ಉತ್ತರ ಕರ್ನಾಟಕ ಜಾನಪದ ಸಂಸ್ಕ್ರತಿಯ ತವರು. ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಐತಿಹ್ಯವಿದೆ. ಅದೇ ರೀತಿ ದೀಪಾವಳಿಯ ಬಲಿಪಾಡ್ಯಮಿ ಬಂದರಂತೂ ವಿರಾಟನಗರ ಎಂದು ಕರೆಯುವ ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣಕ್ಕೆ ಬಂದರೆ ಇಲ್ಲಿ ಮಹಿಷಿ ಸುಂದರಿಯರ ಕಾಳಗ ನೋಡಿ ಅನಂದಿಸಬಹುದು. ಹಾನಗಲ್‍ನಲ್ಲಿ ಮಹಿಷ ಸುಂದರಿಯರ ಕಾಳಗ ಕುರಿತು ಟಿ.ಶಿವಕುಮಾರ್ ಅವರು ಬರೆದ ಲೇಖನ ತಪ್ಪದೆ ಓದಿ…
ಬಲಿಪಾಡ್ಯಮಿಯ ದಿನ ರೈತರು ತಮ್ಮ ಹೋರಿಗಳನ್ನು ಓಡಿಸಿ ಸಂಭ್ರಮಿಸಿದರೆ ಅಂದೇ ಹಾನಗಲ್‍ನ ಗೌಳಿಗ ಸಮುದಾಯದ ಆರಾಧ್ಯ ದೈವ ಎನ್ನಬಹುದಾದ ಎಮ್ಮೆಗಳ ಕಾಳಗ ಏರ್ಪಡಿಸಿ ಸಂಭ್ರಮಿಸುತ್ತಾರೆ. ಅಂದು ತಂಡೋಪ ತಂಡವಾಗಿ ಕಪ್ಪು ಬಿಳಿಪು ಕನ್ಯೆಯರ ರೋಷ ಆವೇಷ ನೋಡುವುದೇ ಭಯಂಕರ.

ಪಾಂಡವರ ಅಜ್ಞಾತವಾಸ, ಕೀಚಕನ ವಧೆ, ಹೀಗೆ ಮಹಾಭಾರತದ ಕಥಾನಕಗಳಿಗೆ ಇಂಬು ನೀಡಿರುವ ಹಾನಗಲ್. ಈ ಎಮ್ಮೆ ಕಾಳಗದಿಂದ ನಾಡಿನಲ್ಲಿ ಮನೆಮಾತಾಗಿದೆ. ರೈತರ ಒಡನಾಡಿ ಎಂದು ಕರೆಯುವ ದನಕರುಗಳು ಸುತ್ತ ಮತ್ತಲಿನ ಕಾಡಿಗೆ ಹೋಗುವುದು ಸಹಜ ಆದರೆ ಆಕಸ್ಮಿಕವಾಗಿ ಅವಕಾಶ ಸಿಕ್ಕಾಗ ಕ್ರೂರ ಪ್ರಾಣಿಗಳು ಬೇಟೆಯಾಡಿ ತಿನ್ನುವುದು ವಾಡಿಕೆ. ಆದರೆ ಆ ರೀತಿ ಕ್ರೂರ ಮೃಗಗಳಿಗೆ ಸಿಕ್ಕು ತಮ್ಮ ಪ್ರಾಣವನ್ನು ಬಲಿಕೊಡುವ ಬದಲು ಹೋರಾಟದ ಮನೋಭಾವನೆಯನ್ನು ದನಕರುಗಳಲ್ಲಿ ಬೆಳೆಸಬೇಕು ಎಂದು ಗೌಳಿಗ ಸಮುದಾಯದವರು ಈ ದನಕರುಗಳಿಗೆ ಹೋರಾಟದ ಮನೋಭಾವನೆಯನ್ನು ಬೆಳೆಸುವುದೇ ಈ ಎಮ್ಮೆ ಕಾಳಗ.

ಬಲಿಪಾಡ್ಯಮಿಯಂದು ಎಮ್ಮೆಗಳನ್ನು ಮೈತೊಳೆದು ವಿಶೇಷವಾಗಿ ಎಣ್ಣೆಯ ಸ್ನಾನ ಮಾಡಿಸಿ ಮೈಯನ್ನು ಮರಿ ಮಿರಿ ಮಿಂಚುವಂತೆ ಮಾಡುತ್ತಾರೆ. ಕೊರಳು ಕೋಡುಗಳಿಗೆ ಬಂಗಾರ ಬಣ್ಣದ ಕಬ್ಬಿಣ ಗೊರಸು-ಗೆಜ್ಜೆಗಳಿಂದ ಸಿಂಗರಿಸಿ ಬಲೂನು, ಕೊಬ್ಬರಿ ಸರಗಳಿಂದ ಕಂಗೊಳಿಸುವಂತೆ ಸಿದ್ಧಗೊಳಿಸಿ ಸಂಭ್ರಮಿಸುತ್ತಾರೆ. ಸಂಜೆಯಾಗುತ್ತಿದ್ದಂತೆ ಒಬ್ಬೋಬ್ಬರಾಗಿ ಶಿವಾಜಿ ವೃತ್ತಕ್ಕೆ ತಮ್ಮ ಎಮ್ಮೆಗಳನ್ನು ಕರೆತರುವ ಯುವಕರು ಕಾಳಗ ಆಯೋಜಕರ ಕರೆಯಂತೆ ಮುಂದೆ ಓಡುತ್ತಿದ್ದಂತೆ ಅವರನ್ನು ಹಿಂಬಾಲಿಸುವ ಎಮ್ಮೆ ಏಕಾಏಕಿ ಎದುರಿಗೆ ಧುತ್ತೆಂದು ಪ್ರತ್ಯಕ್ಷವಾಗುವ ಬಿದಿರಿನ ಹುಲಿ ಅಥವಾ ಚಿರತೆ ಚರ್ಮವನ್ನು ಪ್ರಾಣಿ ಎಂದು ಭಾವಿಸಿ ಯಜಮಾನ ಕಾಣದೆ ಅನಿವಾರ್ಯವಾಗಿ ತನ್ನನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತದೆ. ಎದುರಿಗೆ ಕಾಣುವ ಚರ್ಮದ ಹೊದಿಕೆಯನ್ನೇ ತನ್ನನ್ನು ಬೇಟೆಯಾಡಲು ಬಂದ ವನ್ಯಮೃಗ ಎಂದು ತಿಳಿದು ಅದರೊಡನೆ ಕಾದಾಟಕ್ಕಿಳಿಯುತ್ತದೆ ಆ ಕಾಳಗದಲ್ಲಿ ಅದರ ವೀರವೇಷವನ್ನು ನೋಡಬೇಕು ಎಂಥವರ ಎದೆನಡುಗುತ್ತದೆ. ಆ ಸಮಯದಲ್ಲಿ ನೆರೆದ ಜನರ ಸಿಳ್ಳೆ ಕೇಕೆ ಚಪ್ಪಾಳೆ ಮುಗಿಲು ಮುಟ್ಟುತ್ತದೆ. ಜನರ ಗಲಾಟೆಗೆ ದಿಕ್ಕು ತಪ್ಪಿದಂತೆ ಕಾಣುವ ಎಮ್ಮೆ ಎದುರಿಗೆ ಇರುವ ವನ್ಯ ಪ್ರಾಣಿಯ ಚರ್ಮದೊಂದಿಗೆ ಹೂಂಕರಿಸಿ ಕಾಳಗ ನೆಡೆಸಿ ಅದನ್ನು ತನ್ನ ಕೊಂಬಿನಲ್ಲಿ ಸಿಕ್ಕಿಸಿಕೊಂಡು ಸಾಯಿಸಿ ನಾನು ವಿಜಯಿಯಾದೆ ಎಂದು ಸಂತೋಷ ಅನುಭವಿಸುತ್ತ ತನ್ನ ಯಜಮಾನನ್ನು ಸುತ್ತಲು ಹುಡುಕುತ್ತಾ ತನ್ನ ಯಜಮಾನ ಕಂಡೊಡನೆ ಅತೀವ ಸಂತೋಷದಿಂದ ಆತನ ಹತ್ತಿರ ಧಾವಿಸಿ ಅತನನ್ನು ನೆಕ್ಕುವ ಮೂಲಕ ವಿಜಯಶಾಲಿಯಾದ ನಗುವನ್ನು ಬೀರುತ್ತದೆ.

ಇಲ್ಲಿ ನೆಡೆಯುವ ಹೋರಿ ಬೆದರಿಸುವ ಹಬ್ಬದ ಅವಕಾಶವನ್ನು ಕಳೆದುಕೊಳ್ಳುವ ಮಹಿಳೆಯರು ಈ ಮಹಿಷಿ ಕಾಳಗವನ್ನು ನೋಡಲು ತಮ್ಮ ತಮ್ಮ ಮನೆಯ ಕಟ್ಟಿ ಇಲ್ಲವೇ ತಾರಸಿಯ ಮೇಲೆ ಹೀಗೆ ಎಲ್ಲೆಂದರಲ್ಲಿ ನಿಂತು- ಕುಳಿತು ನೋಡುವ ಪರಿ ಯಾವ ಹಬ್ಬದಲ್ಲಿ ಕಾಣಸಿಗದು.
ಈ ಒಂದು ವಿನೂತನ ಕಾಳಗದಲ್ಲಿ ಭಾಗವಹಿಸಿದ ಗೆದ್ದ ಎಮ್ಮೆಗಳಿಗೆ ಪ್ರಥಮ, ದ್ವೀತಿಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳುಂಟು ಈ ಒಂದು ಬಹುಮಾನ ವಿತರಿಸುವ ಕಾರ್ಯಕ್ರಮವನ್ನು ಶಿವಾಜಿ ಯುವಕ ಸಂಘ ಪ್ರತಿ ವರ್ಷವೂ ಸಹ ಮುಂದುವರೆಸಿಕೊಂಡು ಬಂದಿದೆ.
ಈ ಮಹೀಷ ಸುಂದರಿಯರ ಕಾಳಗ ಸಾಂಸ್ಕ್ರತಿಕವಾಗಿ ಮತ್ತು ವೈಜ್ಞಾನಿಕವಾಗಿ ವಿಶಿಷ್ಠ ಸಂಪ್ರದಾಯ ಎನ್ನಬಹುದು. ಇಂಥಹ ಎಮ್ಮೆ ಕಾಳಗದಂತಹ ವಿಶಿಷ್ಟ ಕೀಡೆ ಮುಂದಿನ ಪೀಳಿಗೆಗೂ ಮುನ್ನಡಿಸಿಕೊಂಡು ಹೋಗುವ ಪ್ರಯತ್ನವಾಗಬೇಕು.
- ಟಿ.ಶಿವಕುಮಾರ್ , ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿಕ್ಷಕರು, ಅರಳೇಶ್ವರ (ತಾ) ಹಾನಗಲ್ಲ (ಜಿ) ಹಾವೇರಿ
