ಎರಡು ಆಲದ ಮರದ ನಡುವಿನ ಬಿಳಿಲು

ರಂಗ ಕಲಾವಿದೆ – ಗುಬ್ಬಿ ವೀರಣ್ಣ ಪ್ರಶಸ್ತಿ ವಿಜೇತೆ ಏಣಗಿ ಲಕ್ಷ್ಮೀಬಾಯಿ

ಇವರು ಒಬ್ಬ ಅಸಾಮಾನ್ಯ ರಂಗ ಕಲಾವಿದನ ಪತ್ನಿ. ಅಷ್ಟೇ ಅಸಾಮಾನ್ಯ ರಂಗ ಕಲಾವಿದನನ್ನು ಹೆತ್ತ ಮಹಾ ತಾಯಿ. ಸ್ವತಃ ತಾನೇ ಒಂದು ಕಾಲದ ರಂಗ ನಾಯಕಿ. ಎಂಥ ಅಸಾಮಾನ್ಯ ಕಲಾ ಸಂಗಮ ಇಲ್ಲಿ. ಏಣಗಿ ಕುಟುಂಬವೇ ಒಂದು ರಂಗ ವಿಶ್ವವಿದ್ಯಾಲಯದಂತಿತ್ತು. ಈ ಕುಟುಂಬದ ಉಸಿರು, ಅನ್ನಾಹಾರ ಆಗಿ, ಆಲದ ಮರದ ಬಿಳಿಲುನಂತೆ ಇದ್ದವರು ಈಗ ಎಂಭತ್ತರ ಹೊಸಿಲು ದಾಟಿದ ವೃತ್ತಿ ರಂಗ ಕಲಾವಿದೆ ಲಕ್ಷ್ಮಿಬಾಯಿಯವರು. ಇವರು ಮಹಾನ್‌ ರಂಗ ಕಲಾವಿದ ಏಣಗಿ ಬಾಳಪ್ಪನವರ ಪತ್ನಿ. ಅವರಷ್ಟೇ ಅಭಿನಯದಲ್ಲಿ ಚತುರತೆಯನ್ನು ಮೆರೆದ ಏಣಗಿ ನಟರಾಜರ ತಾಯಿ.

ಇಸ್ವಿ ೧೯೬೫ರ ಹೊತ್ತು ನಾನು ಬೆಳಗಾವಿಯಲ್ಲಿ ಜಿ.ಎ.ಹೈಸ್ಕೂಲ ವಿದ್ಯಾರ್ಥಿ. ಆಗ ಈಗಿನಂತೆ ಬೆಳಗಾವಿ ಗಿಜಿಗಿಜಿಯಾಗಿರಲಿಲ್ಲ. ಖಡೇಬಾಝಾರಿನಲ್ಲಿದ್ದ ಶಿವಾನಂದ ಥೇಟರ್‌ ನಲ್ಲಿ ಏಣಗಿ ಬಾಳಪ್ಪನವರ ಕಲಾ ವೈಭವ ನಾಟ್ಯ ಸಂಘ ನಾಟಗಳನ್ನು ಆಡುತ್ತಿತ್ತು. ಒಂದು ರವಿವಾರ ಒಂದಾಣೆ ತಿಕೀಟು ‘ ಮಾವ ಬಂದ್ನಪೋ ಮಾವ’ ನಾಟಕ ನೋಡಲು ಹೋದೆ. ಆಗ ಬಾಳಪ್ಪನವರ ಕೂದಲು ಹಣ್ಣಾಗಿರಲಿಲ್ಲ. ಅವರೇ ನಾಟಕದ ನಾಯಕನಾಗಿದ್ದರು.ಅವರೆದುರಿಗೆ ನಾಯಕಿಯಾಗಿ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದ್ದ ರೂಪವಂತೆ, ಅದ್ಭುತ ನಟಿಯೇ ಲಕ್ಷ್ಮೀಬಾಯಿ. ಅವರ ಸಹಜ ಅನುಭವ, ಮನಸೆಳೆವ ರೂಪ ನನ್ನನ್ನು ಮತ್ತೆ ಮತ್ತೆ ಅವರ ನಾಟಕ ನೋಡಲು ಪ್ರೇರೇಪಿಸಿತು. ಹೈಸ್ಕೂಲ ವಿದ್ಯಾರ್ಥಿಯಾಗಿದ್ದರೂ ಲಕ್ಷ್ಮೀ ದೇವಿಯ ವನಪು, ವೈಯಾರಗಳಿಗೆ ಮಾರು ಹೋಗಿದ್ದೆ. ಅದೇ ಕಾರಣಕ್ಕೆ ಲಕ್ಷ್ಮೀಬಾಯಿ ಇದ್ದ ಎಲ್ಲ ನಾಟಕಗಳನ್ನು ನೋಡುತ್ತಿದ್ದೆ. ನನ್ನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯ ಹಿಂದಿನ ದಿನ ಲಕ್ಷ್ಮೀಬಾಯಿಯ ಹಳ್ಳೀ ಹುಡುಗಿ ಪಾತ್ರವಿರುವ ನಾಟಕ ನೋಡಿಕೊಂಡೇ ಪರೀಕ್ಷೆ ಬರೆದಿದ್ದೆ. ವಯಸ್ಸಿನಲ್ಲಿ ನನಗೆ ತಾಯಿಯಂತಿದ್ದ ಆವರು ನನ್ನ ಪಾಲಿನ ಆರಾಧ್ಯ ದೇವತೆಯಾಗಿದ್ದರು. ಅದೇ ಕಾರಣಕ್ಕೆ ನಾನು ಸಿನಿಮಾ ನೋಡುತ್ತಿರಲಿಲ್ಲ. ನಾಟಕಗಳನ್ನು ಬಿಡುತ್ತಿರಲಿಲ್ಲ. ನನಗೆ ನಾಟಕ ನೋಡುವ ಹುಚ್ಚು ಹಿಡಿಸಿದವರು ಲಕ್ಷ್ಮೀಬಾಯಿಯವರೆಂದರೆ ತಪ್ಪಲ್ಲ. ಆಗ ನಟರಾಜ ನಾಲ್ಕು ವರ್ಷದ ಬಾಲಕ. ಆಗ ನಟಿಯರು ಈ ಬಾಲಕನನ್ನು ಬಗಲಲ್ಲಿ ಇಟ್ಟುಕೊಂಡು ರಂಗಕ್ಕೆ ಕರೆ ತರುತ್ತಿತ್ತದ್ದರು. ಲಕ್ಷ್ಮೀ ಬಾಯಿಯ ಬದುಕೆಲ್ಲ ಕಳೆದದ್ದು ರಂಗಭೂಮಿ ಯಲ್ಲೇ. ಅಲ್ಲಿ ಅವರು ಗಂಡನಿಗೆ ಆಸರೆಯಾದರು. ಮಗನಿಗೆ ರಂಗಶಾಲೆಯಾದರು. ಜತೆಗೆ ನಿರಂತರವಾಗಿ ಅವರು ನಟಿಸುತ್ತಲೇ ಬಂದರು.

ಈಗ ಮಹಾನ್‌ ನಟರಾದ ಗಂಡ ಬಾಳಪ್ಪನವರಿಲ್ಲ. ಅದ್ಭುತ ನಟರಾದ ಮಗ ನಟರಾಜನಿಲ್ಲ. ಆದರೆ ನನ್ನ ಮನ ಸೆಳೆದ ನಟಿ ಲಕ್ಷ್ಮೀಬಾಯಿ ಇನ್ನೂ ಇದ್ದಾರೆ. ಬದುಕಿದ್ದಾರೆ. ಅದೇ ಕಣ್ಣುಗಳು. ಅದೇ ರೂಪ. ಬದುಕಿನ ಸುಕ್ಕುಗಳು ಅಲ್ಲಿ ಎಲ್ಲಿಯೂ ಕಾಣುವುದಿಲ್ಲ. ವಯಸ್ಸು ತೊಂಭತ್ತು ದಾಟಿದರೂ ಇನ್ನೂ ಚಾಳೀಸಿಲ್ಲದೆ ಪುಸ್ತಕ ಓದುತ್ತಾರೆ. ಗಂಡ ಮಗನನ್ನು ಕಳೆದುಕೊಂಡು ಮೊಮ್ಮಗ ಆದೇಶನಲ್ಲಿ [ನಟರಾಜನ ಪುತ್ರ] ಅವರಿಬ್ಬರನ್ನೂ ಕಾಣುತ್ತ ಬದುಕಿದ್ದಾರೆ.

ಬಾಲ್ಯದಲ್ಲಿಯೇ ಬಣ್ಣ ಹಚ್ಚಿದರು

ಇವರ ಅಪ್ಪ ವಿರೂಪಾಕ್ಷಪ್ಪ ಅಥಣಿಯ ಭಾಗ್ಯೋದಯ ನಾಟಕ ಕಂಪಣಿಯಲ್ಲಿ ಮ್ಯಾನೇಜರ್‌ ಆಗಿದ್ದರು. ಆ ಕಂಪನಿ ಆಡುತ್ತಿದ್ದ ಸಿದ್ಧರಾಮ ನಾಟಕದಲ್ಲಿ ಅಪ್ಪನೇ ಕರೆದೊಯ್ದು ಬಾಲ ಸಿದ್ಧರಾಮ ಪಾತ್ರಕ್ಕೆ ಬಣ್ಣ ಹಚ್ಚಿಸಿದರು. ಆಗ ಲಕ್ಷ್ಮೀ ಬಾಯಿಗೆ ಬರೀ ಏಳು ವರ್ಷ. ಮುಂದೆ ನಾಟಕಗಳ ಬಾಲ ಕಲಾವಿದೆಯ ಪಟ್ಟ ಖಾಯಂ ಆಯಿತು. ಇದರ ನಂತರ ಕಂಪನಿಗಳ ಏರಾಟ ಮತ್ತು ಇಳಿದಾಟಗಳು ಸುರುವಾದವು. ಆ ಕಾರಣಕ್ಕೆ ಲಕ್ಷ್ಮೀಬಾಯಿಯವರ ಕುಟುಂಬ ಊರೂರು ಅಲೆಯಬೇಕಾಯಿತು. ಸುರಪುರ ಅರಸರ ಕಂಪನಿ, ಗುಬ್ಬಿ ವೀರಣ್ಣನವರ ಕಂಪನಿ, ಗದುಗಿನ ಗರುಡ ಸದಾಶಿವರ ಕಂಪನಿ ಹೀಗೆ ಹಲವು ಕಂಪನಿ ಸುತ್ತಿ ಕೊನೆಗೆ ಏಣಗಿ ಬಾಳಪ್ಪನವರ ಕಂಪನಿಗೆ ಬಂದಾಗ ಇವರಿಗೆ ೧೭-೧೮ ವಯಸ್ಸು. ಆಗ ೧೯೪೮ ರ ಇಸ್ವಿ.

ಕಲಾ ವೈಭವದ ಮೊದಲ ನಟಿ

ಬಾಳಪ್ಪನವರ ಕಲಾ ವೈಭವ ಕಂಪನಿಯಲ್ಲಿ ಸ್ತ್ರೀ ಪಾತ್ರ ಮಾಡಲು ನಟಿಯರಿರಲಿಲ್ಲ. ಅಲ್ಲಿಯವರೆಗೆ ಬಾಳಪ್ಪನವರೇ ಸ್ತ್ರೀ ಪಾತ್ರ ಮಾಡುತ್ತಿದ್ದರು. ಲಕ್ಷ್ಮೀಬಾಯಿ ಅಲ್ಲಿ ಪ್ರವೇಶವಾಗುತ್ತಲೇ ಕಂಪನಿಯ ಕಳೆಯೇ ಬದಲಾಗಿ ಹೋಯಿತು. ಸ್ತ್ರೀ ಪಾತ್ರಗಳಿಂದ ಬಾಳಪ್ಪನವರು ನಾಯಕ ಪಾತ್ರಕ್ಕೆ ಜಿಗಿದರು. ಲಕ್ಷ್ಮೀದೇವಿ ನಾಯಕಿ. ಎಷ್ಟೆಲ್ಲ ನಾಟಕಗಳು. ಕಂಪನಿ ಗಲ್ಲಾಪೆಟ್ಟಿಗೆಯಲ್ಲಿ ಚಿಂದಿ ಉಡಾಯಿಸಿತು. ಲಕ್ಷ್ಮೀಬಾಯಿ ಪಾತ್ರ ಮಾಡುತ್ತಾರೆಂದರೆ ಜನ ಚಕ್ಕಡಿ ಕಟ್ಟಿಕೊಂಡು ನೋಡಲು ಬರುತ್ತಿದ್ದರು. ಈ ಜನಪ್ರಿಯತೆಯೇ ಬಾಳಪ್ಪ ಮತ್ತು ಲಕ್ಷ್ಮೀಬಾಯಿಯನ್ನು ಕಟ್ಟಿ ಹಾಕಿತು. ಇಬ್ಬರೂ ೧೯೫೦ ರಲ್ಲಿ ಬಾಳ ಸಂಗಾತಿಯಾದರು. ಬಾಳಪ್ಪನವರಿಗೆ ದ್ವಿತೀಯ ಹೆಂಡತಿಯಾದರು.

ಲಕ್ಷ್ಮೀಬಾಯಿ ಬಾಳಪ್ಪನವರ ಬಾಳ ಸಂಗಾತಿಯಾದರೂ ಕಲಾ ವೈಭವ ಕಂಪನಿಯ ಮಾಲಕಿನಿ ಆಗಲಿಲ್ಲ. ಕಂಪನಿ ಬಂದ್‌ ಆಗುವವರೆಗೆ ಕಲಾವಿದೆಯಾಗಿ ದುಡಿದರು. ಮತ್ತು ಅಲ್ಲಿಯವರೆಗೆ ಮಾಲಕರಿಂದ ಸಂಬಳ ಪಡೆದರು. ಕಂಪನಿ ಇರುವವರೆಗೆ ಸಂಬಳದ ಕಲಾವಿದೆಯಾಗಿದ್ದರೇ ಹೊರತು ಅವರೆಂದೂ ಮಾಲಕಿಯಾಗಿ ಇರಲಿಲ್ಲ. ಮದುವೆಯಾದ ಎಂಟು ವರ್ಷಕ್ಕೆ ನಟರಾಜ ಹುಟ್ಟಿದ [೧೯೫೮]. ಮುಂದೆ ೧೯೬೦ಲ್ಲಿ ಮಗಳು ಭಾಗ್ಯಶ್ರೀ ಹುಟ್ಟಿದಳು. ಮಕ್ಕಳಿಬ್ಬರಿಗೂ ರಂಗ ಭೂಮಿಯೇ ಆಟದ ಅಂಗಳವಾಯಿತು. ಅವರಿಬ್ಬರೂ ಬಾಲ ನಟರಾಗಿ ನಾಟಕಗಳಲ್ಲಿ ಅಭಿನಯಿಸಿದರು. ತಾನು, ತನ್ನ ಗಂಡ, ಮಕ್ಕಳು ಎಲ್ಲರೂ ರಂಗಸೇವೆಯನ್ನೇ ಕಾಯಕವೆಂದುಕೊಂಡರು.

೧೯೪೮ ರಿಂದ ೧೯೮೨ ವರೆಗೆ ಕಂಪನಿಯ ಏರು ಕಾಲ. ಅನೇಕ ಉತ್ತಮ ನಾಟಕಗಳನ್ನು ರಂಗಕ್ಕರ್ಪಿಸಿತು ಕಲಾ ವೈಭವ. ಈ ಅವಧಿಯಲ್ಲಿ ಲಕ್ಷ್ಮೀಬಾಯಿಯವರು ರಂಗಾಭಿಮಾನಿಗಳ ಮನಸ್ಸು ಸೂರೆಗೊಂಡರು. ರಾಮಾಯಣದಲ್ಲಿ ಸೀತೆ, ಕುರುಕ್ಷೇತ್ರದಲ್ಲಿ ದ್ರೌಪತಿ, ಅಕ್ಷಯಾಂಬರದೊಳಗೆ ರುಕ್ಮಿಣಿ, ಹರಿಶ್ಚಂದ್ರದಲ್ಲಿ ತಾರಾಮತಿ, ಕಿತ್ತೂರ ಚೆನ್ನಮ್ಮದಲ್ಲಿ ಚೆನ್ನಮ್ಮ, ಅಕ್ಕ ಮಹಾದೇವಿಯಲ್ಲಿ ಅಕ್ಕ ಮಹಾದೇವಿ, ಬಸವೇಶ್ವರ ನಾಟಕದಲ್ಲಿ ಗಂಗಾಂಬಿಕೆ. ಹೀಗೆ ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳಲ್ಲಿ ಜನಮನ ಸೂರೆಗೊಂಡರು. ಹಾಗೆಯೇ ಸಾಮಾಜಿಕ ನಾಟಕಗಳಲ್ಲೂ ಅವರ ಪ್ರತಿಭೆ ಮನಸೂರೆಗೊಂಡಿದೆ. ಸಾಮಾಜಿಕ ನಾಟಕಗಳಲ್ಲೂ ಅವರದು ಎತ್ತಿದ ಕೈ. ವಧು-ವರ, ಮಾವ ಬಂದ್ನಪೋ ಮಾವ, ಹಳ್ಳೀ ಹುಡುಗಿ, ಕುಂಕುಮ, ದೇವರ ಮಗು, ಗೋರಾ ಕುಂಬಾರ, ಇತ್ಯಾದಿ ನಾಟಕಗಳಲ್ಲಿ ಅಭಿನಿಯಿಸಿದ್ದಾರೆ. ನಾನು ಇವರ ಮಾವ ಬಂದ್ನಪೋ ಮಾವ, ಹಳ್ಳೀ ಹುಡುಗಿ, ಅಕ್ಕ ಮಹಾದೇವಿ, ಬಸವೇಶ್ವರ ನಾಟಕಗಳನ್ನು ನಾನು ಕಣ್ಣಾರೆ ನೋಡಿದ್ದೇನೆ.

ಲಕ್ಷ್ಮೀ ಬಾಯಿಯವರು ಹೆಚ್ಚು ಸಾಲೆ ಕಲಿತವರಲ್ಲ. ಕೇವಲ ಎರಡನೇ ಇಯತ್ತೆವರೆಗೆ ಓದಿದವರು. ನಿರಕ್ಷರಿಯೇ ಅನ್ನಬಹುದು. ಅಂಥವರು ಪಾತ್ರಗಳ ಸಂಭಾಷಣೆಗಳನ್ನು ಯಾವ ತೊಡಕಿಲ್ಲದೆ, ಅಳುಕಿಲ್ಲದೆ ಹೇಳುವ ಪರಿ ಎಂಥವರಿಗೂ ದಂಗು ಬಡಿಸುತ್ತಿತ್ತು. ಅದರ ಬಗ್ಗೆ ಅವರಿಗೇ ಅಚ್ಚರಿ. ಎಲ್ಲ ಕಲಾ ಸರಸ್ವತಿಯ ಆಶೀರ್ವಾದ ಅನ್ನುತ್ತಾರೆ ಅವರು.

ಮಗ ನಟರಾಜ ಏಣಗಿ ತಮ್ಮ ಕಲಾ ಬದುಕಿನ ಉತ್ತುಂಗದಲ್ಲಿದ್ದಾಗಲೇ ಅಕಾಲ ಮೃತ್ಯುವಿಗೆ ಈಡಾದರು. ಇತ್ತೀಚೆಗೆ ಪತಿ ಏಣಗಿ ಬಾಳಪ್ಪನವರೂ ದೈವಾಧೀನರಾದರು. ಎರಡೂ ರೆಕ್ಕೆಗಳನ್ನು ಕಳೆದುಕೊಂಡ ಪಕ್ಷಿಯಂತೆ ಆದ ಅವರು ಈಗ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ನಟರಾಜರ ಪತ್ನಿ, ಸೊಸೆ ಲತಾ ಈಗ ಅವರ ಪಾಲಿಗೆ ಮಗನೂ ಹೌದು. ಮಗಳೂ ಹೌದು. ಶ್ರೀಮತಿ ಲತಾ ಅವರು ಹುಬ್ಬಳ್ಳಿಯಲ್ಲಿ ಒಂದು ಸಣ್ಣ ನೌಕರಿಯಲ್ಲಿದ್ದಾರೆ. ಮನೆ ತೂಗಿಸುತ್ತಿದ್ದಾರೆ. ಅಮೋಘ ಮತ್ತು ಆದೇಶ ಇಬ್ಬರೂ ನಟರಾಜರ ಮಕ್ಕಳು. ಮೊಮ್ಮಕ್ಕಳನ್ನು ನೋಡುತ್ತ ಹಿರಿಯ ಕಲಾವಿದೆ ಧಾರವಾಡದಲ್ಲಿ ಬದುಕು ದೂಡುತ್ತಿದ್ದಾರೆ. ಒಂದು ಕಾಲದ ವೃತ್ತಿ ರಂಗಭೂಮಿಯ ರಾಣಿಯಾಗಿ ಮೆರೆದ ಲಕ್ಷ್ಮೀಬಾಯಿ ಇಂದು ದುಗುಡ ಮತ್ತು ದುಃಖ ಒಳಗೇ ನುಂಗಿಕೊಂಡು ಮುಖದಲ್ಲಿ ದಶಕಗಳ ಹಿಂದಿನ ನಗುವನ್ನೇ ಚೆಲ್ಲುತ್ತ ಬದುಕುತ್ತಿದ್ದಾರೆ.

 

– ಹೂಲಿಶೇಖರ

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW