‘ಮಂಗಳ ಮುಖಿಯರು’ ಪುಸ್ತಕ ಪರಿಚಯ – ಡಾ. ಪ್ರಕಾಶ ಬಾರ್ಕಿ“ಮಂಗಳಮುಖಿಯರ…” ಜಗತ್ತು ತೀರಾ ವಿಭಿನ್ನ. ಸಂತೋಷಕುಮಾರ್ ಮೆಹೆಂದಳೆ ಅವರ “ಮಂಗಳಮುಖಿಯರ ಸಂಗದಲ್ಲಿ ಓದಿದ ಪ್ರತಿಯೊಬ್ಬರ ದೃಷ್ಟಿಕೋನ ಬದಲಾಗುವುದರಲ್ಲಿ ಸಂದೇಹವಿಲ್ಲ.- ಡಾ. ಪ್ರಕಾಶ ಬಾರ್ಕಿ, ಮುಂದೆ ಓದಿ…

ಡಿಗ್ರಿ ಓದುವ ಸಂದರ್ಭ ಉತ್ತರ ಭಾರತದ ಪ್ರವಾಸದಲ್ಲಿದ್ದಾಗ “ರೈಲು” ಪ್ರಯಾಣದಲ್ಲಿ ಅತೀವ ಮುಜುಗರ ಮತ್ತು ಕಿರಿಕಿರಿ ಮಾಡಿದವರು “ಮಂಗಳ ಮುಖಿಯರು”.

ಅವರು ಚಪ್ಪಾಳೆ ತಟ್ಟುತ್ತಾ ಭಿಕ್ಷೆಗೆ ನಿಂತರೆ ದುಡ್ಡು ಕೊಡಲೇಬೇಕು, ಇಲ್ಲವಾದರೆ ಅಶ್ಲೀಲ ನಡುವಳಿಕೆ. ಮೈ ಮೇಲೆರಗುವ ದುರುಳುತನ, ನೇರ ತೊಡೆ ಸಂಧಿಗೆ ಕೈ ಹಾಕುವ ವಿಕೃತಕ್ಕೂ ಹೇಸದವರು. ಎದುರಿನ ಜನಸಾಮಾನ್ಯ ರೊಚ್ಚಿಗೆದ್ದು ಹೊಡೆದಾಟಗಳಾಗಬಹುದು ಆದರೆ ಹೆಚ್ಚಿನವರು ಅವರೆಡೆಗೆ ಅಸಹ್ಯತನ, ಅಸಹನೆ, ಅವ್ಯಕ್ತ ಕೋಪದಿಂದ ಹಣ ನೀಡಿ ತುರಂತ್ ಸಾಗಹಾಕುತ್ತಾರೆ‌.
ಮಂಗಳಮುಖಿಯರೇಕೆ ಹೀಗೆ!!? ಭಿಕ್ಷೆ ಏಕೆ? ಸಮಾಜದಿಂದ ಅಂತರ ಕಾಯ್ದುಕೊಂಡೋ ಅಥವಾ ತಿರಸ್ಕೃತ ಬಾಳು ಬದುಕುವುದೇಕೆ? ನಮ್ಮಿಂದ ಇವರು ವಿಭಿನ್ನರಾ!!?….. ಇವೆಲ್ಲಾ ವಿಷಯಗಳು ತಿಳಿಯಲು ನನ್ನ ಡಿಗ್ರಿ ಸಮಯದ ಅಧ್ಯಯನಗಳು, ಆಸ್ಪತ್ರೆಯಲ್ಲಿ ಡ್ಯೂಟಿಯಲ್ಲಿದ್ದಾಗಿನ ಭೇಟಿ ಸಹಾಯಕವಾದವು, ಆವಾಗಲೆ ಅವರೆಡೆಗಿನ ಭಾವ ಸಹಜವಾಗಿ ಬದಲಾಗಿ ಅವರು ನಮ್ಮಂತೆ ಎನ್ನುವ ಲಹರಿ ಮಿಡಿದಿದ್ದು.

ಗಂಡಸಿನಂತ ಬಿಡು ಬಿರುಸು ದೇಹದ ಒರಟುತನ, ಮನಸ್ಸಿನ ಝೇಂಕಾರ ಥೇಟು ಹೆಣ್ಣಿನಂತ ಮೃದು ಮೆದು.

ಇತ್ತ ಗಂಡಸಿನಂತೆ ಹೆಣ್ಣನ್ನು ಅಡರಲು ಮನಸ್ಸು ಸುತಾರಾಂ ಒಪ್ಪದು, ಹೆಣ್ಣಿನಂತೆ ಗಂಡಸಿನಾಳಕ್ಕೆ ಮೀಟಿ ಮಿಂದೇಳಲು ದೇಹ ಹೊಂದಾಣಿಕೆಯಿಲ್ಲ. ಇದೊಂದು “ತ್ರಿಶಂಕು” ಸ್ಥಿತಿ.
ಹದಿ ಹರೆಯದ ವಯಸ್ಸಿಗೆ ಗಂಡಸೊಳಗೆ ಮಿಸುಕುವ ಹೆಣ್ತನ. ಕೈ ಓಲಾಟ, ಬಳುಕುವ ಸೊಂಟ, ಮಾತಿನ ಧಾಟಿ ಥೇಟು ಹೆಣ್ಣಿನದು. ಗಂಡಸಿನ ಗಡಸುತನ ಮರೆಯಾಗಿ ಹೆಣ್ಣಾಗುವ ತೀವ್ರ ಭಾವದ ತುಡಿತ.

ಹೆಣ್ಣಿನ ಬಟ್ಟೆ, ಒಳತೊಡುಗೆ, ಉದ್ದ ಕೊದಲು, ಅಲಂಕಾರ ಸಾಮಗ್ರಿಗಳು ಸುಲಭವಾಗಿ ಭಾವೋದ್ರೆಕಗೊಳಿಸಿ ಮನಸ್ಸನ್ನು ಮೀಟಿ ಭಾವಾಂತರಂಗ ತುಂಬುತ್ತವೆ. ಗಂಡಸಿನ ಕುರುಹುಗಳು ಒಂದೊಂದೆ ಮರೆಯಾಗುವ ಸೂಕ್ಷ್ಮ ಕ್ಷಣಗಳು. ದೇಹದೊಳಗೆ ಸ್ಫುರಿಸುವ ಹಾರ್ಮೋನುಗಳ ಏರಿಳಿತದ ದಾಳಿ ತೀವ್ರ.

ಮನೆಯ ಮಗನ ಹೆಣ್ಣಿನಂತ ನಡೆ, ಜಾಗೃತಗೊಂಡ ಹೆಣ್ತನವನ್ನು ಯಾರೂ ಒಪ್ಪಲಾರರು. ತೀವ್ರ ವಿರೋಧಕ್ಕೆ ಘಾಸಿಯಾಗಿ ಬಿಡುವರು. ತಮ್ಮಿಚ್ಚೆಯಂತೆ ಹೆಣ್ಣಾಗಲು ಬಿಡದ ಮನೆಯನ್ನು ತೊರೆದು ಬಿಡುವ ಹಂತ ಅಪಾಯಕರ, ಬೆಂಕಿಯಿಂದ ಬಾಣಲೆಗೆ ಬೀಳುವ ಬದುಕದು.

ಮನೆಯವರ ವಿರೋಧ ಬೆನ್ನಿಗೆ ಕಟ್ಟಿಕೊಂಡೆ ದಿಕ್ಕು ದೆಸೆಯಿಲ್ಲದೆ ಅಪರಿಚಿತ ರಸ್ತೆಗೆ ಧುಮುಕುವ ಇವರಿಗೆ ಆಸರೆಯಾಗುವವರೆ ತಮ್ಮದೆ ಮನಸ್ಥಿತಿಯ ಮಂಗಳಮುಖಿಯರು. ಮುಂದೆ ತಮ್ಮದೆ ಘರಾಣಾ, ಕಟ್ಟುಪಾಡು, ಹಮಾಮ್ ವಾಸ, ಚೇಲಾತನ, ಬದುಕು ಬಂಡಿ ಎಳೆಯಲು ಭಿಕ್ಷೆ, ಅನಿವಾರ್ಯ ಸೆಕ್ಸ್ ವರ್ಕ್, ಖತ್ನಾ, ಹೆಣ್ಣಾಗಲು ಆಪರೇಷನ್, ಪೋಲಿಸರ ಕಿರುಕುಳ, ಪುಡಿರೌಡಿಗಳ ದುರುಳತನ… ಅಬ್ಬಬ್ಬಾ…!! ಒಂದಾ…ಎರಡಾ…!!

ಕಟ್ಟುಪಾಡುಗಳಿಲ್ಲದೆ ಮೆಲ್ನೋಟಕ್ಕೆ ಹೆಣ್ಣಾಗುವವರೆನೋ ನಿಜ, ಆದರೆ ಸುಖ, ತೃಪ್ತಿ ಎಂಬುದು ಎಂದಿಗೂ ಧಕ್ಕದ ನೀರೊಳಗಿನ ಚಂದ್ರಬಿಂಬ. ಮಂಗಳ ಮುಖಿಯರ ಬದುಕು ತಲ್ಲಣ, ಅಸಹನೀಯತೆ, ತಣಿಯದ ಭಾವಾತೀರೆಕದ ಗೂಡು‌.

ಇವರ ಬದುಕು ಬಲು ವಿಚಿತ್ರ ಜಗತ್ತು…

ಯಾರೂ ಇಣುಕಿ ಹಾಕದ ಆದರೆ ನೂರಾರು ಪ್ರಶ್ನೆ, ಕುತೂಹಲ, ಊಹಾಪೋಹ ತುಂಬಿಕೊಂಡ “ಮಂಗಳ ಮುಖಿಯರ” ಜಗತ್ತನ್ನು ಹೊಕ್ಕು ಅಧ್ಯಯನಕ್ಕಿಳಿದು ಬರಹಕ್ಕಿಳಿಸಿದವರು ಲೇಖಕ “ಸಂತೋಷಕುಮಾರ ಮೆಹಂದಳೆ”

ಯಾರೂ ತಟ್ಟದ ಜಗತ್ತಿನ ಬಾಗಿಲನ್ನು ತಟ್ಟಿ, ಒಳಹೊಕ್ಕು, ಅಧ್ಯಯನ ಮಾಡಿ ಜಗತ್ತಿಗೆ ಪರಿಚಯಿಸುವ ವಿಭಿನ್ನ ಮನೋಭಾವದ ಲೇಖಕರು. “ಆಡುಮುಟ್ಟದ ಸೊಪ್ಪಿಲ್ಲ” ಎನ್ನುವಂತೆ ಲೇಖಕ “ಮೆಹಂದಳೆ”ಯವರು ಬರಹಕ್ಕಿಳಿಸದ ವಿಷಯಗಳಿಲ್ಲ. ಈ ಮೊದಲು ಓದಿದ “ಅಘೋರಿಗಳ ಲೋಕದಲ್ಲಿ” ನನ್ನೊಳಗಿನ ಆಸಕ್ತನನ್ನು ತಣಿಸಿದ್ದು ಹೌದು. ಇವಾಗ “ಮಂಗಳ ಮುಖಿಯರ” ಬದುಕು.
“ಮಂಗಳಮುಖಿಯರ ಸಂಗದಲ್ಲಿ….” ಎನ್ನುವ ಅನುಭವ ಕಥನದ ಮೂಲಕ “ಹಿಜಡಾ”, ಒಂಭತ್ತು, ಕಿನ್ನರಿ, ಚೆಕ್ಕಾ ಎನಿಸಿಕೊಂಡವರ ಬದುಕನ್ನು ಇಂಚಿಂಚು ಬಿಚ್ಚಿಟ್ಟಿದ್ದಾರೆ.

ಲೇಖಕರು ವೈಜ್ಞಾನಿಕವಾಗಿ, ಸಾಮಾಜಿಕವಾಗಿ, ವೈಯಕ್ತಿಕವಾಗಿ “ಮಂಗಳಮುಖಿಯರ” ಬದುಕನ್ನು ಅಧ್ಯಯನಕ್ಕೊಳಪಡಿಸಿ ಈ ಪುಸ್ತಕದಲ್ಲಿ ಆಪ್ತವಾಗಿ ಬರೆದಿದ್ದಾರೆ, ಎಲ್ಲಿಯೂ ಅಶ್ಲೀಲವೆನಿಸದ ಪದಪುಂಜಗಳ ಬಳಕೆಯಿಂದ ಕೃತಿ ಓದುಗರ ಮನ ಮಿಡಿಯುವಂತೆ ಮಾಡುತ್ತದೆ.

ಲೇಖಕರ ಮಾನವೀಯ ನೆಲೆಗಟ್ಟಿನ ದೃಷ್ಟಿಕೋನ, ವೈಯಕ್ತಿಕ ಅನುಭವ, ಘಟನೆಗಳ ಸರಳ ನಿರೂಪಣೆ, ವೈಜ್ಞಾನಿಕ ವಿಶ್ಲೇಷಣೆ, ಸಾಮಾಜಿಕ ಬವಣೆಗಳನ್ನು ನಿರೂಪಿಸಿ… ಮಂಗಳಮುಖಿಯರ ಮನದಾಳದ ಮಾತಿಗೆ ಕಿವಿಯಾಗಿ ಸರಳ ಭಾಷೆಯಲ್ಲಿ ನಿರೂಪಣೆ ಮಾಡುವುದರ ಮೂಲಕ ಸಾಮಾನ್ಯ ಓದುಗನನ್ನ ಅಪರಿಚಿತ ಜಗತ್ತಿಗೆ ಸೆಳೆದು ಮನ ತಣಿಸುವ, ದೃಷ್ಟಿಕೋನ ಬದಲಿಸುವ ಚಾಕಚಕ್ಯತೆ ಬಹು ಯಶಸ್ಸು ಕಂಡಿದೆ.“ಮಂಗಳಮುಖಿಯರ…” ಜಗತ್ತು ತೀರಾ ವಿಭಿನ್ನ. ಮನೆಯ ಮೂಲೆಯಿಂದ ಶುರುವಾಗಿ, ಅಪರಿಚಿತವಾಗಿ ಕೊನೆಯಾಗುವ ತನಕ ಹಾದುಹೋಗುವ ತಿರುವುಗಳು, ಏರಿಳಿತಗಳು ಆಘಾತಕಾರಿ.
ಎಲ್ಲವನ್ನೂ ಲೇಖಕರು ಸರಳ ನಿರೂಪಣೆ ಮೂಲಕ ಅನುಭವ ಕಥನ ಬರೆದು ಕೈಗಿಟ್ಟಿದ್ದಾರೆ.

“ಮಂಗಳಮುಖಿಯರ ಸಂಗದಲ್ಲಿ…” ಓದಿದ ಪ್ರತಿಯೊಬ್ಬರ ದೃಷ್ಟಿಕೋನ ಬದಲಾಗುವುದರಲ್ಲಿ ಸಂದೇಹವಿಲ್ಲ. ಮಂಗಳಮುಖಿಯರು ಎದುರಾದರೆ ಮಾನವೀಯ ನೋಟ ದಕ್ಕುವುದು ದಿಟ.
ಇದು ಲೇಖಕ “ಸಂತೋಷಕುಮಾರ ಮೆಹಂದಳೆ”ಯವರ ಪೆನ್ನಿಗಿರುವ ತಾಕತ್ತು. ಅದ್ಭುತವಾಗಿ ಬರೆದಿದ್ದೀರಾ ಸರ್. ತಮ್ಮ ಬರಹ ಬದುಕು ಹೀಗೆ ಸಾಗಲಿ‌.

ಸಂತೋಷಕುಮಾರ್ ಮೆಹೆಂದಳೆ
ಪುಸ್ತಕ: ಮಂಗಳಮುಖಿಯರ ಸಂಗದಲ್ಲಿ….
ಲೇಖಕರು: ಸಂತೋಷಕುಮಾರ ಮೆಹಂದಳೆ.
ಪ್ರಕಾಶಕರು: ಸ್ನೇಹ ಬುಕ್ ಹೌಸ್. ಬೆಂಗಳೂರು.
ಪುಸ್ತಕ ಬೇಕಾದವರು 9448996165 ವಾಟ್ಸಾಪ್ ಮೂಲಕ ಲೇಖಕರನ್ನು ಸಂಪರ್ಕಿಸಿ ಪಡೆಯಬಹುದು.


  • ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW