ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ, ಯಾದಗಿರಿ ಜಿಲ್ಲೆ.ಜಿಲ್ಲಾಧ್ಯಕ್ಷರು ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ.
ಕಹಿ ನೆನಪುಗಳ ಮರೆತು
ಸತಿ ಪತಿಗಳೊಂದಾಗಿ ಬೆರೆತು
ಬಾಳಿನ ಬಂಡಿ ದೂಡದ ಹೊರತು.
ಬಡತನದ ನೋವು ಮರೆತು
ದುಡಿಮೆ ಬೆವರುಗಳೊಂದಾಗಿ ಬೆರೆತು
ಸುಖ ನೆಮ್ಮದಿಯಿಲ್ಲ ದುಡಿಮೆಯ ಹೊರತು.
ಹೆಚ್ಚು ಕಡಿಮೆ ಭೇದವ ಮರೆತು
ಹಸಿರು ಉಸಿರೊಂದಾಗಿ ಬೆರೆತು
ನೀರು ಬೇರುಗಳೊಂದಾಗದ ಹೊರತು.
ದುಃಖ ದುಮ್ಮಾನಗಳ ಮರೆತು
ಒಲಿದ ಹೃದಯಗಳೊಂದಾಗಿ ಬೆರೆತು
ಮನಸು ಮನಸುಗಳು ಕೂಡದ ಹೊರತು.
ಕೆಡುಕಿನ ಗುಣವ ಮರೆತು
ಸ್ವರ ತಾಳಗಳೊಂದಾಗಿ ಬೆರೆತು
ಮಧುರ ಗಾನ ಹೊರಹೊಮ್ಮದ ಹೊರತು.
ದ್ವೇಷ ಅಸೂಯೆ ಮರೆತು
ಶುದ್ಧ ಮನಸುಗಳೊಂದಾಗಿ ಬೆರೆತು
ಬದುಕಲ್ಲಿ ಸತ್ಪಥವ ಹಿಡಿದು ಸಾಗದ ಹೊರತು.
ಮನದೊಳಗಿನ ನೋವು ಮರೆತು
ಹಾಲು ಜೇನಿನಂತೆ ಭಾವಗಳು ಬೆರೆತು
ಬದುಕಿನ ತೇರು ಮುಂದೆಳೆಯದ ಹೊರತು.
ದೀಪದ ಕೆಳಗಿನ ಕತ್ತಲೆ ಮರೆತು
ದೀಪದೆಣ್ಣೆ ಬತ್ತಿಗಳೊಂದಾಗಿ ಬೆರೆತು
ದೀಪಕ್ಕೆ ಬೆಳಕಿಲ್ಲ ಎಣ್ಣೆಬತ್ತಿ ಸೇರದ ಹೊರತು.
ಸುಡುವಾಗ್ನಿಯ ಮರೆತು
ಗಾಳಿ ಸುಗಂಧಗಳೊಂದಾಗಿ ಬೆರೆತು
ಬಾಯಿಗೆ ಮೊಸರಿಲ್ಲ ಕೈಕೆಸರಾಗದ ಹೊರತು.
ಭೇದ ಭಾವಗಳ ಮರೆತು
ಬೇವು ಬೆಲ್ಲದಂತೊಂದಾಗಿ ಬೆರೆತು
ಸರ್ವರೂ ಸಮವೆಂಬ ಭಾವ ತಾಳದ ಹೊರತು.
- ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ