ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಾರಾಧನೆ, ನಾಗಾರಾಧನೆಗೆ ವಿಶೇಷ ಸ್ಥಾನವಿದೆ. ನಾಗನನ್ನು ಕುಟುಂಬದ ಒಂದು ದೈವ ಶಕ್ತಿಯೆಂದು ಪೂಜಿಸುವ ಪರಂಪರೆ ಕರಾವಳಿಗರ ವೈಶಿಷ್ಟ್ಯ. ನಾಗ ದೇವತೆಗಳ ದೇವಸ್ಥಾನಗಳಲ್ಲಿ ಶ್ರೀ ಕ್ಷೇತ್ರ ಸುಬ್ರಮಣ್ಯ ಮೊದಲನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನ ಶ್ರೀ ಕ್ಷೇತ್ರ ಕುಡುಪುವಿಗಿದೆ. ಈ ಪುಣ್ಯ ಕ್ಷೇತ್ರದ ಮಹಿಮೆಯ ಕುರಿತು ಸೌಮ್ಯ ಸನತ್ ಅವರು ‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದಲ್ಲಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ದಕ್ಷಿಣ ಕನ್ನಡ ಜಿಲ್ಲೆ ಹಲವು ದೇವಳಗಳ ಬೀಡು… ಇಲ್ಲಿ ದೈವಾರಾಧನೆ, ನಾಗಾರಾಧನೆಗೆ ವಿಶೇಷ ಸ್ಥಾನವಿದೆ. ನಾಗನನ್ನು ಕುಟುಂಬದ ಒಂದು ದೈವ ಶಕ್ತಿಯೆಂದು ಪೂಜಿಸುವ ಪರಂಪರೆ ಕರಾವಳಿಗರ ವೈಶಿಷ್ಟ್ಯ
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಾಗ ದೇವತೆಗಳ ದೇವಸ್ಥಾನಗಳಲ್ಲಿ ಶ್ರೀ ಕ್ಷೇತ್ರ ಸುಬ್ರಮಣ್ಯ ಮೊದಲನೇ ಸ್ಥಾನದಲ್ಲಿ ಇದ್ದರೆ, ನಂತರದ ಸ್ಥಾನ ಶ್ರೀ ಕ್ಷೇತ್ರ ಕುಡುಪುವಿಗೆ ಸಲ್ಲುತ್ತದೆ. ನಾಗದೇವರ ಸಕಲ ಶಾಪಗಳಿಗೂ, ದೋಷಗಳಿಗೂ ಈ ಕ್ಷೇತ್ರದಲ್ಲಿ ಪರಿಹಾರವಿದ್ದು ನಿತ್ಯವು ನೂರಾರು ಜನರು ದೇವರ ಸೇವೆಯಲ್ಲಿ ಕೃತಾರ್ಥರಾಗುತ್ತಾರೆ. ಕುಡುಪು ಕ್ಷೇತ್ರದ ಮುಖ್ಯ ಆರಾಧನ ದೈವ “ಅನಂತ ಪದ್ಮನಾಭ”.
ಭಗವಂತ ಶ್ರೀ ಮಹಾವಿಷ್ಣು ಸೃಷ್ಟಿಯ ಆರಂಭಕ್ಕೆ ಚಾಲನೆ ನೀಡಿ, 14 ಲೋಕಗಳಾದ ತಳ, ಅತಳ, ವಿತಳ, ಸುತಳ, ತಲಾತಳ, ಮಹಾತಳ, ರಸಾತಳ, ಪಾತಾಳ, ಭೂ, ಭುವಃ, ಸ್ವಃ, ಜನ, ತಪ ಮತ್ತು ಸತ್ಯ ಲೋಕಗಳ ಸೃಷ್ಟಿಯಲ್ಲಿ ತೊಡಗುತ್ತಾನೆ. ಈ ಹದಿನಾಲಕ್ಕೂ ಲೋಕಗಳ ರಚನೆಯ ಬಳಿಕ ಅವುಗಳ ಸಂರಕ್ಷಣೆ ಮತ್ತು ಪಾಲನೆ ಮಾಡಲು ವಿಷ್ಣು ಭಗವಂತ 14 ರೂಪಗಳಲ್ಲಿ ಅಂದರೆ, ಅನಂತ, ಶ್ರೀಕೃಷ್ಣ, ಪದ್ಮನಾಭ, ಮಾಧವ, ವೈಕುಂಠಪತಿ, ಶ್ರೀಧರ, ತ್ರಿವಿಕ್ರಮ, ಮಧುಸೂದನ, ವಾಮನ, ಕೇಶವ, ನಾರಾಯಣ, ದಾಮೋದರ ಮತ್ತು ಗೋವಿಂದ ಎಂಬ 14 ರೂಪಗಳಲ್ಲಿ ಪ್ರಕಟವಾಗುತ್ತಾನೆ.
ಫೋಟೋ ಕೃಪೆ : google
ಅನಂತ ಚತುರ್ದಶಿ / ಅನಂತ ಪದ್ಮನಾಭ ವ್ರತ :
ಒಮ್ಮೆ ದೇವರ್ಷಿ ನಾರದ ಮಹಾಮುನಿಗಳು ವಿಷ್ಣು ಭಗವಂತ ತನ್ನ ಅನಂತ ವಿರಾಟ ರೂಪ ದರ್ಶನ ನೀಡಬೇಕೆಂದು ಪ್ರಾರ್ಥಿಸಿದಾಗ ವಿಷ್ಣು ಅದರಂತೆ ನಾರದ ಮುನಿಗಳ ಇಚ್ಛೆಗೆ ಅನುಗುಣವಾಗಿ ಸಚ್ಚಿದಾನಂದ ಸತ್ಯನಾರಾಯಣ ಸ್ವಾಮಿಯ ಅನಂತ ಸ್ವರೂಪ ಪ್ರಕಟವಾಗುತ್ತದೆ. ಶ್ರೀ ವಿಷ್ಣುವಿನ ಮತ್ತೊಂದು ರೂಪವೇ ಅನಂತ ಪದ್ಮನಾಭ. ಸ್ವಾಮಿಯ ವಿರಾಟ ಸ್ವರೂಪ ಅನಂತವಾದದ್ದು; ಅದಕ್ಕೆ ಅಂತ್ಯ ಎಂಬುದು ಇಲ್ಲ. ಸ್ವಾಮಿಯು ಪ್ರಕಟವಾದ ದಿನ ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ದಶಿದಿನ. ಆದ್ದರಿಂದ ಅಂದು ಭಕ್ತ ಜನರು ಅನಂತವರಗಳನ್ನು ಕರುಣಿಸುವ ಅನಂತನನ್ನು ಪೂಜಿಸಿ ಅನಂತ ಪದ್ಮನಾಭ ವ್ರತವನ್ನು ಆಚರಿಸುತ್ತಾರೆ.
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನವು ಮಂಗಳೂರು-ಮೂಡಬಿದ್ರಿ ಮಾರ್ಗದಲ್ಲಿ ಮಂಗಳೂರು ನಗರದಿಂದ 10 ಕಿಮೀ ದೂರದಲ್ಲಿರುವ ಕುಡುಪು ಗ್ರಾಮದಲ್ಲಿದೆ. ಈ ದೇವಾಲಯವು ಭಗವಾನ್ ಅನಂತ ಪದ್ಮನಾಭನಿಗೆ (ವಿಷ್ಣುವಿನ ಇನ್ನೊಂದು ರೂಪ) ಸಮರ್ಪಿತವಾಗಿದೆ.
ಫೋಟೋ ಕೃಪೆ : google
ದೇವಾಲಯದ ವಿನ್ಯಾಸ :
ಮುಖ್ಯ ದೇವಸ್ಥಾನದ ಗರ್ಭ ಗುಡಿಯಲ್ಲಿರುವ ಮುಖ್ಯ ದೇವತೆ ಅನಂತ ಪದ್ಮನಾಭ ಸ್ವಾಮಿಯನ್ನು ಪಶ್ಚಿಮದ ಕಡೆಗೆ ಪ್ರತಿಷ್ಠಾಪಿಸಲಾಗಿದೆ. ನಾಗ ಬನ ದೇವಸ್ಥಾನದ ಪೂರ್ವ ಭಾಗದಲ್ಲಿ ನೆಲೆಗೊಂಡಿದ್ದರೂ ಸಹ ಇದು ಪಶ್ಚಿಮಕ್ಕೆ ಮುಖ ಮಾಡಿದೆ. ಈ ನಾಗ ಬನದಲ್ಲಿ (ಸರ್ಪಗಳ ಆರಾಧನಾ ಸ್ಥಳ ) ಸುಮಾರು ಮುನ್ನೂರು ಸರ್ಪ ವಿಗ್ರಹಗಳು ಇವೆ. ಪವಿತ್ರ ಕೊಳದ ಭದ್ರಾ ಸರಸ್ವತಿ ತೀರ್ಥವು ದೇವಾಲಯದ ಎಡಭಾಗದಲ್ಲಿದೆ. ಈ ಕೊಳ /ಸರೋವರದಲ್ಲಿ ಸ್ನಾನ ಮಾಡಿದರೆ ರೋಗ ರುಜಿನಗಳು ದೂರವಾಗುತ್ತವಂತೆ. ದೇವಸ್ಥಾನದ ಮುಂಭಾಗದಲ್ಲಿ ಉಪ ದೇವತೆ ಜಾರಂದಾಯಕ್ಕೆ ಅರ್ಪಿಸಲಾದ ಒಂದು ಸಣ್ಣ ದೇವಾಲಯವಿದೆ. ಮುಖ್ಯ ಗರ್ಭಗುಡಿನ ಒಳಗಡೆ ದಕ್ಷಿಣ ಭಾಗದಲ್ಲಿ ಉಪ ದೇವತೆ ಶ್ರೀ ದೇವಿ ಮತ್ತು ಮಹಾಗಣಪತಿಯ ಗುಡಿ ಇದೆ. ದೇವಸ್ಥಾನದ ಮುಂಭಾಗದಲ್ಲಿ ಹೊರಭಾಗದಲ್ಲಿ ಒಂದು ವಾಲ್ಮಿಕಿ ಮಂಟಪವಿದೆ, ಅದರಲ್ಲಿ ಅಯ್ಯಪ್ಪ ಮತ್ತು ನವಗ್ರಹಗಳ ಗುಡಿಗಳಿವೆ.
‘ಕುಡುಪು’ ಎಂಬ ಹೆಸರು ಬರಲು ಕಾರಣ :
ಹೌದು! ತುಳುಭಾಷೆಯಲ್ಲಿ ‘ಕುಡುಪು’ ಅಂದ್ರೆ ಅನ್ನ ಬಸಿಯುವ ಕಾಡು ಬಳ್ಳಿಯಿಂದ ಹೆಣೆದಿರುವ ತಟ್ಟೆ. ಈ ಶ್ರೀ ಕ್ಷೇತ್ರ ಸುಮಾರು 2,000 ವರ್ಷಗಳ ಇತಿಹಾಸ ಹೊಂದಿದೆ. ಸ್ಥಳ ಪುರಾಣದ ಪ್ರಕಾರ ಕೃತಯುಗದಲ್ಲಿ ಈಗಿನ ಕುಡುಪು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಕದಲೀವನ ಅರಣ್ಯ ಎನ್ನಲಾಗುತ್ತಿತ್ತು. ಅಲ್ಲಿರುವ ‘ಭದ್ರಾ ಸರಸ್ವತಿ’ ಎಂಬ ಸರೋವರದಲ್ಲಿ ದೇವತೆಗಳು, ಋಷಿಮುನಿಗಳು ಸ್ನಾನ ಮಾಡುತ್ತಿದ್ದರಂತೆ.
ಅಲ್ಲೇ ಹತ್ತಿರದ ಊರಲ್ಲಿ ಬ್ರಾಹ್ಮಣ ಸುಮಂತು ಎಂಬಾತ ಮಗ ಕೇದಾರನಾಥ ಎಂಬುವವನಿಗೆ ವಿವಾಹವಾಗಿ ಹಲವು ವರ್ಷ ಕಳೆದರೂ ಮಕ್ಕಳಾಗಿರಲಿಲ್ವಂತೆ. ಇದೇ ಕೊರಗಿನಲ್ಲಿ ಸೋವರದ ಸಮೀಪ ಬಂದಾಗ ಧ್ಯಾನ ಮಾಡುತ್ತಿದ್ದ ಋಷಿ ಶೃಂಗರನ್ನು ಕಂಡು ತನ್ನ ಸಮಸ್ಯೆಯನ್ನು ಅರುಹುತ್ತಾನೆ. ಆಗ ಋಷಿಮುನಿಗಳು ಈ ‘ಭದ್ರಾ ಸರಸ್ವತಿ ತೀರ್ಥ’ ಸರೋವರದಲ್ಲಿ ದಿನವೂ ಸ್ನಾನ ಮಾಡಿ ಸುಬ್ರಹ್ಮಣ್ಯನನ್ನು ಜಪಿಸುತ್ತಾ ತಪಸ್ಸು ಮಾಡಿದರೆ ನಿನ್ನ ಕೋರಿಕೆ ಈಡೇರುತ್ತಾರೆ ಎನ್ನುತ್ತಾರೆ.
ತಪಸ್ಸು ಮಾಡುತ್ತಾ ಹಲವು ದಿನಗಳಾದರೂ ಸುಬ್ರಹ್ಮಣ್ಯ ದೇವರು ಪ್ರತ್ಯಕ್ಷನಾಗದೇ ಇದ್ದಾಗ ತನ್ನ ತಪಸ್ಸನ್ನು ಮತ್ತಷ್ಟು ಕಠಿಣಗೊಳಿಸುತ್ತಾನೆ. ಈ ತಪೋ ಜ್ವಾಲೆಯಿಂದ ಇಡೀ ಜೀವಸಂಕುಲವೇ ಆಪತ್ತೀಗೀಡಾಗುತ್ತದೆ. ಈ ಘೋರ ತಪಸ್ಸಿನಿಂದ ಪ್ರಸನ್ನನಾದ ಸುಬ್ರಹ್ಮಣ್ಯ ದೇವರು ಮಕ್ಕಳಾಗುವಂತೆ ವರ ನೀಡುತ್ತಾನೆ. ಕೊನೆಗೆ ವರುಷ ತುಂಬುವುದರೊಳಗೆ ಆತನ ಪತ್ನಿ ಗರ್ಭವತಿಯಾಗಿ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಆದರೆ ಆ ಮಕ್ಕಳು ಮೂರು ಹಾವಿನ ಮೊಟ್ಟೆಗಳಾಗಿರುತ್ತವೆ.
ಫೋಟೋ ಕೃಪೆ : google
ಇದನ್ನು ಕಂಡು ದುಃಖ ತಪ್ತನಾದ ಕೇದಾರನಿಗೆ ಆಕಾಶದಲ್ಲಿ ಅಶರೀರವಾಣಿಯು ಕೇಳುತ್ತದೆ. ಹುಟ್ಟಿದ ಮೂರು ಹಾವಿನ ಮೊಟ್ಟೆಗಳು ಮಹಾಶೇಷ, ಮಹಾವಿಷ್ಣು ಮತ್ತು ಸುಬ್ರಹ್ಮಣ್ಯ ರೂಪವಾಗಿದ್ದು ಲೋಕ ಕಲ್ಯಾಣಕ್ಕಾಗಿ ಕೇದಾರನ ಮಡದಿ ಹೊಟ್ಟೆಯಲ್ಲಿ ಹುಟ್ಟಿದ್ದಾರೆ. ಕೇದಾರನು ತಪಸ್ಸನ್ನಾಚರಿಸಿದ ಭದ್ರಾ ಸರಸ್ವತಿ ಸರೋವರದಲ್ಲಿ ಮೊಟ್ಟೆಗಳನ್ನು ಗುಪ್ತವಾಗಿ ಪ್ರತಿಷ್ಠಾಪಿಸುವಂತೆ ಆ ಶರೀರವಾಣಿಯು ಸೂಚಿಸುತ್ತದೆ. ಅಷ್ಟು ಮಾತ್ರವಲ್ಲದೆ, ಅಲ್ಲಿ ಅನಂತ ಪದ್ಮನಾಭ ದೇವರನ್ನು ಪೂಜಿಸಬೇಕೆಂದೂ, ಇಲ್ಲಿ ಯಾರೇ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ, ಅವರಿಗೆ ದೋಷ ನಿವಾರಣೆಯಾಗುವುದಲ್ಲದೆ, ಯಾವುದೇ ರೀತಿಯ ನಾಗದೋಷಗಳಿದ್ದರೂ ಪರಿಹಾರವಾಗುತ್ತದೆ ಎಂದು ಹರಕೆಯನ್ನು ನೀಡುತ್ತಾರೆ. ಸಂತಾನ ಭಾಗ್ಯವೂ ಲಭಿಸುತ್ತದೆ ಎಂದು ಹೇಳುತ್ತಾರೆ.
ಅದರಂತೆ ಕೇದಾರನು ಕಾಡುಬಳ್ಳಿಯಿಂದ ಹೆಣೆದಿರುವ ತಟ್ಟೆ(ಕುಡುಪು)ಯಲ್ಲಿ ಮೊಟ್ಟೆಗಳನ್ನಿಟ್ಟು ಅದನ್ನು ತಾನು ತಪಸ್ಸಾಚರಿಸಿದ ಸ್ಥಳದಲ್ಲಿ ಗುಪ್ತವಾಗಿಡುತ್ತಾನೆ. ಆಸ್ಥಳದಲ್ಲಿ ಹುತ್ತ ಬೆಳೆಯುತ್ತದೆ ಮತ್ತು ಕೇದಾರನು ಅನಂತ ಪದ್ಮನಾಭ ದೇವರನ್ನು ಜಪಿಸುತ್ತಾ ಮುಕ್ತಿ ಹೊಂದುತ್ತಾನೆ.
ಕಾಲಾನುಕ್ರಮದಲ್ಲಿ ಆ ಪ್ರದೇಶವನ್ನು ಶೂರಸೇನಾ ಎಂಬ ರಾಜನು ಆಳುತ್ತಿರುತ್ತಾನೆ. ಆತನಿಗೆ ವೀರಬಾಹುವೆಂಬ ಮಗನಿದ್ದು ಒಂದು ರಾತ್ರಿ ಆತನು ತನ್ನ ಪತ್ನಿಯೆಂದು ತಿಳಿದು ಪುತ್ರಿಯ ಜೊತೆ ದೈಹಿಕ ಸಂಬಂಧ ಮಾಡುತ್ತಾನೆ. ತಪ್ಪು ಅರಿವಾದಾಗ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟ ಆತ ಈ ಘೋರ ಅಪರಾಧಕ್ಕೆ ಪ್ರಾಯಶ್ಚಿತವೇನೆಂದು ಬ್ರಾಹ್ಮಣರ ಬಳಿ ಕೇಳುತ್ತಾನೆ. ಹಿಂದೆಂದೂ ನಡೆಯದ ಇಂತಹ ಹೀನ ಕೃತ್ಯವನ್ನು ಮಾಡಿದ ಕಾರಣಕ್ಕೆ ವಿರಬಾಹು ತನ್ನ ಬಾಹುಗಳನ್ನು ಕಡಿದುಕೊಳ್ಳಬೇಕೆಂದು ಅವರು ತಿಳಿಸುತ್ತಾರೆ. ಕೂಡಲೇ ವಿಷ್ಣುವನ್ನು ನೆನೆಯುತ್ತಾ ತನ್ನ ಬಾಹುಗಳನ್ನು ಕಡಿದುಕೊಂಡ ಆತ ಬಂಗಾರದ ಬಾಹುಗಳನ್ನು ತೊಟ್ಟುಕೊಂಡು ‘ಸ್ವರ್ಣಬಾಹು’ ಎಂದು ಕರೆಸಿಕೊಳ್ಳುತ್ತಾನೆ.
ಹೀಗೆ ಕೈಗಳಿಲ್ಲದ ಕೊರಗಿನಲ್ಲೇ ದಿದೂಡುತ್ತಿದ್ದ ಸ್ವರ್ಣಬಾಹು ಒಂದು ದಿನ ವಿಹಾರಕ್ಕೆ ತೆರಳುವಾಗ ಭದ್ರಾ ಸರಸ್ವತಿ ತೀರ್ಥ ಸರೋವರವನ್ನು ಕಂಡು ಪುಳಕಿತನಾಗಿ ಸ್ನಾನ ಮಾಡಿ ಅಲ್ಲಿ ವಿಷ್ಣುವನ್ನು ಕುರಿತು ಧ್ಯಾನ ಮಾಡುತ್ತಾನೆ. ಪ್ರತ್ಯಕ್ಷನಾದ ವಿಷ್ಣು ಲೋಕ ಕಲ್ಯಾಣಕ್ಕಾಗಿ ಮಹಾವಿಷ್ಣು, ಆದಿಶೇಷ ಮತ್ತು ಸುಬ್ರಹ್ಮಣ್ಯ ಗುಪ್ತವಾಗಿ ಇಲ್ಲಿ ನೆಲೆಸಿದ್ದು ಈ ಸ್ಥಳದಲ್ಲಿ ದೇವಾಲಯವನ್ನು ಕಟ್ಟುವಂತೆ ಹಾಗೂ ಮುಂಜಾನೆಯೊಳಗೆ ಗರ್ಭ ಗುಡಿಯನ್ನು ನಿರ್ಮಾಣ ಮಾಡಿದರೆ ಎಲ್ಲಾ ಪಾಪವು ಪರಿಹಾರವಾಗಿ ಬಾಹುಗಳು ಮತ್ತೆ ಬರುವುದಾಗಿ ತಿಳಿಸುವರು.
ವಿಷ್ಣುವಿನ ಆಜ್ಞೆಯನ್ನು ಶಿರಸಾ ವಹಿಸಿದ ರಾಜನು ಕೊಡಲೇ ತನ್ನ ಪರಿವಾರ ಸಮೇತನಾಗಿ ಗರ್ಭಗುಡಿ ನಿರ್ಮಾಣದಲ್ಲಿ ತೊಡಗುವನು. ಹೀಗೆ ಇಲ್ಲಿಗೆ ಕುಡುಪು ಎಂಬ ಹೆಸರು ಬಂತು ಮತ್ತು ದೇವಸ್ಥಾನ ನಿರ್ಮಾಣವಾಯಿತು ಎಂದು ಸ್ಥಳ ಪುರಾಣ ಹೇಳುತ್ತದೆ.
ಫೋಟೋ ಕೃಪೆ : google
ದೇವಾಲಯದಲ್ಲಿ ವಿಶೇಷ ಪೂಜೆಗಳು ಮತ್ತು ಆಚರಣೆಗಳು:
1. ಆಷಾಢ ಹುಣ್ಣಿಮೆ (ಆಷಾಢ ಮಾಸದ ಹುಣ್ಣಿಮೆ)
2. ಶ್ರಾವಣ ಶುದ್ಧ ನಾಗರ ಪಂಚಮಿ
3. ಗೋಕುಲಾಷ್ಟಮಿ (ಶ್ರೀಕೃಷ್ಣನ ಜನ್ಮದಿನ)
4. ಗೌರಿ ತೃತೀಯ ದಿನ ನವನಾನ (ಪೋದ್ವಾರ)
5. ವಿನಾಯಕ ಚೌತಿ
6. ಸೌರ ಋಘುಪಕರ್ಮ
7. ಅನಂತ ಚತುರ್ಥಿ
8. ನವರಾತ್ರಿ
9. ದೀಪಾವಳಿ (ಬಲಿಯಿಂದ ಹೊರಡುವುದು)
10. ಕಾರ್ತಿಕ ಮಾಸ ಉತ್ಥಾನ ದ್ವಾದಶಿಯವರೆಗೆ ತುಳಸಿ ಪೂಜೆ ಮತ್ತು ದ್ವಾದಶಿ ದಿನದಂದು ಕ್ಷೀರಾಬ್ಧಿ.
11. ಕಾರ್ತಿಕ ಹುಣ್ಣಿಮೆ ದೀಪೋತ್ಸವ
12. ಮಹಾ ಶಿವರಾತ್ರಿ ದೀಪೋತ್ಸವ
13. ವಿಷು ಸಂಕ್ರಮಣ
14. ವೃಷಭ ಮಾಸ ಹುಣ್ಣಿಮೆ (ಬಲಿ ಸಜ್ಜಿಕೆ)
15. ಮಾರ್ಗಶಿರ ಶುದ್ಧ ಪಾಡ್ಯದಿಂದ ಮಾರ್ಗಶಿರ ಶುದ್ಧ ಷಷ್ಟಿಯವರೆಗೆ ವಾರ್ಷಿಕ ಉತ್ಸವ.
16. ಪುಷ್ಯ ಶುದ್ಧ 6ನೇ ದಿನ ಕಿರು ಷಷ್ಠಿ
17. ಧನುರ್ಮಾಸ ಶುದ್ಧ ಚತುರ್ಧಶಿಯಿಂದ ನಾಲ್ಕು ದಿನಗಳ ಹಬ್ಬ.
ಕುಡುಪು ದೇವಸ್ಥಾನದಲ್ಲಿ ಸುಮಾರು 15,000ಕ್ಕೂ ಮಿಕ್ಕಿ ನಾಗ ತಂಬಿಲ ಮತ್ತಿತರ ಸೇವೆಗಳು ನಡೆಯುತ್ತವೆ. ವಿವಿಧ ಕ್ಷೇತ್ರದ ನಾಗಸನ್ನಿಧಿಗಳಲ್ಲಿ ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ತಂಬಿಲ, ಸೀಯಾಳಾಭಿಷೇಕ ನೆರವೇರುತ್ತವೆ. ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಷ್ಟೇ ಪಾವಿತ್ರತೆ ಹೊಂದಿರುವ ಕುಡುಪು ಕ್ಷೇತ್ರದಲ್ಲಿ ನಾಗ ಸಂಬಂಧಿತ ಎಲ್ಲಾ ದೋಷಗಳಿಗೆ ಪರಿಹಾರವನ್ನು ಕಾಣಬಹುದಾಗಿದೆ.
ಆಶ್ಲೇಷಾ ಬಲಿ :
ಆಶ್ಲೇಷಾ ಬಲಿ ದೇವಾಲಯದ ಪ್ರಮುಖ ಸೇವೆಗಳಲ್ಲಿ ಒಂದಾಗಿದೆ. ಏಕಾದಶಿ ಮತ್ತು ವಾರ್ಷಿಕ ಉತ್ಸವದ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಈ ಸೇವೆಯನ್ನು ಮಾಡಬಹುದು. ಪ್ರತಿದಿನವೂ ಅನ್ನದಾನ ಸೇವೆ ಕೂಡ ನಡೆಯುತ್ತದೆ. ಈ ಸೇವೆಯು ಸಂಜೆ 5 ಗಂಟೆಗೆ ಪ್ರಾರಂಭವಾಗಿ ಸಂಜೆ 6.30 ರ ಸುಮಾರಿಗೆ ಕೊನೆಗೊಳ್ಳುತ್ತದೆ, ಏಕೆಂದರೆ ಆಶ್ಲೇಷಾ ನಕ್ಷತ್ರದ ದಿನದಂದು ಸೇವೆಗೆ ಹೆಚ್ಚಿನ ನೂಕುನುಗ್ಗಲು ಇರುತ್ತದೆ, ಏಕೆಂದರೆ ಸೇವೆಯು ರಾತ್ರಿ 11.00 ರವರೆಗೆ ಮುಂದುವರಿಯುತ್ತದೆ, ಅಂದು ಮಾತ್ರ ರಾತ್ರಿ ಅನ್ನವನ್ನು ನೀಡಲಾಗುತ್ತದೆ. ಭಕ್ತರು ಮತ್ತು ಭಾಗವಹಿಸುವವರು. ಈ ಸೇವೆಯಲ್ಲಿ ಭಾಗವಹಿಸುವವರಿಗೆ ವೈಯಕ್ತಿಕ ಗಮನ ನೀಡುವುದು ಈ ಕ್ಷೇತ್ರದ ವಿಶೇಷತೆಯಾಗಿದೆ.
ತಲುಪುವ ಬಗೆ :
ಕುಡುಪು ಅನಂತ ಪದ್ಮನಾಭ ಕ್ಷೇತ್ರವು ಮಂಗಳೂರು ನಗರದಿಂದ ಸುಮಾರು 8 ಕಿ.ಮೀ ದೂರದಲ್ಲಿದ್ದು, ಅದು ಮಂಗಳೂರು- ಮೂಡಬಿದ್ರೆ ರಾಜ್ಯ ಹೆದ್ದಾರಿಯಲ್ಲಿರುವುದು. ಶ್ರೀ ಕ್ಷೇತ್ರಕ್ಕೆ ಉತ್ತಮ ಬಸ್ ಸೌಕರ್ಯವಿದೆ. ಕುಡುಪು ಶ್ರೀ ಕ್ಷೇತ್ರವನ್ನು ತಲುಪಬೇಕಾದರೆ ಮೊದಲು ಮಂಗಳೂರನ್ನು ತಲುಪಬೇಕು. ಮಂಗಳೂರು ಸಿಟಿ ಬಸ್‌ಸ್ಟ್ಯಾಂಡ್ ಅಥವಾ ಸರ್ವಿಸ್ ಬಸ್ ಸ್ಟ್ಯಾಂಡ್‌ನಲ್ಲಿ ಕುಡುಪು ಕ್ಷೇತ್ರಕ್ಕೆ ಹೋಗುವ ಸಾಕಷ್ಟು ಬಸ್‌ಗಳು ಲಭ್ಯವಿದೆ. ಇನ್ನೂ ಮಂಗಳೂರಿನ ಯಾವುದೇ ಭಾಗದಿಂದಲೂ ಈ ಕ್ಷೇತ್ರಕ್ಕೆ ಟ್ಯಾಕ್ಸಿ ಮೂಲಕ ಹೋಗಬಹುದು.
‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದ ಹಿಂದಿನ ಸಂಚಿಕೆಗಳು :
- ನಾಗಲ ಮಡಿಕೆ ವರಪ್ರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ
- ಪರಮಶಿವನು ನೆಲೆಸಿರುವ ಅಮರನಾಥ ದೇವಾಲಯ
- ಗುರುರಾಯರು ನೆಲೆಸಿಹ ಮಂತ್ರಾಲಯ
- ಶ್ರೀ ಶರಭೇಶ್ವರ ದೇವಾಲಯ
- ಶ್ರೀ ಮಹಾಗಣಪತಿ ಕ್ಷೇತ್ರ : ಕುರುಡು ಮಲೆ
- ಸೌಮ್ಯ ಸನತ್