ಹಿರಿಯರಾದ ಶ್ರೀ ಜಿ. ರಾಮಚಂದ್ರ ಮೆಹೆಂದಳೆ ತಮ್ಮ ನಿವೃತ್ತಿಯ ನಂತರ ಜಪಾನೀ ಮೂಲದ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಅವರ ಜನ್ಮದಿನದಂದು ದಿವಾಕರ ಡೋಂಗ್ರೆ ಎಂ ಅವರು ಗೆಳೆಯನಿಗೆ ಅವರ ಕಲೆಯ ಕುರಿತು ಜನರಿಗೆ ಪರಿಚಯ ಮಾಡಿಸುವುದರ ಮೂಲಕ ಶುಭಾಶಯವನ್ನು ಕೋರಿದ್ದಾರೆ, ತಪ್ಪದೆ ಓದಿ…
ಬಣ್ಣದ ಕಾಗದಗಳು, ಬಣ್ಣ ಬಣ್ಣದ ಬೇಗಡೆಗಳು, ರಚಿಸಬೇಕಾದ ಆಕೃತಿಯ ಸ್ಪಷ್ಟ ಪರಿಕಲ್ಪನೆ, ಅಳತೆ, ವಿನ್ಯಾಸ ಮತ್ತು ಅಪರಿಮಿತ ತಾಳ್ಮೆ. ಇವೆಲ್ಲವು ಒಂದಾದಾಗ ಚಂದದ ಸಾರೋಟೇನು, ಕಣ್ಮನ ತಣಿಸುವ ದೈನಂದಿನ ಬದುಕಿನ ನೋಟದ ಸುಂದರ ಚಿತ್ರಗಳು ಮೈದಳೆದಾವು.
ಕೆಲವರಿಗೆ ನಿವೃತ್ತರಾದಾಗ ಸಮಯ ಕಳೆಯುವುದು ಹೇಗೆಂಬ ಚಿಂತೆ! ಓದು, ಪ್ರವಾಸ, ನಿವೃತ್ತಿಯ ಮೊದಲು ಸಾಧಿಸಲಾಗದ ತಮ್ಮಲ್ಲಿ ಹುದುಗಿರುವ ವಿಶಿಷ್ಟ ಪ್ರತಿಭೆಗಳನ್ನು ಅನಾವರಣಗೊಳಿಸಲು ನಿವೃತ್ತಿಯ ಸಮಯವೇ ಸಮರ್ಪಕ.

ಹಿರಿಯರಾದ ಶ್ರೀ ಜಿ. ರಾಮಚಂದ್ರ ಮೆಹೆಂದಳೆ ನನ್ನ ಬಂಧು ಮತ್ತು ಹಿತೈಷಿ ಕೂಡ. ಬಿ.ಇ.ಎಲ್.ನಲ್ಲಿ ಉಗ್ರಾಣ ನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮೆಹೆಂದಳೆಯವರದು ಯೋಜನಾಬದ್ಧ ಬದುಕು. ಶಿಕ್ಷಣ, ಸಹಕಾರಿ ಸಂಸ್ಥೆ, ಬದುಕಿನ ನಡೆಗಾಗಿ ಸಲಹೆಗಳನ್ನು ಕೇಳಿ ಬಂದವರಿಗೆ ಮಾರ್ಗದರ್ಶನ ಹೀಗೆ ಸಮಾಜಮುಖಿಯಾಗಿ ಬಾಳಿದವರು, ಬಾಳುತ್ತಿರುವವರು.
Origemy ಅನ್ನುವುದು ಕಾಗದದಿಂದ ಕಲಾಕೃತಿಗಳನ್ನು ನಿರ್ಮಿಸುವ ಜಪಾನೀ ಮೂಲದ ಕಲೆ. ಬಹುಶಃ ಎಳೆಯ ಮಕ್ಕಳ ಶಿಕ್ಷಣದಲ್ಲಿ ಮಾಡೆಲ್ ಗಳಿಗಾಗಿ ಕಾಗದ, ರಟ್ಟು, ಗೋಂದು (ಅಂಟು) ಗಳನ್ನುಪಯೋಗಿಸಿ ಮಾಡೆಲ್ ಗಳನ್ನು ಮಾಡಲಾಗುತ್ತದೆ. ಭಾರತದಲ್ಲೂ ಈ ಕಲೆ ವ್ಯಾಪಕವಾಗಿದೆ ಮತ್ತು ಈ ಕಲೆಯಲ್ಲಿ ನಿಷ್ಣಾತರಾದ ಅನೇಕ ಮಂದಿಯಿದ್ದಾರೆ.

ಈ ಸಾರೋಟು ಮೆಹೆಂದಳೆಯವರ ಕಲಾಕೃತಿ. ಇದೊಂದೇ ಅಲ್ಲ ಇಂತಹ ಅನೇಕ ಮನಮೋಹಕ ಕೃತಿಗಳು ಮೆಹೆಂದಳೆಯವರ ಕೈಯ್ಯಲ್ಲಿ ರೂಪುಗೊಂಡಿವೆ. ಮೆಹೆಂದಳೆಯವರು ಒಂದು ಕಾಲದಲ್ಲಿ ಭೂತದ ಕತೆಗಳನ್ನು ಬರೆದು ಪ್ರಕಟಿಸಿದವರು. ಸಾಹಿತ್ಯ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿ ಕೊಂಡವರು. ಸದ್ಭಾವ, ಸಮಚಿತ್ತ, ದೂರದೃಷ್ಟಿ, ವ್ಯಾವಹಾರಿಕ ಖಚಿತತೆ, ಕೈಗೊಂಡ ಯೋಜನೆಗಳಲ್ಲಿ ಸೋಲಿಲ್ಲದ ಸರದಾರ ಈ ಮೆಹೆಂದಳೆಯವರು. ಪತ್ನಿ ವಸುಂಧರಾ, ಅಮೃತಾ ಮಮತಾರೆಂಬ ಹೆಣ್ಣು ಮಕ್ಕಳು ವಿವಾಹಿತರಾಗಿ ಮೆಹೆಂದಳೆಯವರ ಬದುಕಿನಲ್ಲಿ ಸಂತಸದ ಹೊನಲನ್ನೇ ಹರಿಸಿದ್ದಾರೆ. ಸಂತೃಪ್ತ ಬದುಕಿಗೆ ಇನ್ನೇನು ಬೇಕು?
ಇಂದು ಮೆಹೆಂದಳೆಯವರ ಜನುಮ ದಿನ. ಶ್ರೀ ರಾಮಚಂದ್ರ ಮೆಹೆಂದಳೆಯವರು ಇನ್ನೂ ಹಲವು ಕಾಲ ನಮ್ಮೊಡನಿದ್ದು ನಮಗೆ ಸಂತಸವೀಯಲಿ ಅನ್ನುವುದು ಚಿತ್ಪಾವನ ಸಮುದಾಯದ ಒಲವ ಹಾರೈಕೆ.
- ದಿವಾಕರ ಡೋಂಗ್ರೆ ಎಂ
