ಕವಿಯತ್ರಿ ಶೃತಿ ಬಿ.ಆರ್.ಅವರ ನೂತನ ಕಥಾ ಸಂಕಲನ ‘ಎಲ್ಲೆಗಳ ದಾಟಿದವಳು’ ಕಥಾ ಸಂಕಲನದ ಮೊದಲ ಕತೆಯಾದ ‘ದೇವರು ಬಂತು’ ಬಡ್ಡಿ ಹಣದ ಆಸೆಗೆ ಬಿದ್ದು ಮೋಸಕ್ಕೆ ಒಳಗಾಗುವ ಹೆಣ್ಣುಮಗಳೊಬ್ಬಳು ಅದರಿಂದ ಪಾರಾಗಲು ದೇವರ ಮೊರೆ ಹೋಗಿ ಅದಕ್ಕಿಂತ ಅಪಾಯಕಾರಿಯಾದ ಜಾಲವೊಂದನ್ನು ಕತೆಗಾರ್ತಿ ಹೆಣೆಯಲ್ಪಟ್ಟಿರುವ ಲೇಖಕಿಯ ಕಲ್ಪನೆಯನ್ನು ಮೆಚ್ಚಲೇಬೇಕು, ಭವ್ಯ ಟಿ.ಎಸ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಎಲ್ಲೆಗಳ ದಾಟಿದವಳು (ಕಥಾ ಸಂಕಲನ)
ಲೇಖಕರು : ಶೃತಿ.ಬಿ.ಆರ್
ಪ್ರಕಾರ : ಕಥಾ ಸಂಕಲನ
ಜೀರೋ ಬ್ಯಾಲೆನ್ಸ್ ಕವನ ಸಂಕಲನದ ಮೂಲಕ ಸತ್ತ್ವಪೂರ್ಣ ಕವಿತೆಗಳನ್ನು ನೀಡಿರುವ ಹೊಸ ತಲೆಮಾರಿನ ಭರವಸೆಯ ಕವಿಯತ್ರಿ ಶೃತಿ ಬಿ.ಆರ್.ಅವರ ನೂತನ ಕಥಾ ಸಂಕಲನ ಎಲ್ಲೆಗಳ ದಾಟಿದವಳು. ಒಟ್ಟು ಒಂಬತ್ತು ಸುಂದರ ಕತೆಗಳ ಗುಚ್ಛವಾಗಿದೆ. ಶತಶತಮಾನಗಳಿಂದ ಸಾಮಾಜಿಕ,ಧಾರ್ಮಿಕ ಕಟ್ಟುಪಾಡುಗಳ ಕಪಿಮುಷ್ಟಿಯಲ್ಲಿ ನಲುಗುತ್ತಿರುವ ಹೆಣ್ಣು ಮಕ್ಕಳ ನೋವುಗಳನ್ನು ಸಶಕ್ತವಾಗಿ ಧ್ವನಿಸುವಲ್ಲಿ ಇಲ್ಲಿನ ಏಳು ಕತೆಗಳು ಗೆದ್ದಿವೆ.ಇನ್ನೂ ಎರಡು ಕತೆಗಳಲ್ಲಿ ಒಂದು ವಿಭಿನ್ನ ಪ್ರೇಮಕತೆಯಾದರೆ,ಇನ್ನೊಂದು ವ್ಯವಸ್ಥೆಯ ಭ್ರಷ್ಟತೆಯೊಳಗೆ ನಲುಗುವ ರೈತನ ಕತೆಯಾಗಿದೆ.
ಈ ಕಥಾ ಸಂಕಲನದ ಮೊದಲ ಕತೆಯಾದ ದೇವರು ಬಂತು ಬಡ್ಡಿ ಹಣದ ಆಸೆಗೆ ಬಿದ್ದು ಮೋಸಕ್ಕೊಳಗಾದ ಗೀತಾ ಅದರಿಂದ ಪಾರಾಗಲು ದೇವರ ಮೊರೆ ಹೋಗುವುದು ಅದಕ್ಕಿಂತ ಅಪಾಯಕಾರಿಯಾದ ಜಾಲವೊಂದು ಅಲ್ಲೂ ಹೆಣೆಯಲ್ಪಟ್ಟಿರುವುದು ಕಂಡು ದಂಗಾಗುವ ವಾಸ್ತವತೆಯನ್ನು ತಿಳಿಸುವಂತಿದೆ. ದ್ಯಾವಮ್ಮನೂ…..ಸತ್ಯನಾರಾಯಣನೂ…ಕತೆ ಕೊರೊನಾದಿಂದ ಬಂದೊದಗಿದ ಒಂಟಿತನ,ಮನುಷ್ಯರ ನಡುವೆ ಮಾನವೀಯತೆಯ ಕೊಂಡಿ ಕಳಚುತ್ತಾ ಗೋಡೆಗಳು ಎದ್ದುನಿಂತ ಬಗೆಯನ್ನು ಚಿತ್ರಿಸುತ್ತದೆ.

ಎಲ್ಲೆಗಳ ದಾಟಿದವಳು ಕತೆಯಲ್ಲಿ ಅಜ್ಜಿ ಮೊಮ್ಮಗಳ ನಡುವಿನ ಸಂಭಾಷಣೆಯ ಸೊಗಸು ಓದುಗರನ್ನು ಹಿಡಿದಿಡುವಂತಿದ್ದು,ಕೌಟುಂಬಿಕ ಕಟ್ಟುಪಾಡುಗಳ ನಡುವೆ ಬಂಧಿಯಾದ ದೊಡ್ಡಮ್ಮ ಅನಿರೀಕ್ಷಿತ ರೀತಿಯಲ್ಲಿ ಅದರಿಂದ ಬಿಡುಗಡೆ ಪಡೆಯಲು ಆಯ್ಕೆ ಮಾಡಿಕೊಂಡ ದಾರಿ ಚಿಂತನೆಗೆ ಹಚ್ಚುವಂತಿದೆ.
ಶಕುನದ ಹಕ್ಕಿ ಎಂಬುದು ಹಕ್ಕಿಗಳ ಬದುಕಿನೊಂದಿಗೆ ತನ್ನ ಬದುಕನ್ನು ಹೋಲಿಸಿಕೊಳ್ಳುತ್ತ ಸಂತಸ ಪಡುತ್ತಿರುವಾಗಲೇ ದುಗುಡವೊಂದು ಎದುರಾಗುವ ವಿಭಿನ್ನ ನಿರೂಪಣೆಯ ಕತೆಯಾಗಿದೆ. ಅನಾಮಧೇಯ ಕತೆಯು ಪತ್ರವೊಂದರ ಹಿಂದೆ ಸಾಗುವ ಕುತೂಹಲ ಕೆರಳಿಸುವ ವಸ್ತುವಿನಿಂದ ಕೂಡಿದೆ.ಒಂದು ಸಿನಿಮಾ ನೋಡಿದ ರೋಚಕತೆ ನೀಡುವಲ್ಲಿ ಈ ಕತೆ ಯಶಸ್ವಿಯಾಗಿದೆ.ಪಾತ್ರಪೋಷಣೆ ಬಹಳ ಸುಂದರವಾಗಿ ಮೂಡಿ ಬಂದಿದೆ.

ಅವಳು ಮತ್ತು ಹದಿನೈದು ಜೊತೆ ಕಣ್ಣುಗಳು ಅತ್ಯಂತ ಕಡು ಬಡತನದಲ್ಲಿ ನರಳುವ ಹೆಣ್ಣೊಬ್ಬಳ ಬದುಕಿನ ಸುತ್ತ ಹಬ್ಬುವ ಸಂಕಟಗಳ ಸರಮಾಲೆಯನ್ನು ಮನಮುಟ್ಟುವಂತೆ ನಿರೂಪಿಸಿದೆ. ಕೆಂಪಾದವೋ….ಎಲ್ಲಾ ಕೆಂಪಾದವೋ ಕತೆ ಮುಟ್ಟಾಗದ ಹೆಣ್ಣೊಬ್ಬಳ ಬದುಕಿನಲ್ಲಿ ಮೂಡಿಬರುವ ಅನಿರೀಕ್ಷಿತ ತಿರುವು ಮತ್ತು ಬದಲಾವಣೆಯನ್ನು ಚಿತ್ರಿಸುತ್ತದೆ ದರಕಾಸ್ತು ಕತೆ ತನ್ನ ಜಮೀನನ್ನು ಉಳಿಸಿಕೊಳ್ಳಲು ಪರದಾಡುವ ಹನುಮಯ್ಯ ವ್ಯವಸ್ಥೆಯ ಕ್ರೌರ್ಯದ ನಡುವೆ ಬಂಧಿಯಾಗುವುದನ್ನು ನಿರೂಪಿಸುತ್ತದೆ.
ಧಾರೆ ಕತೆ ಬೇಜವಾಬ್ದಾರಿ ಪತಿಯಿಂದ ಬೇಸತ್ತ ಸುನಂದಾ ತನ್ನ ಮೊಮ್ಮಗಳ ಹಿತಕ್ಕಾಗಿ ತೆಗೆದುಕೊಂಡ ನಿರ್ಧಾರವನ್ನು ತಿಳಿಸುತ್ತಲೇ ಹೆಣ್ಣಿನ ಕಷ್ಟಪರಂಪರೆಯನ್ನು ಕಣ್ಣಿಗೆ ಕಟ್ಟುವಂತಿದೆ. ಒಟ್ಟಿನಲ್ಲಿ ಇಲ್ಲಿನ ಎಲ್ಲಾ ಕತೆಗಳು ಒಂದು ಜೀವನ ಸಂದೇಶವನ್ನು ಹೊತ್ತಿವೆ.ಕೆಲವು ಕತೆಗಳು ಇನ್ನಷ್ಟು ಮುಂದುವರೆಯಬೇಕಿತ್ತು ಅನಿಸುವಂತಿವೆ.ಕಥಾ ನಿರೂಪಣೆಯಲ್ಲಿ ಸಹೃದಯರನ್ನು ತಲುಪುವಲ್ಲಿ ಲೇಖಕಿ ಗೆದ್ದಿದ್ದಾರೆ.
- ಭವ್ಯ ಟಿ.ಎಸ್ – ಶಿಕ್ಷಕರು. ಹೊಸನಗರ
