‘ಗಂಡಸಾಗಿ ಕವಿತೆ ಬರೆಯುವುದು ಸುಲಭ’ ಕೃತಿ ಮುನ್ನುಡಿ

ಟಿ.ಪಿ.ಉಮೇಶ ನವಿರುಭಾವದ ಕವಿ, ಅತಿ ಕಿರಿಯ ವಯಸ್ಸಿನಲ್ಲಿ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಕ್ರಿಯಾಶೀಲ ವ್ಯಕ್ತಿತ್ವ. ‘ಗಂಡಸಾಗಿ ಕವಿತೆ ಬರೆಯುವುದು ಸುಲಭ’ ಕವಿತಾ ಸಂಕಲನದಲ್ಲಿ ಪ್ರೇಮ ಮತ್ತು ದಾಂಪತ್ಯದ ಪಿಸುಮಾತುಗಳಿವೆ. ಅವರ ಈ ಕವನ ಸಂಕಲಕ್ಕೆ ಅವರ ಗುರು ನಾಗರಾಜ ಸಿರಿಗೆರೆ ಅವರು ಮುನ್ನುಡಿ ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…

ಬಳಪದ ಜೊತೆಗೆ ಲೇಖನಿಯನ್ನು ಹಿಡಿದ ದೇಸೀ ಪ್ರತಿಭೆಯಿಂದ; ಪ್ರೇಮ ದಾಂಪತ್ಯದ ಪಿಸು ಮಾತುಗಳಿಗೆ ಹೊಸಪಾಕದ ಕಾವ್ಯ ಕುಸುರಿ!

ಕವಿ ಮನಸ್ಸಿನ ಉಮೇಶ್ ವೃತ್ತಿಯಲ್ಲಿ ಶಿಕ್ಷಕ. ಎಳೆಯ ಮಕ್ಕಳ ಕಂಗಳಲ್ಲಿ ಸುಂದರ ಕನಸುಗಳನ್ನು ಅರಳಿಸುತ್ತಿರುವ ಕನಸುಗಾರ. ಉತ್ಸಾಹದ ಚಿಲುಮೆಯಾಗಿ ಸದಾ ಹೊಸತನಕ್ಕೆ ತುಡಿಯುವ ಯುವಕ. ಅರಿವಿನ ಅಕ್ಷರದ ಮೂಲಕ ಸಮುದಾಯದ ಕತ್ತಲೆಗೆ ಬೆಳಕು ಹಂಚುವ ಕಾಯಕ ನಿರತ. ತಾನಿರುವ ಜಡ ಪರಿಸರದಲ್ಲಿ ಚೈತನ್ಯ ಮೂಡಿಸಿದ ಕರ್ಮಯೋಗಿ. ಹಾಗಾಗಿ ಅತಿ ಕಿರಿಯ ವಯಸ್ಸಿನಲ್ಲಿ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಕ್ರಿಯಾಶೀಲ ವ್ಯಕ್ತಿತ್ವ. ಬಳಪದ ಜೊತೆಗೆ ಲೇಖನಿಯನ್ನೂ ಹಿಡಿದು ತನ್ನ ಭಾವನೆಗಳಿಗೆ ಅಕ್ಷರ ರೂಪ ಕೊಡುತ್ತಿರುವ ಟಿ.ಪಿ.ಉಮೇಶ ನವಿರುಭಾವದ ಕವಿ. ನಮ್ಮ ನಡುವಿನ ಒಲವಿನ ಕವಿ.

ಹರಿವ ನದಿಯು ಸಾಗರಕೆ ಸುರಿವ ಮಳೆಯು ಇಳೆಗೆ
ಹೊಸತನದ ಬೆರಗು ಭಾವಗೀತೆ!
ನಿನ್ನ ಕಣ್ಣೋಟದ ಹೂ ಬಾಣಕೆ ನಗುವ ಸಿಹಿ ಜೇನಿಗೆ
ನನ್ನೆದೆ ಮಿಡಿಯುತ್ತಿದೆ ಹಂಸಗೀತೆ!

ಎಂದು ಹಾಡುವ ಉಮೇಶರ ಕವಿತಾ ಸಂಕಲನದಲ್ಲಿ ಪ್ರೇಮ ಮತ್ತು ದಾಂಪತ್ಯದ ಪಿಸುಮಾತುಗಳಿಗೆ ಹೊಸಪಾಕದ ಕಾವ್ಯಕುಸುರಿಯನ್ನು ಕಾಣಬಹುದು. ಒಲವ ಧನಿಯಲ್ಲಿ ಗಂಧರ್ವ ಮಾಧುರ್ಯವ ಕೇಳಬಹುದು.

ನಿನ್ನ ನಾನು ಇಷ್ಟಪಟ್ಟ ಮೇಲೇನೆ ನೀ ಸುಂದರಿಯಾಗಿಹೆ!
ಎಷ್ಟು ಕಷ್ಟ ಕೊಟ್ಟರೂ ನೀನೆನ್ನ ಹೃದಯ ಕಿನ್ನರಿಯಾಗಿಹೆ!

ಕುಕ್ಕರ್ ಸೀಟಿ ಕೂಗುತ್ತಲೇ ಇದೆ ಅನ್ನವೀಗ ಸೀಯುತ್ತಲಿದೆ
ಗೊತ್ತು; ಕೋಪಗೊಂಡಿರುವೆ!

ಎಂಬಲ್ಲಿ ದಾಂಪತ್ಯದ ಸರಸ-ವಿರಸಗಳು ಮನೆಯ ವಸ್ತುಗಳ ರೂಪಕಗಳ ಮೂಲಕ ಕಾವ್ಯ ಸೊಬಗಿನಲ್ಲಿ ಮೈದಾಳಿ ಓದುಗರನ್ನು ಪುಳಕಿತಗೊಳಿಸುವವು. ಮನೆ ಮನೆಯ ಕಥೆಯನ್ನು ಕಾವ್ಯದಲ್ಲಿ ಕಟ್ಟಿಕೊಟ್ಟಿರುವ ಪರಿಯು ನಮ್ಮ ಮನ-ಮನೆಯ ಕಥೆಯು ಆಗುವಂತೆ ಉಮೇಶ್ ಕವಿತೆಯ ನೇಯ್ಗೆ ಆಪ್ತವಾಗಿಬಿಡುತ್ತದೆ.

ಬೀಳುವ ಹೂವುಗಳದು ಸಾವಲ್ಲ!
ಮತ್ತಷ್ಟು ನಗು ಅರಳಿಸುವ ಮುನ್ನುಡಿ!

ಎಂಬ ಸಾಲುಗಳು ಕವಿಯು ತನ್ನ ಕಾವ್ಯ ದಿಗಂತದ ಪಯಣದಲ್ಲಿ ಹೊಸ ದಿಕ್ಕಿನೆಡೆಗೆ ಅದು ಆನಂದದ ಬದುಕಿನೆಡೆಗೆ ತನ್ನ ಓದುಗರನ್ನು ಕರೆದೊಯ್ಯುವ ಸಹೃದಯತೆಯನ್ನು ನಾವಿಲ್ಲಿ ಗುರುತಿಸಬಹುದು.

ಹಾಸಿಗೆಯಿಂದ ಎದ್ದೊಡನೆ ಮನೆದೇವರ ನೆನೆದು;
ಹೆಂಡತಿಯ ಪಾದಗಳ ಮುಟ್ಟಿ
ನಮಸ್ಕರಿಸೋ ಭಯ ಭಕ್ತಿಯ ಅಗತ್ಯವಿಲ್ಲ!

ಎನ್ನುವ ನವಿರಾದ ಲಹರಿಯ ಎಲ್ಲ ಮನೆಯ ಗಂಡಂದಿರು ಕವಿಯಾಗಬಯಸುವಂತಹ ಉಮ್ಮೇದು ಹುಟ್ಟಿಸುವ ಗಂಡಸಾಗಿ ಕವಿತೆ ಬರೆಯುವುದು ಸುಲಭ! ಎಂಬ ಕಾವ್ಯ ಸಂಕಲನದ ಶೀರ್ಷಿಕೆಯ ಕವಿತೆ ವಾಸ್ತವದಲ್ಲಿಯೂ ಪ್ರತಿ ಮನೆಗು ಹೆಂಗಸರ ಮಹತ್ವವನ್ನು, ಗಂಡಸರ ಸೃಜನಶೀಲ ಬೆಳವಣಿಗೆಯಲ್ಲಿ ಅವರ ತ್ಯಾಗ ಮತ್ತು ಪ್ರೀತಿಯನ್ನು ಮನಗಾಣಿಸುತ್ತದೆ.

ಕವಿತೆಯು ಬರೆದ ಮೇಲೆ ಕವಿಯ ಸ್ವತ್ತಲ್ಲ ಅದು ಓದುಗರ ಸ್ವತ್ತು. ಓದುಗರಿಗೆ ಸಂತಸ ಸಂಭ್ರಮದ ಜೊತೆ ತಮ್ಮ ಬದುಕಿನ ಕುರಿತು ಒಳನೋಟ ಕಾಣಿಸುವುದು ಕವಿತೆಯ ಸಾರ್ಥಕತೆ. ಕವಿತೆಗಳು ಕವಿಯ ಆತ್ಮ. ಅವು ಓದುಗ ಕೇಳುಗರ ಅಂತರಾತ್ಮವೂ ಆಗುವುದೇ ಕವಿತೆಗಳ ಧನ್ಯತೆ. ಉಮೇಶನ ಕವಿತೆಗಳು ಓದುಗರ ತನುಮನ ಒಪ್ಪಿ ಅಪ್ಪುವಲ್ಲಿ ಯಶಸ್ವಿಯಾಗಿವೆ. ಸಂಕಲನದ ಪ್ರತಿ ಕವಿತೆಯು ಓದುಗರ ಹೃದಯ ಆವರಿಸುತ್ತವೆ. ಓದುಗರೆಲ್ಲ ನನ್ನ ಕವಿಮಿತ್ರ ಉಮೇಶನ ಕವಿತೆಗಳ ಓದುತ್ತಾ ತಮ್ಮದೆ ರೀತಿಯಲ್ಲಿ ಆಸ್ವಾದಿಸಲಿ.

ಶಿಷ್ಯನಂತಿರುವ ಗೆಳೆಯನಾದ ಉಮೇಶ ಸದಾ ಪಾದರಸದಂತ ವ್ಯಕ್ತಿ. ಸಮಾಜದ ಏರಿಳಿವು ಅಂಕುಡೊಂಕುಗಳ ಕುರಿತು ಆಕ್ರೋಷಗಳಿದ್ದರು ಅದರ ಅಭಿವ್ಯಕ್ತಿಯಲ್ಲಿ ಬಹಳ ಸಂಯಮಿ. ಪ್ರೀತಿ ಪ್ರೇಮದ ಜಾಡಿನಲ್ಲಿ ಬದುಕನ್ನು ಜತನದಿಂದ ಕಟ್ಟಿಕೊಂಡಿರುವ ಕವಿ ಹೃದಯಿ. ಇವರ ಹಿಂದಿನ ಕೃತಿಯೊಂದಾದ ದೇವರಿಗೆ ಬೀಗ ಕವಿತಾ ಸಂಕಲನದ ಶೀರ್ಷಿಕೆಯು ಅಚ್ಚರಿಯ ಜೊತೆ ಇವರು ನಾಸ್ತಿಕರೇನೊ ಅನ್ನುವ ಭಾವ ತಂದಿತ್ತು. ಆದರೆ ಓದುವಿಕೆಯಲ್ಲಿ ದೈವವ ಜನರ ಮೈಮನಗಳಲ್ಲಿ ಕಾಣುವ ಅವರ ವಿಶಾಲತೆ ಅಲ್ಲಿನ ಕವಿತೆಗಳ ಅದ್ಭುತ ಅರ್ಥವಿಸ್ತಾರ ಬೆರಗು ಮೂಡಿಸಿದ್ದು ಸತ್ಯ. ಅಂತೆಯೇ ಗಂಡಸಾಗಿ ಕವಿತೆ ಬರೆಯುವುದು ಸುಲಭ! ಶೀರ್ಷಿಕೆ ಕಂಡಾಕ್ಷಣ ಪುರುಷಾಹಂಕಾರವೇನೋ ಅನ್ನಿಸಿದರೂ….

ಗಡಿಯ ಬೇಲಿಯಾಗಿದ್ದ ನನ್ನ ಹುಡಿಮಾಡಿ
ಸಿಂಧೂರವಾಗಿಸಿಕೊಂಡೆ!
ಮತದ ಸ್ತುತಿಯಾಗಿದ್ದ ನನ್ನ ಹತಮಾಡಿ
ಕಂಠಾಭರಣವಾಗಿಸಿಕೊಂಡೆ!

ಎಂಬ ಕವಿತೆ ಸಾಲುಗಳು ಹಾಗೂ ಗುಂಡಮ್ಮನ ಕವಿತೆಗಳ ಸರಣಿ ಓದುತ್ತಾ ಸ್ತ್ರೀಯೆಡೆಗಿನ ಭೂಮಿತೂಕದ ಮಮತೆ, ಪ್ರೀತಿ, ಕಾಳಜಿ, ಅವರ ಸ್ಥಿತಿಗತಿ ಪ್ರಗತಿಗೆ ಸಹಕರಿಸುವ ಪರಿ ಗೋಚರಿಸುತ್ತವೆ. ನಾನು ಅಧ್ಯಾಪಕನಾಗಿ ಪಂಪನಿಂದ ಕುವೆಂಪು, ಚಂಪಾರವರೆಗೆ ಕವಿ ಸಾಹಿತಿಗಳ ಬರಹಗಳ ಪಾಠ ಹೇಳುತ್ತೇನೆ. ಉಮೇಶನ ಇಂದಿನ ಮತ್ತು ಹಿಂದಿನೆಲ್ಲ ಕವಿತೆಗಳ ಓದುಗನಾಗಿರುವ ನಾನು ಇವನ ಕವಿತೆಗಳ ಪಾಠ ಮಾಡುವ ಸಮಯ ಬರಲಿ. ಶಿಷ್ಯನೊಬ್ಬನ ಕವಿತೆಗಳನ್ನ ಶಿಷ್ಯರಿಗೆ ಬೋಧಿಸುವ ಸೌಭಾಗ್ಯ ಗುರುವಿಗೆ ಸಿಗುವುದು ಜನ್ಮದ ಪುಣ್ಯವೇ ಸರಿ.

ಇತಿಹಾಸ ನಿನ್ನ ಮರೆಯಲಾರದು!
ಕಾವ್ಯದಾ ಕಲ್ಲುಗಳಲ್ಲಿ ನಿನ್ನನ್ನೇ ಕೆತ್ತಿರುವೆನಲ್ಲ!

ಎಂದು ತನ್ನ ಸಂಪರ್ಕದ ಎಲ್ಲರ ಕುರಿತು ಗೌರವಾದರತೆಗಳ ಹೊಂದಿ ಪ್ರೀತಿಯ ಮಳೆ ಸುರಿಸುವ ಕವಿ ಒಲವಿನ ನೆನಪುಗಳನ್ನೆಲ್ಲ ತನ್ನ ಕಾವ್ಯದ ಮೂಲಕ ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಸಂಕಲನದ ಪ್ರತಿ ಕವಿತೆಯೂ ಒಲವಿನ ಹೂಮಳೆ. ದಾಂಪತ್ಯದ ಚೆಲುವಿನ ಬೆಳೆ.

ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಸಮಯ ಸಾಮರ್ಥ್ಯ ಆರೋಗ್ಯ ಆಯಸ್ಸಿನ ಗುರುತುಗಳು!
ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಸಹನೆ ಸಮಾಧಾನ ಮೌನ ಸ್ವಾಭಿಮಾನ ಘನ ಕೀರ್ತಿಯ ಶ್ರೇಷ್ಟತೆಗಳು!

ಸಂಕಲನದ ಶೀರ್ಷಿಕೆಯ ಕವಿತೆಯು ಕವಿಯ ಕಾಣ್ಕೆಯ ಉತ್ತುಂಗದಿಂದ ಅರಳಿದ ಕುಸುಮ. ಹೆಂಡತಿಯ ಗೌರವಿಸುವ ಪ್ರತಿಯೊಬ್ಬರು ಓದಬೇಕಾದ ಕವಿತೆ. ಗಂಡಸಾಗಿ ಕವಿತೆ ಬರೆಯುವುದು ಸುಲಭ ಪ್ರೀತಿಯ ಹೃದಯದ ನೈಜ ಭಾವಗಳು. ಅಹಂಭಾವವಿಲ್ಲದ ಗಂಡಸಿನ ಎದೆಯ ಬಡಿತಗಳಾಗಿ ಹೆಂಗರುಳಿನ ಸಂಕೇತಗಳೇ ಆಗಿವೆ.

ಈಗಾಗಲೇ ನನ್ನಯ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್, ಅಪ್ಪನು ಕೊಡಿಸಿದ ಮೊದಲ ಪುಸ್ತಕ ಎಂಬ ಮಕ್ಕಳ ಕವಿತಾ ಸಂಕಲನಗಳು, ಫೋಟೋಕ್ಕೊಂದು ಫ್ರೇಮು, ದೇವರಿಗೆ ಬೀಗ ಎಂಬ ಕಾವ್ಯ ಸಂಕಲನಗಳು, ವಚನಾಂಜಲಿ, ವಚನವಾಣಿ ಎಂಬ ಆಧುನಿಕ ವಚನ ಸಂಕಲನ ಹಾಗು ಅಳಿಗೊಂಡಿಹರೆಂದು ಅಂಜಲದೇಕೆ? ಎಂಬ ಲೇಖನಗಳ ಸಂಗ್ರಹಗಳೊಂದಿಗೆ ಕನ್ನಡ ಸಾಹಿತ್ಯ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿರುವ ಕವಿ ಟಿ.ಪಿ.ಉಮೇಶ್ ಈಗ ಗಂಡಸಾಗಿ ಕವಿತೆ ಬರೆಯುವುದು ಸುಲಭ! ಕಾವ್ಯ ಸಂಕಲನದ ಮೂಲಕ ಕಾವ್ಯ ಸತ್ವ ಮತ್ತು ಕಾವ್ಯ ಪಕ್ವತೆಯಲ್ಲಿ ಭರವಸೆಯ ಹೆಜ್ಜೆಗಳನ್ನಿಡುತ್ತಿದ್ದಾರೆ.


  • ನಾಗರಾಜ ಸಿರಿಗೆರೆ – ಕನ್ನಡ ಅಧ್ಯಾಪಕರು, ದಾವಣಗೆರೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW