‘ಲಿಂಗ ನೀನಾದರೆ ಪಾಣಿಬಟ್ಟಲು ನಾನಲ್ಲವೇನೋ’…ಕವಿ ಪೀರಸಾಬ ನದಾಫ ಅವರ ಲೇಖನಿಯಲ್ಲಿ ಅರಳಿದ ‘ನನ್ನೊಳಗೆ ನೀನು’ ಕವನ, ತಪ್ಪದೆ ಓದಿ…
ಹಗುರಾಗಿ ಕಾಣಬೇಡಲೋ ಹುಡುಗ
ಹದವೆನೆಂದು ಬಲ್ಲವಳು ನಾನು
ಹಂಬಲ ನೂರೆಂಟು ಇರಬಹುದು ಗೆಳೆಯಾ
ಹರಾಜಿಗಿಡದಿರು ನಿನ್ನೊಳಗಿನ ನನ್ನನ್ನು
ಸೌಂದರ್ಯದ ಖಣಿ ಅಷ್ಟೇ ಅಲ್ಲವೋ ಸರದಾರ
ಸಕಲರ ಮಮತೆಯ ತಾಯತ್ತನದ ಪುತ್ತಳಿ ನಾನು ಸೌಜನ್ಯವಿಲ್ಲದ್ದದೇನೋ ಹುಡುಕಬೇಡ ಮಹಾರಾಯಾ
ನೀ ಹುಟ್ಟಿದ್ದೇ ನನ್ನಲ್ಲಿ ಇದನು ನೀ ತಿಳಿ ಮೊದಲು
ನನ್ನ ಮೂಲವನ್ನು ಕೆದಕಿದಿರು ದೊರೆಯೇ
ಜೀವದ ಕಣ ಕಣದ ಶಕ್ತಿಯು ನಾನು
ನನ್ನ ಜೊತೆ ಜಿದ್ದಿಗೆ ಬಿದ್ದು ಗುದ್ದಾಡದಿರು ಶಿವನೇ
ಜೀಕಿ ಜೀಕಿ ತೇಕುತ್ತಿಯಾ ಸಾಕು ನಿಲ್ಲಿಸು
ನನ್ನ ನೀ ಪಡೆದದ್ದೇ ಯುಕ್ತಿಯಿಂದ ಕಣೋ
ಮುಕ್ತಿಯ ಮಾರ್ಗವದು ನಿನ್ನಲ್ಲಿ ನಾನು
ಲಿಂಗ ನೀನಾದರೆ ಪಾಣಿಬಟ್ಟಲು ನಾನಲ್ಲವೇನೋ
ನಿನ್ನನ್ನೇ ಇಡಿಯಾಗಿ ನುಂಗಿ ಬೇರೂರಿದವಳು
ಸೃಷ್ಟಿ ಅದರ ಬೆರಗು ಸೊಬಗಿಗೆ ಸೋತವನು ನೀನು
ಉನ್ಮತ್ತದ ನಿನ್ನ ಸಂಗ ಬಯಸಿ ಬಾಚಿಕೊಂಡವಳು ನಾನು
ಧಾರಾಕಾರ ಸುರಿವ ನಿನ್ನೊಲವ ಹನಿಗಳ ಕಾಪಿಟ್ಟು
ಚೈತನ್ಯ ನೀಡಿ ನಿನ್ನ ನನ್ನ ಪ್ರತಿರೂಪ ನಿನಗೆ ಕೊಟ್ಟವಳು
ರಕ್ತದ ಕೇಕೆಯಲ್ಲೂ ಕೂಡಾ ನಕ್ಕವಳು ನಕ್ಕವಳು
- ಪೀರಸಾಬ ನದಾಫ