸಿದ್ಧಳಾದಳು. ಮಗನನ್ನು ಹೊರಗೆ ಕಳಿಸಿ ಸಾತಮ್ಮನಿಗೆ ಅದು- ಇದು ಕೇಳುತ್ತ ಅರಿವಾಗದಂತೆಬ್ಯಾಂಡೇಜ ಮುಗಿಸಿ, ಇಂಜೆಕ್ಶನ್‌ ಕೊಟ್ಟು, ಸ್ವಲ್ಪ ಹೊತ್ತು ಅಲ್ಲೇ ವಿರಮಿಸುವಂತೆ ಹೇಳಿ ಹೊರಬಂದಳು. ಪಾಪ ಸಂಪ್ರೀತ ಡಾಕ್ಟನ್ನು ನೋಡಿ ಎದ್ದು ನಿಂತುವಿನಮ್ರತೆ ತೋರಿಸಿದ.

ಹೇಗಾಯ್ತು ಇದು? ಬಹುಶಃ ಅವ್ರು ಹೇಳಿದ ಕಾರಣದಿಂದ ಅಲ್ಲ ಅನ್ಸುತ್ತೆ. ಎಂದೊಡನೆ ಆತ ಸತ್ಯ ಹೇಳಿಬಿಟ್ಟ. – ಇಲ್ಲ ಡಾಕ್ಟ್ರೇ, ಅಪ್ಪ ಕೋಪದಲ್ಲಿ ಕೈಲಿದ್ದ ಕೋಲಿನಿಂದ ಬಡಿದಿದ್ದಾರೆ. ಹಂಗಾಗೇ ಆಳವಾಗಿ ಗಾಯಾಗಿದೆ. ಎಂದ. ಅಷ್ಟೊತ್ತಿಗೆ ಸಾತಮ್ಮ ಹೊರಬರುತ್ತಲೂ ಸಂಪ್ರೂತ ಬಿಲ್ಲು ಪಾವತಿಸಿ ಸಮಸ್ಕರಿಸಿ ಅಮ್ಮನನ್ನು ಕರೆದುಕೊಂಡು ಹೊರ ನಡೆದ.

ಡಾ.ಸುದತಿಯ ಮುಖದಲ್ಲಿ ಒಂದು ವಿಷಾದದ ನಗೆ. ಹೌದು. ತನ್ನಂತೆ ಗಂಡನ ವ್ಯಗ್ರತೆಯನ್ನು ಪ್ರೀತಿಸುವ ಇನ್ನೊಂದು ಜೀವ ಇದು. ಅದೇ ಮನೋ ವೈಜ್ಞಾನಿಕ ಕ್ಯಾಪ್ಚರ್‌ ಬೊಂಡಿಂಗ್‌ ಮಾನಸಿಕ ಮೈತ್ರಿ. ದೌರ್ಜನ್ಯಕ್ಕೆ ಬಸವಳಿಸಿದರೂ ಪ್ರೇಮದ ಸಂಸಾರ ತೂಗುವ ಹತ್ತಾರು, ಸಾವಿರಾರು ಹೆಣ್ಣು ಮುಖಗಳು ಆಕೆಯ ಮನಃಪಟಲದಲ್ಲಿ ಮೂಡಿ ಮರೆಯಾದುವು. ***

All Articles
Menu
About
Send Articles
Search
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW