ಮಕ್ಕಳಲ್ಲಿ ಕನ್ನಡ ಭಾಷಾಭಿಮಾನ ಬೆಳೆಸೋಣ

ಇಂದು ನಿಮಗೆಲ್ಲ ತಿಳಿದಿರುವಂತೆ ನವೆಂಬರ್ ೧, ಕನ್ನಡ ರಾಜ್ಯೋತ್ಸವ. ಬೇರೆ ಬೇರೆ ಸಂಘಟನೆಗಳು ಬೇರೆ ಬೇರೆ ಶೈಲಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡುತ್ತವೆ. ಲೇಖಕಿ, ಶಿಕ್ಷಕಿ ಹರ್ಷಿಯಾ ಭಾನು ಅವರ ಶಾಲೆಯಲ್ಲಿ ಕಳೆದ ವರ್ಷ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಿದ ನೆನಪನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. 

ಆದರೆ ದುರಂತವೆಂದರೆ ಕನ್ನಡದ ಬಗೆಗಿನ‌ ಕಾಳಜಿ ಕೇವಲ ನವೆಂಬರ್ ತಿಂಗಳಿಗೆನೇ ಸೀಮಿತಗೊಳಿಸಿರುವಂತಹದ್ದು. ಕನ್ನಡಾಭಿಮಾನ, ಕನ್ನಡವನ್ನು ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸುವ ಪ್ರಯತ್ನಗಳು ನಿರಂತರವಾಗಿರಬೇಕು. ಭಾಷಣಗಳು, ಕನ್ನಡ ಹಾಡುಗಳು, ಕರ್ನಾಟಕ ರಾಜ್ಯದ ಹಿರಿಮೆ ಗರಿಮೆಗಳ ವರ್ಣನೆಗಳೆಲ್ಲ ಕೇವಲ ನವೆಂಬರ ೧ ಕ್ಕೆ ಸೀಮಿತಗೊಳಿಸಿರುವುದು ವಿಪರ್ಯಾಸದ ಸಂಗತಿ. ಕನ್ನಡ ಇಂದು ಅಳಿವಿನಂಚಿನಲ್ಲಿದೆ. ಇದಕ್ಕೆ ಕಾರಣ ಕನ್ನಡಿಗರಾದ ನಾವೇ ಕಾರಣ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ.

This slideshow requires JavaScript.

ನಮ್ಮ ಶಾಲೆ ಆಂಗ್ಲ ಮಾಧ್ಯಮ ಶಾಲೆಯಾಗಿದ್ದು, ಇಲ್ಲಿ ಕನ್ನಡ ಭಾಷೆಯನ್ನು ದ್ವಿತೀಯ ಭಾಷೆಯಾಗಿ ಬೋಧನೆ ಮಾಡಲಾಗುತ್ತಿದೆ. ಕನ್ನಡ ಭಾಷೆಯನ್ನು ಒಂದು ಮಾಧ್ಯಮವಾಗಿ ಕಲಿಯಬೇಕಾದ ನಮ್ಮ ರಾಜ್ಯದಲ್ಲಿ ಕೇವಲ ಒಂದು ಭಾಷೆಯಾಗಿ ಕಲಿಯುವಂತಹ ದಯನೀಯ ಸ್ಥಿತಿ ನಮ್ಮ ನಾಡಿನಲ್ಲಿದೆ.  ನಮ್ಮ ಶಾಲೆಯಲ್ಲಿ ಯಾವುದೇ ರಾಷ್ಟೀಯ ಹಬ್ಬಗಳು ಬಂದಾಗ ನಿರೂಪಣೆಯಿಂದ ಹಿಡಿದು ವಂದನಾರ್ಪಣೆವರೆಗೂ ಆಂಗ್ಲ ಭಾಷೆಯಲ್ಲಿಯೇ ನಡೆಸುತ್ತಾರೆ. ಆದರೆ ನಮ್ಮ ಶಾಲೆಯಲ್ಲಿ ಪ್ರತಿವರ್ಷ ಆಚರಿಸುವ ಏಕೈಕ ಕನ್ನಡದ ಕಾರ್ಯಕ್ರಮ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ಕಳೆದ ಮೂರು ವರ್ಷಗಳಿಂದಲೂ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾ ಬಂದಿದ್ದೇವೆ. ಕಳೆದ ವರ್ಷ ಬಡ ಮಕ್ಕಳನ್ನೂ ಅಂದರೆ ಕೊಳಚೆ ಪ್ರದೇಶದ ನಿವಾಸಿಗಳನ್ನು ಕರೆಸಿ ಅವರಿಗೆ ಹಣ್ಣು ಹಂಪಲು, ಬನ್ನು, ಬಿಸ್ಕತ್ತುಗಳನ್ನು ವಿತರಿಸಲಾಯಿತು. ಮಿಕ್ಕ ಬ್ರೆಡ್ ಗಳನ್ನು ಬಂಗಾರಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ಕೊಟ್ಟು ಅಲ್ಲಿದ್ದ ರೋಗಿಗಳಿಗೆ ವಿತರಿಸಲಾಯಿತು.

ಬಂಧುಗಳೇ ಈ ವಿಚಾರವನ್ನು ನಾನು ತೋರಿಕೆಗಾಗಿ ತಮ್ಮೊಂದಿಗೆ ಹಂಚಿಕೊಂಡಿಲ್ಲ. ಆ ಪುಟ್ಟ ಮಕ್ಕಳನ್ನು ಕಂಡಾಗ ಅವರ ಸ್ಥಿತಿ ಅರಿವಿಗೆ ಬಂದಾಗ ಅವರ ಭವಿಷ್ಯದ ಬಗ್ಗೆ ಯೋಚನೆಯಾಯಿತು. ಮುಂದೆ ಇವರ ಭವಿಷ್ಯಾ ಹೇಗೆ? ಇವರು ಒಂದು ಕಡೆ ನೆಲೆನಿಲ್ಲುವವರಲ್ಲ. ಇಂತಹವರಿಗೆ ಪುನರ್ವಸತಿ ಕೇಂದ್ರಗಳಿಗೆ ಸೇರಿಸಿದರೆ ಅವರ ಜೀವನ ಬೆಳಗಬಹುದೇನೋ! ಇನ್ನು ಆಸ್ಪತ್ರೆಗೆ ಹೋದರೆ ಅಲ್ಲಿರುವ ರೋಗಿಗಳ ಶೋಚನೀಯ ಪರಿಸ್ಥಿತಿ ಕಂಡು ಬಹಳ ಬೇಸರವಾಯಿತು. ಅಲ್ಲಿಗೆ ಬರುವವರೆಲ್ಲ ಕಡುಬಡವರು. ಈ ರೀತಿಯ ಸಮಾಜಮುಖಿ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಮಕ್ಕಳಿಗೂ ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರೆ ಅವರಲ್ಲಿಯೂ ಸೇವಾ ಮನೋಭಾವ ಬೆಳೆಯುತ್ತದೆ ಎಂಬುದು ನನ್ನ ಅಭಿಪ್ರಾಯ ಬಂಧುಗಳೇ.

ಮತ್ತೊಮ್ಮೆ ತಮ್ಮೆಲ್ಲರಿಗೂ ನಾಡ ಹಬ್ಬ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಬಂಧುಗಳೆ.


  • ಹರ್ಷಿಯಾ ಭಾನು, ಶಿಕ್ಷಕಿ, ಲೇಖಕಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading