ನಗುಮೊಗದ ‘ಹೂ ಹುಡುಗಿ’ : ಲಕ್ಷ್ಮಿ ನಾಡಗೌಡಕ್ಯಾಮೆರಾ ಹಿಂದೆ ಪಟ ಪಟ ಅರಳು ಹುರಿದಂತೆ ಮಾತಾಡುವ ಖ್ಯಾತ ಕಿರುತೆರೆ ನಟಿ ಲಕ್ಷ್ಮಿ ನಾಡಗೌಡ, ‘ಕ್ಯಾಮೆರಾ – ರೂಲಿಂಗ್- ಆಕ್ಷನ್’ ಅಂತಿದ್ದ ಹಾಗೆಯೆ ಅವರಲ್ಲಿ ಬರುವ ಗಾಂಭೀರ್ಯತೆ, ಅವರಲ್ಲಿನ ಕಲೆಯ ಮೇಲಿನ ಶ್ರದ್ದೆಯನ್ನು ಎತ್ತಿ ತೋರಿಸುತ್ತದೆ,  ಅವರ ಅನುಭವದ ಬುತ್ತಿಯನ್ನು ಆಕೃತಿಕನ್ನಡದಲ್ಲಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ… 

‘ಯಾಕೋ, ಅಪ್ಪ ಹಿಂದುಳಿದು ಬಿಟ್ಟ…’ ಅಂತ ಹೇಳ್ತಾರೆ, ಆದ್ರೆ ನನ್ನಪ್ಪ ಎ. ಆರ್ ಕಬ್ಬೇರಳ್ಳಿ ಯಾವಾಗಲೂ ನನ್ನ ಮುಂದೆಯೇ ಇರುತ್ತಿದ್ದ. ಒಂದು ರೀತಿ ನನ್ನ ಬಾಳಿನ ನಂದಾ ದೀಪ ಅಪ್ಪ ಆಗಿದ್ದ ಅಂತ ಹೇಳಬಹುದು. ಧಾರವಾಡದ ಯಾವ ಮೂಲೆಯಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿ, ಸ್ಪರ್ಧೆಗಳಿರಲಿ ಅಪ್ಪ ನನ್ನ ಹೆಸರು ಕೊಟ್ಟು ಬರುತ್ತಿದ್ದ. ಅಪ್ಪನ ಮಾತಿಗೆ ನಾನು ಕೂಡಾ ದೂಸರಾ ಮಾತನಾಡದೆ ಭಾಗವಹಿಸಿ ಬರುತ್ತಿದ್ದೆ. ಅದರಲ್ಲೂ ಬಹುಮಾನ ಬಂದ್ರಂತೂ ನನ್ನ ಹಾಗೂ ನಮ್ಮಪ್ಪನ್ನ ಹಿಡಿಯೋರೆ ಯಾರು ಇರತ್ತಿರಲಿಲ್ಲ.ತಮ್ಮ ಹಾಗೂ ಅಪ್ಪನ ಒಡನಾಟದ ಬಗ್ಗೆ ಹೇಳುತ್ತಾ ತಾವು ನಡೆದ ಬಂದ ಹಾದಿಯ ಬಗ್ಗೆ ಖ್ಯಾತ ರಂಗಭೂಮಿ, ಕಿರುತೆರೆ ನಟಿ ಲಕ್ಷ್ಮಿ ನಾಡಗೌಡ ( ಲಕ್ಷ್ಮೀ ಕಬ್ಬೇರಳ್ಳಿ) ಅವರು ಹೇಳುತ್ತಾರೆ.

ಒಂದು ಕಲೆ ಬೆಳೆಯಬೇಕಾದರೆ ಅದನ್ನ ಪೋಷಿಸುವವರು ಇರಬೇಕು. ಅಂದಾಗ ಮಾತ್ರ ಆ ಕಲೆ ನಕ್ಷತ್ರವಾಗಿ ಮಿಂಚುತ್ತೆ. ಅಪ್ಪ ನನ್ನಲ್ಲಿನ ಕಲೆಯನ್ನು ಪೋಷಿಸುತ್ತಿದ್ದ. ಅಂತಹ ಕಲಾ ಆರಾಧಕ ಒಂದು ದಿನ ಆಕಷ್ಮಿಕ ಸಾವು  ಎಂದು ಭಾವುಕರಾಗುತ್ತಾರೆ. ಅಪ್ಪನಿಲ್ಲದೆ ಮನೆ ಬಣಬಣ ಆಗಿ ಹೋಯ್ತು. ಮನಸ್ಸು ಮಂಕಾಗಿ ಹೋಯಿತು. ಓದೋದ್ರಲ್ಲಿ ಆಸಕ್ತಿ ಇಲ್ಲವಾಯಿತು, ಒಂಟಿತನ ಕಾಡಲು ಶುರುಮಾಡಿತು. ಬೇಸರ ಕಳೆಯೋಕೆ ಬರವಣಿಗೆಯಲ್ಲಿ ತೊಡಗಿಸಿಕೊಂಡೆ. ಸಣ್ಣ ಸಣ್ಣ ಕವನ, ಕತೆಗಳನ್ನ ಬರೆಯೋಕೆ ಶುರುಮಾಡಿದೆ. ಆದ್ರೂ ಅಪ್ಪನ ನೆನಪು ಅಷ್ಟು ಸಲೀಸಾಗಿ ಮನಸ್ಸಿನಿಂದ ಹೋಗಲಿಲ್ಲ. ಆ ಆಘಾತ ನನ್ನ ಮನಸ್ಸಿನ ಮೇಲೆ ತುಂಬಾನೇ ಪ್ರಭಾವ ಬೀರಿತು. ಅಂತಹ ಸಮಯದಲ್ಲಿ ನನ್ನ ಸ್ನೇಹಿತೆ ಗೌರಿ, ಡೇಪರ್ ಅಸೋಸಿಯೇಷನ್ ಸಂಸ್ಥೆಯನ್ನು ಪರಿಚಯ ಮಾಡಿಕೊಟ್ಟಳು. ಅಲ್ಲಿ ಪರಿಚಯವಾಗಿದ್ದೆ ರಂಗಕರ್ಮಿ ಮುಕುಂದ ಮೈಗೂರು ಅವರು.

This slideshow requires JavaScript.

ಅವರು ಡೇಪರ್ ಅಸೋಸಿಯೇಷನ್ ಸಂಸ್ಥೆಯ ಸಂಚಾಲಕರಾಗಿದ್ದರು. ಅಂದಿನ ದಿನಗಳಲ್ಲಿ ಹಲವಾರು ನಾಟಕಗಳನ್ನು ಮಾಡಿಸಿ ಸಾಕಷ್ಟು ಹೆಸರು ಮಾಡಿದಂತಹ ಸಂಸ್ಥೆಯಾಗಿತ್ತು. ಅಂತಹ ಸಂಸ್ಥೆಯಲ್ಲಿ ಮಕ್ಕಳ ಶಿಬಿರವನ್ನ ಆಯೋಜಿಸಲಾಗಿತ್ತು, ಅಲ್ಲಿಂದ ನನ್ನ ರಂಗಭೂಮಿ ಕಲಿಕೆಯ ಆರಂಭ ಶುರುವಾಯಿತು. ‘ಹೆಡ್ದಾಯಣ’ ನಾನು ಅಭಿನಯಿಸಿದಂತಹ ಮೊದಲ ನಾಟಕ.  ಹೂ ಹುಡುಗಿ, ತಲೆದಂಡ, ಸ್ವಪ್ನ ವಾಸವದತ್ತ, ಗೋಕುಲ ನಿರ್ಗಮನ, ಅಗ್ನಿ ಮತ್ತು ಮಳೆ, ಮಾಮಾಮೂಷಿ, ಮುಂತಾದ ನಾಟಕದಲ್ಲಿ ಅಭಿನಯಿಸಿದೆ. ರಂಗ ನಿರ್ದೇಶಕರಾದ ಬಿ ವಿ ಕಾರಂತ, ಚಿದಂಬರರಾವ್ ಜಂಬೆ, ಕೆ ವಿ ಅಕ್ಷರ, ಪ್ರಸನ್ನ, ಜರ್ಮನಿಯ ಪ್ರಿಟ್ಜ್ ಬೆನವಿಟ್ಜ್, ಸುರೇಶ್ ಆನಗಳ್ಳಿ, ಸೂರಿ, ಜಯತೀರ್ಥ ಜೋಶಿ ಮುಂತಾದವರೊಂದಿಗೆ ಕೆಲಸ ಮಾಡಿದ ಅನುಭವ ಸಿಕ್ಕಿತು. ಅನಂತರ ಧಾರವಾಡದ ಪ್ರಕಾಶ್ ಗರುಡರ ಗೊಂಬೆಮನೆಯಲ್ಲಿ ಪೋಪೆಟ್ ಶೋ ಗಳನ್ನ ಕಲಿತು, ಸುಮಾರು 100 ಕ್ಕೂ ಹೆಚ್ಚು ಪೋಪೆಟ್ ಪ್ರದರ್ಶನವನ್ನ ನೀಡಿ ಯಶಸ್ವೀಯಾದೆ. ಅಲ್ಲಿಂದ ನನ್ನಲ್ಲಿ ಆತ್ಮವಿಶ್ವಾಸ ಇಮ್ಮಡಿಯಾಯಿತು. ಬೇರೆ ಬೇರೆ ಧ್ವನಿಗಳಲ್ಲಿ ಮಾತಾಡುವ ಶಕ್ತಿಯನ್ನು ಈ ಪೋಪೆಟ್ ಶೋ ನನಗೆ ಕಲಿಸಿ ಕೊಟ್ಟಿತು. ಸುಮಾರು ಆರು ಬೇರೆ ಬೇರೆ ರೀತಿ ಧ್ವನಿಯನ್ನು ನನ್ನ ಕಂಠದಲ್ಲಿ ತಗೆಯಬಲ್ಲೆ. ಮುದುಕಿ, ಮಗು, ನಾಯಿ… ಹೀಗೆ ಸುಮಾರು ಧ್ವನಿಗಳಲ್ಲಿ ಮಾತಾಡಬಲ್ಲೆ ಎಂದು ನಗುತ್ತ ಹೇಳುತ್ತಾರೆ ಲಕ್ಶ್ಮಿಯವರು.

‘ಬ್ಯಾಂಕ್ ಪರೀಕ್ಷೆ ಬರಿ…ಒಳ್ಳೆ ನೌಕರಿ ಸಿಕ್ತು ಅಂದ್ರ ಜೀವನ ಆರಾಮಾಗಿ ಸಾಗತೈತಿ…’ ಅಂತ ಅವ್ವ ನನ್ನ ಬೆನ್ನಿಗೆ ಬಿದ್ದಿದ್ದಳು. ಆದರೆ ರಂಗಭೂಮಿ ನನ್ನ ಆವರಿಸಿತೋ ಅಥವಾ ನಾನು ಅದರಲ್ಲಿ ಆವರಿಸಿಕೊಂಡೇನೋ ಗೊತ್ತಿಲ್ಲ. ಮನಸ್ಸೆಲ್ಲಾ ನಾಟಕದ ಸುತ್ತಲೇ ಸುತ್ತುತ್ತಿತ್ತು. ನನ್ನನ್ನು ಅರ್ಥಮಾಡಿಕೊಂಡ ಮುಕುಂದ ಮೈಗೂರು ಅವರು ‘ಇಕಿ ಬ್ಯಾಂಕು- ಗಿಂಕು, ನೌಕರಿ ಕೆಲಸಕ್ಕೆ ಮಾಡಿಸಿದವಳಲ್ಲ. ಇಕೀನ ಪೂರ್ಣಪ್ರಮಾಣದಲ್ಲಿ ರಂಗಭೂಮಿಯಲ್ಲಿ ತೊಡಗಿಸ್ಕೊಳೋಕ್ಕೆ ಬಿಡ್ರಿ. ಲಕ್ಷ್ಮೀನ್ನ ನೀನಾಸಂ ನಾಟಕ ಸಾಲಿಗೆ ನಾನು ಸೇರಸ್ತೀನಿ…’ ಅಂತ ಜವಾಬ್ದಾರಿ ತಗೆದುಕೊಂಡು ನನ್ನನ್ನ ನೀನಾಸಂನಲ್ಲಿ ಸೇರಿಸಿದರು.

ನೀನಾಸಂ ಒಂದು ರೀತಿ ಬೇರೆಯ ಪ್ರಪಂಚಕ್ಕೆ ನನ್ನನ್ನ ಕೊಂಡೊಯ್ಯಿತು ಅಂತಾನೆ ಹೇಳಬಹುದು. ನೀನಾಸಂ ಅಭಿನಯವನಷ್ಟೇ  ಹೇಳಿಕೊಡಲಿಲ್ಲ, ಬದುಕುವ ಕಲೆಯನ್ನು ಕೂಡಾ ಅಚ್ಚುಕಟ್ಟಾಗಿ ಹೇಳಿಕೊಟ್ಟಿತು. ಪರದೆ ಕಟ್ಟೋದು, ಮೇಕಪ್ ಮಾಡೋದು, ಸಾಂಪ್ರದಾಯಿಕ ಕುಣಿತ, ಸಂಗೀತ  ಹೀಗೆ  ತೆರೆಯ ಮುಂದೆ ಹಾಗೂ ಹಿಂದೆ ರಂಗ ಸಜ್ಜಿಕೆಗಳನ್ನು ಅಲ್ಲಿ ಕಲಿತೆವು. ದುಡ್ಡು ಬಂದಾಗ ಹೇಗೆ ನಿಭಾಯಿಸಬೇಕು, ದುಡ್ಡು ಇಲ್ಲದಾಗ ಹೇಗಿರಬೇಕು ಎನ್ನುವ ಮಾನಸಿಕ ಸಧೃಡತೆಯನ್ನು ಅಲ್ಲಿ ಕಲ್ತಿವಿ. ಅಲ್ಲಿ ಕಲಿತ ಪಾಠ ನಮ್ಮನ್ನು ಎಂತಹ ಪರಿಸ್ಥಿತಿಯಲ್ಲಿ ಕುಗ್ಗದಂತೆ ಮಾಡಿದೆ. ಇದಕ್ಕೆ ನೀನಾಸಂ ಉಸ್ತುವಾರಿ ಕೆ ವಿ ಸುಬ್ಬಣ್ಣಅವರಿಗೂ ಮತ್ತು ಅವರ ಮಗ ಕೆ ವಿ ಅಕ್ಷರ ಅವರಿಗೂ ಧನ್ಯವಾದಗಳನ್ನ ಹೇಳಬೇಕು ಎನ್ನುತ್ತಾರೆ ಲಕ್ಷ್ಮಿಯವರು.

ನನಗೆ ಹೆಸರು ತಂದು ಕೊಟ್ಟಂತಹ ನಾಟಕ ‘ಹೂ ಹುಡುಗಿ’. ಜಾರ್ಜ್ ಬರ್ನಾಡ್ ಶಾ ಅವರ ‘ಮೈ ಫೇರ್ ಲೇಡಿ’ ಇಂಗ್ಲಿಷ್ ನಾಟಕವನ್ನು ನಾಟಕಕಾರ ಜಯಂತ್ ಕಾಯ್ಕಿಣಿ ಅವರು ಕನ್ನಡಕ್ಕೆ ರೂಪಾಂತರ ಮಾಡಿದ್ದರು. ಅದರಲ್ಲಿ ಬರುವ ‘ಹೂ ಹುಡುಗಿ’ ಮುಖ್ಯ ಪಾತ್ರವನ್ನ ನಾನು ಮಾಡಿದ್ದೆ. ಆ ಪಾತ್ರ ಮಾಡಿದ ಮೇಲೆ ಎಲ್ಲರು ಲಕ್ಷ್ಮಿಯನ್ನ ಮರೆತೇ ಬಿಟ್ಟಿದ್ದರು. ಎಲ್ಲೇ ಹೋದ್ರು ಹೂ ಹುಡುಗಿ ಅಂತಲೇ ಕರೆಯೋಕೆ ಶುರು ಮಾಡಿದ್ರು ಎಂದು ತಮ್ಮ ಪಾತ್ರದ ಶಕ್ತಿಯ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ.

(ಗಂಗಾ ಧಾರಾವಾಹಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮೊದಲನೆಯ ಬಾರಿ ಸ್ವೀಕರಿಸಿದ ಸಂದರ್ಭ)

ಯಾವುದೇ ಪಾತ್ರಕೊಟ್ಟಾಗ ಅದು ದೊಡ್ಡದಿರಲಿ, ಸಣ್ಣದಿರಲಿ ಆ ಪಾತ್ರದಲ್ಲಿ ನಾನು ಹೊಕ್ಕಿ ಬಿಡುತ್ತಿದ್ದೆ. ಅಲ್ಲಿ ಲಕ್ಷ್ಮಿ ಇರುತ್ತಿರಲಿಲ್ಲ. ದೊಡ್ಡ ದೊಡ್ಡ ರಂಗಭೂಮಿ ನಟರಿಂದ ಸಾಕಷ್ಟು ಕಲಿತ್ತಿದ್ದೇನೆ. ಅದರಲ್ಲಿ ಹಿರಿಯ ಕಲಾವಿದರಾಗಿದ್ದ ಭಾಗೀರತಿ ಬಾಯಿ ಕದಂಬ ಅವರಿಂದ ರಂಗ ನಿಷ್ಠೆ ಮತ್ತು ಏಣಗಿ ನಟರಾಜ್ ಅವರಿಂದ ರಂಗ ತಂತ್ರಗಳನ್ನ ಕಲಿತೆ. ಹೀಗೆ ದೊಡ್ಡ ದೊಡ್ಡ ದಿಗ್ಗಜರ ನಡುವೆ ನಾನು ಬಣ್ಣ ಹಚ್ಚಿದ್ದು ಹೆಮ್ಮೆಯ ವಿಷಯ. ಮುಂದೆ ರಂಗಭೂಮಿಯಿಂದ ನೇರವಾಗಿ ಸಿನಿಮಾಕ್ಕೆ ಆಯ್ಕೆಯಾದೆ. ಅನಂತನಾಗ್ ಅವರ ‘ಗಂಗವ್ವ ಗಂಗಾಮಾಯಿ ಸಿನಿಮಾದಲ್ಲಿ ಅವರ ಜೊತೆ ಅಭಿನಯಿಸುವ ಅವಕಾಶ ಸಿಕ್ತು. ಅಂತರ ಗಿರೀಶ ಕಾರ್ನಾಡ ಅವರ ‘ಕಾನೂರ ಹೆಗ್ಗಡತಿ’ ಸಿನಿಮಾದಲ್ಲಿ ಗಂಗಿ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದರು. ಜೈ ಜಗದೀಶ ಅವರ ಪ್ರೊಡಕ್ಷನ್ ನ ‘ಮದನ’ ಸಿನಿಮಾದಲ್ಲಿ ಅಭಿನಯಿಸಿದೆ. ಹೀಗೆ ಶುರುವಾದ ನನ್ನ ಅಭಿನಯದ ಯಾತ್ರೆ ಕಿರುತೆರೆಯಲ್ಲಿಗೂ ಬರುವಂತೆ ಮಾಡಿತು. ಈಟಿವಿ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾದ  ಪಿ.ಶೇಷಾದ್ರಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಕಣ್ಣಾಮುಚ್ಚಾಲೆ, ಟಿ ಎನ್ ಸೀತಾರಾಂ ಅವರ ಮುಕ್ತಾ, ಮಳೆ ಬಿಲ್ಲು, ಉಮಾಶ್ರೀ ಅವರೊಂದಿಗಿನ ಕಿಚ್ಚು, ಮಹಾನವಮಿ, ಅರುಂಧತಿ , ದಾಸ ಪುರಂದರ, ತಾರಾ ಅವರೊಂದಿಗೆ ‘ಪರ್ವ’ ಧಾರವಾಹಿ,  ರಾಧಾ ಕಲ್ಯಾಣ (ಹೊಸದು) ,ಮಹಾನವಮಿ, ಗಂಗಾ ಸೇರಿದಂತೆ ಸುಮಾರು ಐವತ್ತುಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ.

(ಗಂಗಾ ಧಾರಾವಾಹಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಎರಡನೆಯ ಬಾರಿ ಸ್ವೀಕರಿಸಿದ ಸಂದರ್ಭ)

ನಾನು ಮಾಡಿದ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ. ಮೊದಲ ಧಾರಾವಾಹಿಗಳಲ್ಲಿ ಅಳುಮುಂಜಿ ಪಾತ್ರವಾದರೆ, ‘ಗಂಗಾ’ದಲ್ಲಿ ಗಟ್ಟಿಗಿತ್ತಿ ಅಜ್ಜಿಯ ಪಾತ್ರ, ‘ರಾಧಾ ಕಲ್ಯಾಣ’ ಧಾರಾವಾಹಿಯಲ್ಲಿ ಮಾಡರ್ನ್ ಹೆಣ್ಣು ಮಗಳ ಪಾತ್ರ. ಆ ಪಾತ್ರಕ್ಕಾಗಿ ನನ್ನ ಕೂದಲನ್ನು ಕೂಡಾ ಕತ್ತರಿಸಿಕೊಂಡೆ ಎಂದು ಜೋರಾಗಿ ನಗುತ್ತಾರೆ. ಅವರ ಗಂಗಾ ಧಾರಾವಾಹಿಯಲ್ಲಿನ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಕೂಡಾ ಪಡೆದಿದ್ದಾರೆ.

(ಮಗಳು ಕುಹೂ ಜೊತೆಗೆ ರಂಗಭೂಮಿ ನಟಿ, ಕಿರುತೆರೆ ಕಲಾವಿದೆ ಲಕ್ಷ್ಮಿ ನಾಡಗೌಡ)

ಆರತಿ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಮಿಠಾಯಿ ಮನೆ’ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದೆ, ಹಿರಿಯ ನಟಿಯೊಂದಿಗೆ ಸಮಯ ಕಳೆದದ್ದು ಅವಿಸ್ಮರಣೀಯ ಕ್ಷಣಗಳವು. ಅಷ್ಟು ದೊಡ್ಡ ನಟಿಗೆ ಯಾವ ಅಹಂ ಇರಲಿಲ್ಲ, ನಾವು ಇದ್ದಲ್ಲಿಗೆ ತಾವೇ ಊಟ ತಿಂಡಿ ತಂದುಕೊಡುತ್ತಿದ್ದರು. ನನ್ನನ್ನು ನೋಡಿ’ಲಕ್ಷ್ಮಿ… ನೀನು ನಮ್ಮ ಕಾಲದಲ್ಲೇ ಬಣ್ಣ ಹಚ್ಚಿದ್ದರೇ ದೊಡ್ಡ ನಾಯಕಿಯಾಗಿ ಮಿಂಚುತ್ತಿದ್ದೆ’ ಎಂದು ಅವರು ಹೇಳಿದುಂಟು ಎನ್ನುತ್ತ ನಾಚಿ ನೀರಾಗುತ್ತಾರೆ ಲಕ್ಶ್ಮಿಯವರು.

ಲಕ್ಷ್ಮಿಯವರು  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗದಲ್ಲಿ ಎಂ ಎ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ Rank ಪಡೆದಿದ್ದಾರೆ. ರಾಷ್ಟ್ರಮಟ್ಟದ”ಮಹಿಳೆಯರ ಸಮಸ್ಯೆ ಕುರಿತು” ಅನ್ನೋ ವಿಷಯಕ್ಕೆ 2000-2002 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ವತಿಯಿಂದ ‘ಜ್ಯೂನಿಯರ್ ಫೆಲೋಶಿಪ್’ ಗೆ ಆಯ್ಕೆಯಾದರು. ಸುದರ್ಶನ್ ದೇಸಾಯಿ ರಂಗ ಪ್ರಶಸ್ತಿ, ಝೀ ಕನ್ನಡ ವಾಹಿನಿಯಲ್ಲಿ ಸತತ ಎರಡು ವರ್ಷಗಳ ಕಾಲ ‘ಗಂಗಾ’ ಧಾರಾವಾಹಿಯಲ್ಲಿನ ಅಭಿನಯಕ್ಕೆThe best Actress Award ಸೇರಿದಂತೆ ಅನೇಕ ರಂಗ ಪುರಸ್ಕಾರಳು ಅವರನ್ನು ಅರಸಿ ಬಂದಿವೆ.

ವರುಣ್ ಕಟ್ಟಿಮನೆ ಅವರ ನಿರ್ದೇಶನದ ‘ಬಯಲು ಸೀಮೆ’ ಸಿನಿಮಾ ನನ್ನ ಬಹು ನಿರೀಕ್ಷಿತ ಸಿನಿಮಾವಾಗಿದ್ದು, ಸದ್ಯದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ. ರವಿಶಂಕರ್, ನಾಗಾಭರಣ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಇದರಲ್ಲಿ ನನ್ನದು ಒಳ್ಳೆ ಪಾತ್ರವಿದೆ, ದಯವಿಟ್ಟು ಎಲ್ಲರ ಈ ಸಿನಿಮಾವನ್ನು ನೋಡಿ, ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎನ್ನುತ್ತಾರೆ.

ಎನ್ ಎಸ್ ಶಂಕರ ಅವರ ನಿರ್ದೇಶನದಲ್ಲಿ ಮತ್ತೊಂದು ಚಿತ್ರ ಸಿದ್ಧವಾಗುತ್ತಿದೆ, ಮುಖ್ಯಭೂಮಿಕೆಯಲ್ಲಿ ಶ್ರುತಿ ಹರಿಹರನ್ ನಟಿಸಿದ್ದಾರೆ. ಪಾತ್ರದ ಬಗ್ಗೆ ಈಗಲೇ ನಾನು ಏನು ಹೇಳುವುದಿಲ್ಲ ಅದೆಲ್ಲ ಸಸ್ಪೆನ್ಸ್ ಅನ್ನುತ್ತಾ ಮಾತಿಗೆ ಪೂರ್ಣವಿರಾಮ ನೀಡುತ್ತಾರೆ …


  • ಶಾಲಿನಿ ಹೂಲಿ ಪ್ರದೀಪ್

5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW