‘ಬರಹವೆಂದರೆ ಬರಿಯ ಬರಹವಲ್ಲ ಅದೊಂದು ಜ್ಞಾನದ ಪ್ರಖರ ಅಂದದ ಅಕ್ಷರಗಳ ಮಣಿಹಾರ’…ವಿಜಯಲಕ್ಷ್ಮಿ ನಾಗೇಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ದಿನಗಳೇ ಕಳೆದವು
ಬರಹದ ಅಂಗಳಕ್ಕಿಳಿದು.!
ಲೇಖನಿಯ ಹಿಡಿಯೆ
ಕಾತರಿಸಿಹವು ಕರಗಳು
ಮನದ ಪಟಲದಲ್ಲಿ ತೋಚಿದ್ದನ್ನು
ಮುಖಪುಟದಲ್ಲಿ ಗೀಚಿಬಿಡಲು..!!
ಬರಹವೆಂದರೆ
ಬರಿಯ ಬರಹವಲ್ಲ
ಅದೊಂದು ಜ್ಞಾನದ ಪ್ರಖರ
ಅಂದದ ಅಕ್ಷರಗಳ ಮಣಿಹಾರ..!
ತಿಳುವಳಿಕೆ ತುಂಬುವ
ಉತ್ತಮ ವಿಚಾರಧಾರ
ತಿಳಿದವರಿಗೆ ಅರಿವಿನ ಸಾರ
ಚಂದದ ಶಬ್ಧಗಳ ಭಂಡಾರ..!!
ಕಂಡರಿಯರು ಯಾರೂ
ಬ್ರಹ್ಮ ಬರೆದ ಹಣೆಬರಹವ
ಕಂಡಿಹರು ಉತ್ತಮ ಭವಿಷ್ಯವ
ಕಲಿತು ಗುರುವು ಕಲಿಸಿದ ಅಕ್ಷರವ.!!
ಭಾವನೆಗಳ ಬಿಂಬಿಸುವ
ಕಲ್ಪನೆಯ ಕದವ ತೆರೆಯಿಸುವ
ಕವಿಗಳಿಗೆ ವರವಾದ ಈ ಬರಹ.!!
ಕಲಾವಿದನ ಕುಂಚದ
ಸುಂದರ ಚಿತ್ರಕಲೆಯ ಬರಹ.!
ಸಂಗೀತಕ್ಕೂ ಇರಬೇಕು
ಸಾಹಿತ್ಯದ ಸಹಯೋಗ
ಗದ್ಯ ಪದ್ಯ ವಚನಗಳಲ್ಲಿ
ಕವಿತೆ ಕಾವ್ಯ ಕಾದಂಬರಿಗಳಲಿ
ಮೆರೆವಂಥ ಮಹಾ ಬರಹ.!!
ಬಾಳಿನ ಪುಟಗಳಲಿ
ನೋವು ನಲಿವುಗಳ ಬರಹ
ಸುಖ ದುಃಖಗಳು ನೂರು ತರಹ
ಎಲ್ಲವ ಸಹಿಸಲುಬೇಕು
ಅಲ್ಲಿಗೆ ತಲುಪುವ ತನಕ
ಎಂದಿಗೂ ನಿಲ್ಲದೀ ನಿತ್ಯದ ಕಾಯಕ
ಎಲ್ಲರಿಗೂ ಅನ್ವಯವೀ ವಿಧಿಬರಹ.!!
- ವಿಜಯಲಕ್ಷ್ಮಿ ನಾಗೇಶ್