ಮಗುವಿನ ಆಗಮನದಿಂದ ಹೆಣ್ಣಿನ ಬದುಕೆ ಬದಲಾಯಿಸಿತು ಎನ್ನುವುದಕ್ಕಿಂತ ಮಗುವಿಗಾಗಿ ಹೆಣ್ಣು ಬದುಕನ್ನೇ ಬದಲಾಯಿಸಿಕೊಂಡಳು ಎನ್ನಬಹುದು. ಹೆಣ್ಣಿನ ಆರೋಗ್ಯದ ಕುರಿತು ಲೇಖಕಿ ಆಶ್ರಿತ ಕಿರಣ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಹೆಣ್ಣು ಅಷ್ಟ ಕೈಗಳನ್ನುಳ್ಳ ದೇವಿ ಸ್ವರೂಪ. ಏಕ ಕಾಲದಲ್ಲಿ ಹಲವು ಕೆಲಸವನ್ನು ಮಾಡುವ ಸಾಮರ್ಥ್ಯವಿರುವ ದಿಟ್ಟೆ. ತಾನು ನೊಂದು ಬೆಂದು ಮನೆಯನ್ನು ಮನೆತನವನ್ನು ಬೆಳಗಿಸುವ ದೀಪ. ಅವಳ ಸಹನೆಗೆ ಸಾಟಿ ಇಲ್ಲ..ಅವಳ ಕರುಣೆಗೆ ಬೇಲಿ ಇಲ್ಲ..ಅವಳು ಮಮತೆಯ ಕಡಲು..ಇದೆಲ್ಲವು ಅವಳ ಮೇಲಿನ ಗೌರವ ಹೆಚ್ಚಿಸುತ್ತದೆ. ಅವಳಿಗೂ ಅವಳ ಬಗ್ಗೆ ಹೆಮ್ಮೆ ಎನಿಸುತ್ತದೆ. ಆದರೆ ಇದರಿಂದಾಚೆಗೆ ಅವಳು ಅವಳ ಕುಟುಂಬದ ನಗುವಿಗಾಗಿ ಅವಳನ್ನೇ ಮರೆಯುತ್ತಾಳೆ..ಅವಳ ಬದುಕನ್ನು ತನ್ನ ಕುಟುಂಬದ ನೆಮ್ಮದಿಗಾಗಿ ಮುಡಿಪಾಗಿಡುತ್ತಾಳೆ. ಅದು ತಪ್ಪಲ್ಲ. ಅವಳಿಗೆ ಅದು ಅವಳ ಕರ್ಮ (ಕೆಲಸ) ವೆಂದು ಅರ್ಥೈಸಿಕೊಳ್ಳೋಣ. ಮನೆಯವರ ಬೇಕು ಬೇಡಗಳನ್ನು ಗಮನಿಸುತ್ತಾ, ಬಂಧು ಬಳಗದವರನ್ನು ಸತ್ಕರಿಸುತ್ತಾ, ಮಕ್ಕಳೊಂದಿಗೆ ಮಗುವಾಗಿ ಆಡುತ್ತಾ,ತನ್ನೆಲ್ಲಾ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿಭಾಯಿಸುವವಳು ಅವಳ ಕಾಳಜಿಯನ್ನು ಮರೆಯುತ್ತಾಳೆ ಅಲ್ಲವೇ..!
ಹೌದು ಹೆಣ್ಣೊಬ್ಬಳು ತಾಯಿಯಾದ ಮೇಲೆ ಅವಳಿಗಿಂತ ಅವಳ ಮಕ್ಕಳು ಸಂಸಾರ ಮುಖ್ಯವೆಂದು ಪ್ರತಿಕ್ಷಣ ತನ್ನನೇ ತಾನು ಮರೆತು ಬದುಕಲು ಆರಂಭಿಸುತ್ತಾಳೆ. ಸಾಮಾನ್ಯವಾಗಿ ಮದುವೆಗೆ ಮುನ್ನ ದಿನಕ್ಕೆ ಮೂರು ಬಾರಿಯಾದರೂ ಕನ್ನಡಿ ಮುಂದೆ ನಿಂತು ತನ್ನನ್ನು ತಾನು ನೋಡಿಕೊಳ್ಳುತ್ತಿದ್ದವಳು ಮಗುವಾದ ಬಳಿಕ ಕನ್ನಡಿಯ ಮುಂದೆ ನಿಲ್ಲುವುದೇ ಮರೆಯುತ್ತಾಳೆ. ಅವಳ ಮಗುವಿಗೆ ಅಲಂಕಾರ ಮಾಡಿ ಕಣ್ತುಂಬಿಕೊಂಡು ಸಂಭ್ರಮ ಪಡುತ್ತಾಳೆ. ಊಟ ತಿಂಡಿಯ ವಿಚಾರದಲ್ಲಿ ಅಚ್ಚುಕಟ್ಟಾಗಿ ತಿನ್ನುತ್ತಿದ್ದವಳು ಒಂದು ಮಗುವಿನ ತಾಯಿ ಆಗುತ್ತಿದ್ದಂತೆ ಊಟ ತಿಂಡಿಗೆ ಸಮಯವನ್ನೇ ಕೊಡದೆ ಮಗು ಬಿಟ್ಟಿದ್ದನ್ನು ತಿಂದು ಉಳಿದದ್ದು ಹಾಳಾಗುತ್ತದೆಯೆಲ್ಲ ಎಂಬ ಭಾವನೆಯಲ್ಲಿ ಮರುದಿನಕ್ಕೆ ಅದನ್ನೇ ಬಿಸಿ ಮಾಡಿ ತಿನ್ನುತ್ತಾಳೆ. ಮೊದಲು ಜ್ವರ ಬಾಗಿಲಲ್ಲಿ ಬಂದಿದೆ ಎಂದು ತಿಳಿಯುತ್ತಿದ್ದಂತೆ ಹೊದ್ದು ಮಲಗುತ್ತಿದ್ದವಳು ಮಗುವಾದ ಬಳಿಕ ಜ್ವರ ತನಗೆ ಬಂದಿಲ್ಲವೆಂಬಂತೆ ಅವಳು ಆರೋಗ್ಯದ ವಿಚಾರದಲ್ಲಿ ಅಸಡ್ಡ ತೋರುತ್ತಾಳೆ. ಒಂದು ಮಗು ಹೆಣ್ತನವನ್ನು ಸಂಭ್ರಮಿಸುವುದರ ಜೊತೆಗೆ ಅವಳ ಅಸ್ತಿತ್ವವನ್ನೇ ಬದಲಾಯಿಸುತ್ತದೆ.
ಮಗುವಿನ ಆಗಮನ ಅವಳ ಬದುಕನ್ನು ಬದಲಾಯಿಸಿತು ಎನ್ನುವುದಕ್ಕಿಂತ ಮಗುವಿಗಾಗಿ ಬದುಕನ್ನು ಬದಲಾಯಿಸಿಕೊಂಡಳು ಎನ್ನಬಹುದು. ಅವಳಿಗೆ ಅರಿವಿಲ್ಲದೆ ಹೀಗೆ ಮಾಡುತ್ತಾಳೆಯೇ ಎಂಬ ಪ್ರಶ್ನೆ ಮೂಡುತ್ತದೆ. ಖಂಡಿತವಾಗಿಯೂ ಇಲ್ಲ. ಅವಳಿಗೂ ದಿನದ ಒಂದಿಷ್ಟು ಹೊತ್ತು ತನಗಾಗಿ ಮೀಸಲಿಡಬೇಕೆಂದು ಅನಿಸುತ್ತದೆ. ಆದರೆ ಆ ಸಮಯವನ್ನು ಅವಳಿಗೆ ಹೊಂದಿಸಿಕೊಳ್ಳುವುದು ಸವಾಲ್ ಆಗಿರುತ್ತದೆ.

ಹಾಗಾದರೆ ಸವಾಲನ್ನು ಎದುರಿಸಲು ಸಾಧ್ಯವಿಲ್ಲವೇ?
ಈ ಪ್ರಶ್ನೆಗೂ ಉತ್ತರ ಅವಳೇ ಕಂಡುಕೊಳ್ಳಬೇಕು.ಅವಳಿಗೆ ಸಾಧ್ಯವಾಗದೆ ಇರುವುದು ಯಾವುದಿದೆ..?ತೊಟ್ಟಿಲು ತೂಗುವ ಕೈ ದೇಶವನ್ನು ಆಳುತ್ತದೆ ಎಂದ ಮೇಲೆ ಅವಳಿಗಾಗಿ ಸಮಯ ಒದಗಿಸಿಕೊಳ್ಳುವುದು ಅವಳಿಗೆ ಸವಾಲಾಗಿ ಕಂಡರು ಅದನ್ನು ಸರಿದೂಗಿಸಿಕೊಂಡು ಹೋಗುವ ಶಕ್ತಿ ಅವಳಿಗಿದ್ದೇ ಇರುತ್ತದೆ.
ಹಾಗಾದರೆ ಏನು ಮಾಡಬೇಕು?
ಆರಂಭದಲ್ಲಿ ಕಷ್ಟ ಎನಿಸಿದರು ಅವಳು ಅವಳ ಕೆಲಸಗಳಿಗೆ ಒಂದಿಷ್ಟು ಸಮಯದ ಚೌಕಟ್ಟನ್ನು ಹಾಕಿಕೊಳ್ಳಬೇಕು. ಅಮ್ಮನ ಮನೆಗೆ ಹೋಗುವ ಬಸ್ಸಿಗೆ ಐದು ನಿಮಿಷ ಮೊದಲೇ ತಯಾರಾಗಿ ನಿಲ್ಲುವ ಹುಮ್ಮಸ್ಸಿನಂತೆ ಅವಳಿಗಾಗಿ ಸಮಯ ಕಳೆಯುವ ಹುಮ್ಮಸ್ಸು ಅವಳಲ್ಲಿರಬೇಕು.. ಅಯ್ಯೋ ಹೋಗ್ಲಿ ನನಗೇನ್ ಆಗ್ಬೇಕು ಎನ್ನುವ ಭಾವನೆಯನ್ನು ಮನದಿಂದ ಬಡಿದೋಡಿಸಬೇಕು.
ಅವಳ ದಿನನಿತ್ಯದ ಕೆಲಸಗಳಿಗೆ ಸಮಯವನ್ನು ನಿಗದಿ ಪಡಿಸಿಕೊಂಡಾಗ ಅವಳಿಗಾಗಿ ಕಳೆಯಲು ಒಂದಿಷ್ಟು ಸಮಯ ಖಂಡಿತ ಸಿಗುತ್ತದೆ. ತೀರಾ ಚಿಕ್ಕ ಮಕ್ಕಳಿರುವಾಗ ಅವಳಿಗಾಗಿ ಸಮಯ ಒದಗಿಸಿಕೊಳ್ಳುವುದು ಕಷ್ಟ ಎನಿಸುತ್ತದೆ. ಆ ಸಮಯದಲ್ಲಿ ಅವಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಗು ಹುಟ್ಟಿದ ಬಳಿಕ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸ ಆಗುತ್ತದೆ. ವಿಟಮಿನ್ ಗಳ ಕೊರತೆ ಉಂಟಾಗುತ್ತದೆ. ಅವುಗಳನ್ನು ಸರಿದೂಗಿಸಲು ಬೇಕಾಗುವ ಆಹಾರಗಳನ್ನು ತೆಗೆದುಕೊಂಡು, ದೇಹಕ್ಕೆ ಒಗ್ಗುವಂತಹ ವ್ಯಾಯಾಮ ಮಾಡುವ ಮೂಲಕ ಮನಸ್ಸು ಹಾಗು ದೇಹವನ್ನು ಗಟ್ಟಿಯಾಗಿಸಿಕೊಳ್ಳಬೇಕು.ಮಗುವಿನ ಆರೈಕೆಯಲ್ಲಿ ಪೂರ್ತಿ ದಿನ ಕಳೆಯುತ್ತಾ ಅವಳನ್ನು ಅವಳು ನಿರ್ಲಕ್ಷಿಸಿಕೊಂಡರೆ ಮಗು ಬೆಳೆಯುತ್ತಿದ್ದಂತೆ ಅವಳ ಆರೋಗ್ಯ ಪರಿಸ್ಥಿತಿ ಹದಗೆಟ್ಟಿರುತ್ತದೆ. ಮಗುವನ್ನು ಗಟ್ಟಿಮುಟ್ಟಾಗಿ ಬೆಳೆಸಲು ಮಾನಸಿಕವಾಗಿ, ದೈಹಿಕವಾಗಿ ಅವಳು ಗಟ್ಟಿಯಾಗಬೇಕು.
ಮಗು ಶಾಲೆಗೆ ಹೋಗಲು ಪ್ರಾರಂಭಿಸಿದ ಮೇಲೆ ಅವಳ ಆರೋಗ್ಯದ ಜೊತೆಗೆ ಅವಳ ಹವ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡಲು ಸಮಯ ಮಾಡಿಕೊಳ್ಳಬೇಕು.ಇದು ಹೇಳಿದಷ್ಟು ಸುಲಭವಲ್ಲ. ಆದರೆ ಮನಸ್ಸು ಮಾಡಿದರೆ ಖಂಡಿತಾ ಸಾಧ್ಯವಾಗುತ್ತದೆ.
ಸಮಯವನ್ನು ಹೇಗೆ ಹೊಂದಿಸಿಕೊಳ್ಳಬಹುದು?
ಮಕ್ಕಳು ಶಾಲೆಯಿಂದ ಬಂದ ಮೇಲೆ ಅವಳ ಗಮನ ಪೂರ್ತಿಯಾಗಿ ಅವರ ಮೇಲೆ ಹೋಗುವುದು ಸಹಜ. ಆದರೆ ಮಕ್ಕಳು ಶಾಲೆಗೆ ಹೋದ ಸಮಯವನ್ನು ಅವಳು ಅವಳಿಗಾಗಿ ಮೀಸಲಿಡಬಹುದು. ಉದಾಹರಣೆಗೆ ಬೆಳೆಗ್ಗಿನ ತಿಂಡಿ ಹಾಗು ಮಧ್ಯಾಹ್ನದ ಸಾಂಬಾರ್ ಒಟ್ಟಿಗೆ ಮಾಡಬಹುದು. ಊಟದ ವೇಳೆಗೆ ಮಾಡಿಟ್ಟ ಸಾಂಬಾರ್ ಬಿಸಿ ಮಾಡಿಕೊಂಡು ತಿನ್ನಬಹುದು. ಮಕ್ಕಳನ್ನು ಶಾಲೆಗೆ ಕಳುಹಿಸಿದ ಮೇಲೆ 10 ಗಂಟೆಯ ಒಳಗೆ ಮನೆಯ ಒಳಗಿನ ಕೆಲಸ ಮುಗಿಸಿದರೆ ಮಧ್ಯಾಹ್ನದವರೆಗೆ ಸಿಗುವ ಸಮಯದಲ್ಲಿ ಅವಳಿಗೆ ಇಷ್ಟವಾದ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು.
ಅವಳಿಗಾಗಿಯೂ ಬದುಕಬೇಕಲ್ಲವೇ..?
ಅವಳಿಂದ ಮನೆ ಅಂದವಾಗಿರುತ್ತದೆ.ಮನೆ ಆನಂದ ವಾಗಿರಬೇಕಾದಾರೆ ಮನಸ್ಸು ನೆಮ್ಮದಿಯಾಗಿರಬೇಕು.ಆಗ ಮನೆ ಸ್ವರ್ಗದಂತಾಗುತ್ತದೆ.ಅವಳು ನೆಮ್ಮದಿಯಾಗಿದ್ದರೆ ಮನೆ ಸ್ವರ್ಗವಾಗಿರುತ್ತದೆ.ಅವಳು ನಗಲು ಅವಳು ಮಾನಸಿಕವಾಗಿ ಸಂತೋಷವಾಗಿರಬೇಕು.ಮನ ಸಂತೋಷವಾಗಿರಬೇಕಾದರೆ ಅವಳು ಅವಳಿಷ್ಟದ ಕೆಲಸದಲ್ಲಿ ದಿನದ ಒಂದಿಷ್ಟು ಸಮಯ ಕಳೆಯಬೇಕು.
ಅವಳೊಬ್ಬಳಿಂದಲೇ ಸಾಧ್ಯವೆ..?
ಖಂಡಿತವಾಗಿಯೂ ಇಲ್ಲ. ಇಲ್ಲಿ ಇನ್ನು ಒಂದು ಮುಖ್ಯ ವಿಷಯ ಅಡಗಿದೆ. ಅವಳು ಅವಳಾಗಿರಲು ಕೇವಲ ಅವಳ ಪ್ರಯತ್ನ ಸಾಲದು. ಅವಳ ಜೊತೆಗಿರುವವರು ಕೂಡ ಅದರ ಪಾಲುದಾರಾಗಿರುತ್ತಾರೆ. ಜೀವನ ಪೂರ್ತಿ ಜವಬ್ದಾರಿ ಹೊತ್ತು ನಡೆಯುವ ಅವಳಿಗೆ ಅವಳ ಇಷ್ಟದಂತೆ ದಿನದ ಒಂದಿಷ್ಟು ಸಮಯ ಕಳೆಯಲು ಅವಳಿಗೆ ಸಮಯ ಸಿಗದೆ ಒದ್ದಾಡುವಾಗ
ಸಮಯ ಮಾಡಿಕೊಳ್ಳುವಂತೆ ಸಹಕರಿಸುವುದು ಜೊತೆ ಇರುವವರ ಕರ್ತವ್ಯವಾಗಿರುತ್ತದೆ ಅಲ್ಲವೇ..!
ಅವಳನ್ನು ಅವಳು ಮರೆಯದೆ, ಜೊತೆಗೆ ಇರುವವರನ್ನು ನಿರ್ಲಕ್ಷಿಸದೆ ಸಂತೋಷವಾಗಿ ನೋಡುಕೊಳ್ಳಲು ಅವಳು ಬಲ್ಲಳು. ಆದರೆ ಆ ಅಭ್ಯಾಸವನ್ನು ಅವಳೂ ಮಾಡಿಕೊಳ್ಳಬೇಕು. ಅವಳೇ ಮಾಡಿಕೊಳ್ಳಬೇಕು…ಅಲ್ಲವೇ…? ಹೆಣ್ಣು ಆರೋಗ್ಯದಿಂದ್ದರೆ ಮನೆಯ ಮನಸ್ಸು ನಗುತ್ತಿರುತ್ತದೆ. ಅವಳ ನೆಮ್ಮದಿ ಮನೆಯ ಸೌಭಾಗ್ಯ.
- ಆಶ್ರಿತ ಕಿರಣ್
