ಕನ್ನಡಕ್ಕಾಗಿ ಸಾಕಷ್ಟು ಚಳುವಳಿಗಳೇ ಆಗಿವೆ. ಕನ್ನಡವನ್ನು ಉಳಿಸುವ ಪ್ರಯತ್ನ ಎಲ್ಲರಿಂದಲೂ ಆಗಬೇಕು.ಕನ್ನಡದ ನಾಯಕಿ, ನಾಯಕರು ಕನ್ನಡದ ಪ್ರತಿನಿಧಿಗಳು, ಅವರಿಂದ ಕನ್ನಡದ ಹಿರಿಮೆ ಎತ್ತರಕ್ಕೆ ಬೆಳೆಯಬೇಕು.
ನಟಿ ಮಾಲಾಶ್ರೀ ಅವರ ಮಗಳು ಕಾರ್ಯಕ್ರಮವೊಂದರಲ್ಲಿ “ಹೇಳ್ಬೇಕಾ? “… ಎಂದು ಹೇಳಲು ಹೋಗಿ “ಹೇಲಬೇಕಾ??”… ಅಂದಿದ್ದ ಆ ವಿಡಿಯೋವನ್ನು ಟ್ರೋಲಿಗರು ಹಿಂದೆ ಮುಂದೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದನ್ನು ನೋಡಿದ್ದೆ. ಅದಾದ್ಮೇಲೆ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಕನ್ನಡದ ಹೆಮ್ಮೆಯ ರಿಯಾಲಿಟಿ ಶೋನಲ್ಲಿ ಇಂಗ್ಲೀಷ್ ನಲ್ಲೆ ಮಾತಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತು. ಅದನ್ನು ಕೂಡಾ ನೋಡಿದೆ.
ಸಾನ್ವಿ ಅವರು ಯಾಕೆ ಕನ್ನಡವನ್ನು ಮಾತಾಡಿಲ್ಲ, ಅದು ನನಗೆ ಗೊತ್ತಿಲ್ಲ. ಅವರಿಗೆ ಕನ್ನಡ ಬರುತ್ತೋ…ಇಲ್ವೋ… ಅದು ಗೊತ್ತಿಲ್ಲ. ಆದರೆ ನಮ್ಮ ಕನ್ನಡನಾಡನಲ್ಲಿ ಕನ್ನಡ ಭಾಷೆ ಅಂತ ಬಂದಾಗ ಸಿಕ್ಕಾಪಟ್ಟೆ ಅಭಿಮಾನವಿದೆ. ನ್ಯಾಷನಲ್ ಕ್ರಶ್ ಅನ್ನಿಸಿಕೊಂಡ ರಶ್ಮಿಕಾ ಮಂದಣ್ಣ ಕರ್ನಾಟಕದಲ್ಲಿ ಹುಟ್ಟಿ, ಬೆಳೆದು, ಸ್ಟಾರ್ ಆಗಿ ಕನ್ನಡದ ಮೇಲೆ ತಿರಸ್ಕಾರ ತೋರಿದಾಗ ಇದೇ ನಮ್ಮ ಟ್ರೋಲಿಗರು ಅವರನ್ನು ಹಿಗ್ಗಾ ಮುಗ್ಗ ಟ್ರೋಲ್ ಮಾಡಿದ್ದರು. ಅಷ್ಟೇ ಯಾಕೆ ಕನ್ನಡದ ಉಳಿವಿಗಾಗಿ ಸಾಕಷ್ಟು ಚಳುವಳಿಗಳೇ ಆಗಿವೆ. ಕನ್ನಡ ಅಂತ ಬಂದಾಗ ಯಾವ ನಾಯಕ, ನಾಯಕಿ, ಯಾವ ಸ್ಟಾರ್ ಮಕ್ಳು, ಯಾವ ಸಾಹಿತಿಗಳ ಮಕ್ಳು, ಕೊನೆಗೆ ಸಾಮಾನ್ಯ ಜನರನ್ನು ಕೂಡಾ ಬಿಡುವುದಿಲ್ಲ ಅವರನ್ನು ವಿರೋಧಿಸಿದ್ದಾರೆ. ಉಪ್ಪಿ ಅವರ ಮಗ ಆಯುಷ್ ಸಾರ್ವಜನಿಕ ಸ್ಥಳದಲ್ಲಿ ಅಭಿಮಾನಿಗಳ ಜೊತೆಗೆ, ಛಾಯಾಗ್ರಾಹಕರ ಜೊತೆಗೆ ಕನ್ನಡದಲ್ಲಿಯೇ ಮಾತಾಡುವ ವಿಡಿಯೋಗಳು ಇವೆ.”ಅಣ್ಣಾ… ಊಟ ಆಯ್ತಾ” ಅಂತ ಛಾಯಾಗ್ರಾಹಕರಿಗೆ ಕೇಳಿದಾಗ ದಣಿದು ನಿಂತ ಕ್ಯಾಮೆರಾ ಕಣ್ಣುಗಳಲ್ಲಿ ಸಂತೋಷ ನೋಡಿ ನಾನು ಸಂತೋಷ ಪಟ್ಟಿದ್ದೆ. ಇದೆ ಸಾಮಾಜಿಕ ಜಾಲತಾಣಗಳು, ಟ್ರೋಲ್ ಪೇಜ್ ಗಳು ಉಪ್ಪಿಯವರ ಮಗ ಆಯುಷ್ ನನ್ನು ಹೊಗಳಿತ್ತು.
ಇನ್ನೂ ಕನ್ನಡ ಉಳಿಸುವಲ್ಲಿ ನಮ್ಮ ಆಟೋ ಚಾಲಕರ ಪಾತ್ರವೂ ದೊಡ್ಡದಿದೆ. ಅದಕ್ಕೆ ಒಂದು ಘಟನೆ ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ. ನನ್ನ ತೆಲುಗು ಸ್ನೇಹಿತೆಯೊಬ್ಬಳು ಮೊದಲ ಬಾರಿಗೆ ಬೆಂಗಳೂರು ಬಂದಾಗ ಆಟೋದಲ್ಲಿ ಸುದೀಪ್ ಅವರ ಭಾವಚಿತ್ರ ನೋಡಿ ಅವಳಿಗೆ ಕನ್ನಡ ಬಾರದಿದ್ದರಿಂದ ಹಿಂದಿಯಲ್ಲಿ ಈ ಫೋಟೋ ಯಾರದು? ಎಂದು ಕೇಳಿದಾಗ ರೋಷಗೊಂಡ ಆಟೋ ಚಾಲಕ ಹೊರಟಿದ್ದ ಆಟೋ ನಿಲ್ಲಿಸಿ ಅವಳನ್ನು ಆಟೋದಿಂದ ಕೆಳಗೆ ಇಳಿಸಿ ಬೇರೆ ಆಟೋಕ್ಕೆ ಹೋಗುವಂತೆ ಹೇಳಿ ಅಲ್ಲಿಂದ ಹೊರಟು ಹೋದ. ಆ ಘಟನೆ ಆದ ಬಳಿಕ ಆಕೆ ಕನ್ನಡದ ಪ್ರತಿಯೊಬ್ಬ ನಾಯಕರ ಹೆಸರು, ಫೋಟೋವನ್ನು ತನ್ನ ಮಸ್ತಕಕ್ಕೆ ತುಂಬಿಕೊಂಡಿದ್ದು ಸುಳ್ಳಲ್ಲ. ಜೊತೆಗೆ ಈಗ ಕನ್ನಡವನ್ನು ಅದ್ಭುತವಾಗಿ ಮಾತಾಡುತ್ತಾಳೆ. ಇದಕ್ಕೆ ಆಟೋ ಚಾಲಕನಿಗೆ ಧನ್ಯವಾದಗಳು ಹೇಳಬೇಕು. ಒಬ್ಬಳಿಗೆ ಕನ್ನಡ ಕಲಿಸಿದಷ್ಟೇ ಅಲ್ಲ, ನಮ್ಮ ನಾಯಕರನ್ನು ಪ್ರೀತಿಸುವಂತೆ ಮಾಡಿದ.
ನಮ್ಮ ಕನ್ನಡನಾಡು ನಾಯಕರಿಗೆ ಸಾಕಷ್ಟು ಪ್ರೀತಿ ಕೊಟ್ಟಿದೆ. ಅಷ್ಟು ಪ್ರೀತಿಸಿದ ಮೇಲೆ ನಮ್ಮ ನಾಯಕರಿಂದ ನಿರೀಕ್ಷಿಸುವುದು ಕನ್ನಡದ ಮೇಲಿನ ಪ್ರೀತಿ, ಹೃದಯದಲ್ಲಿ ಸ್ವಲ್ಪ ಸ್ವಲ್ಪವೇ ಅಭಿಮಾನಿಗಳ ಮೇಲಿನ ಹಿಡಿ ಪ್ರೀತಿ. ಅದು ಸಿಕ್ಕರೆ ಸಾಕು ನಾಯಕರನ್ನು ತಲೆ ಮೇಲೆ ಹೊತ್ತು ಮೆರೆಯುವ ವಿಶಾಲ ಮನಸ್ಸಿನ ಕನ್ನಡದ ಜನರಿದ್ದಾರೆ.
ನಮ್ಮ ಕನ್ನಡಿಗರು ನಿರೀಕ್ಷಿಸುವುದು ಯಾರೇ ಎಷ್ಟೇ ಎತ್ತರಕ್ಕೆ ಬೆಳೆಯಲಿ ಅವರಲ್ಲಿ ಕನ್ನಡದ ಮೇಲಿನ ಪ್ರೀತಿ ಮಾತ್ರ. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು, ಅವರು ಕನ್ನಡ ಉಳಿಸಿ ಬೆಳೆಸಬೇಕು ಅವರು ಇಂಗ್ಲೀಷ್ ಬೆಳೆಸುತ್ತಾ ಹೋದರೆ ನಮ್ಮ ಹಿರಿಯರು ಕನ್ನಡ ಉಳಿವಿಗಾಗಿ ಮಾಡಿದ ಹೋರಾಟಗಳು ನೀರಿನಲ್ಲಿ ಹೋಮವಾಗುವುದಲ್ಲವೇ?
ಸ್ವಾನಿ ಅವರು ವೇದಿಕೆ ಮೇಲೆ ಅಂದು ಕನ್ನಡದಲ್ಲಿಯೇ ಮಾತಾನಾಡಿದ್ದರೆ ತಂದೆಯಾಗಿ ಸುದೀಪ್ ಅವರ ಎದೆಯಷ್ಟೇ ಉಬ್ಬುತ್ತಿರಲಿಲ್ಲ. ನಮ್ಮ ನೆಚ್ಚಿನ ನಟನ ಪುತ್ರಿ ಎಂದು ಇಡಿ ಕನ್ನಡಿಗರ ಎದೆ ಉಬ್ಬುತ್ತಿತ್ತು. ತಪ್ಪು ಸಹಜ ಕಣೋ, ತಿದ್ದಿ ನಡೆಯೋನು ಮನೋಜ ಕಣೋ…ಸಾನ್ವಿ ಅವರು ಇದನ್ನು ಟ್ರೋಲ್, ಅವಮಾನ ಅಂದುಕೊಳ್ಳದೆ ಮುಂದಿನ ವೇದಿಕೆಯಲ್ಲಿ ಕನ್ನಡದಲ್ಲಿಯೇ ಮಾತಾಡುವಂತಾಗಲಿ ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ.
- ಶಾಲಿನಿ ಹೂಲಿ ಪ್ರದೀಪ್
