ರೈತನಿಲ್ಲದೆ ಮತ್ತು ಅವನು ಧಾನ್ಯಗಳನ್ನು ಬೆಳೆಯದೆ ನಮ್ಮ ಬದುಕು ಮುಂದೆ ಸಾಗದು. ಹೀಗಾಗಿ ಅವನು ಮನುಕುಲದ ಅನ್ನದಾತನೂ ಹೌದು. ನೇಗಿಲಯೋಗಿಯ ಕಷ್ಟದ ಬಗ್ಗೆ ಲೇಖಕರಾದ ಶಿವಕುಮಾರ್ ಬಾಣಾವರ ಅವರು ಚಿಂತನ ಲೇಖನವನ್ನು ಓದುಗರ ಮುಂದಿಟ್ಟಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…
ನಾವು ವಾಸಿಸುತ್ತಿರುವ ಈ ಭೂಮಿಗೆ ವಾಸಯೋಗ್ಯವಾದ ವಾತಾವರಣವನ್ನು ಪ್ರಕೃತಿಯು ಕಲ್ಪಿಸಿಕೊಟ್ಟಿದೆ. ಆದರೆ ಜೀವಿಸಲು ಬೇಕಾದ ಆಹಾರವನ್ನು ಮಾತ್ರ ಮನುಷ್ಯನು ತನ್ನ ಸ್ವಪ್ರಯತ್ನದಿಂದಲೇ ಪೂರೈಸಿಕೊಳ್ಳಬೇಕಾಗಿದೆ. ಸೃಷ್ಟಿಯ ಆದಿಯಲ್ಲಿ ಬರೀ ಗೆಡ್ಡೆ ಗೆಣಸು, ಹಣ್ಣು, ಹಂಪಲುಗಳು ಆಹಾರವಾಗಿದ್ದವು. ಕಾಲಚಕ್ರ ಉರುಳಿದಂತೆಲ್ಲ ಈ ಆಹಾರ ಪದ್ಧತಿ ಅನೇಕ ಬದಲಾವಣೆಯ ಮಜಲುಗಳನ್ನು ದಾಟಿ, ದವಸ ಧಾನ್ಯಗಳಿಂದ ಆಹಾರ ತಯಾರಿಸಿಕೊಳ್ಳುವ ಹಂತವನ್ನು ತಲುಪಿದೆ. ನಮ್ಮ ಆಹಾರ ತಯಾರಿಕೆಗೆ ಬೇಕಾದ ದವಸ ಧಾನ್ಯಗಳನ್ನು ಎಂದಿನಿಂದಲೂ ಬೆಳೆದು ಒದಗಿಸುತ್ತಿರುವವನು ನೇಗಿಲ ಯೋಗಿಯಾದ ರೈತನೇ. ರೈತನಿಲ್ಲದೆ ಮತ್ತು ಅವನು ಧಾನ್ಯಗಳನ್ನು ಬೆಳೆಯದೆ ನಮ್ಮ ಬದುಕು ಮುಂದೆ ಸಾಗದಾಗಿದೆ. ಹೀಗಾಗಿ ಅವನು ಮನುಕುಲದ ಅನ್ನದಾತನೂ ಹೌದು.

ಫೋಟೋ ಕೃಪೆ : The hindu
ಹಿಂದೆ ಕಾಲಕಾಲಕ್ಕೆ ಮಳೆ ಬೆಳೆ ಸಮೃದ್ಧಿಯಾಗಿ ಆಗುತ್ತಿತ್ತು. ಆಗೆಲ್ಲ ರೈತನಿಗೆ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿರಲಿಲ್ಲ. ಶ್ರಮಕ್ಕೆ ತಕ್ಕಷ್ಟು ಫಲ ದೊರೆಯುತ್ತಿತ್ತು. ಬೆಳೆಗಳು ಪ್ರತಿ ವರ್ಷವೂ ಬರುತ್ತಿತ್ತು. ಜೀವನ ಪದ್ಧತಿಯೂ ಸರಳವಾಗಿತ್ತು. ಬೆಳೆದ ಫಸಲಿನಲ್ಲಿ ಸುಗ್ಗಿಯ ಕಾಲದಲ್ಲಿ ಮಕ್ಕಳ ವಿದ್ಯಾ ಗುರುಗಳಿಗೆ ಮತ್ತು ಬಡಬಗ್ಗರಿಗೆ ಅವರ ಜೀವನಕ್ಕೆ ಆಗುವಷ್ಟು ಧಾನ್ಯವನ್ನು ದಾನ ಮಾಡುವಷ್ಟು ಶಕ್ತಿಯನ್ನು ಹೊಂದಿದವನಾಗಿದ್ದ. ಆಗಿನ ಕಾಲದಲ್ಲಿ ಜೀವನ ನಿರ್ವಹಣಾ ವೆಚ್ಚವೂ ಕಡಿಮೆ ಇತ್ತು. ರಾಜಧನವನ್ನೂ ಸಲ್ಲಿಸುತ್ತಿದ್ದ. ಮಳೆ ಬಾರದಿರುವ ವರ್ಷ ಸರ್ಕಾರಕ್ಕೆ ಸಲ್ಲಿಸಬೇಕಾದ ಪಾಲಿನಿಂದ ವಿನಾಯಿತಿ ಸಿಗುತ್ತಿತ್ತು. ಕಾಲಚಕ್ರವು ಉರುಳಿದಂತೆಲ್ಲ ಜನಸಂಖ್ಯೆ ಬೆಳೆಯಿತು. ಬೆಳೆಯುವವನು ಒಬ್ಬನಾದರೆ ತಿನ್ನುವ ಬಾಯಿಗಳು ಅನೇಕ ಪಟ್ಟಾಗುತ್ತಾ ಬಂದಿತು. ಜಗತ್ತು ಅಭಿವೃದ್ಧಿಯ ಪಥದಲ್ಲಿ ಸಾಗತೊಡಗಿ, ಜೀವನ ಶೈಲಿಯಲ್ಲಿಯೂ ಬದಲಾವಣೆ ಬರತೊಡಗಿತು. ಸೌಕರ್ಯಯುತ ವಸ್ತುಗಳಿಗೆ ಬೇಡಿಕೆ ಬಂದು, ಸುಗಮ ಜೀವನ ಶೈಲಿಗೆ ಎಲ್ಲರೂ ಮಾರುಹೋದರು. ವಾಸದ
ಮನೆಗೆ ಹೊಸ ವೇಷ, ಪೋಷಾಕಿನಲ್ಲಿ ಹೊಸತನ, ನಡಿಗೆ ತಪ್ಪಿಸುವ ಸೈಕಲ್ಲು ಮುಂತಾದ ಆಧುನಿಕ ಸೌಲಭ್ಯಗಳು ಕಾಣತೊಡಗಿದವು. ಆದರೆ ಇದ್ದ ಜಮೀನು ವಿಸ್ತಾರಗೊಳ್ಳದೆ, ಬರುತ್ತಿದ್ದ ಬೆಳೆಯಲ್ಲಿ ಹೆಚ್ಚಳವೂ ಇಲ್ಲದೆ, ಕಾಡಿನ ಪುನರುಜ್ಜೀವನಗೊಳ್ಳದೆ, ನಾಶದ ಹಾದಿಯಲ್ಲೇ ಸಾಗುತ್ತಾ ತಿನ್ನುವ ಮಂದಿಯ ಸಂಖ್ಯೆ ಮಾತ್ರ ಹೆಚ್ಚುತ್ತಾ ಹೋಯಿತು. ಪ್ರಕೃತಿಯಲ್ಲಿ ಸಮತೋಲನ ತಪ್ಪಿ, ಆಗಾಗ ಮಳೆಯೂ ಕೈಕೊಡತೊಡಗಿತು. ಅಂತಹ ದಿನಗಳಲ್ಲಿ ಮಾಡಲು ಕೆಲಸವಿಲ್ಲದೆ ಬೀಡಿ, ತಂಬಾಕು, ಮದಿರೆ, ಜೂಜು ಮುಂತಾದ ದುಶ್ಚಟಗಳಿಗೆ ದಾಸನಾದ ರೈತ. ದಾಸ್ತಾನಿದ್ದ ಸಾಮಗ್ರಿ, ಧಾನ್ಯಗಳೆಲ್ಲ ಖಾಲಿಯಾಯಿತು. ಅಲ್ಲಿಂದ ಅವನ ಜೀವನ ಅಧಃ ಪತನದ ಹಾದಿ ಹಿಡಿಯಿತು. ಈಗ ಅವನ ಪಾಡು ಶೋಚನೀಯ.

ಫೋಟೋ ಕೃಪೆ : DNA india
ಈಗವನು ಹೆಸರಿಗಷ್ಟೇ ಅನ್ನದಾತ. ಆತನಿಗೇ ತಿನ್ನಲು ಅನ್ನವಿಲ್ಲದೆ ಸಾವಿಗೆ ಶರಣಾಗುತ್ತಿರುವ ಸಂದರ್ಭವನ್ನು ಕಾಣುತ್ತಿದ್ದೇವೆ ಇಂದು. ಇದೆಂತಹ ವಿಪರ್ಯಾಸ!? ಏನು ಅವನ ಕಷ್ಟ? ಅವನ ಉದ್ಯೋಗವಾದ ವ್ಯವಸಾಯದಿಂದ ಅವನ ಜೀವನಕ್ಕೆ ಆಪತ್ತು ಏಕೆ ಬಂದಿದೆ? ಯಾಕೆ ಹೀಗೆ ಆಗುತ್ತಿದೆ ? ಬೆಳೆ ಬೆಳೆಯುವವನೇ ಇಲ್ಲವೆಂದ ಮೇಲೆ ಜನಕೋಟಿ ಬದುಕುವುದು ಹೇಗೆ? ಈ ಸಮಸ್ಯೆ ಇಂತಹ ಪ್ರಾಣಾಂತಿಕ ಘಟ್ಟವನ್ನು ಹುಟ್ಟಿರುವುದರಿಂದ, ಇದೊಂದು ಅತಿ ತುರ್ತಿನ ವಿಷಯವೆಂದು ಪರಿಗಣಿಸಬಾರದೇ? ಸರ್ಕಾರಗಳು ದೇಶದ ಅಭಿವೃದ್ಧಿಯ ಕೆಲಸಗಳನ್ನು ಬದಿಗೊತ್ತಿ ನೇಗಿಲ ಯೋಗಿಯ ಸಹಾಯಕ್ಕೆ ಬರಬೇಕಲ್ಲವೇ? ಸಮಸ್ಯೆಯ ಮೂಲವನ್ನು ಕಂಡುಹಿಡಿದು, ಸರ್ಕಾರಗಳು ಕಾರ್ಯ ಪ್ರವೃತ್ತರಾಗುವಂತೆ ಜನರು ರೈತರ ಸಮಸ್ಯೆಗಳೇನೆಂಬುದನ್ನು ತಿಳಿದು ಸರ್ಕಾರಕ್ಕೆ ಒತ್ತಾಯ ಮಾಡಿ ಸಹಕರಿಸಬೇಕಾಗಿದೆ. ಇದು ರೈತನ ಸಾವಿನ ಪ್ರಶ್ನೆ ಮಾತ್ರವಾಗಿ ಉಳಿದಿಲ್ಲ. ಇಡೀ ಜನಕೋಟಿಯ ಉಳಿವಿನ ಪ್ರಶ್ನೆ! ಎಲ್ಲರೂ ಚಿಂತಿಸುವ ಸಮಯ ಬಂದಾಗಿದೆ.
ನಮ್ಮ ದೇಶದ ಪ್ರಧಾನಿಗಳಾಗಿದ್ದ ದಿವಂಗತ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರು ರೈತನನ್ನು ದೇಶವನ್ನು ರಕ್ಷಿಸುವ ಸೈನಿಕ ಸಿಪಾಯಿಗೆ ಹೋಲಿಸಿ “ಜೈ ಜವಾನ್ ಜೈ ಕಿಸಾನ್” ಮಂತ್ರವನ್ನು ಪಠಿಸಿದರು. ದೇಶದ ನಿಜವಾದ ರಕ್ಷಕರುಗಳೆಂದರೆ ಸೈನಿಕರು ಮತ್ತು ರೈತರು. ಇಬ್ಬರೂ ದೇಶಕ್ಕಾಗಿ ದುಡಿಯುವವರೇ, ಪ್ರಜಾಕೋಟಿಯ ರಕ್ಷಕರೇ. ಇವರಿಬ್ಬರಲ್ಲಿ ಯಾರಿಲ್ಲದಿದ್ದರೂ ಜನರ ಪ್ರಾಣಕ್ಕೆ ಕಂಟಕವೇ. ಸೈನಿಕ ಗಡಿ ರಕ್ಷಣೆ ಮಾಡಿ ಜನರ ಪ್ರಾಣವನ್ನು ಉಳಿಸಿದರೆ, ರೈತ ಬೆಳೆದು ಜನರಿಗೆ ಆಹಾರವನ್ನು ಒದಗಿಸಿ ಅವರ ಪ್ರಾಣ ರಕ್ಷಣೆ ಮಾಡುತ್ತಾನೆ. ಹಾಗಾಗಿ ರೈತನನ್ನು ಸೈನಿಕನಿಗೆ ಹೋಲಿಸಿದ್ದೇನೋ ಸರಿಯೇ. ಆದರೆ ಬರೀ ಗುಣಗಾನದಿಂದೇನು ಪ್ರಯೋಜನ ರೈತನಿಗೆ? ಸೈನಿಕರಿಗೆ ನೀಡುವ ಯಾವುದೇ ಒಂದು ಸೌಲಭ್ಯವಾದರೂ ರೈತನಿಗೆ ಇದೆಯೇ? ಸರ್ಕಾರದಿಂದ ಯಾವುದೇ ವಿಧವಾದ ಜೀವನಾಂಶವೂ ಇಲ್ಲದೇ, ರೈತ ತನ್ನದೇ ಜಮೀನಿನಲ್ಲಿ ಉತ್ತು ಬಿತ್ತಿ, ಗೊಬ್ಬರ ತಂದು ಹಾಕಿ, ನೀರಿಗಾಗಿ ಮಳೆರಾಯನನ್ನೇ ಅವಲಂಬಿಸಿ, ಮಳೆ ಬಂದರೆ ಬೆಳೆ – ಬದುಕು ಇಲ್ಲದಿದ್ದರೆ ಸಾವು ಎನ್ನುವ ಪರಿಸ್ಥಿತಿಯಲ್ಲಿ ದುಡಿಯುವವನು. ಒಂದು ವೇಳೆ ಮಳೆ ಬಾರದೆ ಹೋದರೆ, ಅಕಾಲಿಕವಾಗಿ ಮಳೆ ಬಂದರೆ, ಬೆಳೆ ಹಾಳಾಗುವಂತಹ ಅತಿವೃಷ್ಟಿಯಾದರೆ, ಹುಳ ಹಿಡಿದು ಬೆಳೆ ನಾಶವಾದರೆ – ಹೀಗೆ ನಾನಾ ಅನಿಶ್ಚಿತ ಪ್ರಾಕೃತಿಕ ವಿಕೋಪಗಳ ಸಂಭಾವ್ಯತೆಯನ್ನು ಎದುರಿಸಿ ದುಡಿಯುವ ರೈತನ ಕಷ್ಟ ಅನುಭವಿಸಿದವನಿಗೇ ವೇದ್ಯ. ಒಂದು ವರ್ಷ ಮಳೆ ಬಾರದಿದ್ದರೆ ಹೇಗೋ ತಡೆದುಕೋಳ್ಳಬಹುದು.

ಫೋಟೋ ಕೃಪೆ : business line
ಪ್ರಕೃತಿಯೇ ಮುನಿಸಿಕೊಂಡು ಅನೇಕ ವರ್ಷಗಳು ಮಳೆ ಕೈಕೊಟ್ಟರೆ ಅದಕ್ಕೆ ರೈತನು ಹೊಣೆಯೇ? ಅವನ ಜೀವನ ನಡೆಯುವುದು ಹೇಗೆ? ಅವನಿಗೇನಾದರೂ ಸಂಬಳವೇ? ಪಿಂಚಣಿಯೇ? ಏನು ಸೌಲಭ್ಯವಿದೆ ಅವನ ಸಂಸಾರವನ್ನು ನಡೆಸಲು? ಬೆಳೆ ಬೆಳೆಯಲು ಮಳೆಯ ಸಹಕಾರ ಇಲ್ಲದಿದ್ದಾಗ ಅವನೆಲ್ಲಿಗೆ ಗುಳೆ ಹೋಗಬೇಕು? ಕುಟುಂಬದ ಸದಸ್ಯರನ್ನು ಅನಾಥರನ್ನಾಗಿ ಮಾಡಿ ಎಲ್ಲಿಗೆ ಹೋದಾನು? ತನ್ನ ಕಾಯಕದ ಹೊರತಾಗಿ ಅವನಿಗೆ ಬೇರೆ ಕೆಲಸ ಮಾಡಲು ವಿದ್ಯಾರ್ಹತೆಯಾಗಲೀ, ಅನುಭವವಾಗಲೀ ಇಲ್ಲದವನಿಗೆ ಕೆಲಸವನ್ನು ಯಾರು ಕೊಡುತ್ತಾರೆ? ಕೂಲಿ ಕೆಲಸ ಮಾಡಿದರೆ ಒಬ್ಭನ ಜೀವನಕ್ಕೇ ಸಾಕಾಗುವುದಿಲ್ಲ. ಇನ್ನು ಹೆಂಡತಿ, ಮಕ್ಕಳ ಗತಿ! ರೈತನನ್ನು ಸೈನಿಕ ಬಿಂದುವಿಗೆ ಹೋಲಿಸಿದ ಸರ್ಕಾರದ ನಡೆ ಪ್ರಾಮಾಣಿಕವೇ ಆಗಿದ್ದಲ್ಲಿ ರೈತ ಬಂಧುವಿಗೂ ಸಾಮಾಜಿಕ ಭದ್ರತೆ ಒದಗಿಸಬೇಕಾದದ್ದು ನ್ಯಾಯವಲ್ಲವೇ? ದೇಶದ ಗಡಿ ರಕ್ಷಿಸುವ ಸೈನಿಕರನ್ನು ಸಾಕಿದಂತೆ, ದೇಶದ ಜನರ ಪ್ರಾಣವನ್ನು ಉಳಿಸುವ ರೈತನನ್ನೂ ಸಾಕಬೇಕಲ್ಲವೇ? ಅವರು ಉದ್ಯೋಗಕ್ಕಾಗಿ ಊರು ಬಿಟ್ಟು ಗುಳೆ ಹೋಗುವುದನ್ನು ತಪ್ಪಿಸಲು ಅವನಿಗೆ ಅವನಿದ್ದಲ್ಲೇ ಅವನು ಮಾಡಬಹುದಾದಂತಹ ಉದ್ಯೋಗವನ್ನು ಸೃಷ್ಟಿಸಿಕೊಟ್ಟು, ಅವನ ಸಂಸಾರ ನಿರ್ವಹಣೆಗೆ ದಾರಿ ಮಾಡಿಕೊಡಬೇಕಲ್ಲವೇ? ಮಳೆಯೂ ಬಾರದೆ, ಬೆಳೆ ಬೆಳೆಯುವ ಸಾಧ್ಯತೆ ಇಲ್ಲವಾಗಿ, ಉದ್ಯೋಗವೂ ಸಿಗದೇ ಇದ್ದು, ಮುಂದಿನ ವರ್ಷ ಮಳೆ ಬಂದೀತು ಎಂಬ ಅನಿಶ್ಚಿತ ಭರವಸೆಯಲ್ಲಿ, ಊರಿನಲ್ಲೇ ಉಳಿದ ಅನ್ನದಾತ ರೈತ ಆತ್ಮಹತ್ಯೆಗೆ ಈಡಾದರೆ, ಅದು ಅವನ ದೇಶದ ಜನರಿಗಾಗಿ ಪ್ರಾಣತ್ಯಾಗ ಮಾಡಿದ್ದಕ್ಕೆ ಸಮನಲ್ಲವೇ? ಆಗ ಅವನ ಸಂಸಾರದ ಜನರ ಬದುಕಿಗೆ ಏನಾದರೂ ದಾರಿ ಮಾಡಬೇಕಲ್ಲವೇ? ರೈತನಿಗೂ ಜೀವನಕ್ಕೆ ಆಗುವಷ್ಟು ಆರ್ಥಿಕ ಭದ್ರತೆಯನ್ನು ಸರ್ಕಾರ ಒದಗಿಸಿದಲ್ಲಿ, ಆತ್ಮಹತ್ಯೆ ಪ್ರಕರಣಗಳು ನಿಲ್ಲಬಹುದು.

- ಶಿವಕುಮಾರ್ ಬಾಣಾವರ್ (ನಿವೃತ್ತ, ಕಾರ್ಯಪಾಲಕ ಇಂಜೀನಿಯರ್ – ಕೆ. ಪಿ.ಸಿ), ಶಿವಮೊಗ್ಗ.
