ಮಕ್ಕಳು ನಮ್ಮಾಟಿಕೆಯ ವಸ್ತುಗಳೇ? – ವಸಂತ ಗಣೇಶ್



ಪಾಲಕರ ಆಸೆಗಳಿಗೆ ಮಕ್ಕಳು ಬಲಿಯಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಮಕ್ಕಳ ಆಸೆಗಳಿಗೆ ಬೆಲೆ ಕೊಡಿ. ಮಕ್ಕಳ ಉತ್ತಮ ಬೆಳವಣಿಗೆಯ ಬಗ್ಗೆ ಒಂದು ಚಿಂತನ ಲೇಖನವನ್ನು ವಸಂತ ಗಣೇಶ್ ಅವರು ಓದುಗರಿಗೆ ನೀಡಿದ್ದಾರೆ. ಓದಿ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ…

ನಂಗೆ ಸಂಗೀತ ಕಲೀಬೇಕು ಅಂತ ಆಸೆ ಇತ್ತು, ಆದ್ರೆ ಮನೇಲಿ ಅನಾನುಕೂಲ ಇತ್ತು ಹಾಗಾಗಿ ಆಗ್ಲೇ ಇಲ್ಲ, ಅದಕ್ಕೆ ನನ್ನ ಮಗಳನ್ನು ಸಂಗೀತಕ್ಕೆ ಕಳಿಸ್ತ ಇದ್ದೀನಿ. ನಂಗೆ ಡ್ಯಾನ್ಸ್ ಕಲಿಬೇಕಾಗಿತ್ತು ಆಗ್ಲಿಲ್ಲ ಮಗನ್ನ ಹೆಸರಾಂತ ಕಲಾವಿದರ ಹತ್ತಿರ ಸೇರಿಸಿದ್ದಿನಿ. ಹೀಗೆಲ್ಲ ಮಾತುಗಳನ್ನು ಆಗಾಗ ಕೇಳ್ತಾ ಇರುತ್ತೇವೆ ಅಲ್ಲವೇ. ಆದರೆ ಇದು ಎಷ್ಟು ಸರಿ?

ನಮಗೆ ಆಗಲಿಲ್ಲ ಅಂದದ್ದನ್ನು ನಮ್ಮ ಮಕ್ಕಳು ಮಾಡಿ ತೋರಿಸಲಿ ಅನ್ನೋದು ಎಲ್ಲ ಪೋಷಕರ ಆಶಯವೇ ಆದರೂ ಅದಕ್ಕೂ ಒಂದು ಮಿತಿ ಇರುತ್ತದೆ. ಏನೇನೂ ಇಷ್ಟವಿಲ್ಲದ ಮಕ್ಕಳನ್ನು ಸಂಗೀತ, ಡ್ಯಾನ್ಸ್, ಡ್ರಮ್ಸ್, ಕ್ರಿಕೆಟ್, ಸ್ವಿಮ್ಮಿಂಗ್ ಅಂತ ಎಲ್ಲದಕ್ಕೂ ಸೇರಿಸಿ, ಹಣ ಕಟ್ಟಿ ಸಮಯ ಹೊಂದಿಸಿ ಮಕ್ಕಳನ್ನು ಕರೆದುಕೊಂಡು ಹೋಗಿ ಬಿಟ್ಟು, ಕೆಲವೊಮ್ಮೆ ಅಲ್ಲೇ ಕುಳಿತು ವಾಪಸ್ ಕರೆತರುವ ಪೋಷಕರಲ್ಲಿ ಅದೆಷ್ಟೋ ಜನಕ್ಕೆ ತಿಳಿದೇ ಇರುವುದಿಲ್ಲ ನಮ್ಮ ಮಗುವಿಗೆ ಅದು ಸ್ವಲ್ಪವೂ ಇಷ್ಟವಿಲ್ಲ, ತಮ್ಮ ಕಾಟಕ್ಕೆ ಹೋಗುತ್ತಿರುತ್ತಾರೆ ಅಂತ.

ಫೋಟೋ ಕೃಪೆ : libertyparkmusic (ಸಾಂದರ್ಭಿಕ ಚಿತ್ರ)

ನಾವು ಸುಮಾರು ವರ್ಷಗಳಿಂದ ನೋಡುತ್ತಿರುವ ಕುಟುಂಬದಲ್ಲಿ ಒಂದು ಹೆಣ್ಣು ಇನ್ನೊಂದು ಗಂಡು ಮಗು, ಶಾಲೆಯ ಜೊತೆಗೆ ಸಂಗೀತ, ಭರತನಾಟ್ಯ, ಸ್ವಿಮ್ಮಿಂಗ್, ಡ್ರಾಯಿಂಗ್ ಎಲ್ಲದಕ್ಕೂ ಸೇರಿಸಿದ್ದಾರೆ. ಐದಾರು ವರ್ಷಗಳಿಂದ ಎಲ್ಲಾ ಕ್ಲಾಸ್ ಗಳಿಗೆ ಹೋದರೂ ಒಂದು ದಿನವೂ ,”ಸ ಪ ಸ”ಹೇಳಿದ್ದು ಕೇಳಿಲ್ಲ, ಒಂದು ಸಣ್ಣ ಚಿತ್ರ ಬಿಡಿಸಿದ್ದು ನೋಡಿಲ್ಲ ಹಾಗೆ ಭರತನಾಟ್ಯ ಕೂಡಾ. ಆದರೆ ಆ ತಂದೆ ತಾಯಿಗೆ ನಮ್ಮ ಮಕ್ಕಳು ಎಲ್ಲದಕ್ಕೂ ಹೋಗ್ತಾರೆ ನಾವು ತಿಂಗಳಿಗೆ ಇಷ್ಟು ದುಡ್ಡು ಇದಕ್ಕೆ ಖರ್ಚು ಮಾಡುತ್ತಿವಿ ಅಂತ ಹೇಳಿಕೊಂಡು ತಿರುಗುವ ಹುಚ್ಚು. ಜೊತೆಗೆ ಮೂರು ನಾಕು ತಿಂಗಳಿಗೆ ಒಮ್ಮೆ ಕಲಿಸುವ ಗುರುಗಳನ್ನು ಬದಲಾಯಿಸುವುದು, ಅವರು ಸರಿ ಇಲ್ಲ, ನಮ್ಮ ಮಗುವಿನ ಕಡೆ ಗಮನ ಕೊಡೋಲ್ಲ, ಕ್ಲಾಸಿನಲ್ಲಿ ಹಿಂದೆ ಕೂರಿಸುತ್ತಾರೆ ಹೀಗೇ ಏನಾದರೂ ಒಂದು ಕಾರಣಗಳು. ನಾವು ಕಂಡ ಹಾಗೆ ಐದಾರು ಜನ ಗುರುಗಳು ಆಗಿದ್ದಾರೆ ಪ್ರತೀ ವಿಷಯಕ್ಕೂ. ಆದರೂ ಕಲಿಕೆ ಮಾತ್ರ ಸೊನ್ನೆ. ಇವರ ಮಕ್ಕಳಿಗಿಂತ ಆಮೇಲೆ ಸೇರಿದ ಮಕ್ಕಳು ಕಲಿತು ಸಂಗೀತ ಭರತನಾಟ್ಯ ಪರೀಕ್ಷೆ ಕಟ್ಟಿ ಪಾಸ್ ಅಗಿದ್ದರೆ ಈ ಮಕ್ಕಳು ಮಾತ್ರ ಇನ್ನೂ ಪರೀಕ್ಷೆ ಕಟ್ಟಲು ಆಗಿಲ್ಲ. ಇಲ್ಲಿ ಮಕ್ಕಳ ತಪ್ಪು ಏನೇನೂ ಇಲ್ಲ. ತಂದೆ ತಾಯಿಗಳು ಸಮಾಜದಲ್ಲಿ ನಾವು ನಮ್ಮ ಮಕ್ಕಳಿಗೆ ಎಲ್ಲ ಕೊಡುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಮಾತ್ರ ಸೇರಿಸಿರುವುದರ ಪರಿಣಾಮ ಇದು.

ಶಾಲೆಯ ನಂತರ ಇಷ್ಟೆಲ್ಲಕ್ಕೂ ಸಮಯ ಹೊಂದಿಸಿಕೊಂಡು ಹೋಗಿ ಬಂದ ಆ ಮಕ್ಕಳಿಗೆ ಶಾಲಾ ವಿಷಯಗಳಲ್ಲೂ ಆಸಕ್ತಿ ಇಲ್ಲ, ಎಲ್ಲ ಟೆಸ್ಟ್ ಗಳಲ್ಲಿ ಕಡಿಮೆ ಅಂಕ ತೆಗೆದುಕೊಳ್ಳುವಾಗ ಮತ್ತೆ ಇದೇ ಕಥೆ. ನಾವು ಲಕ್ಷ ಲಕ್ಷ ಕೊಟ್ಟು ಇಂತ ಶಾಲೆಗೆ ಸೇರಿಸಿದೆವು, ಅವರು ಮಕ್ಕಳಿಗೆ ಸರಿಯಾಗಿ ಕಲಿಸುವುದಿಲ್ಲ ಎಂದು. ಈಗಾಗಲೇ ಎರಡು ಶಾಲೆಗಳನ್ನೂ ಬದಲಾಯಿಸಿ ಆಗಿದೆ, ಎಲ್ಲದರಲ್ಲೂ ಕೊಂಕು ಹುಡುಕುವುದೇ ತಂದೆ ತಾಯಿಯರ ಕಾಯಕವಾಗಿದೆ ಯೇ ಹೊರತು, ಇಷ್ಟಾದರೂ ಒಮ್ಮೆಯೂ ಮಕ್ಕಳನ್ನು ಕೂರಿಸಿಕೊಂಡು ನಿಮಗೇನು ಇಷ್ಟ ಎಂದು ಕೇಳುವ ಪ್ರಯತ್ನ ಮಾಡೇ ಇಲ್ಲ ಅವರು. ಅದೆಷ್ಟು ಬಾರಿ ಹೇಳಿದರೂ ಅರ್ಥ ಆಗೊಲ್ಲವೋ ಇಲ್ಲ ಅರ್ಥ ಮಾಡಿಕೊಳ್ಳುವ ಇಷ್ಟವೇ ಇಲ್ಲವೋ ಗೊತ್ತಿಲ್ಲ.



ಇದೆಲ್ಲ ಅದ ಮೇಲೆ ಮನೆಯಲ್ಲೂ ಆ ಮಕ್ಕಳಿಗೆ ತಮ್ಮಿಷ್ಟದ ಬಟ್ಟೆ ಹಾಕಿಕೊಳ್ಳಲು, ಮಾಡಿದ ಅಡಿಗೆಯಲ್ಲಿ ತಮಗೆ ಬೇಕಾದ್ದನ್ನು ಬೇಕಾದಷ್ಟು ತಿನ್ನಲೂ ಸ್ವಾತಂತ್ರ್ಯ ಇಲ್ಲ. ಅವರು ಹೇಳಿದ ಬಟ್ಟೆ ಹಾಕಿಕೊಳ್ಳಬೇಕು. ಹಾಕಿದ್ದನ್ನು ಹಾಕಿದಷ್ಟು ತಿನ್ನಬೇಕು. ಇದನ್ನು ನೋಡುವಾಗ ಆ ಮಕ್ಕಳು ಇರುವುದು ಮನೆಯೋ ಅಥವಾ ರಿಮ್ಯಾಂಡ್ ಹೋಂ ಅನ್ನುವ ಅನುಮಾನ ಕಾಡುತ್ತದೆ.

ಇದು ಹೀಗೆ ಮುಂದುವರೆದರೆ ಹೈಸ್ಕೂಲ್ ದಾಟಿ ಕಾಲೇಜಿಗೆ ಬಂದ ಮೇಲೆ ಆ ಮಕ್ಕಳು ತಂದೆ ತಾಯಿಯರ ಮಾತನ್ನು ಕೆಳುತ್ತವೆಯೆ? ಓದಿನ ನಂತರ ಅವು ತಮ್ಮ ದಾರಿ ಹಿಡಿದು ತಂದೆ ತಾಯಿಯರಿಂದ ದೂರ ಹೋಗುವ ಸಾಧ್ಯತೆಗಳು ಹೆಚ್ಚು ಅಲ್ಲವೇ.

ಮಕ್ಕಳು ನಮ್ಮ ಆಟದ ಗೊಂಬೆಗಳಲ್ಲ ಅವಕ್ಕೂ ಜೀವವಿದೆ, ಅವರಿಗೂ ಅವರದೇ ಅದ ಇಷ್ಟ ಕಷ್ಟಗಳು ಇರುತ್ತವೆ, ಕೂರಿಸಿಕೊಂಡು ಮಾತನಾಡಿ ಬುದ್ದಿ ಹೇಳಬೇಕೆ ಹೊರತು ಅವರನ್ನು ಹೀಗೆಲ್ಲ ಹಿಂಸಿಸುವುದು ಅದೆಷ್ಟು ಸರಿಯೋ ಗೊತ್ತಿಲ್ಲ. ನಮ್ಮ ಇಷ್ಟಗಳನ್ನು ಹೇರುವ ಬದಲು ಅವರಿಷ್ಟಕ್ಕೆ ಬೆಲೆ ಕೊಟ್ಟರೆ ಪೋಷಕರು ಕಷ್ಟ ಪಟ್ಟು ದುಡಿದ ಹಣವೂ ಸಾರ್ಥಕ ಮಕ್ಕಳ ಜೀವನವೂ ಚೆಂದ ಆಗುವುದರಲ್ಲಿ ಸಂಶಯವಿಲ್ಲ ಅಲ್ಲವೇ.


  • ವಸಂತ ಗಣೇಶ್  (ಲೇಖಕಿ, ಸಾಹಿತಿಗಳು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW