ನಾವು ಊರಲ್ಲಿ ಇಲ್ಲದ ಸಮಯದಲ್ಲಿ ನಮ್ಮ ಪಕ್ಕದ ಮನೆಯಲ್ಲಿಯೇ ಅವನ ಊಟ ನಿದ್ದೆ. ಅವರ ಕಾಂಪೌಂಡ್ ಒಳಗೇ ಮಲಗುತ್ತಿದ್ದ ಬಿಳಿಯ ಮುಂದೇನಾಯಿತು ತಪ್ಪದೆ ಓದಿ ಲೇಖಕಿ ಕೆ.ಸಿ. ರತ್ನಶ್ರೀ ಶ್ರೀಧರ್ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣ…
ನಮ್ಮ ಮನೆಯಲ್ಲಿ ಅತಿ ಮುದ್ದಿನಿಂದ ಸಾಕಿದ್ದ ರಾಜು ಮತ್ತು ರಾಮುವಿನ ನಂತರ ಮತ್ತೆರಡು ನಾಯಿಗಳು ನಮ್ಮ ಸಂಪರ್ಕಕ್ಕೆ ಬಂದವು. ಒಬ್ಬ ಭೀಮ ಮತ್ತೊಬ್ಬ (ಕೋತಿ) ಕೆ. ರಾಮು. ಭೀಮ ನಮ್ಮ ಏರಿಯಾದಲ್ಲಿದ್ದ ಅಂಗಡಿ ಮನೆಯಲ್ಲಿದ್ದವನು. ನಮ್ಮ ನಾಯಿ ಪ್ರೀತಿ ಕಂಡ ಆ ಮನೆಯವರು ತಮ್ಮ ಮನೆಯಲ್ಲಿ ಸಾಕಿದ್ದ ಸುಮಾರು ಐದಾರು ತಿಂಗಳ ವಯಸ್ಸಿನ ಮರಿಯನ್ನು ನಮಗೆ ಕೊಟ್ಟಿದ್ದರು. ಅವರ ಮನೆಯಲ್ಲಿ ಇನ್ನೊಂದು ದೊಡ್ಡ ನಾಯಿ ಇತ್ತು. ಎರಡೆರಡು ನಾಯಿಗಳನ್ನು ನೋಡಿಕೊಳ್ಳುವುದು ಕಷ್ಟವೆಂದು ನಮಗೆ ಮರಿಯನ್ನು ಕೊಟ್ಟಿದ್ದರು.
ನಮ್ಮ ಮನೆಗೆ ಕರೆ ತಂದ ಭೀಮ ಅವನಿದ್ದ ಮನೆ ನೆನಪಾದಾಗಲೆಲ್ಲಾ ಅಂಗಡಿ ಮನೆಗೆ ಓಡಿ ಹೋಗುತ್ತಿದ್ದ. ಆಗಾಗ ಅವನು ತಪ್ಪಿಸಿಕೊಂಡು ಓಡಿ ಹೋಗುವುದು ಮತ್ತೆ ನಾವು ಕರೆ ತರುವುದು ನಡೆದೇ ಇತ್ತು. ದಾರಿಯಲ್ಲಿ ಹೋಗುವ ಯಾರನ್ನೇ ನೋಡಿದರೂ ಹೆದರಿ ಮೂತ್ರ ವಿಸರ್ಜಿಸಿಕೊಳ್ಳುತ್ತಿದ್ದ. ಅವನಲ್ಲಿ ಅದಾವ ಭಯ ಕಾಡುತ್ತಿತ್ತೋ ಗೊತ್ತಿಲ್ಲ. ‘ಹೆದರಿದವನ ಮೇಲೆ ಹಾವು ಎಸೆದಂತೆ’ ಎಂಬ ಗಾದೆ ಮಾತಿನಂತೆ ಅಂಥ ಸಮಯದಲ್ಲಿ ನಾವೂ ಅವನಿಗೆ ಪೆಟ್ಟು ಕೊಟ್ಟದ್ದಿದೆ. ಈಗ ನೆನೆಸಿಕೊಂಡರೆ ತುಂಬಾ ಪಶ್ಚಾತಾಪವಾಗುತ್ತಿದೆ. “ನೀನು ಎಲ್ಲಿದ್ದರೂ ನಿಮ್ಮನ್ನು ಕ್ಷಮಿಸು ಭೀಮಾ” ಎಂದು ಮನದಲ್ಲೇ ಕೊರಗುವೆ. ಕೊನೆಗೆ ಅಂಗಡಿ ಮನೆಯವರು ಆ ಎರಡು ನಾಯಿಗಳನ್ನೂ ದೂರದ ಸಂಬಂಧಿಕರ ತೋಟದ ಮನೆಗೆ ಕಳಿಸಿದರು.

ಫೋಟೋ ಕೃಪೆ : ಅಂತರ್ಜಾಲ
ಭೀಮನ ನಂತರ ನಮ್ಮ ಮನೆಗೆ ಆಕಸ್ಮಿಕವಾಗಿ ಬಂದವನು ಕೆ. ರಾಮು. ಒಂದು ದಿನ ನಮ್ಮ ಮಗ ಶಾಲೆಯಿಂದ ಮನೆಗೆ ಬರುವಾಗ ನಮ್ಮ ಬೀದಿಯ ಮೂಲೆ ಮನೆಯ ಕಾರಿನ ಕೆಳಗೆ ಅಡಗಿ ಕುಳಿತಿದ್ದ ನಾಯಿ ಮರಿಯನ್ನು ಎತ್ತಿಕೊಂಡು ಬಂದ. ಆ ಮರಿ ತುಂಬಾ ಬಳಲಿದಂತೆ ಕಾಣುತಿತ್ತು. ಬಟ್ಟಲಿನಲ್ಲಿ ಒಂದಷ್ಟು ಹಾಲು ಅನ್ನ ಕಲಸಿ ತಂದಿಟ್ಟೆ. ಹಸಿದು ಕಂಗಾಲಾಗಿದ್ದ ಮರಿ ಕ್ಷಣಮಾತ್ರದಲ್ಲಿ ಗಬಗಬನೇ ತಿಂದು ಮುಗಿಸಿತು. ಅಂದಿನಿಂದ ನಮ್ಮ ಮನೆಯ ಬೀದಿಯಲ್ಲೇ ಇರತೊಡಗಿತು. ಅವನದು ನಮ್ಮ ಮನೆಯಲ್ಲಿ ಊಟ ಬೀದಿಯಲ್ಲಿ ವಾಸ.
ತರಲೆ ಬುದ್ದಿಯ ರಾಮು ಆಗಾಗ ದಾರಿಯಲ್ಲಿ ಓಡಾಡುವ ಬೇರೆ ನಾಯಿಗಳನ್ನು ಅಟ್ಟಿಸಿಕೊಂಡು ಹೋಗುವುದು, ಅವುಗಳಿಂದ ಕಚ್ಚಿಸಿಕೊಂಡು ಕುಂಯ್ ಗುಡುತ್ತಾ ಓಡಿ ಬರುವುದು ಸಾಮಾನ್ಯ ಸಂಗತಿಯಾಗಿತ್ತು. ಗಾಯದ ನೋವು ಮರೆಯುವವರೆಗೆ ತೆಪ್ಪಗಿರುತ್ತಿದ್ದ ರಾಮು, ನಂತರ ಮತ್ತದೇ ಹಳೆ ಚಾಳಿ ಮುಂದುವರಿಸುತ್ತಿದ್ದ. ಆರೋಗ್ಯ ಕೆಟ್ಟಾಗ ಮಾತ್ರ ನಮ್ಮ ಮನೆಯಂಗಳ ಬಿಟ್ಟು ಕದಲುತ್ತಿರಲಿಲ್ಲ. ಒಮ್ಮೆ ಅವನಿಗೆ ವಿಪರೀತ ಲೂಸ್ ಮೋಶನ್ ಆಗಿ ನಿತ್ರಾಣನಾಗಿದ್ದ. ಸದ್ಯ ಅಂದು ಯಾವುದೋ ರಜೆ ಇದ್ದ ಕಾರಣ ನನ್ನ ಪತಿ ಮನೆಯಲ್ಲಿಯೇ ಇದ್ದರು. ಹಾಗಾಗಿ ಅವನನ್ನು ನಮ್ಮ ಕಾರಿನಲ್ಲಿ ಕರೆದುಕೊಂಡು ಆಸ್ಪತ್ರೆಗೆ ಓಡಿದೆವು.
ರಾಮವನ್ನು ಪರೀಕ್ಷಿಸಿದ ವೈದ್ಯರು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂದು ಬೆಳಿಗ್ಗೆಯಿಂದ ಸಂಜೆವರೆಗೂ ಅವನಿಗೆ ಡ್ರಿಪ್ ಹಾಕಿ, ಅವರ ಆಸ್ಪತ್ರೆಯಲ್ಲಿಯೇ ಮಲಗಿಸಿದರು. ಮಾರನೇ ದಿನ ದಸರಾ ಹಬ್ಬವಿತ್ತು. ಮನೆಯ ಕೆಲಸವನ್ನೆಲ್ಲ ಬಿಟ್ಟು ಹಬ್ಬದ ಹಿಂದಿನ ದಿನ ಕೆ. ರಾಮುವಿನ ಜೊತೆಯಲ್ಲಿ ಆಸ್ಪತ್ರೆಯಲ್ಲೇ ಕಾಲ ಕಳೆದೆವು. ಸಂಜೆಯ ಹೊತ್ತಿಗೆ ಚೇತರಿಸಿಕೊಂಡ ರಾಮುವನ್ನು ಮನೆಗೆ ಕರೆ ತಂದೆವು. ಇನ್ನೊಮ್ಮೆ ತೀವ್ರ ಜ್ವರದಿಂದ ಬಳಲಿದಾಗಲೂ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದೆವು. ಅವನು ಕಾರಿನಲ್ಲಿ ಪ್ರಯಾಣಿಸಲು ಹೆದರದಿದ್ದದು ಅನುಕೂಲವಾಗಿತ್ತು.
ನಾನು ದೇವರನಾಮ ಕಲಿಯಲು ನಮ್ಮ ಮನೆಯ ಹತ್ತಿರದಲ್ಲೇ ಇದ್ದ ಸಂಗೀತ ಟೀಚರ್ ಮನೆಗೆ ಹೋಗುವಾಗ ನನ್ನ ಜೊತೆಯಲ್ಲಿ ಅವರ ಮನೆಗೆ ಬರುತ್ತಿದ್ದ ರಾಮು ಕೊನೆಕೊನೆಗೆ ಅವರ ಮನೆಗೇ ಹೊಂದಿಕೊಂಡು ಅವರ ಮನೆಯಲ್ಲಿಯೇ ಇರತೊಡಗಿದ. ನಂತರ ಟೀಚರ್ ಅವರ ಅನಾರೋಗ್ಯದ ಕಾರಣ ನನ್ನ ಸಂಗೀತ ತರಗತಿಯು ನಿಂತಿತು. ಸುಮಾರು ಆರು ತಿಂಗಳ ನಂತರ ರಾಮು ಯಾವುದೋ ವಾಹನ ಗುದ್ದಿ ಸೊಂಟದ ಹಿಂಭಾಗ ಸ್ವಾಧೀನ ಕಳೆದುಕೊಂಡ. ರಾಮುಗೆ ಅಪಘಾತವಾದ ವಿಚಾರ ಟೀಚರ್ ಅವರಿಂದ ಒಂದು ತಿಂಗಳ ನಂತರ ನನಗೆ ತಿಳಿಯಿತು. ಇಷ್ಟರಲ್ಲಾಗಲೇ ಅವರು ಸಾಕಷ್ಟು ಚಿಕಿತ್ಸೆ ಕೊಡಿಸಿದ್ದರಾದರೂ ಅವನು ಉಳಿಯಲಿಲ್ಲ.

ಆರು ವರ್ಷಗಳ ಹಿಂದೆ ನಮ್ಮ ಪಕ್ಕದ ಮನೆಯವರ ಮಗ ಬಿಜಿ ರಸ್ತೆಯಲ್ಲಿ ಯಾವುದೋ ವಾಹನಕ್ಕೆ ಅಡ್ಡ ಬಂದ ನಾಯಿಮರಿಯನ್ನು ರಕ್ಷಿಸಿ ಮನೆಗೆ ತಂದಿದ್ದ. ಪುಟ್ಟ ನಾಯಿಮರಿ ನೋಡಲು ಗುಂಡು ಗುಂಡಾಗಿ ಮುದ್ದಾಗಿತ್ತು. ಅದಾಗಲೇ ಅವರ ಮನೆಯಲ್ಲಿ ಒಂದು ವಯಸ್ಸಾದ ಪಮೋರಿಯನ್ ನಾಯಿ ಇತ್ತು. ಹೊಸದಾಗಿ ತಂದ ಈ ಮರಿಯನ್ನು ಮನೆಯ ಹೊರಗಡೆ ಕಾಂಪೌಂಡಿನಲ್ಲಿ ಕಟ್ಟಿ ಹಾಕುತ್ತಿದ್ದರು.
ಸಾಯಂಕಾಲ, ಬೆಳಗ್ಗೆ ಸ್ವಲ್ಪ ಹೊತ್ತು ಚೈನ್ ಬಿಚ್ಚಿದ ಕೂಡಲೇ ಅರೆಕ್ಷಣದಲ್ಲಿ ನಮ್ಮ ಮನೆಗೆ ಓಡಿ ಬರುತ್ತಿತ್ತು. ನಮ್ಮ ಮನೆಯಲ್ಲಿಯೇ ಅದರ ಊಟ, ಆಟ, ನಿದ್ದೆ ಎಲ್ಲವೂ. ವಾರಕ್ಕೊಮ್ಮೆ ನಾನೇ ಸ್ನಾನ ಮಾಡಿಸುತ್ತಿದ್ದೆ.
ಅವರ ಮನೆಯಲ್ಲಿ ಪಾಂಡು ಎಂದು ಕರೆಯುತ್ತಿದ್ದರು. ನಮ್ಮ ಮನೆಯಲ್ಲಿ ಅವನು ನಮ್ಮೆಲ್ಲರ ಪ್ರೀತಿಯ ಚೋಟು. ಅದ್ಯಾಕೋ ನಾವು ಅದೆಷ್ಟೇ ಹೇಳಿದರೂ ಅವರು ವೈದ್ಯರ ಬಳಿಗೆ ಆ ನಾಯಿಮರಿಯನ್ನು ಕರೆದೊಯ್ಯಲಿಲ್ಲ. ಕೊನೆಗೆ ನಾವೇ ಚೋಟುವನ್ನು ವೈದ್ಯರ ಬಳಿ ಕರೆದೊಯ್ದು ರೇಬಿಸ್ ವ್ಯಾಕ್ಸಿನೇಷನ್, ಹೊಟ್ಟೆ ಹುಳಕ್ಕೆ ಔಷಧಿ, ಮಲ್ಟಿ ವಿಟಮಿನ್ ಟಾನಿಕ್ ಎಲ್ಲವನ್ನು ಕೊಡಿಸಿಕೊಂಡು ಬಂದವು. ಚೋಟು ಬಹಳ ಚೂಟಿಯಾಗಿದ್ದ. ಚುರುಕು ಬುದ್ಧಿಯ ಚೋಟು ಒಂದು ನಿಮಿಷ ಒಂದು ಕಡೆ ನಿಲ್ಲುತ್ತಿರಲಿಲ್ಲ. ಎರಡು ಮನೆಗಳನ್ನು ಕಾವಲು ಕಾಯುತ್ತಿದ್ದ. ಪಕ್ಕದ ಮನೆಯಲ್ಲಿ ಕಟ್ಟಿ ಹಾಕಿದ್ದರೂ ಕೂಡ ನಮ್ಮ ಗೇಟನ್ನು ಯಾರೂ ಮುಟ್ಟುವಂತಿರಲಿಲ್ಲ. ಅಲ್ಲಿಂದಲೇ ಜೋರಾಗಿ ಬೊಗಳುತ್ತಿದ್ದ.
ಇಂಥ ಸಮಯದಲ್ಲಿ ನಾವು ಗುರುಗ್ರಾಮಕ್ಕೆ ಹೊರಡಬೇಕಾಯಿತು. ಬೀದಿಯಲ್ಲಿ ಗುಂಡ, ಪಕ್ಕದ ಮನೆಯಲ್ಲಿ ಚೋಟೋವನ್ನು ಬಿಟ್ಟು ಗುರುಗ್ರಾಮಕ್ಕೆ ಹೋದೆವು. ಆಗಾಗ ಗುರು ಗ್ರಾಮದಿಂದ ಬೆಂಗಳೂರಿಗೆ ಬಂದ ಕೂಡಲೇ ಪಕ್ಕದ ಮನೆಯ ಗೇಟಿನೊಳಗಿನಿಂದಲೇ ಮೊದಲಿಗೆ ನಮ್ಮನ್ನು ಸ್ವಾಗತಿಸುತ್ತಿದ್ದು ಇದೇ ಚೋಟು. ನಮ್ಮ ಮನೆಯ ಒಳಗೆ ಹೋಗುವ ಮೊದಲು ಪಕ್ಕದ ಮನೆಗೆ ಹೋಗಿ ಚೋಟವನ್ನು ಮುದ್ದು ಮಾಡಿ, ಇವುಗಳಿಗಾಗಿ ಅಲ್ಲಿಂದಲೇ ತಂದಿರುತ್ತಿದ್ದ ತಿಂಡಿ ಕೊಟ್ಟ ನಂತರವೇ ನಮ್ಮ ಮನೆಯ ಒಳಗೆ ಹೋಗುತ್ತಿದ್ದೆವು.
ನಾವು ಗುರುಗ್ರಾಮಕ್ಕೆ ಹೋದ ನಂತರ ಚೋಟುವನ್ನು ಸದಾ ಕಟ್ಟಿ ಹಾಕಿರುತ್ತಿದ್ದರು. ನಾಯಿಯ ವಿಚಾರಕ್ಕೆ ಓನರ್ ಮತ್ತು ಬಾಡಿಗೆದಾರರ ನಡುವೆ ವೈಮನಸ್ಯವೇರ್ಪಟ್ಟ ಕಾರಣ ಚೋಟುವನ್ನು ಅವರ ಸಂಬಂಧಿಕರ ತೋಟದ ಮನೆಗೆ ಕಳಿಸಿದರಂತೆ. ಪ್ರತಿ ಬಾರಿ ಬೆಂಗಳೂರಿಗೆ ಬಂದಾಗ/ ಫೋನ್ ಮಾಡಿದಾಗ “ಚೋಟು ಹೇಗಿದ್ದಾನಂತೆ” ಎಂದು ಕೇಳುತ್ತಿದ್ದೆ. ಎರಡು ವರ್ಷಗಳ ಹಿಂದೆ ಒಮ್ಮೆ ಇದೇ ಮಾತನ್ನು ನಾನು ಕೇಳಿದಾಗ ಅವರ ಕೊಟ್ಟ ಆಘಾತಕಾರಿ ಸುದ್ದಿ ಎಂದರೆ, ತೋಟದ ಮನೆಗೆ ನುಗ್ಗಿದ ಚಿರತೆಯೊಂದು ಚೋಟುವನ್ನು ಹೊತ್ತೊಯ್ದಿತಂತೆ. ಈ ದುಃಖವನ್ನು ನನಗೆ ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ.
ನಾವು ಗುರುಗ್ರಾಮದಲ್ಲಿದ್ದ ಸಮಯದಲ್ಲಿ ಬೆಂಗಳೂರಿನ ನಮ್ಮ ಗುಂಡ ತೀರಿ ಹೋದ ನಂತರ ಆ ಬೀದಿಗೆ ಮತ್ತೊಂದು ಗಂಡು ನಾಯಿ ಅದೆಲ್ಲಿಂದಲೋ ಬಂದು ಸೇರ್ಪಡೆಯಾಯಿತು. ಎತ್ತರ ಆಳ್ತನದ ಬಲಿಷ್ಠ ಮೈಕಟ್ಟಿನ ಬಿಳಿ ಬಣ್ಣದ ಅವನನ್ನು ಬಿಳಿಯ ಎಂದು ಕರೆಯತೊಡಗಿದೆವು. ನಾವು ಬೆಂಗಳೂರಿಗೆ ಹೋದಾಗಲೆಲ್ಲ ನಮ್ಮ ಮನೆ ಬಿಟ್ಟು ಕದಲುತಿರಲಿಲ್ಲ. ನಮ್ಮನ್ನು ಬಹಳವಾಗಿ ಹಚ್ಚಿಕೊಂಡಿದ್ದ. ನಾವು ಅಲ್ಲಿರುತ್ತಿದ್ದ ಎರಡು ಮೂರು ದಿನ ನಮ್ಮೊಂದಿಗೇ ಇರುತ್ತಿದ್ದ.
ಈ ನಡುವೆ ನಮ್ಮ ಮಗ ಆಸ್ಟ್ರೇಲಿಯಾದ ಮೆಲ್ಬಾರ್ನ್ ನಲ್ಲಿ ಎಂ ಎಸ್ ಮುಗಿಸಿ ಬೆಂಗಳೂರಿಗೆ ಹಿಂತುರುಗಿದ್ದ. ಅಪಾರ ನಾಯಿ ಪ್ರೇಮಿಯಾಗಿದ್ದ ಅವನು ಮೂರು ತಿಂಗಳು ಬೆಂಗಳೂರಿನಲ್ಲಿದ್ದಾಗ ಬಿಳಿಯ ಮತ್ತೆ ನಮ್ಮ ಮನೆಯ ಸದಸ್ಯನೇ ಆಗಿದ್ದ. ನಮ್ಮ ಮಗ ಪಿ ಎಚ್ ಡಿ ಮಾಡಲು ಮತ್ತೆ ಆಸ್ಟ್ರೇಲಿಯಾಗೆ ಹೊರಟ ಮೇಲೆ ಬಿಳಿಯ ಮತ್ತೆ ಬೀದಿ ನಾಯಿಯಾದ. ಆದರೆ, ನಾವು ಯಾವಾಗ ಬೆಂಗಳೂರಿಗೆ ಬಂದರೂ ಅದೆಲ್ಲಿಂದಲೋ ಓಡಿ ಬರುತ್ತಿದ್ದ. ನಾವು ಮನೆಗೆ ಹೋದ ಕೂಡಲೇ ಅದು ಯಾವ ಸಮಯವಾಗಿದ್ದರೂ ಸರಿಯೇ ನಮ್ಮ ಮಗನಿಗೆ ವಿಡಿಯೋ ಕಾಲ್ ಮಾಡಿ ಬಿಳಿಯನನ್ನು ತೋರಿಸಬೇಕಿತ್ತು.

ಫೋಟೋ ಕೃಪೆ : ಅಂತರ್ಜಾಲ
ಸಾಮಾನ್ಯವಾಗಿ ಬೀದಿ ನಾಯಿಗಳನ್ನು ಕಾಡುವ ರಕ್ತ ಹೀರುವ ಉಣುಗಗಳ ಕಾಟ ಬಿಳಿಯನಿಗೂ ಕಾಡುತ್ತಿತ್ತು. ನಾನು ಬೆಂಗಳೂರಿಗೆ ಹೋದಾಗಲೆಲ್ಲಾ ವೈದ್ಯರ ಬಳಿ ಮಾತ್ರೆ ತಂದು ಹಾಕುತ್ತಿದ್ದೆ. ನಾಲ್ಕು ವಾರಗಳ ಕಾಲ ವಾರಕೊಮ್ಮೆ ಹಾಕಬೇಕಾದ ಮಾತ್ರೆಯನ್ನು ಪಕ್ಕದ ಮನೆಯವರಿಗೆ ಕೊಟ್ಟು, ಮೂರು ವಾರಗಳ ಕಾಲ ಊಟದಲ್ಲಿ ಮಾತ್ರೆಯನ್ನು ಪುಡಿ ಮಾಡಿ ಹಾಕಲು ಹೇಳಿ ಬರುತ್ತಿದ್ದೆ. ಈಗ ಒಂದೂವರೆ ವರ್ಷದ ಹಿಂದೆ ಬಿಳಿಯನ ಬೆನ್ನ ಮೇಲೆ ಅದೇನೋ ಗಾಯವಾಗಿತ್ತು.ಒಮ್ಮೆಯೂ ಯಾವುದೇ ವಾಹನದಲ್ಲಿ ಪ್ರಯಾಣಿಸಿ ಅಭ್ಯಾಸವಿಲ್ಲದ ಬಲಿಷ್ಠ ನಾಯಿಯನ್ನು ಒತ್ತಾಯದಿಂದ ವೈದ್ಯರ ಬಳಿಗೆ ಎತ್ತೊಯ್ಯುವುದು ಅಸಾಧ್ಯವಾದ ಮಾತಾಗಿತ್ತು. ಹಾಗಾಗಿ ಗಾಯದ ಫೋಟೋ ತೆಗೆದು ವೈದ್ಯರ ಬಳಿ ತೋರಿಸಿ ನಿರಂತರವಾಗಿ ಔಷಧೋಪಚಾರ ಮಾಡಿದೆವು.
ಕೆಲವೊಮ್ಮೆ ಗಾಯ ಒಣಗಿದಂತೆ ಕಂಡರೂ, ಒಣಗುವ ಗಾಯದ ನವೆಯಿಂದಲೋ ಏನೋ ಅವನು ಗಾಯವನ್ನು ಕೆರೆದು ಮತ್ತೆ ರಕ್ತ ಭರಿಸಿಕೊಳ್ಳುತ್ತಿದ್ದ. ಈ ನಡುವೆ ಕಳೆದ ವರ್ಷ ಒಂದು ತಿಂಗಳು ನಾನು ಮತ್ತು ಮಗ ಬೆಂಗಳೂರಿನಲ್ಲಿದ್ದ ಸಮಯದಲ್ಲಿ ಬಹಳವೇ ಚೇತರಿಸಿಕೊಂಡಿದ್ದ. ನಮ್ಮ ಮನೆಯ ಎದುರಿಗಿರುವ ಪಾರ್ಕ್ ನಲ್ಲಿ ಬೆಳಿಗ್ಗೆ ತನ್ನಷ್ಟಕ್ಕೆ ತಾನೇ ಐದಾರು ಸುತ್ತು ವಾಕಿಂಗ್ ಮಾಡುತ್ತಿದ್ದ. ಪಾರ್ಕಿಗೆ ಬರುವವರೊಂದಿಗೆ ಕಲ್ಲು ಬೆಂಚಿನ ಮೇಲೆ ಕುಳಿತಿರುತ್ತಿದ್ದ.
ನಾವು ಊರಲ್ಲಿ ಇಲ್ಲದ ಸಮಯದಲ್ಲಿ ನಮ್ಮ ಪಕ್ಕದ ಮನೆಯಲ್ಲಿಯೇ ಅವನ ಊಟ ನಿದ್ದೆ. ಅವರ ಕಾಂಪೌಂಡ್ ಒಳಗೇ ಮಲಗುತ್ತಿದ್ದ. ಒಂದು ಅಥವಾ ಎರಡು ವಾರಕ್ಕೊಮ್ಮೆ ನಮ್ಮ ಪಕ್ಕದ ಮನೆಯವರಿಗೆ ಫೋನ್ ಮಾಡಿ ಬಿಳಿಯನ ಆರೋಗ್ಯ ವಿಚಾರಿಸುತಿದ್ದೆ. ಆರು ತಿಂಗಳ ಹಿಂದೆ ಒಮ್ಮೆ ಫೋನ್ ಮಾಡಿ ಕೇಳಿದಾಗ, “ಬಿಳಿಯ ಎರಡು ಮೂರು ದಿನದಿಂದ ಏನೂ ತಿಂದಿಲ್ಲ. ರಾತ್ರಿ ಕೂಗುತ್ತಿರುತ್ತಾನೆ” ಎಂದರು.
ಈ ವಿಷಯ ಕೇಳಿ ನನ್ನ ಮನಸೆಲ್ಲಾ ಮುದುಡಿ ಹೋಯಿತು. ಮಧ್ಯಾಹ್ನ ಮನೆಗೆ ಪತಿ ಊಟಕ್ಕೆ ಬಂದಾಗ ಅವರಿಗೆ ವಿಷಯ ತಿಳಿಸಿದೆ. “ಅನಿಮಲ್ ಅಂಬುಲೆನ್ಸ್ ನವರಿಗೆ ತಕ್ಷಣ ಫೋನ್ ಮಾಡಿ, ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಮಾಡು. ಹಣವನ್ನು ಫೋನ್ ಪೇ ನಲ್ಲಿ ಕಳಿಸು” ಎಂದರು. ತಕ್ಷಣವೇ ನಾನು ಬಿಳಿಯ ಎಲ್ಲಿದ್ದಾನೆಂದು ತಿಳಿಯಲು ಪಕ್ಕ ಮನೆಯವರಿಗೆ ಫೋನ್ ಮಾಡಿದೆ. ಅತ್ತಲಿಂದ ಬಂದ ಉತ್ತರ ಕೇಳಿ ನನ್ನ ಕಣ್ಣಲ್ಲಿ ನೀರು ಜಿನುಗಿತು.
“ಬೆಳಗ್ಗೆ 9.30ರ ಸುಮಾರಿಗೆ ನಮ್ಮ ಮನೆಯಿಂದ ಎದ್ದು ಹೋದ ಬಿಳಿಯ ಪಾರ್ಕಿನಲ್ಲಿ ಒಂದು ಸುತ್ತು ವಾಕಿಂಗ್ ಹೋಗಿ ಮಲಗಿದವನು ಅಲ್ಲಿಯೇ ತೀರಿ ಹೋದ. ಕಾರ್ಪೊರೇಷನ್ ನವರು ಎತ್ತಿಕೊಂಡು ಹೋದರು” ಎಂದರು. ಬಿಳಿಯ ಇನ್ನಿಲ್ಲ ಎನ್ನುವ ವಿಚಾರ ಅತ್ಯಂತ ದುಃಖ ತರಿಸಿತಾದರೂ, ಹೆಚ್ಚೇನೂ ನೆರಳಾಡದೆ, ಕಾಳಜಿ ಮಾಡುವವರು ಇಲ್ಲದೆ ಧೀರ್ಘಕಾಲ ನೋವು ಅನುಭವಿಸದೇ ಅವನು ಕಣ್ಮುಚ್ಚಿದ್ದು ಒಂದು ರೀತಿಯ ಸಮಾಧಾನ ತಂದಿತು.
(ಸಂಚಿಕೆ ಮುಂದುವರೆಯುವುದು)
ತಪ್ಪದೆ ಓದಿ, ಹಿಂದಿನ ಸಂಚಿಕೆಗಳು :
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೧)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೨)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೩)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೪)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೫)
- ಕೆ.ಸಿ. ರತ್ನಶ್ರೀ ಶ್ರೀಧರ್ – ಚೆನ್ನೈ
