ಬಾಲಕ ಮತ್ತು ಕಾರಂತಜ್ಜ ಕಥಾಸಂಕಲನದ ಪರಿಚಯ

‘ಬಾಲಕ ಮತ್ತು ಕಾರಂತಜ್ಜ’ ಕಥಾಸಂಕಲನದ ಮೊದಲ ಓದುಗರಲ್ಲಿ ಒಬ್ಬರಾದ ಕತೆಗಾರ್ತಿ ಡಾ. ಅನ್ನಪೂರ್ಣ ನಂಜನಗೂಡು ಅವರು ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಪುಸ್ತಕ : ಬಾಲಕ ಮತ್ತು ಕಾರಂತಜ್ಜ 
ಲೇಖಕರು : ಪ್ರಸನ್ನ ಸಂತೇಕಡೂರ್
ಪ್ರಕಾರ : ಕಥಾಸಂಕಲನ
ಪ್ರಕಾಶಕರು : ಚಿಂತನ ಚಿತ್ತಾರ 
ಬೆಲೆ : 130/

ಬಾಲಕನೊಡನೆ ಬೆಳಕಿನ ಹಾದಿಯಲ್ಲಿ,.

‘ಬಾಲಕ ಮತ್ತು ಕಾರಂತಜ್ಜ’ ಎಂಬ ಶೀರ್ಷಿಕೆ ಅಡಿ ನಿರೂಪಿಸಲ್ಪಟ್ಟಿರುವ ಎಂಟು ಕಥೆಗಳು ಏಕಕಾಲಕ್ಕೆ ಲೇಖಕರ ವಿಶಿಷ್ಟ ಅನುಭವ ಪ್ರಪಂಚವನ್ನು ಬಹುಮುಖಿ ನೆಲೆಯಿಂದ ತೆರೆದಿಡುತ್ತವೆ. ಲಲಿತ ಪ್ರಬಂಧವಾಗಿ, ಆತ್ಮಕಥೆಯಾಗಿ, ಕಾದಂಬರಿಯ ತುಣುಕುಗಳಾಗಿ ವಿಸ್ತರಿಸಿಕೊಳ್ಳಬಲ್ಲ ಶಕ್ತಿಯನ್ನೂ ಇವು ಹೊಂದಿವೆ. ಸಹಜವಾದ ಭಾಷೆ ಮತ್ತು ಸರಳವಾದ ಶೈಲಿಯಿಂದ ಒಂದೇ ಓದಿಗೆ ಓದಿಸಿಕೊಂಡು ಹೋಗುವ ಕಥೆಗಳು, ಕೆಲವೆಡೆ ಬಿಡಿಬಿಡಿಯಾಗಿ ನಿಲ್ಲುತ್ತವೆ. ಕಥಾ ವಸ್ತುಗಳನ್ನು ಹಿಡಿಯಾಗಿ, ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಲೇಖಕರ ವೈಯಕ್ತಿಕ ನೆಲೆ ಮತ್ತು ಅವರು ಗ್ರಹಿಸುತ್ತಿರುವ ಸಾಮಾಜಿಕ ಸೆಲೆ ಎರಡರ ದರ್ಶನವು ಸಾಧ್ಯವಾಗುತ್ತದೆ.

ಬಾಲ್ಯದಿಂದ ಹಿಡಿದು ಈ ವರೆಗಿನ ತಮ್ಮ ಬದುಕಿನ ಹಾದಿಯಲ್ಲಿ ಕಂಡುಂಡ ಹಚ್ಚ ಹಸಿರಿನ ಅನುಭವಗಳ ಗಂಟನ್ನು ಕಥೆಗಳ ಮೂಲಕ ಇಲ್ಲಿ ಲೇಖಕರು ತೆರೆದಿಟ್ಟಿದ್ದಾರೆ. ಬಾಲ್ಯದಲ್ಲಿ ಅಂಕುರಿಸಿದ ಸಾಹಿತ್ಯ ಕುತೂಹಲದ ಚಿತ್ರಣವನ್ನು ಬಾಲಕ ಮತ್ತು ಕಾರಂತಜ್ಜ ಕಥೆ, ಸಾಹಿತ್ಯಕ ವಲಯದ ಸೂಕ್ಷ್ಮತೆ ಕುರಿತಂತೆ ಅಭಿಮಾನಿ ಕಥೆ, ನಗರೀಕರಣ ಮತ್ತು ಗ್ರಾಮ್ಯ ಬದುಕಿನ ಪರಂಪರೆಯ ಕೊಂಡಿ ಕಳಚುತ್ತಿರುವ ಹಪಹಪಿಕೆಯನ್ನು ಹಾಲಜ್ಜಿ ಕಥೆ, ಆಸೆ, ಆಧ್ಯಾತ್ಮ, ನಂಬಿಕೆ, ಮತ್ತು ಬದುಕಿನ ಅಚ್ಚರಿಗಳ ಕುರಿತಾಗಿ ಕರ್ಮಯೋಗಿನಿ ಕಥೆ, ತಂತ್ರಜ್ಞಾನ, ಕೃತಕತೆ ಮತ್ತು ಜೀವಪರ ಕಾಳಜಿ ಇವುಗಳ ನಡುವಿನ ಸಂದಿಗ್ಧ ಬದುಕನ್ನು ಅನಾವರಣಗೊಳಿಸುವ ಜೀವದ ದಾರ ಕಥೆ, ಬದುಕಿನ ಆಶಾಶ್ವತತೆ ಮತ್ತು ಅಸ್ಮಿತೆಯ ನಿತ್ಯ ಹುಡುಕಾಟದ ಕರುಣಾಳು ಬಾ ಬೆಳಕೆ ಕಥೆ, ಇವೆ ಮೊದಲಾದ ಬಹುಮುಖಿ ಆಯಾಮದ ಕಥೆಗಳು ಕೃತಿಯನ್ನು ಮೌಲ್ಯಯುತವಾಗಿಸಿದೆ.

‘ಮಾನವರ ಎದೆಯಿಂದ ಎದೆಗೆ ಅಮೃತವಾಹಿನಿ ಎಂದು ಹರಿಯುವುದು? ಎಂದು ಪ್ರೀತಿಯ ಮಳೆ ಸುರಿಯುವುದು? ಇವರ ಹೃದಯದಿಂದ ಹೃದಯಕ್ಕೆ ಭಾವ ಸೇತುವೆಯನ್ನು ಕಟ್ಟುವವರು ಯಾರು?’ (ಕರುಣಾಳು ಬಾ ಬೆಳಕೆ ) ಎನ್ನುವ ಕಥೆಯ ಸಾಲುಗಳು ಒಟ್ಟಾರೆ ಕಥೆಗಳ ಹಿಂದಿನ ಸಮಾಜಮುಖಿ ತುಡಿತವನ್ನು ಮತ್ತು ಕತೆಗಾರರ ಸೂಕ್ಷ್ಮ ಸಾಮಾಜಿಕ ಕಳಕಳಿಯನ್ನು ಪ್ರತಿನಿಧಿಸುತ್ತವೆ.

ಕಥೆಗಳ ವಸ್ತುವಿನ ವೈವಿಧ್ಯತೆಯು ಎಲ್ಲಾ ಓದುಗ ವರ್ಗವನ್ನು ಹಿಡಿದಿಡಬಲ್ಲದು. ಅದು ಕೃತಿಯ ವಿಶೇಷತೆಯು ಹೌದು, ಬಾಲ್ಯದ ಕುತೂಹಲದಿಂದ ಪ್ರಾರಂಭವಾಗುವ ಕಥಾ ಸರಣಿ, ಕರುಣಾಳು ಬಾ ಬೆಳಕೆ ಎಂಬ ಆಧ್ಯಾತ್ಮಿಕ ನೆಲೆಯಲ್ಲಿ, ಮಾನವತೆಯ ಹುಡುಕಾಟದ ಮೂಲಕ ಕೊನೆಗೊಂಡಿರುವುದು ಅರ್ಥಪೂರ್ಣವಾಗಿದೆ ಮತ್ತು ಕೃತಿಯ ಶಿಲ್ಪ, ಬಂದ ಮತ್ತು ಆಶಯಕ್ಕೆ ಹೊಸ ಮಹತ್ವವನ್ನು ತಂದು ಕೊಟ್ಟಿದೆ. ಕೃತಿಯ ಅಥವಾ ಕಥೆಗಳ ಕುಂದು ಅದೇನೆ ಇರಲಿ ಅವರ ಕನ್ನಡತನದ ಕನ್ನಡ ಬರಹದ ಪಣಕ್ಕೆ ಅಭಿನಂದಿಸಲೇ ಬೇಕು. ವಿಜ್ಞಾನಿಯಾಗಿಯೂ ಕೂಡ ತಮ್ಮ ಕನ್ನಡ ಸಾಹಿತ್ಯಾತ್ಮಕ ಅಭಿರುಚಿ ಮತ್ತು ಸೂಕ್ಷ್ಮಮತಿಯನ್ನು ಜೀವಂತವಾಗಿರಿಸಿಕೊಂಡು ಬಂದಿರುವುದು ಸಂತಸದ ಸಂಗತಿ. ಸಾಹಿತ್ಯಾತ್ಮಕ, ವೈಜ್ಞಾನಿಕ ಮತ್ತು ವೈಚಾರಿಕ ನೆಲೆ ಇವುಗಳ ವಿಶೇಷ ಸಂಯೋಜನೆ ಇಲ್ಲಿನ ಕಥೆಗಳಲ್ಲಿದ್ದು, ಅದು ಲೇಖಕರ ಸಾಹಿತ್ಯದ ಬಗೆಗಿನ ವಿಶೇಷ ಶ್ರದ್ಧೆ ಮತ್ತು ಆಸಕ್ತಿಯನ್ನು ಪ್ರತಿಫಲಿಸುತ್ತಿವೆ. ಬರಹದ (ಕಥೆಗಾರರ) ಈ ವಿಶೇಷ ಸಂಯೋಜನೆಯೇ ಕಥೆಗಳ ಯಶಸ್ಸಿಗೆ ಕಾರಣವಾಗಿದೆ.

ಒಟ್ಟಾರೆ ಕನ್ನಡದಲ್ಲಿ ಕೃತಿಗಳನ್ನು ರಚಿಸುತ್ತಾ ತಮ್ಮ ವೈಜ್ಞಾನಿಕ ಜಗತ್ತಿನ ಅನುಭವಗಳನ್ನು ಸಾಹಿತ್ಯ ಆತ್ಮಕ ನೆಲೆಯಲ್ಲಿ ಕಟ್ಟಿಕೊಡಬೇಕೆಂಬ ಹಂಬಲ ಕಥೆಗಾರರದ್ದು. ಅವರ ಈ ಬಗೆಯ ಬರಹಗಳ ಮುಂದುವರಿಕೆಯಿಂದ ಕನ್ನಡ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದ ಸಂಸರ್ಗದಿಂದ ಅವರ ಬದುಕು ಕೂಡ ಮತ್ತಷ್ಟು, ಮಗದಷ್ಟು ಸಮೃದ್ಧಗೊಳ್ಳಲಿ ಎಂದು ಆಶಿಸುತ್ತ ಕಥೆಗಾರರಾದ ಪ್ರಸನ್ನ ಸಂತೇಕಡೂರು ಅವರನ್ನು ಅಭಿನಂದಿಸುತ್ತೇನೆ.


  • ಡಾ. ಅನ್ನಪೂರ್ಣ ಎನ್. ಎಸ್
    ಹಿರಿಯ ಸಂಶೋಧಕರು
    ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ
    ಭಾರತೀಯ ಭಾಷಾ ಸಂಸ್ಥಾನ, ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW