ಮಾದಕ ದ್ರವ್ಯಗಳನ್ನು ಒಮ್ಮೆ ಸೇವಿಸಿದರೆ ಮತ್ತೆ ಮತ್ತೆ ಸೇವಿಸುವಂತೆ ಮಾಡಿ ಕೊನೆಗೆ ಸೇವಿಸಿದವರ ಮೇಲೆ ತಮ್ಮ ಅಧಿಕಾರ ಚಲಾಯಿಸುತ್ತದೆ. ಅದರಿಂದ ಹೊರಗೆ ಬರಲಾಗದೆ ಎಷ್ಟೋ ವ್ಯಸನಿಗಳು ಒದ್ದಾಡುತ್ತಿದ್ದಾರೆ. ಲೇಖಕಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಅಂದಿನ ಬ್ರೇಕಿಂಗ್ ನ್ಯೂಸ್, ನಗರದ ಪ್ರತಿಷ್ಠಿತ ಕಾಲೇಜೊಂದರ ಬಳಿ ಡ್ರಗ್ಸ್ ಮಾಫಿಯಾ. ಕಾಲೇಜಿನ ಅನೇಕ ಮಕ್ಕಳು ಈ ವ್ಯಸನಕ್ಕೆ ದಾಸರಾಗಿದ್ದರೆಂದು ತಿಳಿದು ಬಂದಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಆ ಕಾಲೇಜ್ ಯಾವುದು? ಇದರಲ್ಲಿ ಯಾರ ಕೈವಾಡ ಇದೆ? ಎಲ್ಲವನ್ನೂ ನಿಮ್ಮ ಮುಂದೆ ಇಡುತ್ತೇವೆ. ಚಾನೆಲ್ ಚೇಂಜ್ ಮಾಡ್ದೆ ನೋಡ್ತಾ ಇರಿ ನಿಮ್ಮಟಿ ವಿಯಲ್ಲಿ.
ಅಂದು ಸುಚೇತಾ ಬ್ಯಾಂಕಿಗೆ ಕಟ್ಟಬೇಕಾದ ಮನೆ ಸಾಲದ ಕಂತನ್ನು ಕಟ್ಟಲೆಂದು ಬೀರುವನ್ನು ತೆರೆದವಳು ಇಟ್ಟ ದುಡ್ಡು ಕಾಣದೆ ಗಾಬರಿಯಾಗಿದ್ದಳು. ಒಂದಲ್ಲ, ಹತ್ತು ಸಲ ಹುಡುಕಿದರೂ ದುಡ್ಡು ಮಾತ್ರ ಸಿಗಲಿಲ್ಲ. ಎಲ್ಲಿ ಇಟ್ಟಿದ್ದೆ ಎಂದು ಮತ್ತೆ ಮತ್ತೆ ನೆನಪಿಸಿಕೊಂಡರೂ ಯಾವಾಗಲೂ ಇಡುವ ಜಾಗವೇ ಕಣ್ಮುಂದೆ ಬಂದದ್ದು. ಅಲ್ಲಿಲ್ಲ, ಹಾಗಾದರೆ ಎಲ್ಲಿ ಹೋಯಿತು.
ಗಂಡನನ್ನೊಮ್ಮೆ ಕೇಳೋಣವೆಂದು ಕರೆ ಮಾಡಿದ್ದಳು. ಅವನು ತಾನು ತೆಗೆದಿಲ್ಲ. ನಿಧಾನಕ್ಕೆ ಹುಡುಕು. ಅವಸರದಲ್ಲಿ ಬೇರೆಲ್ಲೋ ಇಟ್ಟಿರಬೇಕು ಎಂದಿದ್ದ. ಇಡೀ ಮನೆಯೇ ಹುಡುಕಿದರೂ ಸಿಗದಿದ್ದಾಗ ಅಳು ಬರುವುದೊಂದು ಬಾಕಿ. ಸ್ವಂತದ್ದೊಂದು ಸೂರು ಬೇಕೆಂದು ಕಟ್ಟಿದ ಮನೆ. ಪ್ರತಿ ತಿಂಗಳೂ ಸಾಲಕ್ಕೆ ಎತ್ತಿಟ್ಟರೆ ಬೇರೆಲ್ಲದಕ್ಕೂ ತತ್ವಾರ. ಆದರೂ ಇರುವ ಒಬ್ಬ ಮಗನಿಗೆ ಮಾತ್ರ ಯಾವುದಕ್ಕೂ ಕಡಿಮೆ ಮಾಡಿಲ್ಲ. ಒಂದು ವೇಳೆ ಅವನೇನಾದರೂ ಹಣ ತೆಗೆದಿದ್ದರೆ? ಛೆ… ಛೆ… ಹಾಗಾಗಲು ಸಾಧ್ಯವಿಲ್ಲ. ಅಗತ್ಯಗಳನ್ನು ಪೂರೈಸಿದ ಮೇಲೂ ಖರ್ಚಿಗೆಂದು ಸಾಕಾಗುವಷ್ಟು ಹಣ ಕೊಟ್ಟೇ ಇರುತ್ತೇವೆ. ಇನ್ನು ಬೇಕಾದರೂ ಕೇಳಿ ಪಡೆಯುತ್ತಾನೆ. ಆದರೂ ಎಲ್ಲೋ ಒಂದು ಕಡೆ ಮಗ ಏನಾದರೂ ದಾರಿ ತಪ್ಪಿದ್ದರೆ?. ನಮ್ಮ ಮಕ್ಕಳೆಂಬ ನಂಬಿಕೆಯ ಜೊತೆಗೆ ತಾಯಿಯ ಹೊಣೆಗಾರಿಕೆಯೂ ಮುಖ್ಯ. ಆ ನಿಟ್ಟಿನಲ್ಲೂ ನಾನು ಯೋಚಿಸಬೇಕು ಎಂದು ಅವಳ ಮನದ ಮೂಲೆಯಲ್ಲೆಲ್ಲೋ ಅನಿಸಿದ್ದು ಸುಳ್ಳಲ್ಲ.

ಫೋಟೋ ಕೃಪೆ : ಅಂತರ್ಜಾಲ
ಏ… ಹೋಗೋ. ಒಂದಿನಾನು ದುಡ್ ತರಲ್ಲ. ಪ್ರತಿದಿನ ನಾವೇ ಕೊಡುಸ್ಬೇಕು ಎಂದ ಸ್ನೇಹಿತರ ಮಾತಿಗೆ ನಕುಲ್, ನಿಮ್ಗೆ ಗೊತ್ತಲ್ಲ. ಇದ್ಕೆಲ್ಲ ನಾನು ಮನೇಲಿ ದುಡ್ಡು ಕೇಳಕಾಗಲ್ಲ. ಮನೇಲೇನಾದ್ರು ಗೊತ್ತಾದ್ರೆ ಅಷ್ಟೆ. ಆಮೇಲೆ ಕಾಲೇಜು ಬಿಡುಸ್ತಾರೆ. ಅದೆಲ್ಲ ನಮಿಗ್ಗೊತ್ತಿಲ್ಲ. ನಾಳೆ ನಿಂದೆ ಖರ್ಚು. ಇಲ್ಲಾಂದ್ರೆ ಇನ್ಮೇಲೆ ನಮ್ಜೊತೆ ಬರ್ಬೇಡ ಸ್ನೇಹಿತರ ಮಾತಿಗೆ ನಕುಲ್ ನ ತಲೆ ಕೆಟ್ಟು ಹೋದಂತಾಗಿತ್ತು. ಹೇಗಾದರೂ ದುಡ್ಡು ತೆಗೆದುಕೊಂಡು ಹೋಗಲೇಬೇಕೆಂದು ನಿರ್ಧರಿಸಿದ್ದ ನಕುಲ್ ಮನೆಯಲ್ಲಿ ಇಟ್ಟಿದ್ದ ಹಣವನ್ನು ಕದ್ದಿದ್ದ.
ಈ ಮಾದಕ ದ್ರವ್ಯಗಳೇ ಹಾಗೆ. ಒಮ್ಮೆ ಸೇವಿಸಿದರೆ ಮತ್ತೆ ಮತ್ತೆ ಸೇವಿಸುವಂತೆ ಮಾಡಿ ಕೊನೆಗೆ ಸೇವಿಸಿದವರನ್ನೇ ತನ್ನ ಅಧೀನದಲ್ಲಿಟ್ಟುಕೊಳ್ಳುತ್ತದೆ. ಒಮ್ಮೆ ಅದರಲ್ಲಿ ಸಿಲುಕಿದರೆ ಹೊರಬರುವುದು ತುಂಬಾ ಕಷ್ಟ.
ಮಾದಕ ದ್ರವ್ಯದ ವಿಧಗಳು :
ಕೊಕೇನ್ (cocaine). ಹೆರಾಯಿನ್ ( Heroin), LSD ಗಾಂಜಾ, opium,Steroids, ಆಲ್ಕೋಹಾಲ್, ಇತ್ಯಾದಿ.
ಸೇವಿಸುವ ವಿಧಾನ :
ಮೂಸುವುದು, ಇಂಜೆಕ್ಷನ್ ಮೂಲಕ, ಸ್ಮೋಕಿಂಗ್, ಚರ್ಮದ ಮೇಲೆ ಹಚ್ಚಿಕೊಳ್ಳುವುದು. ಇವುಗಳನ್ನು ಬಳಸಿದಾಗ ಎನರ್ಜಿ ಕೊಡುತ್ತೆ, ಆಕ್ಟಿವ್ ಆಗಿಡುತ್ತೆ, ರಿಲಾಕ್ಸ್ ಫೀಲ್ ಆಗುತ್ತೆ.
abuse drug ಆಲ್ಕೋಹಾಲ್(ಬಿಯರ್, ವೈನ್, ಲಿಕ್ಕರ್) ಸೇವಿಸಿದಾಗ ಖುಷಿ ಸಿಗುತ್ತೆ, ಆತ್ಮವಿಶ್ವಾಸ ಬಂದ ಹಾಗೆ ಅನಿಸುತ್ತೆ, ಸ್ಟ್ರಾಂಗ್ ಆದ ಭಾವನೆ ( ಶಕ್ತಿ ಬಂದಂತೆ) ಬರುತ್ತದೆ.
ಮಾದಕ ದ್ರವ್ಯ ಸೇವನೆಗೆ ಕಾರಣಗಳು :
- ಸಾಮಾಜಿಕ
- ದೈಹಿಕ
- ಭಾವನಾತ್ಮಕ
- ಉದ್ಯೋಗಕ್ಕೆ ಸಂಬಂಧಿಸಿದ್ದು
1) Mase 2) Tremblay 3) Gerstein ಈ ಮೂವರು 2೦೦7, 2012, 2017 ರಲ್ಲಿ ಮಾಡಿದ ರಿಸರ್ಚ್ನ ಪ್ರಕಾರ ಡ್ರಗ್ಸ್ ಸೇವಿಸಲು ಈ ಕೆಳಗಿನ ಅಂಶಗಳು ಕಾರಣ.
- ಸೇವಿಸಲೇಬೇಕೆಂದು ಪ್ರಚೋದನೆ ನೀಡುವ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದ ಸ್ಥಿತಿ.
- ಮಾದಕ ವಸ್ತುಗಳ ಬಗ್ಗೆ ಇರುವ ಕುತೂಹಲಕ್ಕೆ.
- ಪೂರಕ ಮನೆಯ ವಾತಾವರಣ. ( ಮನೆಯ ವಾತಾವರಣದ ಪ್ರಭಾವ)
- ಮನೆಯವರ ಜೊತೆ ಹೊಂದಾಣಿಕೆಯಿಲ್ಲದಿರುವುದು (ಜಗಳ, ಗಲಾಟೆ, ಕಠಿಣ ವರ್ತನೆ )
- ಮೊದಲಿನಿಂದಲೂ ನಡವಳಿಕೆಯಲ್ಲಿ ಸಮಸ್ಯೆ (ನಿರಂತರ ಸಮಸ್ಯೆ)
- ಓದಲು ಇಷ್ಟವಿಲ್ಲದಿರುವುದು.
- ಡ್ರಗ್ಸ್ ಸೇವನೆ ಮಾಡುವವರೊಂದಿಗೆ ಒಡನಾಟ ಹೊಂದಿರುವುದು.
- ಎಲ್ಲರಿಂದ ದೂರವಾಗಿ ಒಬ್ಬಂಟಿಯಾದಾಗ(ಉದಾ: ತಂದೆ – ತಾಯಿ, ಮನೆಯವರು, ಸ್ನೇಹಿತರು, ಪ್ರೀತಿಸಿದ ವ್ಯಕ್ತಿ, ಹೀಗೆ) 9)ತಿರುಗಿ ಬೀಳುವ ಮನೋಭಾವವೂ ಮಾದಕ ವ್ಯಸನಕ್ಕೆ ಕಾರಣವಾಗಬಹುದು.
- ಡ್ರಗ್ಸ್ ಬಗ್ಗೆ ತುಂಬಾ ಒಳ್ಳೆಯ ಭಾವನೆ ಇರುವುದು ( ಅಂದರೆ, ಅದನ್ನು ಸೇವಿಸುವುದರಿಂದ ಸಂತೋಷವಾಗಿರುತ್ತೇವೆ ಎಂಬ ಭಾವನೆ)
- ಇದಲ್ಲದೆ :
- ಚಲನಚಿತ್ರ ನೋಡಿ ಜಾಸ್ತಿ ಸ್ಫೂರ್ತಿ ಹೊಂದುತ್ತಾರೆ.
- ಟಿವಿ , ಜಾಹೀರಾತು, ಸಿನೆಮಾ, ಇನ್ನಿತರ ಮಾಧ್ಯಮಗಳನ್ನು ನೋಡಿ ಅಭಿನಯಿಸುವವರನ್ನು ರೋಲ್ ಮಾಡೆಲ್ ಆಗಿ ಇಟ್ಟುಕೊಂಡು ಅವರಂತೆ ಅನುಕರಿಸುತ್ತಾರೆ.
- ಮನೆಯಲ್ಲಿ ಯಾರಿಗಾದರೂ ಅಭ್ಯಾಸವಿದ್ದರೆ ಅವರಿಂದ ಪ್ರಚೋದಿತರಾಗಿ ಮಕ್ಕಳೂ ಅಡಿಕ್ಟ್ ಆಗುತ್ತಾರೆ.
- ಮನೆಯವರೆಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಂಡು ಮಕ್ಕಳ ಕಡೆ ಗಮನ ಕೊಡದೆ ಅವರು ನಿರ್ಲಕ್ಷ್ಯಕ್ಕೆ ಒಳಗಾದಾಗ.
- ಸತತ ನಿಂದನೆ, ಅವಮಾನಗಳಿಗೆ ಒಳಗಾದಾಗ ದುಃಖ ಮರೆಯಲೆಂದು.
ದುಷ್ಟ್ಪರಿಣಾಮಗಳು :
- ಮೊದಮೊದಲು “ಮಜಾ” ಸಿಗುತ್ತೆ ಎಂದು ಪ್ರಾರಂಭಮಾಡಿದ ಹವ್ಯಾಸ ನಂತರದ ದಿನಗಳಲ್ಲಿ ಬಿಡಲಾಗದ ವ್ಯಸನವಾಗುತ್ತದೆ.
- ಸಿಗದಿದ್ದಾಗ ಅಸಹನೆ, ಸಿಟ್ಟು ,ಖಿನ್ನತೆ, ಆತ್ಮಹತ್ಯೆಯಂತಹ ಆಲೋಚನೆಗಳು ಬರುತ್ತವೆ.
- ಅದನ್ನು ಕೊಂಡುಕೊಳ್ಳಲು ಯಾವ ಸ್ಥಿತಿಗೆ ಬೇಕಾದರೂ ತಲುಪುತ್ತಾರೆ. ಉದಾಹರಣೆಗೆ ಸುಳ್ಳು ಹೇಳುವುದು, ಕದಿಯುವುದು, ಕೊನೆಗೆ ಕೊಲೆ ಮಾಡುವ ಹಂತಕ್ಕೂ.
- ವಿದ್ಯಾಸಭ್ಯಾಸದ ಮೇಲೆ ಪರಿಣಾಮ ಬೀರಿ ವಿದ್ಯಾರ್ಥಿಯ ಮುಂದಿನ ಭವಿಷ್ಯವನ್ನು ಮಂಕಾಗಿಸುತ್ತದೆ.
- ನೆನಪಿನ ಶಕ್ತಿ ಕುಂದಬಹುದು.
- ಏಕಾಗ್ರತೆಯ ಕೊರತೆ ಉಂಟಾಗುತ್ತದೆ.( ಮೆದುಳಿಗೆ ತೊಂದರೆ ಉಂಟು ಮಾಡಿ ತಲೆ ಭಾರ ಅನಿಸುತ್ತದೆ. ಮತ್ತೆ ಮತ್ತೆ ಅದನ್ನೇ ಸೇವಿಸಿಬೇಕೆನಿಸುತ್ತದೆ)
- ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗದಂತಹ ಮನಸ್ಥಿತಿ ಉಂಟಾಗುತ್ತದೆ.
- ದೇಶದ ಬೆನ್ನೆಲುಬಾದ, ಆಶಾದೀಪಗಳಾದ ಯುವಕರು ರೇಪಿಸ್ಟ್ಗಳು, ಸಮಾಜಘಾತುಕ ಶಕ್ತಿಗಳಾಗಿಯೂ ರೂಪುಗಳ ಸಂಭವ ಜಾಸ್ತಿ.
- ಮನೋರೋಗಿಗಳೂ ಆಗುತ್ತಾರೆ.
- ದೇಶ ದ್ರೋಹಿಗಳು ಇವರನ್ನು ತಮ್ಮ ಕೆಲಸಕ್ಕೆ ಉಪಯೋಗಿಸಿಕೊಳ್ಳುವ ಸಾಧ್ಯತೆ ಹೆಚ್ಚು.
- ಡ್ರಗ್ಸ್ ಸೇವಿಸಿಸಿದಾಗ ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟು ಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಅತ್ಯಾಚಾರವೆಸಗಲೂಬಹುದು.
- ದೇಹದ ಮತ್ತು ಮನಸ್ಸಿನ ಕಾರ್ಯವನ್ನು ನಿಧಾನಗೊಳಿಸುತ್ತದೆ. ಲಿವರ್ ಡ್ಯಾಮೇಜ್ ಆಗುತ್ತದೆ.
- Opium ಅನ್ನುವುದು Nuro transmeter function ಗೆ ತೊಂದರೆ ಉಂಟು ಮಾಡುತ್ತದೆ. (ಮೆದುಳಿನಲ್ಲಿ ಸಂದೇಶ ಕೊಡುವ ನರವನ್ನು ಅದು ಬ್ಲಾಕ್ ಮಾಡುತ್ತದೆ, ಉದಾ: ಕಲ್ಲಿದೆ ಎಡವಬೇಡ ಎನ್ನುವಂಥ ಸಂದೇಶ ತಲುಪುವುದೇ ಇಲ್ಲ)
- ಡ್ರಗ್ಸ್ ಸೇವಿಸಿ ( ತಮ್ಮ ಮನಸ್ಸು ಮತ್ತು ದೇಹವೇ ಅವರ ಹಿಡಿತದಲ್ಲಿ ಇಲ್ಲದಿರುವಾಗ) ವಾಹನ ಚಾಲನೆ ಮಾಡಿದಾಗ ಅಪಘಾತವಾಗಿ ಜೀವ ಕಳೆದುಕೊಳ್ಳಬಹುದು ಹಾಗೂ ಇತರರ ಸಾವಿಗೂ ಕಾರಣವಾಗಬಹುದು.
ಕೈಗೊಳ್ಳಬೇಕಾದ ಕ್ರಮಗಳು :
- ಡ್ರಗ್ಸ್ ಬಗ್ಗೆ ತಂದೆ-ತಾಯಿ ಅದು ಕೆಟ್ಟದ್ದು ಎಂದು ತಿಳಿಸುತ್ತಿದ್ದರೆ ಮಕ್ಕಳಿಗೂ ತಮಗೆ ಅರಿವಿಲ್ಲದಂತೆ ಅದರ ಬಗ್ಗೆ ಕೆಟ್ಟ ಭಾವನೆ ಮೂಡುತ್ತದೆ . ಹಾಗಾಗಿ ಅದನ್ನು ಅವರು ಸೇವಿಸುವುದಿಲ್ಲ.
- ಶಾಲಾ – ಕಾಲೇಜುಗಳಲ್ಲಿ ಮಾದಕ ವ್ಯಸನದ ಬಗ್ಗೆ ಮಾಹಿತಿ ನೀಡಬೇಕು. ಅವುಗಳ ಬಗ್ಗೆ ಪುಸ್ತಕಗಳು ಇದ್ದರೆ ಒಳ್ಳೆಯದು. 3)ಪೋಷಕರು ಎಚ್ಚರವಹಿಸಿ ಮಕ್ಕಳ ಬಗ್ಗೆ ಗಮನಹರಿಸಬೇಕು. ಅವರ ಸ್ನೇಹವಲಯ ಹೇಗಿದೆ , ಎಲ್ಲಿಗೆ ಹೋಗುತ್ತಾರೆ, ಬರುತ್ತಾರೆ, ಇತ್ಯಾದಿ.
- ಮಾದಕ ವ್ಯಸನಿಯನ್ನು, ಮನೋರೋಗಿಯನ್ನು ವೈದ್ಯರ ಬಳಿ ತೋರಿಸಿ ಬೇಕಾದ ಚಿಕಿತ್ಸೆ ಕೊಡಿಸಬೇಕು .ಉದಾಹರಣೆ, ಕೌನ್ಸಲಿಂಗ್ , cognitive behavioral therapy.
- ಇದು ಮದ್ಯ ವ್ಯಸನಕ್ಕಿಂತಲೂ ಭಯಾನಕವಾದದ್ದು. ಆದ್ದರಿಂದ ಬೇಗನೇ ಎಚ್ಚೆತ್ತು ತಕ್ಷಣವೇ ಕ್ರಮ ಕೈಗೊಳ್ಳಬೇಕು.
- ಪೋಷಕರು-ಮಕ್ಕಳ ಬಗ್ಗೆ ಸಣ್ಣ ವಯಸ್ಸಿನಿಂದಲೇ ಕಾಳಜಿ, ಮೌಲ್ಯಭರಿತ ಸಮಯ, ಪ್ರೀತಿ -ವಿಶ್ವಾಸಗಳನ್ನು ಕೊಡುವುದು.
ಮನೆಯಲ್ಲಿ ಮೊದಲಿನಿಂದಲೂ ಮಾದಕ ವಸ್ತುಗಳ ಬಗ್ಗೆ ತಿಳುವಳಿಕೆ ನೀಡಿ ಮಕ್ಕಳು ಅದರತ್ತ ಸುಳಿಯದಂತೆ ಮಾಡುವುದು ತುಂಬಾ ಒಳ್ಳೆಯದು. ಒಂದು ವೇಳೆ ಮಕ್ಕಳು ತಿಳಿದೋ, ತಿಳಿಯದೆಯೋ ಈ ವ್ಯಸನಕ್ಕೆ ಒಳಗಾಗಿದ್ದರೆ ಅವರನ್ನು ಬಹಳ ತಾಳ್ಮೆಯಿಂದ ಅದರಿಂದ ಹೊರ ತಂದು ಉತ್ತಮ ನಾಗರಿಕರನ್ನಾಗಿ ಮಾಡುವುದು ಹೆತ್ತವರ ಕರ್ತವ್ಯ. ಜೊತೆಗೆ ಸಮಾಜವೂ ಈ ಕಾರ್ಯಕ್ಕೆ ಕೈ ಜೋಡಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ.
- ಸುತ್ತ ಮುತ್ತ ಲೇಖನಗಳ ಸಂಕಲನದಿಂದ
ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಮಂಗಳ ಎಂ ನಾಡಿಗ್
