ಈಗಿನ ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳ ಆರೋಗ್ಯದ ಮೇಲೆ ವಿಪರೀತ ಕಾಳಜಿ , ಇದಕ್ಕೆ ಕಾರಣ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳು. ಹಲವು ಪೋಷಕರ ಕೋರಿಕೆಯ ಮೇರೆಗೆ ಹಾಗೂ OPD ಯಲ್ಲಿ ಪದೇ ಪದೇ ಮರುಕಳಿಸಿದ ಮಕ್ಕಳ ಆರೋಗ್ಯದ ಕುರಿತಾದ ಪ್ರಶ್ನೆಗಳಿಗೆ / ಸಂಶಯಗಳಿಗೆ ಉತ್ತರ ನಿಮಗಿಲ್ಲಿ ಸಿಗಬಹುದು. – ಡಾ ರಾಜೇಂದ್ರ ಸ್ವಾಮಿ, ತಪ್ಪದೆ ಮುಂದೆ ಓದಿ…
ಎಲ್ಲರಿಗೂ ತಿಳಿದಿರುವಂತೆ ಆಹಾರವು ಶರೀರ-ಮೆದುಳು-ಇಂದ್ರಿಯಗಳನ್ನು ಬೆಳೆಸುತ್ತದೆ ಮತ್ತು ಸಧೃಡಗೊಳಿಸುತ್ತದೆ. ಹಾಗೆ ಅದೇ ಆಹಾರವು ಸರಿಯಾಗಿ ಇರದಿದ್ದರೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಮಕ್ಕಳ ಆಹಾರ
ಮಕ್ಕಳು ಸರ್ವಾಂಗೀಣವಾಗಿ ಅಭಿವೃದ್ಧಿಯ ಹಂತದಲ್ಲಿ ಇರುವುದರಿಂದ ಅವರ ಆಹಾರದಲ್ಲಿ ಪಾಲಕರು ವಿಶೇಷ ಗಮನವನ್ನು ಇಡಲೇಬೇಕು. ಇಲ್ಲಿ ದೈಹಿಕ , ಬೌದ್ಧಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಳು ಇದರೊಟ್ಟಿಗೆ ಸಾಮಾಜಿಕ ಸಾಮರಸ್ಯಗಳೂ ಮಕ್ಕಳ ಬೆಳವಣಿಗೆಯ ಪ್ರಮುಖ ಅಂಗಗಳು. ಆಹಾರವು ಶರೀರ-ಮೆದುಳು-ಇಂದ್ರಿಯಗಳನ್ನು ಬೆಳೆಸುತ್ತದೆ ಮತ್ತು ಸಧೃಡಗೊಳಿಸುತ್ತದೆ.
ಶರೀರ ಬೆಳೆದೂ ಮೆದುಳು ಮತ್ತು ನರಮಂಡಲಗಳು ಚುರುಕುಗೊಳ್ಳದಿದ್ದರೆ ಆ ಮಗುವು ಶಕ್ತಿಭರಿತ ಪ್ರಾಣಿಯಂತಹ ಕೆಲಸಗಳನ್ನು ಮಾಡಬಹುದೇ ಹೊರತು ಮಾನವನಿಗೆ ಬೇಕಾದ ಕೌಶಲ್ಯಪೂರ್ಣ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಿಲ್ಲ.
ಇಂತಹ ಅವಸ್ಥೆಯಲ್ಲಿ ಭಕ್ತಿಯ ಹೆಸರಿನಲ್ಲಿ ಪೂಜೆಗಳನ್ನು , ಆಧ್ಯಾತ್ಮಿಕತೆಯ ಹೆಸರಿನಲ್ಲಿ ಆಚಾರಗಳನ್ನು ಕಲಿಸಿದರೆ ಆ ಮಗುವಿನ ಒಂದುಜನ್ಮ ವ್ಯರ್ಥವಾದೀತು. ಏಕೆಂದರೆ, ತರ್ಕಹೀನ ಮನಸ್ಸು ಅತಿಯಾದ ಜಡತ್ವವನ್ನೋ, ಕೀಳಿರಿಮೆಯನ್ನೋ ಅಥವಾ ಕ್ರೂರತೆಯನ್ನೋ ಪ್ರದರ್ಶಿಸಿಸುತ್ತಾ ಪ್ರಾಣಿಯಂತೆ ಬಾಳು ಸಾಗಿಸುತ್ತದೆ. ಕೇವಲ ಆಹಾರ ಇಷ್ಟು ದೊಡ್ಡ ಪರಿಣಾಮವನ್ನು ಬೀರುತ್ತದೆ ಎಂದರೆ ಅದರ ಬಗ್ಗೆ ನಾವು ಗಮನಹರಿಸಬೇಕಾದ ಮಹತ್ವ ಎಷ್ಟಿದೆ ಎಂಬುದು ಅರ್ಥವಾಗುತ್ತದೆ.

ಗಮನವಿರಲಿ :
- ಮಕ್ಕಳಿಗೆ ತಾಜಾ ಆಹಾರವನ್ನು ಕೊಡಿ:
ಆಹಾರವನ್ನು ತಯಾರಿಸಿ 90 ನಿಮಿಷಗಳ ನಂತರ ಮಕ್ಕಳಿಗೆ ಕೊಡಲೇಬೇಡಿ (ಹಾಗೆಯೇ ಗರ್ಭಿಣಿಯರಿಗೂ ಸಹ). ಏಕೆಂದರೆ, ತಾಜಾ ಆಹಾರದಲ್ಲಿ ಮಾತ್ರ ಮನಸ್ಸು ಸಮೃದ್ಧವಾಗಿ ಬೆಳೆಯುತ್ತದೆ. ತಯಾರಾದ ಯಾವುದೇ ಆಹಾರ 90 ನಿಮಿಷಗಳ ನಂತರ ಸತ್ವವನ್ನು ಕಳೆದುಕೊಳ್ಳುತ್ತಾ ಸಾಗುತ್ತದೆ. ಮೂರು ತಾಸುಗಳ ನಂತರ ಸತ್ವಹೀನವೇ ಆಗಿಬಿಡುವುದರಿಂದ ಮನುಷ್ಯರು ಸೇವಿಸಲು ಅಯೋಗ್ಯವಾಗುತ್ತದೆ. ಅಂದರೆ, 180 ನಿಮಿಷಗಳ ಹಿಂದೆ ತಯಾರಾದ ಆಹಾರವನ್ನು ದೊಡ್ಡವರೂ ಸಹ ಸೇವಿಸಬಾರದು. - ಬೆಳಗಿನ ಉಪಹಾರದಲ್ಲಿ ಹಿಂದಿನ ರಾತ್ರಿ ನೆನೆಸಿಟ್ಟ ಹಿಟ್ಟಿನಿಂದ ತಯಾರಿಸಿದ ದೋಸೆ, ಇಡ್ಲಿಗಳನ್ನಾಗಲೀ, ಉಳಿದ ಅನ್ನದಿಂದ ತಯಾರಿಸಿದ ಪದಾರ್ಥಗಳನ್ನಾಗಲೀ ಎಂದಿಗೂ ಕೊಡಬೇಡಿ.
- ಹಾಗೆಯೇ, ಬೆಳಗಿನ ಉಪಹಾರವನ್ನೇ ಮಧ್ಯಾಹ್ನದ ಊಟಕ್ಕೆಂದು ಬಾಕ್ಸ್ ಗೆ ಹಾಕಿ ಕಳಿಸುವ ರೂಢಿಯು ಶೇಕಡಾ 90 ಕ್ಕಿಂತ ಹೆಚ್ಚಿನ ಪೋಷಕರಲ್ಲಿ ಕಂಡುಬರುತ್ತದೆ. ಹಾಗೆ ಮಾಡುವ ಬದಲು ಮಧ್ಯಾಹ್ನದ ಆಹಾರವನ್ನು ಶಾಲೆಗೆ ತಲುಪಿಸಿ ಬನ್ನಿ ಅಥವಾ ಶಾಲೆಯಲ್ಲಿಯೇ ಸಾಮೂಹಿಕವಾಗಿ ಶುದ್ಧ ಆಹಾರ ತಯಾರಿಕೆಗೆ ವ್ಯವಸ್ಥೆ ಮಾಡಿ.
ಈ ವಿಧಾನವು ಮಕ್ಕಳ ಮಾನಸಿಕ ಸ್ಥಿರತೆಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ. ಆಹಾರದ ಸೂಕ್ಷ್ಮ ಅಂಶ ಮನಸ್ಸಾಗಿಯೂ , ಸ್ಥೂಲ ಅಂಶ ಶರೀರವಾಗಿಯೂ ಬದಲಾಗುತ್ತದೆ.
- ಆಗತಾನೇ ತಯಾರಿಸಿದ ಆಹಾರವು ಸತ್ವಗುಣದಿಂದ ಕೂಡಿರುವುದರಿಂದ ಮನಸ್ಸಿನ ಸಾತ್ವಿಕ ಗುಣವನ್ನು ವರ್ಧಿಸುತ್ತದೆ.
- ಆಹಾರ ತಯಾರಿಸಿದ ಒಂದೂವರೆ ಗಂಟೆಯ ನಂತರ ಮೂರತಾಸುಗಳವರೆಗೆ ಸೇವಿಸುವ ಆಹಾರವು ರಜೋಗುಣದಿಂದ ಕೂಡಿದ್ದು ಅದು ಮನಸ್ಸನ್ನು ರಜೋಗುಣದಿಂದ ಪೋಷಿಸುತ್ತದೆ.
- ಮೂರುತಾಸುಗಳ ನಂತರ ಆಹಾರ ಸತ್ವಹೀನವಾಗುವುದರಿಂದ ಅದನ್ನು ಸೇವಿಸಿದರೆ ಮನಸ್ಸು ತಮೋಗುಣವನ್ನು ಪಡೆಯುತ್ತದೆ.
ಹಾಗಾಗಿ, ಇಂದಿನ ವಿಷಯದ ಒಟ್ಟು ಸಾರಾಂಶವೇನೆಂದರೆ, ” ಮಕ್ಕಳಿಗೆ ತಾಜಾ ಆಹಾರವನ್ನು ಮಾತ್ರ ಕೊಡಿ”. ಎಂದೋ ತಯಾರಿಸಿದ ಬೇಕರಿ ಮತ್ತು ಸ್ವೀಟ್ ಸ್ಟಾಲ್ ನಿಂದ ತಂದ ಆಹಾರಗಳಾಗಲೀ , ಮನೆಯಲ್ಲಿ ತಯಾರಿಸಿಟ್ಟು ಇಡೀ ವಾರ ಸೇವಿಸುವ ವ್ಯವಸ್ಥೆಯಾಗಲೀ ಎಂದಿಗೂ ಯೋಗ್ಯವಲ್ಲ.
ಮುಂದುವರೆಯುವುದು…
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
- 6362563189
- ಡಾ ರಾಜೇಂದ್ರ ಸ್ವಾಮಿ – ರಾಜಾಮೃತ ವೈದ್ಯಶಾಲಾ, ದಾವಣಗೆರೆ
