ಸಿಂಪಲ್ಲಾಗೊಂದ್ ಲವ್ ಸ್ಟೋರಿ… ಅಂತೂ ಅಲ್ಲ..!

ನನ್ನೊಳಗಿನ ಭಾವನೆಗಳ‌ ಗುಟ್ಟು‌‌ , ಪತ್ರದ ಕಗ್ಗಂಟು ಗಂಟಲಿನವರೆಗೆ ಬಂದು ಹೊರಗೆ ಬಾರದೇ ಹಾಗೆಯೇ ಉಳಿಯಿತು. ನಂತರದ ದಿನಗಳಲ್ಲಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆ ಹುಡುಗಿ ಹಿರಿಯೂರು‌ ಬಿಟ್ಟು ಬೇರೇ ಕಡೆ‌ ಹೋದರಂತೆ,ಅಂದಿನಿಂದಲೂ ಅವರ ಎದುರಿಗೆ‌ ನಿಂತು ಸರಿಯಾಗಿ ಸಾರೀ ಕೇಳಲಾಗದೇ ಹೋದೆನಲ್ಲಾ ಎಂಬ‌ ಕೊರಗಿನ ಶೃತಿ ಈ ಕಲ್ಲು ವೀಣೆಯಲ್ಲೂ ಆಗಾಗ್ಗೆ ಧ್ವನಿಸುತ್ತಲೇ ಇರುತ್ತದೆ. ಮುಂದೆ ಓದಿ ಹಿರಿಯೂರು ಪ್ರಕಾಶ್ ಅವರ ಸಿಂಪಲ್ಲಾಗೊಂದ್ ಲವ್ ಸ್ಟೋರಿ… ಅಂತೂ ಅಲ್ಲ..!

ಆಗಷ್ಟೇ ಹೈಸ್ಕೂಲ್ ಮುಗಿಸಿ ಕಾಲೇಜು ಮೆಟ್ಟಿಲುಗಳನ್ನು ಹತ್ತಿದ ಆರಂಭದ ಜೋಷ್ ತುಂಬಿದ ದಿನಗಳವು. ಕಾಲೇಜೆಂದರೆ ಕನಸಲ್ಲೂ ಕನವರಿಸುವ ರೋಮಾಂಚನವನ್ನುಂಟು ಮಾಡುವ ರಸನಿಮಿಷಗಳ ಮಧುರವಾದ ಘಟ್ಟ. ಅದರಲ್ಲೂ ಆಗ ತಾನೇ ಮೊಗದಲ್ಲಿ ಯೌವ್ವನದ ಲಕ್ಷಣಗಳು ಚಿಗುರೊಡೆಯುತ್ತಿದ್ದ ಕಾಲಘಟ್ಟ. ಮೇಲಾಗಿ ಇಡೀ ಜಗತ್ತನ್ನೇ ಗೆಲ್ಲಬಲ್ಲನೆಂಬ ಶಕ್ತಿ, ಚೈತನ್ಯ, ಹುಮ್ಮಸ್ಸು ಉಲ್ಲಾಸ, ಉತ್ಸಾಹಗಳೆಲ್ಲಾ ಮೈಮನಗಳಲ್ಲಿ ಹರಿದಾಡುತ್ತಿದೆಯೇನೋ ಎಂಬಂತಹಾ ಅಥವಾ ಆ ತೆರನಾದ ಭ್ರಮೆಯಲ್ಲಿ ಅನಾಮತ್ತು ಹೂತು‌ ಹೋದಂತಹಾ ನವಿ ನವಿರಾದ ಫ಼ೀಲಿಂಗು !

ಆರಂಭದಲ್ಲಿ ಇಷ್ಟಪಟ್ಟೇ ಪಿ.ಸಿ.ಎಂ.ಬಿ. ವಿಜ್ಞಾನದ ವಿಭಾಗಕ್ಕೆ ಸೇರಿದ್ದ ನಾನು, ಒಂದೆರಡೇ ದಿನಗಳಲ್ಲಿ ನನ್ನಲ್ಲಿ ವಿಜ್ಞಾನಕ್ಕೆ ಬೇಕಾದ ಕನಿಷ್ಠ ಜ್ಞಾನ ಇಲ್ಲವೆಂಬ ಕೀಳರಿಮೆಗೋ ಅಥವಾ ನನ್ನ‌ ಹಿರಿಯೂರಿನ ಖತರ್ನಾಕ್ ಚಡ್ಡಿ ದೋಸ್ತ್ ಗಳೆಲ್ಲಾ ಕಲಾ ವಿಭಾಗಕ್ಕೆ ಗುಂಪು ಗುಂಪಾಗಿ ನುಗ್ಗಿದರೆಂಬ ಕಾರಣಕ್ಕೋ, ಇಲ್ಲವೇ ಅವರನ್ನು ಬಿಟ್ಟಿರಲಾರದ ಮನೋವೇದನೆಯಿಂದಲೋ… ಹೇಗೋ ಮಾಡಿ ಅವರೊಂದಿಗೇ ಕಲಾವಿಭಾಗಕ್ಕೇ ಸೇರಿಕೊಂಡು‌ ನಿಟ್ಟುಸಿರು ಬಿಟ್ಟೆ.

ಹೈಸ್ಕೂಲ್ ವರೆಗೂ ಹೆಚ್ಚು ಕಡಿಮೆ ನಿಕ್ಕರ್‌ ( ಅರ್ಧ‌ ಪ್ಯಾಂಟ್ ಅಥವಾ ಈಗಿನ ಬರ್ಮುಡಾ! ಒಮ್ಮೊಮ್ಮೆ ಆರೆಸ್ಸೆಸ್ ಶಾಖೆಗೆ ಹೋಗಿ ನಂತರ ಅದೇ ಚಡ್ಡಿಯಲ್ಲೇ ಶಾಲೆಗೆ ಓಡಿದ್ದ ನೆನಪು!) ಮತ್ತು ಅಂಗಿಯಲ್ಲೇ ಕಂಗೊಳಿಸುತ್ತಿದ್ದ ನನ್ನಂತಹಾ ಆ ಜಮಾನಾದ ಹುಡುಗರಿಗೆ ಕಾಲೇಜಿಗೆ ಸೇರಿಕೊಂಡ ಮೇಲೆ ಆದ ಮಹತ್ತರ ಬದಲಾವಣೆಯೆಂದರೆ ಆ ಜಾಗದಲ್ಲಿ ರೆಗ್ಯುಲರ್ ಆಗಿ ಪ್ಯಾಂಟು ಶರ್ಟು ಬಂದಿದ್ದು ಹಾಗೂ ಶಾಲಾ ದಿನಗಳಿಂದ ಬರೀ ಹುಡುಗರೊಂದಿಗೇ ಮಾತ್ರ ಶಾಲೆಗಳಲ್ಲಿ ಕೂರುತ್ತಾ ಬಂದಿದ್ದ ನಮಗೆ‌ ಮೊದಲ ಬಾರಿಗೆ ನನ್ನ ವಾರಿಗೆಯ ಹುಡುಗಿಯರೊಂದಿಗೆ ಕಾಲೇಜಿನ ಕ್ಲಾಸ್ ಗಳಲ್ಲಿ‌ ಕುಳಿತುಕೊಳ್ಳುವ‌ ವಿಶಿಷ್ಟವಾದ ಹಾಗೂ ಡಿಫ಼ರೆಂಟ್ ಅನುಭವ !

ಆಗೆಲ್ಲಾ ಕೋ-ಎಜುಕೇಶನ್ ‌ಅನ್ನೋದು ನಮ್ಮ ಕಾಲೇಜು‌ ದಿನಗಳ ರಾಮಾಯಣದಲ್ಲಿ ಪ್ರಾರಂಭವಾದ ‌ಸುಂದರಕಾಂಡ. ಹೀಗಾಗಿ ಅಲ್ಲಿಯವರೆಗೂ ಹೇಗೇಗೋ ಇರುತ್ತಿದ್ದ ನಮ್ಮ ನಮ್ಮಲ್ಲೇ ಉಡುಗೆ‌, ತೊಡುಗೆ ಮಾತು- ಕತೆ, ರೀತಿ ನೀತಿ ಎಲ್ಲದರಲ್ಲೂ ಧಿಡೀರ್ ಬದಲಾವಣೆಗಳೂ ದಿನೇ ದಿನೇ ಆಗುತ್ತಾ ಬಂದವು. ಒಟ್ಟಿನಲ್ಲಿ ಎಲ್ಲರೂ ವಿಭಿನ್ನವಾಗಿ , ಸ್ಟೈಲಾಗಿ ಕಾಲೇಜಿಗೆ‌ ಬರಲು ಶುರುವಿಟ್ಟುಕೊಂಡರು. ಅದಕ್ಕೆ ಕಾರಣ ಬೇರೇ ಹೇಳಬೇಕಾಗಿಲ್ಲ. ನಿಧಾನವಾಗಿ, ಎಲ್ಲರೂ ಹುಡುಗಿಯರೊಂದಿಗೆ ದಿನೇ ದಿನೇ ಸಹಜವಾಗಿಯೆಂಬಂತೆ ಅಗತ್ಯವಿರಲಿ ಬಿಡಲೀ ಅದೊ ಇದೂ ಮಾತನಾಡುವುದು ಕಾಮನ್ ಆಗುತ್ತಾ ಬಂತು. ಕೆಲವರಂತೂ ಮುಂದಿನ ಬೆಂಚ್ ಗಳಲ್ಲಿ ಹುಡುಗಿಯರ ಪಕ್ಕದ ಸಾಲಿನಲ್ಲಿ ಕೂರಲಿಕ್ಕೆಂದೇ ಬೆಳಿಗ್ಗೆ ಎಂಟು ಘಂಟೆಯ‌ ಕಾಲೇಜಿಗೆ ಏಳಕ್ಕೆಲ್ಲಾ ವಕ್ಕರಿಸುತ್ತಿದ್ದರು. ಕೆಲವು ಸ್ನೇಹಿತರ ಈ ಆಕರ್ಷಕ ಸರ್ಕಸ್ ಗಳನ್ನೆಲ್ಲಾ ದೂರದಿಂದಲೇ ನೋಡಿ ಅವರ ನಿತ್ಯಾವತಾರ ಹಾಗೂ ಹುಡುಗಿಯರನ್ನು ಆಕರ್ಷಿಸುವ ಕಲೆಗೆ ಒಳಗೊಳಗೇ ನಗುತ್ತವ್ ಕಾಲೆಳೆಯುತ್ತಿದ್ದೆವು.

ಆದರೆ ಕೊನೇವರೆಗೂ ಕೊನೇ ಬೆಂಚಿನ‌ ಖಾಯಂ ಸದಸ್ಯರಾಗಿದ್ದ ನಾನು ಮತ್ತು ‌ನನ್ನ ನಾಲ್ಕಾರು ಜೀವದ ಗೆಳೆಯರಿಗೆ ಕ್ಲಾಸ್ ನಲ್ಲಿರೋದಕ್ಕಿಂತ ಕ್ಲಾಸ್ ಬಂಕ್ ಮಾಡಿ ಹೊರಗಡೆ ದಿನವೆಲ್ಲಾ ಕ್ರಿಕೆಟ್, ಕೇರಂ ಆಡಿಕೊಂಡಿರೋದೇ ಅಚ್ಚು ಮೆಚ್ಚು. ಈ ಕ್ರೀಡೆ ಬಗೆಗಿನ ನಮ್ಮ ಅಂದಿನ ಆಸಕ್ತಿ ನಾವುಗಳು ‌ಕಾಲೇಜು, ಷೋಕಿ, ಕನ್ಯೆಯರು, ಮಿಂಚಿಂಗು, ಲೈನಿಂಗು….. ಮುಂತಾದ ವಯೋ ಸಹಜ ಆಕರ್ಷಣೆಯಿಂದ ವಿಮುಖವಾಗಲು ಬಹುತೇಕ ಕಾರಣವಾಯಿತು.ಹಾಗಂತ ಕಾಲೇಜಿನ ವರ್ಣರಂಜಿತ ಪುಟಗಳಲ್ಲಿ ನಾನು ನೆನಪು ಮಾಡಿಕೊಳ್ಳುವ ಘಟನೆಗಳು‌ ಇಲ್ಲವೇ ಇಲ್ಲವೆಂದಲ್ಲ !

ಹೀಗೊಂದು ಪಕ್ಕಾ ಕಲರ್ ಫ಼ುಲ್ ಇನ್ಸಿಡೆಂಟು ಮರೆಯಲಾಗೋಲ್ಲ.

ಫೋಟೋ ಕೃಪೆ : youtube

ಅದೊಂದು‌ ದಿನ‌ ಎಂದಿನಂತೆ ಕಾಲೇಜಿನ ಮೈದಾನದಲ್ಲಿ ಕ್ರಿಕೆಟ್ ‌ಪ್ರಾಕ್ಟೀಸ್ ಮಾಡುತ್ತಿದ್ದೆವು. ನಾವೆಲ್ಲಾ ಕಾಲೇಜಿಗೆ‌ ಹೋಗುವಾಗ ಬರುವಾಗ ಮೈದಾನವನ್ನು‌ ಬಳಸಿಯೇ ನಡೆದುಹೋಗ ಬೇಕಿತ್ತು.‌ ಪ್ರಾಕ್ಟೀಸಿಗೆ ಅಂತ ಬೇರೆ ಜಾಗ ಇರಲಿಲ್ಲ. ಹೀಗಾಗಿ ಬರುವವರು ಹೋಗುವವರ ನಡುವೆಯೇ ಕೆಲವೊಮ್ಮೆ ಆಟ ಆಡಬೇಕಿತ್ತು. ಆ ಸಂಧರ್ಭದಲ್ಲಿ ನಾನು ಬ್ಯಾಟಿಂಗ್ ಮಾಡುತ್ತಿದ್ದೆ. ಆಟದ ಮಧ್ಯದಲ್ಲಿ ನಾನು‌ ಬಲವಾಗಿ ‌ಬಾರಿಸಿದ‌ ಚೆಂಡು ಆಗ ತಾನೇ‌ ಕ್ಲಾಸ್ ‌ಮುಗಿಸಿಕೊಂಡು ಬರುತ್ತಿದ್ದ ಹುಡುಗಿಯರ ಗುಂಪಿನಲ್ಲಿದ್ದ ಒಂದು ಹುಡುಗಿಗೆ ಸರಿಯಾಗಿಯೇ ಬಿತ್ತು ಅನ್ಸುತ್ತೆ. ತಕ್ಷಣವೇ ಹೋಗಿ ನೋಡಿದರೆ ಅವರು ನನ್ನ‌ ಕ್ಲಾಸ್ ಮೇಟ್ಸ್ ಆಗಿದ್ದರು . ಅಲ್ಲಿದ್ದವರಲ್ಲಿ ಏಟು ತಿಂದ ಹುಡುಗಿ ಪಾಪ ತೆಪ್ಪಗೆ ಸುಮ್ಮನಿದ್ದರೇ, ‌ಪಕ್ಕದಲ್ಲಿದ್ದ ಒಬ್ಬಳು ನನ್ನತ್ತ ಗುರಾಯಿಸಿಕೊಂಡು ” ಕ್ಲಾಸ್ ಗಂತೂ‌ ಒಂದು ದಿನವೂ ನೆಟ್ಟಗೆ ಬರೋಕಾಗಲ್ಲ , ಕೊನೇ ಪಕ್ಷ ಕಣ್ಣು ಬಿಟ್ಟುಕೊಂಡು ಆಡೋಕೂ ಬರಲ್ವೇ…? ಅಂತ ನೇರವಾಗಿ ನನಗೇ ಟಾಂಗ್ ಕೊಟ್ರು. ಆ ತಕ್ಷಣಕ್ಕೆಏನು ಮಾಡೋದು ಅಂತ ಗೊತ್ತಾಗದೇ ಏಟು ತಿಂದ ನನ್ನ ಕ್ಲಾಸ್‌ಮೇಟ್‌ಗೆ‌ ಕ್ಷಮೆ ಕೇಳಲೂ ಆಗದೆ ಅವರ ಮುಖ ನೋಡಿದೆ. ಅವರ‌ ನೋಟದಲ್ಲಿ ನನ್ನದೇನೂ ತಪ್ಪಿಲ್ಲವೆಂಬ ಭಾವನೆಯಿದ್ದಿದ್ದನ್ನು ಮಾತ್ರ ಗಮನಿಸಿದೆ. ಏನೊಂದನ್ನೂ ಮಾತನಾಡದೇ ಕಿರು ನಗೆ‌ಬೀರಿ ಅಲ್ಲಿಂದ ಹೊರಟೇ ಹೋದರು. ಯಾಕೋ ಗೊತ್ತಿಲ್ಲ, ಆ‌ ದಿನವೆಲ್ಲಾ ಸರಿಯಾಗಿ ಹೇಳಿಕೊಳ್ಳಲಾಗದ ತಳಮಳ, ಹಾಗೂ ಅವರಲ್ಲಿ ಹೋಗಿ ಸಾರೀ ಕೇಳಬೇಕೆಂಬ ತವಕ ಬಾರಿ ಬಾರಿಗೂ ಹೆಚ್ಚಾಗುತ್ತಿತ್ತು.

ಅಂದಿನಿಂದ ಸಾಕಷ್ಟು ಬದಲಾವಣೆಗಳೂ ನನ್ನಲ್ಲಿ‌ ನನಗರಿವಿರದಂತೆ ಆಗುತ್ತಾ ಬಂದವು.ದಿನಕ್ಕೆ ನಾಲ್ಕು ಪೀರಿಯಡ್ ಗಳಲ್ಲಿ ಒಂದು ಕ್ಲಾಸ್ ಮಾತ್ರ ಬಲವಂತವಾಗಿ ಅಟೆಂಡ್ ಮಾಡಿ, ಆನಂತರ ಆ ದಿನವೆಲ್ಲಾ ಕಾಲೇಜು ಕಡೆ ತಲೆ ಕೂಡಾ ಹಾಕಿ ಮಲಗದಿದ್ದ ನಾನು ಆಮೇಲೆ ಎಲ್ಲಾ ತರಗತಿಗಳಿಗೂ ನಿಷ್ಠೆಯಿಂದ ಕೂರುತ್ತಿದ್ದೆ. ನಿಧಾನವಾಗಿ ಎಲ್ಲರಲ್ಲೂ ಬೆರೆತು ಹೋದೆ. ನನ್ನ‌ಬದಲಾವಣೆ ಬಗ್ಗೆ ಗೆಳೆಯರು ಕಾಲೆಳೆದಾಗ ” ಎಗ್ಸಾಮ್ ಹತ್ರ ಬರ್ತಾ ಇದೆ ಅಲ್ವಾ … ಹೀಗಾಗಿ ಇನ್ಮೇಲಾದ್ರೂ ಕ್ಲಾಸಸ್ ಅಟೆಂಡ್ ಮಾಡೋಣ”.. ಎನ್ನುತ್ತಾ ಸಮಝಾಯಿಷಿ ಕೊಡುತ್ತಿದ್ದೆ. ಆದರೆ ನಾನೆಂತಹ ಬುದ್ದಿವಂತನೆಂದು ಗೊತ್ತಿದ್ದ ಗೆಳೆಯರು ಅದನ್ನು ನಂಬಲು ಸಾಧ್ಯವಿತ್ತೇ… ?

ಫೋಟೋ ಕೃಪೆ : istock

ಕಾಲೇಜಿನಲ್ಲಿ ಎಲ್ಲ ಹುಡುಗಿಯರನ್ನು ಸಹಜವಾಗಿ ಮಾತನಾಡಿಸಿದರೂ ನನ್ನಿಂದ ಏಟು ತಿಂದಿದ್ದ ಆ ಹುಡುಗಿಯತ್ತ ಮುಖ‌ ಕೊಟ್ಟು‌ ಮಾತನಾಡುವ ಧೈರ್ಯ ಮಾತ್ರ ಬರುತ್ತಿರಲಿಲ್ಲ. ಆದರೂ ಅವರನ್ನು ಪ್ರತ್ಯೇಕವಾಗಿ ಕಂಡು ಸಾರೀ‌ ಕೇಳುವ ಮನದ‌ ಬಯಕೆ ಹಾಗೇ ಇತ್ತು.

ಅದೊಂದು ದಿನ ‌ಒಮ್ಮೆ ಧೈರ್ಯ ಮಾಡಿ ಅವರೊಬ್ಬರೇ ಇದ್ದಾಗ‌ ಹೋದೆ. ಅವರತ್ತ ತಡವರಿಸುತ್ತಲೇ… ” ದಯವಿಟ್ಟು ಕ್ಷಮಿಸಿ ಆ ದಿನ ನಾನು‌ ಬ್ಯಾಟ್ ಮಾಡುವಾಗ ತಮಗೆ ಚೆಂಡು ತಗುಲಿ ನಿಮಗೆ ತುಂಬಾ ಪೆಟ್ಟಾಯಿತು. ನಾನು ಬೇಕಂತ ಹೊಡೆದದ್ದಲ್ಲ. ತಪ್ಪು ತಿಳಿಯಬೇಡಿ,..” ಎನ್ನೋಣ ಅನ್ನುವಷ್ಟರಲ್ಲಿ ನನ್ನ ಮಿಕ್ಕ ಪಟಾಲಂ ಗಳೆಲ್ಲಾ ಅದೇ ಸಮಯಕ್ಕೆ ಒಮ್ಮೆಲೇ ಧಾಳಿಯಿಟ್ಟಿದ್ದರಿಂದ ಅದೂ ಸಾಧ್ಯವಾಗದೇ ನಿರಾಶೆಯಿಂದ ಇದ್ದವನನಿಗೆ ಅವಳ ಎಂದಿನ ಮುಗುಳು ನಗೆಯೇ‌ ಉತ್ತರವಾಯಿತು.!

ಅಂದಿನಿಂದ ಪ್ರತಿ ನಿತ್ಯ‌ ನಮ್ಮ ನಮ್ಮ‌ ಕಣ್ಣುಗಳೇ ಮಾತನಾಡಿಕೊಳ್ಳುತ್ತಿದ್ದವು. ಆ ನೋಟಗಳಲ್ಲಿನ ಭಾವನೆಗಳಲ್ಲಿದ್ದುದು ನವಿರಾದ ಸ್ನೇಹವೋ, ವಯಸ್ಸಿನ ಆಕರ್ಷಣೆಯೋ, ಗೊತ್ತು ಗುರಿಯಿಲ್ಲದೇ ಚಿಗುರೊಡೆದ ಪ್ರೀತಿಯೋ, ಪ್ರೇಮದ ಪರವಶತೆಯೋ ಅಥವಾ ಅದೇನೋ ಮೊದಲ ಕ್ರಷ್ ಅಂತೀವಲ್ಲ ಅದೋ…… ಅಂದಿಗೂ ಇಂದಿಗೂ ಒಂದೂ ಅರ್ಥವಾಗುತ್ತಿಲ್ಲ.

ಏಕೆಂದರೆ ಅಂದು ನಮ್ಮಿಬ್ಬರ ನಡುವೆ ಮಾತುಗಳುದಿಸುವ ಶಬ್ದದ ನಿರರ್ಥಕ ಸಂವಹನಕ್ಕಿಂತ, ಮೌನದ ಸಂಭಾಷಣೆಯೇ ಹೆಚ್ಚಾಗಿತ್ತು. ಮನದ ಮಾತುಗಳನ್ನು ಪರಸ್ಪರ ಗೌರವಿಸುವ ಅವ್ಯಕ್ತ ಅರ್ಥದ ಒಡಂಬಡಿಕೆಯಿತ್ತು. ಮಾತಿನ‌ ಕ್ಷಣಿಕತೆಗಿಂತ ಮೌನದ ಅನಂತತೆ ತುಂಬಿತ್ತು. ಬಟ್……. ಅಸಹ್ಯವೆನಿಸುವ ಸೊಂಕೂ, ಬಿಂಕೂ, ಧಿಮಾಕು ಎನ್ನುವ ಕೊಂಕೂ ಅಲ್ಲಿರಲಿಲ್ಲ. ಒಂಥರಾ ನಿಷ್ಕಲ್ಮಶ ಮನಸುಗಳ ನವಿರಾದ ನೋಟ ಅಂತ ಅಂದುಕೊಳ್ಳುತ್ತಾ ನನಗೆ ನಾನೇ ಕಾಲರ್ ಮೇಲಕ್ಕೆತ್ತಿಕೊಂಡಿದ್ದ ಜ಼ಮಾನಾ ಅದು . !!

ಅಲ್ಲಿಂದ ಅವರನ್ನು ಹತ್ತಿರದಿಂದ ಕಂಡು ಮುಕ್ತವಾಗಿ ಮಾತನಾಡಿಸಬೇಕೆಂದು ಸಾಕಷ್ಟು ಬಾರಿ ಅಂದುಕೊಂಡಿದ್ದರೂ ಅದೇಕೋ ಆ ತೀಕ್ಷ್ಣ ನೋಟಗಳನ್ನು, ಮುಗ್ದತೆ ತುಂಬಿರುವ ಕಿರುನಗೆಯನ್ನು ಮುನ್ನುಗ್ಗಿ ಎದುರಿಸುವ ಭಂಡ ಧೈರ್ಯ , ಭಂಡನಾದರೂ ನನಗೆ ಬರಲೇ ಇಲ್ಲ. ಸಾರ್ವಜನಿಕವಾಗಿ ಪಟ ಪಟ ಅಂತ ಮಾತನಾಡುವ, ಕಾಲೇಜಿನಲ್ಲಿ ಎಲ್ಲ‌ರೊಂದಿಗೆ ಬೆರೆತು ಮುಕ್ತವಾಗಿ ಹರಟುವ , ಮೈದಾನದಲ್ಲಿ ಹುಮ್ಮಸ್ಸಿನಿಂದ ನಿರಾಯಾಸವಾಗಿ ಬೌಂಡರಿ- ಸಿಕ್ಸರ್ ಗಳನ್ನು ಬಾರಿಸುತ್ತಿದ್ದ ನನಗೆ ಅಂದು ಆ ಹುಡುಗಿಯೊಬ್ಬಳ ನೋಟದ ಬೌಲಿಂಗ್ ನ್ನು ಎದುರಿಸಲಾಗದೆ ಕ್ಲೀನ್‌ ಬೌಲ್ಡ್ ಆಗಿದ್ದೆ.!

( ಬಡ್ಡಿ ಮಗಂದು ಇಂದು ‘ಕ್ಲೀನ್ ಬಾಲ್ಡ್ ‘ ಆದಾಗಲೂ ಅದನ್ನು ಮರೆಯಲಾಗೋಲ್ಲ..!)

ಫೋಟೋ ಕೃಪೆ : commons.wikimedia

ಅಂತಿಮ ಪಿಯುಸಿ ಪರೀಕ್ಷೆಗಳು ಅನೌನ್ಸ್ ಆದವು. ಅಲ್ಲಿಯವರೆಗೂ ಯಾವುದೇ ನೋಟ್ಸ್ ಬರೆದುಕೊಳ್ಳದೇ, ಸಿದ್ದತೆಯಿಲ್ಲದೇ ಇದ್ದ ನನಗೆ ( ಕ್ಲಾಸ್ ಅಟೆಂಡ್ ಮಾಡಿದ್ರೆ ತಾನೇ ! ) ಗಾಬರಿ ಶುರುವಾಯಿತು. ನನ್ನ ಬೆಂಚ್ ನವರೂ ಸಹಾ ನನ್ನಂತೆಯೇ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ನೆಡೆಸುವ ಅಪರ ಪರಾಕ್ರಮ ಶಾಲಿಗಳು.! ಏನೊಂದು ಮಾಡಲು ಗೊತ್ತಾಗದೇ ಸಿಲಬಸ್ ಹಾಗೂ ಮುಖ್ಯ ಪ್ರಶ್ನೆಗಳ ಸಲಹೆಗಾಗಿ ಕೊನೆಗೆ ಕ್ರೀಡಾ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ಆಪ್ತರಾಗಿದ್ದ ಗುರುಗಳೊಬ್ಬರ ಮೊರೆ ಹೋದೆ. ಅವರಿಗೆ ಇದೇ ಛಾನ್ಸು ಅನ್ಸುತ್ತೆ ! ಹೀಗೆ ಬೇಡಿಕೆಯಿಟ್ಟಿದ್ದ ನನ್ನ ನ್ನು ಕಂಡು ” ಸದಾ ಕ್ರಿಕೆಟ್ ಆಡಿಕೊಂಡು ಸಿನಿಮಾ ನೋಡ್ಕೊಂಡು ಕ್ಲಾಸ್ ಚಕ್ಕರ್ ಹಾಕ್ಕೊಂಡು ತಿರ್ಗೋ ನಿಮಗೆಲ್ಲಾ ಯಾಕ್ರೋ ಓದು, ನೋಟ್ಸೂ ಎಲ್ಲಾ ! ಅಂತೆಲ್ಲಾ ಅವರಿಂದ ಸಹಸ್ರ ನಾಮಾರ್ಚನೆ ಆದ ಮೇಲೆ ನಂತರ ಅವರಿಗೂ ಗೊತ್ತು ” ಇವ ಪೋಲಿ ಹುಡುಗರ ಜಾತಿಯಲ್ಲ ” ವೆಂದು. ಹೀಗಾಗಿ ಅಭಿಮಾನದಿಂದ ಒಂದು ಸಲಹೆ ಕೊಟ್ರು.

” ನೋಡೋ ಮರೀ , ಒಂದು ಹುಡುಗಿ ನಮ್ಮ ಎಲ್ಲಾ ಲೆಕ್ಚರರ್ಸ್ ನೋಟ್ಸ್ ತುಂಬಾ‌ ಚೆನ್ನಾಗಿ ಬರೆದುಕೊಂಡಿದ್ದಾಳೆ. ಅವಳಲ್ಲಿ ಹೋಗಿ ಟ್ರೈ ಮಾಡು . ಕೊಟ್ರೆ ನಿನ್ ಪುಣ್ಯ” . ಅಂದುಬಿಟ್ರು. ಆ ಹುಡುಗಿ ಬೇರಾರೂ ಆಗಿರದೆ ನಾನು ಅವಳತ್ತ ಮಾತನಾಡಿಸಲಾಗದೇ ಸಾರೀ ಕೇಳಲಾಗದೇ ಇದ್ದವಳೂ, ಮನದಲ್ಲಿ ತಳಮಳವನ್ನುಂಟು ಮಾಡಿದವಳೂ ಆಗಿರಬೇಕೇ…!

ಅಂತೂ ಒಂದು‌ ಅವಕಾಶ ‌ಸಿಕ್ತು. ನೋಟ್ಸ್ ಕೇಳಲೇ ಬೇಕೆಂದು ಒಂದು ದಿನ ಅವರನ್ನು‌ ಕಾಲೇಜಿನಿಂದ ಮೈದಾನ ಬಳಸಿ ಮನೆಯವರೆಗೂ ಹಿಂಬಾಲಿಸುತ್ತಲೇ ಹೋದೆ.‌ ಧೈರ್ಯ ಬರಲಿಲ್ಲ. ಆದರೂ ಛಲದಂಕ ಮಲ್ಲ ನಂತೆ ಮತ್ತೊಂದು ದಿನ ಹೋಗಿ ಕೇಳಿಯೇ ಬಿಟ್ಟೆ. ( ಬಂಧನದ ಡಾ. ವಿಷ್ಣುವರ್ಧನ್ ರ ಥರಾ ರಿಹರ್ಸಲ್ ಮಾಡುವಷ್ಟರಲ್ಲಿ ನಾಲ್ಕು ದಿನ ಕಳೆದಿತ್ತು…).

ನಾನು ನೋಟ್ಸ್ ಕೇಳಿದ್ದಕ್ಕೆ ಅವಳು ಸ್ವಲ್ಪ ಅಸಮಾಧಾನದಿಂದಲೇ ಅಲ್ಲಾ ” ಇಷ್ಟು ದಿನ ಸುಮ್ಮನಿದ್ದು ಈಗ ಎಗ್ಸಾಮ್ ಟೈಮ್ ನಲ್ಲಿ‌ ಬಂದಿದ್ದೀರಲ್ಲಾ? ನಿಜಕ್ಕೂ ಇದು ನಿಮ್ಗೆ ಯೂಸ್ ಆಗುತ್ತಾ…? ಅಂದಾಗ ನಾನು ತಗ್ಗಿಸಿದ ತಲೆ ಎತ್ತಲಿಲ್ಲ.! ನಂತರ ಅವಳೇ ಮುಂದುವರೆದು ” ನನಗ್ಗೊತ್ತು ನೀವು ಮನಸ್ಸು ಮಾಡಿದ್ರೆ ಈಗಲೂ ಫ಼ಸ್ಟ್ ಕ್ಲಾಸ್ ನಲ್ಲಿ ಪಾಸ್ ಮಾಡ್ರೀರಾ… ಅಂದಾಗ ನಿಂತಲ್ಲೇ ನೀರಾದೆ. ಆದರೆ ” ನನ್ನ ನೋಟ್ಸ್ ನಾಲ್ಕು ದಿನಕ್ಕೆಲ್ಲಾ ವಾಪಾಸು ಕೊಡಬೇಕು‌ ಹಾಗೂ ನೀವು ಆಟ ಸಿನಿಮಾ ಎಲ್ಲಾ ಬಿಟ್ಟು ದಿನವಿಡೀ ಓದಿನ‌ ಕಡೆ ಗಮನ ಹರಿಸಬೇಕು..”…ಎನ್ನುವ ಪ್ರೀತಿಯ- ಸ್ನೇಹದ ಕಂಡೀಷನ್‌ ನೊಂದಿಗೆ ನೋಟ್ಸ್ ಪಡೆದೆ. ಅಲ್ಲಿಂದ ಮನಸಾರೆ ಥ್ಯಾಂಕ್ಸ್ ಹೇಳಿ ಜಾಗ ಖಾಲಿ ಮಾಡಿದ ನಾನು ಅವರಿಗೆ ತೊಂದರೆಯಾಗಬಾರದೆಂಬ ಒಂದೇ ಕಾರಣಕ್ಕೆ ಹಗಲು ರಾತ್ರಿ‌ ಕೂತು ಎಲ್ಲಾ ನೋಟ್ಸ್ ಗಳನ್ನೂ ಬರೆದು, ಬರೆಯುವಾಗಲೇ ಓದಿ ಮುಗಿಸಿದ್ದೆ….! ಅಂದರೆ ಒಂದು ವರ್ಷದ ಸಿಲಬಸ್ ಗಳನ್ನು ಒಂದು ವಾರದಲ್ಲಿ ಕವರ್ ಮಾಡಿದ ಭಂಡತನದ ಪರಮಾವಧಿ ಮುಟ್ಟಿದ್ದೆ. ಹುಡುಗಿಯ ಮಾತೆಂದರೆ ಅದೆಂತಹಾ ಪವರ್ ಫ಼ುಲ್ !

ಫೋಟೋ ಕೃಪೆ : iStock

ಆನಂತರ… ಇನ್ನು ಪರೀಕ್ಷೆ ಮುಗಿದ್ರೆ ಆ ಹುಡುಗಿ ಕೈಗೆ ಸಿಗುವರೋ ಇಲ್ಲವೋ ಎಂಬ ಆತಂಕದಿಂದ ಅದುವರೆಗೂ ಹೇಳಿಕೊಳ್ಳಲಾಗದೇ ಉಳಿದಿದ್ದ ಅವರ ಬಗ್ಗೆ ನನಗಿದ್ದ ಎಲ್ಲಾ ಭಾವನೆಗಳಿಗೆ, ಗೌರವಕ್ಕೆ, ನಯನಗಳು ಸಂಧಿಸಿದಾಗ ಉಂಟಾಗುತ್ತಿದ್ದ ಅರ್ಥಗಳಿಗೆ ಮುಖ್ಯವಾಗಿ ಆಟದಲ್ಲಿ ಅವರಿಗೆ ಏಟು ಬಿದ್ದಿದ್ದಕ್ಕೆ ಕೇಳಲಾಗದಿದ್ದ ಕ್ಷಮೆಗೆ….. ಅಕ್ಷರ ರೂಪ ಕೊಟ್ಟು ಅಸ್ತವ್ಯಸ್ತವಾಗಿ ಬರೆದ ಒಂದು ಕ್ಷಮಾಪಣಾ ರೂಪದ ಪತ್ರಕ್ಕೆ ಮನದ ಎಲ್ಲ ಭಾವನೆಗಳ ಚೌಕಟ್ಟನ್ನು ಹಾಕಿ ಸಿಂಗರಿಸಿ ಪತ್ರವನ್ನು ಅವರಿಗೆ ಕೊಡಬೇಕಾದ ನೋಟ್ಸ್ ನಲ್ಲಿ ಭದ್ರವಾಗಿರಿಸಿದೆ.

ಆದರೆ ಮನಸ್ಸು ಮಾತ್ರ ಗಲಿಬಿಲಿಗೊಳಗಾಗಿತ್ತು. ಪರೀಕ್ಷಾ ಸಮಯ ಬೇರೆ. ಒಂದು ಹುಡುಗ ಮತ್ತೊಂದು ಹುಡುಗಿಗೆ‌ ಪತ್ರ ಬರ್ದಿದ್ದಾನೆ ಅಂತ ಗೊತ್ತಾದ್ರೇನೆ ಸಾಕು, ಅದು ಏನು ಎತ್ತ ಅಂತ ಯೋಚಿಸದೇ‌ ಗುಲ್ಲೆಬ್ಬಿಸೋ ಮಂದಿಯಿರುವಾಗ ಇವೆಲ್ಲಾ ಬೇಕಾ ಅಂದುಕೊಂಡು ಅದನ್ನು ಜಸ್ಟ್……..!!

ಆನಂತರ ಅಂದಿನ ಮನದೊಳಗಿನ ನನ್ನೆಲ್ಲಾ ಭಾವನೆಗಳು‌ ನನ್ನಲ್ಲೇ ‌ಉಳಿದುಕೊಂಡು ಬಂದಿವೆ. ಪರೀಕ್ಷಾ ಫಲಿತಾಂಶ ಬಂದಾಗ ನನ್ನೆಲ್ಲಾ ಗೆಳೆಯರಿಗೂ, ಲೆಕ್ಚರರ್ಸ್ ಸಮೂಹಕ್ಕೂ , ಅಷ್ಟೇಕೆ ಇಡೀ ಕಾಲೇಜಿಗೂ ಅಚ್ಚರಿ. ನಾನು ಅನಿರೀಕ್ಷಿತವಾಗಿ ಕಾಲೇಜಿಗೇ‌ ಅತಿ ಹೆಚ್ಚು ಅಂಕ ಗಳಿಸಿ ಮೊದಲ ಸ್ಥಾನದಲ್ಲಿ‌ ಉತ್ತೀರ್ಣನಾಗಿದ್ದೆ. ಸೋ ಕಾಲ್ಡ್ ಕಾಲೇಜ್ ಇಂಟಲಿಜೆಂಟ್ ಗಳೂ ಹಾಗೂ ಗುರುಗಳ ನೆಚ್ಚಿನ ಶಿಷ್ಯರಾಗಿದ್ದವರಿಗಂತೂ ಈ ಫಲಿತಾಂಶ ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಆದರೆ ನಾನು ಅದಾವುದರ ಬಗೆಗೂ ತಲೆಕೆಡಿಸಿಕೊಂಡಿರಲಿಲ್ಲ.

ನನಗೆ ನನ್ನಲ್ಲಿ ಅತೀವ ಆತ್ಮವಿಶ್ವಾಸ ತುಂಬಿ ಎಗ್ಸಾಮ್ ಟೈಮ್ ನಲ್ಲಿ ನೋಟ್ಸ್ ಕೊಟ್ಟು ಸಹಾಯ ಮಾಡಿದ್ದ ಆ ಹುಡುಗಿಯ ರಿಸಲ್ಟ್ ಏನಾಯಿತೆಂಬುದೇ ನನ್ನ ಆತಂಕವಾಗಿತ್ತು. ಕೊನೆಗೆ‌ ಆ ಬಗ್ಗೆ ವಿಚಾರಿಸಲಾಗಿ ಅವರೂ ಸಹ ಉತ್ತಮ ಅಂಕ‌ಗಳಿಸಿದ್ದು ನೋಡಿ ನನಗೆ ನನ್ನ ಫಲಿತಾಂಶ ಕ್ಕಿಂತಲೂ ಹೆಚ್ಚಿನ ಖುಷಿಯಾಗಿತ್ತು. ಹೇಗೋ ಮಾಡಿ ಆ ದಿನ ಅವರತ್ತ ಹೋಗಿ ಮಾತಿಲ್ಲದೇ ಮೌನವಾಗಿ ನಿಂತೆ.

” ನಾನು ಅಂದು ಹೇಳಿದ್ದು ನಿಜ ಆಯಿತಲ್ಲಾ..! ನನಗೆ ಗೊತ್ತಿತ್ತು ನೀವು ಖಂಡಿತಾ ಸಾಧಿಸ್ತೀರಾ ಅಂತ‌ ! ಹೀಗೆ ಎಂದಿನ ಮುಗುಳು ನಗೆ ಕೊಟ್ಟು ಅಂದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು ಕಣ್ರೀ !

(ಆಗ ಮನದಲ್ಲೇ ” ನನ್ನ ಬುದ್ದಿವಂತಿಕೆ, ಯೋಗ್ಯತೆ ಏನೂ‌ ಅಂತ ನನಗ್ ಮಾತ್ರಾ ಗೊತ್ತು ಅಂದ್ಕೊಂಡೆ !)

ಆಗಲೂ ನನ್ನೊಳಗಿನ ಭಾವನೆಗಳ‌ ಗುಟ್ಟು‌‌ , ಪತ್ರದ ಕಗ್ಗಂಟು ಗಂಟಲಿನವರೆಗೆ ಬಂದು ಹೊರಗೆ ಬಾರದೇ ಹಾಗೆಯೇ ಉಳಿಯಿತು.! ಅವರನ್ನು ನೋಟದಲ್ಲೇ ಅಭಿನಂದಿಸಿ ತುಂಬು ಧನ್ಯವಾದ ತಿಳಿಸಿದ್ದೆ. ಹೆಚ್ಚಿಗೆ ಮಾತನಾಡಲು‌ಮನದೊಳಗೆ ಪೀಠಿಕೆ ಶುರು ಮಾಡುವ ಹೊತ್ತಿಗೆ ಅವಳ ಸ್ನೇಹಿತೆಯರು ಗುಂಪು ಗುಂಪಾಗಿ ಬಂದು ಸೇರಿಕೊಂಡರು. ಆನಂತರ ಎಲ್ಲವೂ‌ ಬರೀ ಫ಼ಾರ್ಮಲ್….!

ನಂತರದ ದಿನಗಳಲ್ಲಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆ ಹುಡುಗಿ ಹಿರಿಯೂರು‌ ಬಿಟ್ಟು ಬೇರೇ ಕಡೆ‌ ಹೋದರಂತೆ ! ಅಂದಿನಿಂದಲೂ ಅವರ ಎದುರಿಗೆ‌ ನಿಂತು ಸರಿಯಾಗಿ ಸಾರೀ ಕೇಳಲಾಗದೇ ಹೋದೆನಲ್ಲಾ ಎಂಬ‌ ಕೊರಗಿನ ಶೃತಿ ಈ ಕಲ್ಲು ವೀಣೆಯಲ್ಲೂ ಆಗಾಗ್ಗೆ ಧ್ವನಿಸುತ್ತಲೇ ಇರುತ್ತದೆ .!

ಬರಡು ಹೃದಯದಲ್ಲೂ ನವಿರಾದ ಭಾವನೆಗಳ ಕೊರಡು ಚಿಗುರಿದ ಪರಿಯ ಕರಡನ್ನು ನಿಮ್ಮೊಂದಿಗೆ ಸಣ್ಣದಾಗಿ ಹರಡಿ ಕೂತಿದ್ದೇನೆ……… ! ತೆರೆದ ಹೃದಯದಿಂದ ಆಸ್ವಾದಿಸಿ….


  • ಹಿರಿಯೂರು ಪ್ರಕಾಶ್ – ಲೇಖಕರು, ಚಿಂತಕರು, ಹಿರಿಯೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW