‘ಮಹಿಳಾ ಕರ್ಣ’ : ಗಿರಿಜಮ್ಮ ಅರ್ಥಾತ್ ಗಿರಿಜಾ ಲೋಕೇಶ್

ಗಿರಿಜಮ್ಮನ ದಾನ ಧರ್ಮದ ಗುಟ್ಟು! ವಿಷಯ ಏನಪ್ಪಾ ಅಂದ್ರೆ : ಹಿರಿಯ ನಟ ದಿವಂಗತ ಕೆ.ಎಸ್.ಅಶ್ವಥ್ ಅವರು ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಗಿರಿಜಮ್ಮ ಪ್ರತಿ ತಿಂಗಳೂ ಐದು ಸಾವಿರ ರೂಪಾಯಿಗಳನ್ನು ಅಶ್ವಥ್ ಅಕೌಂಟಿಗೆ ಹಾಕುವ ವ್ಯವಸ್ಥೆ ಮಾಡಿದ್ದರು. ಖ್ಯಾತ ಪತ್ರಕರ್ತರಾದ ಗಣೇಶ ಕಾಸರಗೋಡು ಅವರ ಲೇಖನಿಯಲ್ಲಿ ಅರಳಿದ ಗಿರಿಜಾ ಲೋಕೇಶ ಅವರ ವ್ಯಕ್ತಿತ್ವವನ್ನು ತಪ್ಪದೆ ಮುಂದೆ ಓದಿ…

ಕನ್ನಡ ಚಿತ್ರರಂಗದಲ್ಲೊಬ್ಬಾಕೆ ‘ಮಹಿಳಾ ಕರ್ಣ’ : ಗಿರಿಜಮ್ಮ ಅರ್ಥಾತ್ ಗಿರಿಜಾ ಲೋಕೇಶ್ ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದಂತೆ! ಆದರೆ ಇಲ್ಲಿ ಸಣ್ಣದೊಂದು ಬದಲಾವಣೆ : ಬಲಗೈ ಕೊಟ್ಟದ್ದು ಬಲಗೈಗೇ ಗೊತ್ತಾಗುವುದಿಲ್ಲ! ಇದು ಕನ್ನಡ ಚಿತ್ರರಂಗದ ಏಕಮೇವಾದ್ವಿತೀಯ ‘ಮಹಿಳಾ ಕರ್ಣ’ ಎಂದೇ ಹೆಸರಾಗಿರುವ ಗಿರಿಜಾ ಲೋಕೇಶ್ ಅವರ ದಾನ ಧರ್ಮಗಳ ರಹಸ್ಯ!

ನನಗೇ ಆಶ್ಚರ್ಯ. ಹಿರಿಯ ನಟ ದಿವಂಗತ ಕೆ.ಎಸ್.ಅಶ್ವಥ್ ಖುದ್ದು ನನ್ನಲ್ಲಿ ಹೇಳುವ ತನಕ ನನಗೂ ಗೊತ್ತಿರಲಿಲ್ಲ ಈ ಗಿರಿಜಮ್ಮನ ದಾನ ಧರ್ಮದ ಗುಟ್ಟು! ವಿಷಯ ಏನಪ್ಪಾ ಅಂದ್ರೆ : ನಾನು ‘ವಿಜಯಕರ್ನಾಟಕ’ ಪತ್ರಿಕೆಯಲ್ಲಿ ‘ಚದುರಿದ ಚಿತ್ರಗಳು’ ಅಂಕಣವನ್ನು ಬರೆಯುತ್ತಿದ್ದ ಕಾಲ. ನಾಲ್ಕನೇ ಅಂಕಣವಾಗಿ ಅಶ್ವಥ್ ಅವರ ಕೊನೇಗಾಲದ ಆರ್ಥಿಕ ಸಫರಿಂಗ್ಸ್ ಬಗ್ಗೆ ಬರೆದೆ. ಈ ಲೇಖನವನ್ನು ಓದಿದ ಗಿರಿಜಮ್ಮ ತಾವು ನೇರವಾಗಿ ಅಶ್ವಥ್ ಅವರನ್ನು ಸಂಪರ್ಕಿಸಿ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದಲ್ಲದೇ, ಪ್ರತಿ ತಿಂಗಳೂ ಐದು ಸಾವಿರ ರೂಪಾಯಿಗಳನ್ನು ಅಶ್ವಥ್ ಅಕೌಂಟಿಗೆ ಹಾಕುವ ವ್ಯವಸ್ಥೆ ಮಾಡಿದ್ದರು!

ಆ ಲೇಖನ ಪ್ರಕಟವಾದ ಮೇಲೆ ಅಶ್ವಥ್ ಅವರಿಗೆ ಸರ್ಕಾರದಿಂದ ಆರ್ಥಿಕ ಸಹಾಯ ಬಂದೊದಗಿದ್ದಲ್ಲದೇ, ನೂರಾರು ಸಂಖ್ಯೆಯ ಅಭಿಮಾನಿಗಳು ನೆರವಾಗಿರುವುದನ್ನು ಸ್ವತಃ ಅಶ್ವಥ್ ಅವರೇ ಒಮ್ಮೆ ನನ್ನಲ್ಲಿ ಹೇಳಿಕೊಂಡಿದ್ದರು. ಗಿರಿಜಮ್ಮನ ನೆರವು ಸಿಕ್ಕಿದ್ದು ಕೂಡಾ ಇದೇ ಸಂದರ್ಭದಲ್ಲಿ. ಹಾಗೆ ಆರ್ಥಿಕವಾಗಿ ಚೇತರಿಸಿಕೊಂಡ ಮೇಲೆ ಇದೇ ಅಶ್ವಥ್ ಅವರು ನನ್ನಲ್ಲಿ ಹೀಗೆಂದು ಹೇಳಿಕೊಂಡಿದ್ದರು : ‘ಮಗಾ, ನೀನು ಪತ್ರಿಕೆಯಲ್ಲಿ ಬರೆದ ಮೇಲೆ ನಾನು ಆರ್ಥಿಕವಾಗಿ ಸುಧಾರಿಸಿಕೊಂಡೆ. ಇದರಲ್ಲಿ ಗಿರಿಜಮ್ಮನ ಪಾಲೂ ಇದೆ. ಎಷ್ಟು ತಿಂಗಳುಗಳ ಕಾಲ, ವರ್ಷಗಳ ಕಾಲ ಗಿರಿಜಮ್ಮ ನನ್ನ ಅಕೌಂಟ್’ಗೆ ಹಣ ಹಾಕಿದಳೋ ಗೊತ್ತಿಲ್ಲ. ಆದ್ರೆ ನನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಮೇಲೆ ‘ಸಾಕು ತಾಯೀ ನಿಲ್ಸಿ ಬಿಡು’ ಅಂದೆ! ಅಂಥಾ ಮಹಾತಾಯಿ ಈ ನಮ್ಮ ಗಿರಿಜಮ್ಮ…’ – ಅಂತ ಹೇಳಿ ಆಕಾಶಕ್ಕೆ ಕೈಮುಗಿದಿದ್ದರು ಅಶ್ವಥ್.

ಇದು ಒಂದು ಸ್ಯಾಂಪಲ್, ಮತ್ತೊಂದು ಸ್ಯಾಂಪಲ್ ಇಲ್ಲಿದೆ : ಈತನ ಹೆಸರು ನಾಗರಾಜ್, ಸ್ಟಿಲ್ ನಾಗರಾಜ್ ಅಂತಲೂ ಕರೆಯುತ್ತಾರೆ. ಕನ್ನಡ ಚಿತ್ರರಂಗದ ಹಿರಿಯ ಸ್ಟಿಲ್ ಫೋಟೋಗ್ರಾಫರ್. ಇಂಥಾ ನಾಗರಾಜ್’ಗೆ ಒಟ್ಟು ನಾಲ್ಕು ಸಲ ಹೃದಯಾಘಾತವಾಯಿತು. ನಾಲ್ಕನೇ ಅಟ್ಯಾಕ್’ನಲ್ಲೂ ಬದುಕುಳಿದ ನಾಗರಾಜ್ ಐದನೇ ಅಟ್ಯಾಕನ್ನು ಸಹಿಸಿಕೊಳ್ಳದಾದ. ಜೈನ್ ಆಸ್ಪತ್ರೆಗೆ ಸೇರಿಕೊಂಡ. ಆಪರೇಷನ್ ಮಾಡಲೇ ಬೇಕಿತ್ತು. ‘AICD’ ಅನ್ನುವ ಮುಷ್ಠಿ ಗಾತ್ರದ ಯಂತ್ರವನ್ನು ಹೃದಯದ ಬಳಿ ಫಿಕ್ಸ್ ಮಾಡಲೇ ಬೇಕಿತ್ತು. ಸಿಂಪಲ್ಲಾಗಿ ಹೇಳಬೇಕೆಂದರೆ ಈ ಯಂತ್ರದ್ದು ಬ್ಯಾಟರಿ ಕೆಲಸ. ಇದಕ್ಕೆ ತಗಲುವ ವೆಚ್ಚ ಬರೋಬ್ಬರಿ 15 ಲಕ್ಷ ರೂಪಾಯಿಗಳು! ಬಡಪಾಯಿ ಸ್ಟಿಲ್ ಫೋಟೋಗ್ರಾಫರ್ ಬಳಿ ಅಷ್ಟೊಂದು ದೊಡ್ಡ ಮೊತ್ತ ಎಲ್ಲಿದೆ? ಅಲ್ಲೇ ಪಕ್ಕದಲ್ಲಿ ಹಿರಿಯನಟ ಲೋಕೇಶ್ ಚಿಕಿತ್ಸೆ ಪಡೆಯುತ್ತಿದ್ದರು. ಪತಿಯ ಜತೆ ಪತ್ನಿ ಗಿರಿಜಾ ಇದ್ದರು. ನಾಗರಾಜನ ಫಜೀತಿಯನ್ನು ನೋಡಲಾಗದೇ ಗಿರಿಜಮ್ಮ ತಾವೇ ಮುಂದೆ ನಿಂತು ಸಹಾಯ ಮಾಡಲು ಹೊರಟರು. ಜೋಡಿಸಬೇಕಾದ ಯಂತ್ರವನ್ನು ಅಮೆರಿಕಾದಿಂದ ತರಿಸಬೇಕಾಗಿತ್ತು. ಕೊನೆಗೆ ನಾಗರಾಜನ ಕೈಲಿ ಅಪ್ಲಿಕೇಶನ್ ಬರೆಸಿ ಗಿರಿಜಮ್ಮನೇ ರಾತ್ರೋರಾತ್ರಿ ಅಮೆರಿಕಾದ ರೋಟರಿ ಸಂಸ್ಥೆಗೆ ಫ್ಯಾಕ್ಸ್ ಮಾಡಿಸಿದರು. ಇದು ವರ್ಕೌಟ್ ಆಯಿತು. ನಾಗರಾಜ್ ಬದುಕಿಕೊಂಡರು.

ಈ ಗುಟ್ಟನ್ನು ನಾಗರಾಜ್ ಒಂದು ವಿಶಿಷ್ಟ ಸನ್ನಿವೇಶದಲ್ಲಿ ನನ್ನಲ್ಲಿ ಹೇಳಿಕೊಂಡರು. ಕೊನೆಯಲ್ಲಿ ಹೇಳಿದರು : ‘ನಾನಿವತ್ತು ಬದುಕಿದ್ದರೆ ಅದು ಗಿರಿಜಮ್ಮನ ಭಿಕ್ಷೆ. ನನ್ನ ಕುಟುಂಬದ ಪಾಲಿನ ದೇವರು ಅವರು…’ – ಹೀಗೆಂದು ಹೇಳಿ ನಾಗರಾಜ್ ಕೂಡಾ ಆಕಾಶಕ್ಕೆ ಕೈ ಮುಗಿದಿದ್ದರು!

ಗಿರಿಜಮ್ಮನ ವಿಶಾಲ ಹೃದಯದ ಬಗ್ಗೆ ಗೊತ್ತಿತ್ತು, ಆದರೆ ಈ ಮಟ್ಟದಲ್ಲಿ ಸಹಾಯಹಸ್ತ ಚಾಚುತ್ತಾರೆ ಅಂತ ಗೊತ್ತಿರಲಿಲ್ಲ. ನನಗೆ ಗೊತ್ತಿರುವ ಎರಡೇ ಎರಡು ಪ್ರಸಂಗಗಳನ್ನು ಮಾತ್ರ ಹೇಳಿದ್ದೇನೆ. ಗೊತ್ತಿಲ್ಲದಿರುವ ಅವೆಷ್ಟು ಪ್ರಕರಣಗಳು ಗುಟ್ಟು ಕಳಚಿಕೊಳ್ಳದೇ ಉಳಿದಿವೆಯೋ ಆ ಪರಮಾತ್ಮನಿಗಷ್ಟೇ ಗೊತ್ತು!

ಅಂದಹಾಗೆ ಇಂಥಾ ಗಿರಿಜಮ್ಮನ ಜನ್ಮ ದಿನ ಇಂದು. 75ರ ಮಾಗಿದ ವಯಸ್ಸು ಸಂತೃಪ್ತಿಯ ನೆಲೆಯಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತಿದ್ದೇನೆ. ನಿಮ್ಮದೊಂದು ಶುಭ ಹಾರೈಕೆಯೂ ಜತೆಗಿರಲಿ…

ಛಾಯಾಚಿತ್ರ : ಪ್ರಗತಿ ಅಶ್ವಥ್ ನಾರಾಯಣ


  • ಗಣೇಶ ಕಾಸರಗೋಡು – ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading