“ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ ಎಂಬ ಕೃತಿ ಬದುಕಿನ ಕುರಿತಾದ ಆಶಾವಾದವನ್ನು ಎಳೆ ಎಳೆಯಾಗಿ ನಮಗೆ ತೋರುತ್ತದೆ. ಭರವಸೆಯನ್ನು ನೀಡುತ್ತವೆ. ಇಂತಹ ಕೃತಿಗಳು ಕತ್ತಲೆಯ ಹಾದಿಯಲ್ಲಿ ಬೆಳಕನ್ನು ತೋರುವಂತೆ ಮಾನಸಿಕವಾಗಿ ನೊಂದ, ಬೆಂದ, ಹತಾಶೆಗೀಡಾದ ಜನರಿಗೆ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯ ಸಿಂಚನವನ್ನು ಮಾಡುತ್ತವೆ. ಈ ಕೃತಿಯ ಕುರಿತು ವೀಣಾ ಹೇಮಂತಗೌಡ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
‘ದ ಹ್ಯಾಪಿಯೆಸ್ಟ್ ಮ್ಯಾನ್ ಆನ್ ಅರ್ಥ’ ಎಂಬ ಪುಸ್ತಕ ಕಲಿಸುವ ಬದುಕಿನ ಪಾಠಗಳು ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯಲ್ಲಿ ನಡೆದ ಅತಿ ದೊಡ್ಡ ಹಾಲೋಕಾಸ್ಟ್ ನಂತಹ ಹತ್ಯಾಕಾಂಡದಲ್ಲಿ ಬದುಕಿ ಉಳಿದ ಕೆಲವೇ ಕೆಲವು ಜನರಲ್ಲಿ ಒಬ್ಬರಾದ ಎಡ್ಡಿ ಜಾಕೋಸ್ ಅವರು ಬರೆದ ದ ಹ್ಯಾಪಿಯೆಸ್ಟ್ ಮ್ಯಾನ್ ಆನ್ ಅರ್ಥ್ ಎಂಬ ಪುಸ್ತಕವು ಬಹಳಷ್ಟು ಇಲ್ಲಗಳ ನಡುವೆ ಸಂತೋಷವನ್ನು ಬದುಕಿನ ಮೊಟ್ಟಮೊದಲ ಆದ್ಯತೆಯಾಗಿ ಸ್ವೀಕರಿಸಿದ ಕುರಿತ ಕೃತಿಯಾಗಿದೆ. ಸಾವಿನ ಬಾಯನ್ನು ಒಳಹೊಕ್ಕು ಬರುವ ಕಡು ಭಯಂಕರ ತೊಂದರೆಗಳನ್ನು ಅನುಭವಿಸಿ ತನ್ನವರೆಲ್ಲರನ್ನು ಕಳೆದುಕೊಂಡು ಬದುಕಿದ ಆತ ತನ್ನೆಲ್ಲ ನೋವುಗಳ ಮೊತ್ತವಾದ ಹತಾಶೆಯ ಬದಲಾಗಿ ದಯೆ, ಕೃತಜ್ಞತೆ, ಪ್ರೀತಿ, ವಿಶ್ವಾಸ, ಮತ್ತು ನಂಬಿಕೆಗಳನ್ನು ಆಯ್ದುಕೊಂಡರು.
ಅದೊಂದು ದಿನ ಆತನ ಜಗತ್ತೇ ಅಲ್ಲೋಲಕಲ್ಲೋಲವಾಯಿತು ಆತನ ಮನೆಯೇ ಆತನಿಗೆ ರಕ್ಷಣೆಯನ್ನು ನೀಡಲಿಲ್ಲ ಡೆತ್ ವಾರೆಂಟ್ ಆತನ ಅಸ್ತಿತ್ವದ ಕುರುಹಾಗಿದ್ದು ಆತನ ಕೂಡು ಕುಟುಂಬ .ಆಸ್ಕ್ ವಿಟ್ಜ್ ಮತ್ತು ಬುಶೇನ್ ವಾಲ್ಡ್ಗಳ ನಡುವೆ ಛಿದ್ರವಾಯಿತು. ಭೀಕರವಾದ ಹಸಿವು,ಕ್ರೂರ ಹಿಂಸೆ, ನರಕ ಯಾತನೆ ಮತ್ತು ಮೃತ್ಯುವಿನ ಕರಿ ನೆರಳ ಭಯದಲ್ಲಿ ಆತನ ಜೀವನ ಸಾಗಿತ್ತು. ಆದರೆ ಬದುಕುವೆ ಎಂಬ ಭರವಸೆ ಮಾತ್ರ ಆತನ ಜೊತೆಗೆ ಇತ್ತು. ನೋವನ್ನು ಪ್ರೀತಿಯಿಂದ, ದ್ವೇಷವನ್ನು ದಯೆಯಿಂದ ದುಃಖವನ್ನು ಕೃತಜ್ಞತಾ ಭಾವದಿಂದ ಆತ ತನ್ನದಾಗಿಸಿಕೊಂಡ. ಮತ್ತೆ ತನ್ನ ಬದುಕಿನಲ್ಲಿ ಅಂತಹ ದುರಂತವನ್ನು ಎಂದೂ ಕಾಣಬಾರದು ಎಂಬ ಆಶಯದಿಂದ ಬದುಕಿನ ಅತ್ಯಂತ ಸಣ್ಣ ಪುಟ್ಟ ಖುಷಿಗಳಿಗೆ ಸಂತಸ ಪಡುವುದನ್ನು ಆಯ್ದುಕೊಂಡರು.
ತನ್ನ 100ನೇ ವಯಸ್ಸಿನಲ್ಲಿ ಎಡ್ಡಿ ತನ್ನನ್ನು ತಾನು ಜಗತ್ತಿನಲ್ಲಿಯೇ ಅತ್ಯಂತ ಸಂತುಷ್ಟನಾದ ಮನುಷ್ಯ ಎಂದು ಕರೆದುಕೊಂಡ. ಜೀವನ ಆತನಿಗೆ ಕರುಣೆಯನ್ನು ತೋರಿಸಿತ್ತು ಎಂದಲ್ಲ, ಬದಲಾಗಿ ಆತ ಸಂತಸವನ್ನು ತನ್ನ ಕೈಯಿಂದ ಜಾರಿ ಹೋಗಲು ಬಿಡಲಿಲ್ಲ. ಆತನ ಜಾಣ್ಮೆಯೇ ಆತನಿಗೆ ದಾರಿದೀಪವಾಗಿದ್ದು ದೃಢವಾದ ಆದರೆ ಅಷ್ಟೇ ಉದಾರ ಮನಸ್ಸು ಮತ್ತು ಹೃದಯಗಳಿಂದ ಆತ ಬದುಕನ್ನು ನಡೆಸಿದರು.
ಎಡ್ಡಿ ಬರೆದಿರುವ ಈ ಕೃತಿ ಕೇವಲ ಆತ್ಮ ಚರಿತ್ರೆ ಎಂದು ಭಾಸವಾಗದೆ ಕತ್ತಲನ್ನು ಭೇದಿಸುವ ಬೆಳಕಿನ, ಕ್ರೌರ್ಯವನ್ನು ಹಿಂದಿಕ್ಕುವ ಮಾನವೀಯತೆಯ, ಕಳೆದುಕೊಳ್ಳುವಿಕೆಯ ವಿರುದ್ಧ ಪಡೆದುಕೊಳ್ಳುವಿಕೆಯ ಕುರಿತಾದ ಬದುಕಿನ ಪಾಠಗಳನ್ನು ಹೊಂದಿದೆ. ತೃತಿಯ ಕೆಲ ಪ್ರಮುಖ ಅಂಶಗಳು ಹೀಗಿವೆ.

ಸಂತೋಷ ಎಂಬುದು ನಮ್ಮ ಆಯ್ಕೆ… ಸಂತೋಷ ಎನ್ನುವುದು ತನ್ನಂತಾನೆ ಜರುಗುವ ಪ್ರಕ್ರಿಯೆಯಲ್ಲ. ನಮ್ಮ ದೈನಂದಿನ ಬದುಕಿನಲ್ಲಿ ನಾವು ಕ್ರಿಯಾಶೀಲವಾಗಿ ಅದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎನ್ನುವ ಎಡ್ಡಿ ಬದುಕಿನಲ್ಲಿ ಅತ್ಯಂತ ಅಮಾನವೀಯವಾದ ದಾರುಣ ಸಂಗತಿಗಳನ್ನು ಅನುಭವಿಸುವಾಗ ಕೂಡ ಅದರ ಕಹಿ ನಮ್ಮ ಮನದಲ್ಲಿ ಬೇರೂರಲು ಅವಕಾಶ ಮಾಡಿಕೊಡಬಾರದು.
ತನ್ನೊಂದಿಗಿನ ಜನರು ಬದುಕಿನಲ್ಲಿ ಭರವಸೆಯನ್ನು ಕಳೆದುಕೊಂಡದ್ದನ್ನು ನೋಡಿದ್ದ ಆತ ಅವರಿಗೆ ಮತ್ತೆ ನಾವು ಸುರಕ್ಷಿತವಾಗಿ ಬದುಕಬಲ್ಲೆವು ಎಂಬ ಆಸೆಯೇ ಅವರಲ್ಲಿ ಬತ್ತಿ ಹೋಗಿರುವುದನ್ನು ಗಮನಿಸಿದ್ದರು. ಆದ್ದರಿಂದಲೇ ಹತಾಶೆಯ ಕರಿ ನೆರಳು ಎಂದೂ ತನ್ನ ಮನಸ್ಸಿನ ಮೇಲೆ ಪರಿಣಾಮ ಬೀರದಂತೆ ತನ್ನನ್ನು ತಾನು ಮಾನಸಿಕವಾಗಿ ರಕ್ಷಿಸಿಕೊಂಡರಲ್ಲದೇ ಈ ದುರಂತದಲ್ಲಿ ತಾನು ಮತ್ತೆ ಬದುಕಿ ಉಳಿದರೆ ತನ್ನ ಇಡೀ ಬದುಕನ್ನು ಸಂತೋಷವಾಗಿ ಇರುವ ಮತ್ತು ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿ ತನ್ನ ಇಡೀ ಬದುಕನ್ನು ಸಾಗಿಸುತ್ತೇನೆ ಎಂದು ತನಗೆ ತಾನೆ ಪ್ರಮಾಣ ಮಾಡಿಕೊಂಡರು. ಅಂತೆಯೇ ತಾನು ಬದುಕಿರುವವರೆಗೂ ಆತ ಪ್ರತಿದಿನ ಮುಂಜಾನೆ ಆ ದಿನವನ್ನು ಕರುಣಿಸಿದ್ದಕ್ಕಾಗಿ ಕೃತಜ್ಞತೆಯನ್ನು ಮತ್ತು ಸಂತಸ ತುಂಬಿದ ನಗುವನ್ನು ಹೊತ್ತು ಏಳುತ್ತಿದ್ದರು. ಬದುಕಿನಲ್ಲಿ ಎಂತದ್ದೇ ಪರಿಸ್ಥಿತಿ ಎದುರಾದರೂ ಕೂಡ ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬ ಅದ್ಭುತ ಶಕ್ತಿ ಮತ್ತು ಆಯ್ಕೆ ಕೇವಲ ನಮ್ಮ ಕೈಯಲ್ಲಿದೆ ಎಂಬ ಬದುಕಿನ ಮಹತ್ತರ ಪಾಠವನ್ನು ಆತ ನಮಗೆ ಹೇಳಿಕೊಡುತ್ತಾರೆ.
ಸ್ನೇಹ ಮತ್ತು ಪ್ರೀತಿ ಬದುಕಿನ ಬಹುದೊಡ್ಡ ಸಂಪತ್ತುಗಳು. ಕಾನ್ಸಂಟ್ರೇಷನ್ ಕ್ಯಾಂಪ್ನಲ್ಲಿ ಸಾವು ಮತ್ತು ಬದುಕಿನ ನಡುವೆ ತೂಗುಯ್ಯಾಲೆಯಾಡುತ್ತಿರುವಾಗ ನಮ್ಮ ಬೆಂಬಲಕ್ಕೆ ಯಾರಾದರೂ ಇದ್ದಾರೆ ಎಂಬ ಧೈರ್ಯವೇ ನಮಗೆ ಗಾಢ ಅಂಧಕಾರದಲ್ಲಿ ಬೆಳಕು ನೀಡಿದಂತಾಗುತ್ತದೆ ಎಂದು ಹೇಳುವ ಆತ ತನ್ನ ಅತ್ಯುತ್ತಮ ಸ್ನೇಹಿತ ಕರ್ಟ್ ತನಗೆ ಬೆಂಬಲವಾಗಿ ನಿಂತಿದ್ದ. ತಮ್ಮ ಬಳಿ ಏನೂ ಇಲ್ಲದೆ ಇದ್ದಾಗಲೂ ಕೂಡ ತಮಗೆ ದೊರೆತ ಅಲ್ಪ ಆಹಾರವನ್ನು ಅವರು ಹಂಚಿಕೊಂಡು ತಿಂದರು. ಭರವಸೆಗಳೇ ಕಳೆದು ಹೋಗಿ ನಿರಾಶೆ ಆವರಿಸಿದಾಗ ಅವರು ಪರಸ್ಪರರಿಗೆ ಬೆಂಬಲವಾಗಿ ನಿಂತರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ಅತ್ಯಂತ ಅಂಧಕಾರದ ಸಮಯದಲ್ಲಿ ಮಾನವೀಯ ತಂತುಗಳು ಮನುಷ್ಯನಿಗೆ ಅತಿ ಹೆಚ್ಚಿನ ಬಲವನ್ನು ನೀಡುತ್ತವೆ ಎಂಬುದು ಎಡ್ಡಿಯವರ ಅಭಿಪ್ರಾಯವಾಗಿದೆ.
ಕಾನ್ಸಂಟ್ರೇಷನ್ ಕ್ಯಾಂಪ್ ನಿಂದ ಹೊರಬಂದ ನಂತರ ಎಡ್ಡಿಯವರು ಫ್ಲೋರ್ ಎಂಬ ಮಹಿಳೆಯನ್ನು ಪ್ರೀತಿಸಿ ಮದುವೆಯಾದರು. ಪ್ರೀತಿ ಮತ್ತು ಸಾಂಗತ್ಯದ ಈ ವೈವಾಹಿಕ ಜೀವನದಲ್ಲಿ ಆತ ಹಣ ಆಸ್ತಿ ಅಂತಸ್ತುಗಳು ನಿಜವಾದ ಸಂಪತ್ತಲ್ಲ ನಾವು ಪ್ರೀತಿಸುವ ಮತ್ತು ಪ್ರೀತಿಸಲ್ಪಡುವ ವ್ಯಕ್ತಿಗಳೇ ನಮ್ಮ ಬದುಕಿನ ನಿಜವಾದ ಸಂಪತ್ತು ಎಂದು ತನ್ನ ಬದುಕಿನುದ್ದಕ್ಕೂ ಪ್ರತಿಪಾದಿಸಿದರು. ಜೀವನಕ್ಕೆ ನಿಜವಾದ ಅರ್ಥವನ್ನು ಕೊಡುವುದು ಸಂಬಂಧಗಳು. ನಿಮ್ಮ ಸುತ್ತ ಇರುವ ಜನರನ್ನು ಸಂತಸಭರಿತರಾಗಿ ಇರುವಂತೆ ನೋಡಿಕೊಳ್ಳಿ ಯಾಕೆಂದರೆ ಪ್ರೀತಿ ಮತ್ತು ಸ್ನೇಹಗಳೇ ಬದುಕಿನ ನಿಜವಾದ ಅರ್ಥಪೂರ್ಣ ಸಂಪತ್ತು ಎಂದು ಆತ ಒತ್ತಿ ಹೇಳಿದ್ದಾರೆ.
ಪ್ರತಿದಿನವೂ ಒಂದು ಕೊಡುಗೆ. ಹಲವಾರು ಬಾರಿ ಸಾವಿನ ದವಡೆಯಿಂದ ರಕ್ಷಿಸಲ್ಪಟ್ಟ ಎಡ್ಡಿ ಪ್ರತಿದಿನವೂ ಆ ದೇವರು ನಮಗೆ ಕೊಟ್ಟ ಕೊಡುಗೆ ಎಂದೇ ಭಾವಿಸುತ್ತಾರೆ. ಪ್ರತಿದಿನ ಮುಂಜಾನೆ ಎದ್ದ ಕೂಡಲೇ ನಾನಿನ್ನೂ ಬದುಕಿರುವ ಮತ್ತು ಸೂರ್ಯೋದಯವನ್ನು ನೋಡುತ್ತಿರುವ ಸಂತಸ ಮತ್ತು ಪ್ರತಿ ರಾತ್ರಿ ಇಡೀ ದಿನವನ್ನು ತಾನು ಬದುಕಿದೆ ಎಂಬ ನೆಮ್ಮದಿಗಿಂತ ದೊಡ್ಡ ಸಂಗತಿ ಬೇರೊಂದಿಲ್ಲ ಎಂದು ಹೇಳುತ್ತಾರೆ. ಜೀವನದ ಸಣ್ಣ ಪುಟ್ಟ ಕೊಡುಗೆಗಳನ್ನು ಕಡೆಗಣಿಸುವ ನಾವುಗಳು, ಅವುಗಳನ್ನು ಕಳೆದುಕೊಳ್ಳುವ ಸಮಯದಲ್ಲಿ ಅವುಗಳ ನಿಜವಾದ ಮೌಲ್ಯವನ್ನು ಅರಿಯುತ್ತೇವೆ. ಬದುಕನ್ನು ಸಂಭ್ರಮಿಸಲು ವಿಶೇಷ ದಿನಗಳಿಗಾಗಿ ಕಾಯುವುದು ಬೇಡ ಪ್ರತಿದಿನವೂ ನಮಗೆ ಬದುಕು ಕೊಡುವ ಮತ್ತೊಂದು ಅವಕಾಶ ಎಂದು ಪ್ರತಿದಿನವನ್ನು ಸಂತಸ ತೃಪ್ತಿ ನೆಮ್ಮದಿ ಮತ್ತು ಕೃತಜ್ಞತೆಯಿಂದ ಕಳೆಯಬೇಕು ಎಂದು ಹೇಳಿದ್ದಾರೆ.
ಶಿಕ್ಷಣವೇ ಅತಿ ದೊಡ್ಡ ಶಕ್ತಿ. ತನ್ನ ತಂದೆ ಶಿಕ್ಷಣದ ಕುರಿತ ಆಸಕ್ತಿಯನ್ನು ತನ್ನಲ್ಲಿ ಮೂಡಿಸಿರುವುದಾಗಿ ಹೇಳಿಕೊಂಡಿರುವ ಎಡ್ಡಿ ಅಂತಿಮವಾಗಿ ಈ ಶಿಕ್ಷಣವೇ ತನ್ನ ಬದುಕನ್ನು ರಕ್ಷಿಸಿದೆ ಎಂದು ಹೇಳುತ್ತಾರೆ. ಯುದ್ಧಕ್ಕೂ ಮುನ್ನ ಇಂಜಿನಿಯರ್ ಆಗಿ ತರಬೇತಿ ಪಡೆದಿದ್ದ ಆತ ನಾಜಿಗಳಿಗೂ ಅತಿ ಮುಖ್ಯವಾದ ಈ ತರಬೇತಿಯಿಂದಲೇ ಬದುಕಿ ಉಳಿದಿದ್ದರು ಎಂಬ ಸತ್ಯವನ್ನು ಹೊರಗೆಡಹಿದ್ದಾರೆ ವಿಷಾನಿಲ ತುಂಬಿದ ಗ್ಯಾಸ್ ಚೇಂಬರ್ಗಳಿಗೆ ಕಳುಹಿಸುವ ಬದಲು ಆತ ಯಂತ್ರಗಳನ್ನು ರಿಪೇರಿ ಮಾಡುವ ಕೆಲಸಕ್ಕೆ ನಿಯಮಿಸಲ್ಪಟ್ಟಿದ್ದ. ಆತನ ಶಿಕ್ಷಣ ಆತನಿಗೆ ಅತ್ಯಮೂಲ್ಯವಾದ ರಕ್ಷಣೆಯನ್ನು ನೀಡಿತ್ತು.

ಯುದ್ಧದ ನಂತರ ಆತ ತನ್ನ ಕಲಿಕೆಯನ್ನು ಮುಂದುವರಿಸಿದರು. ಶಿಕ್ಷಣ ಕೇವಲ ಬದುಕಲು ಮಾತ್ರವಲ್ಲ, ಶಿಕ್ಷಣ ನಮಗೆ ನೀಡುವ ಜ್ಞಾನವನ್ನು ಯಾರೂ ನಮ್ಮಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಶಿಕ್ಷಣ ಒಂದು ಶಕ್ತಿ. ಎಡ್ಡಿ ಅವರ ಬದುಕಿನ ಕಥೆಯಲ್ಲಿ ಎಲ್ಲ ರೀತಿಯ ಪ್ರತಿಕೂಲ ಪರಿಸ್ಥಿತಿಯಲ್ಲಿ ಶಿಕ್ಷಣ ಬಹುದೊಡ್ಡ ಅಸ್ತ್ರವಾಗಿ ಪರಿಣಮಿಸಬಲ್ಲದು ಎಂಬುದು ನಮಗೆ ಅರಿವಾಗುತ್ತದೆ.
ದ್ವೇಷ ನಮ್ಮನ್ನು ನಾಶಗೊಳಿಸಿದರೆ ಪ್ರೀತಿಯಲ್ಲಿ ಶಾಮಕ ಗುಣವಿದೆ. ಬದುಕಿನ ಉರಿಯ ಝಳದಲ್ಲಿ ಬಂದಿರುವ ಎಡ್ಡಿ ಅವರಿಗೆ ಬದುಕನ್ನು ದ್ವೇಷಿಸಲು ನೂರಾರು ಕಾರಣಗಳಿದ್ದವು. ದುಷ್ಟ ನಾಜಿಗಳು ಆತನಿಂದ ಎಲ್ಲವನ್ನು ಕಿತ್ತುಕೊಂಡಿದ್ದರೂ ಆತನ ಕುಟುಂಬ, ಮನೆ, ಯೌವನ, ಬದುಕಿನ ಕನಸುಗಳು ಯಾವುದೂ ಆತನ ಪಾಲಿಗೆ ಉಳಿದಿರಲಿಲ್ಲ. ಅತ್ಯಂತ ಸಾಮಾನ್ಯ ಜನರು ಕೂಡ ದ್ವೇಷವನ್ನು ಪೋಷಿಸುವ ಮೂಲಕ ರಾಕ್ಷಸರಂತೆ ವರ್ತಿಸುವುದನ್ನು ಆತ ನೋಡಿದ್ದನಾದ್ದರಿಂದಲೇ ಆತ ದ್ವೇಷವನ್ನು ತನ್ನ ಬದುಕಿನಿಂದ ದೂರವಿಟ್ಟ. ದ್ವೇಷವು ನಮ್ಮ ಮನಸ್ಸನ್ನು ತ್ವೇಷಮಯಗೊಳಿಸುತ್ತದೆ ಮತ್ತು ಆತ್ಮವನ್ನು ವಿನಾಶಗೊಳಿಸುತ್ತದೆ ಎಂದು ನಂಬಿದ್ದ ಆತ ತನ್ನ ಮುಂದಿನ ಬದುಕಿನಲ್ಲಿ ತನ್ನ ಕಥೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾ ಹೋಗಲು ಕಾರಣ ಕೋಪವನ್ನು ದ್ವೇಷವನ್ನು ಹೆಚ್ಚಿಸಲಲ್ಲ ಬದಲಾಗಿ ದಯಾಳು ಭಾವವನ್ನು ಯುವ ಜನತೆ ಹೊಂದಿರಲಿ ಎಂಬ ಆಶಯದಿಂದ. ದ್ವೇಷವನ್ನು ಹೊಂದುವುದರಿಂದ ನೋವು ಮತ್ತು ನಿರಾಶೆಗಳೇ ನಮ್ಮ ಪಾಲಿಗೆ ಇದ್ದರೆ ಪ್ರೀತಿಯು ನಮಗೆ ಭರವಸೆ, ನಂಬಿಕೆ, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಕೊಡುತ್ತದೆ ಎಂದು ಸಾರಿ ಹೇಳಿದರು.
ನಮಗೆ ಸಾಧ್ಯವಾದಾಗಲೆಲ್ಲ ಇತರರಿಗೆ ಸಹಾಯ ಮಾಡಬೇಕು ಎಂಬುದು ಆತನ ಧ್ಯೇಯವಾಗಿತ್ತು. ದಯೆಯಿಂದ ಕೂಡಿದ ಅತ್ಯಂತ ಸಣ್ಣ ಚಟುವಟಿಕೆಗಳು ಕೂಡ ಬಹುದೊಡ್ಡ ಬದಲಾವಣೆಯನ್ನು ತರಬಲ್ಲವು ಎಂದು ಆತ ನಂಬಿದ್ದ. ಭರವಸೆಯ ಒಂದು ಪುಟ್ಟ ಪಿಸುಗುಟ್ಟುವಿಕೆ, ಹಂಚಿಕೊಂಡ ಒಂದು ತುಂಡು ರೊಟ್ಟಿ ಜನರು ತಮ್ಮ ಬದುಕಿನಲ್ಲಿ ಮುಂದುವರೆಯಲು ಇಂಧನಗಳಾಗಿ ವರ್ತಿಸುತ್ತವೆ ಎಂಬುದನ್ನು ಆತ ತನ್ನ ಬದುಕಿನಿಂದಲೇ ಅರಿತಿದ್ದರು.
ಯುದ್ಧದ ನಂತರ ತನ್ನ ಮುಂದಿನ ಬದುಕಿನಲ್ಲಿ ಇದೇ ತತ್ವದ ಮೇಲೆ ಬದುಕನ್ನು ಮುಂದುವರಿಸಿದ ಆತ ‘ನಿಜವಾದ ಸಂತೋಷ ಇರುವುದು ಪರಹಿತದಲ್ಲಿ’ ಎಂಬುದನ್ನು ಅರಿತಿದ್ದ ಬೇರೆಯವರಿಗೆ ಸಹಾಯ ಮಾಡುವ ಮೂಲಕ ಆತ್ಮ ಸಂತೃಪ್ತಿಯನ್ನು ಪಡೆದುಕೊಳ್ಳಬಹುದು ಎಂಬುದು ಆತನ ಅಂತರಂಗದ ಮಾತಾಗಿದ್ದು ಬೇರೆಯವರೊಂದಿಗೆ ಮಾತನಾಡುವಾಗ ಆತ ಸದಾ ಉಚ್ಚರಿಸುತಿದ್ದುದು ನಮ್ಮಲ್ಲಿ ಅದ್ಭುತ ಇಚ್ಛಾಶಕ್ತಿ ಇದ್ದು ನಾವು ಇನ್ನೊಬ್ಬರ ಬದುಕನ್ನು ಸುಧಾರಿಸಲು ಸಾಧ್ಯವಾಗುತ್ತದೆ, ಅದನ್ನು ಅರ್ಥಪೂರ್ಣವಾಗಿ ಬಳಸಿ ಬಳಸಿಕೊಳ್ಳೋಣ ಎಂದು. ಅಂತಿಮವಾಗಿ ಬದುಕನ್ನು ಅರ್ಥಪೂರ್ಣಗೊಳಿಸುವುದು ನಮ್ಮಲ್ಲಿರುವ ಪ್ರೀತಿ, ದಯೆ, ಸಹಾನುಭೂತಿ ಎಂಬ ಗುಣಗಳು ಎಂಬುದನ್ನು ಆತ ಅರಿತಿದ್ದರು.
ಭರವಸೆಯು ನಮಗೆ ಮಾನಸಿಕ ದಕ್ಷತೆಯನ್ನು ತಂದುಕೊಡುತ್ತದೆ ಎಂದು ಆತ ನಂಬಿದ್ದರು…. ಕಾಂಸೆಂಟ್ರೇಷನ್ ಕ್ಯಾಂಪ್ ಗಳ ಪ್ರತಿದಿನದ ನರಕದಲ್ಲಿ ಭರವಸೆಯನ್ನು ಕಳೆದುಕೊಳ್ಳದೆ ಆತ ತನ್ನ ಬದುಕನ್ನು ಸಾಗಿಸಿದ್ದ. ಆಸ್ಕವಿಟ್ಜನಲ್ಲಿ ಇದ್ದಾಗಲೂ ಕೂಡ ಆತ ಸ್ವಾತಂತ್ರದ ಕನಸನ್ನು ಕಂಡಿದ್ದ. ಭಯಾನಕ ಮರಣ ಯಂತ್ರಗಳ ಮುಂದೆ ಕೂಡ ಆತ ಮುಂದೊಂದು ದಿನ ತಾನು ತನ್ನ ಕುಟುಂಬದವರನ್ನು ಸೇರಿಕೊಳ್ಳುವೆ ಎಂಬ ಭರವಸೆಯನ್ನು ಹೊಂದಿದ್ದ. ಆ ಭರವಸೆಯೇ ಆತನಿಗೆ ಬಹು ದೊಡ್ಡ ಶಕ್ತಿಯಾಗಿ ಪರಿಣಮಿಸಿತು ಎಂದು ಆತ ಹೇಳುತ್ತಾರೆ.
ತನ್ನೊಂದಿಗೆ ಬಂಧಿಯಾಗಿದ್ದ ಸಾವಿರಾರು ಜನರು ಭರವಸೆಯನ್ನು ಕಳೆದುಕೊಳ್ಳುವುದನ್ನು ಆತ ನೋಡಿದ್ದ ಹಾಗೆ ಭರವಸೆ ಕಳೆದುಕೊಂಡವರ ಬದುಕು ಮತ್ತಷ್ಟು ದುಸ್ತರವಾಗಿ ನಿರಾಶಾವಾದ ಅವರನ್ನು ಆಳುತ್ತಿತ್ತು ಮತ್ತು ಅವರು ಸಾವು ಬರುವ ಮುನ್ನವೇ ಸಾವಿಗೆ ಶರಣಾಗುವ ಮನಸ್ಥಿತಿಯನ್ನು ಹೊಂದುತ್ತಿದ್ದರು. ಆತನ ಬದುಕು ಅದೆಷ್ಟೇ ಗಾಢ ಅಂಧಕಾರದಿಂದ ತುಂಬಿದ್ದರೂ ಕೂಡ ಭರವಸೆಯ ಒಂದು ಪುಟ್ಟ ಬೆಳಕಿನ ಕಿಡಿ ನಮ್ಮನ್ನು ಬದುಕಿಸಬಲ್ಲದು ಎಂದು ನಂಬಿದ್ದರು.
ಜೀವನದ ಪ್ರತಿದಿನವೂ ಒಂದು ಉದ್ದೇಶವಾಗಿರಲಿ.. ಯುದ್ಧದ ನಂತರ ತಾನು ಏಕಾಂಗಿಯಾಗಿ ಬದುಕಬಹುದಿತ್ತು, ಬದಲಾಗಿ ಆತ ಸಂತೋಷವನ್ನು ಹರಡುವುದನ್ನು ಆಯ್ಕೆ ಮಾಡಿಕೊಂಡ ನಂತರದ ತನ್ನ ಬದುಕಿನ ದಿನಗಳನ್ನು ಆತ ತನ್ನ ಅನುಭವಗಳ ಕುರಿತು ಮಾತನಾಡಲು ಆರಂಭಿಸಿದ. ಇತಿಹಾಸದಿಂದ ಇಂದಿನ ಯುವಜನತೆ ಪಾಠ ಕಲಿಯಿರಿ ಎಂಬ ಆಶಯವನ್ನು ಹೊಂದಿದ ಆತ ತನ್ನ. ನೋವುಗಳನ್ನು ಪಾಠವಾಗಿ ಅನಾವರಣಗೊಳಿಸುವ ಮೂಲಕ ಈ ಜಗತ್ತನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಇಂಧನವಾಗಿ ಉಪಯೋಗಿಸಿದರು.
ಬದುಕಿನ ಕುರಿತು ಎಡ್ಡಿಯ ಪಾಠ ಅತ್ಯಂತ ಸರಳವಾದದ್ದು ನೀವು ಬದುಕಿರುವಿರಿ ಎಂಬ ಕಾರಣಕ್ಕಾಗಿ ಬದುಕಬೇಡಿ ಬದಲಾಗಿ ಒಂದು ಉದ್ದೇಶಕ್ಕಾಗಿ ಬದುಕಿ. ಮತ್ತೊಬ್ಬರಿಗೆ ಸಹಾಯ ಮಾಡುವ ಮೂಲಕ ಅರ್ಥಪೂರ್ಣ ಬದುಕನ್ನು ಕಂಡುಕೊಳ್ಳಿ ಮತ್ತು ನೀವು ನೋಡಿರುವ ಜಗತ್ತನ್ನು ಇನ್ನಷ್ಟು ಉತ್ತಮವಾಗಿಸುವಲ್ಲಿ ನಿಮ್ಮ ಶ್ರಮ ಇರಲಿ ಎಂಬುದು ಆತನ ಆಶಯವಾಗಿತ್ತು.
“ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ ಎಂಬ ಕೃತಿ ಬದುಕಿನ ಕುರಿತಾದ ಆಶಾವಾದವನ್ನು ಎಳೆ ಎಳೆಯಾಗಿ ನಮಗೆ ತೋರುತ್ತದೆ. ಭರವಸೆಯನ್ನು ನೀಡುತ್ತವೆ. ಇಂತಹ ಕೃತಿಗಳು ಕತ್ತಲೆಯ ಹಾದಿಯಲ್ಲಿ ಬೆಳಕನ್ನು ತೋರುವಂತೆ ಮಾನಸಿಕವಾಗಿ ನೊಂದ, ಬೆಂದ, ಹತಾಶೆಗೀಡಾದ ಜನರಿಗೆ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯ ಸಿಂಚನವನ್ನು ಮಾಡುತ್ತವೆ….. ಓದುವ ಸಂತಸ ನಿಮ್ಮದಾಗಲಿ.
ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ಬದುಕಿಗೊಂದು ಸೆಲೆ ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ (ಭಾಗ-೨೩)
- ವೀಣಾ ಹೇಮಂತಗೌಡ ಪಾಟೀಲ್ – ಮುಂಡರಗಿ, ಗದಗ
