ಡೈರಿ ಉತ್ಪನ್ನಗಳನ್ನು ಮಾರುವ ಹೆಣ್ಣುಮಗಳು ತನ್ನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಅನಾರೋಗ್ಯದ ಗಂಡನನ್ನು ಸುಧಾರಿಸಿಕೊಂಡು, ತನ್ನನ್ನು ನಿರಂತರವಾಗಿ ಕಾಡುವ ಕಾಲುನೋವು, ಬೆನ್ನುನೋವುಗಳನ್ನೂ ಲೆಕ್ಕಿಸದೆ ಸಂಸಾರದ ನೌಕೆಯನ್ನು ಸಾಗಿಸುವ ಹೆಣ್ಣಿಗೊಂದು ನಮನ… ಕೊಡಗಿನ ಶಿಕ್ಷಕರಾದ ಶಿವದೇವಿ ಅವನೀಶಚಂದ್ರ ಅವರು ಹೆಣ್ಣಿನ ಜೀವನದ ನೋವು ನಲಿವನ್ನು ಈ ಲೇಖನದಲ್ಲಿ ಕಟ್ಟಿಕೊಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…
ಪ್ರಸಂಗ : ೧
ಒಂದು ಜಿಲ್ಲಾ ಕೇಂದ್ರ. ಅಲ್ಲಿ ಸಾರ್ವಜನಿಕ ಶೌಚಾಲಯದ ನಿರ್ವಹಣೆಯ ಗುತ್ತಿಗೆ ಹಿಡಿದ ಒಂದು ಕುಟುಂಬ. ಮೊದಮೊದಲು ಅಲ್ಲಿ ಒಬ್ಬ ಗಂಡಸು ಇರುತ್ತಿದ್ದ. ಆಮೇಲೆ ಹೆಚ್ಚಾಗಿ ಒಬ್ಬ ನಡುವಯಸ್ಸಿನ ಹೆಂಗಸು ಶುಲ್ಕ ವಸೂಲಾತಿಗಾಗಿ ಇರುತ್ತಿದ್ದಳು. ಒಮ್ಮೆ ಪರಿಚಿತ ಹೆಂಗಸಿನೊಡನೆ ಆತ್ಮೀಯ ಮಾತುಕತೆ. ‘ನೀವು ಬರಾಕಿಲ್ವಾ…’
‘ನಾನೆಲ್ಲಿ ಬರ್ಲವ್ವಾ…ಇದೊಂದು ಕೆಲಸ ಗುತ್ತಿಗೆ ಹಿಡ್ಕೊಂಡ್ಬುಟ್ಟಿವ್ನಿ. ಬುಟ್ಬಂದ್ರೆ ದೇವ್ರೇ ಗತಿ…ತಿಂಗ್ಳಿಗೆ 90,000/- ದ ಹಂಗೆ ಹಣ ಕಟ್ಟಬೇಕು.ಈ ಕುಡ್ಕನ್ನ ನಂಬಿದ್ರೆ ಗೋವಿಂದ….
ಕೈಗೆ ದುಡ್ಡ್ ಬಂತೂ ಅಂದಂಗೆ ಕುಡಿಯೋಕೆ ಓಡೋಯ್ತಾನೆ…ಕಟ್ಟಕಾದತ್ತಾ..ಆ ಪಾಟಿ ದುಡ್ಡು…ಇವನ್ನ ನಂಬ್ ಕೊಂಡ್ರೆ…. !
ಮನೇಗೆ ಕಳ್ಸಿವ್ನಿ ಅವ್ನ… ಇಲ್ಲ್ ಮಲ್ಗೋದ್ರ ಬದ್ಲು ಮನೇಲೇ ಮಲ್ಕೊ ಅಂತಾ… ಹತ್ತು ಗಂಟೆಯವರೆಗೆ ಇಲ್ಲಿ ಈ ಕೆಲ್ಸಾ… ಹೆಂಗೂ ಮಗಳ್ದೊಂದು ಓದು ಮುಗ್ದು ಅವ್ಳಿಗೊಂದು ಚಾಕ್ರಿ ಸಿಕ್ಬುಟ್ಟು, ಮದ್ವೆ ಮಾಡಿ ಕಳ್ಸಿದ್ರೆ ಆಮೇಲೆ ನಿರಾಳ….ಅಲ್ಲೀತನ್ಕನಾದ್ರೂ ಗಂಡ ಅನ್ನೋ ಪ್ರಾಣಿನ ಸಹಿಸ್ಕೊಬೇಕಲ್ಲವ್ವಾ…
ಪ್ರಸಂಗ : ೨
‘ಇಷ್ಟ್ ಬೇಗ ನಾಲ್ಕ್ ಗಂಟೆಗೇ ಎದ್ದು ಬಾಗಿಲು ತೆರೀತೀರಲ್ಲಾ… ಮಲಗೋದು ಬೇರೆ ತಡರಾತ್ರಿ…ಕಷ್ಟ ಆಗಲ್ವಾ….?’
ಏನ್ಮಾಡೋದು…ಸಂಸಾರದ ಜವಾಬ್ದಾರಿನ ಅರ್ಧದಲ್ಲೇ ಮುಗಿಸಿ…ಎರಡು ಮಕ್ಕಳನ್ನು ನನ್ನ ಮಡಿಲಲ್ಲಿ ಬಿಟ್ಟು..ವಯಸ್ಸಾದ ತಂದೆತಾಯಿಯ ಹೊಣೆಯನ್ನೂ ನನ್ನ ಹೆಗಲಿಗೇ ಹೊರಿಸಿ ಗಂಡ ಈ ಚಿಕ್ಕವಯಸ್ಸಿನಲ್ಲೇ ಮರಳಿಬಾರದ ಲೋಕಕ್ಕೆ ಹೋದ್ರಲ್ಲ. ಹಾಗಂತ ನಾನೂ ಅವರ ದಾರಿ ಹಿಡಿಯೋಕಾಗುತ್ತಾ…
‘ಈಸಬೇಕು..ಇದ್ದು ಜೈಸಬೇಕು..’ ಮುಖತುಂಬಾ ನಗು ಚೆಲ್ಲಿ ತನ್ನ ಗಂಡನ ಉದ್ದಿಮೆಯನ್ನು ನಡೆಸಿಕೊಂಡು ಹೋಗುತ್ತಿರುವ ಹೆಣ್ಣು ಮಗಳು ತನಗಾಗಿ ಅಲ್ಲ. ತನ್ನ ಮಕ್ಕಳ ಭವಿಷ್ಯಕ್ಕಾಗಿ ಬದುಕುತ್ತಿದ್ದಾಳೆ.
ಪ್ರಸಂಗ :೩
ದಿನಂಪ್ರತಿ ತನ್ನ ಹೆಣ್ಣುಮಗುವಿನ ಕೈಹಿಡಿದು ಕರೆತಂದು ಶಾಲೆಯ ಆವರಣದೊಳಗೆ ಬಿಟ್ಟು ತಾನು ಕೂಲಿ ಕೆಲಸಕ್ಕಾಗಿ ಓಡಿ ಹೋಗುತ್ತಿದ್ದ ಅಮ್ಮ. ಆಮೇಲೆ ತಿಳಿದದ್ದು ಅದು ಶೋಷಣೆಯಿಂದ ಜನಿಸಿದ ಮಗು… ಆಗರ್ಭ ಶ್ರೀಮಂತ ಅಪ್ಪನಿದ್ದರೂ ತನ್ನ ಮಗಳೆಂದು ಸಮಾಜದೆದುರು ಒಪ್ಪಿಕೊಳ್ಳಲಾರದ ಅಪ್ಪ. ತನ್ನ ಬೀರುವನ್ನು ತೆರೆದು ಎಷ್ಟು ಬೇಕಾದರೂ ಹಣ, ಬಂಗಾರ ತೆಗೆದುಕೊ. ಮಗುವಿನ ಪೋಷಣೆಗಾಗಿ..ಆದರೆ ಇಲ್ಲಿಂದ ದೂರ ಹೊರಟು ಹೋಗು…ಎಂಬ ನಿಷ್ಠುರವಾದ ಮಾತಿಂದ ಭರ್ತ್ಸನೆಗೊಳಗಾಗಿ.. ಒಂದು ಚಿಕ್ಕಾಸನ್ನೂ ಮುಟ್ಟದೆ….ಮಗುವನ್ನು ದೂರದ ಎಲ್ಲೋ ಹಾಸ್ಟೆಲ್ನಲ್ಲಿ ಬೆಳೆಸಿ.
ಈಗ ಸಮಾಜದ ಮುಂದೆ ಒಬ್ಬ ಮೌಲ್ಯವಂತ ಹೆಣ್ಣನ್ನು ರೂಪಿಸಿ, ತನ್ನ ಕಾಲ ಮೇಲೆ ತಾನು ಬದುಕುವಂತೆ ಮಾಡಿ, ಇಳಿವಯಸ್ಸಿನಲ್ಲಿ ತಾಯಿಯನ್ನೂ ಪೋಷಿಸುವಂತೆ ರೂಪಿಸಿರುವ ತಾಯಿ….! ಇತ್ತೀಚೆಗೆ ಯೋಗ್ಯನಾದ ವರನಿಗೆ ಸಮಾಜದೆದುರು ಅದ್ಧೂರಿಯಿಂದ ಧಾರೆಯೆರೆದು ಕೊಟ್ಟ ಆ ತಾಯಿಯ ಸ್ವಾಭಿಮಾನ ಹಾಗೂ ಧನ್ಯತೆಗೆ ಸಾಟಿಯಾದುದು ಬೇರೆ ಇರುವುದು ಸಾಧ್ಯವೇ. ತನ್ನ ಅಪ್ಪ ತನ್ನನ್ನು ಕೊನೆಗೂ ಸ್ವೀಕರಿಸಿ ಆ ಮನೆಯಲ್ಲಿ ತನಗೊಂದು ಸ್ಥಾನ ಸಿಗಬಹುದು ಎಂಬ ಮಗಳ ಕನಸು….ಈಡೇರದೇ ಇದ್ದರೂ ತಾಯಿಯ ಆಸೆಯಂತೆ ಬದುಕಿದ ಹೆಣ್ಣುಮಗಳ ದಿಟ್ಟ ನಿಲುವು.
ಮದುಮಗಳ ವೇಷದಲ್ಲಿ ಅವಳನ್ನು ಕಂಡು ಧನ್ಯತೆಯಿಂದ ಕಂಠವುಬ್ಬಿದ್ದು ಸುಳ್ಳಲ್ಲ. ಈಗಲೂ ಅನುರಣಿಸುತ್ತಿದೆ ಅವಳ ಮಾತು. ತನ್ನ ಅಪ್ಪನ ರೂಪದ ಪ್ರತೀಕವೇ ಎಂಬಂತಿದ್ದ ಈ ಬಾಲೆಯ ,’ಒಂದಲ್ಲ ಒಂದು ದಿನ ನಾನು ನನ್ನ ಅಪ್ಪನ ಪ್ರೀತಿಯ ಅಪ್ಪುಗೆಯಲ್ಲಿ ಕರಗಿ ಹೋಗುತ್ತೇನೆ’ ಎಂಬ ಒಂದೇ ಕನಸು ಸಹ ಈಡೇರದೆಯೇ ಅಪ್ಪ ಕಾಲವಶವಾಗಿದ್ದನ್ನು ಕಂಡು, ವಿಧಿಯ ಕ್ರೌರ್ಯಕ್ಕೆ ನಾನು ಮೂಕಳಾಗಿದ್ದುಂಟು…!
ಪ್ರಸಂಗ : ೪
ಇಡೀ ದಿನ ಜನಸಂದಣಿಯಿರುವ ಹೆದ್ದಾರಿಯ ತಾಲೂಕು ಕೇಂದ್ರದಲ್ಲಿ ತಡರಾತ್ರಿಯವರೆಗೂ ಡೈರಿ ಉತ್ಪನ್ನಗಳನ್ನು ಮಾರುತ್ತಾ, ತನ್ನ ಮಕ್ಕಳನ್ನು ಉನ್ನತ ವಿದ್ಯಾವಂತರನ್ನಾಗಿ ಮಾಡಿ ಗಂಡ ಅನಾರೋಗ್ಯ ಪೀಡಿತರಾದಾಗಲೂ ಕಂಗೆಡಸದೆ ತನ್ನನ್ನು ನಿರಂತರವಾಗಿ ಕಾಡುವ ಕಾಲುನೋವು, ಬೆನ್ನುನೋವುಗಳನ್ನೂ ಲೆಕ್ಕಿಸದೆ ಹೆಗಲೆಣೆಯಾಗಿ ಸಂಸಾರದ ತೇರೆಯುಳೆತ್ತಾ… ಕೊನೆಗೊಮ್ಮೆ ಅವರು ಅಸ್ತಂಗತರಾದಾಗಲೂ ಅದೇ ನಗುಮುಖದಿಂದ ಗ್ರಾಹಕರೊಂದಿಗೆ ವ್ಯವಹರಿಸುವ ಹೆಣ್ಣುಮಗಳ ದಿಟ್ಟತನ….ನಿಜವಾಗಿಯೂ…ನನಗೆ ಆಪ್ತವೆನಿಸಿದೆ.
ಪ್ರಸಂಗ : ೫
ಸುಂದರ ಜೋಡಿ ಅನುರೂಪ ದಾಂಪತ್ಯ. ಇಬ್ಬರು ಹೆಣ್ಣುಮಕ್ಕಳು. ಆದರೆ ಗಂಡನಿಗೆ ಅಂಟಿದ ಕುಡಿತದ ಚಪಲ… ನಡುವೆ ಅದು ಮಿತಿಮೀರಿದರೂ ದಿಕ್ಕೆಡದೆ… ತನಗೊಂದು ಸಣ್ಣ ಕೆಲಸ ಹಿಡಿದು ಸಂಸಾರದ ಚುಕ್ಕಾಣಿ ಹಿಡಿದ ಹೆಣ್ಣು ಮಗಳು. ಒಂದೇ ಒಂದು ಸಲವಾದರೂ ತನ್ನ ಪತಿಯ ದೌರ್ಬಲ್ಯವನ್ನು ಬಹಿರಂಗವಾಗಿ ತೋಡಿಕೊಂಡವರಲ್ಲ. ನಿಷ್ಕಲ್ಮಷ ನಗು….’ಎಷ್ಟು ಸುಂದರವಾಗಿ ನಗುತ್ತೀರಾ ನೀವು…’ ಎಂದು ನಾನು ಮೈಮರೆತು ಆ ನಗುವನ್ನು ಆಸ್ವಾದಿಸಿದ್ದಿದೆ.
ಆದರೆ ಮೇಲಧಿಕಾರಿಯಾಗಿದ್ದ ನನಗೆ ಆ ನಗುವ ಮೊಗದಲ್ಲಿ ಮೂಡಿದ ಹೂ ಚೆಲುವನ್ನು ಮಾಸಗೊಡದೆ, ಅವರ ಪತಿ ಕೆರೆಗೆ ಬಿದ್ದು ಆಕಸ್ಮಿಕವಾಗಿ ತೀರಿಕೊಂಡ ದುರಂತದ ವಿಷಯವನ್ನು ಹೇಳಬೇಕಾದ ಅನಿವಾರ್ಯತೆಯಿದ್ದರೂ ಹೇಳಲಾಗದೆ….’ನಿಮ್ಮ ಗಂಡನಿಗೆ ತುಂಬಾ ಹುಷಾರಿಲ್ಲದಂತಾಗಿದೆ ಯೆಂದು ಸುದ್ದಿ ಬಂದಿದೆ,ಈಗಲೇ ಸಿಕ್ಕಿದ ಬಸ್ಸಿಗೆ ಹೋಗಿ ಬಿಡಿ’,ಎಂದು ಮತ್ತೊಬ್ಬ ಸಹೋದ್ಯೋಗಿಯನ್ನು ಜೊತೆಯಾಗಿಸಿ ಕೈಗೊಂದಿಷ್ಟು ಹಣ ನೀಡಿ ಜಾರಿಕೊಂಡಿದ್ದೆ . ಅವರು ಹೋದ ಆ ದಾರಿಯನ್ನೇ ನೋಡುತ್ತಾ ನಿಟ್ಟುಸಿರಿಟ್ಟು…! ಎಂದು ಏಕೆಂದರೆ…ಅವರಿಗೊಬ್ಬಳು ಜನ್ಮತಃ ಬುದ್ಧಿಮಾಂದ್ಯತೆಯಿರುವ ಹೆಣ್ಣು ಮಗಳ ಭವಿಷ್ಯವನ್ನು ರೂಪಿಸುವ ಹೊಣೆಯೂ ಇತ್ತು.
ಸ್ವಲ್ಪದರಲ್ಲಿಯೇ ಸುಧಾರಿಸಿಕೊಂಡಘ ಆಕೆ ತಾನೊಬ್ಬಳೇ,ದೊಡ್ಡ ಮಗಳನ್ನು ಕಾಲೇಜಿಗೆ ಕಳುಹಿಸಿ,ತನ್ನ ಕರ್ತವ್ಯ ನಿರ್ವಹಿಸುತ್ತಲೇ ತನ್ನ ರೋಗಪೀಡಿತ ಅಮ್ಮನ ಸೇವೆಯನ್ನೂ ಮಾಡುತ್ತಾ,ಈ ಬುದ್ಧಿಮಾಂದ್ಯ ಮಗಳ ಶಿಕ್ಷಣ ಹಾಗೂ ಬೆಳವಣಿಗೆಯನ್ನೂ ನಿರ್ವಹಿಸುವಾಗ ತೋರಿದ ತಾಳ್ಮೆಯಿದೆಯಲ್ಲ..ಅದೇ ಮಾತೃತ್ವದ ಶಕ್ತಿ.ಹೆಣ್ತನದ ಬದ್ಧತೆ.ಮತ್ತೆ ನಾಲಿಗೆಯಲ್ಲಿ ಒಂದು ಅಲ್ಸರ್ ಗುಳ್ಳೆಯಾದಾಗ,ತನಗೆ ಮಾತನಾಡಲು ಸಾಧ್ಯವಿಲ್ಲದೆ ಹೋದಾಗಲೂ,ತೊದಲಿನಲ್ಲೆ ಫೋನ್ ಮಾಡಿ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ ಸೌಜನ್ಯಕ್ಕೆ ಮಾರುಹೋಗದಿರಲಾದೀತೇ…?
ಹೆಣ್ಣಿನ ಬದುಕು ಬಹಳ ಸವಾಲಿನದು. ಪ್ರೀತಿಸುವ ಗಂಡನೊಬ್ಬನಿದ್ದರೆ ತನ್ನ ಖಾಸಗಿ ಪ್ರಪಂಚದಲ್ಲಿನ ಎಲ್ಲಾ ಕೊರತೆಗಳನ್ನೂ ಸಹಿಸಿಯಾಳು.ಸಂದರ್ಭ ಬಂದಾಗ ಹಮನೆತನದ ಘನತೆಗಾಗಿ ಯಾವ ತ್ಯಾಗಕ್ಕೂ ಸಿದ್ಧಳಾಗಬಲ್ಲಳು.
ಅಬಲೆಯೆನಿಸಿಕೊಳ್ಳುವ ಈಕೆ ಒಂದು ಮಹಾನ್ ಶಕ್ತಿ.ಪುರುಷನ ಭಾಗ್ಯವಿಧಾತೆ…..ಹೆಣ್ಣು ಜಗವ ತಬ್ಬುವ ಪ್ರೀತಿಯೆಂಬ ಮಾಯೆ.ಅವಳನ್ನು ಗೌರವಿಸುವುದರ ಮೂಲಕ ನಾವು ನಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳೋಣ.
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
