‘ರಂಗಣ್ಣನ ಕನಸಿನ ದಿನಗಳು’ ಪುಸ್ತಕ ಪರಿಚಯ – ಎಂ.ಆರ್.ಶ್ರೀನಿವಾಸಮೂರ್ತಿ

‘ಕಾದಂಬರಿಕಾರ ಎಂ.ಆರ್. ಶ್ರೀನಿವಾಸಮೂರ್ತಿ ಅವರ ‘ರಂಗಣ್ಣನ ಕನಸಿನ ದಿನಗಳು’ ಪುಸ್ತಕ ಮೊದಲ ಮುದ್ರಣ ಕಂಡಿದ್ದು ೧೯೪೯ರಲ್ಲಿ. ಕಥೆಯ ಕಾಲಘಟ್ಟ ಸ್ವಾತಂತ್ರ್ಯಕ್ಕಿಂತ ಹಿಂದಿನದು. ಹೆಸರು ಮತ್ತು ಮುಖ ಪುಟ ನೋಡಿ ಇದೊಂದು ಹಾಸ್ಯದ ಪುಸ್ತಕ ಇರಬಹುದೆಂದು ಊಹಿಸಿ ಓದಲು ಪ್ರಾರಂಭ ಮಾಡಿದೆ’. – ಎನ್.ವಿ.ರಘುರಾಂ, ತಪ್ಪದೆ ತಪ್ಪದೆ ಓದಿ…

ಪುಸ್ತಕ : ರಂಗಣ್ಣನ ಕನಸಿನ ದಿನಗಳು
ಕಾವ್ಯ ಪ್ರಕಾರ: ಕಾದಂಬರಿ
ಲೇಖಕರು : ಎಂ.ಆರ್. ಶ್ರೀನಿವಾಸಮೂರ್ತಿ
ಪ್ರಕಾಶಕರು : ಅಂಕಿತ ಪುಸ್ತಕ.
ಒಂಭತ್ತನೇಯ ಮುದ್ರಣ: 2020 (ಪ್ರಥಮ ಮುದ್ರಣ: 1949).

ಕವಿ ಪರಿಚಯ :

ಶ್ರೀ ಎಂ.ಆರ್. ಶ್ರೀನಿವಾಸಮೂರ್ತಿಯವರು ಮೈಸೂರಿನಲ್ಲಿ ಆಗಷ್ಟ್ 28, 1892ರಂದು ಹುಟ್ಟಿದರು. ಇವರ ತಂದೆ ಶ್ರೀಯುತ ರಾಮಚಂದ್ರರಾಯರು ಅಲ್ಲಿನ ಜಿಲ್ಲಾ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಶ್ರೀಮತಿ ಸಾವಿತ್ರಮ್ಮನವರು ಇವರ ತಾಯಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ 1915ರಲ್ಲಿ ಬಿ.ಎ. ಪದವಿ ಪಡೆದುಕೊಂಡು ಉಪಾಧ್ಯರಾಗಿ ಕೆಲಸಕ್ಕೆ ಸೇರಿಕೊಂಡರು. ನಂತರ ಇವರು ಶಾಲಾ ಇನ್ ಸ್ಪೆಕ್ಟರ್ ಆಗಿ, ನಂತರ ಜಿಲ್ಲಾ ವಿದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ 1947ರಲ್ಲಿ ನಿವೃತ್ತಿ ಹೊಂದಿದರು.

ವಿದ್ಯಾರ್ಥಿಯಾಗಿದ್ದಾಗಲೇ ‘ಸಾವಿತ್ರಿ’ ಕಾದಂಬರಿ ರಚಿಸಿದರು. ಸ್ಕೌಟ್ ನವರ ಅಭಿನಯಕ್ಕೆಂದು ‘ ಕಂಠೀರವ ವಿಜಯ’ ನಾಟಕ ರಚಿಸಿದರು. ‘ಧರ್ಮದುರಂತ’, ‘ನಾಗರೀಕ’ ಇವರು ಬರೆದ ಇನ್ನೆರಡು ನಾಟಕಗಳು. ಇವರು ಒಟ್ಟು ಹನ್ನೆರಡು ನಾಟಕಗಳನ್ನು ಬರೆದಿದ್ದಾರೆ. ‘ಮಹಾತ್ಯಾಗ’ ಮತ್ತು ’ರಂಗಣ್ಣನ ಕನಸಿನ ದಿನಗಳು’ ಇವರ ಇನ್ನೆರಡು ಕಾದಂಬರಿಗಳು. ಇವರ ಇನ್ನೊಂದು ಕೃತಿ ‘ಭಕ್ತಿ ಭಂಡಾರಿ ಬಸವಣ್ಣ’. ’ಚಾಮರಸನ ಪ್ರಭುಲಿಂಗಲೀಲೆ’, ‘ವಿರೂಪಾಕ್ಷ ಪಂಡಿತನ ಚನ್ನಬಸವಪುರಾಣ’ ಸಂಪಾದಿತ ಕೃತಿಗಳು. ‘ಉಪಾಧ್ಯಾಯರ ಆರೋಗ್ಯ ಶಾಸ್ತ್ರ,’ ‘ಮ್ಯಾಗ್ನೆಟಿಸಮ್’ ‘ಇಲೆಕ್ಟ್ರಿಸಿಟಿ’ ಬಗ್ಗೆ ವಿಜ್ಞಾನದ ಲೇಖನಗಳನ್ನು ಬರೆದಿದ್ದಾರೆ.

(‘ರಂಗಣ್ಣನ ಕನಸಿನ ದಿನಗಳು’ ಕಾದಂಬರಿಕಾರ ಎಂ.ಆರ್. ಶ್ರೀನಿವಾಸಮೂರ್ತಿ)

 

ಇವರ ಕನ್ನಡ ನಾಡುನುಡಿಯ ಸೇವೆಗಾಗಿ 1940ರಲ್ಲಿ ಬಾದಾಮಿ ಶಿವಯೋಗ ಮಂದಿರದಿಂದ ‘ವಚನ ವಾಙ್ಮಯ ವಿಶಾರದ’ ಪ್ರಶಸ್ತಿ ಸಂದಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸೋಲಾಪುರದಲ್ಲಿ ನಡೆದ 33ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ನುಡಿ ಮತ್ತು ಪರಿಷತ್ ಪತ್ರಿಕೆಗಳ ಸಂಪಾದಕರಾಗಿ 1950 ರಿಂದ 1952ರವರೆಗೆ ಕೆಲಸ ಮಾಡಿದ್ದಾರೆ. ಉತ್ತಮ ವಾಗ್ಮಿಗಳು, ವಿದ್ವಾಂಸರು ಮತ್ತು ಶಿಕ್ಷಣಾಧಿಕಾರಿಯಾಗಿ ಹೆಸರು ಮಾಡಿದ್ದ ಇವರು 5 ಸೆಪ್ಟೆಂಬರ್ 1953ರಲ್ಲಿ ನಿಧನರಾದರು.

ಓಂದಾನೊಂದು ಕಾಲದಲ್ಲಿ  ಎಂ.ಆರ್.ಶ್ರೀ.  ಎಂಬ ಭಾಷಣಕಾರರಿದ್ದರು.  ಅವರ ಮಾತುಗಳಿಗೆ ಸಭಿಕರು ಹಾವಾಡಿಗನ ಪುಂಗಿಯ ಮುಂದಿನ ಹಾವು!  ಸಿಲ್ವರ್ ಟಂಗ್  ಶ್ರೀನಿವಾಸಶಾಸ್ತ್ರೀಗಳು ಮಾತಿಗೆ ನಿಂತರೆ ಸಭಿಕರ ಬಿಟ್ಟ ಬಾಯಿಗಳನ್ನು ಅದೆಷ್ಟು ಸೊಳ್ಳೆಗಳು, ನೊಣಗಳು ಇನ್ ಸ್ಪೆಕ್ಟ್ ಮಾಡಿರುತ್ತಿದ್ದವೋ!*  ಈ ಮಾತುಗಳನ್ನು ಹೇಳಿರುವುದು  ಇತ್ತೀಚಿಗೆ  ವಿಜಯ ಕರ್ನಾಟಕ ದಿನಪತ್ರಿಕೆಯ ವೀಕೆಂಡ್ ವಿನೋದ  ಅಂಕಣದಲ್ಲಿ ಅಣಕು ರಾಮನಾಥರು.

ಪುಸ್ತಕ ಪರಿಚಯ :

‘ರಂಗಣ್ಣನ ಕನಸಿನ ದಿನಗಳು’ ಪುಸ್ತಕ ಮೊದಲ ಮುದ್ರಣ ಕಂಡಿದ್ದು ೧೯೪೯ರಲ್ಲಿ. ಆದರೆ ಕಥೆಯ ಕಾಲಘಟ್ಟ ಸ್ವಾತಂತ್ರ್ಯಕ್ಕಿಂತ ಹಿಂದಿನದು. 1949ರ ಮುನ್ನುಡಿಯಲ್ಲಿ ಇದು ಹತ್ತು, ಹಧಿನೈದು ವರ್ಷಗಳ ಹಿಂದಿನ ಕಥೆಯೆಂದಿದ್ದಾರೆ. ಹಾಗಾಗಿ ಇದು ಸುಮಾರು 1930ರಿಂದ 1940ರ ವೇಳೆಯಲ್ಲಿ ನಡೆದ ಕಥೆ. ಈ ಪುಸ್ತಕದ ಮುಖಪುಟದಲ್ಲಿ ಹಳೆಯ ಉಪಾಧ್ಯರೊಬ್ಬರು ಶಾಲೆಯಲ್ಲಿ ಬೆತ್ತಹಿಡಿದುಕೊಂಡು ನಿಂತಿರುವ ವ್ಯಂಗ್ಯ ಚಿತ್ರವೊಂದಿದೆ. ಹೆಸರು ಮತ್ತು ಮುಖ ಪುಟ ನೋಡಿ ಇದೊಂದು ಹಾಸ್ಯದ ಪುಸ್ತಕ ಇರಬಹುದೆಂದು ಊಹಿಸಿ ಓದಲು ಪ್ರಾರಂಭ ಮಾಡಿದೆ. ಕೊನೆಗೆ ಗೊತ್ತಾಗಿದ್ದು ಇಲ್ಲಿ ಬೇಕಾದಷ್ಟು ಹಾಸ್ಯವಿದೆ. ಆದರೆ ಆ ಹಾಸ್ಯದ ಹಿಂದೆ ಹೊಸ ಲೋಕ, ಅಲ್ಲ ಹಳೆಯ ಲೋಕವೊಂದನ್ನು ತೆರೆದಿಟ್ಟಿದೆ. ಅದು ಯಾವ ಲೋಕ? ನೋಡೋಣ ಬನ್ನಿ.

ರಜೆಯ ಮೇಲೆ ಬೆಂಗಳೂರಿಗೆ ಬಂದಿದ್ದ ರಂಗಣ್ಣನಿಗೆ ಖಾಸಾ ಸ್ನೇಹಿತ, ಒಂದು ಸೂಟಿಗೆ ಆರುಗಜ ಡಬ್ಬಲ್ ಪನ್ನ ಬಟ್ಟೆ ಬೇಕಾಗುವ, ‘ತಿಮ್ಮರಾಯಪ್ಪ’ಯ ಜೊತೆ ಭೇಟಿಯಾದ ವಿಷಯವನ್ನು ತಿಳಿಸುವ ಮೂಲಕ ಕಾದಂಬರಿ ಪ್ರಾರಂಭವಾಗುತ್ತದೆ. ಮೊದಲು ಶಾಲಾ ಇನ್ ಸ್ಪೆಕ್ಟರ್ ಆಗಿದ್ದ ತಿಮ್ಮರಾಯಪ್ಪ, ತನ್ನ ಜನರ ಮುಖಂಡ ದಿವಾನರಿಗೆ ಶಿಫಾರಸು ಮಾಡಿ ಕೊಡಿಸಿದ್ದ ಕಂಪನಿ ಕೆಲಸಕ್ಕೆ ಸೇರಿರುತ್ತಾನೆ. ಈಗ ಅವನಿಗೆ ಮೊದಲಿಗಿಂತ ನೂರು ರೂಪಾಯಿಯ ಸಂಬಳ ಹೆಚ್ಚಿಗೆ ಬರುತ್ತಿದೆ. ಬೆಂಗಳೂರಿನಲ್ಲಿ ಸಂಬಳ ಹೆಚ್ಚಿಗೆ ಬಂದರೂ ಕೆಲಸವೂ ಹೆಚ್ಚು, ಖರ್ಚು ಕೂಡ ಹೆಚ್ಚು. ಹುಣಿಸೆಯ ಹಣ್ಣು, ಅವರೆಕಾಯಿಗೆ ದುಡ್ಡು ಕೊಟ್ಟು ತರಬೇಕು ಬೆಂಗಳೂರಿನಲ್ಲಿ ಎಂದು ಹೇಳುತ್ತಾ, ಶಾಲಾ ಇನ್ ಸ್ಪೆಕ್ಟರ್ ನಾಗಿದ್ದ ಸಮಯದಲ್ಲಿ ನಡೆಸಿದ ದರ್ಬಾರ್ ನೆನೆಪಿಸಿಕೊಳ್ಳುತ್ತಾನೆ. “ಒಂದೆರಡು ಗಂಟೆ ಕೆಲಸ ಮಾಡಿ, ಮೇಷ್ಟ್ರೋ, ಶ್ಯಾನುಭೋಗರೋ ತರಿಸಿದ್ದ ತಿಂಡಿ ತೀರ್ಥ ತಿಂದು, ಭಾಷಣ ಮಾಡಿ, ಒಂದು ವರದಿ ಗೀಚಿ ಮೇಲಾಧಿಕಾರಿಗೆ ಕಳುಹಿಸಿದರೆ ಆಯಿತಪ್ಪ, ಸುಖವಾದ ಕೆಲಸ” ಎಂದು ಹೇಳುತ್ತಾನೆ. ಆಗ ರಂಗಣ್ಣ “ಹೊರಗಡೆ ಸ್ಕೂಲ್ ತನಿಖೆ ಮಾಡುವುದು, ಗ್ರಾಮಸ್ಥರಿಗೆ ಸಮಾಧಾನ ಹೇಳುವುದು, ವಿದ್ಯಾಭಿವೃದಿಯನ್ನು ದೇಶದಲ್ಲಿ ಮಾಡುವುದು ಜವಾಬ್ದಾರಿಯ ಕಷ್ಟತರವಾದ ಕೆಲಸವಲ್ಲವೇ?” ಎಂದು ಕೇಳುತ್ತಾನೆ. ಆಗ ತಿಮ್ಮರಾಯಪ್ಪ “ಬ್ರಿಟಿಷರು ಇಲ್ಲಿಂದ ಹೋಗಿ, ಮಹಾತ್ಮ ಗಾಂಧಿ ಭರತಖಂಡದ ಚಕ್ರವರ್ತಿ ಆದರೆ, ಸೌರಾಷ್ಟ್ರ ಸೋಮನಾಥನ ದೇವಸ್ಥಾನ ಊರ್ಜಿತವಾದರೆ ನಿನ್ನ ಸ್ಕೂಲ್ ಉದ್ದಾರವಾಗುತ್ತದೆ” ಎಂದು ಹೇಳುತ್ತಾನೆ. ಮನೆಗೆ ಬಂದು ರಂಗಣ್ಣ, ತನ್ನ ಹೆಂಡತಿಗೆ ವಿಷಯ ಹೇಳಿದಾಗ “ಅಮಲ್ದಾದರರ ಹೆಂಡತಿ, ಪೋಲಿಸ್ ಇನ್ ಸ್ಪೆಕ್ಟರ್ ಹೆಂಡತಿಯರ ಸರಿ ಸಮಾನರಾಗಿ ಓಡಾಡಲು ಈ ಜನ್ಮದಲ್ಲಿ ಕಾಣೆ” ಎನ್ನುತ್ತಾಳೆ. ಆ ರಾತ್ರಿ ರಂಗಣ್ಣನಿಗೆ ತಾನು ಶಾಲಾ ಇನ್ ಸ್ಪೆಕ್ಟರ್ ಆಗಿರುವ ರೀತಿಯಲ್ಲಿ ಕನಸು ಬೀಳುತ್ತದೆ. ಆ ಕನಸಿನಲ್ಲಿ ತಾನು ಹಳ್ಳಿಯ ಕಡೆ ಸರ್ಕೀಟು ಹೋದಂತೆ, ಅಲ್ಲಿ ಗ್ರಾಮಸ್ಥರು ಹೂವಿನ ಹಾರ, ಹಣ್ಣು ಇಟ್ಟುಕೊಂಡು ತನಗಾಗಿ ಕಾದಿರುವ ತರಹ, ಕಾಫೀ ಉಪ್ಪಿಟ್ಟಿನ ವಾಸನೆ ಬರುತ್ತಿರುವಂತೆಯೂ ಕನಸು ಬೀಳುತ್ತದೆ. ಆ ನಂತರ ರಂಗಣ್ಣನ ಕನಸು ಏನಾಯಿತು?…. ಅದನ್ನು ನೋಡುವ ಮುಂಚೆ ಇಲ್ಲಿ ಬಂದಿರುವ ವಿಷಯವನ್ನು ಹಿಂತಿರುಗಿ ಒಮ್ಮೆ ನೋಡೋಣ ಬನ್ನಿ.

ಘಟನೆಯನ್ನು ಹೇಳಲು ಪ್ರಾರಂಭ ಮಾಡಿದ ಎರಡನೇಯ ವಾಕ್ಯದಿಂದಲೇ ಕಿರು ಹಾಸ್ಯದ ಸಾಲುಗಳು ಪ್ರಾರಂಭವಾಗುತ್ತದೆ. ಆ ರೀತಿಯ ಹಾಸ್ಯದ ಸಾಲುಗಳು ಘಟನೆಗಳಲ್ಲಿ ಹಾಸು ಹೊಕ್ಕಿವೆ. ಈ ಪರಿ ಅಧ್ಯಾಯದ ಉದ್ದಕ್ಕೂ ಕಾಣ ಬರುತ್ತದೆ. ತರಕಾರಿ ಕೂಡ ಕೊಂಡುಕೊಳ್ಳಬೇಕು ಎಂದು ಹೇಳುತ್ತಾ ಹಳ್ಳಿ ಮತ್ತು ನಗರ ಜೀವನದ ವ್ಯತ್ಯಾಸ ತಿಳಿಸಿದರೆ, ದಿನಕ್ಕೆ ಹನ್ನೆರಡು ಗಂಟೆ ಕೆಲಸ ಮಾಡಬೇಕು ಎಂದು ಹೇಳುತ್ತಾ ಶಾಲಾ ಕೆಲಸಕ್ಕೂ ಕಂಪನಿ ಕೆಲಸಕ್ಕೂ ಇರುವ ವ್ಯತ್ಯಾಸ ಹೇಳುತ್ತಾರೆ. “ಶಿಫಾರಸ್ಸು ಇಲ್ಲದಿದ್ದರೆ ತೀರ್ಥಹಳ್ಳಿಯ ಕೊಂಪೆಗೋ, ಮೂಡಗೆರೆಗೋ ಮಿಡಲ್ ಸ್ಕೂಲ್ ಹೆಡ್ ಮಾಸ್ಟರ್ ಕೆಲಸಕ್ಕೆ ನಮ್ಮನ್ನು ಹಾಕುತ್ತಾರೆ” ಎನ್ನುವ ರಂಗಣ್ಣನ ಮಾತಿನಲ್ಲಿ ‘ಶಿಫಾರಸ್ಸು’ ಆ ಕಾಲದಲ್ಲೂ ಬೇಕಿತ್ತುತೆಂದು ತೋರಿಸುತ್ತಾರೆ. ಶಾಲಾ ಇನ್ ಸ್ಪೆಕ್ಟರ್ ವಿದ್ಯಾಭಿವೃದ್ಧಿಯನ್ನು ದೇಶದಲ್ಲುಂಟು ಮಾಡುವ ಜವಾಬ್ದಾರಿಯ ಕಷ್ಟತರ ಕೆಲಸ ಮಾಡಬೇಕು ಎಂಬ ರಂಗಣ್ಣನ ಮಾತು ಆತ ಕೆಲಸವನ್ನು ನೋಡುತ್ತಿದ್ದ ರೀತಿಯನ್ನು ತೋರಿಸುತ್ತದೆ. ‘ಸ್ವಾತಂತ್ರ್ಯ ಬಂದರೆ ಆಗ ವಿದ್ಯಾಭಿವೃದ್ಧಿ ಆಗುತ್ತದೆ’ ಎಂಬ ತಿಮ್ಮರಾಯಪ್ಪನ ಮಾತಿನಲ್ಲಿ ಆಗಿನ ಪರಿಸ್ಥಿತಿ ಸರಿ ಇಲ್ಲವೆಂದು ಹೇಳುವುದರ ಜೊತೆಗೆ ಮುಂದಿನ ದಿನಗಳ ನಿರೀಕ್ಷೆ ಕೂಡ ತೋರಿಸುತ್ತದೆ. ಶಾಲಾ ಇನ್ ಸ್ಪೆಕ್ಟರ್ ಒಬ್ಬರು ಸರ್ಕೀಟ್ ಬಂದರೆ ಶ್ಯಾನುಭೋಗರು, ಗ್ರಾಮಸ್ಥರು ಹಾರ, ಹಣ್ಣು ಇಟ್ಟುಕೊಂಡು ಕಾಯುತ್ತಿದ್ದರು ಎನ್ನುವುದು ಆ ಸ್ಥಾನಕ್ಕೆ ಕೊಟ್ಟಿರುವ ಬೆಲೆಗಿಂತ ವಿದ್ಯೆಗೆ ಕೊಟ್ಟಿರುವ ಬೆಲೆ ತೋರಿಸುತ್ತದೆ ಎಂದು ನನ್ನ ಭಾವನೆ. ರಂಗಣ್ಣನ ಹೆಂಡತಿ ಹೇಳುವಂತೆ ಆಕೆ ಇದು ಅಮಲ್ದಾರರ್ ಹೆಂಡತಿಯ ಜೊತೆಯಾಗಿ ನಿಲ್ಲುವ ಕೆಲಸ. ಈ ರೀತಿ ಪ್ರತಿಯೊಂದು ಸಾಲಿನಲ್ಲೂ ಗಾಢವಾದ ಅರ್ಥವನ್ನು ತುಂಬಿಕೊಂಡಿರುವ ಅನುಭವವಾಗುತ್ತದೆ. ಇದೊಂದು ರೀತಿ ಮುಂದಿನ ಅಧ್ಯಾಯಗಳನ್ನು ತಿಳಿದುಕೊಳ್ಳಲು ಬೇಕಾಗುವ ಅರಿವನ್ನು ತುಂಬುವ ಕ್ಷಣಗಳು. ಹಾಗಾದರೆ ರಂಗಣ್ಣನ ಕನಸು ಏನಾಯಿತು ಎಂದು ಈಗ ನೋಡೋಣ ಬನ್ನಿ.

ರಂಗಣ್ಣ ಕಂಡ ಕನಸು ಮಾರನೇಯ ದಿನವೇ ನನಸಾಗುತ್ತದೆ. ಶಾಲಾ ಇನ್ ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದ ರಂಗಣ್ಣ ಜನಾರ್ದನಪುರಕ್ಕೆ ವರ್ಗವಾಗಿ ಬರುತ್ತಾರೆ. ರಂಗಣ್ಣ ಈಗ ಸರ್ಕೀಟ್ ಕೆಲಸ ಮಾಡಲು ಪ್ರಾರಂಭ ಮಾಡುತ್ತಾರೆ. ಹಳ್ಳಿ, ಹಳ್ಳಿಗಳಿಗೆ ಭೇಟಿಕೊಡುತ್ತಾರೆ. ಶಿಕ್ಷಕರ ಮನ ಗೆಲ್ಲಲು ಪ್ರಯತ್ನಪಡುತ್ತಾರೆ. ಸಮಸ್ಯೆಗಳ ಪರಿಹರಿಸಲು ಪ್ರಯತ್ನಿಸುತ್ತಾರೆ. ಎಡರು ತೊಡರು ಬರದೇ ಕೆಲಸವಾಗುವುದುಂಟೆ? ಆದರೂ ಬಿಡದೇ ತಾನು ನಂಬಿದ ರೀತಿ ಕೆಲಸ ಮಾಡುವುದನ್ನು ರಂಗಣ್ಣ ಮುಂದುವರಿಸುತ್ತಾರೆ. ಆ ಸಮಯದಲ್ಲಿ ಆದ ಘಟನೆಗಳನ್ನು ಒಂದೊಂದಾಗಿ ತೆರೆದಿಡುತ್ತಾ ಲೇಖಕರು ಅಂದಿನ ಶಾಲಾ ಶಿಕ್ಷಣದ ಪರಿಸ್ಥಿತಿ, ಗ್ರಾಮಗಳ ಪರಿಸ್ಥಿತಿ, ವಿದ್ಯೆಗಾಗಿ ಚಡಪಡಿಕೆ, ಸರ್ಕಾರದ ಅಧಿಕಾರಿಗಳಿಗೆ ಕೊಡುವ ಗೌರವಗಳ ಅನಾವರಣ ಮಾಡುತ್ತಾ ಜೊತೆಗೆ ಬಂದ ಕಷ್ಟಗಳನ್ನು ಕೂಡ ತೆರೆಯುತ್ತಾ ಹೋಗುತ್ತಾರೆ. ಎಲ್ಲವನ್ನು ತಿಳಿ ಹಾಸ್ಯದ ಮೂಲಕ ಪ್ರಥಮ ಪುರುಷದಲ್ಲಿ ರಂಗಣ್ಣನೇ ಹೇಳಿದಂತೆ ಲೇಖಕರು ನಿರೂಪಣೆ ಮಾಡಿದ್ದಾರೆ.

ರಂಗಣ್ಣ ಮೊದಲಿಗೆ ಭೇಟಿಕೊಡುವುದೇ ಕಂಬದಹಳ್ಳಿಗೆ. ಪಾಶ್ಚಾತ್ಯ ರೀತಿಯ ಉಡುಪು ಧರಿಸಿ, ಸೈಕಲ್ ಮೇಲೆ ಹೊರಟಾಗ ದಾರಿಯಲ್ಲಿ ಸಿಕ್ಕುವ ಕೆರೆ ತುಂಬಿ ಹರಿಯುತ್ತಿರುತ್ತದೆ. ಆದರೂ ಹಿಂತಿರುಗಿ ಹೋಗದೆ ಷರಾಯಿ, ಅಂಗಿ ತೆಗೆದು ಕೊರಳಿಗೆ ಸುತ್ತಿಕೊಂಡು, ಎಡಗೈಯಲ್ಲಿ ಬೂಟ್ಸ್ ಗಳನ್ನು ಹಿಡಿದೆತ್ತಿಕೊಂಡು, ಬಲಗೈಯಲ್ಲಿ ಬೈಸ್ಕಲ್ಲನ್ನು ತಳ್ಳಿಕೊಂಡು, ನೀರಿಗೆ ಇಳಿದು ಕೆರೆದಾಟಿದಾಗ ಚೆಡ್ಡಿಕೂಡ ನೆನದುಹೋಗಿರುತ್ತದೆ. ದಡ ಸೇರಿದ ರಂಗಣ್ಣ ಅಂಗಿಯನ್ನು ನಡುವಿಗೆ ಸುತ್ತಿಕೊಂಡು, ಚೆಡ್ಡಿ ಬಿಚ್ಚಿ, ಬರಿಯ ಷರಾಯಿಯನ್ನು ಹಾಕಿಕೊಂಡು ಹೋಗುತ್ತಾರೆ. ಹಳ್ಳ ಕೊಳ್ಳಗಳನ್ನು ದಾಟಲು ಪಡುವ ಪರಿಪಾಟಲು ನಗು ಬರಿಸಿದರೂ ಹಳ್ಳಿಗಳ ಪರಿಸ್ಥಿತಿಯ ಅನಾವರಣ ಜೊತೆಜೊತೆಗೆ ರಂಗಣ್ಣನವರ ವೃತ್ತಿ ನಿಷ್ಠೆ ಕೂಡ ತೋರಿಸುತ್ತದೆ. ಕಷ್ಟ ಪಟ್ಟು ಊರು ಸೇರಿ, ಶಾಲೆ ಹುಡುಕಿಕೊಂಡು ಹೋದರೆ ಶಿಕ್ಷಕರು ಎರಡುದಿನ ರಜೆಯೆಂದು ತಿಳಿಯುತ್ತದೆ!

ಸೇರಿದ ನಾಲ್ಕು ತಿಂಗಳಲ್ಲಿ ನಮ್ಮ ರಂಗಣ್ಣನವರಿಗೆ ಅನೇಕ ಅನುಭವಗಳಾಗುತ್ತದೆ . ಕೆಲವಡೆ ಕಟ್ಟಡವಿಲ್ಲ, ಕೆಲವಡೆ ನೆಲ ಕಿತ್ತು ಹೋಗಿ, ಹೆಂಚುಗಳು ಮುರಿದುಹೋಗಿವೆ. ಕೆಲವಡೆ ಗ್ರಾಮಸ್ಥರಿಗೆ ಪಾಠಶಾಲೆಯ ಮೇಲೆ ಅಕ್ಕರೆ ಇಲ್ಲ. ಇನ್ನೊಂದೆಡೆ ಎತ್ತಿನಗಾಡಿ ಹೊಡೆದುಕೊಂಡು ಹೋಗುವವನು ” ನೀವು ಇಸ್ಕೋಲ್ ಇನ್ ಚ್ ಪೆಟ್ರಾ? ನಮ್ಮಳ್ಳೀಗೊಂದು ಇಸ್ಕೋಲ್ ಕೊಡಿ ಸೋಮಿ” ಎಂದು ಕೇಳುತ್ತಾನೆ. ದೊಡ್ಡ ಸರಿಗೆ ರುಮಾಲು, ಭಾರಿ ಸರಿಗೆ ಪಂಚೆ, ಒಳ್ಳೆಯ ಕೋಟು ಧರಿಸಿದ ನೋಡಲು ಪ್ರಜಾಪ್ರತಿನಿಧಿ ಸಭೆಯ ಮೆಂಬರೋ ಇರಬಹುದೆಂದು ಕಾಣುವ ಮೇಷ್ಟ್ರು ರಂಗಪ್ಪ ಒಂದುಕಡೆಯಾದರೆ ಅತ್ಯುತ್ತಮ ಜ್ಞಾನ ಧಾರೆಯೆರೆಯುವರು ಇನ್ನೊಂದೆಡೆ. ಬೋರ್ಡ ಒರೆಸಲು ರುಮಾಲು ಉಪಯೋಗಿಸುವ ಮತ್ತು ಮೂರನೇಯ ತರಗತಿಗೆ 378547896 × 5458945 ಗುಣಾಕಾರದ ಲೆಕ್ಕ ಹಾಕುವ ಕೆಂಚಪ್ಪ ಒಂದುಕಡೆ. ಸಾದಿಲ್ವಾರು ಲೆಕ್ಕ ಪರಿಶೀಲನೆ ಮಾಡಿದಾಗ ಬೋರ್ಡ ಒರೆಸುವ ಬಟ್ಟೆಗೆ ಎರಡು ರೂ ಇರುತ್ತದೆ. ಕೇಳಿದರೆ “ಆ ದುಡ್ಡಿನಲ್ಲಿಯೇ ಈ ರುಮಾಲು ತೆಗೆದುಕೊಂಡಿದ್ದು. ಸಂಬಳ ಹದಿನೈದು ರೂಪಾಯಿ. ಮನೆಯಲ್ಲಿ ನಾಲ್ಕು ಜನ ಮಕ್ಕಳು, ನನ್ನ ಹೆಂಡತಿ ಮತ್ತು ಅತ್ತೆ. ಮೇಜಿನ ಮೇಲಿರುವುದೇ ಬೋರ್ಡ ಒರೆಸುವ ಬಟ್ಟೆ. ತಲೆಗೆ ರುಮಾಲು ಇಲ್ಲದಿದ್ದರೆ ಜುಲ್ಮಾನೆ ಹಾಕುತ್ತೀರಿ. ಹಾಗಾಗಿ ಅದನ್ನೇ ರುಮಾಲಾಗಿ ಹಾಕಿಕೊಂಡಿದ್ದೆ ಸ್ವಾಮಿ” ಎಂದು ಮೇಷ್ಟ್ರು ಹೇಳಿದಾಗ ನಗಬೇಕೋ ಅಥವ “ಬಡ ಮೇಷ್ಟ್ರು” ಎಂಬ ಬಿರುದು ಬಂದಿರುವುದು ಇದಕ್ಕೋ ಎಂದು ಬೇಸರ ಪಡಬೇಕೋ ತಿಳಿಯದೇ ಹೋಗುತ್ತೇವೆ. ಸೀಮೆಸುಣ್ಣದ ಖರ್ಚಿನ ಬಗ್ಗೆ ಕೇಳಿದಾಗ ‘ಸಾದಿಲ್ವಾರು ಹಣ, ಒರಸುವ ಬಟ್ಟೆಗೆ ಖರ್ಚಾಗಿರುವ ಕಾರಣ, ಊರಿನಲ್ಲಿರುವ ದಾಯಸ್ಯನವರ ಮಕ್ಕಳು ಶಾಲೆಗೆ ಬರುವಾಗ ತರುವ ನಾಮದ ತುಂಡಗಳನ್ನು ಉಪಯೋಗಿಸಿದ್ದೇನೆ. ಅದನ್ನು ದುಡ್ಡುಕೊಟ್ಟು ತಂದಿಲ್ಲ, ಹಾಗಾಗಿ ಲೆಕ್ಕದಲ್ಲಿ ಬಂದಿಲ್ಲ’ವೆಂದು ಮೇಷ್ಟ್ರು ಹೇಳಿದಾಗ, ಮೇಷ್ಟ್ರ ಪ್ರಮಾಣಿಕತೆಗೆ ತಲೆ ಬಾಗುತ್ತಲೇ, ಯಾವಾಗ ಶಾಲೆಗಳು ಸುಧಾರಿಸುತ್ತವೆಂದು ಯೋಚಿಸುವಂತಾಗುತ್ತದೆ. ಒಂದುಕಡೆ ಶಾಲಾ ವೃತ್ತಿಯ ಜೊತೆಗೆ ವ್ಯವಸಾಯ ಮಾಡುವ ವೆಂಕಟಸುಬ್ಬಯ್ಯ, ಬರುವ ಸಂಬಳ ಸಾಲದೇ ಶಾಲೆಯ ಒಂದು ಮೂಲೆಯಲ್ಲಿ ಕ್ಷೌರಿಕನ ವೃತ್ತಿಯನ್ನು ಜೊತೆ ಜೊತೆಯಾಗಿ ಮಾಡುವ ಮುನಿಸ್ವಾಮಿ ಇನ್ನೊಂದುಕಡೆ. ಸುಮಾರು ಎಂಭತ್ತು ವರ್ಷದ ಹಿಂದಿನ ಪ್ರಾಥಮಿಕ ಶಾಲಾ ಶಿಕ್ಷಕರ ಪರಿಸ್ಥಿತಿಯನ್ನು ಹಾಸ್ಯ ಪ್ರಸಂಗಗಳ ಮೂಲಕ ನಮ್ಮ ಮುಂದೆ ಲೇಖಕರು ಮೂಡಿಸಿದ್ದಾರೆ.

ರಂಗಣ್ಣನವರು ಶಾಲೆಯ ಸ್ಥಿತಿ, ಶಿಕ್ಷಕರ ಸ್ಥಿತಿ ಸುಧಾರಿಸಲು ಮಾಡುವ ಪ್ರಯತ್ನಗಳು ಅನೇಕ ಘಟನೆಗಳ ಮೂಲಕ ತೆರೆದಿಟ್ಟಿದ್ದಾರೆ ಲೇಖಕರು. ಅವರು ಉಪಾಧ್ಯಾಯರ ಸಂಘದ ಸಭೆಗಳನ್ನು ನಡೆಸಿ ವಿವಿಧ ವಿಷಯಗಳಲ್ಲಿ ಪಾಠ ಮಾಡುವ ಬಗ್ಗೆ ತಿಳುವಳಿಕೆ ಕೊಡಲು ಪ್ರಯತ್ನ ಪಡುತ್ತಾರೆ, ಜೊತೆಗೆ ಇಲಾಖೆಯ ರೂಲ್ಸಿನಂತೆ ನಡೆಯಬೇಕಾಗಿರುವುದನ್ನು ಮನಗಾಣಿಸುತ್ತಾರೆ. ಮುಂದಿನ ಬಾರಿ ಸರ್ಕೀಟ್ ಹೋದಾಗ ಶಾಲೆಗಳಲ್ಲಿ ಅವುಗಳನ್ನು ಅನುಷ್ಠಾನ ಮಾಡಲು ಪ್ರಯತ್ನ ಪಟ್ಟಿದ್ದು ನೋಡಿ ರಂಗಣ್ಣನವರು ಸಂತೋಷ ಪಡುತ್ತಾರೆ. ಊರಿನವರು ಈ ಎಲ್ಲಾ ಸಭೆಗಳನ್ನು ನಡೆಸಲು ಕೊಡುವ ಸಹಕಾರ ನಿಜಕ್ಕೂ ಸಂತೋಷ ಪಡುವ ವಿಚಾರವೇ ಸರಿ. ಉಪಾಧ್ಯಾಯರ ಜೊತೆ ಊರಿನವರ ಜೊತೆ ಕೂಡ ಸಭೆ ಮಾಡಿ, ಮಕ್ಕಳನ್ನು ಸರಿಯಾದ ಸಮಯದಲ್ಲಿ ಶಾಲೆಗೆ ಸೇರಿಸುವ ಬಗ್ಗೆ, ಚೊಕ್ಕಟವಾಗಿ ಕಳುಹಿಸುವ ಬಗ್ಗೆ, ಸ್ಲೇಟು, ಪುಸ್ತಕಗಳನ್ನು ಕೊಡುಸುವ ಬಗ್ಗೆ ತಿಳಿ ಹೇಳುತ್ತಾರೆ. ಶಾಲೆಗೆ ಸ್ಲೇಟ್ ಮತ್ತು ಪುಸ್ತಕಗಳು ದಾನ ಮಾಡಿ ಎಂದು ರಂಗಣ್ಣನವರು ಕೇಳಿದಾಗ ಉತ್ತಮ ಸ್ಪಂದನೆ ಬರುತ್ತದೆ. ಉಪಾಧ್ಯಾಯರು ಮತ್ತು ಗ್ರಾಮಸ್ಥರನ್ನು ಕಲೆಹಾಕಿ, ಆ ಎರಡೆತ್ತುಗಳ ಮೇಲೂ ಸೌಹಾರ್ದದ ನೊಗವನ್ನು ಹೊರಸಿ, ಬಂಡಿಯಲ್ಲಿ ಮಕ್ಕಳನ್ನು ಕೂಡಿಸಿ ಸಾರಥಿಯಾಗಿ ನಡೆಸುತ್ತಿರುವ ಇನ್ ಸ್ಪೆಕ್ಟರ್ ಸಾಹೇಬರಿಗೆ ಕೃತಜ್ಞರಾಗಿರುವುದಾಗಿ   ಅವಲಹಳ್ಳಿಯ ದೊಡ್ಡ ಬೋರೋಗೌಡರು ಹೇಳಿದ್ದು ಈ ಪ್ರಯೋಗ ಫಲಕೊಟ್ಟಿದ್ದನ್ನು ತೋರಿಸುತ್ತದೆ. ಈ ಪ್ರಯೋಗ ರಂಗಣ್ಣನವರಿಗೆ ಸುತ್ತ ಮುತ್ತಲೂ ಓಳ್ಳೆಯ ಹೆಸರು ತರುವುದರ ಜೊತೆಗೆ ದೂರದ ಸರ್ಕಾರದವರಿಗೂ ತಲುಪುತ್ತದೆ.

ಎಲ್ಲಾ ಒಳ್ಳೆಯದು ಆಗಿ ನಡೆಯುತ್ತಿದ್ದರೆ, ಅದೂ ನ್ಯಾಯಯುತವಾಗಿ ನಡೆಯುತ್ತಿದ್ದರೆ, ಕೆಲವರಿಗಾದರೂ ಅದು ಕಷ್ಟವಾಗುತ್ತದೆ. ಅದೂ ಆ ಕಾಲದಲ್ಲೂ ಆಯಿತು!. ಯಾವಾಗ ಬೀಳುತ್ತದೆಯೋ ಎಂಬ ಸ್ಥಿತಿಯಲ್ಲಿ ಇದ್ದ ಕಟ್ಟಡವನ್ನು ಸ್ಕೂಲ್ಗೆ ಹತ್ತು ರೂಪಾಯಿಗೆ ಬಾಡಿಗೆ ಕೊಟ್ಟು ಅದನ್ನು ರಿಪೇರಿ ಮಾಡಿಸದ ದೊಡ್ಡ ಜಮೀನ್ದಾರರು ಮತ್ತು ನ್ಯಾಯ ವಿಧಾಯಕ ಸಭೆಯ ಸದಸ್ಯರು ಆದ ಕಲ್ಲೇಗೌಡರು ಇವರ ವಿರುದ್ಧ ನಿಲ್ಲುತ್ತಾರೆ. ಕಲ್ಲೇಗೌಡರ ಜೊತೆಗೆ ನಿಲ್ಲವವರು ಕರಿಯಪ್ಪನವರು. ಇವರು ಸರ್ಕಾರಕ್ಕೆ ಆ ಕಾಲದಲ್ಲಿ ಮುನ್ನೂರು ರೂಪಾಯಿ ಕಂದಾಯ ಕಟ್ಟುವ ಮತ್ತು ಮೂರನೇಯ ತರಗತಿಯಲ್ಲಿ ಫೈಲಾದ ತನ್ನ ಅಣ್ಣನ ಮಗನಿಗೆ ಸ್ಕಾಲರ್ ಷಿಪ್ಪು ಕೊಡಿಸಿದವರು. ಸ್ನೇಹಿತ ತಿಮ್ಮರಾಯಪ್ಪ ಯಾರನ್ನು ಎದುರು ಹಾಕಿಕೊಳ್ಳದಂತೆ ಎಚ್ಚರ ವಹಿಸಲು, ರೆಕಾರ್ಡಗಳನ್ನು ಮೇಲಾಧಿಕಾರಿಗಳಿಗೆ ಕಳುಹಿಸಲು ಸಲಹೆ ಕೊಡುತ್ತಾನೆ. ಆಗ ತಿಮ್ಮರಾಯಪ್ಪನ ಶಾಲಾ ಇನ್ ಸ್ಪೆಕ್ಟರ್ ಕೆಲಸದ ಬಗ್ಗೆ ಮೊದಲಿಗೆ ಮಾಡಿದ ವರ್ಣನೆ ನೆನಪಿಕೊಂಡು “ನೀನು ಹೇಳಿದ ಉಪ್ಪಿಟ್ಟು ಮತ್ತು ದೋಸೆಗಳ ವರ್ಣನೆ ಕೇಳಿ ಬಾಯಲ್ಲಿ ನೀರೂರಿತು. ಈಗ ನಾಲ್ಕು ಕಡೆಯಿಂದಲೂ ಗೂಟಗಳು,. ಮಾತೆತ್ತಿದರೆ, ಮೇಲಿನವರು ‘ಟ್ಯಾಕ್ಟ್’ ಊಪಯೋಗಿಸ ಬೇಕು ಎಂದು ಬುದ್ಧಿವಾದ ಹೇಳುತ್ತಾರೆ ” ಎಂದು ರಂಗಣ್ಣ ಸ್ವಲ್ಪ ಬೇಸರ ಮಾಡಿಕೊಳ್ಳುತ್ತಾರೆ.

ದೊಡ್ಡ ಸಾಹೇಬರು ಇನ್ ಸ್ಪೆಕ್ಷನ್ ಬಂದಾಗ ಬೇರೆ ರೀತಿಯ ಪರೀಕ್ಷೆ ಎದುರಾಗುತ್ತವೆ. ಇವರ ಮೇಲೆ ಬಂದಿರುವ ಅಪಾದನೆಗಳ ಪ್ರಸ್ಥಾವ ಮಾಡುತ್ತಾ ಆ ಸಾಹೇಬರು “ಠಾಕ್ ಠೀಕಾಗೇನೋ ಕಾಣುತ್ತೀರಿ! ಆದರೆ ‘ಟ್ಯಾಕ್ಟ್’ ಇಲ್ಲ” ಎನ್ನುತ್ತಾರೆ. ಆ ದೊಡ್ಡ ಸಾಹೇಬರ ಎದುರು ಶತ್ರು ಬರೆಯುವ ಜಾಗದಲ್ಲಿ ಶತೃ ಎಂದು ಬರೆದ ಉಪಾಧ್ಯಾಯಿನಿಗೆ ಮತ್ತು ಹಾಜರಿ ಪುಸ್ತಕದಲ್ಲಿ ಇರುವುದಕ್ಕಿಂತ ಎರಡು ವಿದ್ಯಾರ್ಥಿಗಳು ಜಾಸ್ತಿ ಇದ್ದ ತಿಪ್ಪೇನಹಳ್ಳಿಯ ಮೇಷ್ಟ್ರು ಗೆ ಮೂರು ರೂಪಾಯಿ ಜುಲ್ಮಾನೆ ಕೂಡ ಹಾಕುತ್ತಾರೆ.

ಊರಿನ ದೊಡ್ಡ ಮನುಷ್ಯರಿಗೆ ಬೇಕಾದ ಉಪಾಧ್ಯಾಯಿನಿಗೆ ವರ್ಗ ಮಾಡಿಕೊಡಲು ಓತ್ತಡ ಬಂದಾಗ, ಇವರ ಮೇಲೆ ಕ್ಷುಲ್ಲಕ ಅಪಾದನೆ ಬರುತ್ತದೆ. ಆಗ ರಂಗಣ್ಣನವರು ಬಹಳ ನೊಂದುಕೊಳ್ಳುತ್ತಾರೆ. ಆ ಸಮಯದಲ್ಲೇ ಕರಿಯಪ್ಪ ಮತ್ತು ಕಲ್ಲೇಗೌಡರ ಏಜೆಂಟು ಎಂದು ಹೆಸರು ಪಡೆದಿದ್ದ ಉಗ್ರಪ್ಪ ಎಂಬ ಉಪಾಧ್ಯಾಯರ ಮೇಲೆ ಮಿತಿಮೀರಿದ ಪುಂಡಾಟದ ಆಪಾದನೆ ಬರುತ್ತದೆ. ಸ್ವತಃ ತಾವೇ ಅದನ್ನು ಪರಿಶೀಲಿಸಿ, ರಂಗಣ್ಣನವರು ತಮ್ಮ ಅಧಿಕಾರವನ್ನು ಬಳಸಿ ಉಗ್ರಪ್ಪನನ್ನು ಒಂದು ತಿಂಗಳು ‘ಸಸ್ ಪೆನ್ ಷನ್’ ಮಾಡುತ್ತಾರೆ. ಆ ಕಾಲದಲ್ಲೂ ಉಪಾಧ್ಯಾಯರೊಬ್ಬರನ್ನು ಸಸ್ಪೆಂಡ್ ಮಾಡಿದಾಗ ಅಧಿಕಾರಿಗೆ ಪೋಲಿಸ್ ಭದ್ರತೆ ಒದಗಿಸುವ ಅವಶ್ಯಕತೆ ಬರುತ್ತದೆಯೆಂದರೆ ಪರಿಸ್ಥಿತಿ ಎಷ್ಟೊಂದು ಗಂಭೀರವಾಗಿರುತ್ತದೆ ನೋಡಿ. ನಂತರ ಏನಾಯಿತು? ರಂಗಣ್ಣನವರಿಗೇ ತೊಂದರೆಯಾಯಿತೇ?, ಉಗ್ರಪ್ಪನಿಗೆ ಶಿಕ್ಷೆಯಾಯಿತೇ? ಊರಿನ ಜನರ ಪ್ರತಿಕ್ರಿಯೆ ಏನು?, ತಿಮ್ಮರಾಯಪ್ಪ ಈ ಸಂದರ್ಭದಲ್ಲಿ ರಂಗಣ್ಣನವರಿಗೆ ಸಹಾಯ ಮಾಡಿದರೆ? ಅಥವ  ‘ಟ್ಯಾಕ್ಟ್’ ಉಪಯೋಗಿಸಲು ಹೇಳಿದರೆ? ಈ ರೀತಿಯ ಪ್ರಶ್ನೆಗಳು ಮಾತ್ರವಲ್ಲ, ಇನ್ನು ಅನೇಕ ಪ್ರಶ್ನೆಗಳಿವೆಯಲ್ಲವೇ? ಆದರೆ ಆ ಪ್ರಶ್ನೆಗಳಿಗೆಲ್ಲಾ ಪುಸ್ತಕ ಓದಿ ಉತ್ತರ ಕಂಡುಕೊಳ್ಳುವುದು ಉತ್ತಮ ಎಂದು ನನ್ನ ಭಾವನೆ. ಸಾಮಾನ್ಯವಾಗಿ ಚಲನಚಿತ್ರವೊಂದನ್ನು ಪರಿಚಯಿಸುವಾಗ, ಒಂದೆರೆಡು ಸಾಲು ಕಥೆ ಹೇಳಿ, ನಂತರ ಮುಂದಿನ ಕಥೆಯನ್ನು ಬೆಳ್ಳಿ ತೆರೆಯ ಮೇಲೆ ನೋಡಿ ಆನಂದಿಸಿ ಎಂದು ಹೇಳುವುದು ವಾಡಿಕೆ. ಈ ಪುಸ್ತಕವನ್ನು ಓದುತ್ತಾ ಇರುವಾಗ ಎದುರುಗಡೆ ಗ್ರಾಮಸ್ಥರು, ಕಲ್ಲೇಗೌಡರು, ಉಗ್ರಪ್ಪ ಇನ್ನೂ ಅನೇಕರು ನಮ್ಮ ಮುಂದೆಯೇ ಸುಳಿದಾಡುತ್ತಾ ಅಭಿನಯ ಮಾಡಿ ತೋರಿಸಿದಂತೆ ಅನಿಸುತ್ತದೆ. ಬಹುಶಃ ಶಂಕರ್ ನಾಗ್ ತರಹದವರ ಕಣ್ಣಿಗೆ ಈ ಪುಸ್ತಕ ಬಿದ್ದರೆ ಅದೊಂದು ಉತ್ತಮ ಸಿನಿಮಾ ಆಗುವುದರಲ್ಲಿ ಸಂದೇಹವಿಲ್ಲ. ಈ ಪುಸ್ತಕದ ಪ್ರಸ್ತಾಪವೆನ್ನಿತ್ತಿದಾಗ ಶ್ರೀ ‘ಕುವೆಂಪು’ ಅವರು ಈ ಕೃತಿಯನ್ನು ‘ಚಿತ್ರ ಕಾದಂಬರಿ’ಯೆಂದು ಕರೆಯಬಹುದೆಂದು ಸೂಚಿಸಿದ್ದು ಸಮಂಜಸವಾಗಿದೆ ಎಂದು ದೇ.ಜ.ಗೌ.ಹೇಳಿರುವ ಮಾತು ಹಿಂಪುಟದಲ್ಲಿ ಮುದ್ರಿತವಾಗಿದೆ. ಇದು ಅಕ್ಷರಶಃ ಸತ್ಯ.

ಇದೊಂದು ಸಾಮಾನ್ಯ ಶಾಲಾ ಇನ್ ಸ್ಪೆಕ್ಟರ್ ನ ಅನುಭವ ಕಥನ ಮಾತ್ರವಲ್ಲದೆ ‘ಮಿಡಲ್ ಮ್ಯಾನೇಜ್‍ಮೆಂಟ್’ ನಲ್ಲಿರುವ ವ್ಯಕ್ತಿಯೊಬ್ಬನು  ಪ್ರಮಾಣಿಕವಾಗಿ ಕೆಲಸಮಾಡುತ್ತಾ ಕೆಳಗಿನವರಿಗೆ ದಂಡನೆ ನೀಡದೆ ತಿದ್ದಿ, ತೀಡಿ ಕೆಲಸ ಕಲಿಸುವ ಪ್ರಯತ್ನದಲ್ಲಿ ಇರುವಾಗ ಮೇಲಧಿಕಾರಿಯ ಅಣತಿಯಂತೆ ಜುಲ್ಮಾನೆ ವಿಧಿಸಬೇಕಾಗಿ ಬರುವ ಪ್ರಸಂಗ, ಶಾಲೆಗಾಗಿ ಎರಡು ಗ್ರಾಮಸ್ಥರ ಜಗಳ, ಶಾಲೆಗಾಗಿ ಜಮೀನು ಸರ್ಕಾರಕ್ಕೆ ಬರೆದುಕೊಡುವ ಸಾಮಾನ್ಯ ರೈತ, ಹೀಗೆ ಅನೇಕ ಮನಮುಟ್ಟುವ ಘಟನೆಗಳ ಜೊತೆಗೆ ಸ್ತ್ರೀ ಸ್ವಾತಂತ್ರ್ಯದ ವಿಷಯ, ಜಾತಿ ಪದ್ಧತಿ, ಸ್ವಾತಂತ್ರ್ಯ ಬಂದ ನಂತರ ಎಲ್ಲ ಸರಿಯಾಗುವ ನಿರೀಕ್ಷೆ, ಸ್ವಾತಂತ್ರ್ಯ ಬಂದ ನಂತರ ಅಧಿಕಾರಕ್ಕಾಗಿ ಕಿಚ್ಚಾಡುತ್ತಾರೆಂಬ ಅನಿಸಿಕೆ, ಹೀಗೆ ಆ ಕಾಲದ ಚಿತ್ರಣವನ್ನು ಸಂಪೂರ್ಣವಾಗಿ ಕಟ್ಟಿಕೊಡುತ್ತದೆ.

ಪುಸ್ತಕ ಓದುತ್ತಾ ಹೋದಂತೆ ಚಿಂತನೆಗೂ ಹಚ್ಚುತ್ತದೆ. “ಪಾಠಶಾಲೆಯ ಸಂಖ್ಯೆ ಹೆಚ್ಚಿಸಬಹುದು, ಕಟ್ಟಡ ಕಟ್ಟಿಸಬಹುದು, ಪೀಠೋಪಕರಣಗಳೂ ಒದಗಿಸಬಹುದು. ಆದರೆ ಪಾಠಶಾಲೆಯ ಒಡಲಿಗೆ ಉಪಾಧ್ಯಾಯರೇ ಜೀವ. ದಕ್ಷರೂ, ಶ್ರದ್ಧಾವಂತರೂ ಆದ ಉಪಾಧ್ಯಾಯರು ಕ್ಷೀಣದೆಶೆಯಲ್ಲಿರುವ ಪಾಠಶಾಲೆಯನ್ನು ಒಂದು ವರ್ಷದಲ್ಲಿ ಊರ್ಜಿತ ಗೊಳಿಸಬಹುದು. ಉತ್ತಮ ಸ್ಥಿತಿಯಲ್ಲಿರುವ ಶಾಲೆಗೆ ಯೋಗ್ಯತೆಯಿಲ್ಲದ ಮತ್ತು ಶ್ರದ್ಧಾಹೀನರಾದ ಉಪಾಧ್ಯಾಯರು ಹೋದರೆ ಮೂರು ತಿಂಗಳಲ್ಲಿ ಅದನ್ನು ಕ್ಷೀಣದೆಶೆಗೆ ತರುತ್ತಾರೆ”. ಈ ಅನಿಸಿಕೆಗಳನ್ನು ಲೇಖಕರು ತಮ್ಮ 1949ರ ಮುದ್ರಣದ ಮುನ್ನುಡಿಯಲ್ಲಿ ಬರೆದಿದ್ದಾರೆ. ಅದು ಸರ್ವಕಾಲಿಕ ಸತ್ಯ ಕೂಡ.

ಹಾಗಾದರೆ ರಂಗಣ್ಣ ಬೆಂಗಳೂರಿನಲ್ಲಿ ತಿಮ್ಮರಾಯಪ್ಪನ ಭೇಟಿಯಾದ ಬಳಿಕ ಕಂಡ ಕನಸಿನಂತೆ ಸರ್ಕೀಟ್ ಹೋದಾಗ ಗ್ರಾಮಸ್ಥರು ಹಾರ, ಹಣ್ಣು ಹಿಡಿದು ಕಾಯುತ್ತಿದ್ದರೆ?, ಉಗ್ರಪ್ಪನಿಗೆ ತನ್ನ ತಪ್ಪಿನ ಅರಿವಾಯಿತೆ?, ಶಾಲೆಯ ಹಾಜರಾತಿಯಲ್ಲಿ ಇರುವುದಕ್ಕಿಂತ ಇಬ್ಬರು ಹೆಚ್ಚುವರಿಯಾಗಿ ಇದ್ದ ವಿದ್ಯಾರ್ಥಿಗಳು ಯಾರು?, ರಂಗಣ್ಣನವರು ವಿವಿಧ ಸಂಗತಿಗಳನ್ನು *’ಟ್ಯಾಕ್ಟ್’* ನಿಂದ ನಿರ್ವಹಿಸಲಿಲ್ಲವೇ?, ಆ ಸಂದರ್ಭಗಳನ್ನು ಬೇರೆ ರೀತಿ ನಿರ್ವಹಿಸಬಹುದಿತ್ತೇ?, ಅಂದ ಹಾಗೆ ಈ ‘ಟ್ಯಾಕ್ಟ್’ ಎಂದರೇನು?, ರಂಗಣ್ಣನವರಿಗೆ ಈ ‘ಟ್ಯಾಕ್ಟ್’ ಪದದ ಅರ್ಥ ಕೊನೆಗೆ ಯಾರು ಹೇಳಿದರು? ಇನ್ನೂ ಅನೇಕ ಪ್ರಶ್ನೆಗಳು ತಮಗೆ ಮೂಡುತ್ತಿದ್ದರೆ ಈ ಕ್ಷಣವೇ ಅಂಕಿತ ಪುಸ್ತಕದಲ್ಲಿ ತೆಗೆದುಕೊಂಡು ಓದಿದರೆ ಪುಟಗಳು ತನ್ನಿಂದ ತಾನೇ ಮುಂದಕ್ಕೆ ಹೋಗುವುದರ ಜೊತೆಗೆ ಮನಸ್ಸಿನ ಮುಂದೆ ಸುಂದರ ಚಿತ್ರಗಳು ಚಲಿಸುವ ಅನುಭವವಾಗುತ್ತದೆ. ಲಭ್ಯವಿಲ್ಲದ ಹಳೆಯ ಕನ್ನಡದ ಉತ್ಕೃಷ್ಟ ಕೃತಿಯನ್ನು ಮುದ್ರಿಸಿ, ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಇಟ್ಟಿರುವ ಅಂಕಿತ ಪುಸ್ತಕದವರಿಗೂ ಧನ್ಯವಾದ ಹೇಳಬೇಕು.


  • ಎನ್.ವಿ.ರಘುರಾಂ, ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW