“ಮೌನದಿಂದ ಮರುಚೈತನ್ಯ” ಸಣ್ಣಕತೆ

ಮೌನ ಒಮ್ಮೊಮ್ಮೆ ನಮ್ಮನ್ನೇ ಒಳಒಳಗೆ ತಿನ್ನುತ್ತಾ ಹೋಗುತ್ತದೆ. ಅದರಿಂದ ಹೊರಕ್ಕೆ ಬಂದಾಗ ಮನಸ್ಸು ಹಗುರವಾಗುತ್ತೆ ಅಲ್ಲವೇ ? ಕತೆಗಾರ್ತಿ ಬಿ.ಆರ್.ಯಶಸ್ವಿನಿ ಅವರ ಈ ಸಣ್ಣಕತೆಯನ್ನು ತಪ್ಪದೆ ಪೂರ್ತಿ ಓದಿ…

ಜೀವನ ಎಷ್ಟು ವಿಚಿತ್ರ. ಯೌವನದಲ್ಲಿದ್ದಾಗ ನಾವೇನಾದರೂ ಕಲಿಯುವುದಕ್ಕೆ, ಸಾಧನೆ ಮಾಡಬೇಕು ಅಂದಾಗ ನಮಗೆ ಸಮಯ ಇರುವುದಿಲ್ಲ. ವಯಸ್ಸಾದಾಗ ಸಮಯ ಇರುತ್ತೆ ನಮಗೆ ಕಲಿಯುವ, ಸಾಧನೆ ಮಾಡುವ ಮನಸ್ಸು ಇರುವುದಿಲ್ಲ.
ಇದು ಜೀವನದ ವಿಚಿತ್ರ ಅಲ್ಲ ನಮ್ಮ ಮನಸ್ಥಿತಿ. ನಮ್ಮ ಮನಸ್ಥಿತಿಯಿಂದ ಹೊರಬಂದರೆ ಮಾತ್ರ ಯಾವ ವಯಸ್ಸಾದರೂ ಕಲಿಯುವ, ಸಾಧನೆ ಮಾಡಲು ಸಮಯ ಇರುತ್ತೆ.. ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.. ಎಂದು ಯೋಚನೆ ಮಾಡುತ್ತಾ ಕುಳಿತ್ತಿದ್ದೆ ಆದರೂ ಇವತ್ತು ಏಕೋ ತುಂಬಾ ಬೇಜಾರು.

ಇಷ್ಟು ದಿನ ಗಂಡ, ಮಕ್ಕಳು, ಕೆಲಸ ಎಲ್ಲದನ್ನೂ ನಿಭಾಯಿಸಿ ಸಮಯ ಕಳೆದು ಹೋಗಿದ್ದೆ ಗೊತ್ತಾಗಲಿಲ್ಲ..ನನ್ನವರು ನನ್ನ ಜೊತೆಯಿದ್ದಾಗ ಅವರಿಗೆ ಊಟ ತಿಂಡಿ ಬಡಿಸಿ ಅವರ ಜೊತೆಗೆ ನಾನು ಊಟ ಮಾಡುತ್ತಿದ್ದೆ, ಅವರಿಗೆ ಕಾಫಿ ಕುಡಿಯ ಬೇಕೆನ್ನಿಸಿದಾಗ ಮಾಡಿ ಕೊಡುತ್ತಿದ್ದೆ, ಟಿವಿಯಲ್ಲಿ ಬರುತ್ತಿದ್ದ ಧಾರಾವಾಹಿ ಸಿನಿಮಾಗಳ ಪಾತ್ರಗಳನ್ನು ವಿಮರ್ಶಿಸುತ್ತಾ ಹಾಸ್ಯ ಮಾಡುತ್ತಾ ನಗೆಗಡಲಿನಲ್ಲಿ ತೇಲುತ್ತಾ ಸಮಯ ಕಳೆದು ಹೋಗಿದ್ದೆ ಗೊತ್ತಾಗುತ್ತಿರಲಿಲ್ಲ. ಅವರು ಅಗಲಿದ ಮೇಲೆ ನನಗೆ ಒಂದೊಂದು ಕ್ಷಣವೂ ಕಳೆಯುವುದು ಕಷ್ಟವಾಗುತ್ತಿದೆ.

ಹೊರಗೆ ಕೆಲಸಕ್ಕೆಂದು ಹೋಗುವ ಮಗ ಸೊಸೆ, ಶಾಲೆಗೆ ಹೋಗುವ ಮೊಮ್ಮಕ್ಕಳು ಬೆಳಿಗ್ಗೆ ಹೊರಡುವ ಗಡಿಬಿಡಿಯಲ್ಲಿ ನನ್ನ ಜೊತೆ ಕುಳಿತು ಮಾತಾಡುವಷ್ಟು ಸಮಯ ಅವರಿಗೆ ಇರುವುದಿಲ್ಲ. ಅಲ್ಲಿಯವರೆಗೂ ಗುಜುಗುಡುತ್ತಿದ್ದ ಮನೆ ಅವರೆಲ್ಲರೂ ಹೋದ ಮೇಲೆ ಮನೆ ಖಾಲಿ ಖಾಲಿಯಾಗಿ ಬಣಗುಡುತ್ತಿರುತ್ತದೆ. ನಂತರದ ಕ್ಷಣಗಳು ನನ್ನನ್ನು ಮೌನಕ್ಕೆ ದೂಡುತ್ತದೆ.‌ಟಿವಿಯಲ್ಲಿ ಬರುವ ಧಾರವಾಹಿಗಳು ಎಲ್ಲವೂ ಒಂದೇ ತರಹ ಇರುತ್ತವೆ.ಆದೇ ಪ್ರೀತಿ, ಅದೇ ದ್ವೇಷ ಆದರೆ
ವಿಲನ್ ಗಳ ಐಡಿಯಾಗಳಿಗೆ ಮಾತ್ರ ಹೊಸತನದ ಸ್ಪರ್ಶ.ಧಾರವಾಹಿಗಳನ್ನು ಬಿಟ್ಟು ನ್ಯೂಸ್ ಚಾನಲ್ ಹಾಕಿದ್ರೆ ಎಲ್ಲ ಚಾನೆಲ್ಲುಗಳಲ್ಲಿ ಒಂದೇ ವಿಷಯವನ್ನು ಪದೆ ಪದೆ ಹಾಕುತ್ತಾರೆ ಅದನ್ನು ನೋಡಲು ಇಷ್ಟವಾಗದೇ ಅಕ್ಕಪಕ್ಕದ ಮನೆಯ ಗೆಳತಿಯರೊಂದಿಗೆ ಮಾತಾಡೋಣವೆಂದರೆ ಅವರ ಮನೆಗಳ ಪರಿಸ್ಥಿತಿ ಧಾರವಾಹಿಗಳಂತೆಯೇ.ಅವರುಗಳ ವ್ಯಥೆಗಳನ್ನು ಕೇಳಿಸಿಕೊಂಡ ಸಹಿಸಿಕೊಳ್ಳಲಾಗದೇ ಮನೆಯೊಳಗೆ ಬಂಧಿಯಾದೇ.‌ ಸಂಜೆಯಾಗುವುದನ್ನೆ ಕಾಯುವ ನನಗೆ ಮರುಜೀವ ಬರುವುದು ಮಗ, ಸೊಸೆ, ಮೊಮ್ಮಕ್ಕಳು ಬಂದಾಗಲೇ.. ಬೆಳ್ಳಗ್ಗೆಯಿಂದ ಕಾಡಿದ ಮೌನ ಕಾಣೆಯಾಗಿ ಅವರುಗಳ ಜೊತೆ ಸಂತೋಷದಿಂದ ಕಾಲ ಕಳೆಯುವೆ. ನಿತ್ಯವೂ ಇದೆ ಪರಿಸ್ಥಿತಿ ಜಾರುವ ನನಗೆ ತುಂಬಾ ತುಂಬಾ ಮೌನವು ಕಾಡಿ ಮನೋರೋಗ ಬಂದಂತಾಗಿದೆ. ಮಕ್ಕಳು, ಮೊಮ್ಮಕ್ಕಳ ಜೊತೆ ಹರಟೆ ಹೊಡೆಯಲು ಹೋದಾಗ ನನ್ನ ಕಾಡುವ ಮೌನವು ಅವರ ಜೊತೆ ಬೆರೆಯಲು ಬಿಡದಂತೆ ಮಾಡುತ್ತಿತ್ತು. ದಿನನಿತ್ಯವೂ ಇದೇ ಕಥೆ.

ಹೀಗೆಯೇ ದಿನಗಳು ಉರುಳಿದರೂ ನಾನು ಮಾತ್ರ ಕ್ಷಣಗಣನೆ ಮಾಡುತ್ತಾ ಸಾವನ್ನು ಎದುರು ನೋಡುವುದು ತಪ್ಪಲೇ ಇಲ್ಲ. ಒಂದು ದಿನ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಮನೆಯಿಂದ ದಿನನಿತ್ಯದ ಕಾಯಕಕ್ಕೆ ಹೊರಗೆ ಹೋದರು. ದಿನ ನನ್ನ ಜೊತೆಗೆ ಮಗ, ಸೊಸೆ ತಿಂಡಿ ತಿಂದು ಕೆಲಸಕ್ಕೆ ಹೋಗುತ್ತಿದ್ದರು.ಆದರೆ ಅವತ್ತು ನಾನು ಏಳುವುದು ತಡವಾಯಿತು. ಹಾಗಾಗಿ ಅವರಿಬ್ಬರೂ ನನ್ನ ಎಬ್ಬಿಸಿ ತಿಂಡಿ ಕೊಟ್ಟು ತಡವಾಗುತ್ತಿದೆ ಎಂದೇಳಿ ಡ್ಯೂಟಿಗೆ ಹೋದರು.

ತಿಂಡಿ ತಿನ್ನುತ್ತಾ ಒಬ್ಬಳೇ ಕುಳಿತ್ತಿದ್ದೆ. ನನ್ನ ಜೊತೆಗಾತಿ ಮೌನಳು ಎಚ್ಚರವಾಗಿ ನನ್ನನ್ನು ಕಾಡಲು ಶುರುಮಾಡಿದಳು..ಅವಳ ಕಾಟದಿಂದ ನನ್ನ ಗಂಟಲಲ್ಲಿ ತಿಂಡಿಯು ಗಾಳಕ್ಕೆ ಸಿಕ್ಕ ಮೀನಿನಂತೆ ಒಳಗೆ ಹೋಗಲಾರದೆ,ಹೊರ ಬರಲಾರದೆ ಸಂಕಟ ತಂದೊಡ್ಡಿತ್ತು. ತಿಂಡಿ ತಿನ್ನಲು ಆಗದೇ ಕೈ ತೊಳೆಯುವುದಕ್ಕೆ ಎದ್ದೇಳುತ್ತಿರುವಾಗ ತಿಂಡಿಯನ್ನು ಚೆಲ್ಲಬೇಕೆಂದು ಬೇಸರವಾಯಿತು.

ನನ್ನ ಸೊಸೆ ಸುಮಿತ್ರಾ ತುಂಬಾ ಒಳ್ಳೆಯವಳು.. ನನ್ನನ್ನು ಸ್ವಂತ ಅಮ್ಮನೇನೋ ಅನ್ನುವಂತೆ ಪ್ರೀತಿ ಮಾಡುತ್ತಾಳೆ.ನಾನು ಕಷ್ಟಪಡಬಾರದೆಂದು ಕೆಲಸಕ್ಕೆ ಹೋಗುವುದು ಇದ್ದರೂ ಐದು ಗಂಟೆಗೆ ಎದ್ದು ಮನೆಕೆಲಸ, ಅಡುಗೆ ಎಲ್ಲ ಕೆಲಸಗಳನ್ನೂ ಮುಗಿಸಿ ಡ್ಯೂಟಿಗೆ ಹೋಗುತ್ತಾಳೆ. ನನಗೆ ಬೋರ್ ಆಗುತ್ತೆ ಮನೆಯಲ್ಲಿ ಕಾಲ ಕಳೆಯಲು ಕೆಲಸವನ್ನೆಲ್ಲಾ ಮುಗಿಸಬೇಡ.ನಾನು ನನ್ನ ಕೈಯಲ್ಲಿ ಆಗುವಷ್ಟು ಕೆಲಸ ಮಾಡಿ ಕೊಡುತ್ತೇನೆ ಅಂತ ಹೇಳಿದ್ರು ನನ್ನ ಕೈಯಲ್ಲಿ ಕೆಲಸ ಮಾಡಿಸುವುದಿಲ್ಲ.. ನೀವು ಈಗ ಆರಾಮ್ ಆಗಿ ಕಾಲ ಕಳೆಯಿರಿ ಮೊದಲೆಲ್ಲಾ ಕೆಲಸ ಮಾಡಿದ್ದೀರಾ ತಾನೇ ಆರಾಮಾಗಿರಿ ಅಂತ ಹೇಳಿ ಸುಮ್ಮನೆ ಮಾಡಿ ಬಿಡುತ್ತಾಳೆ. ಅವಳು ಮಾಡಿದ ತಿಂಡಿಯನ್ನು ಚೆಲ್ಲಲು ಮನಸ್ಸಾಗದೆ ಮತ್ತೆ ತಿನ್ನಲು ಶುರುಮಾಡಿದೆ.

ಆಗ ದೂರದ ದೆಹಲಿಯಲ್ಲಿ ನೆಲೆಸಿದ್ದ ನನ್ನ ಮಗಳು ಗೌತಮಿ ಫೋನ್ ಮಾಡಿದಳು.ಆಗ ಮನಸ್ಸಿಗೆ ನಿರಾಳವಾಯಿತು..ಆಗ ಒಂದೊಂದೇ ಗುಕ್ಕು ಗಂಟಲಿನಲ್ಲಿ ಸಿಗಾಕಿಕೊಳ್ಳುದೆ ಸರಾಗವಾಗಿ ಇಳಿಯತೊಡಗಿತು.. ಮಗಳು ಮಾತುಗಳನ್ನು ಮುಗಿಸಿ ಫೋನ್ ಇಟ್ಟಾಗ ನನ್ನ ಕಾಡುವ ಮೌನವು ಮತ್ತೊಮ್ಮೆ ಖುಷಿಪಟ್ಟು ನನ್ನನ್ನು ಅದೇ ಗುಂಗಿಗೇ ಕರೆತಂದಿತು. ಆದರಿಂದ ನನ್ನ ಕೀಪ್ಯಾಡ್ ಮೊಬೈಲ್ ಜೋರಾಗಿ ಪ್ರೆಸ್ ಮಾಡಿದ್ದರಿಂದ ಸ್ವಿಚ್ ಆಫ್ ಆಗಿತ್ತು.

ಅದೇ ಗುಂಗಿನಲ್ಲಿ ಮುಳುಗಿದ್ದ ನನಗೆ ಮನೆಯ ಬಾಗಿಲನ್ನು ತಟ್ಟುತ್ತಿರುವುದು ಕೇಳುತ್ತಿಲ್ಲ.. ಕಾಲಿಂಗ್ ಬೆಲ್ ಶಬ್ದವು ನನಗೆ ಕೇಳಿಸುತ್ತಿಲ್ಲ.. ಹೊರಗೆ ಕದ ತಟ್ಟುತ್ತಿದ್ದ ಮಗ ಚಂದುಗೂ ಸುಮಿತ್ರಾಗೆ ನನಗೆ ಏನಾದರೂ ತೊಂದರೆ ಆಗಿರಬೇಕೆಂದು ಭಯವಾಗಿ ನನಗೆ ಫೋನ್ ಮಾಡಿದರು.ಆದರೆ ನನ್ನ ಫೋನ್ ಸ್ವಿಚ್ ಆಫ್ ಆಗಿತ್ತು. ಅವರಿಗೆ ಆತಂಕವಾಗಿ ನನ್ನ ರೂಮಿನ ಕಿಟಕಿ ಹತ್ತಿರ ಬಂದು ಜೋರಾಗಿ ಕಿಟಕಿ ಬಡಿದಾಗ ನನ್ನ ಕಾಡುತ್ತಿದ ಮೌನ ನನ್ನ ಬಿಟ್ಟು ಹೋದಳು.ಎಚ್ಚರಗೊಂಡು ಹೋಗಿ ಕದ ತೆಗೆದೆ ನನ್ನ ಸ್ಥಿತಿಯನ್ನು ಕಂಡ ನನ್ನ ಮಕ್ಕಳಿಗೆ ಕರುಳು ಕಿವಿಚಿದಂತೆ ಆಯಿತು.

ಆ ದಿನ ರಾತ್ರಿ ಚಂದು ಮತ್ತು ಸುಮಿತ್ರಾ, ಮೊಮ್ಮಕ್ಕಳು ಊಟಕ್ಕೆ ಹೊರಗಡೆ ಹೋಗೋಣ ಬಾ ಅಮ್ಮ, ಅಜ್ಜಿ ಅಂತ ಒತ್ತಾಯ ಮಾಡಿ ಹೊರಗಡೆ ಹೋಟೆಲ್ ಗೆ ಕರೆದುಕೊಂಡು ಹೋದರು.. ಅಲ್ಲಿ ನನಗೆ ಅಚ್ಚರಿ ಕಾದಿತ್ತು..ಮೌನದ ಗುಂಗಿನಲ್ಲಿ ಮುಳಿಗಿದ್ದ ನನಗೆ ಇಂದು ನನ್ನ ಹುಟ್ಟಿದ ದಿನವೆಂದು ಮರೆತೇ ಹೋಗಿತ್ತು.. ನನ್ನ ಅರವತ್ತೈದನೇ ವರ್ಷದ ಹುಟ್ಟು ಹಬ್ಬದ ಸಲುವಾಗಿ ಹೋಟೆಲ್ ನಲ್ಲಿ ಬರ್ತಡೇ ಪಾರ್ಟಿ ಏರ್ಪಡಿಸಿದ್ದರು.ನಾವೇ ಐದು ಜನ ಮಾತ್ರ .ಕೇಕ್ ಕಟ್ ಮಾಡಿಸುವ ಸಮಯಕ್ಕೆ ನನ್ನ ಮಗಳು ಸಿಂಚನ ಚಂದುವಿನ ಫೋನ್ ಗೆ ವೀಡಿಯೋ ಕಾಲ್ ಮಾಡಿ ಶುಭಾಶಯಗಳನ್ನು ತಿಳಿಸುವಾಗ ನಾನು ಕೇಳಿದೆ ಬೆಳ್ಳಗ್ಗೆ ನೀನು ವಿಶ್ ಮಾಡಲಿಲ್ಲ ಸಿಂಚು ಅಂತ.ಅದಕ್ಕೆ ಅಣ್ಣ ಹೇಳಿದ್ದ ಸಂಜೆ ಬರ್ತಡೇ ಪಾರ್ಟಿ ಮಾಡುವಾಗ ವಿಶ್ ಮಾಡು ಅಲ್ಲಿವರೆಗೂ ಮಾಡಬೇಡ ಅಂತ ಆದ್ದರಿಂದ ಮಾಡಲಿಲ್ಲ ಎಂದಳು.ಎಲ್ಲರ ಸಮ್ಮುಖದಲ್ಲಿ ಹುಟ್ಟು ಹಬ್ಬದ ಆಚರಣೆ ಚೆನ್ನಾಗಿ ನಡೆಯಿತು..ಆ ಖುಷಿಯ ಕ್ಷಣ ಇಂದು ನನಗೆ ಕಣ್ಣಿಗೆ ಕಟ್ಟಿದಂತೆ ಇದೆ.

ನನ್ನ ಬೇಸರವನ್ನು ನೀಗಿಸಲು ನನ್ನ ಸೊಸೆ ಸುಮಿತ್ರಾ ಒಂದು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಉಡುಗೊರೆಯಾಗಿ ನೀಡಿದಳು.ಅದರ ಬಳಕೆ ಮಾಡುವುದನ್ನು ತಿಳಿಸಿದ ಅವಳು ದಿನ ನಿತ್ಯ ಮಧ್ಯಾಹ್ನ ಊಟದ ಸಮಯದಲ್ಲಿ ಬಿಡುವು ಮಾಡಿಕೊಂಡು ನನಗೆ ವೀಡಿಯೋ ಕಾಲ್ ಮಾಡಿ ಮಾತಾಡಿಸುತ್ತಿದ್ದಳು. ಆದೇ ತರಹ ಚಂದು, ಸಿಂಚನ ಎಲ್ಲರೂ ಅವರ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ನನಗೆ ಫೋನ್ ಮಾಡಲು ಶುರುಮಾಡಿದರು..ಆಗ ನನ್ನ ಮನಸ್ಸಿಗೆ ನೆಮ್ಮದಿ ಸಿಕ್ಕಂತಾಯಿತು.

ನಂತರದ ದಿನಗಳಲ್ಲಿ ಫೇಸ್ಬುಕ್, ವಾಟ್ಸಪ್ ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸುವುದು ಹೇಗೆಂದು ತೋರಿಸಿಕೊಟ್ಟಳು ನನ್ನ ಮುದ್ದು ಸೊಸೆ ಸುಮಿತ್ರಾ. ಫೇಸ್ಬುಕ್ ನಲ್ಲಿ ನನ್ನ ಬಾಲ್ಯದ ಗೆಳತಿ ಗೌರಿ ಸಿಕ್ಕಳು.ಗೌರಿ ಮತ್ತು ನಾನು ಚಿಕ್ಕ ವಯಸ್ಸಿನಲ್ಲಿ ಒಂದು ಘಳಿಗೆ ಬಿಟ್ಟಿರುತ್ತಿರಲಿಲ್ಲ. ಆಗ ಆಷ್ಟು ಗಟ್ಟಿಯಾಗಿತ್ತು ನನ್ನ ಗೌರಿಯ ಸ್ನೇಹ.. ಮದುವೆಯಾದ ನಂತರ ನಮ್ಮ ನಮ್ಮ ಸಂಸಾರದಲ್ಲಿ ನೋಡಿಕೊಳ್ಳುವುದರಲ್ಲಿ ಬ್ಯೂಸಿಯಾದೇವು.ಆಗ ಕಣ್ಮರೆಯಾದ ನಮ್ಮ ಸ್ನೇಹ ಮತ್ತೆ ಚಿಗುರೊಡೆದದ್ದು ಫೇಸ್ಬುಕ್ ನಿಂದ.. ನನ್ನೊಂದಿಗೆ ಪುನಃ ಮಾತನಾಡಲು ಶುರುಮಾಡಿದ ಒಂದು ವಾರದ ನಂತರ ಗೌರಿಯ ಮಗ ಪ್ರದ್ಯುಮ್ನ ಲಕ್ನೋ ದಲ್ಲಿ ಮನೆ ಕಟ್ಟಿಸಿರುವನು ಅದರ ಗೃಹಪ್ರವೇಶ ಬಾ ಎಂದು ಕರೆದಳು..

ಗೌರಿಯ ಕೆರೆಗೆ ಹೋಗಟ್ಟು ಲಕ್ನೋಕೆ ಹೋಗಲು ಸಿದ್ದಳಾದೆ. ಅಮ್ಮ ಸಿಂಚನಳನ್ನು ನೋಡೋಕೆ ಯಾವಾಗಲೂ ನೀನ್ನೊಬ್ಬಳೇ ವಿಮಾನದಲ್ಲಿ ಹೋಗುತ್ತಿಯಾ ಹಾಗಾಗಿ ನಿನಗೆ ವಿಮಾನದಲ್ಲಿ ಪ್ರಯಾಣಿಸಿದ ಅನುಭವವಿದೆ. ಯಾವಾಗ ಹೋಗುತ್ತೀಯಾ ಅಂತ ಹೇಳು.ಟಿಕೆಟ್ ಬುಕ್ ಮಾಡುತ್ತೇನೆ. ಏರ್ಪೋರ್ಟ್ ಗೆ ಸಿಂಚು ಬಂದು ಕರೆದುಕೊಂಡು ಹೋಗುತ್ತಾಳೆ.ಅಲ್ಲಿಂದ ಲಕ್ನೋ ಗೆ ಸಿಂಚುನೇ ಕರೆದುಕೊಂಡು ಹೋಗುತ್ತಾಳೆ ಎಂದು ಚಂದು ಹೇಳಿದನು.

ಅದಕ್ಕೆ ನಾನು ನನ್ನ ಒಂಟಿತನದ ಮೌನವನ್ನು ದೂರು ಮಾಡಿಕೊಳ್ಳಬೇಕು ಚಂದು ವಿಮಾನದಲ್ಲಿ ಪ್ರಯಾಣಿಸುವುದು ಮಾಮೂಲಿ ನನಗೆ‌ ಈ ಬಾರಿ ಟ್ರೈನ್ ಅಲ್ಲಿ ಹೋಗಬೇಕೆನ್ನಿಸುತ್ತಿದ್ದೆ ಎಂದೇ.

ಅದಕ್ಕೆ ಚಂದು ಮೂರು, ನಾಲ್ಕು ದಿನವಾಗುತ್ತೆ ಬೇಡ ಅಮ್ಮ, ವಿಮಾನದಲ್ಲಿ ಎರಡು ಗಂಟೆ ಪ್ರಯಾಣ ಅಷ್ಟೇ ಅಂದ.

ಇಲ್ಲ ಮಗನೇ ರೈಲಿನಲ್ಲಿ ಪ್ರಯಾಣಿಸುವಾಗ ಮೂರ್ನಾಲ್ಕು ದಿನ ನಮಗೆ ಪರಿಚಯವಿಲ್ಲದ ಜನರು ಪರಿಚಯವಾಗುತ್ತಾರೆ. ಅವರ ಜೊತೆ ಮಾತನಾಡಲು ಶುರುಮಾಡಿದ್ರೆ ನನ್ನ ಕಾಡುವ ಮೌನವು ಮರೆಯಾಗಬಹುದು ಅಂತ ಅನ್ನಿಸುತ್ತಿದೆ ಎಂದೇ ಸರಿ ಎಂದು ಟ್ರೈನ್ ಗೆ ಟಿಕೆಟ್ ಬುಕ್ ಮಾಡಿದನು.

ನನ್ನ ಸೊಸೆ ಕೊಟ್ಟು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿ ಟ್ರೈನ್ ನಲ್ಲಿ ಪ್ರಯಾಣ ಮಾಡುವಂತೆ ಮಾಡಿತ್ತು. ನನ್ನ ಜೊತೆ ಕುಳಿತ್ತಿದ್ದ ಸಹ ಪ್ರಯಾಣಿಕರ ಕಷ್ಟಸುಖಗಳನ್ನು ಕೇಳಿದ ನನಗೆ ನಾನೇ ಪುಣ್ಯವಂತೆ ಅನ್ನಿಸಿತು. ಒಬ್ಬೊಬ್ಬರದು ಒಂದೊಂದು ರೀತಿಯ ಕಷ್ಟಗಳು. ಕೆಲವರಿಗೆ ಉತ್ತರ ಸಿಕ್ಕಿದ್ದರೆ ಇನ್ನು ಕೆಲವರಿಗೆ ಉತ್ತರ ಸಿಗದೆ ಒದ್ದಾಡುತ್ತಿದ್ದರು..ಆ ಮೂರ್ನಾಲ್ಕು ದಿನದ ಪ್ರಯಾಣ ನನ್ನ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದ ಮೌನಳನ್ನು ಹೊರ ತಳ್ಳಿತ್ತು. ಸಹಜವಾದ ಜೀವನ ಶೈಲಿಗೆ ಮರಳಿದ ನಂತರ ಸುಂದರವಾದ ಕ್ಷಣಗಳನ್ನು ನಾನೇ ಕಳೆದುಕೊಂಡೆ ಅಂತ ಅನ್ನಿಸಿತು.

ಫೋಟೋ ಕೃಪೆ : ಅಂತರ್ಜಾಲ

ದೂರದ ದೆಹಲಿಗೆ ತಲುಪಿದೆ.ಮಗಳು,ಅಳಿಯ ಮೊಮ್ಮಕ್ಕಳನ್ನು ಕಂಡು ನನಗೆ ನಿಧಿ ಸಿಕ್ಕಿದಷ್ಟು ಖುಷಿಯಾಗಿತ್ತು.. ಅಲ್ಲಿಂದ ನನ್ನ ಗೆಳತಿ ಗೌರಿ ಕರೆದಿದ್ದ ಅವಳ ಮಗನ ಮನೆಯ ಗೃಹಪ್ರವೇಶಕ್ಕೆ ಮಗಳನ್ನು ಕರೆದುಕೊಂಡು ಹೋಗದೆ ಒಬ್ಬಳೇ ಹೋದೆ.. ನನ್ನೊಳಗೆ ಉತ್ಸಾಹ ಮನೆ ಮಾಡಿತ್ತು. ಅಲ್ಲಿಗೆ ನನ್ನ ಬಾಲ್ಯದ ಗೆಳತಿಯರೆಲ್ಲರೂ ಬಂದಿದ್ದರು. ಅವರೊಡನೆ ಹರಟೆ ಹೊಡೆದದ್ದು ಸಂತಸವಾಯಿತು. ನನ್ನ ಗೆಳತಿಯರೆಲ್ಲರು ನನ್ನೊಳಗೆ ಹುದುಗಿರುವ ಕಲೆಗಳು ಹೊರ ಬರುವಂತೆ ಮಾಡಿದರು..ಆ ಫಂಕ್ಷನ್ ಮುಗಿಸಿ ಮಗಳ ಮನೆಗೆ ಹೋಗಿ ವಿಮಾನದಲ್ಲಿ ಮತ್ತೆ ಊರಿಗೆ ಬಂದಾಗ ಚಂದು, ಸುಮಿತ್ರಾ ಮೊಮ್ಮಕ್ಕಳಿಗೆ ನನ್ನ ಮುಖದಲ್ಲಿ ಮೂಡಿದ ಸಂತಸ ಕಂಡು ಖುಷಿಯ ಜೊತೆಗೆ ಆಶ್ಚರ್ಯವಾಗಿತ್ತು.

ನನ್ನ ಕಲೆಗಳು ಹೊರಬಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ನನ್ನ ಅಕ್ಕಪಕ್ಕದ ಮನೆಯವರಿಗೆ ತಲುಪಿ ಅವರೆಲ್ಲರೂ ನಮ್ಮ ಮಕ್ಕಳಿಗೆ ಸಂಗೀತ, ಚಿತ್ರಕಲೆ ಹೇಳಿಕೊಡಿ ಅಂತ ಬಂದು ಕೇಳಿದರು.ಇಲ್ಲ ಅನ್ನಲು ಮನಸ್ಸಾಗಲಿಲ್ಲ. ತುಂಬಾ ದಿನದಿಂದ ಕಾಡಿದ ಮೌನಳು ನನ್ನ ಹತ್ತಿರ ಸುಳಿಯಬಾರದೆಂದು ನಿರ್ಧರಿಸಿ ಮಕ್ಕಳಿಗೆ ಸಂಗೀತ, ಚಿತ್ರಕಲೆಗಳನ್ನು ಹೇಳಿ ಕೊಡಲು ಶುರುಮಾಡಿದೆ. ಅಂದಿನಿಂದ ಇಂದಿನವರೆಗೂ ಸಂತಸದಿಂದ ನೆಮ್ಮದಿಯಾಗಿ ಮಕ್ಕಳು, ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿರುವೆ.

ಬದಲಾವಣೆ ಜಗದ ನಿಯಮ. ಕಾಲ ಬದಲಾದಂತೆ ನಾವು ಬದಲಾಗಬೇಕು. ನಮ್ಮೊಳಗೆ ನಾವೇ ದುರ್ಬಲರು ಅಂತ ಅಂದುಕೊಂಡರೆ ಆ ಮನಸ್ಥಿತಿಯೇ ನಮ್ಮನ್ನು ತಿಂದು ಹಾಕುತ್ತದೆ. ನಮಗೆ ಯಾವ ವಿಷಯವಾದರೂ ಕಾಡಲು ಶುರುವಾದರೆ ಆ ಜಾಗದಿಂದ ಹೊರಬಂದು ನಮ್ಮ ಗಮನವನ್ನು ಬೇರೆಡೆ ಹರಿಸಬೇಕು. ಯಾವುದನ್ನಾದರೂ ಸಾಧಿಸಲು ವಯಸ್ಸಿಗೆ ಇತಿಮಿತಿ ಇರುವುದಿಲ್ಲ. ಎಲ್ಲದನ್ನೂ ಮೀರಿ ಬದುಕು ಸಾಗಿಸಬೇಕು ನಿಂತ ನೀರಿನಂತೆ ಇದ್ದರೆ ಪಾಚಿ ಕಟ್ಟಿ ಕೆಟ್ಟ ವಾಸನೆ ಬರುತ್ತದೆ.ಹರಿಯುವ ನದಿಯಂತೆ ಇರಬೇಕು.ಕಷ್ಟಗಳಿಗೆ ಕುಗ್ಗದೆ ದೈರ್ಯವಾಗಿ ಮುನ್ನಡೆಯಬೇಕು. ವಯಸ್ಸು ಎಷ್ಟಾದರೇನೂ ಕಲಿಯಬೇಕೆಂಬ ಹುಮ್ಮಸ್ಸು ಇರಬೇಕಷ್ಟೆ.


  • ಬಿ.ಆರ್.ಯಶಸ್ವಿನಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW