‘ಮಾಯಾಮೃಗ’ ಕವನ – ಲತಾ ಬನಾರಿ



ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗಲು ತನ್ನ ಮಾವನನ್ನು ಮಾಯಾಜಿಂಕೆಯಾಗಿ ಹೋಗೆಂದು ಹೇಳಿ ಪಂಚವಟಿಯ ಎದುರು ಹರಿಣವು ನರ್ತಿಸುವಲ್ಲಿಂದ ಜಾನಕಿಯ ಅಪಹರಣದವರೆಗಿನ ಕಥಾನಕವನ್ನು ಭಾಮಿನಿ ಷಟ್ಪದಿಯಲ್ಲಿ ಬರೆಯಲು ಯತ್ನಿಸಿರುವೆ.

ಪಂಚವರ್ಣದ ಹರಿಣ ಮೃಗವದು
ಸಂಚು ಹೂಡುತ ಬಂದು ನಿಂತಿದೆ
ಪಂಚವಟಿಯಲಿ ಸೀತೆ ಜಿಂಕೆಯ ಕಂಡು ಮರುಳಾದಳ್
ಹೊಂಚು ಹಾಕುತ ನೃತ್ಯ ಮಾಡುತ
ವಂಚನೆಯ ಮಾಡಲ್ಕೆ ನೋಡುತ
ಮಿಂಚಿನಂತೆಯೆ ಮಿಂಚಿ ಕಾನನದತ್ತ ಸಾಗಿಹುದು

ಒಮ್ಮೆ ನೋಡಿರಿ ದೇವ ನೀವೂ
ಸುಮ್ಮನೇತಕೆ ನಿಂತುಬಿಟ್ಟಿರಿ
ನಮ್ಮ ಪರ್ಣದ ಮಂದಿರವ ನೋಡಲ್ಕೆ ಬಂದಿಹುದು
ಹಮ್ಮು ಬೇಡವು ನಿಮಗೆಯೀಪರಿ
ತಮ್ಮ ಲಕ್ಷ್ಮಣನೊಡನೆ ಸೇರುತ
ದಮ್ಮಯಾ ನೀವೆನಗೆ ಜಿಂಕೆಯ ತಂದು ಕೊಡಬೇಕು

ಹೊನ್ನ ಬಣ್ಣವ ನೀವು ನೋಡಿರಿ
ಬನ್ನಿರಿಲ್ಲಿಗೆ ಬೇಗ ಬೇಗನೆ
ನನ್ನ ಮನದಲ್ಲದನು ಪಡೆಯುವ ಬಯಕೆಯಾಗಿಹುದು
ತನ್ನಿ ನೀವದನಿಲ್ಲಿಗೀಕ್ಷಣ
ಘನ್ನ ಮಹಿಮನೆ ಮನವ ಮಾಡಿರಿ
ಬನ್ನ ಬವಣೆಗಳಿಲ್ಲದೆಯೆ ನೀವದನು ತರಬೇಕು

ಎಂದು ಸೀತೆಯು ರಾಮನಿದಿರಲಿ
ಬಂದು ನಿಂತಳು ಮೃಗವ ಹೊಗಳುತ
ಮುಂದೆಯೇನಾಗುವುದು ಯೆನ್ನುವ ಚಿಂತೆಯಿಲ್ಲದೆಯೇ
ತಂದುಕೊಡಿ ನೀವೆನಗೆ ಹರಿಣವ
ನೆಂದು ನಾನಾ ವಿಧಧಿ ಹೇಳಿದ
ಳಿಂದುಮುಖಿ ಜಾನಕಿಯು ಜಿಂಕೆಯ ನೆನೆದು ಪರಿತಪಿಸಿ

ಕೊಂದು ತಂದರೆ ಕುಪ್ಪಸಕೆ ಸರಿ
ಹೊಂದಿಸುವೆ ನಾನದರ ಚರ್ಮವ
ಚಂದ ಕುಣಿಯುವ ಪೊಂಮೃಗವ ತರಲೇಕೆ ಯೋಚನೆಯು
ಗೊಂದಲವು ನಿನಗೇಕೆಯೀಪರಿ
ನೊಂದುಕೊಳದಿರು ನೀನು ಸುಮ್ಮನೆ
ಬಂದ ಮೃಗವದು ನೈಜವಲ್ಲವು ಖಳರ ಕೃತ್ರಿಮವು

ಆಗದಾಗದು ಹೇಳಬೇಡಿರಿ
ಬೇಗನೇ ಹುಡುಕುತಲಿ ತನ್ನಿರಿ
ಹೋಗಿರೀಕ್ಷಣ ಮರಿಯು ಹೊಳೆಯನು ದಾಟಿದರೆ ಕಷ್ಟ
ಹಾಗೆ ಸುಮ್ಮನೆ ನಿಲ್ಲಬೇಡಿರಿ
ಸಾಗಿರೀಕ್ಷಣವೆನಲು ರಾಮನು
ಹೋಗುವೆನು ನಾನೆಂದು ತಮ್ಮನ ಬಳಿಗೆ ಕರೆದಿಹನು

ಏನು ಸೋದರ ತಮ್ಮ ಲಕ್ಷ್ಮಣ
ನೇನು ಸುಮ್ಮನೆಯೆಂದುಕೊಂಡೆಯ
ನಾನು ಹೋಗುವೆ ಹೊನ್ನ ಬಣ್ಣದ ಮೃಗವ ಹಿಡಿಯುವೆನು
ಕಾನನದ ಬಳಿ ನಾನು ಹೋಗುವೆ
ನೀನು ಸೀತೆಯ ನೋಡಿಕೊಳ್ಳೋ
ಬಾನು ಭೂಮಿಯು ನನ್ನ ರಕ್ಷಣೆಗಿಹುದು ಹೊರಡುವೆನು

ಎನುತ ಹೋದನು ರಾಮನಡವಿಗೆ
ಸನಿಹ ಬಾರದೆ ಜಿಂಕೆಯೋಡಿತು
ಮನದ ಸಂಶಯ ಸತ್ಯವೆನಿಸಲು ಶರವ ಹೂಡಿದನು
ತನುವಿಗದು ನಾಟುತಿರೆ ರಕ್ಕಸ
ದನಿಯ ಹೊರಡಿಸಿ ಕೂಗಿದನು ತಾ
ಚಣದಿ ರಾಮನ ಕಂಠವನ್ನನುಸರಿಸಿ ಸೀತೆಯನು

ತನ್ನ ರಾಮನ ದನಿಯು ಕೇಳುತ
ಳಿನ್ನು ತಡವನು ಮಾಡಬೇಡವೊ
ಮುನ್ನ ಲಕ್ಷ್ಮಣ ಹೊರಡು ಕಾನನಕೆಂದು ಹೇಳಿದಳು
ಅಣ್ಣನಾ ದನಿಯಲ್ಲವತ್ತಿಗೆ
ಯೆನ್ನಲಾಕ್ಷಣ ಕೋಪಗೊಂಡಳು
ನನ್ನ ಪಡೆಯುವ ನೀಚ ಮನಸೋ ಯೆಂದು ಕೇಳಿದಳು

ಸೀತೆಯಾಡಿದ ನುಡಿಯ ಕೇಳುತ
ಭೀತನಾದನು ಲಕ್ಷ್ಮಣನು ತಾ
ಸೋತು ಹೋದನು ಕಿವಿಯ ಮುಚ್ಚುತ ಹೇಳಿದನು ಹೀಗೆ
ಮಾತೆ ಭಯಪಡಬೇಡಿ ಸುಮ್ಮನೆ
ಘಾತವಾಗದು ನಿಮ್ಮ ಮನಸಿಗೆ
ಮಾತಿದೊಂದಿದೆ ಸಪ್ತ ಗೆರೆಯನು ದಾಟಿ ಬರಬೇಡಿ

ಏಳು ಗೆರೆಯನು ಹಾಕಿ ಲಕ್ಷ್ಮಣ
ಹೇಳಿದನು ಖಗ ಮೃಗವು ವೃಕ್ಷಕೆ
ಕೇಳಿ ನನ್ನಯ ಮಾತೆ ಸೀತೆಯ ರಕ್ಷಿಸಿರಿ ನೀವು
ಹಾಳು ಮನದವರಿಹರು ಕಾಡಲಿ
ಖೂಳ ರಕ್ಕಸ ದಾನವರು ತಾವ್
ಗಾಳ ಹಾಕುತ ಮೀನು ಹಿಡಿಯುವ ತೆರದಿ ಕುಳಿತವರು

ಎಂದು ಹೇಳುತ ಹೊರಡೆ ಲಕ್ಷ್ಮಣ
ಬಂದು ಬಿಟ್ಟನು ರಾವಣನು ತಾ
ನಂದು ಯತಿಗಳ ರೂಪದಲಿ ವೇಷವನು ಬದಲಿಸುತ
ನೊಂದಿರುವ ಸೀತೆಯನು ಕಾಣುತ
ಮಂದಗಮನೆಯೆ ನೀಡು ಭಿಕ್ಷೆಯ
ನೆಂದು ಕೇಳಿದ ಕಪಟಿ ಯತಿಯದೊ ಭೂಮಿಜೆಯಳೊಡನೆ

ಕೊಡುವೆನಾದರೆ ಹೇಗೆ ಬರುವುದು
ತಡೆಯದೊಂದಿದೆ ಸಪ್ತ ಗೆರೆಯಿದು
ಕಡೆಯವರೆಗೂ ನನ್ನ ಕಾಯ್ವುದು ಕೇಳಿರೆಂದಿಹಳು
ಅಡಗಿ ಕುಳಿತಿಹ ರಕ್ಕಸರು ಬರು
ವೆಡೆಗೆ ಬೇಕಿದು ನೈಜವಾದರೆ
ಬಿಡಿರಿ ಭಯವನು ನಾವು ಸಾಧುಗಳಮ್ಮ ಕೊಡಿ ಭಿಕ್ಷೆ

ಯತಿಯ ಹಸಿವನು ನೀಗದೆಯೆ ನೀವ್
ಕಥೆಯ ಹೇಳುವಿರೇನು ಕೇಳಿರಿ
ಮತಿಯ ಕೆಟ್ಟವರಂತೆ ವರ್ತಿಸೆ ಶಾಪ ಹಾಕುವೆನು
ಖತಿಯಗೊಳ್ಳುವಿರೆಲ್ಲ ನಂತರ
ಗತಿಯ ಕಾಣಿಪೆನೊಂದು ತೆರದಲಿ
ಪತಿಯ ನೆನೆಯುತ ನಿಂತು ಬಿಡದೆಯೆ ನೀಡು ಭಿಕ್ಷೆಯನು

ಮುನಿಗಳಾಡಿದ ಮಾತು ಕೇಳುತ
ಮನವ ಬದಲಾಯಿಸಿದಳು ಸೀತೆಯು
ಸನಿಹ ಹೋಗುತ ಭಿಕ್ಷೆ ನೀಡಲು ರಾವಣನು ನಕ್ಕ
ತನಗೆ ಸಿಕ್ಕಳು ಸೀತೆಯೆನ್ನುತ
ಚಣದಿ ತೋರಿದ ನೈಜ ರೂಪವ
ವನಿತೆಯಪಹರಣವನು ಮಾಡುತ ಹಾರಿದನು ಮೇಲೆ.


  • ಲತಾ ಬನಾರಿ (ಕವಯಿತ್ರಿ)
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW