ರಾಜೀವ್ ಚಂದ್ರಶೇಖರ್ ಒಡೆತನಕ್ಕೆ ಬಂದ ಮೇಲೆ ಸುವರ್ಣ ಚಾನೆಲ್ ಮೂಲಕ ಸಾರ್ವಜನಿಕರಿಗೆ ರಂಗಣ್ಣನ ಮುಖದರ್ಶನವಾಯಿತು. ಮುಂದೇನಾಯಿತು ಪತ್ರಕರ್ತರಾದ ವೈ ಜಿ ಅಶೋಕ್ ಕುಮಾರ್ ಲೇಖನವನ್ನು ತಪ್ಪದೆ ಮುಂದೆ ಓದಿ…
ಬಹಳ ವರ್ಷಗಳ ನಂತರ ರಂಗಣ್ಣನ ಜತೆ ಮೇಡ್ ಫಾರ್ ಈಚ್ ಅದರ್ ವಿಲ್ಸ್ ಸಿಗರೇಟು ಸೇದಿದೆ. ದಿ ವೀಕ್ ಆಂಗ್ಲ ಪತ್ರಿಕೆ ಸಂಪಾದಕರಾಗಿದ್ದ ಸಚ್ಚಿದಾನಂದ ಮೂರ್ತಿ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯ ಘಳಿಗೆಯಲ್ಲಿದ್ದರು. ನಾವು ಐದಾರು ಪತ್ರಕರ್ತರು ಹಾಗೂ ಮಾಜಿ ಐಎಎಸ್ ಅಧಿಕಾರಿ ಜೈರಾಜ್ ಅಲ್ಲಿದ್ದೆವು. ತಮ್ಮ ಗೆಳೆಯ ಸಚ್ಚಿಯನ್ನು ಕಾಣಲು ರಂಗಣ್ಣ ಬಂದರು. ಎಲ್ಲರಿಗೂ ಹೊಟ್ಟೆ ತಾಳ ಹಾಕುತ್ತಿದ್ದರಿಂದ ಪಕ್ಕದ ಸ್ವಾತಿ ಹೋಟೆಲ್ ನಲ್ಲಿ ತಿಂಡಿ ತಿಂದು ಹೊರಗೆ ಬಂದು ಎದುರಿನ ಮರದ ಕೆಳಗೆ ನಿಂತೆವು. ನಾನು ಸಿಗರೇಟ್ ಬಿಟ್ಟಿದ್ದೆ.
ರಂಗಣ್ಣ ಜೇಬಿನಿಂದ ಸಿಗರೇಟು ತೆಗೆದರು. ಅವರೊಂದಿಗೆ ನಾನು ಮಾತನಾಡುತ್ತ ಸಿಗರೇಟ್ ಹೆಚ್ಚಿದೆ. ರಂಗಣ್ಣ ಸಿಗರೇಟಿನ ಬುಡಕ್ಕೆ ಸಣ್ಣ ಪೈಪ್ ಸಿಕ್ಕಿಸಿ ಧಂ ಎಳೆದು ನಿರಾಳವಾದರು. ಹಿಂದೆಯೇ ಬಂದ ಐಎಎಸ್ ಜೈರಾಜ್ ಆಕ್ಷೇಪ ವ್ಯಕ್ತಪಡಿಸಿ ಸಿಗರೇಟ್ ಬಿಟ್ಬಿಡಿ ರಂಗಣ್ಣ ಎಂದು ಬಹಳ ಕಾಳಜಿ ತೋರಿಸಿ ಒತ್ತಾಯಿಸ ತೊಡಗಿದರು. ರಂಗಣ್ಣ ನನ್ನ ಕಡೆ ನೋಡಿ ಇನ್ನು ಒಂದು ಸಿಗರೇಟ್ ಹಚ್ಚಿ ಹೊಗೆ ಬಿಟ್ಟರು.


ಇದು ಯಾರಪ್ಪನ ಆಸ್ತಿಯೂ ಅಲ್ಲ ಟ್ಯಾಗ್ ಲೈನ್ ಪಬ್ಲಿಕ್ ಟಿವಿಯ ಹೆಚ್ ಆರ್ ರಂಗನಾಥ್ ( ಹೆಬ್ಬಾಲೆ ರಾಮಕೃಷ್ಣಯ್ಯ ರಂಗನಾಥ್ ) ಈಗ ಸೆಲೆಬ್ರಿಟಿ, ಕೊಡಗು ಹಾಸನ ಜಿಲ್ಲೆಯ ಬಾರ್ಡರ್ ಹೆಬ್ಬಾಲೆ ಅವರ ತಂದೆಯ ಊರು ತಾಯಿಯ ಕಡೆಯಿಂದ ಅರಕಲಗೂಡು ಸಮಿಪ ನಾಲ್ಕೈದು ಕುಂಟೆ ಸಿಕ್ಕಿತ್ತು. ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಆರ್ಕೆಸ್ಟ್ರಾ ಸಿಂಗರ್ ಆಗಿದ್ದ ರಂಗಣ್ಣ ಲೋಕಲ್ ಪತ್ರಿಕೆ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದರು. ಒಂಥರಾ ನಿಷ್ಠುರವಾದಿ ರಂಗನಾಥ್ ತೊಂಬತ್ತರ ದಶಕದಲ್ಲಿ ಕನ್ನಡ ಪ್ರಭ ಪತ್ರಿಕೆಯ ಕ್ರೈಂ ವರದಿಗಾರ. ಆಗ ಅವರೊಂದು ಗ್ಯಾಂಗ್ ಸೃಷ್ಟಿಸಿಕೊಂಡಿದ್ದರು.
ಪ್ರಜಾವಾಣಿಯ ಜೆ ಎಂ ಪ್ರಸನ್ನ ಕುಮಾರ್ ಹಾಗೂ ಹನಕೆರೆ ನಂಜುಂಡೇಗೌಡ, ಇಂಡಿಯನ್ ಎಕ್ಸ್ಪ್ರೆಸ್ ಮಧುಸೂದನ್ ಹಾಗೂ ಡ್ಯಾನಿ, ಈ ಸಂಜೆ ಸತ್ಯ, ಛಾಯಾಗ್ರಾಹಕ ರಾಮಸ್ವಾಮಿ, ಟೈಮ್ಸ್ ಅಜ್ಮತ್ ಮುಂತಾದವರು ಪೋಲಿಸ್ ಇಲಾಖೆಯ ಪ್ರಭಾವಿತ ಕ್ರೈಂ ವರದಿಗಾರರು.

ಇವರು ಆ ಅವಧಿಗೆ ಪ್ರೆಸ್ ಕ್ಲಬ್ ನಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಅಧ್ಯಕ್ಷ ಸ್ಥಾನಕ್ಕೆ ಪಿಟಿಐ ಸಿದ್ದರಾಜು, ಸಂಜೆವಾಣಿ ಶಿವಣ್ಣ ಮುಂತಾದ ಆಕಾಂಕ್ಷಿಗಳಿದ್ದರೂ ಪತ್ರಿಕೋದ್ಯಮದ ಪ್ಲಾನರ್ ಅಶೋಕ್ ಬಾಬು ತಮ್ಮದೇ ಜನಾಂಗದ ಪ್ರಸನ್ನ ಕುಮಾರ್ ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಂಡರು. ಆವರೆಗೆ ಕಮಿಟಿ ಸದಸ್ಯರು ಕೂಡಾ ಆಗಿರದ ಇವರು ನೇರವಾಗಿ ಆಯ್ಕೆಯಾಗಿ ಅಧಿಕಾರ ಚಲಾಯಿಸತೊಡಗಿದರು.
ಪ್ರೆಸ್ ಬೈಲಾಗಳನ್ನು ಓದಿಕೊಂಡು ಕರತಲಾಮಲಕ ಮಾಡಿಕೊಂಡಿದ್ದ ರಂಗನಾಥ್ ಜನರಲ್ ಬಾಡಿಗಳಲ್ಲಿ ನಿರರ್ಗಳವಾಗಿ ಮಾತನಾಡುವ ಕಲೆ ಸಿದ್ದಿಸಿಕೊಂಡಿದ್ದರು. ಯಗಟಿ ಕೃಷ್ಣಮೂರ್ತಿ, ಉಪಾಧ್ಯ, ಸಾ ಚಂದ್ರಶೇಖರ್ ಮುಂತಾದವರು ಪರ್ಯಾಯವಾಗಿ ವಾದಿಸಲು ನನ್ನನ್ನು ತಯಾರಿಗೊಳಿಸುತ್ತಿದ್ದರು.

ಪ್ರೆಸ್ ಕ್ಲಬ್ ಆರ್ಥಿಕವಾಗಿ ಸದೃಡಪಡಿಸಿ ಅದನ್ನು ಮಾಧ್ಯಮ ಕೇಂದ್ರವಾಗಿಸಲು ಶ್ರಮಿಸುತ್ತಿದ್ದೆವು.ಆಗ ಆಡಳಿತ ಮಂಡಳಿ ಒಂದು ಗುಂಡುಸೂಜಿಯನ್ನು ದುರುಪಯೋಗಪಡಿಸಿಕೊಂಡರೂ ದೊಡ್ಡ ಯುದ್ದವೇ ನಡೆಯುತ್ತಿತ್ತು. ಈಗ ಆ ಆವರಣವನ್ನು ಮಲಿನಗೊಳಿಸಿ ಕೇಳುವವರೇ ಇಲ್ಲದಂತಾಗಿದೆ ಬಿಡಿ.
ನಂತರ ರಂಗಣ್ಣ ಕನ್ನಡಪ್ರಭ ಸಂಪಾದಕರಾಗುವ ಮಟ್ಟಕ್ಕೆ ಬೆಳೆದದ್ದರಲ್ಲಿ ಸಂಪಾದಕ ಹುದ್ದೆ ಬಿಟ್ಟುಕೊಟ್ಟ ವೆಂಕಟನಾರಾಯಣರೂ ಕಾರಣರಾದರು. ರಾಜೀವ್ ಚಂದ್ರಶೇಖರ್ ಒಡೆತನಕ್ಕೆ ಬಂದ ಮೇಲೆ ಸುವರ್ಣ ಚಾನೆಲ್ ಮೂಲಕ ಸಾರ್ವಜನಿಕರಿಗೆ ರಂಗಣ್ಣನ ಮುಖದರ್ಶನವಾಯಿತು. ಕೆಲವು ಇರುಸು ಮುರುಸುಗಳಿಂದ ಆಚೆ ಬಂದ ರಂಗಣ್ಣ ಮತ್ತೊಬ್ಬರ ಅಧೀನದಲ್ಲಿ ಇರಲೊಪ್ಪದ ಚಾಲೆಂಜ್ ಸ್ವೀಕರಿಸಿ ಹಲವರ ಸಹಕಾರದಿಂದ ತಮ್ಮದೇ ಸಂಸ್ಥೆ ಶುರುಮಾಡಿ ಇದು ಯಾರಪ್ಪನ ಆಸ್ತಿಯೂ ಅಲ್ಲ ಎಂದು ಘೋಷಿಸಿಕೊಂಡು 2012 ಫೆಬ್ರವರಿ 12 ಪಬ್ಲಿಕ್ ಟಿವಿಯನ್ನು ಅಸ್ತಿತ್ವಕ್ಕೆ ತಂದು ಯಶಸ್ವಿಗೊಳಿಸಿದರು.

ಟಿವಿ ಶುರು ಮಾಡಿದ ಆರಂಭದಲ್ಲಿ ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ಅಭಿಪ್ರಾಯ ಕೇಳಿದಾಗ ಈಗ ನೀವು ನಿಜವಾಗಿಯೂ ಸ್ವತಂತ್ರರಾದಿರಿ ಎಂದು ಬೆನ್ನು ತಟ್ಟಿ ಪ್ರೊತ್ಸಾಹಿಸಿದ್ದನ್ನ ನೆನಪಿಸಿಕೊಂಡು ನನ್ನ ನಾನು ನೋಡಿಕೊಳ್ಳಲು ನನಗಾಗಿ ನಾನೇ ಒಂದು ವೇದಿಕೆ ಸೃಷ್ಟಿಸಿಕೊಳ್ಳಬೇಕಾಯಿತು ಎಂದು ಒಂದು ನಗು ಚೆಲ್ಲಿದ ರಂಗಣ್ಣ ಮತ್ತೊಂದು ಸಿಗರೇಟಿಗೆ ಬೆಂಕಿ ಹಚ್ಚಿ ಹೊಗೆಯುಗುಳಿದರು.

ಓಕೆ ಆಲ್ ರೈಟ್
ಮುಂದಕ್ಕೋಗಣ…..
- ವೈ ಜಿ ಅಶೋಕ್ ಕುಮಾರ್
